ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಅನುಭವಗಳಲ್ಲಿ ತತ್ತ್ವ

Last Updated 13 ನವೆಂಬರ್ 2018, 5:15 IST
ಅಕ್ಷರ ಗಾತ್ರ

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |
ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ||
ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |
ತಿಳಿಮನದಿ ನೋಳ್ಪರ್ಗೆ – ಮಂಕುತಿಮ್ಮ || 54 ||

ಪದ-ಅರ್ಥ: ಕಾರ್ಯಕಾರಣವಾದದಿಂ=ಪ್ರತಿಯೊಂದು ಕಾರ್ಯಕ್ಕೂ ಕಾರಣವೆಂಬುದಿರಬೇಕು ಎಂಬ ವಾದ, ತರ್ಕಕರ್ಕಶಾಂಕುಶಕೆ=ತರ್ಕ+

ಕರ್ಕಶ+ಅಂಕುಶಕ್ಕೆ (ತರ್ಕವೆಂಬ ಕರ್ಕಶವಾದ ಅಂಕುಶಕ್ಕೆ), ಸುಳಿವುದಾಗೀಗಳದು+ಸುಳಿವುದು+ಆಗೀಗಲು+ಇದು, ಸೂಕ್ಷ್ಮಾನುಭವಗಳಲಿ=ಸೂಕ್ಷ್ಮ+ಅನುಭವಗಳಲಿ, ನೋಳ್ಪರ್ಗೆ=ನೋಡುವವರಿಗೆ.

ವಾಚ್ಯಾರ್ಥ: ತತ್ತ್ವ ನಮ್ಮ ತರ್ಕವೆಂಬ ಕರ್ಕಶವಾದ ಅಂಕುಶಕ್ಕೆ ಸಿಲುಕಲಾರದು. ಅಲ್ಲಿ ಕಾರ್ಯಕಾರಣ ವಾದದಿಂದ ಫಲವಿಲ್ಲ. ಅದು ತಿಳಿಯಾದ ಮನಸ್ಸಿನಿಂದ ನೋಡುವವರಿಗೆ ಸೂಕ್ಷ್ಮವಾದ ಜೀವನದ ಅನುಭವಗಳಲ್ಲಿ ಆಗೀಗ ಸುಳಿಯುತ್ತದೆ.

ವಿವರಣೆ: ಪರತತ್ತ್ವದರ್ಶನ ಸುಲಭವಲ್ಲ. ಅದು ಕಾರ್ಯಕಾರಣವಾದದಿಂದ ದೊರೆಯುವುದಲ್ಲ. ಈ ವಾದದ ಪ್ರಕಾರ ಪ್ರತಿಯೊಂದು ಕಾರ್ಯಕ್ಕೆ ಒಂದು ಕಾರಣವಿರಲೇಬೇಕು. ಹೊಗೆ ಇದ್ದರೆ ಬೆಂಕಿ ಇರಲೇಬೇಕು, ನನಗೆ ಸಂತೋಷವಾಗಿದ್ದರೆ ಸಂತೋಷಕರವಾದ ಘಟನೆ ನಡೆದೇ ಇರಬೇಕು, ಹೀಗೆ ವಾದದ ಸರಣಿ. ಇದು ಲೌಕಿಕ ಜೀವನಕ್ಕೆ ಸರಿ. ಆದರೆ ಅಧ್ಯಾತ್ಮ ಕ್ಷೇತ್ರದಲ್ಲಿ ಪ್ರವೇಶಮಾಡುವಾಗ ದೇಹದ ಭಾವ, ಮನಸ್ಸಿನ ಭಾವಗಳು, ಬುದ್ಧಿಯ ಚಮತ್ಕಾರಗಳನ್ನು ಮೀರದ ಹೊರತು ಗತಿಯಿಲ್ಲ. ಪುಸ್ತಕದ ಜ್ಞಾನವನ್ನು ಹಿಡಿದುಕೊಂಡು ಆತ್ಮದ ಅನಂತತೆಯನ್ನು ತಿಳಿಯುವುದು ಸಾಧ್ಯವಿಲ್ಲ. ಅಂದರೆ ಪುಸ್ತಕಗಳು ನಿಷ್ಪ್ರಯೋಜಕವೆಂದಲ್ಲ, ಅವು ಪ್ರವಾಸಿಗರ ಕೈಪಿಡಿಗಳು. ಕೈಪಿಡಿ ನೋಡಬಹುದಾದ ಸ್ಥಳಗಳನ್ನು, ಅವುಗಳ ವಿವರಗಳನ್ನು ನೀಡಬಹುದು. ಆದರೆ ಕೈಪಿಡಿಯೇ ನಿಮ್ಮನ್ನು ಪ್ರವಾಸಕ್ಕೆ ಕರೆದೊಯ್ಯಲಾರದು. ನೀವೇ ಸ್ವತ: ಹೋಗಿ ಅನುಭವಿಸಬೇಕು.

ಬೇಡ ಕಾಡಿನಲ್ಲಿ ಕುದುರೆಯನ್ನೇರಿ ಜಿಂಕೆಗಳ ಗುಂಪೊಂದನ್ನು ಬೆನ್ನಟ್ಟಿದ. ಜಿಂಕೆಗಳು ಓಡಿದವು. ಒಂದು ಪುಟ್ಟ ಮರಿ ವೇಗವಾಗಿ ಓಡಲಾರದೆ ಹಿಂದುಳಿಯಿತು. ಬೇಡ ಅದನ್ನು ಕುದುರೆಯ ಮೇಲೆ ಹಾಕಿಕೊಂಡು ಹೊರಟ. ಅವನ ಹಿಂದೆಯೇ ಬೆನ್ನಟ್ಟಿತು ಅದರ ತಾಯಿ. ಅದರ ಕಣ್ಣಲ್ಲಿ ನೀರಿನ ಒರತೆ, ಮುಖದಲ್ಲಿ ದೈನ್ಯತೆ. ಒಂದು ಕ್ಷಣ ಬೇಡ ನಿಂತ. ತಾಯಿ-ಮಗುವಿನ ನಡುವಿನ ಕಣ್ಣ ಭಾಷೆಯನ್ನು ಗಮನಿಸಿದ. ತಾಯಿಯ ಮೂಕಮಾತು ಕೇಳಿಸಿತು, ‘ಅಯ್ಯಾ ನನ್ನ ಪುಟ್ಟ ಮಗುವನ್ನು ಬಿಟ್ಟಿರಲಾರೆ. ದಯವಿಟ್ಟು ಅದನ್ನು ನನಗಾಗಿ ಬಿಡಲಾರೆಯಾ?’, ಮರಿಯನ್ನು ಕೆಳಗಿಳಿಸಿ ಬಿಟ್ಟ. ಅದು ಓಡಿ ಹೋಗಿ ಅಮ್ಮನ ಬಳಿ ನಿಂತಿತು. ಈಗ ಅಮ್ಮನ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು!

ಈ ಭಾಷೆಯಿಲ್ಲದ ಭಾಷೆ ಬೇಡನ ಮನ ಕಲಕಿತ್ತು, ಕಣ್ಣಲ್ಲಿ ನೀರು ಉಕ್ಕಿತ್ತು. ಅಂದಿನಿಂದ ಬೇಟೆಯಾಡುವುದನ್ನು ಬಿಟ್ಟ್ಟ. ಅವನು ಕಟುಕನ ಹಾಗೆ ಚಿಂತಿಸಿದ್ದರೆ ಈ ಹೃದಯದ ಭಾಷೆ ತಟ್ಟುತ್ತಿರಲಿಲ್ಲ. ಅವನು ತಿಳಿಮನದಿಂದ ನೋಡಿದಾಗ ಅನುಭವವಾದದ್ದು ಎಲ್ಲ ಭಾವಗಳನ್ನು ಮೀರಿದ ಆತ್ಮದ ಭಾಷೆ. ಅದಕ್ಕೇ ಡಿ.ವಿ.ಜಿ ಹೇಳುತ್ತಾರೆ, ತರ್ಕದಿಂದ ಕಾಣದ ತತ್ತ್ವ, ನಾವು ತಿಳಿಮನದಿಂದ ಕಂಡಾಗ ಸೂಕ್ಷ್ಮವಾದ ಅನುಭವಗಳಲ್ಲಿ, ನಮ್ಮ ಮನದಲ್ಲಿ ಸುಳಿದಾಡುತ್ತದೆ. ಅವೇ ಧನ್ಯತೆಯ ಕ್ಷಣಗಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT