ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ವಿದ್ಯುದೀಕರಣ: 2022ರ ಗಡುವು

ನಾಲ್ಕು ವರ್ಷಗಳಲ್ಲಿ ಡೀಸೆಲ್‌ ಎಂಜಿನ್‌ಗಳಿಗೆ ವಿದಾಯ
Last Updated 4 ಫೆಬ್ರುವರಿ 2018, 19:35 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣಕ್ಕೆ ಮತ್ತು ಡೀಸೆಲ್‌ ಎಂಜಿನ್‌ಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸುವುದಕ್ಕೆ ರೈಲ್ವೆ ಸಚಿವಾಲಯ 2022ರ ಗಡುವು ನಿಗದಿ ಪಡಿಸಿದೆ.

ದೆಹಲಿಯಲ್ಲಿ ಭಾನುವಾರ ಸಮ್ಮೇಳನವೊಂದರಲ್ಲಿ ಭಾಗವಹಿಸಿದ್ದ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌,  ರೈಲ್ವೆಗಳ ವಿದ್ಯುದೀಕರಣ ಕಾರ್ಯವನ್ನು ತೀವ್ರಗೊಳಿಸುವಂತೆ ಮತ್ತು 2022ರ ಹೊತ್ತಿಗೆ ಪೂರ್ಣವಾಗಿ ವಿದ್ಯುತ್‌ ಚಾಲಿತ ಎಂಜಿನ್‌ಗಳನ್ನೇ ಬಳಸುವಂತೆ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಜೊತೆಗೆ ರೈಲುಗಳ ವೇಗವನ್ನು ಹೆಚ್ಚಿಸುವುದಕ್ಕೂ ಗಮನ ನೀಡುವಂತೆ ಸಲಹೆ ನೀಡಿದ್ದಾರೆ.

ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದೀಕರಣಗೊಳಿಸುವುದರಿಂದ ರೈಲ್ವೆಗೆ ಭಾರಿ ಪ್ರಮಾಣದ ಉಳಿತಾಯವಾಗಲಿದೆ. ಇದರಿಂದಾಗಿ ವಿದೇಶದಿಂದ ಡೀಸೆಲ್‌ ಆಮದು ವೆಚ್ಚ ತಡೆಯಬಹುದಾಗಿದೆ.

2017–18ರಲ್ಲಿ ದೇಶದ 4,000 ಕಿ.ಮೀ ಉದ್ದದ ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸಲಾಗುತ್ತಿದ್ದು, 2018–19ರಲ್ಲಿ ಇದನ್ನು 5,000 ಕಿ.ಮೀಗೆ ಹೆಚ್ಚಿಸುವಂತೆ ಗೋಯಲ್‌ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ನೇರ ಖರೀದಿಗೆ ಒಲವು: ಮುಕ್ತ ಖರೀದಿ ವ್ಯವಸ್ಥೆ ಅಡಿಯಲ್ಲಿ ಉತ್ಪಾದಕರಿಂದ ವಿದ್ಯುತ್ತನ್ನು ನೇರವಾಗಿ ಖರೀದಿಸಲು ರೈಲ್ವೆ ಹೆಚ್ಚು ಆಸಕ್ತಿ ತೋರಿಸುತ್ತಿದೆ.

ಇದರಿಂದಾಗಿ ಮುಂದಿನ ಹತ್ತು ವರ್ಷಗಳಲ್ಲಿ ವಿದ್ಯುತ್‌ ಖರೀದಿಗೆ ಮಾಡುತ್ತಿರುವ ವೆಚ್ಚದಲ್ಲಿ ₹41 ಸಾವಿರ ಕೋಟಿ ಉಳಿಸುವ ಗುರಿಯನ್ನು ಅದು ಹಾಕಿಕೊಂಡಿದೆ.

ಉತ್ಪಾದಕರಿಂದ ನೇರವಾಗಿ ವಿದ್ಯುತ್‌ ಖರೀದಿಸಿದ್ದರಿಂದ 2015ರ ಏಪ್ರಿಲ್‌ನಿಂದ 2018ರ ಅಕ್ಟೋಬರ್‌ವರೆಗೆ ರೈಲ್ವೆ ₹5,636 ಕೋಟಿ ಉಳಿಸಿದೆ.

ಅದುವರೆಗೂ ರೈಲ್ವೆಯು ಸಹಜ ವಹಿವಾಟು ವಿಧಾನದ ಮೂಲಕ ಮಾತ್ರ ವಿದ್ಯುತ್‌ ಖರೀದಿಸುತ್ತಿತ್ತು.

ಈ ವ್ಯವಸ್ಥೆಯಲ್ಲಿ ವಿದ್ಯುತ್‌ ವಿತರಣಾ ಕಂಪೆನಿಗಳಿಂದ ವಿದ್ಯುತ್‌ ಖರೀದಿಸಲಾಗುತ್ತದೆ. ಮುಕ್ತ ಖರೀದಿ ವ್ಯವಸ್ಥೆಗೆ ಹೋಲಿಸಿದರೆ ಇದರಲ್ಲಿ ವಿದ್ಯುತ್‌ ಖರೀದಿ ವೆಚ್ಚ ಹೆಚ್ಚಾಗಿರುತ್ತದೆ.‌

2003ರ ವಿದ್ಯುತ್‌ ಕಾಯ್ದೆಯ ಅಡಿಯಲ್ಲಿ ಮುಕ್ತ ಖರೀದಿ ನೀತಿಯನ್ನು ಜಾರಿಗೆ ತರಲಾಗಿದೆ. ಒಂದು ಮೆಗಾವಾಟ್‌ಗಿಂತ ಹೆಚ್ಚಿನ ವಿದ್ಯುತ್‌ ಅನ್ನು ಉತ್ಪಾದಕರು, ವಿದ್ಯುತ್‌ ವಿನಿಮಯ ಕೇಂದ್ರಗಳು ಅಥವಾ ದ್ವಿಪಕ್ಷೀಯ ಒಪ್ಪಂದದ ಮೂಲಕ ನೇರವಾಗಿ ಖರೀದಿಸಲು ಇದು ಅವಕಾಶ ನೀಡುತ್ತದೆ.

**

ಎಂಟು ತಿಂಗಳಲ್ಲಿ ಎಲ್‌ಇಡಿ ಬೆಳಕು

ನಿಲ್ದಾಣಗಳು, ಯಾರ್ಡ್‌ಗಳು, ವಸತಿ ಕಾಲೊನಿ ಸೇರಿದಂತೆ ರೈಲ್ವೆಗೆ ಸೇರಿದ ಎಲ್ಲ ಆಸ್ತಿಗಳಲ್ಲಿ ಎಲ್‌ಇಡಿ ದೀಪ ಅಳವಡಿಸಲು ಅಧಿಕಾರಿಗಳಿಗೆ ಎಂಟು ತಿಂಗಳ ಗಡುವನ್ನೂ ಗೋಯಲ್‌ ನೀಡಿದ್ದಾರೆ.

ಈ ನಿರ್ಧಾರದಿಂದ ರೈಲ್ವೆಗೆ ವಾರ್ಷಿಕವಾಗಿ ₹11,500 ಕೋಟಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT