ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ರಕ್ಷಿಸು ಕರ್ಣಾಟಕ ದೇವಿ...

ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿನ ಪಕ್ಷ ರಾಜಕಾರಣವು ಅಮೃತಕ್ಕೆ ವಿಷವಿಕ್ಕುವಂತಿದೆ
Last Updated 11 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಧಾರವಾಡ ಸಾಹಿತ್ಯ ಸಮ್ಮೇಳನದ (1957) ಅಧ್ಯಕ್ಷ ಭಾಷಣದಲ್ಲಿ ಕುವೆಂಪು, ಸಾರ್ವತ್ರಿಕ ಚುನಾವಣೆಗಳ ಸ್ವರೂಪ ವಿಷಮಗೊಂಡಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅವರ ಮಾತುಗಳು ಹೀಗಿವೆ: ‘ಐದು ವರ್ಷಕ್ಕೊಮ್ಮೆ ನಡೆಯುವ ಹಾಗೂ ಜನಹೃದಯಸಾಗರವನ್ನು ಕಡೆಯುವ ಮಹಾಚುನಾವಣೆ ನಮ್ಮಲ್ಲಿ ಪ್ರಜಾಪ್ರಭುತ್ವದ ತತ್ತ್ವವನ್ನು ಬಿತ್ತಿ, ಸಮನ್ವಯದೃಷ್ಟಿಯನ್ನು ವಿಸ್ತರಿಸುವುದಕ್ಕೆ ಬದಲಾಗಿ, ನಾಲ್ಕು ವರ್ಷದ ಅವಧಿಯಲ್ಲಿ ಕೊಂಚ ಸಮಾಧಾನ ಹೊಂದಿ ತಣ್ಣಗಾಗಿ ಕಡಲ ತಳಕ್ಕೆ ಇಳಿದು ಕುಳಿತ ಕ್ರೋಧ, ಅಸೂಯೆ, ಸ್ಪರ್ಧೆ, ವೈರ, ಜಾತಿಮಾತ್ಸರ್ಯ, ದ್ವೇಷ, ದುರ್ಬುದ್ಧಿ, ಸ್ವಾರ್ಥತೆ ಇತ್ಯಾದಿ ಭಾವೋನ್ಮಾದ ಬುದ್ಧಿ ಭ್ರಾಂತಿಗಳ
ನ್ನೆಲ್ಲ ಕಡೆದೆಬ್ಬಿಸಿ ಹೊಡೆದೆಬ್ಬಿಸಿ ಎಂತಹ ಅನಾಹುತವಾಗುತ್ತಿದೆ ಎನ್ನುವುದನ್ನು ತಿಳಿದವರೆಲ್ಲ ಬಲ್ಲರು. ಸಾಹಿತ್ಯ ಈ ವಿಷವನ್ನೆಲ್ಲ ಈಂಟುವ ನೀಲಕಂಠನಾಗಬೇಕು; ಅಮೃತವನ್ನು ಹಂಚುವ ದಿವ್ಯಮೋಹಿನಿಯಾಗಬೇಕು’.

ಅರವತ್ತರ ದಶಕದ ಚುನಾವಣೆಗಳು ಕಾಲಕೂಟದ ಸ್ವರೂಪ ಪಡೆಯುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಕುವೆಂಪು, ಇಂದಿನ ಚುನಾವಣೆಗಳ ಸ್ವರೂಪವನ್ನು ನೋಡಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಸಾರ್ವತ್ರಿಕ ಚುನಾವಣೆಗಳ ಮಾತಿರಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ನಡೆಯುತ್ತಿರುವುದರ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು? ಯಾವ ವಿಷಕ್ಕೆ ಸಾಹಿತ್ಯ ಅಮೃತವೆಂದು ಅವರು ಭಾವಿಸಿದ್ದರೋ, ಆ ಅಮೃತಕ್ಕೆ ವಿಷವನ್ನು ಬೆರೆಸುವ ಕೆಲಸ ಈಗ ನಡೆಯುತ್ತಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಪಕ್ಷ ರಾಜಕಾರಣ ಬಹಿರಂಗವಾಗಿ ಕಾಣಿಸುತ್ತಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹೇಶ್‌ ಜೋಶಿ ಅವರ ‍ಪರವಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಮುನಿರಾಜು ಸೇರಿದಂತೆ ಹಲವು ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಪರಿಷತ್ತಿನ ಸದಸ್ಯರ ಮನೆಗಳಿಗೆ ಭೇಟಿ ಕೊಟ್ಟು ಮತ ಯಾಚಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ನೋಡಿದರೆ, ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಸಾಹಿತ್ಯ–ಸಂಸ್ಕೃತಿಯ ವಿಚಾರಗಳು ಹಿಂದಾಗಿ ಪಕ್ಷ ರಾಜಕೀಯ ಮುನ್ನೆಲೆಗೆ ಬಂದಂತಿದೆ.

ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷ ರಾಜಕೀಯ ಕಾಣಿಸಿಕೊಂಡಿರುವುದು ಇದು ಮೊದಲೇನಲ್ಲ. 1969ರಲ್ಲಿ ಜಿ.ನಾರಾಯಣ ಅವರು ಪರಿಷತ್ತಿನ ಅಧ್ಯಕ್ಷರಾದಾಗಲೇ ಪಕ್ಷ ರಾಜಕೀಯದ ವಾಸನೆ ಚುನಾವಣೆಯಲ್ಲಿ ಕಾಣಿಸಿಕೊಂಡಿತು. ಕಾಂಗ್ರೆಸ್ಸಿಗರಾದ ನಾರಾಯಣರನ್ನು ಪಕ್ಷದ ಕೆಲವು ಮುಖಂಡರು ಬೆಂಬಲಿಸಿದ್ದರು ಹಾಗೂ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷ ರಾಜಕಾರಣದ ವಿರುದ್ಧ ಕೆಲವು ಸಾಹಿತಿಗಳು ಧ್ವನಿ ಎತ್ತಿದ್ದರು. ಆ ವಿರೋಧವನ್ನು ಮೀರಿ ನಾರಾಯಣ ಚುನಾವಣೆಯಲ್ಲಿ ಗೆದ್ದು ಪರಿಷತ್ತಿನ ಅಧ್ಯಕ್ಷರಾಗಿದ್ದರು. ನಂತರದ ಚುನಾವಣೆಯಲ್ಲಿ ಸೋಲುಂಡು, ಅಧಿಕಾರ ಹಸ್ತಾಂತರದ ಸಮಯದಲ್ಲಿ, ‘ನಾನು ರಾಜಕಾರಣಿ. ರಾಜಕಾರಣ ಮಾಡಿಯೇ ಅಧ್ಯಕ್ಷನಾದೆ. ಆದರೆ, ಈಗ ನನ್ನ ಸ್ಥಾನಕ್ಕೆ ಬಂದಿರುವವರು ನನಗಿಂತಲೂ ದೊಡ್ಡ ರಾಜಕಾರಣಿ’ ಎಂದು ನಾರಾಯಣ ಹೇಳಿದ್ದರಂತೆ. ಪಕ್ಷ ರಾಜಕಾರಣದೊಂದಿಗೆ ಗುರ್ತಿಸಿಕೊಂಡರೂ ನಾರಾಯಣ ಅವರು ಮಾಡಿದ ಕೆಲಸಗಳು ಪರಿಷತ್ತಿನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವಂತಹವು.

ಈಗಿನ ಸನ್ನಿವೇಶ ಸಂಪೂರ್ಣ ಭಿನ್ನವಾದುದು. ಜಾತಿ ಮತ್ತು ಧರ್ಮದೊಂದಿಗೆ ತಳಕು ಹಾಕಿಕೊಂಡ ಇಂದಿನ ಪಕ್ಷ ರಾಜಕಾರಣ, ನಾಡು–ನುಡಿಯ ಹಿತಾಸಕ್ತಿಗಿಂತಲೂ ಧರ್ಮ ಹಾಗೂ ಪಕ್ಷದ ಹೈಕಮಾಂಡ್‌ ಓಲೈಕೆಯೇ ಮುಖ್ಯವಾದುದು ಎಂದು ಭಾವಿಸಿರುವಂತಹದ್ದು. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಪರಿಷತ್ತಿನ ಅಧ್ಯಕ್ಷರಾದರೆ, ಅವರು ಕನ್ನಡದ ಕಟ್ಟಾಳುವಾಗುವ ಬದಲು ಪಕ್ಷದ ಕಾರ್ಯಕರ್ತರಂತೆಯೇ ವರ್ತಿಸತೊಡಗುತ್ತಾರೆ.

ಸಾಹಿತ್ಯ ಪರಿಷತ್ತು ಈಗಾಗಲೇ ನಾಡಿನ ಪ್ರಬಲ ಜಾತಿಗಳ ಹಿಡಿತದಲ್ಲಿ ಸಿಕ್ಕಿಕೊಂಡಿದೆ. ಹಿಂದಿನ ಕೆಲವು ಅಧ್ಯಕ್ಷರು ಜಾತಿಕೇಂದ್ರಿತವಾಗಿ ಸದಸ್ಯತ್ವ ಆಂದೋಲನ ನಡೆಸಿದ್ದರಿಂದಾಗಿ, ಪರಿಷತ್ತಿನ ಸದಸ್ಯರಲ್ಲಿ ನಿರ್ದಿಷ್ಟ ಜಾತಿಗೆ ಸೇರಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿಬೆಂಬಲ ಇಲ್ಲದವರು ಪರಿಷತ್ತಿನ ಚುಕ್ಕಾಣಿ ಹಿಡಿಯುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಜಾತಿಯ ಜೊತೆಗೆ ಪಕ್ಷ ರಾಜಕಾರಣವೂ ಸೇರಿಕೊಂಡರೆ, ಪರಿಷತ್ತಿನೊಂದಿಗೆ ತಳಕು ಹಾಕಿಕೊಂಡಿರುವ ‘ಸಾಹಿತ್ಯ’ ಪಾರ್ಶ್ವವಾಯುವಿಗೆ ಒಳಗಾಗುವುದು ಖಚಿತ.

ಈಗಿನ ಸದಸ್ಯರ ಸಂಖ್ಯೆ ಮೂರು ಲಕ್ಷ ನಲವತ್ತು ಸಾವಿರದಷ್ಟಿದೆ. ಅದನ್ನು ಒಂದು ಕೋಟಿಗೆ ಏರಿಸುತ್ತೇನೆ ಎಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಈಗ ಮೂರು ಲಕ್ಷ ನಲವತ್ತು ಸಾವಿರ ಸದಸ್ಯರು ಇರುವಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವುದು ದುಬಾರಿ ಬಾಬತ್ತಾಗಿದೆ. ಇನ್ನು ಕೋಟಿ ಸದಸ್ಯರ ಲೆಕ್ಕ ಹಿಡಿದರೆ, ಪರಿಷತ್ತಿಗೂ ದನಗಳ ದೊಡ್ಡಿಗೂ ವ್ಯತ್ಯಾಸ ಇರುವುದಿಲ್ಲ.

ಪರಿಷತ್ತು ಜನಮುಖಿ, ಜನಪರ ಆಗಬೇಕೆನ್ನುವುದು ನಿಜ. ಜನಮುಖಿ ಆಗುವುದೆಂದರೆ ಪರಿಷತ್ತನ್ನು ಕಲ್ಯಾಣಮಂಟಪ ಮಾಡುವುದು ಎಂದರ್ಥವಲ್ಲ. ಪರಿಷತ್ತಿನ ಚಟುವಟಿಕೆಗಳು ನಾಡುನುಡಿಯ ಏಳಿಗೆಗೆ ಪೂರಕವಾಗಿರಬೇಕು. ಆ ಬಗ್ಗೆ ಈಗಿನ ಕೆಲವು ಅಭ್ಯರ್ಥಿಗಳಲ್ಲಿ ಯೋಜನೆಗಳಿದ್ದಂತಿಲ್ಲ.

ಸಾಹಿತಿಗಳ ಆಯ್ಕೆ ಸಾಧ್ಯವಿಲ್ಲದಿರುವ ಸಂದರ್ಭದಲ್ಲಿ ಸಾಹಿತ್ಯ ಪರಿಚಾರಕರನ್ನಾದರೂ ಆಯ್ದುಕೊಳ್ಳೋಣವೆಂದರೆ, ಈಗ ಸಾಹಿತ್ಯ ಪರಿಚಾರಕರ ವೇಷದಲ್ಲಿ ರಾಜಕಾರಣಿಗಳು, ರಾಜಕೀಯ ಪಕ್ಷಗಳಿವೆ. ಧರ್ಮಗ್ರಂಥಗಳ ಜನಪ್ರಿಯ ಘೋಷಗಳನ್ನೇ ಸಾಹಿತ್ಯ–ಸಂಸ್ಕೃತಿಯೆಂದು ತಿಳಿದವರು ಪರಿಷತ್ತಿನೊಳಗೆ ಪ್ರವೇಶ ಪಡೆಯಲು ಹವಣಿಸುತ್ತಿರುವುದು, ಕನ್ನಡದ ಹೆಸರಿನಲ್ಲಿ ಪಕ್ಷ ರಾಜಕಾರಣ ಮಾಡುವ ಪ್ರಯತ್ನದಂತಿದೆ.

ಕೇಂದ್ರ ಸರ್ಕಾರದ ಹಿಂದಿ ಲಲ್ಲೆಗರೆಯುವಿಕೆಯ ಬಗ್ಗೆ ಧ್ವನಿ ಎತ್ತಬೇಕಾದಾಗಲೆಲ್ಲ ಗಂಟಲಲ್ಲಿ ಕಡುಬು ತುರುಕಿಕೊಳ್ಳುವವರು ಹಾಗೂ ಕನ್ನಡ ಬಾವುಟಕ್ಕೆ ಬೆಂಬಲವಾಗಿ ನಿಲ್ಲದವರು ಪರಿಷತ್ತಿನೊಳಗೆ ಪ್ರವೇಶ ಪಡೆದರೆ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ಬಣ್ಣಗುರುಡು ಆವರಿಸಿಕೊಂಡಂತಾಗುತ್ತದೆ.

ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಮತ್ತು ಅದರ ಈಗಿನ ಸ್ವರೂಪದ ಬಗ್ಗೆ ಅನೇಕರಿಗೆ ಪ್ರಶ್ನೆಗಳಿವೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನುವ ದಂತಗೋಪುರದಲ್ಲೇ ಪರಿಷತ್ತು ಸಿಲುಕಿಕೊಂಡಿರುವುದೂ ನಿಜ. ಆದರೆ, ಲಕ್ಷಾಂತರ ಮಂದಿ ಸ್ವಯಂಪ್ರೇರಣೆಯಿಂದ ಸಾಹಿತ್ಯ ಸಮ್ಮೇಳನಗಳಿಗೆ ಆಗಮಿಸುತ್ತಾರೆ ಎನ್ನುವುದೇ ಪರಿಷತ್ತಿನ ಮಹತ್ವ ಹಾಗೂ ಪ್ರಸ್ತುತತೆಯನ್ನು ಸೂಚಿಸುವಂತಿದೆ. ಈ ಚುಂಬಕಶಕ್ತಿಯ ಕಾರಣದಿಂದಲೇ ಪರಿಷತ್ತನ್ನು ಪ್ರಜಾಸತ್ತಾತ್ಮಕವಾಗಿ ಉಳಿಸಬೇಕಾಗಿದೆ ಹಾಗೂ ಅದಕ್ಕೆ ಬಲ ತುಂಬಬೇಕಾಗಿದೆ.

ರಾಜಕಾರಣ ಮತ್ತು ರಾಜಕಾರಣಿ ಸಾಹಿತ್ಯ ಪರಿಷತ್ತಿಗೆ ವರ್ಜ್ಯವಾಗಬೇಕಿಲ್ಲ. ಪರಿಷತ್ತಿನ ಯೋಜನೆಗಳನ್ನು ಬೆಂಬಲಿಸುವ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಷ್ಟಕ್ಕೆ ಮಾತ್ರ ರಾಜಕಾರಣಿಗಳ ಪಾತ್ರ ಸೀಮಿತವಾಗಬೇಕು. ಪರಿಷತ್ತಿನ ಕಾರ್ಯವೈಖರಿಗಳಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶ ಇರಬಾರದು. ಅದು ಸಾಧ್ಯವಾಗದೆ ಹೋದಲ್ಲಿ, ಸಮ್ಮೇಳನಗಳಿಗೆ ಹರಿದುಬರುವ ಜನಸಾಗರದಲ್ಲಿ ಕನ್ನಡ ಬಾವುಟದ ಅಲೆಗಳು ಕಂಗೊಳಿಸುವ ಬದಲು ಪಕ್ಷದ ಧ್ವಜಗಳು ಹಾರಾಡತೊಡಗುತ್ತವೆ.

ರಘುನಾಥ ಚ.ಹ.
ರಘುನಾಥ ಚ.ಹ.

ರಾಜಕಾರಣದ ಸಂಪರ್ಕಗಳನ್ನು ಚುನಾವಣೆಗೆ ಬಳಸಿಕೊಳ್ಳುವ ಉಮೇದುವಾರರನ್ನು ಪರಿಷತ್ತಿನ ಸದಸ್ಯರು ದೂರವಿಡಬೇಕು. ರಾಜಕಾರಣಿಗಳ ವೇಷದ ಸಾಹಿತ್ಯ ಪರಿಚಾರಕರ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಾಹಿತಿಗಳು ಮಾಡಬೇಕು. 1943ರಲ್ಲಿ

ಶಿವಮೊಗ್ಗದಲ್ಲಿ ನಡೆದ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ– ‘ಸಾಹಿತ್ಯ ಯಾವ ಪಕ್ಷಕ್ಕೂ ಸೇರಲಾರದು. ಸಾಹಿತ್ಯಕ್ಕೆ ಪಕ್ಷಪಾತವು ಪಕ್ಷಪಾತವಿದ್ದಂತೆ. Executiveದಿಂದ Judiciary ಬೇರೆ ಇರುವಂತೆ ಸಾಹಿತ್ಯವು ಉಪಜೀವನದ ಎಲ್ಲ ಪಕ್ಷಗಳಿಂದ ತಟಸ್ಥವಾಗಿ ರಸ ಸಾಕ್ಷಿಯಾಗಿ ಕಾರ್ಯ ಮಾಡಬೇಕು. ಅದು ಯಾರ ಆಳೂ ಆಗಲಾರದು; ಅದನ್ನು ಮಾಡಬಾರದು. ಹಾಗೆ ಮಾಡುವುದು ಜನಜೀವನಕ್ಕೆ ಹಿತವಲ್ಲ’ ಎಂದು ದ.ರಾ. ಬೇಂದ್ರೆ ಹೇಳಿದ್ದರು. ಆ ಮಾತನ್ನು ಚುನಾವಣೆ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರು ನೆನಪಿನಲ್ಲಿಡಬೇಕಾಗಿದೆ.

‘ರಕ್ಷಿಸು ಕರ್ಣಾಟಕ ದೇವಿ’ ಎನ್ನುವ ಶಾಂತಕವಿ ಅವರ ಪ್ರಾರ್ಥನೆಯನ್ನು ‘ಕನ್ನಡ ಸಾಹಿತ್ಯ ಪರಿಷತ್ತನ್ನು ರಕ್ಷಿಸು ಕರ್ಣಾಟಕ ದೇವಿ’ ಎಂದೀಗ ಬದಲಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT