ಶುಕ್ರವಾರ, ಅಕ್ಟೋಬರ್ 18, 2019
24 °C

ಭಾವುಕ ಆಸ್ಫೋಟಗಳ ಹಿಂದಿದೆ ರಾಜಕೀಯ ಅನಿವಾರ್ಯ!

ಸಂದೀಪ್‌ ಶಾಸ್ತ್ರಿ
Published:
Updated:

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಳೆದ ಎರಡು ವಾರಗಳಲ್ಲಿ ಬೆಂಬಲಿಗರ ಒಲವು ಗಳಿಸುವುದರ ಜೊತೆಗೆ, ಅಪಾರ ಟೀಕೆಯ ಕೇಂದ್ರಬಿಂದುವಾಗುವ ಮೂಲಕ ಸುದ್ದಿಯಾಗಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧದ ಅವಿಶ್ವಾಸ ಮಂಡನೆ ಕುರಿತು ಕಳೆದ ವಾರ ನಡೆದ ಚರ್ಚೆಯ ವೇಳೆ ಅವರ ಹೆಸರು ಕನಿಷ್ಠ ಎರಡು ಸಲ ಪ್ರಸ್ತಾಪವಾಯಿತು. ಕರ್ನಾಟಕದ ಮುಖ್ಯಮಂತ್ರಿ ಸಾರ್ವಜನಿಕ ರ‍್ಯಾಲಿಯಲ್ಲಿ ಕಣ್ಣೀರು ಸುರಿಸಿ, ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಸವಾಲುಗಳ ಬಗ್ಗೆ ಹೇಳಿದ್ದನ್ನು ಬಿಜೆಪಿಯ ಪ್ರಮುಖರೊಬ್ಬರು ಉಲ್ಲೇಖಿಸಿದರು.

ತನ್ನ ಮಿತ್ರಪಕ್ಷಗಳ ಜೊತೆಗೆ ಕಾಂಗ್ರೆಸ್ಸಿನ ಅಪಾಯಕಾರಿ ಬಾಂಧವ್ಯದ ಬಗ್ಗೆ ದಾಳಿ ಮಾಡಲು ಈ ಸನ್ನಿವೇಶವನ್ನು ಬಿಜೆಪಿ ಬಳಸಿಕೊಂಡಿತು. ಮತ್ತೊಂದೆಡೆ, ರೈತರ ಸಂಕಷ್ಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಅಂತಃಕರಣದಿಂದ ಸ್ಪಂದಿಸಿದೆ ಎಂದು ಬಿಂಬಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಸಾಲ ಮನ್ನಾ ಲಾಭ ಪಡೆದವರ ಅಂಕಿಅಂಶವನ್ನು ಮುಂದಿಟ್ಟು ಕುಮಾರಸ್ವಾಮಿ ಅವರನ್ನು ಕೊಂಡಾಡಿದರು.

ಇದೇ ವೇಳೆ, ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಮುಖ ಕಾರ್ಯಕರ್ತರ ಸಮ್ಮುಖದಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ವ್ಯತಿರಿಕ್ತ ಭಾವನೆಗಳಿಂದ ಕೂಡಿದ ಭಾವುಕ ಹೇಳಿಕೆಗಳನ್ನು ನೀಡಿದ್ದನ್ನು, ವಿಶೇಷವಾಗಿ ಅವರು ಇದನ್ನು ವ್ಯಕ್ತಪಡಿಸಿದ ಸಂದರ್ಭದ ಹಿನ್ನೆಲೆಯಲ್ಲಿ ವಿಶಾಲ ದೃಷ್ಟಿಕೋನದಿಂದ ನೋಡಬೇಕಾದುದು ಅತ್ಯಗತ್ಯ.

ಭಾರತದ ರಾಜಕಾರಣದಲ್ಲಿ ಸಾರ್ವಜನಿಕವಾಗಿ ಭಾವನೆಗಳನ್ನು ಹೊರಹಾಕುವುದು ಸರ್ವೇ ಸಾಮಾನ್ಯ ಸಂಗತಿ. ಹೀಗೆ ಹೊರಹೊಮ್ಮಿದ ಭಾವನೆಗಳ ಸಾಚಾತನವು ದೃಢಪಟ್ಟ ಮೇಲೆ, ರಾಷ್ಟ್ರದ ಜನ ಅದಕ್ಕೆ ಹೇಗೆ ಅನುಕಂಪದಿಂದ ಪ್ರತಿಸ್ಪಂದಿಸುತ್ತಾರೆ ಎಂಬ ವಿಶಾಲ ಆಯಾಮದಲ್ಲಿ ಇಂತಹ ಸನ್ನಿವೇಶಗಳನ್ನು ಅವಲೋಕಿಸಬೇಕಿದೆ.

ಹೀಗಾಗಿ, ಸಾರ್ವಜನಿಕವಾಗಿ ಭಾವನೆಗಳನ್ನು ಹೊರಹಾಕುವ ಮಾರ್ಗೋಪಾಯದ ಮೊರೆ ಹೋಗಿರುವವರು ಕುಮಾರಸ್ವಾಮಿ ಅವರೊಬ್ಬರೇ ಅಲ್ಲ. ತೀರಾ ಇತ್ತೀಚಿನ ಉದಾಹರಣೆಯಾಗಿ, ರಾಹುಲ್ ಗಾಂಧಿ ಅವರು ಲೋಕಸಭೆ ಕಲಾಪದಲ್ಲಿ ಉತ್ಸಾಹಭರಿತ ಭಾಷಣ ಮಾಡಿದ ನಂತರ ಪ್ರಧಾನಿ ಮೋದಿ ಅವರನ್ನು ಅನಿರೀಕ್ಷಿತವಾಗಿ ಅಪ್ಪಿಕೊಂಡಿದ್ದನ್ನು ಕೂಡ ಗಮನಿಸಬಹುದು.

ಈ ‘ಕರಡಿ ಅಪ್ಪುಗೆ’ಯನ್ನು ರಾಹುಲ್ ಅವರ ಬೆಂಬಲಿಗರು ಮೆಚ್ಚಿಕೊಂಡು ಪ್ರತಿಕ್ರಿಯಿಸಿದರೆ, ಈ ಪರಿಯ ವರ್ತನೆಗೆ ಸಂಪೂರ್ಣ ವಿಭಿನ್ನ ತಿರುವು ನೀಡಿದ ಮೋದಿ ಮೊದಲಾಗಿ ಎದುರಾಳಿಗಳೆಲ್ಲಾ ತೀವ್ರವಾಗಿ ಲೇವಡಿ ಮಾಡಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಚಾರಿತ್ರಿಕ ಗೆಲುವು ದಾಖಲಿಸಿದ ನಂತರ, ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪಕ್ಷದ ಧುರೀಣ ಅಡ್ವಾಣಿ ಅವರ ಅಭಿಪ್ರಾಯಕ್ಕೆ ಮೋದಿ ಭಾವುಕವಾಗಿ ಪ್ರತಿಕ್ರಿಯಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು. ‘ಬಿಜೆಪಿಗೆ ಅದ್ಭುತ ಗೆಲುವು ತಂದುಕೊಟ್ಟಿದ್ದಕ್ಕಾಗಿ ಪಕ್ಷವು ಮೋದಿ ಅವರಿಗೆ ಧನ್ಯವಾದ ಸಲ್ಲಿಸಬೇಕು’ ಎಂದು ಅಡ್ವಾಣಿ ಹೇಳಿದ್ದರು. ಇದಕ್ಕೆ ತೊಟ್ಟಿಕ್ಕಿದ ಕಣ್ಣಾಲಿಗಳಿಂದ ಪ್ರತಿಕ್ರಿಯಿಸಿದ್ದ ಮೋದಿ, ‘ತನ್ನ ಕರ್ತವ್ಯವನ್ನು ನೆರವೇರಿಸಿದ್ದಕ್ಕಾಗಿ ತಾಯಿಯು ಮಗನಿಗೆ ಧನ್ಯವಾದ ಸಲ್ಲಿಸಬೇಕೇನು’ ಎಂದು ಪ್ರತಿಕ್ರಿಯಿಸಿದ್ದರು!

ಈ ಎಲ್ಲ ಸನ್ನಿವೇಶಗಳೂ ತಮ್ಮ ಬೆಂಬಲಿಗರ ಹೃದಯಗಳನ್ನು ಸಂತುಷ್ಟಗೊಳಿಸುವ ಉದ್ದೇಶ ಹೊಂದಿದ ಅತ್ಯಂತ ಯೋಜಿತ ವರ್ತನೆಗಳು ಎಂದು ವಿಶ್ಲೇಷಕರು ಸಮರ್ಥವಾಗಿ ತರ್ಕ ಮಂಡಿಸಬಲ್ಲರು. ಕುಮಾರಸ್ವಾಮಿ ಅವರು ಮಾಡಿದ್ದೂ ಇದನ್ನೇ ಹೊರತು ಬೇರೇನನ್ನೂ ಅಲ್ಲ! ಅವರು ಹೀಗೆ ಭಾವುಕರಾದದ್ದು ತಮ್ಮ ಬೆಂಬಲಿಗರ ರ‍್ಯಾಲಿಯಲ್ಲಿ ಎಂಬುದನ್ನು ನೆನಪಿನಲ್ಲಿ ಇಡಬೇಕಾಗುತ್ತದೆ.

ಅಭಿಮಾನಿಗಳು ತಮ್ಮನ್ನು ಕೊಂಡಾಡುತ್ತಿದ್ದುದರ ನಡುವೆಯೇ ಅವರು, ತಾವು ಮುಖ್ಯಮಂತ್ರಿಯಾದ ಸನ್ನಿವೇಶಗಳು, ಎದುರಿಸುತ್ತಿರುವ ಹಲವಾರು ವಿರೋಧಾಭಾಸಗಳು ಮತ್ತು ಸವಾಲುಗಳ ಬಗ್ಗೆ ವಿವರವಾಗಿ ಹೇಳಲು ತೀವ್ರವಾಗಿ ಪ್ರಯತ್ನಿಸಿದರು.

ಬೆಂಬಲಿಗರ ಮೆಚ್ಚುಗೆಯ ಉದ್ಗಾರಗಳ ಬಗ್ಗೆ ಉಲ್ಲೇಖಿಸಿದ ಅವರು, ತಾವು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಕ್ಕೆ ಅವರಿಗೆಲ್ಲಾ ಸಂತೋಷವಾಗಿದ್ದರೆ ತಮಗೆ ಮಾತ್ರ ಅಂತಹ ಯಾವುದೇ ಭಾವನೆ ಮೂಡುತ್ತಿಲ್ಲ ಎಂದರು. ಅವರು ಮುಖ್ಯಮಂತ್ರಿ ಚುಕ್ಕಾಣಿ ಹಿಡಿದ ಎರಡೂ ಸಂದರ್ಭಗಳಲ್ಲಿ ಅವರ ಪಕ್ಷಕ್ಕೆ ಬಹುಮತವಿರಲಿಲ್ಲ ಹಾಗೂ ಸನ್ನಿವೇಶಗಳು ಅವರನ್ನು ನಾಯಕತ್ವ ಗಾದಿಗೆ ದೂಡಿದವು ಎಂಬುದನ್ನು ಗಮನಿಸುವುದು ಮುಖ್ಯವಾಗುತ್ತದೆ.

ಇದು ಮುಖ್ಯಮಂತ್ರಿಯವರ ಎಡೆಬಿಡದ ಪ್ರಲಾಪವೂ ಆಗಿದೆ! ಅವರು ಏಕೆ ಕಣ್ಣೀರು ಸುರಿಸುವ ಮಾರ್ಗೋಪಾಯದ ಮೊರೆ ಹೋದರು ಎಂಬುದನ್ನು ಮೂರು ಬಗೆಗಳಲ್ಲಿ ವಿವರಿಸಬಹುದು.

ಮೊದಲನೆಯದಾಗಿ, ತಮ್ಮ ಅನುಯಾಯಿಗಳ ಬೆಂಬಲ ಮತ್ತು ಅನುಕಂಪ ಗಳಿಸುವ ಸ್ಪಷ್ಟ ಉದ್ದೇಶ ಇದರ ಹಿಂದಿದೆ. ತಾವು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಪಕ್ಷದ ಕಾರ್ಯಕರ್ತರ ಬಹಳಷ್ಟು ನಿರೀಕ್ಷೆಗಳು ಈಡೇರದೇ ಉಳಿಯುತ್ತವೆ ಎಂಬುದು ಅವರಿಗೆ ಮನವರಿಕೆಯಾಗಿಬಿಟ್ಟಿದೆ. ಚುನಾವಣಾ ಪ್ರಚಾರದ ವೇಳೆ ಅತಿಯಾದ ಭರವಸೆಗಳನ್ನು ನೀಡಿದ್ದು ಕೂಡ ಇದಕ್ಕೆ ಒಂದಷ್ಟು ಮಟ್ಟಿಗೆ ಕಾರಣ.

ಮೇರೆ ಮೀರಿದ ಭರವಸೆಗಳು ಈಡೇರಿಸಲಾಗದ ಸಾಧನೆಗಳ ಕೊರಗುಗಳಾಗಿ ವ್ಯಕ್ತವಾಗುತ್ತವೆ. ಇದರ ಜೊತೆಗೆ, ಹಿಂದಿಗಿಂತ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಮುಖ್ಯಮಂತ್ರಿಯಾಗಿ ಅಸಹಾಯಕತೆಗೆ ಒಳಗಾಗಿರುವುದು ಅವರಿಗೆ ಮತ್ತೊಂದು ಸವಾಲನ್ನು ಒಡ್ಡಿದೆ. ಹೀಗಾಗಿ ಈ ಭಾವುಕ ಆಸ್ಫೋಟವು ಸ್ಪಷ್ಟವಾಗಿಯೂ ಬೆಂಬಲಿಗರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶ ಹೊಂದಿದೆ.

ಎರಡನೆಯದಾಗಿ, ಇದು ತಮ್ಮ ಮಿತ್ರ ಪಕ್ಷ ಹಾಕುತ್ತಿರುವ ಕೆಲವು ಒತ್ತಡಗಳಿಂದ ತಮಗಾಗುತ್ತಿರುವ ಹಿಂಸೆಯ ಸ್ಪಷ್ಟ ಅಭಿವ್ಯಕ್ತಿಯಾಗಿದೆ. ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಬೇಕಾದರೆ ತಾನು ‘ವಿಷಕಂಠ’ನಾಗಬೇಕಾಗಿದೆ ಎಂದು ಹೇಳುವಾಗ ಕಾಂಗ್ರೆಸ್ ಪಕ್ಷವನ್ನು ಟೀಕಾಪ್ರಹಾರದ ಗುರಿ ಮಾಡಿಕೊಂಡಿರಲಿಲ್ಲ ಎಂದು ಅವರು ಹೇಳಿದ್ದರೂ, ಇದು ‘ಹೇಳಿಕೆ ನೀಡಿದ ತರುವಾಯದ ತಡವಾದ ಚಿಂತನೆ’ ಎಂಬಂತೆ ತೋರುತ್ತಿದೆ.

ಮುಖ್ಯಮಂತ್ರಿ ಕೆಲವು ನಾಯಕರು ಮತ್ತು ಮಿತ್ರ ಪಕ್ಷವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಹೀಗೆ ಹೇಳಿದರು ಎಂಬುದು ರಾಜಕಾರಣವನ್ನು ಕೇವಲ ಮೇಲ್ನೋಟಕ್ಕೆ ಗಮನಿಸುವವರಿಗೂ ಗೊತ್ತಿರುವ ಸಂಗತಿಯಾಗಿದೆ. ತನಗಿಂತ ಹೆಚ್ಚು ಸಂಖ್ಯಾಬಲವಿರುವ ಪಕ್ಷದೊಂದಿಗೆ ಮೈತ್ರಿಕೂಟ ಮಾಡಿಕೊಂಡು ಸರ್ಕಾರವನ್ನು ಮುನ್ನಡೆಸುವುದು ಅಪಾರ ತಾಳ್ಮೆ ಮತ್ತು ಕೌಶಲವನ್ನು ಬೇಡುತ್ತದೆ.

ಖಾತೆಗಳ ಹಂಚಿಕೆಯೇ ಇರಬಹುದು, ಸರ್ಕಾರದ ಆದ್ಯತೆಗಳ ಪಟ್ಟಿ ಸಿದ್ಧಗೊಳಿಸುವುದೇ ಇರಬಹುದು, ಸಾಲ ಮನ್ನಾ ವಿಷಯವನ್ನು ತಮ್ಮ ಬಜೆಟ್ ಮಂಡನೆಯ ಪ್ರಮುಖ ವಿಷಯವಾಗಿಸುವುದೇ ಇರಬಹುದು- ಸರ್ಕಾರ ರಚನೆಯಾದಾಗಿನಿಂದಲೂ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬದಿಗೆ ಸರಿಸಿರುವ ಅವರು, ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನೇರ ಸಂಪರ್ಕ ಇರಿಸಿಕೊಂಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಕಾಂಗ್ರೆಸ್ ಘಟಕವು ದಿಕ್ಕುದೆಸೆ ಇಲ್ಲದಂತಾಗಿರುವುದು ಕೂಡ ಮುಖ್ಯಮಂತ್ರಿಗೆ ಅನುಕೂಲ ಮಾಡಿಕೊಟ್ಟಿದೆ. ಇಷ್ಟಾದರೂ ಬೆಂಬಲಿಗರ ಉಪಸ್ಥಿತಿ ಹಾಗೂ ರ‍್ಯಾಲಿಯ ಸಂದರ್ಭವು, ತಮಗೆ ತೊಡರುಗಾಲು ಹಾಕುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ಮುಜುಗರ ಉಂಟುಮಾಡಲು ಎಡೆಮಾಡಿಕೊಟ್ಟಿತು.

ಕೊನೆಯದಾಗಿ, ಸಾರ್ವಜನಿಕ ರ‍್ಯಾಲಿಯಲ್ಲಿ ಮುಖ್ಯಮಂತ್ರಿಯವರ ಭಾವುಕ ಆಸ್ಫೋಟವನ್ನು ಅವರ ಹೆಗ್ಗುರುತೇ ಆಗಿರುವ ‘ವಿರೋಧಾಭಾಸ’ ಧೋರಣೆಯ ಹಿನ್ನೆಲೆಯಲ್ಲೂ ಅರ್ಥೈಸಿಕೊಳ್ಳಬೇಕಿದೆ. ಒಂದು ದಿನ ಅವರು, ತಮ್ಮನ್ನು ಮುಖ್ಯಮಂತ್ರಿ ಮಾಡಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಜನ ಅಲ್ಲ ಎಂದರೆ, ಮರುದಿನವೇ ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ಮಾಡಿ, ತಾನು ಅವರನ್ನು ಅವಲಂಬಿಸಿಲ್ಲ ಎನ್ನುತ್ತಾರೆ.

ಒಂದು ದಿನ, ತಮ್ಮ ಮುಂದೆ ಐದು ವರ್ಷಗಳ ಆಡಳಿತಾವಧಿ ಇದೆ ಎಂದರೆ, ಮರುದಿನವೇ ಮುಂಬರುವ ಲೋಕಸಭಾ ಚುನಾವಣೆಯ ನಂತರ ಪರಿಸ್ಥಿತಿ ಬದಲಾಗಬಹುದು ಎನ್ನುತ್ತಾರೆ. ಬಜೆಟ್ ಮಂಡನೆಯ ಸಿದ್ಧತೆಯ ವೇಳೆಯೂ ಮುಖ್ಯಮಂತ್ರಿ ಹೀಗೆ ಉಲ್ಟಾ ಹೇಳಿಕೆಗಳನ್ನು ನೀಡಿದ್ದನ್ನು ಗಮನಿಸಬಹುದಾಗಿದೆ. ಬಿಜೆಪಿಯೊಂದಿಗೆ ಸೇರಿ ಮೈತ್ರಿಕೂಟವನ್ನು ಮುನ್ನಡೆಸಿದ್ದ ಸಂದರ್ಭದಲ್ಲೂ ಅವರ ಇಂತಹ ವರ್ತನೆಯನ್ನು ಜನ ಕಂಡಿದ್ದಾರೆ. ಪ್ರಾಯಶಃ ಇದು, ಲೋಕಸಭಾ ಚುನಾವಣೆಯ ನಂತರ ಯಾವ ಬಗೆಯ ರಾಷ್ಟ್ರೀಯ ಚಿತ್ರಣ ಮೂಡುತ್ತದೆ ಎಂಬುದನ್ನು ಅವಲಂಬಿಸಿ ತಮ್ಮ ಎಲ್ಲಾ ಬಗೆಯ ಆಯ್ಕೆಗಳನ್ನು ಮುಕ್ತವಾಗಿ ಇರಿಸಿಕೊಳ್ಳುವ ಕಾರ್ಯತಂತ್ರವೂ ಆಗಿರಬಹುದು!

Post Comments (+)