ಬೆಳ್ಳಿ ತೆರೆಗೆ ‘ಕಡಕೋಳ ಮಡಿವಾಳೇಶ್ವರ’

7

ಬೆಳ್ಳಿ ತೆರೆಗೆ ‘ಕಡಕೋಳ ಮಡಿವಾಳೇಶ್ವರ’

Published:
Updated:
Deccan Herald

ವಿಜಯಪುರ: ಹದಿನೇಳನೇ ಶತಮಾನದ ದಾರ್ಶನಿಕ, ಸಾಮಾಜಿಕ ಕ್ರಾಂತಿಕಾರಿ ಕಡಕೋಳ ಮಡಿವಾಳೇಶ್ವರರ ಜೀವನ ಚರಿತ್ರೆ ಕುರಿತ, ಸಾಮಾಜಿಕ–ಪೌರಾಣಿಕ ಚಲನಚಿತ್ರ ಬೆಳ್ಳಿ ತೆರೆಗೆ ಬರಲು ಸಜ್ಜಾಗುತ್ತಿದೆ.

ಮುಂಬಯಿ ಕರ್ನಾಟಕ, ಹೈದರಾಬಾದ್‌ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಡಕೋಳ ಮಡಿವಾಳೇಶ್ವರರು ಪೂಜಿಸಲ್ಪಡುತ್ತಿದ್ದು, ಅಸಂಖ್ಯಾತರ ಗುರುವಾಗಿದ್ದಾರೆ. ಇವರು ಕೈಗೊಂಡಿದ್ದ ಸಾಮಾಜಿಕ ಸುಧಾರಣೆಗಳು, ವೈಚಾರಿಕ ನಿಲುವು, ತತ್ವ–ಸಿದ್ಧಾಂತ ಆಧಾರಿತ ಚಲನಚಿತ್ರ ನಿರ್ಮಾಣ ಹಂತದಲ್ಲಿದೆ.

ಕಡಕೋಳ ಮಡಿವಾಳೇಶ್ವರರ ಜೀವನ ಚರಿತ್ರೆ ಬಿಂಬಿಸುವ ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಿವಕುಮಾರ ತೇಲಿ ತಮ್ಮ ಚಿತ್ರದ ಕುರಿತಂತೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

* ಚಿತ್ರರಂಗದತ್ತ ಆಸಕ್ತಿ ಮೂಡಿದ್ದೇಕೆ ?

ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಮೊದಲಿನಿಂದಲೂ ಧಾರ್ಮಿಕತೆ, ಮಾನವೀಯತೆಯ ತುಡಿತವಿತ್ತು. ನಮ್ಮ ಜಿಲ್ಲೆಯ ನಾಗಠಾಣದವರಾದ ಕಡಕೋಳ ಮಡಿವಾಳೇಶ್ವರರ ಜೀವನ ಚಿತ್ರಣವನ್ನು ಬಿಂಬಿಸಬೇಕು ಎಂಬ ಉದ್ದೇಶದಿಂದ ಚಿತ್ರರಂಗದತ್ತ ಹೊರಳಿದೆ. ಇದು ನನ್ನ ಚೊಚ್ಚಲ ಚಿತ್ರ. ಶ್ರೀ ವರಮಹಾಲಕ್ಷ್ಮೀ ಸಿನಿ ಪ್ರೊಡಕ್ಷನ್‌ ಬ್ಯಾನರ್‌ನಡಿ ಸಿದ್ಧಗೊಳ್ಳುತ್ತಿದೆ. ನಾನೇ ಈ ಚಲನಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ.

* ಚಿತ್ರದ ಕುರಿತಂತೆ ?

₹ 40 ಲಕ್ಷ ಮೊತ್ತದ ಬಜೆಟ್‌ನ ಚಿತ್ರವಿದು. 2017ರ ಡಿ.10ರಂದು ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಈಗಾಗಲೇ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮೂವರು ನಾಯಕಿಯರು. ಇದರಲ್ಲಿ ಒಬ್ಬರು ವಿಜಯಪುರದವರು. ನೀತಾ ಎಂದು. ನೆರೆಯ ಕಲಬುರ್ಗಿಯ ಗುರುಶಾಸ್ತ್ರಿ ನಾಯಕ. ಒಟ್ಟು 70 ಪಾತ್ರಧಾರಿಗಳು ಈ ಚಿತ್ರದಲ್ಲಿ ನಟಿಸಿದ್ದಾರೆ.

* ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ ?

ವಿಜಯಪುರ, ಕಲಬುರ್ಗಿ ಜಿಲ್ಲೆಯ ಕೆಲವೆಡೆ ಚಿತ್ರೀಕರಣ ನಡೆದಿದೆ. ಮಡಿವಾಳೇಶ್ವರರು ನೆಲೆಸಿದ್ದ ಕಡಕೋಳ, ಸುತ್ತಾಟ ನಡೆಸಿದ್ದ ಯಡ್ರಾಮಿ, ಕಾಚಾಪುರ ಗ್ರಾಮಗಳಲ್ಲಿ ಚಿತ್ರೀಕರಣ ಈಗಾಗಲೇ ಮುಗಿದಿದೆ. ಆಲಮಟ್ಟಿಯ ಅರಣ್ಯ ಪ್ರದೇಶದಲ್ಲಿ ಕೆಲ ಸನ್ನಿವೇಶ ಚಿತ್ರೀಕರಿಸಿದ್ದೇನೆ. ಸಿಂದಗಿ ಪಟ್ಟಣದಲ್ಲೂ ನಡೆಸಿದ್ದು, ನದಿ ತೀರವೊಂದರಲ್ಲಿ ಚಿತ್ರೀಕರಣ ನಡೆಸಬೇಕಿದೆ. ಇದಕ್ಕಾಗಿ ಭೀಮಾ ನದಿ ತೀರ ಆಯ್ದುಕೊಂಡಿರುವೆ. ಇನ್ನೊಂದು ವಾರ ನಡೆದರೆ, ಚಿತ್ರೀಕರಣ ಪೂರ್ಣಗೊಂಡಂತೆ.

* ಬಿಡುಗಡೆ ಯಾವಾಗ ?

ಡಿಸೆಂಬರ್ 15ರೊಳಗೆ ಚಿತ್ರ ಬಿಡುಗಡೆ ಮಾಡುವ ಚಿಂತನೆಯಿದೆ. ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ, ಶರಣರ ನಾಡಿನಲ್ಲಿ ಬಿಡುಗಡೆ ಮಾಡಲು ಮಾತುಕತೆ ನಡೆಸಿರುವೆ. 100 ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಗಾಗಿ ಹಂಚಿಕೆದಾರರ ಜತೆ ಚರ್ಚೆಯಾಗಿದೆ. ಕೊನೆ ಹಂತದ ಚಿತ್ರೀಕರಣ ಪೂರ್ಣಗೊಳ್ಳುತ್ತಿದ್ದಂತೆ, ಎಡಿಟಿಂಗ್, ಡಬ್ಬಿಂಗ್‌ ನಡೆಯಬೇಕು. 15 ದಿನದೊಳಗೆ ಈ ಕೆಲಸ ಪೂರ್ಣಗೊಳಿಸುವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !