ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಘುನಾಥ ಚ.ಹ ಅಂಕಣ-ಪಡಸಾಲೆ| ಧರ್ಮ: ಅಂತಃಕರಣ ಮತ್ತು ಅಂತಃಕಲಹ

ಔದಾರ್ಯ, ಹೃದಯವೈಶಾಲ್ಯದ ಧರ್ಮಕ್ಕೆ ಉತ್ಪಾತ ಮತ್ತು ವಿಷವೆನ್ನುವ ಅರ್ಥಗಳೂ ಇವೆ
Last Updated 28 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಜಾತ್ರೆಗಳಲ್ಲಿನ ವ್ಯಾಪಾರ ವಹಿವಾಟಿನಿಂದ ಮುಸ್ಲಿಮರನ್ನು ದೂರವಿಡುವ ಹಾಗೂಹಿಜಾಬ್‌ ನೆಪದಲ್ಲಿ ಶಾಲಾ ಮಕ್ಕಳಲ್ಲಿ ಬಿರುಕು ಮೂಡಿಸುವ ಪ್ರಯತ್ನಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ, ಸ್ವಾತಂತ್ರ್ಯ ಚಳವಳಿ ದಿನಗಳಲ್ಲಿ ಗಾಂಧೀಜಿ ಹೊರಡಿಸಿದ್ದಕರಪತ್ರವೊಂದನ್ನು ನೆನಪಿಸಿಕೊಳ್ಳಬೇಕು. ಆ ಕರಪತ್ರದ ಸಾರಾಂಶ:

ರಘುನಾಥ ಚ.ಹ
ರಘುನಾಥ ಚ.ಹ

‘ಹಿಂದೂ ಮತ್ತು ಮುಸ್ಲಿಮರಾದ ನಾವು ಒಂದೇ ತಾಯಿಯ ಮಕ್ಕಳೆನ್ನುವಂತೆ ದೇವರ ಸಾಕ್ಷಿಯಾಗಿ ನಡೆದು
ಕೊಳ್ಳುತ್ತೇವೆ. ಒಬ್ಬರ ಕಷ್ಟಗಳನ್ನು ಮತ್ತೊಬ್ಬರದೆಂದು ತಿಳಿದು ಪರಸ್ಪರ ನೆರವಾಗುತ್ತೇವೆ. ನಾವು ಪರಸ್ಪರರ ಧರ್ಮ ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಧರ್ಮದ ಹೆಸರಿನಲ್ಲಿ ಎಂದಿಗೂ ಹಿಂಸಾಚಾರದಲ್ಲಿ ತೊಡಗುವುದಿಲ್ಲ.’

ಇಡೀ ಸಮಾಜ ಕಣ್ಣಿಗೆ ಕಾಣುವಂತೆ ಎರಡು ಹೋಳುಗಳಾಗಿ ಒಡೆದಿರುವ ಸನ್ನಿವೇಶದಲ್ಲಿ ಗಾಂಧೀಜಿ ಹೇಳಿದಂತೆ ಯಾರೊಬ್ಬರೂ ‘ನಾವೆಲ್ಲ ಒಂದೇ ತಾಯಿಯ ಮಕ್ಕಳು’ ಎಂದು ಹೇಳದಿರುವುದಕ್ಕೆ ಆಶ್ಚರ್ಯ
ಪಡುವುದೋ ವಿಷಾದಿಸುವುದೋ ತಿಳಿಯದು. ಹಾಗೆ ಹೇಳಬಹುದಾಗಿದ್ದ ಬರಹಗಾರರಲ್ಲಿ ಹಲವರು ವಿಚಿತ್ರ ಸಂಭ್ರಮದಲ್ಲಿ ಕಳೆದುಹೋಗಿದ್ದಾರೆ, ಉಳಿದವರು ವಿಷಣ್ಣತೆಯಲ್ಲಿ ಹುದುಗಿಹೋಗಿದ್ದಾರೆ. ಧಾರ್ಮಿಕ ಸಾಮರಸ್ಯದ ಬಗ್ಗೆ ಅರಿವು ಮೂಡಿಸಬೇಕಾದ ಕರ್ತವ್ಯವನ್ನು ನಾಡಿನ ಮಠಾಧೀಶರು ಬಿಟ್ಟುಕೊಟ್ಟು ಬಹಳ ಕಾಲವಾಗಿದೆ. ಉಳಿದವರು ರಾಜಕಾರಣಿಗಳು. ಬರಹಗಾರರು, ಕಲಾವಿದರು, ಮಠಾಧೀಶರು ತಮ್ಮ ಬದ್ಧತೆಯಿಂದ ವಿಮುಖರಾದರೂ ರಾಜಕಾರಣಿಗಳು ಮಾತ್ರ ಸಾಮರಸ್ಯದ ಮಾರ್ಗಕ್ಕೆ ಬೆನ್ನುಹಾಕುವಂತಿಲ್ಲ. ಎಲ್ಲ ವರ್ಗದವರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಂವಿಧಾನದ ಅಂಕುಶ ಅವರಿಗಿದೆ. ದುರದೃಷ್ಟವಶಾತ್‌, ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ರಾಜಕಾರಣಿಗಳೇ ಹುಳಿ ಹಿಂಡುವ ಕೆಲಸ ಮಾಡುತ್ತಿರುವುದು.

ಹಿಂದೂ ಧರ್ಮದ ರಕ್ಷಣೆ, ಜಾಗೃತಿಯ ಕುರಿತು ಹೆಮ್ಮೆಯಿಂದ ಮಾತನಾಡುವುದು ಇಂದಿನ ರಾಜಕಾರಣದ ಫ್ಯಾಷನ್‌ ಆಗಿಹೋಗಿದೆ. ಮಠಾಧೀಶರು ಮಾಡಬೇಕಾದ ಧರ್ಮ ಸಂರಕ್ಷಣೆಯ ಕೆಲಸವನ್ನು ರಾಜಕಾರಣಿಗಳೂ ರಾಜಕಾರಣಿಗಳು ಮಾಡಬೇಕಾದ ಆಡಳಿತದ ಸೂತ್ರಗಳನ್ನು ಮಠಾಧೀಶರೂ ವಹಿಸಿ ಕೊಂಡಂತಿರುವ ವಿಚಿತ್ರ ಸನ್ನಿವೇಶ ಇಂದಿನದು.

ರೋಮ್‌ ತತ್ವಜ್ಞಾನಿ ಲೂಸಿಯಸ್ ಅನೆಯುಸ್, ‘ಧರ್ಮವೆನ್ನುವುದು ಸಾಮಾನ್ಯರ ಪಾಲಿಗೆ ಸತ್ಯ. ಬುದ್ಧಿವಂತ
ರಿಗದು ಮಿಥ್ಯೆ. ಆಡಳಿತಗಾರರಿಗೆ ಉಪಯುಕ್ತವಾದುದು’ ಎಂದಿದ್ದಾರೆ. ಧರ್ಮ ಹಾಲು ಕರೆಯುವ ಹಸುವಾಗಿರುವುದು ಲೂಸಿಯಸ್‌ ಮಾತಿಗೆ ಸಮರ್ಥನೆಯಂತಿದೆ. ಬದುಕಲು ಬಲ್ಲ ಬುದ್ಧಿವಂತರು ಕೂಡ ಆಡಳಿತಗಾರರ ಜೊತೆ ಸೇರಿಕೊಂಡು ಜನಸಾಮಾನ್ಯರ ದಿಕ್ಕುತಪ್ಪಿಸುತ್ತಿದ್ದಾರೆ.

ಧರ್ಮನಿರಪೇಕ್ಷತೆ ಹಾಗೂ ಜಾತ್ಯತೀತ ರೀತಿಯ ಪದಗಳಿಗೆ ಕಿವುಡಾಗಿರುವ ಹಾಗೂ ಮಾತಿಗೊಮ್ಮೆ ದೇಶದ್ರೋಹ– ಧರ್ಮದ್ರೋಹದ ಕತ್ತಿ ಝಳಪಿಸುವ ರಾಜಕಾರಣಿಗಳೊಂದಿಗೆ ಸಂವಾದ ನಡೆಸುವುದು ಭಗವಂತನಿಗೂ ಅಸಾಧ್ಯ. ಅವರ ಕಿವುಡುತನಕ್ಕೆ ಕಾಲವೇ ಮದ್ದರೆಯಬೇಕು. ಜಾತ್ಯತೀತ ಭಾರತದ ಬಗ್ಗೆ ಮಾತನಾಡುವ ರಾಜಕಾರಣಿಗಳಾದರೂ ರಚನಾತ್ಮಕ ವಾದ ಏನನ್ನಾದರೂ ಮಾಡುತ್ತಿದ್ದಾರೆಯೇ ಎಂದು ನೋಡಿದರೆ, ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಅಲ್ಪಸಂಖ್ಯಾತರ ಹಿತಾಸಕ್ತಿಯ ಬಗ್ಗೆ ಮಾತನಾಡುವ ರಾಜಕಾರಣಿಗಳಿಗೆ ಬಡ ಮುಸ್ಲಿಂ ವ್ಯಾಪಾರಿಗಳ ಬಗ್ಗೆ ನಿಜವಾದ ಸಹಾನುಭೂತಿ ಇದ್ದಲ್ಲಿ, ಶಿವಮೊಗ್ಗದ ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮರ ಪರವಾಗಿ ಸತ್ಯಾಗ್ರಹ ಮಾಡಬೇಕಾಗಿತ್ತು. ಅನ್ಯಾಯದ ವಿರುದ್ಧ ಉಪವಾಸ ಕೂರಬೇಕಾಗಿತ್ತು.

ಗಾಂಧಿಯ ಬಗ್ಗೆ ಈಗಲೂ ಮಾತನಾಡುವ ಜನ ಗಾಂಧಿಯಿಂದ ಏನನ್ನೂ ಕಲಿತಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷವಿದು. ಭಾರತದ ಸ್ವಾತಂತ್ರ್ಯ ಸಾಧನೆಯ ಹಿಂದಿರುವ ಹಿಂದೂ ಮುಸ್ಲಿಂ ಸಾಮರಸ್ಯದ ಕಥನಗಳನ್ನು ದೇಶದ ಯುವಜನತೆಗೆ ಪರಿಚಯಿಸುವ ಕೆಲಸ ಮಾಡಬೇಕಿತ್ತು. ಆದರೆ, ಆಗುತ್ತಿರುವುದು ಒಡಕಿನ ಕಥೆಗಳ ಪ್ರಚಾರ. ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎನ್ನುವ ಪರಿಕಲ್ಪನೆಯೊಂದನ್ನು ಕರ್ನಾಟಕದ ಮುಖ್ಯಮಂತ್ರಿ ದೇಶಕ್ಕೆ ಪರಿಚಯಿಸಿದ್ದಾರಷ್ಟೇ. ಆ ಮಾತನ್ನು– ಕ್ರಿಯೆ ಆಡಳಿತ ಪಕ್ಷದ ಕೆಲಸ, ಪ್ರತಿಕ್ರಿಯೆ ಪ್ರತಿಪಕ್ಷಗಳ ಕೆಲಸ ಎಂದು ಕಾಂಗ್ರೆಸ್‌ ನಾಯಕರು ಭಾವಿಸಿದಂತಿದೆ.

ಗಾಂಧೀಜಿಯ ಸತ್ಯಾಗ್ರಹ ಪರಿಕಲ್ಪನೆ ಜನಪ್ರಿಯವಾಗಿದ್ದ ದಿನಗಳಲ್ಲಿ, ಶ್ರೀರಾಮನವಮಿ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ಕೂಡ ಕೆಲವೆಡೆಗಳಲ್ಲಿ ಹಬ್ಬ ಆಚರಿಸುತ್ತಿದ್ದುದನ್ನು ಹಾಗೂ ಆ ಸಂದರ್ಭಗಳಲ್ಲಿ ಮೊಳಗುತ್ತಿದ್ದ ಘೋಷಣೆಗಳಲ್ಲಿ ‘ಹಿಂದೂ ಮುಸಲ್ಮಾನ್‌ ಕೀ ಜೈ’ ಸೇರಿರುತ್ತಿದ್ದುದನ್ನು ಗಾಂಧಿ ಇತಿಹಾಸಕಾರ ರಾಮಚಂದ್ರ ಗುಹಾ ದಾಖಲಿಸಿದ್ದಾರೆ. ಈಗಿನ ಸಂದರ್ಭ ತದ್ವಿರುದ್ಧ: ಹಿಂದೂಗಳಿಗೆ ಜೈ ಎಂದರವನು ದೇಶಭಕ್ತ, ಮುಸಲ್ಮಾನರಿಗೂ ಜೈ ಎಂದವನು ದೇಶದ್ರೋಹಿ. ಭಾರತ ದಲ್ಲಿರುವ ಮುಸಲ್ಮಾನರು ಕೂಡ ಭಾರತೀಯರೇ, ಅವರಿಗೆ ಈ ದೇಶಕ್ಕೆ ಸಂಬಂಧಿಸಿದಂತೆ ಹಿಂದೂಗಳಷ್ಟೇ ಹಕ್ಕುಬಾಧ್ಯತೆಗಳಿವೆ ಎನ್ನುವುದನ್ನು ಒಪ್ಪದಿರುವಷ್ಟರ ಮಟ್ಟಿಗೆ ನಮ್ಮಲ್ಲಿ ಅನೇಕರ ‘ಧರ್ಮಪ್ರಜ್ಞೆ’ ಜಡವಾಗಿದೆ.

ಧರ್ಮದ ಬಗ್ಗೆ ಮಾತನಾಡುವ ರಾಜಕಾರಣಿಗಳಿಗೆ ಧರ್ಮದ ಅರ್ಥಸಾಧ್ಯತೆಗಳೇ ತಿಳಿದಂತಿಲ್ಲ. ಅವರ ಪಾಲಿಗೆ ಧರ್ಮವೆಂದರೆ ಹಿಂದೂ ಧರ್ಮ ಮಾತ್ರ. ಆದರೆ, ನಮ್ಮ ಪೂರ್ವಸೂರಿಗಳು ಧರ್ಮಕ್ಕೆ ಹಚ್ಚಿರುವ ಅರ್ಥಗಳು ಒಂದೆರಡಲ್ಲ. ದಾನ, ಔದಾರ್ಯ, ಹೃದಯವೈಶಾಲ್ಯ, ದಾನಶೀಲತೆ, ನ್ಯಾಯ, ನಿಷ್ಠೆ, ಶ್ರದ್ಧೆ, ದರ್ಶನ, ದಯೆ, ಕರುಣೆಯಂಥ ಹಲವು ಗುಣ ಹಾಗೂ ಮೌಲ್ಯಗಳನ್ನು ‘ಧರ್ಮ’ ಧ್ವನಿಸುತ್ತದೆ. ಈ ಧರ್ಮಕ್ಕೆ ಉತ್ಪಾತ ಮತ್ತು ವಿಷ ಎನ್ನುವ ಅರ್ಥಗಳೂ ಇವೆ. ಸದ್ಯಕ್ಕೆ ರಾಜಕಾರಣಿಗಳು ಪ್ರತಿನಿಧಿಸುತ್ತಿರುವುದು ಕೊನೆಯ ಎರಡು ಸಂಗತಿಗಳನ್ನಷ್ಟೇ. ತಮಗೂ ಒಂದು ಧರ್ಮವಿದೆ ಎನ್ನುವುದೇ ರಾಜಕಾರಣಿಗಳಿಗೆ ತಿಳಿದಂತಿಲ್ಲ. ಅದು ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ ಧರ್ಮವಲ್ಲ. ಪ್ರಜೆಗಳನ್ನೆಲ್ಲ ಅಂತಃಕರಣದಿಂದ ನೋಡುವ ‘ರಾಜಕಾರಣ ಧರ್ಮ’ವದು.

ಆಪತ್ತಿನಲ್ಲಿ ಇರುವವರ ನೆರವಿಗೆ ಒದಗುವುದೇ ಧರ್ಮ; ದಯೆ ಧರ್ಮದ ಮೂಲ ಸೆಲೆ ಎನ್ನುತ್ತದೆ ಕನ್ನಡ ಜನಪದ. ‘ಕೊಲ್ಲದಿರ್ಪುದೆ ಧರ್ಮ. ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ’ ಎನ್ನುವುದು ವಚನಕಾರ ಸೊಡ್ಡಳ ಬಾಚರಸನ ಉದ್ಗಾರ. ದಯೆಯೇ ಧರ್ಮದ ಮೂಲವೆಂದ ಬಸವಣ್ಣನವರು, ದಯವಿಲ್ಲದ ಧರ್ಮ ಯಾವುದೆಂದು ಪ್ರಶ್ನಿಸಿದರು. ಬಸವಣ್ಣನವರ ವಾರಸುದಾರರೆಂದು ಬೀಗುವವರು, ತಮ್ಮ ಧರ್ಮಾಚರಣೆಯಲ್ಲಿ ದಯೆಯ ಲವಲೇಶವಾದರೂ ಇದೆಯೇ ಎನ್ನುವುದನ್ನು ವಿಶ್ಲೇಷಿಸಿಕೊಳ್ಳಬೇಕು. ಧರ್ಮಕ್ಕೆ ಬದ್ಧನಾದವನು ಇನ್ನೊಬ್ಬರತ್ತ ಬೆರಳು ತೋರುವುದಿಲ್ಲ. ಬಹಿರಂಗದ ಹುಳುಕು ಅಂತರಂಗದ ರಾಡಿಗೆ ಸಮರ್ಥನೆಯಾಗಬಾರದು. ಬಸವಣ್ಣನ ಮಾತೇ ದಲೈಲಾಮಾ ಅವರದೂ. ದಯೆಯೆನ್ನುವ ನಮ್ಮದು ಸರಳವಾದ ಧರ್ಮ ಎನ್ನುವ ವ್ಯಾಖ್ಯಾನ ಅವರದು.

‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ಇಷ್ಟಪಡುತ್ತೇನೆ’ ಎಂದಿದ್ದರು ಅಂಬೇಡ್ಕರ್‌. ಈ ಮೂರು ಗುಣಗಳಲ್ಲಿ ಒಂದಾದರೂ ಪ್ರಸ್ತುತ ಚಲಾವಣೆಯಲ್ಲಿರುವ ‘ಧರ್ಮ’ದಲ್ಲಿದೆಯೇ? ಮತ್ತೊಂದು ಧರ್ಮದೊಂದಿಗಿನ ಅನುಸಂಧಾನದ ಮಾತಿರಲಿ– ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ತನ್ನೊಳಗೇ ಸಾಧಿಸುವುದು ಹಿಂದೂ ಧರ್ಮಕ್ಕೆ ಸಾಧ್ಯವಾಗಿಲ್ಲ. ಹಿಂದೂ ಮಾತ್ರವಲ್ಲ, ಪೂರ್ಣ ಪ್ರಮಾಣದಲ್ಲಿ ಮಾನವೀಯವಾಗುವುದು ಯಾವ ಧರ್ಮಕ್ಕೂ ಸಾಧ್ಯವಾಗಿಲ್ಲ. ಹಾಗಾಗಿ, ತಂತಮ್ಮ
ಧರ್ಮಗಳಲ್ಲಿನ ರಾಡಿಯನ್ನು ತಿಳಿಗೊಳಿಸುವುದು ಆಯಾ ಧರ್ಮೀಯರ ಮೊದಲ ಕರ್ತವ್ಯವಾಗಬೇಕು. ಇನ್ನೊಂದು ಧರ್ಮವನ್ನು ನಾವು ಅಸಹನೆಯಿಂದ ಕಾಣುವುದಾದರೆ, ಒಂದೋ ನಾವು ನಂಬಿದ ಧರ್ಮದೊಳಗೇ ಏನೋ ಐಬಿರಬೇಕು ಇಲ್ಲವೇ ಆ ಧರ್ಮದ ಕುರಿತ ನಮ್ಮ ಗ್ರಹಿಕೆಯಲ್ಲೇ ಲೋಪವಿರಬೇಕು.

ದುರ್ಬಲರು, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನ ವಿಶೇಷ ಕಾಳಜಿಯನ್ನು ತೋರುತ್ತದೆ. ಗಾಂಧೀಜಿ, ಅಂಬೇಡ್ಕರ್‌, ದಲೈಲಾಮಾ ಪ್ರತಿಪಾದಿಸುವ ಧರ್ಮದ ಕಾಳಜಿಯೂ ಇದೇ. ಸಮಸ್ಯೆ ಇರುವುದು ಧರ್ಮದಲ್ಲಲ್ಲ; ಅದರ ಆಚರಣೆ ಮತ್ತು ವ್ಯಾಖ್ಯಾನದಲ್ಲಿ. ಧರ್ಮದ ಅಂತರಂಗದಲ್ಲಿ ಅಂತಃ
ಕರಣಕ್ಕೆ ಅವಕಾಶ ಇರಬೇಕೇ ವಿನಾ ಕಾಲಕೂಟಕ್ಕಲ್ಲ. ಇಂದಿನ ತುರ್ತು, ಧರ್ಮದ ರಕ್ಷಣೆಯಲ್ಲ; ಮನುಷ್ಯ ರನ್ನು, ಮಾನವೀಯತೆಯನ್ನು ಉಳಿಸಿಕೊಳ್ಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT