ಆ ಕಡೆ ನೋಡಲಾ! ಅಲ್ಲಿ ಕೊಡಗರ ನಾಡಲಾ!

7
ಪಡಸಾಲೆ

ಆ ಕಡೆ ನೋಡಲಾ! ಅಲ್ಲಿ ಕೊಡಗರ ನಾಡಲಾ!

Published:
Updated:
Deccan Herald

‘ಸ್ವಲ್ಪ ಸಮಯದ ಮೊದಲಷ್ಟೇ ಅಪ್ಪ–ಅಮ್ಮ ಮನೆಯಿಂದ ಹೊರಗೆ ಬಂದು ಕೈಬೀಸಿದರು. ಈಗ ಏನಾದರೋ ಗೊತ್ತಾಗುತ್ತಿಲ್ಲ’. ಗುಡ್ಡದ ಮೇಲಿನ ಮನೆಯನ್ನು ತೋರಿಸಿ ಹುಡುಗಿಯೊಬ್ಬಳು ಹೇಳುವಾಗ, ಆ ಹುಡುಗಿಯ ಧ್ವನಿಯಲ್ಲಿನ ಕಂಪನ ಎಂಥ ಗಟ್ಟಿ ಗುಂಡಿಗೆಯವರನ್ನೂ ವಿಚಲಿತಗೊಳಿಸುತ್ತದೆ. ಆ ದೃಶ್ಯದ ಬೆನ್ನಿಗೆ, ಕಾಣದ ಕೈಯೊಂದು ಎತ್ತಿ ಕೊರಕಲಿಗೆ ಜಾರಿಸಿದಂತೆ ಮನೆಯೊಂದು ತಾನಿದ್ದಲ್ಲಿಂದ ನಿಧಾನವಾಗಿ ಕಮರಿಗೆ ಬೀಳುತ್ತದೆ.

ಮೊಬೈಲ್‌ ಫೋನಿನ ತುಂಬ ನೀರು ನೀರು ನೀರು. ಕೊಡಗು, ಕೇರಳದಲ್ಲಿನ ನೆರೆ ಮೊಬೈಲ್‌ನಲ್ಲೂ ಪ್ರವಹಿಸುತ್ತಿದೆ. ಅದೇ ಮೊಬೈಲ್‌ನಲ್ಲಿ ಹುಡುಕಿದರೆ ಪಂಜೆ ಮಂಗೇಶರಾಯರ ‘ಹುತ್ತರಿ ಹಾಡು’ ಕಣ್ಣಿಗೆ ಬೀಳುತ್ತದೆ. ಪಂಜೆಯವರು ಬಣ್ಣಿಸುತ್ತಾರೆ: 

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ

ಬಂದಳೋ?

ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ

ನಿಂದಳೋ?

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ

ಹೊಳೆ ಹೊಳೆ ಹೊಳೆವಳೋ?

ಎಲ್ಲಿ ನೆಲವನು ತಣಿಸಿ, ಜನಮನ ಹೊಲದ 

ಕಳೆ ಕಳೆ ಕಳೆವಳೋ?

ಅಲ್ಲಿ ಆ ಕಡೆ ನೋಡಲಾ!

ಅಲ್ಲಿ ಕೊಡಗರ ನಾಡಲಾ!

ಅಲ್ಲಿ ಕೊಡವರ ಬೀಡಲಾ!

ಪಂಜೆಯವರೇನೋ ‘ಆ ಕಡೆ ನೋಡಲಾ’ ಎಂದು ಉದ್ಗರಿಸುತ್ತಾರೆ. ಎಲ್ಲಿ ನೋಡುವುದು? ದೇವಸನ್ನಿಧಿ, ಮೋಹನಗಿರಿ, ಜನಮನ ಹೊಲದ ಕಳೆ – ಯಾವುದೂ ಇಲ್ಲ. ನೋಡಿದಲ್ಲೆಲ್ಲ ಕಾಣುವುದಿಷ್ಟೇ ನೀರು–ಕಣ್ಣೀರು!

ಕೊಡಗಿನಲ್ಲಿ ಮಳೆಯಾದರೆ ನಮ್ಮೂರಿನಲ್ಲೇ ಮಳೆಯಾದಂತೆ ಸಂಭ್ರಮಿಸುವವರ ಸಂಖ್ಯೆ ಕರ್ನಾಟಕದಲ್ಲಿ ದೊಡ್ಡದಿದೆ. ಕೊಡಗು–ಕಾವೇರಿ–ಕನ್ನಂಬಾಡಿ ಸಮೀಕರಣದ ಜಲಗಣಿತವನ್ನು ನಾಡಿನ ಒಂದು ಭಾಗ ನೆಚ್ಚಿಕೊಂಡಿರುವುದು ಈ ಸಂಭ್ರಮಕ್ಕೆ ಕಾರಣ. ಆದರೆ, ಈ ಬಾರಿಯ ಮಳೆ ಸಂಭ್ರಮದ ಬದಲಿಗೆ ಸೂತಕವನ್ನು ಉಂಟುಮಾಡಿದೆ. ಮಳೆಯಿಂದ ಉಂಟಾದ ಅನಾಹುತದ ಚಿತ್ರಿಕೆಗಳನ್ನು ನೋಡಿದರೆ ಸಿನಿಮಾ ದೃಶ್ಯಗಳನ್ನು ನೋಡಿದಂತೆ ಅನ್ನಿಸುತ್ತದೆ.

ಸಿನಿಮಾ! ಜನಸಾಮಾನ್ಯರ ಪಾಲಿಗೆ ಕನಸುಗಳನ್ನೂ ರಂಜನೆಯನ್ನೂ ಒದಗಿಸುವ ಸಿನಿಮಾ! ಈ ಮಾಧ್ಯಮ ಜನಸಾಮಾನ್ಯರ ಸಂಕಷ್ಟಗಳಿಗೂ ಸ್ಪಂದಿಸಬೇಕಲ್ಲವೆ? 1961ರಲ್ಲಿ ಸುರಿದ ಧಾರಾಕಾರ ಮಳೆ ಕರ್ನಾಟಕವನ್ನು ತತ್ತರಗೊಳಿಸಿತ್ತು. ಆಗ, ಚಲನಚಿತ್ರ ಕಲಾವಿದರು ನಾಡಿನಾದ್ಯಂತ ಸಂಚರಿಸಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಿದ್ದರು.

ಕನ್ನಡ ಜನತೆಯ ಅತಿ ಸಮೀಪಕ್ಕೆ ಚಲನಚಿತ್ರ ಕಲಾವಿದರು ಮೊದಲ ಬಾರಿಗೆ ಹೋದುದು ಆಗಲೇ. ಆ ಘಟನೆ ಕಲಾವಿದರು ಮತ್ತು ಜನಸಾಮಾನ್ಯರ ನಡುವಿನ ಅಂತರವನ್ನು ತೆಳುಗೊಳಿಸಿತು ಹಾಗೂ ಮದರಾಸಿನಲ್ಲಿ ನೆಲೆಸಿದ್ದ ಕನ್ನಡ ಚಿತ್ರರಂಗ ಬೆಂಗಳೂರಿನತ್ತ ಮುಖ ಮಾಡಲು ಕಾರಣಗಳಲ್ಲೊಂದಾಯಿತು.

ಸಿನಿಮಾ ಮಂದಿಗೆ ಕೂಡ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎನ್ನುವುದಕ್ಕೆ 1961ರ ರೌದ್ರಮಳೆಯ ಪರಿಣಾಮಕ್ಕೆ ಚಿತ್ರರಂಗದ ಪ್ರತಿಕ್ರಿಯೆ ಉದಾಹರಣೆಯಂತಿತ್ತು. ಆದರೆ, 2009ರಲ್ಲಿ ಸುರಿದ ಕುಂಭದ್ರೋಣ ಮಳೆಯ ಸಂದರ್ಭದಲ್ಲಿ ಚಿತ್ರರಂಗದ ಸ್ಪಂದನ ಕ್ಷೀಣವಾಗಿತ್ತು. ಉತ್ತರ ಕರ್ನಾಟಕದ ಜನ ನೆರೆ ಹಾವಳಿಯಿಂದ ತತ್ತರಿಸಿದರೂ ಅರವತ್ತರ ದಶಕದಲ್ಲಿ ಚಿತ್ರರಂಗ ಒಟ್ಟಾದಂತೆ 2009ರಲ್ಲಿ ಕಾಳಜಿ ಪ್ರಕಟವಾಗಲಿಲ್ಲ. ಈ ಬದಲಾವಣೆ ಏನನ್ನು ಸೂಚಿಸುತ್ತದೆ?

1961ರಲ್ಲಿ ಚಲನಚಿತ್ರ ಕಲಾವಿದರು ನಡೆಸಿದ ನಿಧಿ ಸಂಗ್ರಹದ ಮುಂಚೂಣಿಯಲ್ಲಿ ಇದ್ದುದು ರಾಜ್‌ಕುಮಾರ್‌. ಆಗಿನ್ನೂ ರಾಜ್‌ ಕನ್ನಡ ಸಾಂಸ್ಕೃತಿಕ ಲೋಕದ ಐಕಾನ್‌ ಆಗಿ ರೂಪುಗೊಂಡಿರಲಿಲ್ಲ. ಆದರೆ, ಚಲನಚಿತ್ರ ಮಾಧ್ಯಮ ಸಮಾಜದ ಗತಿಬಿಂಬವೂ ಪ್ರತಿಬಿಂಬವೂ ಹೌದೆನ್ನುವ ನಂಬಿಕೆ ಅವರಿಗಿತ್ತು, ಚಿತ್ರರಂಗಕ್ಕೂ ಇತ್ತು. ತಾವು ರೂಪಿಸುವ ಸಿನಿಮಾಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎನ್ನುವ ವಿಶ್ವಾಸವೂ ಅವರಿಗಿತ್ತು.

ಆ ಕಾರಣದಿಂದಲೇ ಒಂದು ಹಂತದ ನಂತರ ನಕಾರಾತ್ಮಕ ಪಾತ್ರಗಳಿಂದ ದೂರವುಳಿದ ರಾಜ್‌, ತಮ್ಮ ಪಾತ್ರಗಳನ್ನು ಮೌಲ್ಯಗಳ ಪ್ರತಿಪಾದನೆಗಾಗಿ ಬಳಸಿಕೊಂಡರು. ಕನ್ನಡ ಜನಮಾನಸದ ಸಾಂಸ್ಕೃತಿಕ ನಾಯಕನಾಗಿ ಗುರ್ತಿಸಿಕೊಳ್ಳುವುದರ ಹಿಂದೆ ಅವರ ಪಾತ್ರ ವಿವೇಕ ಹಾಗೂ ಸಮಾಜ ಮತ್ತು ಸಿನಿಮಾದ ನಂಟಿನ ಕುರಿತು ಅವರಿಗಿದ್ದ ಬದ್ಧತೆಯ ಪಾತ್ರ ಮುಖ್ಯವಾದುದು. ಆದರೆ, 2009ರ ವೇಳೆಗೆ ರಾಜ್‌ ಇರಲಿಲ್ಲ ಮಾತ್ರವಲ್ಲ– ಅವರು ಪ್ರತಿನಿಧಿಸಿದ ಮೌಲ್ಯಗಳಿಂದಲೂ ಚಿತ್ರರಂಗ ದೂರವಾದಂತಿತ್ತು. ಅದರ ಫಲವಾಗಿಯೇ ನಾಡಿನಲ್ಲಿ ನೆರೆಯುಂಟಾದರೂ ಸಿನಿಮಾ ಮಂದಿ ‘ಮುಂಗಾರುಮಳೆ’ ಸಿನಿಮಾದ ನೊರೆಯಲ್ಲಿಯೇ ಮುಳುಗಿದ್ದರು.

ಈ ಘಟನೆ, ರಾಜ್‌ ಕಣ್ಮರೆಯ ನಂತರ ಕನ್ನಡ ಚಿತ್ರರಂಗ ಮುಖಹೀನತೆಯಿಂದ ಬಳಲುತ್ತಿರುವುದಕ್ಕೆ ಉದಾಹರಣೆಯಂತಿತ್ತು.

ಕನ್ನಡ ಚಿತ್ರರಂಗ ಗುಣಾತ್ಮಕ ಸಿನಿಮಾಗಳ ಕೊರತೆಯ ಜೊತೆಗೆ, ನಾಯಕತ್ವದ ಕೊರತೆಗೂ ಉತ್ತರ ಕಂಡುಕೊಂಡಿಲ್ಲ. ರಾಜ್‌ಕುಮಾರ್‌ ನಂತರ ಚಿತ್ರೋದ್ಯಮದಲ್ಲಿ ನಾಯಕತ್ವದ ಸ್ಥಾನ ತುಂಬಬೇಕಿದ್ದವರು ವರ್ಚಸ್ಸಿನ ಕೊರತೆಯಿಂದಲೋ ವೈಯ
ಕ್ತಿಕ ದೌರ್ಬಲ್ಯಗಳಿಂದಲೋ ಸಿನಿಮಾ ನಾಯಕರಾಗಿಯಷ್ಟೇ ಉಳಿದರು. ಅಂಬರೀಷ್‌ ಅವರು ತಮ್ಮ ಬಳಿಗೆ ಪದೇಪದೇ ಬಂದ ಯಜಮಾನಿಕೆಯನ್ನು ಜವಾಬ್ದಾರಿಯ ರೂಪದಲ್ಲಿ ನೋಡಿದ್ದು ಕಡಿಮೆ. ಕನ್ನಡ ಚಿತ್ರರಂಗದ ಅಮೃತಮಹೋತ್ಸವ ಸಂದರ್ಭದಲ್ಲಿ ನಡೆದ ಕಹಿ ಪ್ರಸಂಗದಿಂದ ರವಿಚಂದ್ರನ್‌ ಊರ ದನ ಕಾಯುವ ಉಸಾಬರಿ ತಮಗೆ ಬೇಡವೆನ್ನುವ ನಿಲುವಿಗೆ ತಲುಪಿದರು.

ಡಬ್ಬಿಂಗ್‌ ವಿರೋಧಿ ಚಳವಳಿ ಸಂದರ್ಭದಲ್ಲಿ ನಿರೀಕ್ಷಿತ ಬೆಂಬಲ ದೊರಕದ ಕಾರಣದಿಂದಾಗಿ ಶಿವರಾಜ್‌ಕುಮಾರ್‌ ಹಿಂದೆ ಸರಿದರು. ಈಗ ‘ಸೆಲೆಬ್ರಿಟಿ ಕ್ರಿಕೆಟ್‌’ ತಂಡದ ಕ್ಯಾಪ್ಟನ್‌ಗಳನ್ನು ಕಾಣಬಹುದೇ ಹೊರತು ಚಿತ್ರರಂಗವನ್ನೂ ಜನಮನವನ್ನೂ ಬೆಸೆಯುವ ನಾಯಕರನ್ನಲ್ಲ. ಕನ್ನಡ ಚಿತ್ರರಂಗದ ಜಗಲಿಯಲ್ಲೀಗ ಹಿರೀಕರೂ ಇಲ್ಲ, ಮಾರ್ಗದರ್ಶಕರೂ ಇಲ್ಲ.

ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳಿಕೊಳ್ಳುವ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಿನಿಮಾ ಶೀರ್ಷಿಕೆಗಳ ನೋಂದಣಿ ಹಾಗೂ ಖಾಜಿ ನ್ಯಾಯಗಳಾಚೆಗೆ ತನ್ನ ಜೀವಂತಿಕೆ ಪ್ರಕಟಪಡಿಸುತ್ತಿಲ್ಲ. ಎಂ. ಭಕ್ತವತ್ಸಲ ಅವರು ಅಧ್ಯಕ್ಷರಾಗಿದ್ದಾಗ ಚಿತ್ರೋದ್ಯಮಕ್ಕೆ ಶೈಕ್ಷಣಿಕ ಶಿಸ್ತನ್ನೂ ಚಿತ್ರರಂಗಕ್ಕೆ ಸಾಂಸ್ಕೃತಿಕ ಆಯಾಮವನ್ನೂ ತರುವ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಸಕ್ರಿಯವಾಗಿತ್ತು. ಅದಾದ ನಂತರ, ಸಂಸ್ಕೃತಿ ಎಂದರೆ ‘ಕೇಜಿಗೆಷ್ಟು’ ಎಂದು ಕೇಳುವ ಪರಿಸ್ಥಿತಿಗೆ ಮಂಡಳಿ ಬಂದು ಮುಟ್ಟಿದೆ. ಈ ಅರಾಜಕತೆಯನ್ನು ಪ್ರಸ್ತುತ ನಾಡಿನಲ್ಲಿ ಸುರಿದಿರುವ ಮಳೆ ಕನ್ನಡಿಯಂತೆ ತೋರಿಸುತ್ತಿದೆ.

ಕೇರಳದಲ್ಲೂ ಮಳೆ ಅನಾಹುತ ಸೃಷ್ಟಿಸಿದೆ. ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್‌ಗಳಾದ ಮಮ್ಮೂಟ್ಟಿ ಹಾಗೂ ಮೋಹನ್‌ಲಾಲ್‌ ಅವರು ಮಳೆಯಿಂದ ಹಾನಿಗೊಂಡ ಕೆಲವು ಪ್ರದೇಶಗಳಿಗೆ ಭೇಟಿಕೊಟ್ಟು ಪರಿಹಾರ ಕಾರ್ಯಕ್ರಮಗಳನ್ನು ಉತ್ತೇಜಿಸಿದ್ದಾರೆ. ಸಂತ್ರಸ್ತರ ನೆರವಿಗೆ ಬರುವಂತೆ ತಮ್ಮ ಅಭಿಮಾನಿಗಳಿಗೆ ಕರೆನೀಡಿದ್ದಾರೆ.

ಕಲಾವಿದರ ಸಂಘಟನೆಯಾದ ‘ಅಮ್ಮ’ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಂಕೇತಿಕ ಮೊತ್ತ ನೀಡುವುದರ ಮೂಲಕ ತನ್ನ ಬದ್ಧತೆ ಪ್ರದರ್ಶಿಸಿದೆ. ಮಂಜು ವಾರಿಯರ್‌, ಶೋಭನಾ, ಪೃಥ್ವಿರಾಜ್‌, ಜಯರಾಮ್‌ ಸೇರಿದಂತೆ ಅನೇಕ ಕಲಾವಿದರು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ತಮಿಳು ಚಿತ್ರರಂಗದ ಕಮಲ್‌ಹಾಸನ್‌, ಸೂರ್ಯ, ತೆಲುಗಿನ ಅಲ್ಲು ಅರ್ಜುನ್‌, ಪ್ರಭಾಸ್‌, ಬಾಲಿವುಡ್‌ನ ಶಾರುಖ್‌ ಖಾನ್‌ ಕೂಡ ಕೇರಳದ ಅಳಲಿಗೆ ಸ್ಪಂದಿಸಿದ್ದಾರೆ.

ಕನ್ನಡದ ಕೆಲವು ಕಲಾವಿದರೂ ಕೊಡಗಿನ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಶಿವರಾಜ್‌ಕುಮಾರ್‌, ಸುದೀಪ್‌, ದರ್ಶನ್‌ ಸೇರಿದಂತೆ ಒಂದಷ್ಟು ಕಲಾವಿದರು, ಮಳೆಪೀಡಿತರಿಗೆ ನೆರವು ನೀಡುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಕರೆನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕರೆನೀಡುವುದರಾಚೆಗೆ ಕಲಾವಿದರಿಗೆ ಹೊಣೆಗಾರಿಕೆ ಇಲ್ಲವೇ ಎಂದು ಇವರನ್ನು ಪ್ರಶ್ನಿಸಬೇಕನ್ನಿಸಿದರೂ, ತಂತಮ್ಮ ಸ್ಕ್ರಿಪ್ಟ್‌ಗಳಲ್ಲಿ ಶೂಟಿಂಗ್‌ಗಳಲ್ಲಿ ಮುಳುಗಿಹೋಗಿರುವ ಬಹುತೇಕ ಕಲಾವಿದರಿಗೆ ಏನು ಹೇಳುವುದು?

‘ಚಿತ್ರೋದ್ಯಮ ಒಂದು ಕುಟುಂಬ’ ಎಂದು ಬಣ್ಣಿಸುವ ಬಣ್ಣದ ಮಂದಿ ನೆರವು ನೀಡುವ ವಿಷಯದಲ್ಲೂ ಕುಟುಂಬದಂತೆ ವರ್ತಿಸಬೇಕಲ್ಲವೇ? ಸದ್ಯಕ್ಕಂತೂ ಅಂಥ ಪರಿಸ್ಥಿತಿ ಕಾಣಿಸುತ್ತಿಲ್ಲ. ‘ಕೊಡಗಿನ ಸಿಪಾಯಿ’, ‘ಕೊಡಗಿನೋಳು ಬೆಡಗಿನೋಳು’, ‘ಕೊಡಗಿನ ಕಾವೇರಿ, ಕನ್ನಡ ಕುಲನಾರಿ’ ಎನ್ನುವೆಲ್ಲ ‘ಕೊಡಗು ಪ್ರೀತಿ’ ಸಿನಿಮಾಗಳಿಗಷ್ಟೇ ಸೀಮಿತವಾದಂತಿದೆ.

ಪಂಜೆಯವರ ಕವಿತೆ ಕೊನೆಗೊಳ್ಳುವುದು ಹೀಗೆ:

ಒಮ್ಮತವು ಒಗ್ಗಟ್ಟು ಒಂದೇ ಮನವು

⇒ಎಲ್ಲಿದೆ ಹೇಳಿರಿ?

ಸುಮ್ಮನಿತ್ತರೊ ದಟ್ಟಿ ಕುಪ್ಪಸ ಹಾಡು

ಹುತ್ತರಿಗೇಳಿರಿ!

ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪಡ

ಹೊರ ಹೊಮ್ಮಲಿ!

ಅಮ್ಮ ಹರಸಿದ ಸೀಮೆ ನಮಗಿದು ಇರಲಿ

ನಮ್ಮದೆ ನಮ್ಮಲಿ!

ನೆಮ್ಮದಿಯನಿದು ತಾಳಲಿ!

ಅಮ್ಮೆಯಾ ಬಲ ತೋಳಲಿ

ನಮ್ಮ ಕೊಡಗಿದು ಬಾಳಲಿ!

ಕನ್ನಡ ಚಿತ್ರರಂಗವನ್ನು ಅದರ ಪಾಡಿಗೆ ಬಿಟ್ಟು, ಪಂಜೆಯವರಂತೆ ನಾವೂ ‘ನೆಮ್ಮದಿಯನಿದು ತಾಳಲಿ’ ಎಂದು ಹಾರೈಸಬೇಕಷ್ಟೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !