ಬುಧವಾರ, ಮೇ 27, 2020
27 °C

‘ಪ್ರಜಾತಾಂತ್ರಿಕ ಚರ್ಚೆ’ಯ ಆಶಯ ಮುನ್ನೆಲೆಗೆ ಬರಲಿ

ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಈ ದೇಶ ತನ್ನ ಅತಿದೊಡ್ಡ ರಾಷ್ಟ್ರ ನಾಯಕನ ಜನ್ಮದಿನವನ್ನು ಕಳೆದ ಏಳು ದಶಕಗಳಿಂದ ಪ್ರತಿವರ್ಷ ಅಕ್ಟೋಬರ್‌ 2ರಂದು ಆಚರಿಸುತ್ತಿದೆ. ಅದಾದ ನಂತರ, ಈ ನಾಯಕನನ್ನು ರಾಷ್ಟ್ರ ಮರೆತುಬಿಡುತ್ತದೆ. ಎಲ್ಲ ಬಗೆಯ ಸೈದ್ಧಾಂತಿಕ ಹಿನ್ನೆಲೆಗಳ ರಾಜಕೀಯ ಪಕ್ಷಗಳ ನಾಯಕರು, ಚಳವಳಿಗಳ ನಾಯಕರು ತಮ್ಮ ಹೇಳಿಕೆಗಳನ್ನು ಹಾಗೂ ನಿಲುವುಗಳನ್ನು ಸಮರ್ಥಿಸಿಕೊಳ್ಳಲು ಮಹಾತ್ಮ ಆಡಿದ್ದ ಮಾತುಗಳನ್ನು ಉಲ್ಲೇಖಿಸುವುದು ಅಗತ್ಯ ಎಂದು ಭಾವಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಮೂಲ ಸೈದ್ಧಾಂತಿಕ ನಂಬಿಕೆಗಳ ಭಾಗವಾಗಿ ರಾಷ್ಟ್ರಪಿತನ ಆಲೋಚನೆಗಳನ್ನು ನೆನಪಿಸಿಕೊಳ್ಳುತ್ತವೆ. ಗಾಂಧೀಜಿ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆಗಳು ತನ್ನ ಪರಂಪರೆಯ ಭಾಗ ಎಂದು ಕಾಂಗ್ರೆಸ್ ಮತ್ತೆ ಮತ್ತೆ ಹೇಳಿಕೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಾವು ಪ್ರತಿಪಾದಿಸುವ ವಿಚಾರಗಳನ್ನು ಒತ್ತಿ ಹೇಳಲು, ಮಹಾತ್ಮನ ಆಲೋಚನೆಗಳ ಪ್ರಭಾವವನ್ನು ಉಲ್ಲೇಖಿಸುತ್ತಾರೆ.

ಮೊದಲನೆಯದಾಗಿ ಹೇಳಬೇಕು ಎಂದಾದರೆ, ಮಹಾತ್ಮ ಗಾಂಧೀಜಿ, ಯಾರಾದರೂ ‘ನಾನೂ ಗಾಂಧೀಜಿ ಅನುಯಾಯಿ’ ಎಂದು ಹೇಳುವುದರ ವಿರುದ್ಧವಾಗಿದ್ದರು. ಅಲ್ಲದೆ, ತಮ್ಮ ಕಾಲಾನಂತರ ‘ಗಾಂಧಿವಾದ’ ಎಂಬುದೇನೂ ಇರಬಾರದು ಎಂದೂ ಅವರು ಹೇಳುತ್ತಿದ್ದರು. ತಾವು ಪ್ರತಿಪಾದಿಸಿದ ಮೌಲ್ಯಗಳನ್ನು ತಾವೇ ಪರಿಪೂರ್ಣವಾಗಿ ಪಾಲಿಸುತ್ತಿಲ್ಲ ಎಂದು ಭಾವಿಸಿದ್ದ ಗಾಂಧೀಜಿ, ‘ಯಾರೂ ತಮ್ಮನ್ನು ಗಾಂಧಿಯ ಅನುಯಾಯಿ ಎಂದು ಹೇಳಿಕೊಳ್ಳಬಾರದು’ ಎಂದು ಹೇಳಿದ್ದರು. ಮಹಾತ್ಮ ತಮ್ಮ ಆಲೋಚನೆಗಳನ್ನು ಯಾವ ಸಂದರ್ಭದಲ್ಲಿ ಹೇಳಿದ್ದರು ಎಂಬುದನ್ನು ನೋಡದೆಯೇ ಅವರು ಹೇಳಿದ್ದ ಮಾತುಗಳನ್ನು ಉಲ್ಲೇಖಿಸುವುದು ನಾವು ಇಂದು ಮಾಡುತ್ತಿರುವ ದೊಡ್ಡ ತಪ್ಪುಗಳಲ್ಲಿ ಒಂದು. ತಮ್ಮ ನಿಲುವುಗಳಲ್ಲಿ ಸ್ಥಿರತೆ ಇಲ್ಲ ಎಂದು ಗಾಂಧೀಜಿ ಇತರರಿಂದ ಟೀಕೆಗೆ ಗುರಿಯಾದಾಗ, ನಿರ್ದಿಷ್ಟ ಸಂದರ್ಭದಲ್ಲಿ ‘ಸತ್ಯ’ ಎಂದು ಅನಿಸಿದ ವಿಚಾರದ ಜೊತೆ ‘ನಾನು ಸ್ಥಿರವಾಗಿ ನಿಂತಿರುತ್ತೇನೆ’ ಎಂದು ಹೇಳಿದ್ದರು. ಇಂದು, ನಮ್ಮ ರಾಜಕಾರಣಿಗಳು ಯಾವುದೇ ಹಿಂಜರಿಕೆ ಇಲ್ಲದೆ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಮಹಾತ್ಮನ ಹೇಳಿಕೆಗಳನ್ನು ಬಳಸಿಕೊಳ್ಳುತ್ತಾರೆ. ಹೀಗೆ ಮಾಡುವಾಗ, ಗಾಂಧೀಜಿ ಯಾವ ಸಂದರ್ಭದಲ್ಲಿ ಆ ಮಾತು ಆಡಿದ್ದರು ಎಂಬುದನ್ನು ಸುಲಭವಾಗಿ ನಿರ್ಲಕ್ಷಿಸಿಬಿಡುತ್ತಾರೆ. ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು, ವಿರೋಧಿಗಳನ್ನು ಟೀಕಿಸಲು ಗಾಂಧೀಜಿಯ ಹೇಳಿಕೆಗಳನ್ನು ಮನಸೋಇಚ್ಛೆ, ಕೊನೆಯಿಲ್ಲದಂತೆ ಬಳಸಿಕೊಳ್ಳುವ ಬದಲು ರಾಜಕಾರಣಿಗಳು ಈ ವಿಚಾರವನ್ನು ಗಮನದಲ್ಲಿ ಇರಿಸಿಕೊಳ್ಳಲು ಇದು ಸಕಾಲ.

ಎರಡನೆಯ ವಿಚಾರವೆಂದರೆ, ತಮ್ಮ ವಿರೋಧ ಇರುವುದು ನಿರ್ದಿಷ್ಟ ಸೈದ್ಧಾಂತಿಕ ನಿಲುವುಗಳಿಗೇ ವಿನಾ ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ ಎಂಬುದನ್ನು ಗಾಂಧೀಜಿ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಸ್ಪಷ್ಟವಾಗಿ ಹೇಳುತ್ತಿದ್ದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯ ಹೋರಾಟ ಬ್ರಿಟಿಷ್‌ ವಸಾಹತುಶಾಹಿಯ ವಿರುದ್ಧವಾಗಿತ್ತೇ ವಿನಾ ಬ್ರಿಟಿಷರೆಂಬ ವ್ಯಕ್ತಿಗಳ ವಿರುದ್ಧ ಆಗಿರಲಿಲ್ಲ. ಇದು ಅಹಿಂಸೆಯನ್ನು ತಮ್ಮ ಚಳವಳಿಯ ಮೂಲಮಂತ್ರವನ್ನಾಗಿಸಲು ಗಾಂಧೀಜಿಗೆ ಸಾಧ್ಯವಾಗಿಸಿಕೊಟ್ಟಿತು. ಅಲ್ಲದೆ, ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ಬ್ರಿಟಿಷರಿಗೆ ಹಸ್ತಲಾಘವ ನೀಡಿ ಅವರನ್ನು ಬೀಳ್ಕೊಟ್ಟೆವು. ಬಹುಶಃ, ಈ ನಿಲುವಿನಲ್ಲಿ ಆಧುನಿಕ ರಾಜಕಾರಣಿಗಳು ಹಾಗೂ ರಾಜಕೀಯಕ್ಕೆ ಒಂದು ಪಾಠ ಇದೆ. ಇಂದಿನ ರಾಜಕಾರಣಿಗಳು ಆಚರಿಸುವ ‘ದ್ವೇಷದ ಹಬ್ಬ’ವು, ರಾಷ್ಟ್ರಪಿತ ಪ್ರತಿಪಾದಿಸಿದ್ದ ತಂತ್ರಗಳಿಗೆ ವಿರುದ್ಧವಾಗಿದೆ. ನ್ಯಾಯವಾಗಿ ಹೇಳಬೇಕೆಂದರೆ, ಈ ರೋಗ ತಗುಲಿರುವುದು ಇಂದು ರಾಜಕೀಯ ಕ್ಷೇತ್ರವನ್ನು ಮಾತ್ರವೇ ಅಲ್ಲ. ಮುದ್ರಣ, ಎಲೆಕ್ಟ್ರಾನಿಕ್‌ ಮತ್ತು ಡಿಜಿಟಲ್‌ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳನ್ನು ಇಂದು ಗಮನಿಸಿದರೆ, ನಾವು ವಿರೋಧಿಸುವುದು ವಿಚಾರವನ್ನಲ್ಲ, ಬದಲಿಗೆ ವ್ಯಕ್ತಿಯನ್ನು ಎಂಬುದು ಕಾಣುತ್ತದೆ. ಈ ಪ್ರಕ್ರಿಯೆಯಲ್ಲಿ ಚರ್ಚೆಯ ಮೂಲ ಚೌಕಟ್ಟು ಧ್ರುವೀಕರಣಕ್ಕೆ ಒಳಗಾಗಿ, ವ್ಯಕ್ತಿಗತವಾಗುತ್ತದೆ. ಭಿನ್ನಾಭಿಪ್ರಾಯಗಳು ತಾತ್ವಿಕ ಮಟ್ಟದಲ್ಲಿ ಉಳಿದುಕೊಳ್ಳುವುದಿಲ್ಲ. ವೈಯಕ್ತಿಕ ಮಟ್ಟದ ಕಹಿ ಭಾವಗಳನ್ನು ನಿವಾರಿಸಿ, ಚರ್ಚೆಗೆ ಒಂದು ನಾಗರಿಕ ಸಮಾಜದ ಲಕ್ಷಣ ತಂದುಕೊಟ್ಟರು ಗಾಂಧಿ. ಅರ್ಥಪೂರ್ಣ ‘ಪ್ರಜಾತಾಂತ್ರಿಕ ಚರ್ಚೆ’ಯ ಆಶಯ ಎಂದರೆ ಇದು. ಇದು ತನ್ನಲ್ಲಿರುವುದನ್ನು ಭಾರತ ಮತ್ತೆ ತೋರಿಸಿಕೊಡಬೇಕಿದೆ.

ಮೂರನೆಯ ಅಂಶವೆಂದರೆ, ಸ್ವಾತಂತ್ರ್ಯಾನಂತರ ಮಹಾತ್ಮ ನಮ್ಮ ಜೊತೆ ಇದ್ದ ಅಲ್ಪಾವಧಿಯಲ್ಲಿ ಆಡಳಿತ ಪಕ್ಷ ಹಾಗೂ ಸರ್ಕಾರದ ನಡುವಿನ ವ್ಯತ್ಯಾಸ ಏನೆಂಬುದನ್ನು ತೋರಿಸುವ ಪ್ರಜ್ಞಾಪೂರ್ವಕ ಕೆಲಸವನ್ನು ಮಾಡಿದರು. ಸ್ವಾತಂತ್ರ್ಯ ಸಿಕ್ಕ ನಂತರ, ತಮ್ಮ ಹತ್ಯೆಯಾಗುವ ದಿನದವರೆಗಿನ ಹದಿನೇಳು ತಿಂಗಳುಗಳ ಅವಧಿಯಲ್ಲಿ ಮಹಾತ್ಮ, ಕಾಂಗ್ರೆಸ್‌ ಪಕ್ಷ ನೀಡಿದ್ದ ಭರವಸೆಗಳ 
ಕುರಿತು ಪ್ರಧಾನಿ ನೆಹರೂ ಅವರನ್ನು ಮತ್ತೆ ಮತ್ತೆ ನೆನಪಿಸುತ್ತಿದ್ದರು. ಭಾರತ ಸರ್ಕಾರವು ತಾನು ನೀಡಿದ್ದ ಭರವಸೆಗಳಿಂದ ಹಿಂದೆ ಸರಿಯುತ್ತಿದೆ ಅನಿಸಿದಾಗೆಲ್ಲ ಪ್ರತಿಫಟನೆಯಲ್ಲಿ ಕೂಡ ಭಾಗವಹಿಸಿದ್ದರು. ಒಂದು ರೀತಿಯಲ್ಲಿ ಮಹಾತ್ಮ ಭಾರತದ ಮೊದಲ ಹಾಗೂ ಶಕ್ತಿಶಾಲಿ ‘ವಿರೋಧ ಪಕ್ಷದ ನಾಯಕ’ ಆಗಿದ್ದರು– ನೆಹರೂ ಅವರಲ್ಲಿ ಅತ್ಯಂತ ದೊಡ್ಡ ಮಟ್ಟದ ಭಯ ಹುಟ್ಟಿಸಿದ ವಿರೋಧ ಪಕ್ಷದ ನಾಯಕ ಆಗಿದ್ದರು. ನೆಹರೂ ಮತ್ತು ಪಟೇಲ್ ನಡುವಿನ ಭಿನ್ನಾಭಿಪ್ರಾಯಗಳ ಶಮನದ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರಲ್ಲಿ 
ಈ ನಿಲುವು ಎದ್ದು ಕಾಣುತ್ತದೆ. ಆಡಳಿತ ಪ‍ಕ್ಷವು ತನ್ನ ವಿಶಿಷ್ಟ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು, ಸರ್ಕಾರ ಹೇಳಿದ್ದಕ್ಕೆಲ್ಲ ತಲೆದೂಗುವ ಕೆಲಸ ಮಾಡಬಾರದು ಎಂಬುದು ಕೂಡ ಮಹಾತ್ಮನ ನಿಲುವಾಗಿತ್ತು. ಪ್ರಜಾತಂತ್ರ ಶಕ್ತಿಯುತವಾಗಿ ಇರಬೇಕು ಎಂದಾದಲ್ಲಿ ಮಹತ್ವದ್ದಾಗಿರುವ ಪಕ್ಷ ಮತ್ತು ಸರ್ಕಾರದ ನಡುವಣ ವ್ಯತ್ಯಾಸವನ್ನು ಎಲ್ಲ ರಾಜಕೀಯ ಪಕ್ಷಗಳೂ ಅಧಿಕಾರಕ್ಕೆ ಬಂದಾಕ್ಷಣ ಮರೆಯುತ್ತವೆ. ಪ್ರಜ್ಞಾಪೂರ್ವಕವಾಗಿ ಈ ವ್ಯತ್ಯಾಸವನ್ನು ಗುರುತಿಸಿಕೊಳ್ಳಲು ಇದು ಸಕಾಲ.

‌ಗಾಂಧೀಜಿ ತೀವ್ರ ಧಾರ್ಮಿಕ ವ್ಯಕ್ತಿ ಆಗಿದ್ದರೂ ಆ ಧಾರ್ಮಿಕತೆಯು ಪ್ರಮುಖ ರಾಜಕೀಯ ವಿಚಾರಗಳಲ್ಲಿ ತಮ್ಮ ನಿಲುವಿನ ಮೇಲೆ ಪ್ರಭಾವ ಬೀರಲು ಗಾಂಧೀಜಿ ಅವಕಾಶ ಕೊಡಲಿಲ್ಲ. ಜನರ ಜೀವನದಲ್ಲಿ ಧರ್ಮ ಹೊಂದಿರುವ ಪಾತ್ರ ಮತ್ತು ಮಹತ್ವವನ್ನು ಗುರುತಿಸಿದ್ದ ಮಹಾತ್ಮ, ಸಾರ್ವಜನಿಕ ಜೀವನದಲ್ಲಿ ಇರುವವರು ವಿಭಜನಕಾರಿ 
ಧಾರ್ಮಿಕ ಅಂಶಗಳಿಂದ ಪ್ರಭಾವಿತರಾಗದಂತಹ ನೈತಿಕ ಶಕ್ತಿ ಹೊಂದಿರಬೇಕು ಎಂದು ಹೇಳುತ್ತಿದ್ದರು. ಭಾರತದಲ್ಲಿನ ಜಾತ್ಯತೀತತೆ ಕುರಿತ ಚರ್ಚೆಯಲ್ಲಿ ರಾಷ್ಟ್ರಪಿತ ಅಳವಡಿಸಿಕೊಂಡಿದ್ದ ಮಾರ್ಗವು, ಮುಂದಿನ ದಾರಿ ಯಾವುದು ಎಂಬುದನ್ನು ತೋರಿಸುವ ಶಕ್ತಿ ಹೊಂದಿರುವಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು