ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪ್ ಶಾಸ್ತ್ರಿ ಲೇಖನ: ರಾಜ್ಯಗಳ ಮೂಲಕ ರಾಷ್ಟ್ರ ರಾಜಕಾರಣ

ರಾಷ್ಟ್ರ ರಾಜಕಾರಣದ ಮೇಲೆ ಈಗಿನ ವಿಧಾನಸಭಾ ಚುನಾವಣೆಯ ಪರಿಣಾಮಗಳು ಮಹತ್ವದ್ದಾಗಿರುತ್ತವೆ
Last Updated 4 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಚುನಾವಣೆ ಎದುರಿಸುತ್ತಿರುವ ದೇಶದ ಕೆಲವು ಪ್ರಮುಖ ರಾಜ್ಯಗಳಲ್ಲಿನ ಬೆಳವಣಿಗೆಗಳ ಮೂಲಕ ರಾಷ್ಟ್ರ ರಾಜಕಾರಣವನ್ನು ಕಳೆದ ಕೆಲವು ವಾರಗಳಿಂದ ನೋಡ ಲಾಗುತ್ತಿದೆ. ಮುಂದಿನ ಕೆಲವು ವಾರಗಳವರೆಗೆ ನೋಡುವ ಬಗೆಯು ಹೀಗೆಯೇ ಇರಲಿದೆ. ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶವು ಬಿರುಸಿನ ಪ್ರಚಾರಕ್ಕೆ ಸಾಕ್ಷಿಯಾಗಿವೆ. ಇಲ್ಲೆಲ್ಲ ಸ್ಪರ್ಧೆ ತೀರಾ ತುರುಸಿನಿಂದ ಕೂಡಿದೆ. ಐದು ಕಡೆ ಚುನಾವಣೆ ನಡೆಯು ತ್ತಿದ್ದರೂ, ಇಲ್ಲಿ ಕೇಂದ್ರಬಿಂದು ಆಗಿರುವುದು ಪಶ್ಚಿಮ ಬಂಗಾಳ ಎಂಬಂತಿದೆ. ಬೇರೆ ಚುನಾವಣಾ ಕಣಗಳಿಗೆ ಸಿಗಬೇಕಾದ ಆದ್ಯತೆ ಸಿಗುತ್ತಿಲ್ಲ.

ಪ್ರತೀ ಕಣದಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಬೇರೆ ಬೇರೆ. ಇದು ಭಾರತದ ಚುನಾವಣಾ ರಾಜಕೀಯದ ಬಹುತ್ವವನ್ನು ತೋರಿಸುತ್ತದೆ. ಅಸ್ಸಾಂನಲ್ಲಿ ಬಿಜೆಪಿ (ಮತ್ತು ಮಿತ್ರಪಕ್ಷಗಳು) ಹಾಗೂ ಕಾಂಗ್ರೆಸ್ (ಮತ್ತು ಮಿತ್ರಪಕ್ಷಗಳು) ನಡುವೆ ಹಣಾಹಣಿ ಇದ್ದರೆ, ತಮಿಳುನಾಡಿನ ಅಖಾಡದಲ್ಲಿ ಇರುವುವು ರಾಜ್ಯಮಟ್ಟದ ಎರಡು ಬಲಿಷ್ಠ ರಾಜಕೀಯ ಪಕ್ಷಗಳು ಮತ್ತು ಅವುಗಳ ಮಿತ್ರಪಕ್ಷ
ಗಳು. ಕೇರಳದಲ್ಲಿ ಎರಡು ಮಿತ್ರಕೂಟಗಳ ನಡುವಿನ ಸ್ಪರ್ಧೆಗೆ ತಾನೂ ಪ್ರವೇಶಪಡೆದು, ತ್ರಿಕೋನ ಸ್ಪರ್ಧೆ ಸಾಧ್ಯವಾಗಿಸಲು ಬಿಜೆಪಿಯು ಸಂಘಟಿತ ಯತ್ನ ನಡೆಸಿದೆ. ಪುದುಚೇರಿಯ ಮತದಾರರು ಎನ್‌ಡಿಎ ಅಥವಾ ಯುಪಿಎ ಒಕ್ಕೂಟಗಳ ನಡುವೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇರುವಂತೆ ಕಾಣುತ್ತಿದೆ. ಹಾಗಾಗಿ ಐದೂ ಕಣಗಳಲ್ಲಿನ ಲೆಕ್ಕಾಚಾರಗಳು ಬೇರೆಯವೇ ಆಗಿವೆ.

ಅತ್ಯಂತ ತೀವ್ರ ಹಣಾಹಣಿ ಇರುವುದು ತಮಿಳುನಾಡಿನಲ್ಲಿ ಎಂಬಂತೆ ಕಾಣುತ್ತಿದೆ. ಡಿಎಂಕೆ ನೇತೃತ್ವದ ಮೈತ್ರಿಕೂಟವು ಮುಂಚೂಣಿಯಲ್ಲಿದೆ ಎಂದು ಆರಂಭ ದಲ್ಲಿ ಅನಿಸುತ್ತಿತ್ತು. ಆದರೆ, ಅಭಿಯಾನ ಬಿರುಸು ಪಡೆ ದಂತೆಲ್ಲ ಡಿಎಂಕೆ ಮೈತ್ರಿಕೂಟ ಮತ್ತು ಎಐಎಡಿಎಂಕೆ ಮೈತ್ರಿಕೂಟದ ನಡುವಿನ ಅಂತರ ತಗ್ಗಿರುವಂತೆ, ಡಿಎಂಕೆ ತುಸು ಮುನ್ನಡೆ ಕಾಯ್ದುಕೊಂಡಿರುವಂತೆ ಕಾಣುತ್ತಿದೆ. ಸೀಟು ಹಂಚಿಕೆಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ತಮ್ಮಿಂದ ರಾಷ್ಟ್ರೀಯ ಪಕ್ಷಗಳು ಹೆಚ್ಚಿನ ಸ್ಥಾನ ಕೇಳದಂತೆ ಮಾಡಿವೆ.

ಡಿಎಂಕೆ ಮುನ್ನಡೆಯಲ್ಲಿದೆ ಎಂದು ಹೇಳಿದ್ದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, ಡಿಎಂಕೆ ಪಕ್ಷವು ತನ್ನ ರಾಜಕೀಯ ಗೆಳೆಯರನ್ನು ಹೆಚ್ಚು ಒಳಗೊಳ್ಳುವಂತೆ, ಅದರ ಚುನಾವಣಾ ಅಭಿಯಾನ ಹೆಚ್ಚು ಗಟ್ಟಿಯಾಗಿ ಹೆಣೆದುಕೊಂಡಿದ್ದಂತೆ ಕಾಣುತ್ತಿದೆ. ಎರಡನೆಯದು, ಡಿಎಂಕೆ ವಿರೋಧಿ ಮತಗಳು ಮೂರು ಭಿನ್ನ ಗುಂಪುಗಳ ನಡುವೆ ಹಂಚಿಹೋಗಲಿವೆ. ಅವೆಲ್ಲವೂ ಎಐಎಡಿಎಂಕೆ ಮೈತ್ರಿಕೂಟದ ತೆಕ್ಕೆಗೇ ಹೋಗುತ್ತವೆ ಎನ್ನಲಾಗದು. ಮೂರನೆಯದು, ಸ್ಟಾಲಿನ್ ಅವರು ಕರುಣಾನಿಧಿ ಅವರ ನಿಜ ಉತ್ತರಾಧಿಕಾರಿಯಂತಿದ್ದಾರೆ. ಆದರೆ ಎಐಎಡಿ ಎಂಕೆ ಪಕ್ಷದಲ್ಲಿ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಯಾವುದೇ ಒಬ್ಬ ನಾಯಕ ಕಾಣುತ್ತಿಲ್ಲ. ಇಡೀ ಪಕ್ಷವು ತನ್ನನ್ನು ಜಯಲಲಿತಾ ಪ್ರತಿನಿಧಿ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಡಿಎಂಕೆ ಬೆಂಬಲಿಗರ ಪಾಲಿಗೆ ಸ್ಟಾಲಿನ್ ಅವರೇ ಪಕ್ಷದ ಮುಖವಾಣಿಯಾಗಿ ಕಾಣುತ್ತಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ತಮ್ಮ ನಾಯಕತ್ವದಲ್ಲಿ ಒಂದು ತಲೆಮಾರು ಬದಲಾವಣೆ ಆಗಿದ್ದನ್ನು ಸ್ವೀಕರಿಸುವಂತೆ ಬೆಂಬಲಿಗರನ್ನು ಎಷ್ಟರಮಟ್ಟಿಗೆ ಒಪ್ಪಿಸಿದ್ದಾರೆ ಎಂಬುದನ್ನು ತಮಿಳುನಾಡಿನ ಫಲಿತಾಂಶವು ಹೇಳಲಿದೆ.

ಪಕ್ಕದ ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಹಿನ್ನಡೆ ಕಂಡಂತಿದೆ. ಎನ್‌ಡಿಎ ಮೈತ್ರಿ ಕೂಟದ ಸ್ಥಿತಿ ಅಲ್ಲಿ ಉತ್ತಮವಾಗಿದೆ ಎಂಬಂತೆ ಕಾಣುತ್ತಿದೆ.

ಕೇರಳದಲ್ಲಿ ಆಡಳಿತಾರೂಢ ಪಕ್ಷಗಳು ಅಧಿಕಾರದಲ್ಲಿ ಉಳಿದುಕೊಂಡಿದ್ದು ಕಡಿಮೆ. ಇದು ಈ ಬಾರಿಯೂ ಮುಂದುವರಿಯಲಿದೆ ಎಂಬ ಆಶಾಭಾವನೆ ಕಾಂಗ್ರೆಸ್ಸಿನಲ್ಲಿದೆ. ಕೇರಳದಲ್ಲಿ ಬಿಜೆಪಿಯ ಅಸ್ತಿತ್ವ, ನೆಲೆ ವಿಸ್ತರಣೆ ಕಣ್ಣಿಗೆ ಕಾಣುವಂತಿದೆ. ಬಿಜೆಪಿಯ ನೆಲೆ ವಿಸ್ತರಣೆ ಆಗುತ್ತಿ ರುವ ಭೌಗೋಳಿಕ ಪ್ರದೇಶಗಳನ್ನು ಗಮನಿಸಿ, ಸಾಂಪ್ರದಾ ಯಿಕವಾಗಿ ಆಲೋಚಿಸಿ ಹೇಳುವುದಾದರೆ ಬಿಜೆಪಿಯ ಮತಗಳಿಕೆ ಹೆಚ್ಚಾಗುವುದರಿಂದ ಎಡರಂಗಕ್ಕೆ ತೊಂದರೆ ಆಗುತ್ತದೆ. ಆದರೆ, ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟದ ಮತಗಳನ್ನು (ಅದರಲ್ಲೂ ಮುಖ್ಯವಾಗಿ ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿ) ಸೆಳೆದುಕೊಳ್ಳಲಿದೆ ಎಂದು 2019ರ ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ ಹೇಳಿತ್ತು. ಹಾಗಾಗಿ, ಯಾವ ಮೈತ್ರಿಕೂಟವು ತನ್ನ ಸಾಂಪ್ರದಾಯಿಕ ಮತಗಳನ್ನು ಹೆಚ್ಚು ಉಳಿಸಿಕೊಳ್ಳುತ್ತದೆ ಎಂಬುದರ ಮೇಲೆ ಕೇರಳದ ಫಲಿತಾಂಶ ನಿಂತಿರಲಿದೆ.

ಅಸ್ಸಾಂನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳ ನಡುವೆ ನೇರ ಸ್ಪರ್ಧೆಯಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ತಾನು ಮಾಡಿದ್ದನ್ನು ಸಮರ್ಥಿಸಿಕೊಳ್ಳಬೇಕಿರುವ ಅನಿವಾರ್ಯ ಬಿಜೆಪಿಗೆ ಇರುವುದು ಈ ರಾಜ್ಯದಲ್ಲಿ ಮಾತ್ರ. ಅಸ್ಸಾಂನಲ್ಲಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಚರ್ಚೆಯು ಬೇರೆಯದೇ ಆದ ಬಣ್ಣ ಪಡೆದಿದೆ. ತರುಣ್ ಗೊಗೊಯಿ ಉಪಸ್ಥಿತಿ ಹಾಗೂ ಪಕ್ಷವನ್ನು ಒಟ್ಟಾಗಿರಿಸುವ ಅವರ ಶಕ್ತಿಯು ಕಾಂಗ್ರೆಸ್ಸಿಗೆ ದಕ್ಕಿಲ್ಲ ಎಂಬುದು ನಿಜವಾದರೂ, ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಇಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವಲ್ಲಿ ಯಶಸ್ಸು ಕಂಡಿದೆ.

-ಪ್ರೊ. ಸಂದೀಪ್ ಶಾಸ್ತ್ರಿ
-ಪ್ರೊ. ಸಂದೀಪ್ ಶಾಸ್ತ್ರಿ

ಕೊನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ನಡೆದಿರುವ ಸ್ಪರ್ಧೆಯ ಬಗ್ಗೆ ಒಂದೆರಡು ಮಾತು! ಬಿಜೆಪಿಯು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ, ಅದು ಅತ್ಯಂತ ತುರುಸಿನ ಸ್ಪರ್ಧೆ ಎದುರಿಸಿದ್ದು ಪ್ರಮುಖ ರಾಜ್ಯಗಳಲ್ಲಿನ ಪ್ರಾದೇಶಿಕ ನಾಯಕರಿಂದ. ಜನಸಮೂಹದಲ್ಲಿ ಸಂಚಲನ ಸೃಷ್ಟಿಸಬಲ್ಲ ಶಕ್ತಿಯಿರುವ ಕೇಂದ್ರ ನಾಯಕತ್ವವನ್ನು ನೆಚ್ಚಿಕೊಂಡಿರುವ ಒಂದು ರಾಷ್ಟ್ರೀಯ ಪಕ್ಷ ಹಾಗೂ ಜನಸಮೂಹದ ನಡುವೆ ಓಡಾಡಿ ಸಂಚಲನ ತರಬಲ್ಲ ನಾಯಕರನ್ನು ನಂಬಿರುವ ಪ್ರಾದೇಶಿಕ ಪಕ್ಷವೊಂದರ ನಡುವಿನ ಸ್ಪರ್ಧೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಎರಡು ಅವಧಿಗೆ ಆಡಳಿತ ನಡೆಸಿರುವ ಟಿಎಂಸಿ, ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವುದು ನಿಜ. ಆದರೆ, ಬಿಜೆಪಿಗೆ ಅಲ್ಲಿ ಜಯ ತಂದುಕೊಡುವಂತಹ ತಳಮಟ್ಟದ ಸಂಘಟನಾ ಕೌಶಲ ಇದೆಯೇ? ಇಲ್ಲಿ ಎರಡು ಅಂಶಗಳನ್ನು ಪರಿಗಣಿಸಬೇಕು. ಮೊದಲನೆಯದು, ಮಮತಾ ಬ್ಯಾನರ್ಜಿ ಅವರನ್ನು ಎದುರಿಸಲು ಬಿಜೆಪಿಗೆ ವಿಶ್ವಾಸಾರ್ಹವಾದ ಸ್ಥಳೀಯ ನಾಯಕತ್ವ ಇಲ್ಲ.

ಎರಡನೆಯದು, ಈಗ ಬಿಜೆಪಿಯ ಶಾಲು ಹೊದ್ದು ಕೊಂಡಿರುವ ಬಹುತೇಕರು ತೀರಾ ಈಚಿನವರೆಗೆ ಟಿಎಂಸಿ ಪಕ್ಷದ ಶಾಲನ್ನು ಹೆಗಲ ಮೇಲೆ ಹಾಕಿಕೊಂಡಿದ್ದವರು. ಮುಂಚೂಣಿ ನಾಯಕತ್ವದ ಸ್ಥಾನಗಳಲ್ಲಿ ಹೊಸಬರನ್ನೇ ಇಟ್ಟುಕೊಂಡು ವಿಜಯ ಸಾಧಿಸುವುದು ಸುಲಭದ ಕೆಲಸ ವಲ್ಲ ಎಂಬುದನ್ನು ಈವರೆಗಿನ ಅನುಭವಗಳು ಹೇಳುತ್ತವೆ.

ಬಿಸಿಲ ಬೇಗೆ ಜಾಸ್ತಿ ಇರುವ ಈ ಹೊತ್ತಿನಲ್ಲಿ ನಡೆಯು ತ್ತಿರುವ ಈ ಚುನಾವಣೆಗಳು, ಕೆಲವು ರಾಜಕೀಯ ನಾಯಕರು ತಾಪ ಅನುಭವಿಸುವಂತೆ ಮಾಡುವುದು ಖಂಡಿತ. ಇನ್ನು ಕೆಲವು ನಾಯಕರು ಕೊನೆಯಲ್ಲಿ ಯಶಸ್ಸಿನ ಸುಪ್ಪತ್ತಿಗೆಯ ಮೇಲೆ ಕುಳಿತುಕೊಳ್ಳು
ವಂತೆಯೂ ಇದು ಮಾಡುತ್ತದೆ. ರಾಷ್ಟ್ರ ರಾಜಕಾರಣದ ಮೇಲೆ ಇದರ ಪರಿಣಾಮಗಳು ಮಹತ್ವದ್ದಾಗಿರುತ್ತವೆ. ಬಿಜೆಪಿಗೆ ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಳ್ಳಲು, ಬಂಗಾಳದಲ್ಲಿ ಪ್ರಬಲ ಸ್ಪರ್ಧೆ ಒಡ್ಡಲು, ಕೇರಳದಲ್ಲಿ ಮಹತ್ವದ ಮೂರನೆಯ ಶಕ್ತಿ ಆಗಲು, ತಮಿಳುನಾಡಿ
ನಲ್ಲಿ ಎಐಎಡಿಎಂಕೆಗೆ ಅಧಿಕಾರ ಹಿಡಿಯಲು ನೆರವಾಗಲು ಸಾಧ್ಯವಾದರೆ ಅದು ಪಕ್ಷದ ಸ್ಥೈರ್ಯವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುತ್ತದೆ.

ಕಾಂಗ್ರೆಸ್ಸಿಗೆ ಕೇರಳದಲ್ಲಿ ಮತ್ತೆ ಅಧಿಕಾರ ಹಿಡಿಯಲು ಆಗದಿದ್ದರೆ, ಅಸ್ಸಾಂನಲ್ಲಿ ಬಿಜೆಪಿಯಿಂದ ಅಧಿಕಾರ ಕಸಿಯಲು ಆಗದಿದ್ದರೆ ಕಷ್ಟದ ದಿನಗಳನ್ನು ಎದುರಿಸ ಬೇಕಾಗುತ್ತದೆ. ತಮಿಳುನಾಡಿನಲ್ಲಿ ಡಿಎಂಕೆ ಜಯ ಸಾಧಿಸಿದ ಮಾತ್ರಕ್ಕೆ ಕಾಂಗ್ರೆಸ್ಸಿಗೆ ಸಮಾಧಾನ ಸಿಗುವುದಿಲ್ಲ. ಬಿಜೆಪಿಯು 2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಎರಡು ವರ್ಷಗಳ ನಂತರ ನಡೆಯುತ್ತಿರುವ ಈ ಚುನಾವಣೆಗಳು ಮುಂದಿನ ದಿನಗಳಲ್ಲಿ ರಾಜಕೀಯದ ಹವಾ ಹೇಗಿರಲಿದೆ ಎಂಬುದನ್ನು ತೀರ್ಮಾನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT