ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನನ್ನು ದಹಿಸಿದ ಮಹಾದೇವ

Last Updated 12 ಅಕ್ಟೋಬರ್ 2018, 20:11 IST
ಅಕ್ಷರ ಗಾತ್ರ

ಅಕಾಲದಲ್ಲಿ ಕಾಮ ಮತ್ತು ವಸಂತ – ಇಬ್ಬರೂ ಸ್ಥಾಣುವಿನ ಆಶ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಪಸ್ಸಿನಲ್ಲಿದ್ದ ಮುನಿಗಳು ಕೂಡ ತುಂಬ ಪ್ರಯಾಸದಿಂದ ಚಿತ್ತ ನಿರೋಧವನ್ನು ಮಾಡಬೇಕಾಯಿತು. ಇಡಿಯ ವಾತಾವರಣದಲ್ಲಿ ಶೃಂಗಾರಚೇಷ್ಟೆಗಳು ಕಾಣತೊಡಗಿದವು. ದುಂಬಿಯು ತನ್ನ ಪ್ರಿಯತಮೆಯಾದ ಹೆಣ್ಣುದುಂಬಿಯ ಹಿಂದೆಯೇ ಹಾರಿತು; ಹೆಣ್ಣು–ಗಂಡುದುಂಬಿಗಳೆರಡೂ ಹೂವಿನ ರೂಪದಲ್ಲಿರುವ ಪಾತ್ರೆಯಿಂದ ಮಧುಪಾನವನ್ನು ಮಾಡಿದವು; ಕೃಷ್ಣಸಾರಮೃಗವು ತನ್ನ ಕೊಂಬಿನಿಂದ ತನ್ನ ಪ್ರಿಯೆಯ ಮೈಯನ್ನು ಕೆರೆಯಿತಂತೆ; ಆಗ ಆ ಹೆಣ್ಣುಜಿಂಕೆಯು ತನ್ನ ಪ್ರಿಯನ ಸ್ಪರ್ಶಸುಖವನ್ನು ಅನುಭವಿಸುತ್ತ ಕಣ್ಣುಗಳನ್ನು ಮುಚ್ಚಿ ನಿಂತಿದೆ; ಪ್ರೇಮದಲ್ಲಿ ಮುಳುಗಿರುವ ಹೆಣ್ಣಾನೆಯು ತನ್ನ ಪ್ರಿಯನಾದ ಗಂಡಾನೆಗೆ ಕಮಲರೇಣುಗಳಿಂದ ಪರಿಮಳಭರಿತವಾಗಿರುವ ಗಂಡೂಷಜಲವನ್ನು ಪಾನಮಾಡಿಸುತ್ತ ಆಟವಾಡುತ್ತಿದೆ; ಚಕ್ರವಾಕಪಕ್ಷಿಯು ಕಮಲದ ನಾಳವನ್ನು ಅರ್ಧಭಾಗ ತಿಂದು, ಉಳಿದ ಅರ್ಧಭಾಗವನ್ನು ತನ್ನ ಪ್ರಿಯೆಯಾದ ಚಕ್ರವಾಕಿಗೆ ಪ್ರೀತಿಯಿಂದ ನೀಡಿ ಸನ್ಮಾನಿಸುತ್ತಿದೆ. ಹೀಗೆ ಕಾಳಿದಾಸನು ಅಲ್ಲಿ ನಡೆದ ಪ್ರಣಯದಾಟಗಳ ಸಾಲು ಸಾಲು ಚಿತ್ರಗಳನ್ನೇ ಕಟ್ಟಿಕೊಟ್ಟಿದ್ದಾನೆ.

ಇಷ್ಟೆಲ್ಲ ಪ್ರಣಯವೈಭವದ ನಡುವೆ ಶಿವನು ಧ್ಯಾನಸ್ಥನಾಗಿದ್ದಾನೆ. ಅಕಾಲದ ವಸಂತ–ಕಾಮದ ಜೋಡಿ ಸೃಷ್ಟಿಸಿರುವ ಕಾಮವಿಕಾರಗಳು ಯಾವುವೂ ಅವನ ಬಳಿ ಸುಳಿಯಲಿಲ್ಲ. ಅಷ್ಟೇಕೆ, ಅವನು ತಪಸ್ಸಿನಲ್ಲಿ ಕುಳಿತಿರುವ ಇಡೀ ಪ್ರದೇಶವೇ ಈ ವಿಕಾರಗಳಿಂದ ಮುಕ್ತವಾಗಿದೆ. ಪ್ರಕೃತಿಯ ವಿಹಾರಗಳೂ ವಿಲಾಸಗಳೂ ನಿಂತುಹೋಗಿವೆ. ಮರಗಳು ಕೂಡ ಗಾಳಿಗೆ ಸ್ಪಂದಿಸದೆ ಸ್ಥಿರವಾಗಿವೆ; ದುಂಬಿಗಳು ಝೇಂಕಾರವನ್ನು ನಿಲ್ಲಿಸಿವೆ; ಪಕ್ಷಿಗಳು ಹಾರಾಡುತ್ತಿಲ್ಲ; ಎಲ್ಲ ಪ್ರಾಣಿಗಳೂ ಅವುಗಳ ಓಡಾಟವನ್ನೇ ನಿಲ್ಲಿಸಿವೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಡಿಯ ಆ ಪ್ರದೇಶವೇ ಚಿತ್ರದಲ್ಲಿ ಬರೆದ ದೃಶ್ಯದಂತೆ ಸ್ತಬ್ಧವಾಗಿದೆ. ಅಲ್ಲಿ ಶಿವನು ಹೇಗೆ ತಪಸ್ಸಿನಲ್ಲಿ ಕುಳಿತಿದ್ದಾನೆ ಎನ್ನುವುದನ್ನು ಕಾಳಿದಾಸ ತುಂಬ ಸೊಗಸಾಗಿ ವರ್ಣಿಸಿದ್ದಾನೆ. ಹೀಗೆ ಕಠಿಣವಾದ ತಪಸ್ಸಿನಲ್ಲಿರುವ ಶಿವನನ್ನು ನೋಡಿದವನು ಕಾಮ ಎನ್ನುವುದು ಇಲ್ಲಿರುವ ಮತ್ತೊಂದು ಸ್ವಾರಸ್ಯ. ಶಿವನ ತಪಃಶ್ಚರ್ಯೆಯು ಆರು ಶ್ಲೋಕಗಳಲ್ಲಿ ನಿರೂಪಿತವಾಗಿದೆ. ತನ್ನ ಜಟೆಯನ್ನು ಹಾವಿನಿಂದ ಬಂಧಿಸಿಕೊಂಡಿರುವ ಶಿವನು ಉಸಿರಾಟವನ್ನೂ ನಿಯಂತ್ರಿಸಿದ್ದಾನೆ:

ಅವೃಷ್ಟಿಸಂರಂಭಮಿವಾಂಬುವಾಹಮಪಾಮಿವಾಧಾರಮನುತ್ತರಂಗಮ್‌ |

ಅಂತಶ್ಚರಾಣಾಂ ಮರುತಾಂ ನಿರೋಧಾನ್ನಿವಾತನಿಷ್ಕಂಪಮಿವ ಪ್ರದೀಪಮ್‌ ||

‘ಮಳೆಯನ್ನು ಸುರಿಸಲು ಉದ್ಯುಕ್ತವಲ್ಲದ ಸ್ಥಿತಿಯಲ್ಲಿರುವ ಮೋಡದಂತೆಯೂ, ಅಲೆಗಳಲ್ಲಿದ ಜಲಾಶಯದಂತೆಯೂ, ಗಾಳಿಯಿಲ್ಲದ ಪ್ರದೇಶದಲ್ಲಿ ಅಲುಗಾಟವಿಲ್ಲದೆ ಉರಿಯುತ್ತಿರುವ ದೀಪದಂತೆಯೂ ಶಿವನು ಚಿತ್ತವೃತ್ತಿಗಳನ್ನು ನಿರೋಧಿಸಿ ಸಮಾಧಿ ಸ್ಥನಾಗಿದ್ದ’ ಎನ್ನುವುದು ಈ ಶ್ಲೋಕದ ಭಾವ.

ಒಂದೇ ಉಪಮಾನದಿಂದ ಶಿವನ ನಿಷ್ಕಂಪಸ್ಥಿತಿಯನ್ನು ವರ್ಣಿಸಬಹುದಿತ್ತಲ್ಲವೆ? ಕಾಳಿದಾಸ ಮೂರು ಹೋಲಿಕೆಗಳನ್ನು ನೀಡಿರುವ ಔಚಿತ್ಯವಾದರೂ ಏನು? ಕಾಳಿದಾಸನ ವ್ಯಾಖ್ಯಾನಕಾರನಾದ ಮಲ್ಲಿನಾಥನು ಈ ಶ್ಲೋಕದಲ್ಲಿ, ಸಾಧನೆಯ ಸ್ಥಿತಿಗಳನ್ನು ವಿವರಿಸಿದ್ದಾನೆ. ‘ಮೊದಲನೆಯ ಉಪಮಾನದಿಂದ ಪ್ರಾಣವಾಯು ನಿರೋಧವೂ, ಎರಡನೆಯ ಉಪಮಾನದಿಂದ ಅಪಾನುವಾಯುನಿರೋಧವೂ, ಮೂರನೆಯ ಉಪಮಾನದಿಂದ ಶೇಷವಾಯುನಿರೋಧವೂ ಸೂಚಿತ’ವಾಗಿದೆ ಎನ್ನುವುದು ಅವನ ಅಭಿಪ್ರಾಯ. ಪ್ರಾಣ, ಎಂದರೆ ನಮ್ಮ ಉಸಿರಾಟದ ಕ್ರಮವನ್ನು ಐದು ವಿಧ ಎಂದು ಒಕ್ಕಣಿಸಿದ್ದಾರೆ: ಪ್ರಾಣ, ಅಪಾನ, ಸಮಾನ, ವ್ಯಾನ ಮತ್ತು ಉದಾನ. ನಮ್ಮ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೂ ಈ ಪ್ರಾಣಗಳ ನಿಯಂತ್ರಣಕ್ಕೂ ಸಂಬಂಧವಿದೆ. ಈ ಸಮತೋಲನವನ್ನು ಕಾಪಾಡುವ ಸಾಧನಕ್ರಮವೇ ಪ್ರಾಣಾಯಾಮ. ಇದರ ಬಗ್ಗೆ ವಿವರಗಳನ್ನು ಭಗವದ್ಗೀತೆಯೂ ಸೇರಿದಂತೆ ಹಲವು ಪ್ರಾಚೀನ ಕೃತಿಗಳಲ್ಲಿ ನೋಡಬಹುದು. ಕಾಳಿದಾಸ ಇಲ್ಲಿ ಆ ಸಾಧನೆಯನ್ನು ಕುರಿತು ಹೇಳುತ್ತಿದ್ದಾನೆ. ಇಲ್ಲಿ ಅವನು ಹೇಳಿರುವ ಒಂದೊಂದು ಉಪಮಾನದ ಬಗ್ಗೆಯೂ ವಿಸ್ತಾರವಾಗಿಯೇ ವಿಶ್ಲೇಷಿಸಲಾದೀತು. ಉದಾಹರಣೆಗೆ, ಅಲುಗಾಟವಿಲ್ಲದ ದೀಪವನ್ನು ಬ್ರಹ್ಮದ ಸ್ಥಿತಿಗೆ ರೂಪಕವಾಗಿ ಪರಂಪರೆ ಬಳಿಸಿಕೊಂಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

ಶಿವನ ತಪಸ್ಸನ್ನು ಕಂಡು ಮನ್ಮಥನಿಗೆ ಭಯವಾಗಿದೆ; ಅವನ ಕೈಯಲ್ಲಿದ್ದ ಬಿಲ್ಲು–ಬಾಣಗಳುಅವನಿಗೇ ಗೊತ್ತಾಗದಂತೆ ಜಾರಿ ಬಿದ್ದವು. ಅವನ ಹೂವಿನ ಬಾಣಗಳು ಶಿವನ ಮನಸ್ಸನ್ನು ಏನೂ ಮಾಡಲಾರವು ಎನ್ನುವುದು ಅವನಿಗೆ ಗೊತ್ತಾಗಿದೆ. ಅದೇ ಸಮಯಕ್ಕೆ ಪಾರ್ವತಿಯು ಶಿವನ ಕಡೆಗೆ ಬರುತ್ತಿದ್ದಾಳೆ. ಅವಳ ಸೌಂದರ್ಯವನ್ನು ನೋಡಿ ಮನ್ಮಥನಿಗೆ ಸ್ವಲ್ಪ ಧೈರ್ಯ ಬಂದಿದೆ – ‘ನನ್ನ ಕೆಲಸಕ್ಕೆ ಅವಳಿಂದ ಸಹಕಾರ ಸಿಗಬಹುದು’ ಎಂದು. ಅವಳ ವರ್ಣನೆಯನ್ನು ಕಾಳಿದಾಸ ತುಂಬ ಸುಂದರವಾಗಿ ಮಾಡಿದ್ದಾನೆ. ‘ಸಂಚಾರಿಣೀಲತೆ’, ಎಂದರೆ ನಡೆದಾಡುತ್ತಿರುವ ಬಳ್ಳಿಯಂತೆ ಇದ್ದಳು ಎನ್ನುವುದು ಅವನ ಒಂದು ಮಾತು.

ಶಿವ ಈಗ ತಪಸ್ಸಿನಿಂದ ಹೊರಬಂದು ಬಹಿರ್ಮುಖನಾಗಿದ್ದಾನೆ. ಪಾರ್ವತಿಯೊಡನೆ ಇರುವ ಇಬ್ಬರು ಸಖಿಯರು ಶಿವನಿಗೆ ನಮಸ್ಕರಿಸಿ ಅವರೇ ತಂದಿದ್ದ ಕೃತಕ ಮಧುಮಾಸದ ಹೂವುಗಳನ್ನು ಅರ್ಪಿಸಿದರು. ಪಾರ್ವತಿಯೇ ಅವರಿಗೆ ಮೊದಲು ನಮಸ್ಕರಿಸುವ ಅವಕಾಶವನ್ನು ಕೊಟ್ಟಳಂತೆ. ಈಗ ನಮಸ್ಕರಿಸುವ ಸರದಿ ಪಾರ್ವತಿಯದು. ಅವಳ ಕಪ್ಪುಮುಂಗುರುಗಳ ಮಧ್ಯದಲ್ಲಿದ್ದ ಕರ್ಣಿಕಾರಪುಷ್ಪವೂ, ಕಿವಿಯಲ್ಲಿ ಸಿಕ್ಕಿಸಿಕೊಂಡಿದ್ದ ಚಿಗುರೂ ಅವಳು ನಮಸ್ಕರಿಸುವಾಗ ಕೆಳಗೆ ಬಿದ್ದವು. ಸಣ್ಣ ಸಣ್ಣ ವಿವರಗಳನ್ನೂ ಮಹಾಕವಿ ಎಷ್ಟೊಂದು ತನ್ಮಯತೆಯಿಂದ ವರ್ಣಿಸುತ್ತಿದ್ದಾನೆ! ನಮಸ್ಕರಿಸಿದ ಪಾರ್ವತಿಗೆ ಶಿವನು ಆಶೀರ್ವದಿಸಬೇಕಲ್ಲವೆ? ‘ಮತ್ತಾವಳಲ್ಲೂ ಮೋಹಗೊಳ್ಳದ ಪತಿಯನ್ನು ಪಡೆ’ (ಅನನ್ಯಭಾಜಂ ಪತಿಮಾಪ್ನುಹಿ) ಎಂದು ವರವನ್ನು ಕೊಟ್ಟು ಅವನು ಮತ್ತೆ ಮೌನದಲ್ಲಿ ನೆಲೆಸಿದ.

ಶಿವನಿಗೆ ಕೊಡಲೆಂದು ಪಾರ್ವತಿಯು ಕಾಣಿಕೆಯೊಂದನ್ನು ತಂದಿದ್ದಾಳೆ; ಕಮಲದ ಬೀಜಗಳನ್ನು ಒಣಗಿಸಿ ತಾನೇ ತುಂಬ ಶ್ರದ್ಧೆಯಿಂದ ಮಾಡಿದ ಜಪಮಾಲೆ. ಪರಮೇಶ್ವರ ಅದನ್ನು ಅವಳಿಂದ ಸ್ವೀಕರಿಸುತ್ತಿದ್ದಾನೆ; ಅದೇ ಸಮಯಕ್ಕೆ ಮನ್ಮಥನು ಸಂಮೋಹನಾಸ್ತ್ರವನ್ನು ಧನುಸ್ಸಿಗೆ ಹೂಡಿದ. ಚಂದ್ರೋದಯಕ್ಕೆ ಮುನ್ನ ಸಮುದ್ರವು ಸ್ವಲ್ಪ ಕ್ಷೋಭೆಯನ್ನು ಹೊಂದುವಂತೆ ಶಿವನ ಮನಸ್ಸು ಕೂಡ ಆಗ ಕೊಂಚವೇ ಕೊಂಚ ಉದ್ವೇಗವನ್ನು ಹೊಂದಿತಂತೆ. ಆಗ ಅವನ ದೃಷ್ಟಿ ತೊಂಡೆಯ ಹಣ್ಣಿನಂತೆ ಕೆಂಪಗಿದ್ದ ಪಾರ್ವತಿಯ ತುಟಿಗಳ ಕಡೆಗೆ ಅವನ ದೃಷ್ಟಿ ಹೋಯಿತಂತೆ! ತತ್‌ಕ್ಷಣವೇ ಈ ಚಿತ್ತವಿಕಾರಕ್ಕೆ ಕಾರಣರಾದವರು ಯಾರು ಎಂದು ನೋಡಿದ. ಕೈಯಲ್ಲಿ ಧನುಸ್ಸನ್ನು ಹಿಡಿದು, ಸಂಮೋಹನಾಸ್ತ್ರವನ್ನು ಪ್ರಯೋಗಿಸಲು ಸಿದ್ಧವಾಗಿರುವ ಮನ್ಮಥ ಅವನಿಗೆ ಕಂಡ. ಮಹಾದೇವನಿಗೆ ರೋಷ ಮೂಡಿತು. ದೇವತೆಗಳು ‘ಪ್ರಭೋ! ಕೋಪವನ್ನು ಬಿಡು, ಕೋಪವನ್ನು ಬಿಡು’ ಎಂದು ಕೂಗುವಷ್ಟರಲ್ಲಿ ಭವನ ಹಣೆಯ ಮೇಲಿನ ಕಣ್ಣಿನಿಂದ ಹೊರಟ ಅಗ್ನಿಜ್ವಾಲೆಯು ಮನ್ಮಥನ ದೇಹವನ್ನು ಸುಟ್ಟು ಭಸ್ಮಮಾಡಿತು. ತನ್ನ ಪತಿಯ ದೇಹವು ಸುಟ್ಟುಹೋಯಿತು – ಎಂದು ಗೊತ್ತಾಗುವುದಕ್ಕೆ ಮೊದಲೇ ರತಿಯು ಮೂರ್ಛಿತಳಾದಳು. ತನ್ನ ಪರಿವಾರದೊಡನೆ ಶಿವನು ಅಲ್ಲಿಂದ ಮರೆಯಾದ. ಪಾರ್ವತಿಗೆ ಇಡೀ ಪ್ರಸಂಗದಿಂದ ನಾಚಿಕೆಯೂ ಆಯಿತು; ನಿರಾಶೆಯೂ ಆಯಿತು. ತನ್ನ ಲಾವಣ್ಯಮಯವಾದ ದೇಹ ನಿರರ್ಥಕವಾಯಿತು; ಅದೂ ತನ್ನ ಸಖಿಯರ ಎದುರಿನಲ್ಲಿ. ಹೀಗಾಗಿ ಅವಳಿಗೆ ಏಕಕಾಲದಲ್ಲಿ ನಾಚಿಕೆಯೂ ನಿರಾಶೆಯೂ ಆದವು.

ಕಾಮದಹನದ ಈ ಪ್ರಸಂಗದಲ್ಲಿ ಹಲವು ಧ್ವನಿಪರಂಪರೆಗಳೇ ಅಡಗಿವೆ. ಅವುಗಳಲ್ಲಿ ಒಂದನ್ನು ಇಲ್ಲಿ ನೋಡಬಹುದು: ಮನ್ಮಥನ ದೆಸೆಯಿಂದ ಶಿವನಲ್ಲಿ ಉಂಟಾದ ಬದಲಾವಣೆ. ಈ ಸಂದರ್ಭವನ್ನು ಕೀರ್ತಿನಾಥ ಕುರ್ತಕೋಟಿ ವಿಶಿಷ್ಟ ನೆಲೆಯಲ್ಲಿ ಅರ್ಥೈಸಿದ್ದಾರೆ. ಅಭಿಜಾತಕಾವ್ಯ ಹೇಗೆ ಮೂರ್ತವಾದ ವಿವರಗಳ ಮೂಲಕವೇ ಅಮೂರ್ತ
ವಾದುದನ್ನು ನಿರೂಪಿಸುತ್ತದೆ – ಎನ್ನುವುದನ್ನು ವಿವರಿಸಲು ಅವರು ಈ ಸಂದರ್ಭದ ಶ್ಲೋಕವನ್ನು ಆರಿಸಿಕೊಂಡಿದ್ದಾರೆ:

‘ಅಭಿಜಾತಕಾವ್ಯದ ಅನುಭವಸಾಮಗ್ರಿ ಮತ್ತು ತಂತ್ರ – ಇವು ಎಷ್ಟೇ ಮೂರ್ತವಾಗಿದ್ದರೂ ಅವುಗಳ ಲಕ್ಷ್ಯ ಅಮೂರ್ತವಾದ ತಾತ್ವಿಕತೆಯ ಕಡೆಗೆ ಇರುತ್ತದೆ. ಅಮೂರ್ತವಾಗಿರುವುದು ವ್ಯಕ್ತಿನಿರಪೇಕ್ಷವಾಗಿರುವುದೇ ಇದಕ್ಕೆ ಕಾರಣವಾಗಿದೆ. ಅಮೂರ್ತವನ್ನು ಗ್ರಹಿಸಲು ಮತ್ತು ಅದಕ್ಕೆ ಅಭಿವ್ಯಕ್ತಿಯನ್ನು ನೀಡಲು ಹೆಚ್ಚಿನ ಶಕ್ತಿ–ಸಾಮರ್ಥ್ಯಗಳು ಬೇಕೆಂಬುದನ್ನು ವಿವರಿಸಿ ಹೇಳುವ ಕಾರಣವಿಲ್ಲ. ಕಾಳಿದಾಸನ ‘ಕುಮಾರಸಂಭವ’ದಲ್ಲಿಯ ಈ ವರ್ಣನೆಯನ್ನು ನೋಡಬಹುದು:

ಹರಸ್ತು ಕಿಂಚಿತ್‌ ಪರಿಲುಪ್ತಧೈರ್ಯೇ ಚಂದ್ರೋದಯಾರಂಭ ಇವಾಂಬುರಾಶಿಃ |

ಉಮಾಮುಖೇ ಬಿಂಬಫಲಾಧರೋಷ್ಠೇ ವ್ಯಾಪಾರಯಾಮಾಸ ವಿಲೋಚನಾನಿ ||

ಶಿವನ ಅಸಾಮಾನ್ಯವಾದ ಸಂಯಮ ಕಾಮನ ಬಾಣ ತಗಲಿದ್ದರಿಂದ ಸ್ವಲ್ಪ ಸಡಿಲಾಗಿ, ಚಂದ್ರೋದಯದ ಹೊತ್ತಿಗೆ ಸಮುದ್ರ ಧೈರ್ಯವನ್ನು ಕಳೆದುಕೊಂಡು ಕಾತರವಾಗುವಂತೆ ಶಿವ ಕೂಡ ಕಾತರನಾದ; ತೊಂಡೆಹಣ್ಣಿನಂತೆ ಕೆಂಪಾದ ಪಾರ್ವತಿಯ ತುಟಿಗಳ ಮೇಲೆ ಅವನ ನೋಟ ಬೀರಿದ ವರ್ಣನೆಯ ವಿವರಗಳು, ಸಮುದ್ರದ ಉಪಮಾನ, ಇವುಗಳಲ್ಲಿ ಎಲ್ಲಿಯೂ ಅಮೂರ್ತತೆಯಿಲ್ಲ. ಆದರೆ ಇವೆಲ್ಲ ಸೇರಿಕೊಂಡು ಅಮೂರ್ತವಾದ ಸತ್ಯವನ್ನು ಪ್ರಕಟಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಶಿವನ ಬಯಕೆ ಮತ್ತು ಶಿವನ ಸಂಯಮ ಇವು ಕಾಳಿದಾಸನಿಗೆ ಸೃಷ್ಟಿ ಮತ್ತು ಪ್ರಳಯಗಳ ಸಂಕೇತಗಳಾಗಿರುವುದರಿಂದ, ಈ ವಿವರಗಳ ಸುತ್ತಮುತ್ತ ಅಮೂರ್ತವಾದ ಸತ್ಯದ ಬಯಲು ಹಬ್ಬಿಕೊಂಡಿದೆ. ಚಂದ್ರೋದಯಾರಂಭ ಇವಾಂಬುರಾಶಿಃ ಸೃಜನಶಕ್ತಿಯ ಆರಂಭವನ್ನು ಸೂಚಿಸುವ ಈ ಉಪಮಾನದ ವ್ಯಂಜಕತೆ ಅದ್ಭುತವಾಗಿದೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT