ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಕಂಡ ಬದಲಾವಣೆ

ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ: ಪಕ್ಷದ ಅಜೆಂಡಾ ಪಡೆದಿದೆ ಆದ್ಯತೆ
Last Updated 1 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಎರಡನೆಯ ಆಡಳಿತ ಅವಧಿಯ ಇಪ್ಪತ್ತು ತಿಂಗಳುಗಳನ್ನು ಪೂರ್ಣಗೊಳಿಸಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ಕಣ್ಣಿಗೆ ಕಾಣುವಂತಹ ಪರಿವರ್ತನೆಯನ್ನು ದಾಖಲಿಸಿದೆ. ಈ ಒಕ್ಕೂಟದ ಸಂಸದರ ಪೈಕಿ ಶೇಕಡ 90ಕ್ಕಿಂತ ಹೆಚ್ಚಿನವರು ಬಿಜೆಪಿಯವರು. ಕೇಂದ್ರ ಮಂತ್ರಿ ಪರಿಷತ್ತಿನಲ್ಲಿ ಬಿಜೆಪಿಯ ಸದಸ್ಯರಲ್ಲದವರ ಸಂಖ್ಯೆ ಒಂದು ಮಾತ್ರ. ಕೇಂದ್ರ ಸರ್ಕಾರವು ‘ಎನ್‌ಡಿಎ ಸರ್ಕಾರ’ ಎಂದೇ ಕರೆಸಿಕೊಂಡಿದ್ದರೂ ಕ್ಯಾಬಿನೆಟ್ ದರ್ಜೆಯ ಸಚಿವರ ಪೈಕಿ ಎಲ್ಲರೂ ಬಿಜೆಪಿಯವರೇ ಆಗಿದ್ದಾರೆ.

ಈಗಿನ ಎನ್‌ಡಿಎ ಸರ್ಕಾರವು ಎರಡನೆಯ ಅವಧಿಯನ್ನು ಆರಂಭಿಸಿದಾಗ, ಸಂಪುಟ ದರ್ಜೆಯ ಮೂವರು ಸಚಿವರು ಹಾಗೂ ಒಬ್ಬ ರಾಜ್ಯ ಸಚಿವ ಬಿಜೆಪಿಯೇತರ ಪಕ್ಷಗಳಿಗೆ ಸೇರಿದವರಾಗಿದ್ದರು. ಇಪ್ಪತ್ತು ತಿಂಗಳುಗಳ ಅವಧಿಯಲ್ಲಿ ಸಂಪುಟ ದರ್ಜೆಯ ಇಬ್ಬರು ಸಚಿವರು ತಮ್ಮ ಪಕ್ಷಗಳು ಎನ್‌ಡಿಎ ತೊರೆದ ನಂತರ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಸಂಪುಟ ದರ್ಜೆಯ ಒಬ್ಬ ಮಂತ್ರಿ ನಿಧನರಾದರು. ಇಂದು ಈ ಮೈತ್ರಿಕೂಟದಲ್ಲಿ ಅಧಿಕೃತವಾಗಿ 19 ಪಕ್ಷಗಳಿವೆ, ಈ ಪೈಕಿ ಲೋಕಸಭೆಯಲ್ಲಿ ಪ್ರಾತಿನಿಧ್ಯ ಇರುವುದು 10 ಪಕ್ಷಗಳಿಗೆ ಮಾತ್ರ. 2019ರ ಲೋಕಸಭಾ ಚುನಾವಣೆ ನಂತರ ಎನ್‌ಡಿಎ ಅಧಿಕಾರಕ್ಕೆ ಮರಳಿದಾಗ, ಕೂಟದಲ್ಲಿ 20 ಪಕ್ಷಗಳಿದ್ದವು. 352 ಎನ್‌ಡಿಎ ಸದಸ್ಯರ ಪೈಕಿ 303 ಜನ ಬಿಜೆಪಿಯವರಾಗಿದ್ದರು (ಶೇ 86). ಈ ಕೂಟದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಾಗಿದೆ.

ಎನ್‌ಡಿಎ ಗುಣಧರ್ಮ ಹಾಗೂ ಸ್ವರೂಪ ಹೇಗಿತ್ತು ಎಂಬುದನ್ನು ಅವಲೋಕಿಸುವುದು ಉಪಯುಕ್ತವಾದೀತು. 1998ರಲ್ಲಿ ಇದು ಮೊದಲ ಬಾರಿಗೆ ಚುನಾವಣೆ ಎದುರಿಸಿದಾಗ, ಕೂಟದಲ್ಲಿ ಒಟ್ಟು 14 ಪಕ್ಷಗಳಿದ್ದವು. 1998ರ ಚುನಾವಣೆಯಲ್ಲಿ ಎನ್‌ಡಿಎ 251 ಸ್ಥಾನಗಳನ್ನು ಗೆದ್ದುಕೊಂಡಿತು, ಇದರಲ್ಲಿ ಬಿಜೆಪಿಯ ಪಾಲು 178 ಸ್ಥಾನಗಳು (ಶೇ 71ರಷ್ಟು). ಟಿಡಿಪಿ ಬೆಂಬಲ ಪಡೆದು ಎನ್‌ಡಿಎ ಬಹುಮತ ಗಳಿಸಿತು, ಸರ್ಕಾರ ರಚಿಸಿತು. ಅಂದಿನ ಎನ್‌ಡಿಎ ಸರ್ಕಾರದ 21 ಜನ ಕ್ಯಾಬಿನೆಟ‌್ ದರ್ಜೆ ಸಚಿವರ ಪೈಕಿ 10 ಜನ ಬಿಜೆಪಿಯೇತರ ಪಕ್ಷಗಳಿಗೆ ಸೇರಿದವರಾಗಿದ್ದರು. 21 ರಾಜ್ಯ ಸಚಿವರ ‍ಪೈಕಿ ಆರು ಜನ ಬಿಜೆಪಿಯ ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಒಂದು ಮತದಿಂದ ಉರುಳಿ, 1999ರಲ್ಲಿ ಲೋಕಸಭೆಗೆ ಮತ್ತೆ ಚುನಾವಣೆ ನಡೆದಾಗ ಎನ್‌ಡಿಎ 302 ಸ್ಥಾನಗಳನ್ನು ಗೆದ್ದುಕೊಂಡಿತು. ಇದರಲ್ಲಿ ಬಿಜೆಪಿಯ ಪಾಲು 182 ಸ್ಥಾನಗಳು (ಶೇ 60). ಆಗ ಎನ್‌ಡಿಎದಲ್ಲಿ 21 ಪಕ್ಷಗಳು ಇದ್ದವು.

21 ಜನ ಸಂಪುಟ ದರ್ಜೆ ಸಚಿವರ ಪೈಕಿ ಒಂಬತ್ತು ಮಂದಿ ಮಿತ್ರಪಕ್ಷಗಳಿಗೆ ಸೇರಿದವರಾಗಿದ್ದರು. 1998 ಹಾಗೂ 1999ರಲ್ಲಿ ವಾಜಪೇಯಿ ನೇತೃತ್ವದಲ್ಲಿ ರಚನೆಯಾಗಿದ್ದ ಎನ್‌ಡಿಎ ಸರ್ಕಾರದಲ್ಲಿ ಬಿಜೆಪಿಯೇತರ ಪಕ್ಷಗಳ ಸದಸ್ಯರು ರಕ್ಷಣೆ, ವಾಣಿಜ್ಯ, ರೈಲ್ವೆ, ಕಾನೂನು, ಉಕ್ಕು ಮತ್ತು ಗಣಿ, ಭೂಸಾರಿಗೆ ಮತ್ತು ಇಂಧನದಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದರು. 2014ರ ನಂತರದಲ್ಲಿ ಬಿಜೆಪಿಯೇತರ ಪಕ್ಷಗಳ ಸಚಿವರು ಆಹಾರ ಸಂಸ್ಕರಣೆ, ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆಗಳನ್ನು ಹೊಂದಿದ್ದಿದೆ.

ಹಿಂದೆ ಕೂಡ ಮೈತ್ರಿಕೂಟ ಸರ್ಕಾರದ ಪ್ರಮುಖ ಪಕ್ಷವು ಮೈತ್ರಿಕೂಟದಲ್ಲಿ ಕನಿಷ್ಠ ಪ್ರಮಾಣದ ಪಾತ್ರವನ್ನು ವಹಿಸಿದ್ದ ಉದಾಹರಣೆಗಳಿವೆ. ಜನತಾದಳ ನೇತೃತ್ವದ ವಿ.ಪಿ. ಸಿಂಗ್ ಅವರು ಐದು ಪಕ್ಷಗಳ ನ್ಯಾಷನಲ್ ಫ್ರಂಟ್ ಸರ್ಕಾರವನ್ನು 1989ರಲ್ಲಿ ರಚಿಸಿದಾಗ, ಬಿಜೆಪಿ ಹಾಗೂ ಎಡಪಕ್ಷಗಳ ಬಾಹ್ಯ ಬೆಂಬಲ ಸರ್ಕಾರಕ್ಕೆ ಇತ್ತು. ನ್ಯಾಷನಲ್ ಫ್ರಂಟ್‌ನಲ್ಲಿ ಜನತಾದಳದ ಪಾಲು ನಾಲ್ಕನೆಯ ಒಂದಕ್ಕಿಂತ ತುಸು ಹೆಚ್ಚಿತ್ತು. 1996ರಲ್ಲಿ ಹದಿಮೂರು ಪಕ್ಷಗಳ ಯುನೈಟೆಡ್‌ ಫ್ರಂಟ್‌ ಒಕ್ಕೂಟವು ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ಹಿಡಿದಾಗ, ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಜನತಾದಳ ಪಕ್ಷವು ಮೈತ್ರಿಕೂಟದ ಒಟ್ಟು ಸಂಖ್ಯಾಬಲದ ನಾಲ್ಕನೆಯ ಒಂದು ಭಾಗಕ್ಕಿಂತ ಕಡಿಮೆ ಬಲ ಹೊಂದಿತ್ತು. 2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಅಧಿಕಾರದಲ್ಲಿತ್ತು.

2004ರಲ್ಲಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ಸಿನ ಪಾಲುಶೇ 60ರಷ್ಟು, 2009ರಲ್ಲಿ ಅದರ ಪಾಲು ಶೇ 80 ರಷ್ಟಾಗಿತ್ತು. ಯುಪಿಎ ಅವಧಿಯಲ್ಲಿ ಸಂಪುಟ ದರ್ಜೆಯ ನಾಲ್ಕನೆಯ ಒಂದರಷ್ಟು ಸಚಿವರು ಕಾಂಗ್ರೆಸ್ಸೇತರ ಪಕ್ಷಗಳಿಗೆ ಸೇರಿದವರಾಗಿದ್ದರು. ಅವರು ಕೃಷಿ, ರೈಲ್ವೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣದಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದರು.

ಈ ಮೇಲಿನ ಅಂಶಗಳು ಮೂರು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಮೊದಲನೆಯದು, ನರೇಂದ್ರ ಮೋದಿ ನೇತೃತ್ವದ ಪ್ರಜಾಸತ್ತಾತ್ಮಕ ಮೈತ್ರಿಕೂಟವು ಯುನೈಟೆಡ್ ಫ್ರಂಟ್, ನ್ಯಾಷನಲ್‌ ಫ್ರಂಟ್ ಹಾಗೂವಾಜಪೇಯಿ ನೇತೃತ್ವದ ಎನ್‌ಡಿಎ‌ಗಿಂತ ಭಿನ್ನ. ಈ ಮೂರು ಮೈತ್ರಿಕೂಟಗಳಲ್ಲಿ ಪ್ರಮುಖ ಪಕ್ಷದ ಪಾಲು ಸೀಮಿತವಾಗಿತ್ತು. ನರೇಂದ್ರ ಮೋದಿ ನೇತೃತ್ವದ ಮೈತ್ರಿಕೂಟದಲ್ಲಿ ಲೋಕಸಭೆಯ ಸಂಖ್ಯಾಬಲದಲ್ಲಿ ಬಿಜೆಪಿ ಪಾಲು ಶೇ 90ರಷ್ಟು.

ಎರಡನೆಯದು, ಮೈತ್ರಿಕೂಟ ಸರ್ಕಾರದ ಮಂತ್ರಿಮಂಡಲದ ಸಂರಚನೆಯಲ್ಲಿ ಕೂಡ ದೊಡ್ಡ ಬದಲಾವಣೆಗಳು ಇವೆ. ಯುನೈಟೆಡ್ ಫ್ರಂಟ್, ನ್ಯಾಷನಲ್ ಫ್ರಂಟ್, ಎನ್‌ಡಿಎ (ವಾಜಪೇಯಿ ನೇತೃತ್ವದಲ್ಲಿ) ಮತ್ತು ಯುಪಿಎ ಮೈತ್ರಿಕೂಟಗಳ ಅವಧಿಯಲ್ಲಿ ಮಿತ್ರಪಕ್ಷ
ಗಳು ಸಂಪುಟದಲ್ಲಿ ತಮ್ಮನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ತೀರ್ಮಾನಿಸುವುದಷ್ಟೇ ಅಲ್ಲದೆ, ತಮಗೆ ಸಿಗಬೇಕಿರುವ ಸಂಖ್ಯೆ ಎಷ್ಟು, ಯಾವ ಖಾತೆಯನ್ನು ತಾವು ಹೊಂದಿರಬೇಕು ಎಂಬುದನ್ನೂ ಗಟ್ಟಿಯಾಗಿ ಕೇಳಿಪಡೆಯುತ್ತಿದ್ದವು ಎಂಬ ಮಾತುಗಳು ಇವೆ. ಮೈತ್ರಿಕೂಟದ ಒತ್ತಡಗಳಿಗೆ ಪ್ರಧಾನಿ ಮಣಿಯಬೇಕಿತ್ತು. 2014ರ ನಂತರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ.

ಮೈತ್ರಿಕೂಟದ ಇತರ ಪಕ್ಷಗಳಿಗೆ ಎಷ್ಟು ಕ್ಯಾಬಿನೆಟ್ ಸ್ಥಾನಗಳು ಸಿಗುತ್ತವೆ, ಅವರಿಗೆ ಕೊಡುವ ಖಾತೆಗಳು ಯಾವುವು ಎಂಬ ವಿಚಾರದಲ್ಲಿ ಬಿಜೆಪಿ ಬಹಳ ಸ್ಪಷ್ಟ ನಿಲುವು ತಾಳಿದೆ. ಶಿವಸೇನೆಯು ಎನ್‌ಡಿಎ ಭಾಗವಾಗಿದ್ದಾಗ ಈ ವಿಚಾರವಾಗಿ ಅದಕ್ಕೆ ಅಸಮಾಧಾನ ಇತ್ತು. 2019ರಲ್ಲಿ ತನಗೆ ಸಂಪುಟದಲ್ಲಿ ದೊರೆತ ಸ್ಥಾನಗಳು ತೃಪ್ತಿಕರವಾಗಿಲ್ಲ ಎಂದು ಜೆಡಿಯು ಸಂಪುಟ ಸೇರಲು ನಿರಾಕರಿಸಿತು.

ಮೂರನೆಯದು, 2019ರಲ್ಲಿ ಅಧಿಕಾರಕ್ಕೆ ಮರಳಿದಾಗಿನಿಂದ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿ ಕೊಂಡಿದೆ. ಈಗ ಇರುವುದು ವಾಸ್ತವದಲ್ಲಿ ಬಿಜೆಪಿ ಸರ್ಕಾರ. 2014ರಲ್ಲಿ ತನಗೆ ಬಹುಮತ ಸಿಕ್ಕಿದ್ದರೂ ಮೈತ್ರಿಕೂಟವನ್ನು ಮುಂದುವರಿಸಿಕೊಂಡು ಹೋಗುವ ತೀರ್ಮಾನವನ್ನು ಬಿಜೆಪಿ ಕೈಗೊಂಡಿತು. ಇದು ಬಿಜೆಪಿಗೆ ತನ್ನ ಮಿತ್ರಪಕ್ಷಗಳ ಜೊತೆ ವ್ಯವಹರಿಸುವಾಗ ಕೆಲವು
ಅನುಕೂಲಗಳನ್ನು ಕಲ್ಪಿಸಿತು. ಎರಡನೆಯ ಅವಧಿಯ ಇಪ್ಪತ್ತು ತಿಂಗಳುಗಳ ಅವಧಿಯಲ್ಲಿ, ಬಿಜೆಪಿ ತನ್ನ ಅಜೆಂಡಾಕ್ಕೆ ಆದ್ಯತೆ ನೀಡಿರುವುದು ಕಾಣುತ್ತಿದೆ.

ಎನ್‌ಡಿಎದಿಂದ ಐದು ಮಿತ್ರಪಕ್ಷಗಳು ಹೊರನಡೆದಿವೆ (ಶಿವಸೇನೆ ಮತ್ತು ಅಕಾಲಿದಳ ಇವುಗಳಲ್ಲಿ ಪ್ರಮುಖವಾದವು. ಈ ಪಕ್ಷಗಳು ಸಂಪುಟದಲ್ಲಿಯೂ ಸ್ಥಾನ ಹೊಂದಿದ್ದವು). ಈ ಮೂಲಕ ಮೈತ್ರಿಕೂಟದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಬಿಜೆಪಿಯು ಪ್ರಜಾಸತ್ತಾತ್ಮಕ ಮೈತ್ರಿಕೂಟದ ಹೊರೆಯನ್ನು ಇಳಿಸಿಕೊಳ್ಳುವ ಕಾಲವೂ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT