ಬುದ್ಧಿ, ಹೃದಯಗಳ ಕ್ಷೇತ್ರಗಳು

7

ಬುದ್ಧಿ, ಹೃದಯಗಳ ಕ್ಷೇತ್ರಗಳು

ಗುರುರಾಜ ಕರಜಗಿ
Published:
Updated:

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |
ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||
ಪ್ರೀತಿ ರೋಷಗಳನವನಳೆವನೇನ್ ? ಅವ್ಯಕ್ತ |
ಚೇತನವನರಿವನೇಂ? – ಮಂಕುತಿಮ್ಮ || 62 ||

ಪದ-ಅರ್ಥ: ಗುಣಿಪನ್=ಅಳೆಯುವನು, ಪ್ರೀತಿರೋಷಗಳನವನಳೆವನೇನ್=ಪ್ರೀತಿ+ರೋಷಗಳನ್ನು+ ಅವನು+ಅಳೆವನೇನ್? (ಅಳೆಯುವನೇ), ಚೇತನವನರಿವನೇಂ=ಚೇತನವನು+ ಅರಿವನೇಂ?

ವಾಚ್ಯಾರ್ಥ: ಭೌತವಿಜ್ಞಾನಿ ಸೂರ್ಯ, ನಕ್ಷತ್ರಗಳು, ಭೂಮಿ ಇವುಗಳ ರೀತಿಯನ್ನು, ವೇಗವನ್ನು ಅಳೆದು ಅವುಗಳ ಶಕ್ತಿಯನ್ನು ಲೆಕ್ಕಹಾಕುತ್ತಾನೆ. ಆದರೆ ಆತ ಮನುಷ್ಯರ ಪ್ರೀತಿ, ರೋಷಗಳನ್ನು ಅಳೆಯಲು ಶಕ್ತನೇ? ಅವ್ಯಕ್ತವಾಗಿರುವ ಚೇತನವನ್ನು ತಿಳಿಯುತ್ತಾನೆಯೇ?

ವಿವರಣೆ: ಇದು ತುಂಬ ಅರ್ಥಗರ್ಭಿತವಾದ ಕಗ್ಗ. ಇದರಲ್ಲಿ ಒಂದು ಕೊಂಕೂ ಇದೆ, ಆತಂಕವೂ ಇದೆ.

ಇತ್ತೀಚೆಗೆ ಒಂದು ವರದಿ ಪತ್ರಿಕೆಯಲ್ಲಿ ಬಂದಿತ್ತು. ಅಮೆರಿಕದ ಒಬ್ಬ ಖ್ಯಾತ ಖಗೋಳವಿಜ್ಞಾನಿಗೆ ಅತ್ಯಂತ ಪ್ರಮುಖ ಪ್ರಶಸ್ತಿ ದೊರೆತಿತ್ತು. ಆತ ಮಂಗಳಗ್ರಹದ ಮೇಲೆ ಮಾಡಿದ ಅಪಾರವಾದ ಸಂಶೋಧನೆಗೆ ಈ ಪ್ರಶಸ್ತಿ. ಆ ಪ್ರಶಸ್ತಿ ಪತ್ರದಲ್ಲಿ ಹೀಗೆ ಬರೆದಿದ್ದರು. ‘ಈ ಮಹಾವಿಜ್ಞಾನಿಗೆ ಮಂಗಳ ಗ್ರಹವೆಂದರೆ ಅಂಗೈಯಲ್ಲಿಯ ನೆಲ್ಲಿಕಾಯಿ. ಮಂಗಳಗ್ರಹದ ಹವಾಮಾನ, ಅಲ್ಲಿಯ ಗುರುತ್ವಾಕರ್ಷಣ ಶಕ್ತಿ, ಅಲ್ಲಿ ಹುಟ್ಟುವ ಬಿರುಗಾಳಿಗಳು, ಮರಗಟ್ಟಿದ ಅನಿಲಗಳು ಮತ್ತು ಬೆಟ್ಟಗಳನ್ನು ಇವರಷ್ಟು ಸ್ಪಷ್ಟವಾಗಿ ತಿಳಿದವರು ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ. ಒಟ್ಟಿನಲ್ಲಿ ಮಂಗಳಗ್ರಹವೆಂದರೆ ಇವರ ಮನೆ ಹಿತ್ತಲು ಇದ್ದ ಹಾಗೆ’. ಇನ್ನೂ ಅನೇಕ ಹೊಗಳಿಕೆಗಳು ಅವರನ್ನು ಬೆಂಬತ್ತಿ ಬಂದಿದ್ದವು.

ಪತ್ರಿಕೆಯಲ್ಲಿ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನೂ ಹಾಕಿದ್ದರು. ಅದನ್ನು ಓದಿದಾಗ ನನ್ನ ಎದೆ ಝಲ್ಲೆಂದಿತು. ಈ ಮನುಷ್ಯ ಮೂರು ಬಾರಿ ಮದುವೆಯಾಗಿದ್ದಾನೆ. ಯಾವ ಮದುವೆಯೂ ನಾಲ್ಕು ವರ್ಷಕ್ಕಿಂತ ದೀರ್ಘವಾಗಿ ಬಾಳಲಿಲ್ಲ. ಅವನ ಇಬ್ಬರೂ ಗಂಡು ಮಕ್ಕಳು ಹಾಗೂ ಒಬ್ಬ ಮಗಳು ಇವನಿಂದ ದೂರವಾಗಿ ಬದುಕುತ್ತಿದ್ದಾರೆ. ಇವನು ತನ್ನ ಮನೆಯಲ್ಲಿ ಏಕಾಂಗಿ. ಕೋಟಿ, ಕೋಟಿ ಮೈಲಿ ದೂರದ ಮಂಗಳಗ್ರಹದ ಒಳಹೊರಗನ್ನೂ ಸ್ಪಷ್ಟವಾಗಿ ತಿಳಿದ ವಿಜ್ಞಾನಿಗೆ ತನ್ನ ಮನೆಯಲ್ಲೇ, ಜೊತೆಯಲ್ಲೇ ಬದುಕಿದ ಹೆಂಡತಿ, ಮಕ್ಕಳ ಮನಸ್ಸು ತಿಳಿಯದೆ ಹೋಯಿತೇ?

ಇಂದ್ರಿಯಗಳ ಅಳವಿಗೆ ಸಿಗುವ ಭೌತಪ್ರಪಂಚವನ್ನು ಅಳೆಯಲು, ತಿಳಿಯಲು ಇಂದು ವಿಧಾನಗಳಿವೆ, ಉಪಕರಣಗಳಿವೆ. ಇವುಗಳನ್ನು ಕರಾರುವಾಕ್ಕಾಗಿ ಹೀಗೆಯೇ ಎಂದು ಹೇಳುವಷ್ಟು ವಿಜ್ಞಾನ ಬೆಳೆದಿದೆ. ಆದರೆ ಅವ್ಯಕ್ತವಾದ ಮನುಷ್ಯ ಭಾವನೆಗಳನ್ನು ಅಳೆಯುವ, ಅರಿಯುವ ಯಾವ ಸಾಧನವೂ ಇಲ್ಲ. ಅದಕ್ಕೆ ಬೇಕಾದದ್ದು ತೆರೆದ ಮನಸ್ಸು, ಎಲ್ಲವನ್ನೂ ಸಂತೋಷದಿಂದ ಸ್ವೀಕರಿಸುವ ಹೃದಯ. ಭೌತವಿಜ್ಞಾನ ಬುದ್ಧಿಯ ಕ್ಷೇತ್ರ. ಅವ್ಯಕ್ತವಾದ ಚೇತನವನ್ನು ಅರಿಯುವುದು ಹೃದಯದ ಕ್ಷೇತ್ರ. ಮೊದಲನೆಯದು ಸುಲಭವಾದದ್ದು, ಎರಡನೆಯದು ನಿಷ್ಕಲ್ಮಷ ಹೃದಯದ ಕ್ಷೇತ್ರ. ಬುದ್ಧಿಯ ಕ್ಷೇತ್ರ ಸುಲಭವಾದದ್ದು, ಎರಡನೆಯದಕ್ಕೆ ನಿಷ್ಕಲ್ಮಷ ಹೃದಯದ ಸತತ ಪ್ರಯತ್ನ ಬೇಕು. ಮನುಷ್ಯನ ಬದುಕಿನ ಅನಂದಕ್ಕೆ ಮೊದಲನೆಯದು ಬೇಡವೆಂದಲ್ಲ, ಆದರೆ ಎರಡನೆಯದು ಅನಿವಾರ್ಯ. ಅದನ್ನು ಸಾಧಿಸುವೆಡೆಗೆ ನಮ್ಮ ಪ್ರಯತ್ನ ಸಾಗಬೇಕು.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !