ಮಹಾವೈರಾಗಿ ನೆನಪಿನ ಮಹಾವೀರ ಸರ್ಕಲ್

ಮಂಗಳವಾರ, ಏಪ್ರಿಲ್ 23, 2019
27 °C

ಮಹಾವೈರಾಗಿ ನೆನಪಿನ ಮಹಾವೀರ ಸರ್ಕಲ್

Published:
Updated:

ಇಂಡಿ: ಮಹಾರಾಷ್ಟ್ರದಿಂದ ಇಂಡಿ ಪಟ್ಟಣಕ್ಕೆ ಪ್ರವೇಶಿಸುವಾಗ ಮೊದಲಿಗೆ ಸಿಗುವುದು ಜೈನ ಧರ್ಮದ ಮಹಾ ವೈರಾಗಿ ನೆನಪಿನ ಮಹಾವೀರ ವೃತ್ತ.

ಸತ್ಯ, ಅಹಿಂಸೆ, ಅಪರಿಗೃಹ, ಅಚೌರ್ಯ, ಬ್ರಹ್ಮಚರ್ಯೆಗಳೆಂಬ ಪಂಚ ಅಣುವೃತಗಳ ಪ್ರತೀಕವಾಗಿರುವ ಪಂಚಮುಖಿ ಸ್ತಂಭ. ಅದರ ಮೇಲೆ ಒಂದರ ಮೇಲೊಂದರಂತೆ ಮೂರು ಸ್ತಂಭಗಳು ಸಮ್ಯಗ್-ದರ್ಶನ-ಜ್ಞಾನ ಚಾರಿತ್ರ್ಯ-ರತ್ನಾತ್ರಯದ ಪ್ರತೀಕವಾಗಿವೆ.

ಮೂರು ಸ್ತಂಭಗಳ ಅಡಿಯಲ್ಲಿರುವ ಕೆಂಪು ಕಮಲದ 24 ಎಸಳುಗಳು ಜೈನ ಧರ್ಮದ 24 ತೀರ್ಥಂಕರರ ಪ್ರತೀಕವಾಗಿವೆ. ಇದರ ಮೇಲೆ ಅಹಿಂಸಾ ಧರ್ಮವನ್ನು ಸಾರುವ ಧರ್ಮಚಕ್ರವಿದೆ. ಅದಕ್ಕೆ ಭಗವಾನ್‌ ಮಹಾವೀರರು ಸಾರುವ ಧರ್ಮವೆಂದು ನಾಮಕರಣ ಮಾಡಲಾಗಿದೆ.

ಮಹಾವೀರರ ಅಹಿಂಸಾ ತತ್ವ ಪ್ರಚಾರ ಮಾಡಲು ಏಲಾಚಾರ್ಯ ವಿದ್ಯಾನಂದ ಮುನಿಮಹಾರಾಜರು ಮತ್ತು ಶ್ವೇತಾಂಬರ್ ಆಚಾರ್ಯರು 'ಧರ್ಮಚಕ್ರ' ಸ್ಥಾಪನೆ ಮಾಡಿ, ದೇಶ ಸಂಚಾರ ಮಾಡಿದರು. ಈ ವೇಳೆ ಧರ್ಮಚಕ್ರ ಭೇಟಿ ನೀಡಿದ ಕಡೆಯೆಲ್ಲಾ ಮಹಾವೀರ ವೃತ್ತ ಸ್ಥಾಪನೆ ಮಾಡಿದ್ದಾರೆ.

1982ರಲ್ಲಿ ಧರ್ಮ ಚಕ್ರ ಇಂಡಿ ಪಟ್ಟಣಕ್ಕೆ ಬಂದಾಗ ವಿದ್ವಾನ್ ಮದನ್ ಕೇಸರಿ ಅವರು, ಇಂಡಿ ಪಟ್ಟಣದಲ್ಲಿ 3 ದಿನ ಧರ್ಮಸಭೆ ನಡೆಸಿದರು. ಅಂದು ಸಮಾಜದ ಮುಖಂಡರಾದ ಜೀನಚಂದ್ರ ಧನಶೆಟ್ಟಿ, ಹೀರಾಲಾಲ ದೋಶಿ, ಧನ್ಯಕುಮಾರ ಶಹಾ, ಆದಿನಾಥ ಧನಶೆಟ್ಟಿ, ಆರ್.ಡಿ.ಶಹಾ, ಸುರೇಶ ಧನಪಾಲ, ಅನಂತ ಕೋಟಿ ಸೇರಿ ಅಂದಿನ ಪುರಸಭೆಯ ಅಧ್ಯಕ್ಷ ಅಣ್ಣಪ್ಪ ದೇವರ ಅವರ ಒಪ್ಪಿಗೆಯ ಮೇರೆಗೆ, ಇಂಡಿ ಪಟ್ಟಣದಲ್ಲಿ ಮಹಾವೀರ ವೃತ್ತ ಸ್ಥಾಪನೆ ಮಾಡಲಾಯಿತು.

ವೃತ್ತ ಸ್ಥಾಪನೆಯಾದ 4 ವರ್ಷದ ನಂತರ ಪುರಸಭೆಯು ಬದಾಮಿ ನಗರದಲ್ಲಿರುವ ಕೆಂಪು ಶಿಲೆಗಳಲ್ಲಿ ಸುಂದರವಾದ ಕೀರ್ತಿ ಸ್ತಂಭ ನಿರ್ಮಿಸಿ, ಪೂಜ್ಯ ಕ್ಷುಲ್ಲಕ ಅಜೀತ ಸಾಗರ ಮಹಾರಾಜರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು.

ಇಂಡಿ ಪಟ್ಟಣ ಬೆಳೆದಂತೆ, ರಸ್ತೆ ವಿಸ್ತರಣೆ ಸಂದರ್ಭದಲ್ಲಿ 2005ರಲ್ಲಿ ಕೀರ್ತಿ ಸ್ತಂಭವನ್ನು ಅಂದಾಜು ₹3 ಲಕ್ಷ ಖರ್ಚಿನಲ್ಲಿ ಪುನರ್ ನಿರ್ಮಿಸಲಾಯಿತು. ಇದಕ್ಕೆ ಅಂದಿನ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಮತ್ತು ಇಂಡಿ ಶಾಸಕರಾಗಿದ್ದ ರವಿಕಾಂತ ‍ಪಾಟೀಲರು ಅನುದಾನ ನೀಡಿದ್ದರು.

ಜತೆಗೆ, ಜೈನ ಸಮುದಾಯದ ಮುಖಂಡರಾದ ಚಂದ್ರಕಾಂತ ಪಂಡಿತ, ಧನ್ಯಕುಮಾರ ಶಹಾ, ಧನ್ಯಕುಮಾರ ಧನಶೆಟ್ಟಿ, ಜೆ.ಆರ್.ಶಹಾ, ಶೀತಲ್ ಧನಶೆಟ್ಟಿ, ಸುರೇಶ ಧನಪಾಲ, ಮಹಾವೀರ ವರ್ಧಮಾನ, ಅಜೀತ ದೋಶಿ, ಸಂಜಯ ಧನಪಾಲ, ಹೀರಾಚಂದ ಹಳ್ಳಿ ಮುಂತಾದವರು ಕೂಡ ಕೈ ಜೋಡಿಸಿದ್ದರು.

’ಇಂಡಿಯ ಪ್ರಥಮ ವೃತ್ತವಾದ ಮಹಾವೀರ ವೃತ್ತಕ್ಕೆ ಇದೀಗ 45 ವರ್ಷಗಳು ದಾಟಿದವು ಎಂಬುದು ವಿಶೇಷ. ಈ ವೃತ್ತವನ್ನು ಮತ್ತಷ್ಟು ಅಂದಗೊಳಿಸುವ ಆಲೋಚನೆ ಇದೆ‘ ಎಂದ ಜೈನ ಸಮಾಜದ ಹಿರಿಯರಾದ ಡಿ.ಆರ್ .ಶಹಾ, ’ಇದಕ್ಕಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಮನವಿ ಮಾಡಲಾಗಿದೆ‘ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !