ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನ ಜ್ಞಾನ ವಿಸ್ತಾರ

Last Updated 5 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಒಬ್ಬ ಮಂತ್ರವಾದಿಯ ಮನೆಯಲ್ಲಿ ಹುಟ್ಟಿದ್ದ. ಅವನು ತಕ್ಷಶಿಲೆಗೆ ಹೋಗಿ ಸಕಲ ವಿದ್ಯೆಗಳನ್ನು ಕಲಿತು ಮರಳಿ ಬಂದ. ವ್ಯವಹಾರದಲ್ಲಿ ಸೇರಿಕೊಂಡು ಅತ್ಯಂತ ವ್ಯವಹಾರಕುಶಲನಾದ, ಬುದ್ಧಿವಂತನೆಂದು ಹೆಸರು ಪಡೆದ. ನಡುವೆ ಅವನಿಗೊಂದು ವಿಶೇಷ ಆಸಕ್ತಿ ಹುಟ್ಟಿಕೊಂಡಿತು. ಒಂದು ದಿನ ಅದೇ ಊರಿನ ಒಬ್ಬ ದೊಂಬರವನು ಮಾಡುತ್ತಿದ್ದ ಭಲ್ಲೆ ನೃತ್ಯ ಅವನ ಮನಸೆಳೆಯಿತು. ಅವನ ಹಿಂದೆಯೇ ಓಡಾಡಿದ. ಅವನು ಭಲ್ಲೆಗಳನ್ನು ನೆಲದಲ್ಲಿ ಸಿಕ್ಕಿಸಿ ಅವುಗಳ ಮೇಲೆ ಹಾರಾಡುತ್ತಿದ್ದ ರೀತಿ ಅವನಲ್ಲಿ ಬೆರಗು ಹುಟ್ಟಿಸಿತು. ಬೋಧಿಸತ್ವನೂ ಅವನ ಶಿಷ್ಯನಾಗಿ ಅವನೊಂದಿಗೆ ಓಡಾಡತೊಡಗಿದ.

ಕೆಲತಿಂಗಳು ತಿರುಗಾಡಿದ ಮೇಲೆ ಬೋಧಿಸತ್ವನಿಗೆ ತಿಳಿಯಿತು, ಈ ದೊಂಬನಿಗೆ ಕೇವಲ ನಾಲ್ಕು ಭಲ್ಲೆಗಳ ನೃತ್ಯ ಮಾತ್ರ ಗೊತ್ತು. ಅದಕ್ಕಿಂತ ಮುಂದಿನ ಕಲೆಗಳು ತಿಳಿದಿಲ್ಲ. ಆತ ತನ್ನ ಗುರುವಿಗೆ ಹೇಳಿ ನೋಡಿದ, ‘ನಾವು ನಾಲ್ಕೇ ಭಲ್ಲೆಗಳ ನೃತ್ಯ ಮಾಡುತ್ತಿದ್ದರೆ ಬಹುಬೇಗನೇ ಜನರಿಗೆ ಬೇಜಾರಾಗಿ ಬಿಡುತ್ತದೆ. ಆಟದ ಆಕರ್ಷಣೆ ಕಳೆದುಹೋಗುತ್ತದೆ. ಆದ್ದರಿಂದ ಹೆಚ್ಚು ತಿಳಿದವರಿಂದ ಮತ್ತಷ್ಟು ಭಲ್ಲೆ ನೃತ್ಯಗಳನ್ನು ಕಲಿಯೋಣ’. ದೊಂಬಗುರು ಗಹಗಹಿಸಿ ನಕ್ಕು ಬಿಟ್ಟ, ‘ನಾನು ಮಾಡಿದ ನೃತ್ಯವನ್ನು ಜನ ಸಾವಿರ ವರ್ಷ ನೋಡುತ್ತಾರೆ. ನನ್ನಷ್ಟು ಚೆನ್ನಾಗಿ ಮಾಡುವವರು ಮತ್ತಾರಿದ್ದಾರೆ?’.

ದೊಂಬಗುರುವಿಗೆ ಕುಡಿತದ ಚಟ ಅತಿಯಾಗಿತ್ತು, ಸಾಮಾನ್ಯವಾಗಿ ಆತ ಚೆನ್ನಾಗಿ ಕುಡಿದೇ ಪ್ರದರ್ಶನ ನೀಡುತ್ತಿದ್ದ. ಒಂದು ಬಾರಿ ಅವನ ಪ್ರದರ್ಶನಕ್ಕೆ ಭಾರೀ ಜನ ಸೇರಿದ್ದರು. ಜನ ಹೆಚ್ಚಾದಷ್ಟೂ ಪ್ರದರ್ಶನ ಮಾಡುವವನಿಗೆ ಅಮಲು ಹೆಚ್ಚಾಗುತ್ತದೆ. ಅವನಿಗೂ ಹಾಗೆಯೇ ಆಯಿತು. ಜನರ ಮೆಚ್ಚುಗೆಯ ಕೇಕೆ, ಚಪ್ಪಾಳೆ ಹೆಚ್ಚಾದಂತೆ ಅವನ ಉತ್ಸಾಹವೂ ಹೆಚ್ಚಿ ಅಬ್ಬರಿಸಿದ, ‘ಇಂದು ನಾನು ಐದನೆಯ ಭಲ್ಲೆ ನೃತ್ಯ ಮಾಡುತ್ತೇನೆ. ಇದುವರೆಗೂ ನೀವು ಕಂಡರಿಯದ ನೃತ್ಯ ಇದು’. ಬೋಧಿಸತ್ವ ಗಾಬರಿಯಾದ. ದೊಂಬನಿಗೆ ಈ ನೃತ್ಯ ಬರುವುದಿಲ್ಲ. ಅದು ತುಂಬ ಅಪಾಯಕಾರಿಯಾದದ್ದು. ಗುರುವಿಗೆ ಹೇಳಿ ನೋಡಿದ. ಆದರೆ ಗುರು ಕುಡಿತದಲ್ಲಿ ಮೈಮರೆತು ಉನ್ಮತ್ತನಾಗಿದ್ದಾನೆ. ಅವನು ಐದು ಭಲ್ಲೆಗಳನ್ನು ನೆಲದಲ್ಲಿ ಗಟ್ಟಿಯಾಗಿ ನೆಟ್ಟು ಮೇಲೆ ಹಾರಿದ. ಅವನ ಶಕ್ತಿ ಹಾಗೂ ಜ್ಞಾನ ಇರುವುದು ನಾಲ್ಕು ಭಲ್ಲೆನೃತ್ಯದಲ್ಲಿ ಮಾತ್ರವಾದ್ದರಿಂದ ಐದನೆಯ ಭಲ್ಲೆಯ ಮೇಲೆಯೇ ಬಿದ್ದು ಸತ್ತು ಹೋದ. ಬೋಧಿಸತ್ವ ಅವನನ್ನು ಉಳಿಸಲು ಯಾವ ಉಪಾಯ ಮಾಡಿದರೂ ಫಲಿಸದೇ ಹೋಯಿತು. ಅಂದಿನಿಂದ ಆತ ಈ ಹವ್ಯಾಸವನ್ನು ಬಿಟ್ಟು ತನ್ನ ಮೂಲ ವ್ಯವಹಾರಕ್ಕೆ ಮರಳಿದ.

ಬುದ್ಧ ಹೇಳಿದ, ‘ಗುರುಗಳಾದವರು ಸದಾಕಾಲ ತಮ್ಮ ಜ್ಞಾನದ ಪರಿಧಿಯನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ತಾನು ಕಲಿತದ್ದು ಸಾಕು ಅಥವಾ ಅದೇ ದೊಡ್ಡದು ಎಂದು ಭಾವಿಸಿದ ದಿನವೇ ಶಿಕ್ಷಕತ್ವದ ಸಾವು ಬಂದಂತೆ. ತಾನು ಕಲಿತ ವಿದ್ಯೆ ಎಂದಿಗೂ ನಿಂತ ನೀರಾಗದೇ ಚಲನಶೀಲವಾಗಿ ಪ್ರತಿಕ್ಷಣ ವಿಸ್ತರಿಸುತ್ತ ಹೋದಾಗಲೇ ಶಿಕ್ಷಕ ಸರ್ವಕಾಲಕ್ಕೂ ಪ್ರಸ್ತುತನಾಗುತ್ತಾನೆ’.

ಇದು ಇಂದಿಗೂ ಶಿಕ್ಷಕರು ಅತ್ಯಂತ ಶೃದ್ಧೆಯಿಂದ ಅರಿಯಬೇಕಾದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT