ಗುರುವಾರ , ಸೆಪ್ಟೆಂಬರ್ 24, 2020
21 °C

ಕೆಪಿಸಿಸಿಗೆ ಬೇಕು ಸಾಮಾಜಿಕ ಸಂಯೋಜನೆಯ ನಾಯಕತ್ವ

ಟಿ.ಕೆ.ತ್ಯಾಗರಾಜ್ Updated:

ಅಕ್ಷರ ಗಾತ್ರ : | |

ರಾಜ್ಯ ಕಾಂಗ್ರೆಸ್ ಘಟಕಕ್ಕೆ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಕನಿಷ್ಠ ಅರ್ಧ ಡಜನ್ ನಾಯಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಬಹುಶಃ ಕಳೆದ ನಾಲ್ಕು ದಶಕಗಳಲ್ಲಿ ದೀರ್ಘಾವಧಿಯ ಅಧ್ಯಕ್ಷರಾಗಿ ಹಾಗೂ ಹೀಗೂ ಹೇಗೋ ಮುಂದುವರಿದಿರುವ ಡಾ.ಜಿ. ಪರಮೇಶ್ವರ ಅವರ ಬದಲಿಗೆ ಇನ್ನೊಬ್ಬರನ್ನು ಆಯ್ಕೆ ಮಾಡಲು ವರಿಷ್ಠರಿಗೆ ಸಾಧ್ಯವಾಗಿಲ್ಲ. ಕಳೆದ ಲೋಕಸಭಾ ಚುನಾವಣೆ ಮತ್ತು ಇತ್ತೀಚೆಗಷ್ಟೇ ಮುಗಿದ ವಿಧಾನಸಭಾ ಚುನಾವಣೆಗೆ ಮುನ್ನ ಇನ್ನೊಬ್ಬರನ್ನು ಆಯ್ಕೆ ಮಾಡಿ ಯಾವುದೇ ಅಪಾಯಕ್ಕೆ ತಲೆಕೊಡುವ ಧೈರ್ಯ ವರಿಷ್ಠರಿಗೆ ಇರಲಿಲ್ಲ. ಸುಮಾರು ಎಂಟು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ ಅವರ ದಾಖಲೆಯನ್ನು ಹಿಂದೊಮ್ಮೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಮಾಡಿದ್ದರು.

ತಾತ್ವಿಕ ನೆಲೆಗಟ್ಟು ಮತ್ತು ದೂರದೃಷ್ಟಿ ಇರಿಸಿಕೊಂಡು ಪಕ್ಷ ಕಟ್ಟುವಲ್ಲಿ ನೆರವಾದ ಹಿಂದುಳಿದ ವರ್ಗಗಳ ಅಭಿವೃದ್ಧಿಯ ನಿಜ ಅರ್ಥದ ಹರಿಕಾರ ದೇವರಾಜ ಅರಸು, ದಿಟ್ಟತನದಿಂದ ಸಂಘಟಿಸಿದ ಎಸ್.ಬಂಗಾರಪ್ಪ, ನೇರ ಮಾತು, ನಂಬಿರುವ ಮೌಲ್ಯಗಳೊಂದಿಗೆ ಅಧಿಕಾರಕ್ಕಾಗಿ ರಾಜಿ ಮಾಡಿಕೊಳ್ಳದ ಹೋರಾಟಗಾರ ಕೆ.ಎಚ್. ಪಾಟೀಲ, ದಕ್ಷತೆ ಮತ್ತು ಸಜ್ಜನಿಕೆಗೆ ಹೆಸರಾದ ಕೆ.ಎಚ್. ರಂಗನಾಥ್ ಅವರಂಥ ನಾಯಕರು ಕೆಪಿಸಿಸಿ ಅಧ್ಯಕ್ಷರಾಗಿ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಹಾಗೇ ಪಕ್ಷದ ಬೆಳವಣಿಗೆಗೆ ಚಿಕ್ಕಾಸಿನ ಕೊಡುಗೆಯೂ ನೀಡದೆ ಕೇವಲ ವರಿಷ್ಠರ ‘ಒಲವು’ ಗಳಿಸುವಲ್ಲಿ ಯಶಸ್ವಿಯಾದ ಆಸ್ಕರ್ ಫರ್ನಾಂಡಿಸ್, ವಿ.ಕೃಷ್ಣರಾವ್, ಅಲ್ಲಂ ವೀರಭದ್ರಪ್ಪ, ಆರ್.ವಿ. ದೇಶಪಾಂಡೆ ಅವರಂಥವರೂ ವಿವಿಧ ಸಂದರ್ಭಗಳಲ್ಲಿ ಅಧ್ಯಕ್ಷರಾಗಿದ್ದುದೂ ಕನ್ನಡಿಗರಿಗೆ ಮರೆತೇಹೋಗಿದೆ.

ಸದ್ಯದ ರಾಜಕೀಯ ಪರಿಸ್ಥಿತಿಯನ್ನೇ ನೋಡುವುದಾದರೆ ರಾಜ್ಯದ ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗ ಸಮುದಾಯದ ಬಹುತೇಕರು ಜೆಡಿಎಸ್ ಮತ್ತು ಇನ್ನೊಂದು ಪ್ರಬಲ ಜಾತಿಯಾಗಿರುವ ಲಿಂಗಾಯತರಲ್ಲಿ ಬಹುಪಾಲು ಮಂದಿ ಯಡಿಯೂರಪ್ಪ ಕಾರಣಕ್ಕಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ಇಡೀ ದೇಶವನ್ನು ಬ್ರಾಹ್ಮಣ್ಯವೇ ನಿಯಂತ್ರಿಸುತ್ತಿದ್ದರೂ ಕಾಂಗ್ರೆಸ್ ಪಕ್ಷ ಹಿಂದುಳಿದವರು, ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರ ದನಿಯೆಂಬ ಪಾರಂಪರಿಕ ನಂಬಿಕೆಯೂ ಇದೆ. ಅಹಿಂದ ಬಲವನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷ ಈ ಸಮುದಾಯದಿಂದಲೇ ನಾಯಕರನ್ನು ಗುರುತಿಸಿ ಅಂಥವರ ಮೂಲಕ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಮುನ್ನಡೆಸುವ ಕೆಲಸ ಮಾಡಬೇಕೇ ಹೊರತು ಈಗಾಗಲೇ ಎರಡು ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಂಡಿರುವ ಎರಡು ಪ್ರಬಲ ಜಾತಿಗಳಿಂದಲೇ ಆಯ್ಕೆ ಮಾಡಬೇಕೆಂಬ ಮನಃಸ್ಥಿತಿಯಿಂದ ಹೊರಬರಬೇಕಿದೆ. 2013ರ ವಿಧಾನಸಭಾ ಚುನಾವಣೆ ಹೊತ್ತಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನೊಳಗೊಂಡ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗದ ನಾಯಕತ್ವ ಸಂಯೋಜನೆಯು ಕಾಂಗ್ರೆಸ್ ಗೆಲುವಿಗೆ ಕಾರಣವಾದದ್ದು ಇತ್ತೀಚಿನ ವರ್ಷಗಳ ಅತ್ಯುತ್ತಮ ಉದಾಹರಣೆಯಾಗಿದೆ. ಒಂದು ಪ್ರಬಲ ಜಾತಿಯೇ ಚುನಾವಣಾ ಫಲಿತಾಂಶವನ್ನು ಎಲ್ಲ ಕಾಲದಲ್ಲೂ ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಪಕ್ಷದ ಕಾರ್ಯಕ್ರಮ, ನಾಯಕತ್ವ ಸಂಯೋಜನೆ, ಸಂಘಟನಾ ಚಾತುರ್ಯವೂ ಅಷ್ಟೇ ಮುಖ್ಯವಾಗುತ್ತದೆ ಎನ್ನುವುದನ್ನು ಆ ಚುನಾವಣೆ ತೋರಿಸಿಕೊಟ್ಟಿದೆ.

1989ರಲ್ಲಿ ಲಿಂಗಾಯತರಾದ ವೀರೇಂದ್ರ ಪಾಟೀಲ್ ಮತ್ತು 1999ರಲ್ಲಿ ಒಕ್ಕಲಿಗರಾದ ಎಸ್.ಎಂ.ಕೃಷ್ಣ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಕಾಕತಾಳೀಯವಾಗಿತ್ತೇ ಹೊರತು ಪ್ರಬಲ ಜಾತಿಗಳನ್ನು ಸೆಳೆಯುವಂಥವರು ನಾಯಕರಾಗಿದ್ದುದೇ ಕಾರಣ ಎಂಬುದು ಸಂಪೂರ್ಣ ಸರಿಯಲ್ಲ. 1980ರಿಂದ 83ರವರೆಗೆ ಆರ್.ಗುಂಡೂರಾವ್ ನೇತೃತ್ವದ ಸರ್ಕಾರದ ವಿರುದ್ಧ ಬಂಡೆದ್ದು ಅಪಾರ ಜನಪ್ರೀತಿ ಗಳಿಸಿದ್ದ ಹಿಂದುಳಿದ ವರ್ಗಗಳ ನಾಯಕ ಬಂಗಾರಪ್ಪ ಕಾಂಗ್ರೆಸ್ ಪಕ್ಷ ತ್ಯಜಿಸಿ ದೇವರಾಜ ಅರಸು ಸ್ಥಾಪಿಸಿದ್ದ ಕರ್ನಾಟಕ ಕ್ರಾಂತಿರಂಗದಲ್ಲಿ ಗುರುತಿಸಿಕೊಂಡಿದ್ದರು. ರಾಜ್ಯದಾದ್ಯಂತ ಬಿರುಸಿನ ಪ್ರವಾಸ ಮಾಡಿ ಗುಂಡೂರಾವ್ ನೇತೃತ್ವದ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಿ 1983 ರಲ್ಲಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಪ್ರಮುಖ ಕಾರಣರಾಗಿದ್ದರು. ಬೆಂಗಳೂರಿನ ಗಾಜಿನ ಮನೆಯಲ್ಲಿ ನಡೆದ ಬಂಗಾರಪ್ಪ ಅಭಿಮಾನಿಗಳ ಸಮಾವೇಶದಲ್ಲಿ ಎಸ್.ನಿಜಲಿಂಗಪ್ಪ ಅವರು ತಮ್ಮ ಭಾಷಣವನ್ನು ‘ಭಾವೀ ಮುಖ್ಯಮಂತ್ರಿಗಳಾದ ಬಂಗಾರಪ್ಪನವರೇ...’ಎಂದು ಆರಂಭಿಸಿದಾಗ ಅಲ್ಲಿ ನೆರೆದಿದ್ದವರ ಚಪ್ಪಾಳೆ ಮತ್ತು ಘೋಷಣೆಗಳ ಸದ್ದಿಗೆ ಗಾಜಿನ ಮನೆಯೇ ಬಿದ್ದು ಹೋಗುತ್ತದೇನೋ ಎಂಬಂಥ ಜನಸಾಗರ ಇತ್ತು. ಬಂಗಾರಪ್ಪನವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಬಂಗಾರಪ್ಪ ಅವರನ್ನು ವಂಚಿಸಿ ಆ ದಿನಗಳಲ್ಲಿ ಮರೆತೇಹೋದಂತಿದ್ದ ರಾಮಕೃಷ್ಣ ಹೆಗಡೆ ಎಂಬ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನು ಮುಖ್ಯಮಂತ್ರಿಯಾಗಿಸಿದ್ದು, ಇದರಿಂದಾಗಿ ಬೇಸರಗೊಂಡ ಬಂಗಾರಪ್ಪ ಕೆಲವೇ ತಿಂಗಳಲ್ಲಿ ಕಾಂಗ್ರೆಸ್‍ಗೆ ವಾಪಸಾಗಿದ್ದು, ದೂರವಾಣಿ ಕದ್ದಾಲಿಕೆ ಸೇರಿದಂತೆ ಹೆಗಡೆ ಆಡಳಿತಾವಧಿಯ ಹಗರಣಗಳು, ಆನಂತರ ಮುಖ್ಯಮಂತ್ರಿಯಾದ ಎಸ್.ಆರ್.ಬೊಮ್ಮಾಯಿ ನೇತೃತ್ವದ ಸರ್ಕಾರದ ಪತನ ಇವೇ ಮೊದಲಾದ ಕಾರಣಗಳಿಂದ ಬೇಸತ್ತ ಕನ್ನಡನಾಡಿನ ಜನರು ಮತ್ತೆ ಕಾಂಗ್ರೆಸ್ ಪಕ್ಷದತ್ತ ವಾಲಿದ್ದರು.

ದಶಕದ ನಂತರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು 1994ರಿಂದ 1999 ರವರೆಗೆ ಇದ್ದ ಕಾಂಗ್ರೆಸ್ಸೇತರ ಸರ್ಕಾರದ ಕತೆ ಇದಕ್ಕಿಂತ ಭಿನ್ನವಾಗಿರಲಿಲ್ಲ. 1994 ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆ ನಡುವಿನ ಜಗಳ, 1996ರಲ್ಲಿ ಪ್ರಧಾನಿಯಾದ ದೇವೇಗೌಡರು ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಹೊರ ಹಾಕಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ವಿರುದ್ಧ ಸಿದ್ದರಾಮಯ್ಯ ಅವರನ್ನು ಎತ್ತಿಕಟ್ಟಿದ್ದು, ಅಲ್ಲಿಯವರೆಗೆ ಒಂದು ರಾಜಕೀಯ ಪಕ್ಷದಂತಿದ್ದ ಜನತಾ ದಳವನ್ನು ಒಡೆದು ಜೆಡಿಎಸ್ ಹೆಸರಿನಲ್ಲಿ ಸ್ವಂತ ಆಸ್ತಿಯಾಗಿ ಮಾಡಿಕೊಂಡಿದ್ದು ಇವೇ ಮೊದಲಾದ ಕಾರಣಗಳಿಂದ ಜನತಾ ಎನ್ನುವುದು ಜನತೆಗೇ ವಾಕರಿಕೆ ತರುವಂತೆ ಮಾಡಿತ್ತು.

2004ರಿಂದ 2008ರವರೆಗಿದ್ದ ಕಾಂಗ್ರೆಸ್-ಜೆಡಿಎಸ್, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ವೈಫಲ್ಯಗಳು ಒಂದು ಹಂತದಲ್ಲಿ ಈ ಸರ್ಕಾರಗಳ ಭಾಗವಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ 2008ರ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲಿಲ್ಲ. ಅದರ ಬದಲು ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ ಮಾಡಿದ ವಂಚನೆಯೇ ಮುಖ್ಯ ಅಸ್ತ್ರವಾಗಿ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿತ್ತು. ಬಿಜೆಪಿ ಆಡಳಿತಾವಧಿಯಲ್ಲಿನ ಹಗರಣಗಳು, ವಿವಿಧ ಕಾರಣಗಳಿಂದ ಒಂದೇ ಪಕ್ಷದ ಮೂವರು ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದಿದ್ದು ಇವೇ ಮೊದಲಾದ ಕಾರಣಗಳೂ ಸೇರಿದಂತೆ ತಮ್ಮವನೊಬ್ಬ ಮುಖ್ಯಮಂತ್ರಿಯಾಗಬಹುದೆಂಬ ಆಸೆ ಇರಿಸಿಕೊಂಡಿದ್ದ ಮೂರನೇ ಪ್ರಬಲ ಜಾತಿಯಾಗಿರುವ ಕುರುಬ ಸಮುದಾಯ 2013 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಬೆಂಬಲಿಸಿದ್ದು, ಅಲ್ಲಿಯವರೆಗೆ ಯಾವುದೇ ಕಳಂಕ ಮೆತ್ತಿಕೊಳ್ಳದೇ ಇದ್ದ ಸಿದ್ದರಾಮಯ್ಯ ಅವರಿಗಿದ್ದ ವರ್ಚಸ್ಸು ಕಾಂಗ್ರೆಸ್ ಗೆಲುವಿನಲ್ಲಿ ಪೂರಕ ಪಾತ್ರ ವಹಿಸಿತ್ತು. ಎಸ್.ಎಂ.ಕೃಷ್ಣ, ವೀರೇಂದ್ರ ಪಾಟೀಲ್ ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವಲ್ಲಿ ಆಗಿನ ಸಂದರ್ಭಗಳು ಪ್ರಮುಖ ಪಾತ್ರವನ್ನೂ ಅವರ ಜಾತಿಗಳು ಪೂರಕ ಪಾತ್ರವನ್ನೂ ವಹಿಸಿದ್ದವು ಎನ್ನುವುದು ಸ್ಪಷ್ಟ.

ಬಿಜೆಪಿಯನ್ನು ತಡೆಯುವ ಸಲುವಾಗಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರವನ್ನೇನೋ ರಚಿಸಿದೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಕೈಕೊಟ್ಟ ಕುಮಾರಸ್ವಾಮಿ ಅವರ ‘ಐತಿಹಾಸಿಕ’ ನಡವಳಿಕೆ, ಸಮಾನಾಂತರ ಅಧಿಕಾರದಂತೆ ಸಿದ್ದರಾಮಯ್ಯ ತೆರೆಮರೆಯಲ್ಲಿ ನಡೆಸುತ್ತಿರುವ ಚಟುವಟಿಕೆ, ಎರಡೂ ಪಕ್ಷಗಳ ಶಾಸಕರ ಅಧಿಕಾರ ಹಪಾಹಪಿ ಈ ಸರ್ಕಾರವನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಈಗಾಗಲೇ ವೃದ್ಧರಾಗಿರುವ ದೇವೇಗೌಡರು ಮತ್ತು ಯಡಿಯೂರಪ್ಪ ಅವರ ಪ್ರಭಾವ ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಆಯಾ ಜಾತಿಗಳಲ್ಲಿ ಈಗಿನಂತೆಯೇ ಇರುತ್ತದೆ ಎಂದೂ ಹೇಳಲಾಗದು.  ಮುಂದಿನ ಲೋಕಸಭಾ ಚುನಾವಣೆಗಷ್ಟೇ ಅಲ್ಲದೇ 2023 ಕ್ಕೆ ಅಥವಾ ಅದಕ್ಕೂ ಮುನ್ನ ಯಾವಾಗ ಬೇಕಾದರೂ ಎದುರಾಗಬಹುದಾದ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಎಲ್ಲ ಹಳಸಲು ಲೆಕ್ಕಾಚಾರವನ್ನೂ ಮೀರಿ ವಿವಿಧ ಸಮುದಾಯಗಳನ್ನೂ ಒಗ್ಗೂಡಿಸಿ ಮುನ್ನಡೆಸುವ ಸಮರ್ಥ ನಾಯಕನ ಅಗತ್ಯ ಕೆಪಿಸಿಸಿಗೆ ಇದೆ.

ಕೆಪಿಸಿಸಿ ಗಾದಿಗೆ ಪ್ರಯತ್ನಿಸಿರುವವರಲ್ಲಿ ದಿನೇಶ್ ಗುಂಡೂರಾವ್, ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಎಚ್.ಕೆ.ಪಾಟೀಲ, ಬಿ.ಕೆ. ಹರಿಪ್ರಸಾದ್ (ಎಂ.ಬಿ.ಪಾಟೀಲ ಸೇರಿದಂತೆ ಇಲ್ಲಿ ಹೆಸರಿಸದ ಇತರರೂ ಇರಬಹುದು) ಸೇರಿದ್ದಾರೆ. ಕಾಂಗ್ರೆಸ್‍ನಿಂದ ಶಾಸಕರಾಗಿ ಆಯ್ಕೆಯಾಗಿರುವ ನಾಲ್ವರು ಬ್ರಾಹ್ಮಣರಲ್ಲಿ ಇಬ್ಬರು (ರಮೇಶ್ ಕುಮಾರ್ ಸ್ಪೀಕರ್, ಆರ್.ವಿ. ದೇಶಪಾಂಡೆ ಸಚಿವ) ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಉಳಿದ ಇನ್ನಿಬ್ಬರಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿಸಿ ಶಿವರಾಮ ಹೆಬ್ಬಾರ್ ಅವರನ್ನು ಯಾವುದಾದರೂ ನಿಗಮ ಅಥವಾ ಮಂಡಳಿಗೆ ಅಧ್ಯಕ್ಷರಾಗಿಸಿಬಿಟ್ಟರೆ ಜನಸಂಖ್ಯೆಯಲ್ಲಿ ಶೇಕಡ ಎರಡೂವರೆಯಿಂದ ಮೂರರಷ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಶೇಕಡ ನೂರರಷ್ಟು ಪ್ರಾತಿನಿಧ್ಯ ಕೊಟ್ಟಂತಾಗಿಬಿಡುತ್ತದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದು ಸಮರ್ಥನೀಯವಾಗದು.

ಕೆಪಿಸಿಸಿಗೆ ಈವರೆಗೆ ಪರಿಶಿಷ್ಟರಲ್ಲಿ ಬಲಗೈ ಪಂಗಡದ ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಅಧ್ಯಕ್ಷರಾಗಿದ್ದಾರೆಯೇ ಹೊರತು ಅವರಿಗಿಂತ ಸಂಖ್ಯಾಬಲದಲ್ಲಿ ಹೆಚ್ಚಿರುವ ಎಡಗೈ ಪಂಗಡದವರು ಅಧ್ಯಕ್ಷರಾಗಿಲ್ಲ. ಲೋಕಸಭೆಗೆ ಏಳು ಬಾರಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ ಈ ಕಾರಣದಿಂದಲೇ ತಮ್ಮನ್ನು ಅಧ್ಯಕ್ಷರಾಗಿ ನೇಮಕ ಮಾಡುವಂತೆ ಪ್ರಯತ್ನ ನಡೆಸಿದ್ದಾರೆ. ಸದಾ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುವ ಮುನಿಯಪ್ಪ ಪೂಜೆ, ಪುನಸ್ಕಾರಗಳಲ್ಲಿ ಬ್ರಾಹ್ಮಣರಿಗಿಂತ ಒಂದು ಕೈ ಮೇಲೇ ಇದ್ದರೂ ಅವರು ಅಂಬೇಡ್ಕರ್, ಬುದ್ಧ ಎಂಬ ವೈಚಾರಿಕತೆಯ ಪ್ರದರ್ಶನವನ್ನೆಂದೂ ಮಾಡಿಲ್ಲ. ಪಕ್ಷ ಸಂಘಟನೆಗೆ ಬೇಕಾದ ಹಠೋತ್ಸಾಹವೂ ಅವರಲ್ಲಿಲ್ಲ. ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯದಿಂದ ಬಿಜೆಪಿಯತ್ತ ಸರಿದಿದ್ದ ಎಡಗೈ ಪಂಗಡ ಮುನಿಯಪ್ಪ ನೇಮಕವಾದರೆ ಮತ್ತೆ ಕಾಂಗ್ರೆಸ್‍ಗೆ ವಾಲುವತ್ತ ಸ್ವಲ್ಪ ಮಟ್ಟಿಗೆ ನೆರವಾಗಲೂಬಹುದು.

ಹಾಗೊಂದು ವೇಳೆ ಲಿಂಗಾಯತರನ್ನೇ ಆಯ್ಕೆ ಮಾಡಬೇಕೆಂದರೆ ಈಶ್ವರ ಖಂಡ್ರೆ ಅತ್ಯುತ್ತಮ ಆಯ್ಕೆ ಎಂಬ ವಾದವಿದೆ. ಕಾಂಗ್ರೆಸ್ ಸೇವಾದಳದಲ್ಲಿ ಉಪಾಧ್ಯಕ್ಷರಾಗಿಯೂ ಅವರಿಗೆ ಸಂಘಟನೆಯ ಅನುಭವ ಇದೆ. ಮೊನ್ನಿನ ವಿಧಾನಸಭಾ ಚುನಾವಣೆಯಲ್ಲಿ ಬೀದರ್‌ನ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ನಾಲ್ಕರಲ್ಲಿ ಗೆದ್ದಿರುವುದಕ್ಕೆ ಅವರ ಶ್ರಮವೇ ಕಾರಣ ಎನ್ನುವ ಮಾತಿದೆ. ಈಗ ಕಾಂಗ್ರೆಸ್‍ನಿಂದ ಆಯ್ಕೆಯಾಗಿರುವ ಶಾಸಕರಲ್ಲಿ ಉತ್ತರ ಕರ್ನಾಟಕದವರು ಶೇ 50 ರಷ್ಟಿದ್ದು ಖಂಡ್ರೆ ನೇಮಕದ ಮೂಲಕ ಪ್ರಾದೇಶಿಕ ಅಸಮತೋಲನವನ್ನೂ ಪಕ್ಷದಲ್ಲಿ ನಿವಾರಿಸಬಹುದಾಗಿದೆ. ಸಚಿವರಾಗಿ ಹೆಸರು ಮಾಡಿರುವ ಎಚ್.ಕೆ.ಪಾಟೀಲ ನಾಮಧಾರಿ ರೆಡ್ಡಿ ಸಮುದಾಯಕ್ಕೆ ಸೇರಿರುವುದರಿಂದ ಅವರನ್ನು ಲಿಂಗಾಯತರು ಎಂದು ಪರಿಗಣಿಸಿ ನೇಮಕ ಮಾಡುವುದಕ್ಕೆ ತಮ್ಮ ವಿರೋಧ ಇದೆ ಎಂದು ಈ ಹಿಂದೆಯೂ ವೀರಶೈವ ಲಿಂಗಾಯತರು ದನಿ ಎತ್ತಿದ್ದರು. ಯಾವುದೇ ಜಾತಿ ನೆಲೆಗಟ್ಟಿನಲ್ಲಿ ನೋಡದೇ ಎಚ್.ಕೆ.ಪಾಟೀಲರ ಹೆಸರನ್ನು ಪರಿಗಣಿಸಿದರೂ ಅವರಿಗೆ ತಮ್ಮ ತಂದೆಯಂತೆ ಪಕ್ಷ ಸಂಘಟನೆಗೆ ಬೇಕಾದ ಹೋರಾಟದ ಕೆಚ್ಚಿಲ್ಲ.

ಹಿಂದುಳಿದ ಈಡಿಗ (ಬಿಲ್ಲವ) ಜಾತಿಗೆ ಸೇರಿದ ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಇದೆ. ಗುಜರಾತ್, ಪಂಜಾಬ್, ಮಧ್ಯಪ್ರದೇಶ, ಛತ್ತೀಸಗಡ, ಹರಿಯಾಣ, ರಾಜಸ್ಥಾನ, ಗೋವಾ, ಪುದುಚೇರಿ, ತ್ರಿಪುರ ಸೇರಿದಂತೆ 17 ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುವುದರಿಂದ ಕಾರ್ಯತಂತ್ರ, ಯಶಸ್ಸಿಗೆ ಬೇಕಾಗುವ ಅಸ್ತ್ರ ಇವೇ ಮೊದಲಾದ ಸಂಗತಿಗಳ ಸ್ಪಷ್ಟ ಅರಿವಿದೆ. ಸಂಘ ಪರಿವಾರವನ್ನು ಅರ್ಥಾತ್ ಅದರ ರಾಜಕೀಯ ಮುಖವಾದ ಬಿಜೆಪಿಯನ್ನು ಎದುರಿಸುವ ಪ್ರಖರ ಚಿಂತನೆಗಳ ದಿಟ್ಟತನ ಮತ್ತು ಪಕ್ಷವನ್ನು ತತ್ವಬದ್ಧವಾಗಿ ಕಟ್ಟಬಲ್ಲ ಸಾಮರ್ಥ್ಯವೂ ಇದೆ. ಜಾತಿ ಬಲ, ಧನಬಲ ಬದಿಗಿಟ್ಟು ನೋಡಿದರೆ ಉತ್ತಮ ಆಯ್ಕೆಯಾಗಬಲ್ಲರು.

ನಾಯಕನೆಂದರೆ ಮಳೆ ತರದ ಗೊಡ್ಡು ಗುಡುಗಿನಂತಿರಬಾರದು, ಕೊರಡೂ ಕೊನರುವಂತೆ ಮಾಡುವ ಚಿಕಿತ್ಸಕ ಗುಣ ಇರಬೇಕು. ಜನರನ್ನು ಗುರಿ ತಪ್ಪದಂತೆ ತಲುಪುವ ಸಾಮಾಜಿಕ ಸಂಯೋಜನೆಯ ನಾಯಕತ್ವ ರೂಪಿಸುವ ಬುದ್ಧಿವಂತಿಕೆ ಪಕ್ಷದ ವರಿಷ್ಠರಿಗೆ ಇರಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು