ನ.19ರ ಕಾರ್ತೀಕ ಏಕಾದಶಿ: ಪಂಢರಪುರದತ್ತ ಪಾದಯಾತ್ರಿಗಳ ದಿಂಡಿ...

7
ಎಲ್ಲೆಲ್ಲೂ ವಿಠ್ಠಲನ ನಾಮಸ್ಮರಣೆ

ನ.19ರ ಕಾರ್ತೀಕ ಏಕಾದಶಿ: ಪಂಢರಪುರದತ್ತ ಪಾದಯಾತ್ರಿಗಳ ದಿಂಡಿ...

Published:
Updated:
Deccan Herald

ದೀಪಾವಳಿ ಸಂಭ್ರಮ ಮುಗಿದಿದೆ. ಬೆನ್ನಿಗೆ ಕಾರ್ತೀಕ ಮಾಸ ಆರಂಭಗೊಂಡಿದ್ದು, ಏಕಾದಶಿಗಾಗಿ ಪಂಢರಪುರದ ವಿಠ್ಠಲನ ಭಕ್ತರು ಕಾತರದಿಂದ ಕಾದಿದ್ದಾರೆ.

ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಪಾಂಡುರಂಗನ ಭಕ್ತ ಸಮೂಹ ಈಗಾಗಲೇ ತಮ್ಮ ದಿಂಡಿ ಯಾತ್ರೆ ಆರಂಭಿಸಿದ್ದು, ದಿಂಡಿಗಳು ವಿಜಯಪುರ ಜಿಲ್ಲೆ ಪ್ರವೇಶಿಸಿವೆ. ಕಾಲ್ನಡಿಗೆಯಲ್ಲೇ ಪಂಢರಪುರಕ್ಕೆ ದಿಂಡಿ ಯಾತ್ರೆ ಸಾಗಲಿದೆ.

ಆಷಾಢ ಏಕಾದಶಿ ಸಂದರ್ಭ ನಡೆಯುವ ದಿಂಡಿ ಯಾತ್ರೆಯ ಸಂಖ್ಯೆಯಷ್ಟು ದಿಂಡಿಗಳು ಪಂಢರಪುರಕ್ಕೆ ತೆರಳದಿದ್ದರೂ; ಕಾರ್ತೀಕ ಮಾಸದಲ್ಲೂ ಅಸಂಖ್ಯ ದಿಂಡಿಗಳು ಜಿಲ್ಲೆಯ ಮೂಲಕ ಹಾದು ಹೋಗುವ ಚಿತ್ರಣ ಇದೀಗ ಎಲ್ಲೆಡೆ ಗೋಚರಿಸುತ್ತಿದೆ.

*****

ನವೆಂಬರ್ ಎರಡನೇ ವಾರ. ಚಳಿಯೂ ಕೊಂಚ ಕೊಂಚ ಹೆಚ್ಚುತ್ತಿದೆ. ಮಧ್ಯಾಹ್ನ ನೆತ್ತಿ ಸುಡುವ ಬಿಸಿಲು ಕಾದರೆ, ಮುಸ್ಸಂಜೆಯ ಇಳಿಹೊತ್ತಲ್ಲೇ ಮೈಮನಕ್ಕೆ ತಂಪು ನೀಡುವ ತಂಪನೆ ವಾತಾವರಣ. ಇದ್ಯಾವುದಕ್ಕೂ ಲೆಕ್ಕಿಸದೆ ವಿಠ್ಠಲನ ನಾಮಸ್ಮರಣೆಯೊಂದಿಗೆ ಕಾರ್ತೀಕ ಏಕಾದಶಿಯಂದು ರಂಗನ ದರ್ಶನಕ್ಕಾಗಿ ಅಸಂಖ್ಯಾತ ಭಕ್ತ ಸಮೂಹ ಕಾಲ್ನಡಿಗೆಯಲ್ಲಿ ಸಾಗುತ್ತಿದೆ.

ಪಾಡ್ಯ ಕಳೆಯುತ್ತಿದ್ದಂತೆ ವಿಜಯಪುರ ಜಿಲ್ಲೆ ಪ್ರವೇಶಿಸುವ ಪಾದಯಾತ್ರಿಗಳ ತಂಡದ ಸಂಖ್ಯೆ ಹೆಚ್ಚಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಧಾರವಾಡ, ಬಾಗಲಕೋಟೆ ಸೇರಿದಂತೆ ಇತರೆ ಜಿಲ್ಲೆಗಳ ವಿಠ್ಠಲನ ಭಕ್ತರು ತಮ್ಮೂರುಗಳಿಂದ ತಂಡೋಪ ತಂಡವಾಗಿ ತೆರಳುತ್ತಿದ್ದಾರೆ.

ರಾಜ್ಯದ ಗಡಿ ಜಿಲ್ಲೆಯಾದ ವಿಜಯಪುರ ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳು ಇದೀಗ ಪಂಢರಪುರ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿವೆ. ಹೊರ ಜಿಲ್ಲೆಗಳಿಂದ ಬರುವ ಅಪಾರ ಸಂಖ್ಯೆಯ ಪಾದಯಾತ್ರಿಗಳ ತಂಡ ಜಿಲ್ಲೆಯ ಮೂಲಕ ನೆರೆಯ ಮಹಾರಾಷ್ಟ್ರ ಪ್ರವೇಶಿಸಲು ಸಜ್ಜಾಗಿವೆ.

ನೂತನ ದಿಂಡಿ

‘ಹತ್ತು ವರ್ಷದಿಂದ ದಿಂಡಿ ಯಾತ್ರೆ ನಡೆಸುತ್ತಿದ್ದೇವೆ. ಈ ಬಾರಿ ಪಾಂಡುರಂಗನ ಪ್ರೇರಣೆಯಿಂದ ನಮ್ಮದೇ ಹೊಸ ದಿಂಡಿ ಮಾಡಿಕೊಂಡಿದ್ದೇವೆ. ಅ.21ರಂದು ನಮ್ಮೂರು ಬಿಟ್ಟಿದ್ದೇವೆ. ಮೂರು ಊರಿನ 50 ಮಂದಿಯಿದ್ದೇವೆ. ನ.16ರಂದು ಪಂಢರಪುರ ಪ್ರವೇಶಿಸುತ್ತೇವೆ’ ಎಂದು ಖುಷಿಯಿಂದ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ವೆಂಕಟೇಶಪುರ (ತಾಂಡ), ಗೌಡಿಕಟ್ಟೆ, ಎನ್‌.ಶೀರನಹಳ್ಳಿಯ ವಿಠ್ಠಲನ ಭಕ್ತರು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮೂರಿನಿಂದ ಪಂಢರಪುರ 400 ಕಿ.ಮೀ. ದೂರವಾಗುತ್ತೆ. ನಿತ್ಯವೂ 20–22 ಕಿ.ಮೀ. ನಡೆಯುತ್ತೇವೆ. ಊರಿನಿಂದಲೇ ಸಜ್ಜಾಗಿ ಬಂದಿದ್ದೇವೆ. ಇಷ್ಟು ದೂರ ಬಂದರೂ ನಮಗೆ ಯಾವ ತೊಂದರೆಯಾಗಿಲ್ಲ. ಪಾಂಡುರಂಗನ ಕೃಪೆಯಿಂದ ಎಲ್ಲವೂ ನಿರಾತಂಕವಾಗಿ ನಡೆದಿದೆ’ ಎಂದು ದಿಂಡಿಯ ಪ್ರಮುಖ ಹನುಮಂತನಾಯ್ಕ ಹೇಳಿದರು.

ದಿಂಡಿಯ ದಿನಚರಿ

ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೂ ವಿಠ್ಠಲನ ನಾಮಸ್ಮರಣೆಯೊಂದಿಗೆ ಪಾದಯಾತ್ರೆ. ಮಧ್ಯಾಹ್ನ 1.30ರಿಂದ ಗೌಡಿಕಟ್ಟೆಯ ವೆಂಕಟೇಶ್‌ ಪಾಂಡುರಂಗನ ಲೀಲಾವಳಿ ಕುರಿತಂತೆ ಪ್ರವಚನ ನೀಡಲಿದ್ದಾರೆ. ಪ್ರಸಾದದ ಬಳಿಕ ಕೊಂಚ ಹೊತ್ತು ವಿಶ್ರಾಂತಿ.

ಮಧ್ಯಾಹ್ನ 2.30ಕ್ಕೆ ಮತ್ತೆ ದಿಂಡಿಯ ಪಯಣ. ಸಂಜೆ ನಾಲ್ಕು ಗಂಟೆಯವರೆಗೂ ನಾಮಸ್ಮರಣೆ. 4ರಿಂದ 5 ಗಂಟೆಯ ತನಕ ಹರಿ ಪಾಠ, ವಾಸ್ತವ್ಯದ ನಿಗದಿತ ಸ್ಥಳ ತಲುಪುತ್ತಿದ್ದಂತೆ ಯಾತ್ರೆ ಸ್ಥಗಿತ. ಕೊಂಚ ಹೊತ್ತು ವಿಶ್ರಾಂತಿ. ನಂತರ ಕೀರ್ತನೆ.

ರಾತ್ರಿ ಒಂಭತ್ತಕ್ಕೆ ಪ್ರಸಾದ. 10ಗಂಟೆಗೆ ನಿದ್ದೆ. ನಸುಕಿನಲ್ಲೇ ಎಚ್ಚರ. ನಿತ್ಯ ಕರ್ಮಗಳ ಪೂರೈಸುವಿಕೆ. ಮತ್ತೆ ಎಂದಿನಂತೆ ಭಜನೆ, ಕೀರ್ತನೆ, ನಾಮಸ್ಮರಣೆ... ಉಪಾಹಾರ ಮುಗಿಸಿಕೊಂಡು ದಿಂಡಿಯಾತ್ರೆ ಆರಂಭವಾಗುವುದು ಎಂದು ದಿಂಡಿಯ ಹವಾಲ್ದಾರ್ ಮಾರುತಿ ಮಾಹಿತಿ ನೀಡಿದರು.

ಪಂಢರಪುರದಲ್ಲಿ ಏಕಾದಶಿಯ ಮುನ್ನಾ ದಿನಗಳಲ್ಲೇ ಬೃಹತ್‌ ಪ್ರಮಾಣದಲ್ಲಿ ಸಮಾವೇಶಗೊಳ್ಳುವ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ನಾನಾ ಭಾಗದ ಭಕ್ತರು ಇಡೀ ರಾತ್ರಿ ಜಾಗರಣೆ ನಡೆಸುತ್ತಾರೆ. ಏಕಾದಶಿಯಂದು ವಿಠ್ಠಲ–ರುಕ್ಮಿಣಿ ಶಿಲಾ ಮೂರ್ತಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸುತ್ತಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !