ಜೀವ ಈಶ್ವರ ಸಂಬಂಧ

ಶನಿವಾರ, ಮಾರ್ಚ್ 23, 2019
31 °C

ಜೀವ ಈಶ್ವರ ಸಂಬಂಧ

ಗುರುರಾಜ ಕರಜಗಿ
Published:
Updated:

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು? |
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು ? ||
ನಿತ್ಯಸತ್ತ್ವವೆ ಭಿತ್ತಿ, ಜೀವಿತಕ್ಷಣಚಿತ್ರ |
ತತ್ತ್ವವೀ ಸಂಬಂಧ – ಮಂಕುತಿಮ್ಮ || 105 ||

ಪದ=ಅರ್ಥ: ಭಿತ್ತಿಯೊಂದಿಲ್ಲದಿರೆ=ಭಿತ್ತಿ(ಗೋಡೆ,ಹಲಗೆ)+ಒಂದಿಲ್ಲದಿರೆ, ಸೊಗಸಹುದದೆಂತು=ಸೊಗಸು+ಅಹುದು_ಅದೆಂತು,

ವಾಚ್ಯಾರ್ಥ: ಗೋಡೆ ಅಥವಾ ಹಲಗೆ ಇಲ್ಲದಿದ್ದರೆ ಚಿತ್ರವನ್ನು ಬಿಡಿಸುವುದೆಂತು? ಚಿತ್ರವೇ ಇಲ್ಲದ ಭಿತ್ತಿ ಅದೆಂತು ಸೊಗಸಾಗಿ ಕಂಡೀತು? ಅನಾದಿಯಾದ ಪರಸತ್ವವೇ ಭಿತ್ತಿ, ಕಣ್ಣಿಗೆ ಕಾಣುವ ಜಗತ್ತಿನ ಜೀವಿತ ಒಂದು ಕ್ಷಣದ ಚಿತ್ರ. ಇದೇ ಜೀವ ಮತ್ತು ಪರಮಾತ್ಮದ ನಡುವಿನ ಸಂಬಂಧ.

ವಿವರಣೆ: ಇದೊಂದು ಬಹಳ ಸುಂದರವಾದ ಸತ್ಯವನ್ನು ಅತ್ಯಂತ ಸುಲಭವಾಗಿ ಹೇಳುವ ಪರಿ.

ಇಡೀ ಕಗ್ಗದಲ್ಲಿ ಎರಡು ವಸ್ತುಗಳ ಚಿಂತನೆ ಇದೆ. ಒಂದು ಭಿತ್ತಿ ಮತ್ತೊಂದು ಚಿತ್ರ. ಭಿತ್ತಿಯೆಂದರೆ ಅದೊಂದು ಗೋಡೆಯಾಗಬಹುದು, ಹಲಗೆಯಾಗಬಹುದು. ಟೆಲಿವಿಷನ್ನಿನ ಪರದೆ ಅಥವಾ ಕಂಪ್ಯೂಟರ್ ಪರದೆಯಾಗಬಹುದು. ಮೊದಲು ಒಂದು ಭಿತ್ತಿ ಇದ್ದರೆ ಮಾತ್ರ ಅದರ ಮೇಲೆ ಯಾವ ಚಿತ್ರವನ್ನಾದರೂ ಬಿಡಿಸಬಹುದು. ಚಿತ್ರವೇ ಇಲ್ಲದಿದ್ದರೆ ಭಿತ್ತಿಗೇನು ಅರ್ಥ? ಹಾಗಾದರೆ ಎರಡೂ ಇರಬೇಕು.

ಈ ಇರುವಿಕೆಯೇ, ಅಸ್ತಿತ್ವವೇ ಆಧ್ಯಾತ್ಮದ ಮುಖ್ಯ ಭಾಗ. ಅದನ್ನು ontology ಎಂದು ಕರೆಯುತ್ತಾರೆ. ಇದು ಸಂಸ್ಕೃತದಲ್ಲಿ ಅಸ್ತಿತ್ವ. ಅದೇ ‘ಸತ್ತಾ’ ಅಥವಾ ಸತ್ವ. ಹಾಗಾದರೆ ಭಿತ್ತಿ ಮತ್ತು ಚಿತ್ರಗಳಲ್ಲಿ ಯಾವುದು ನಿಜವಾದದ್ದು, ಯಾವುದು ತೋರಿಕೆಯದು? ಯಾವ ವಸ್ತು ಬೇರೆ ಯಾವುದರ ಆಧಾರವನ್ನು, ಸಹಾಯವನ್ನು ಅಪೇಕ್ಷಿಸದೆ ಇರುತ್ತದೋ ಅದರ ಅಸ್ತಿತ್ವ, ಸ್ವತಂತ್ರ ಸತ್ವ. ಅದು ಯಾವಾಗಲೂ ಇರುವಂಥದ್ದು. ಇದು ಬ್ರಹ್ಮಸತ್ವ್ವ ಅಥವಾ ನಿತ್ಯ ಸತ್ವ.

ಯಾವ ವಸ್ತು ತನ್ನ ಇರುವಿಕೆಗೆ ಮತ್ತೊಂದನ್ನು ಅಲವಂಬಿಸಬೇಕಾಗುತ್ತದೆಯೋ ಅದು ಅಧೀನಸತ್ವ. ಅದು ನೆರಳು ಇದ್ದ ಹಾಗೆ, ಕನ್ನಡಿಯಲ್ಲಿಯ ಪ್ರತಿಬಿಂಬ ಇದ್ದ ಹಾಗೆ. ಈ ಹಿನ್ನೆಲೆಯಲ್ಲಿ ಕಗ್ಗವನ್ನು ನೋಡಬೇಕು. ಭಿತ್ತಿಯೇ ಇಲ್ಲದಿದ್ದರೆ ಚಿತ್ರವನ್ನು ಬರೆಯುವುದು ಹೇಗೆ? ಚಿತ್ರವೇ ಇಲ್ಲದಿದ್ದರೆ ಭಿತ್ತಿಯ ಅವಶ್ಯಕತೆ ಏನು? ಬ್ರಹ್ಮಸತ್ಯವೇ ಭಿತ್ತಿ. ಅದು ಸ್ವತಂತ್ರಸತ್ವ. ಅದು ತನ್ನ ಸಂಕಲ್ಪಮಾತ್ರದಿಂದ ಜಗತ್ತನ್ನು, ನಿರ್ಮಿಸುತ್ತದೆ.

ಈ ಕಣ್ಣಿಗೆ ಕಾಣುವ ಜೀವ ಜಗತ್ತು ಒಂದು ಚಿತ್ರ. ಅದು ತನ್ನ ಸೃಷ್ಟಿಗಾಗಿ ಹಾಗೂ ನೆಲೆಗಾಗಿ ಭಿತ್ತಿಯಾದ ಬ್ರಹ್ಮಸತ್ವವನ್ನು ಅವಲಂಬಿಸಲೇಬೇಕು. ಆದ್ದರಿಂದ ಅದು ಅಧೀನಸತ್ವ. ಬ್ರಹ್ಮ್ಮಸತ್ವ ತನ್ನ ಇಚ್ಛೆಗೆ ಅನುಗುಣವಾಗಿ ಚಿತ್ರಗಳನ್ನು ಯಾವಾಗಲಾರದರೂ ಬದಲಾಯಿಸಬಹುದು. ಆದರೆ ಚಿತ್ರ ಭಿತ್ತಿಯನ್ನು ಬದಲಾಯಿಸಲಾರದು.

ಒಂದು ಸುಂದರ ಚಿತ್ರವಾಗಬೇಕಾದರೆ ಎರಡೂ ಅವಶ್ಯವೇ. ಇದೇ ಜೀವಿಗಳ ಮತ್ತು ಬ್ರಹ್ಮಸತ್ವದ ಸಂಬಂಧ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !