ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ ಅಂಕಣ: ಬಡವರ ನಗುವಿನ ಶಕ್ತಿಯ ಮರುಕಳಿಕೆ–ರಘುನಾಥ ಚ.ಹ ಲೇಖನ

ಮಂಗಾಟ ನಡೆಸಿ ಅಂಗಾತ ಬಿದ್ದ ‘ಕುರುಡು ಕಾಂಚಾಣ’ವ ಎತ್ತಿ ಒಗೆದದ್ದಾಯಿತು, ಮುಂದೇನು?
Published 17 ಮೇ 2023, 19:26 IST
Last Updated 17 ಮೇ 2023, 19:26 IST
ಅಕ್ಷರ ಗಾತ್ರ

-ರಘುನಾಥ ಚ.ಹ.

ಬಡವರ ನಗುವಿನ ಶಕ್ತಿ– ದಲಿತ ಕವಿ ಸಿದ್ಧಲಿಂಗಯ್ಯನವರ ಕಾವ್ಯವನ್ನು ಡಿ.ಆರ್‌.ನಾಗರಾಜ್‌ ಅವರು ಒಂದು ಸಾಲಿನಲ್ಲಿ ಹಿಡಿದಿಟ್ಟಿರುವುದು ಹೀಗೆ. ಸಿದ್ಧಲಿಂಗಯ್ಯನವರ ಸಾಹಿತ್ಯವನ್ನು ಕುರಿತ ಲೇಖನಗಳ ಸಂಕಲನಕ್ಕೆ ಎಚ್‌.ದಂಡಪ್ಪನವರು ಇರಿಸಿರುವ ಶೀರ್ಷಿಕೆಯೂ ಇದೇ. ಇಲ್ಲಿನ ಬಡವರ ನಗುವಿನಲ್ಲಿ ಇರುವುದು ಸಂತೋಷವಲ್ಲ, ಸಂಕಟ. ನೋವನ್ನು ನಗುವಾಗಿ ಅರಳಿಸುವುದು ಬಡವರಿಗೆ ಸಹಜವಾದ ಕಲೆ. ದೌರ್ಬಲ್ಯ, ಅಸಹಾಯಕತೆ, ಸ್ವಾನುಕಂಪದ ರೀತಿ ಕಾಣಿಸುವ ಆ ನಗುವಿನ ಆಳದಲ್ಲಿ ಸುಡುವ ಕೆಂಡದಂಥ ಶಕ್ತಿಯಿದೆ ಎನ್ನುವುದನ್ನು ಕಾಣಲಿಕ್ಕೆ ಕವಿಯ ಕಣ್ಣು ಬೇಕು. ಸುಡುವ ಶಕ್ತಿಯ ಜೊತೆಗೆ ಸೃಷ್ಟಿಶೀಲ ಕಾವಿನ ಶಕ್ತಿಯನ್ನೂ ಉಳ್ಳ ಈ ಕೆಂಡ ಸುಡಬಲ್ಲದು, ಸುಡುತ್ತಲೇ ಬೆಳುದಿಂಗಳಾಗಲೂಬಲ್ಲದು.

‘ಬಡವರ ನಗುವಿನ ಶಕ್ತಿ’ಯ ರೂಪಕ ಈ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಹೊಂದುವಂತಹದ್ದು. ಬಿಜೆಪಿ ವಿರುದ್ಧದ ಜನಾದೇಶ ‘ಬಡವರ ನಗುವಿನ ಶಕ್ತಿ’ಯಲ್ಲದೆ ಬೇರೇನಲ್ಲ. ಬೆಲೆಯೇರಿಕೆ, ಧಾರ್ಮಿಕ ಅಸಹನೆ, ಜನಪ್ರತಿನಿಧಿ ಸ್ಥಾನವನ್ನು ಅಧಿಕಾರ ಚಲಾಯಿಸುವ ಅವಕಾಶವೆಂದು ತಿಳಿದು ತೋರಿದ ದರ್ಪ, ಭ್ರಷ್ಟಾಚಾರ– ಜನರ ಆಕ್ರೋಶಕ್ಕೆ ಕಾರಣವಾದ ಇವೆಲ್ಲವನ್ನೂ ‘ಬಡವರ ನಗು’ ಎನ್ನುವ ರೂಪಕ ಹಿಡಿದಿಡುವಂತಿದೆ. ಬಡವರ ನಗು ಜಾಗೃತಗೊಂಡ ಸ್ಥಿತಿಯೇ ಶಕ್ತಿಯಾಗಿ, ಚುನಾವಣೆಯಲ್ಲಿ ಜನಾದೇಶದ ರೂಪು ತಳೆದಿರುವಂತಿದೆ. ಇಲ್ಲಿನ ಬಡವರೆಂದರೆ, ಹಸಿವಿನಿಂದ ಬಳಲುತ್ತಿರುವವರು ಮಾತ್ರವಲ್ಲ, ಅಧಿಕಾರದ ದರ್ಪದಿಂದ ನೊಂದು ಅಸಹಾಯಕತೆಯಿಂದ ತಲ್ಲಣಿಸುತ್ತಿದ್ದವರೂ ಹೌದು. ಮಾತು ಕಳೆದುಕೊಂಡ ಈ ಅಸಹಾಯಕತೆಗೆ ಕಾರಣವಾದ ದರ್ಪ ಅನಾವರಣಗೊಂಡದ್ದು ಒಂದೆರಡು ರೂಪಗಳಲ್ಲಲ್ಲ. ಅಧಿಕಾರದ ಈ ದರ್ಪ ಮಹಿಳೆಯರು ಮತ್ತು ಮಕ್ಕಳನ್ನು ನೇರವಾಗಿ ಗುರಿಯಾಗಿಸಿಕೊಂಡಿತ್ತು. ಹಿಜಾಬ್‌ ಪ್ರಕರಣ ನೆನಪಿಸಿಕೊಳ್ಳಿ. ಶಾಲೆಗಳ ಅಂಗಳಗಳನ್ನು ಕೌರವರ ಸಭೆಯನ್ನಾಗಿಸಲಾಯಿತು, ತಲೆಯ ಮೇಲಿನ ವಸ್ತ್ರ ಸೆಳೆಯಲು ಯತ್ನಿಸಿ, ಹೆಣ್ಣುಮಕ್ಕಳನ್ನು ಗೋಳಾಡಿಸಲಾಯಿತು, ಹಿಜಾಬ್‌ ತೆಗೆಯಲು ಒಲ್ಲದ ಹೆಣ್ಣುಮಕ್ಕಳಿಗೆ ಕಲಿಕೆಯ ಹಕ್ಕು ನಿರಾಕರಿಸಲಾಯಿತು. ಬಾಲಕಿಯರನ್ನು ಇಷ್ಟು ನಿಕೃಷ್ಟವಾಗಿ ನಡೆಸಿಕೊಂಡ ಮತ್ತೊಂದು ಉದಾಹರಣೆ ಆಧುನಿಕ ಕರ್ನಾಟಕದಲ್ಲಿಲ್ಲ.

ಪಠ್ಯ ಪರಿಷ್ಕರಣೆಯ ಹೆಸರಿನಲ್ಲಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರನ್ನು ಗೊಂದಲಕ್ಕೆ, ಒತ್ತಡಕ್ಕೆ ದೂಡಿದ್ದು  ಅಧಿಕಾರದ ಅಪಬಳಕೆಯ ಮತ್ತೊಂದು ಉದಾಹರಣೆ. ಪಕ್ಷ ಹಾಗೂ ಅದರ ಬಂಧುಮಿತ್ರ ಸಂಘಟನೆಗಳ ಅಜೆಂಡಾಗಳನ್ನು ಪರಿಷ್ಕರಣೆಯ ನೆಪದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಕ್ಕಳ ಪಠ್ಯಪುಸ್ತಕಗಳಲ್ಲಿ ತುರುಕಿತು. ಪರಿಷ್ಕರಣೆ ಎನ್ನುವ ಅಡ್ಡಕಸುಬಿಗೆ ಜನವಿರೋಧ ಎದುರಾದಾಗ, ಜಾತಿಗಳನ್ನು ಪ್ರತಿನಿಧಿಸುವ ಮಠಾಧೀಶರ ಮಾತುಗಳ ಹೊರತಾಗಿ ಜನಸಾಮಾನ್ಯರ ಅಭಿಪ್ರಾಯಗಳಿಗೆ ಸರ್ಕಾರ ಸಂಪೂರ್ಣ ಕಿವುಡಾಗಿತ್ತು.

ಜನಪ್ರತಿನಿಧಿಗಳಿಗೆ ವೈಯಕ್ತಿಕ ಚಾರಿತ್ರ್ಯ ಅನಗತ್ಯ ಎನ್ನುವುದನ್ನು ಕಳೆದ ಐದು ವರ್ಷಗಳ ರಾಜಕೀಯ ಮತ್ತೆ ಮತ್ತೆ ರುಜುವಾತುಪಡಿಸಿದೆ, ಸಾರ್ವಜನಿಕ ಲಜ್ಜೆ ಮತ್ತೆ ಮತ್ತೆ ಮುಗ್ಗರಿಸಿದೆ, ನಗೆಪಾಟಲಿಗೀಡಾಗಿದೆ. ಒಂದು ಪಕ್ಷದ ಚಿ‌ಹ್ನೆಯಡಿ ಗೆದ್ದುಬಂದ ಕೆಲವು ಶಾಸಕರು ತಮ್ಮ ಪಕ್ಷಕ್ಕೆ ದ್ರೋಹ ಎಸಗಿದರು, ಚುನಾಯಿಸಿದ ಮತದಾರರನ್ನು ಕೊಳ್ಳಬಹುದಾದ ಸರಕುಗಳಾಗಿ ಕಂಡರು. ಅಧಿಕಾರ ಲಾಲಸೆಗಾಗಿ ಪಕ್ಷ ಮತ್ತು ಸಿದ್ಧಾಂತಗಳ ಬಾವುಟಗಳನ್ನು ಬದಲಿಸಿದವರು, ವೈಯಕ್ತಿಕ ಬದುಕಿನಲ್ಲೂ ಮಾದರಿಯಾಗಿಯೇನೂ ಇರಲಿಲ್ಲ. ಸಚಿವರೊಬ್ಬರ ಅನೈತಿಕ ನಂಟಿನ ದೃಶ್ಯಗಳುಳ್ಳ ಅಡಕಮುದ್ರಿಕೆ ಬಹಿರಂಗಗೊಂಡು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಆರೋಪಕ್ಕೆ ಗುರಿಯಾದವರನ್ನು ತೋರಿಕೆಗಾದರೂ ಮುಟ್ಟಲು ಕಾನೂನು ಪಾಲಕರು ಮುಂದಾಗಲಿಲ್ಲ. ಈ ನೆಲದ ಕಾನೂನು ಅಧಿಕಾರದೆದುರು ಕುಂಟೇ ಕುರುಡೇ ಎನ್ನುವ ಜನಸಾಮಾನ್ಯರ ಪ್ರಶ್ನೆಗೆ ಯಾರೂ ಉತ್ತರಿಸಲಿಲ್ಲ. ಹಾದರದ ದೃಶ್ಯಗಳು ಬಹಿರಂಗಗೊಳ್ಳುವ ಆತಂಕದಿಂದ ಇನ್ನಷ್ಟು ವೀರಾಧಿವೀರ ರಾಜಕಾರಣಿಗಳು ಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವಂತಿತ್ತು ಅವರ ನಡವಳಿಕೆ.

ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ನೈತಿಕತೆಯನ್ನು ಕಸದಂತೆ ಕಂಡವರ ನಾಲಿಗೆಗೆ ಮತಿಯಿರುವುದುಂಟೆ? ‘ಭಾರತದ ಆಧುನಿಕ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡಲು ಬಯಸುವುದಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಪಡೆಯುತ್ತಾರೆ. ಅದು ಒಳ್ಳೆಯದಲ್ಲ’ ಎನ್ನುವುದು ಸಮಾಜದ ಆರೋಗ್ಯವನ್ನು ಕಾಪಾಡುವ ಹೊಣೆ ಹೊತ್ತ ಸಚಿವರೊಬ್ಬರ ವಿಶ್ಲೇಷಣೆ. ‘ಹೆಚ್ಚು ಮಹಿಳಾ ಸಿಬ್ಬಂದಿ ಇರುವ ಶಾಲೆಗಳಲ್ಲಿ ಜಗಳ ಹೆಚ್ಚಾಗಿರುತ್ತದೆ’ ಎನ್ನುವುದು ಮತ್ತೊಬ್ಬ ಮುಖಂಡರ ಮಾತು. ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವರೊಬ್ಬರು ಕಪಾಳಮೋಕ್ಷ ಮಾಡಿದರು. ಹಣೆಗೆ ಬೊಟ್ಟಿಡದ ಮಹಿಳೆಯನ್ನು ಸಂಸದರೊಬ್ಬರು ಸಾರ್ವಜನಿಕವಾಗಿ ನಿಂದಿಸಿದರು; ‘ನಿನ್ನ ಗಂಡ ಬದುಕಿದ್ದಾನೆ ತಾನೆ?’ ಎಂದು ಪ್ರಶ್ನಿಸುವುದರ ಜೊತೆಗೆ, ‘ಯಾರೋ ದುಡ್ಡು ಕೊಡುತ್ತಾರೆಂದು ಮತಾಂತರ ಆಗಿಬಿಡುತ್ತೀರಾ?’ ಎಂದು ಸಾರ್ವಜನಿಕವಾಗಿ ಹರಿಹಾಯ್ದಿಯ್ದರು. ಹೆಣ್ಣುಮಕ್ಕಳ ಸೀರೆ, ಬಳೆ, ಕುಂಕುಮದ ಹೆಸರಿನಲ್ಲಿ ಎದುರಾಳಿಯ ಬಗ್ಗೆ ಅಣಕವಾಡಿದ ಪೌರುಷದ ಘಟನೆಗಳಿಗಂತೂ ತುದಿಮೊದಲಿಲ್ಲ.

ಜಾತಿ–ಧರ್ಮ ಮತ್ತು ಅಧಿಕಾರದ ಅನೈತಿಕ ಸಮೀಕರಣದಿಂದ ನಡೆದ ಅಮಾನುಷ ಪ್ರಸಂಗಗಳು, ಅಸ್ಪೃಶ್ಯತೆಯ ಆಚರಣೆ ಒಂದೆರಡಲ್ಲ. ಆರೋಪಕ್ಕೆ ಗುರಿಯಾದ ವ್ಯಕ್ತಿಯ ಧರ್ಮದ ಹಿನ್ನೆಲೆಯಲ್ಲಿ, ಘಟನೆಯನ್ನು ವೈಭವೀಕರಿಸಿದ ಇಲ್ಲವೇ ನಿರ್ಲಕ್ಷಿಸಿದ ಅಪ್ರಜಾಸತ್ತಾತ್ಮಕ ಉದಾಹರಣೆಗಳು ಈ ಕಾಲಕ್ಕೆ ಸಹಜ ಎನ್ನುವಂತಾದವು. ಆಹಾರ, ಪ್ರಾರ್ಥನೆಯೊಂದಿಗೆ ವ್ಯಾಪಾರವೂ ಕೋಮುಬಣ್ಣ ಪಡೆದುಕೊಂಡಿತು. ಸಮುದಾಯಗಳ ನಡುವಿನ ಸೌಹಾರ್ದವನ್ನು ಪ್ರಜ್ಞಾಪೂರ್ವಕವಾಗಿ ರಕ್ಷಿಸಬೇಕಾದವರು, ತಮ್ಮ ಸಾಂತ್ವನವನ್ನು ಒಂದು ವರ್ಗಕ್ಕಷ್ಟೇ ಸೀಮಿತಗೊಳಿಸುವ ನಿರ್ಲಜ್ಜೆ ಪ್ರದರ್ಶಿಸಿದರು,  ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎಂದು ಭಂಡತನದ ಮಾತನಾಡಿದರು. ಇದೆಲ್ಲದರ ಪರಿಣಾಮ, ಮನೆಗಳು ಮುರಿದವು, ಮನಸ್ಸುಗಳು ಉರಿದವು, ಜೀವ ಅಗ್ಗವಾದವು.

ಸಾರ್ವಜನಿಕ ಲಜ್ಜೆ ಹಾಗೂ ನೈತಿಕತೆ ತೊರೆದ ಜನಪ್ರತಿನಿಧಿಗಳು, ತಮ್ಮ ಭ್ರಷ್ಟತನಕ್ಕೆ ದೇಶಪ್ರೇಮದ ಪೋಷಾಕು ತೊಡಿಸಿದರು. ಜೀವನಾವಶ್ಯಕ ವಸ್ತುಗಳು ತುಟ್ಟಿಯಾಗಿ ಜನಸಾಮಾನ್ಯರ ಬದುಕು ದುಸ್ತರವಾದಾಗ, ಆ ಸಂಕಷ್ಟವನ್ನು ಮರೆಸಲು ಕೋಮುವಿಷವನ್ನು ಅರಿವಳಿಕೆಯ ರೂಪದಲ್ಲಿ ಬಳಸತೊಡಗಿದರು.

ಇದು, ಕಳೆದ ಐದು ವರ್ಷಗಳ ಅವಧಿಯಲ್ಲಿನ ಕರ್ನಾಟಕದ ಚಿತ್ರ. ಬಹುತ್ವದ ಕರ್ನಾಟಕ ‘ಕೋಮು ಕರ್ನಾಟಕ’ದ ಪೋಷಾಕು ತೊಟ್ಟಾಗಿನ ಚಿತ್ರ. ಈ ‘ಬದಲಾದ ಕರ್ನಾಟಕ’ಕ್ಕೆ ವಿರೋಧ ಸೂಚಿಸುವ ರೂಪದಲ್ಲಿ, ಆಕ್ರೋಶದ ರೂಪದಲ್ಲಿ ಪ್ರಸಕ್ತ ಜನಾದೇಶವನ್ನು ನೋಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ‘ಬಡವರ ನಗುವಿನ ಶಕ್ತಿ’ಗೆ ಗದ್ದುಗೆಗಳಲ್ಲಿರುವವರನ್ನು ಬದಲಿಸುವ ಶಕ್ತಿಯಿರುವುದನ್ನು ಈ ಜನಾದೇಶ ಮತ್ತೆ ನೆನಪಿಸಿದೆ.

‘ಗುಡಿಯೊಳಗೆ ಗಣಣ, ಮಹಡಿಯೊಳಗೆ ತನನ, ಅಂಗಡಿಯೊಳಗೆ ಝಣಣಣ ನುಡಿಗೊಡು’ತಿದ್ದ ‘ಕುರುಡು ಕಾಂಚಾಣ’ ಕುಣಿತ ಕೊನೆಗೊಂಡಿದೆ. ಹ್ಯಾಂಗಾರೆ ಕುಣಿಕುಣಿದು, ಮಂಗಾಟ ನಡೆದಾಗ, ‘ಅಂಗಾತ ಬಿತ್ತೋ ಹೆಗಲಲಿ ಎತ್ತೋ’ ಎನ್ನುತ್ತಾರೆ ಕವಿ ದ.ರಾ.ಬೇಂದ್ರೆ. ಮುಂದೇನು? 

ನಿಕಟಪೂರ್ವ ಸರ್ಕಾರ ಎಸಗಿದ ತಪ್ಪುಗಳನ್ನು ಹೊಸದಾಗಿ ಅಧಿಕಾರಕ್ಕೆ ಬಂದವರು ಪಠ್ಯದ ರೂಪದಲ್ಲಿ ನೋಡಬೇಕು. ಏನನ್ನು ಮಾಡಬೇಕು ಎನ್ನುವುದಕ್ಕಿಂತ, ಏನನ್ನು ಮಾಡಬಾರದು ಎನ್ನುವ ಅರಿವು ಜನಪ್ರತಿನಿಧಿಗಳಿಗೆ ಅಗತ್ಯ. ಆಶೋತ್ತರಗಳಿಗೆ ಸ್ಪಂದಿಸುವ ಭರವಸೆ ನೀಡಿ, ಜನರ ಮನಸ್ಸು ಒಲಿಸಿಕೊಂಡವರು, ತಾವೇ ‘ಕುರುಡು ಕಾಂಚಾಣ’ಗಳಾಗದಂತೆ ಎಚ್ಚರ ವಹಿಸಬೇಕು.

ಇದು ಪರಿಷ್ಕರಣೆಯ ಕಾಲ. ಶೈಕ್ಷಣಿಕ ಪಠ್ಯಗಳೊಂದಿಗೆ ಸಾಮಾಜಿಕ ಪಠ್ಯಗಳೂ ಪರಿಷ್ಕಾರಗೊಳ್ಳಬೇಕಾದ ಕಾಲ. ಮುಖ್ಯವಾಗಿ, ಅಧಿಕಾರ, ದರ್ಪ, ಭ್ರಷ್ಟಾಚಾರದೊಂದಿಗೆ ಮಿಳಿತಗೊಂಡ ರಾಜಕಾರಣದ ವ್ಯಾಖ್ಯೆಯನ್ನು ಪರಿಷ್ಕರಿಸಿ, ಅದನ್ನು ಮಾನವೀಯಗೊಳಿಸಬೇಕಾದ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT