ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ರಾಜಕೀಯ ಪ್ರತೀಕಾರ ಮತ್ತು ‘ಆಟದ ನಿಯಮ’

ಕೇಂದ್ರ-– ರಾಜ್ಯ, ಅಂತರರಾಜ್ಯ ಸಹಕಾರಕ್ಕೆ ಧಕ್ಕೆ ತಂದಿದೆ ರಾಜಕೀಯ ವಾಕ್ಸಮರ
Last Updated 17 ಮೇ 2022, 19:45 IST
ಅಕ್ಷರ ಗಾತ್ರ

‘ಲಕ್ಷ್ಮಣ ರೇಖೆ’ ಹಾಗೂ ಒಬ್ಬರ ಅಧಿಕಾರದ ಮಿತಿಗಳನ್ನು ಗೌರವಿಸಬೇಕಾದ ಅಗತ್ಯವನ್ನು ಇತ್ತೀಚಿನ ಕೆಲವು ದಿನಗಳಲ್ಲಿ ಪದೇ ಪದೇ ಉಲ್ಲೇಖಿಸಲಾಗಿದೆ. ಹೀಗಿದ್ದೂ ಲಕ್ಷ್ಮಣ ರೇಖೆ ಎಳೆಯುವವರು ಯಾರು ಎಂಬ ಬಗ್ಗೆ ಚರ್ಚೆ ಮುಂದುವರಿದಿದೆ. ಒಬ್ಬರ ಅಗತ್ಯ ಹಾಗೂ ಹಿತಾಸಕ್ತಿಗೆ ಅನುಗುಣವಾಗಿ ನಿರಂತರವಾಗಿ ಬದಲಿಸಬಹುದಾದ ಅನುಕೂಲಸಿಂಧು ರೇಖೆಯಾಗಬಹುದೇ ಇದು? ಬೇರೆ ಬೇರೆ ಗಳಿಗೆಗಳಲ್ಲಿ ನಾಟಕೀಯ ಎನಿಸಬಹುದಾದ ಭಿನ್ನ ಭಿನ್ನ ದೃಷ್ಟಿಕೋನಗಳೊಂದಿಗೆ ‘ಲಕ್ಷ್ಮಣ ರೇಖೆ’ಯನ್ನು ಅಧಿಕಾರ ಸ್ಥಾನಗಳಲ್ಲಿ ಇರುವವರು ಆಗಾಗ್ಗೆ ಉಲ್ಲೇಖಿಸಬಹುದೇ? ರಾಜಕೀಯ ಕುರಿತಾದ ಇಂದಿನ ವಿಶ್ಲೇಷಣೆಯಲ್ಲಿ ಅಂತಹ ಒಂದು ಪ್ರಕರಣವನ್ನು ಎತ್ತಿ ತೋರಲಾಗಿದೆ.

ನಾಗರಿಕ ಸೇವೆ ಹಾಗೂ ಸರ್ಕಾರದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒಳಗೊಂಡ ಒಕ್ಕೂಟ ಸರ್ಕಾರದ ಚೌಕಟ್ಟಿನಲ್ಲಿ ಹೆಚ್ಚಿನ ತಿಕ್ಕಾಟಗಳು ನಡೆ ಯುವುದು ಹೊಸ ವಿದ್ಯಮಾನವೇನಲ್ಲ. ಪಂಜಾಬ್, ಹರಿಯಾಣ ಹಾಗೂ ದೆಹಲಿ ಪೊಲೀಸರನ್ನು ಒಳಗೊಂಡ ಇತ್ತೀಚಿನ ನಗೆಪಾಟಲಿನ ವಿದ್ಯಮಾನವು ಒಕ್ಕೂಟ ಆಡಳಿತದ ಮೂಲಭೂತ ತತ್ವಗಳ ಗೌರವವನ್ನು
ಕಾಪಾಡಿಕೊಳ್ಳುವುದಕ್ಕಾಗಿ ಈ ‘ಲಕ್ಷ್ಮಣ ರೇಖೆ’ಗೆ ಗೌರವ ನೀಡಬೇಕಾದ ಅಗತ್ಯದೆಡೆ ಗಮನ ಸೆಳೆದಿದೆ. ಪಕ್ಷಾಧಾರಿತ ರಾಜಕೀಯಕ್ಕಾಗಿ ಮತ್ತು ವೈಯಕ್ತಿಕ ಕಾರ್ಯಸೂಚಿಗಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ಸಾರ್ವಜನಿಕ ಹಿತಕ್ಕಾಗಿ ವಿವೇಚನೆಯಿಂದ ಅಧಿಕಾರವನ್ನು ಬಳಸ ಬೇಕಿರುವ ಅಗತ್ಯದ ಪ್ರಶ್ನೆಯನ್ನೂ ಈ ಪ್ರಕರಣ ಎತ್ತುತ್ತದೆ.

ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಸದೃಢವಾಗಿ ಪ್ರತಿಷ್ಠಾಪಿತಗೊಂಡಿರುವ ತತ್ವಗಳನ್ನು ಪಕ್ಕಕ್ಕಿರಿಸಿ, ತಮ್ಮ ಪಕ್ಷದ ತಕ್ಷಣದ ರಾಜಕೀಯ ಹಿತಾಸಕ್ತಿಗಳಿಗಾಗಿ ನಿಯಮಗಳ ವ್ಯಾಖ್ಯಾನವನ್ನು ವಿಸ್ತರಿಸುವ ಅಥವಾ ತಿರುಚುವ ಪ್ರವೃತ್ತಿಯು ಇತ್ತೀಚಿನ ದಿನಮಾನಗಳಲ್ಲಿ ಕಂಡುಬರುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ.

‘ತಜಿಂದರ್ ಪಾಲ್ ಸಿಂಗ್ ಬಗ್ಗಾ ಪ್ರಕರಣ’ವು ಪ್ರತಿನಿಧಿಸಿದ ‘ಅಸಂಗತ ನಾಟಕ’ವನ್ನು ಸ್ವಲ್ಪ ನೆನಪಿಸಿ
ಕೊಳ್ಳೋಣ. ಪ್ರತಿಸ್ಪರ್ಧಿ ರಾಜಕೀಯ ಪಕ್ಷದ ನಾಯಕನ ಬಗ್ಗೆ ರಾಜಕಾರಣಿಯೊಬ್ಬರು ಟೀಕೆಗಳ ಹೊಳೆಯನ್ನೇ ಹರಿಸುತ್ತಾರೆ. ನಮ್ಮಲ್ಲಿ ಅನೇಕರಿಗೆ ಇದು ಮಾಮೂಲಿ ವಿದ್ಯಮಾನ. ಟೀಕೆಗಳು, ಪ್ರತಿ ಟೀಕೆಗಳು ಉಗ್ರ ಆಕ್ರಮಣ ಶೀಲತೆಯೊಂದಿಗೆ ಹರಿದಾಡಿ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾದಾಗ, ರಾಜಕಾರಣದ ನಾಟಕ ಸ್ಪಷ್ಟವಾಗಿ ಎದ್ದುಕಾಣುತ್ತದೆ.

ಹೀಗೆ ದೂರುಗಳು ದಾಖಲಾಗಿರುವ ಪೊಲೀಸ್ ಠಾಣೆಗಳು, ತನ್ನ ನೇತಾರರ ವಿರುದ್ಧ ಮಾಡಿದ ಹೇಳಿಕೆಗಳಿಗೆ ಪ್ರತೀಕಾರ ತೆಗೆದುಕೊಳ್ಳಲು ಉತ್ಸುಕವಾಗಿ ರುವ ಪಕ್ಷವೇ ಆಡಳಿತದಲ್ಲಿರುವ ರಾಜ್ಯಗಳಲ್ಲೇ ಇರುವುದು ಪ್ರಾಸಂಗಿಕ ಮಾತ್ರವೇ?

ಈ ಪ್ರಕರಣದಲ್ಲಿ, ಎಎಪಿ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಮಾಡಿದ ಟೀಕೆಗಳಿಗಾಗಿ ದೆಹಲಿಯ ಬಿಜೆಪಿ ನಾಯಕ ಬಗ್ಗಾ ಅವರ ವಿರುದ್ಧ ದೂರು ದಾಖಲಾಯಿತು. ಎಎಪಿಯು ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವಂತಹ ಪಂಜಾಬ್‌ನ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಯಿತು. ಈ ವಿಚಾರದ ಬೆನ್ನಟ್ಟಲು ಹಾಗೂ ಬಗ್ಗಾ ಅವರನ್ನು ಬಂಧಿಸಲು ಪಂಜಾಬ್ ಪೊಲೀಸರು ನಿರ್ಧರಿಸುತ್ತಾರೆ. ಬಂಧನಕ್ಕೆ ಅವಕಾಶ ನೀಡುವ ಕಡ್ಡಾಯ ನಿರ್ದೇಶನ ಪಡೆದುಕೊಳ್ಳುವುದಿಲ್ಲ ಹಾಗೂ ತಮ್ಮ ರಾಜ್ಯದ ವ್ಯಾಪ್ತಿಯ ಹೊರಗೆ ದೆಹಲಿಯಲ್ಲಿ ಈ ಬಂಧನ ಕಾರ್ಯವನ್ನು ಪಂಜಾಬ್ ಪೊಲೀಸರು ಜರುಗಿಸುತ್ತಾರೆ.

ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಅಪ ಹರಣದ ದೂರನ್ನು ಬಗ್ಗಾ ಅವರ ತಂದೆ ದಾಖಲಿಸುತ್ತಾರೆ. ‘ಅಪಹರಣ ಆರೋಪ’ದ ಬಗ್ಗೆ ದೆಹಲಿ ಪೊಲೀಸರು (ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ವ್ಯಾಪ್ತಿಗೆ ಬರುತ್ತಾರೆ) ಹರಿಯಾಣ ಪೊಲೀಸರಿಗೆ ಸೂಚನೆ ನೀಡುತ್ತಾರೆ. ಹರಿಯಾಣದ ಮೂಲಕ ಪಂಜಾಬ್‌ಗೆ ಬಗ್ಗಾ ಅವರನ್ನು ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸ್ ವಾಹನವನ್ನು ಹರಿಯಾಣ ಪೊಲೀಸರು ತಡೆಯುತ್ತಾರೆ. ದೆಹಲಿ ಪೊಲೀಸರಿಗೆ ಬಗ್ಗಾ ಅವರನ್ನು ಹಸ್ತಾಂತರಿಸಲಾಗುತ್ತದೆ, ಅವರು ದೆಹಲಿಗೆ ವಾಪಸಾಗುತ್ತಾರೆ. ರಾಜಕೀಯ ವಾಕ್ಸಮರ ಮುಂದುವರಿ ಯುತ್ತಿರುವಂತೆಯೇ ಬಂಧನದಿಂದ ಬಗ್ಗಾ ಅವರನ್ನು ನ್ಯಾಯಾಲಯ ರಕ್ಷಿಸುತ್ತದೆ.

ಮೇಲಿನ ಈ ಕಥನದಲ್ಲಿ ಗಮನದಲ್ಲಿ ಇಡಬೇಕಾದ ಮುಖ್ಯ ಅಂಶಗಳು ಯಾವುವು? ಕಾನೂನು ಮತ್ತು ಸುವ್ಯವಸ್ಥೆಯು ರಾಜ್ಯದ ವಿಷಯವೇ ಆಗಿದ್ದು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆಯಾದರೂ ಈ ವಿಚಾರದಲ್ಲಿ ತಮ್ಮ ಅಧಿಕಾರವನ್ನು ರಾಜ್ಯ ಸರ್ಕಾರಗಳು ಚಲಾಯಿಸುವಾಗ ಅನುಸರಿಸಬೇಕಾದ ಸ್ಪಷ್ಟ ನಿಯಮ ಗಳಿವೆ. ಪೊಲೀಸರ ಅಧಿಕಾರವು ರಾಜ್ಯ ಗಡಿಗಳಿಗೆ ಬಹು ಪಾಲು ಸೀಮಿತವಾಗಿದೆ. ರಾಜ್ಯದ ಗಡಿಗಳಾಚೆಗೆ ಅವರು ಕ್ರಮ ಕೈಗೊಳ್ಳಬೇಕಾದ ಅಗತ್ಯ ಬಂದಾಗ ಹಲವಾರು ಅನುಮತಿಗಳನ್ನು ಪಡೆದುಕೊಳ್ಳ ಬೇಕಾಗುತ್ತದೆ. ಅಲ್ಲದೆ ಅದಕ್ಕೆ ಸಂಬಂಧಿಸಿದ ರಾಜ್ಯದ ಪೊಲೀಸರನ್ನೂ ಸಂಪರ್ಕದಲ್ಲಿ ಇಟ್ಟುಕೊಳ್ಳುವುದು ಅಗತ್ಯ.

ಬಗ್ಗಾ ಪ್ರಕರಣದಲ್ಲಿ ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೇ ಎಂಬ ಬಗ್ಗೆ ಈಗಲೂ ಜೋರಾದ ಚರ್ಚೆ ನಡೆಯುತ್ತಿದೆ. ನ್ಯಾಯಾಲಯಗಳ ಒಳಗೊಳ್ಳುವಿಕೆ ಹಾಗೂ ಬಂಧನ ಜರುಗಿಸಲು
ನ್ಯಾಯಾಲಯದ ನಿರ್ದಿಷ್ಟ ನಿರ್ದೇಶನಗಳ ಅಗತ್ಯವು ಈ ವಿಚಾರದ ಸಂಕೀರ್ಣತೆಯನ್ನು ಹೆಚ್ಚಿಸಿದೆ. ದೆಹಲಿ ಪೊಲೀಸರು ದೆಹಲಿ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಬರುವುದಿಲ್ಲ. ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣ ದಡಿ ದೆಹಲಿ ಪೊಲೀಸರು ಬರುವುದರಿಂದ ಈ ಪ್ರಕರಣದ ವಿವಾದವು ಮತ್ತಷ್ಟು ಸಂಕೀರ್ಣವಾಗುತ್ತದೆ.

ಅಂತರರಾಜ್ಯ ಹಾಗೂ ಕೇಂದ್ರ- ರಾಜ್ಯ ಸಂಬಂಧ ಗಳು, ಪರಿಣಾಮಕಾರಿ ಸಮನ್ವಯ ಹಾಗೂ ಅರ್ಥ ಪೂರ್ಣ ಸಹಕಾರಗಳ ಸುತ್ತ ಸುತ್ತುತ್ತವೆ ಎಂಬ ಅಂಶವನ್ನು ಇಲ್ಲಿ ಎತ್ತಿ ಹೇಳುವುದು ಮುಖ್ಯ. ಚರ್ಚಿಸುತ್ತಿರುವ ಈ ಪ್ರಕರಣದ ಸಂಬಂಧದಲ್ಲಿ ಎರಡು ಕಡೆಯೂ ಹೆಚ್ಚು ಗಾಸಿಯಾಯಿತು. ಬಿರುಸಾದ ರಾಜಕೀಯ ಸ್ಪರ್ಧೆ ಮೇಲುಗೈ ಪಡೆಯಿತು. ಯಾವುದೇ ಪ್ರಮುಖ ನಾಗರಿಕ ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಚಾರವೇನೂ ಇಲ್ಲಿ ವಿವಾದದ ಬಿಂದುವಾಗಿರಲಿಲ್ಲ. ಬದಲಿಗೆ ಇದು, ಎದ್ದು ಕಾಣಿಸುವ ಪಕ್ಷಾಧಾರಿತ ರಾಜಕೀಯ ಕುಸ್ತಿಪಂದ್ಯವಾಗಿತ್ತಷ್ಟೇ. ಆಟದ ನಿಯಮಗಳನ್ನು ಉಲ್ಲಂಘಿಸುತ್ತಾ ಬೇಕಾಬಿಟ್ಟಿ ವ್ಯಾಖ್ಯಾನಿಸುತ್ತಾ ತಮಗೆ ಬೇಕಾದಷ್ಟನ್ನೇ ಆಯ್ದುಕೊಂಡು ಉಲ್ಲೇಖಿಸುತ್ತಾ ಆಡುವ ಗೊಂದಲ ಮಯ ರಾಜಕೀಯ ಕುಸ್ತಿ ಪಂದ್ಯವಿದು.

ನ್ಯಾಯದ ಪಾಲನೆ ಅಥವಾ ನ್ಯಾಯೋಚಿತ ಆಟ ಎಂಬುದಕ್ಕಿಂತ ರಾಜಕೀಯ ಪ್ರತೀಕಾರವೇ ಗುರಿ ಎಂಬಂತೆ ತೋರುತ್ತಿತ್ತು. ತಾವು ಪ್ರತಿನಿಧಿಸುವ ರಾಜಕೀಯ ವರ್ಣಗಳನ್ನಾಧರಿಸಿ ರಾಜಕೀಯ ಪ್ರತೀಕಾರದ ಇತ್ಯರ್ಥ
ದಲ್ಲಿ ಸರ್ಕಾರದ ವಿವಿಧ ಹಂತಗಳು ತೊಡಗಿಕೊಂಡಲ್ಲಿ, ನ್ಯಾಯದ ಆಡಳಿತವು ಮೊದಲ ಹಾಗೂ ಪ್ರಮುಖ ಬಲಿಯಾಗುತ್ತದೆ. ಅಂತರರಾಜ್ಯ ಸಹಭಾಗಿತ್ವ ಹಾಗೂ ಸಮನ್ವಯದ ತತ್ವದಲ್ಲಿ ಬೇರೂರಿರುವ ಒಕ್ಕೂಟ ತತ್ವವು ರಾಜಕೀಯ ಸ್ಪರ್ಧೆಯ ನೆಲೆಯಾಗಿಬಿಟ್ಟಾಗ, ಒಕ್ಕೂಟ ತತ್ವದ ನ್ಯಾಯದ ಸಿದ್ಧಾಂತಗಳನ್ನು ಮೊದಲು ಬದಿಗೆ ಇರಿಸಬೇಕಾಗುತ್ತದೆ.

ಇಂತಹ ಪ್ರಸಂಗಗಳು ನಮಗೆ ನೆನಪಿಸುವುದೇನೆಂದರೆ, ಪ್ರತಿಸ್ಪರ್ಧಿಗಳೊಡನೆ ರಾಜಕೀಯ ಪ್ರತೀಕಾರ ಕ್ಕಾಗಿ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಳಸಿಕೊಳ್ಳದಿರುವಂತೆ ನೋಡಿಕೊಳ್ಳುವ ಅಗತ್ಯ. ‘ಆಟದ ನಿಯಮ’ಗಳಿಗೆ ಅಕ್ಷರಶಃ ಬದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ರಾಜಕೀಯ ಪಕ್ಷಗಳ ನೇತಾರರು ಮನಗಾಣಿಸಬೇಕಾದುದರ ಅಗತ್ಯ. ಪಕ್ಷದ ರಾಜಕೀಯ ಗಳಿಕೆಗಳಿಗಾಗಿ ಅಧಿಕಾರದ ಪ್ರಭಾವವನ್ನು ಬಳಸುವ ಆಮಿಷವನ್ನು ಕಟ್ಟು ನಿಟ್ಟಾಗಿ ತೊಲಗಿಸಬೇಕು.

ಒಕ್ಕೂಟ ವ್ಯವಸ್ಥೆಯಲ್ಲಿ ನಿರ್ದಿಷ್ಟ ಕರಾರುಗಳ ಮೇಲೆ ಸರ್ಕಾರದ ವಿವಿಧ ಹಂತಗಳು ಅಧಿಕಾರ ಸ್ಥಾನಗಳಿಗೆ ಚುನಾಯಿತವಾಗಿರುತ್ತವೆ. ರಾಜಕೀಯ ಪ್ರತಿಸ್ಪರ್ಧಿಗಳ ಮೇಲಿನ ಪ್ರತೀಕಾರಕ್ಕಾಗಿ ಅಧಿಕಾರವನ್ನು ತಂತ್ರಗಾರಿಕೆ ಯಿಂದ ಬಳಸಿಕೊಳ್ಳುವ ವಿಚಾರವು ಈ ಕರಾರಿನಲ್ಲಿ ಸೇರಿರುವುದಿಲ್ಲ. ಆದರೆ ಹೀಗೆ ಮಾಡುವಂತಹ ಆಮಿಷವು ಆಗಾಗ್ಗೆ ಪ್ರಕಟಗೊಳ್ಳಬಹುದು. ಅಂತಹ ಅಲ್ಪಾವಧಿ ಗಳಿಕೆಗಳನ್ನು ಮೀರಿ, ಸಾಮಾಜಿಕವಾಗಿ ಅದಕ್ಕಿಂತ ದೊಡ್ಡದಾಗಿ ಒಳಿತಾಗುವುದನ್ನು ಮಾಡುವುದರ ಮೇಲೆ ನಾಯಕತ್ವ ಗಮನಹರಿಸುವುದೇ?

ಪಕ್ಷಾಧಾರಿತ ರಾಜಕೀಯ ಸ್ಪರ್ಧೆಗೆ ಸಾಧನವಾಗು ವುದಕ್ಕಿಂತ ಎಲ್ಲರ ಒಳ್ಳೆಯದಕ್ಕಾಗಿ ಸಹಭಾಗಿತ್ವ ಹಾಗೂ ಸಹಕಾರದ ಮೇಲೆ ಕೇಂದ್ರ- ರಾಜ್ಯ ಮತ್ತು ಅಂತರರಾಜ್ಯ ಸಂಬಂಧಗಳು ಗಮನಹರಿಸುವುದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT