ಶನಿವಾರ, ಸೆಪ್ಟೆಂಬರ್ 26, 2020
21 °C

ಡಾ.ಶಿವಮೂರ್ತಿ ಮುರುಘಾ ಶರಣರ ಲೇಖನ | ವಾಸ್ತವಿಕ, ಅವಾಸ್ತವಿಕದ ನಡುವೆ...

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

ವಾಸ್ತವಿಕ, ಅವಾಸ್ತವಿಕದ ನಡುವೆ

ದೃಢತೆಯಿಂದ ಗಟ್ಟಿ ಬದುಕು ಪ್ರಾಪ್ತವಾಗುತ್ತದೆ. ಭೌತಿಕ ನಿಲುವು ಸಾಧ್ಯವಾಗುತ್ತದೆ. ಆದರೆ ಸೈದ್ಧಾಂತಿಕ ನಿಲುವು ಅಷ್ಟು ಸುಲಭವಲ್ಲ. ಆದ್ದರಿಂದ ಮಾನವ ಅವಾಸ್ತವಿಕ ಬದುಕಿನತ್ತ ವಾಲುತ್ತಾನೆ. ಅದು ಮಾನವನ ಬದುಕಿನ ಗಂಭೀರ ಸ್ಥಿತಿ. ಏಕೆಂದರೆ, ಅವಾಸ್ತವಿಕ ಬದುಕಿನಲ್ಲಿ ಕೃತ್ರಿಮತೆ ಹೆಚ್ಚು. ನಡೆ-ನುಡಿ ಕೃತ್ರಿಮವಾಗುತ್ತದೆ. ಕೃತ್ರಿಮತೆಯು ಬದುಕನ್ನು ಅಸಹನೀಯವಾಗಿಸುತ್ತದೆ; ಯಾಂತ್ರಿಕತೆಯತ್ತ ಕರೆದೊಯ್ಯುತ್ತದೆ. ಯಾರು ಯಾಂತ್ರಿಕ ವರ್ತನೆಗೆ ಒಳಗಾಗುತ್ತಾರೋ ಅಂತಹವರ ನಡೆ ನಾಟಕೀಯ ಅನಿಸಿಕೊಳ್ಳುತ್ತದೆ. ನಾಟಕೀಯತೆಯ ಮುಂದಿನ ಹಂತವೇ ಕ್ರೋಧ ಮತ್ತು ಕ್ಷುದ್ರತೆ.

ಜೀವನದಲ್ಲಿ ನಮಗೆ ಹೊಂದುವಂತಹದ್ದೂ ಇರುತ್ತದೆ, ಹೊಂದದೇ ಇರುವಂತಹದ್ದೂ ಇರುತ್ತದೆ. ಅವಾಸ್ತವಿಕದ ವಿರುದ್ಧವಾಗಿ ವಾಸ್ತವಿಕ. ವಾಸ್ತವಿಕವು ಸಹಜತೆಯತ್ತ ಕೊಂಡೊಯ್ಯುತ್ತದೆ. ಸಹಜವಾದ ಇರುವಿಕೆಗೆ ಆಸ್ಪದ ನೀಡುತ್ತದೆ. ಮುಖಭಾವದಲ್ಲಾಗಲೀ ಚಲನವಲನದಲ್ಲಾಗಲೀ ಸಿನಿಕತನ ಕಾಣಬರುವುದಿಲ್ಲ. ಸಹಜತೆ ಎಂಬುದು ಒಂದು ಮೌಲ್ಯ. ಸಂತರು, ಶರಣರು, ಶಿವಯೋಗಿಗಳು, ಆದರ್ಶ ಪುರುಷರು ಸಹಜತೆಯ ತಳಹದಿಯ ಮೇಲೆ ಬದುಕನ್ನು ನಡೆಸುತ್ತಾರೆ. ಅಸಹಜತೆಯ ಮೇಲಿನ ಸೌಧವು ಶಾಶ್ವತವಲ್ಲ. ಗುಣಮಟ್ಟದ ಕಾಮಗಾರಿ ಇಲ್ಲದಿದ್ದರೆ ಕಟ್ಟಿದ ಕಟ್ಟಡಗಳು ಕುಸಿಯುತ್ತವೆ. ಅದರಂತೆಯೇ ಅಸಹಜ ಬದುಕು. ಅದು ಅಭದ್ರವಾದ ಬದುಕು.

ಸಹಜತೆಯಲ್ಲಿ ಸತ್ಯಸಂಧತೆ ನುಡಿವ ನಾಲಗೆಯ ಮೇಲೆ ಸ್ವರ್ಗ-ನರಕ
ದೇವಲೋಕ, ಮರ್ತ್ಯ ಲೋಕವೆಂಬುದು
ಬೇರಿಲ್ಲ ಕಾಣಿರೋ!
ಸತ್ಯವ ನುಡಿವುದೇ ದೇವಲೋಕ,
ಮಿಥ್ಯವ ನುಡಿವುದೇ ಮರ್ತ್ಯಲೋಕ
ಆಚಾರವೇ ಸ್ವರ್ಗ, ಅನಾಚಾರವೇ ನರಕ
ಕೂಡಲಸಂಗಮದೇವಾ, ನೀವೆ ಪ್ರಮಾಣು

ಸತ್ಯಸಂಧತೆಯು ಮಾನವೀಯ ಮೌಲ್ಯಗಳ ಜೀವಾಳ. ಇದು ನಿಜಮಾನವರನ್ನಾಗಿಸುತ್ತದೆ. ಮಾನವೀಯತೆಯು ಸಮಾನತೆಗೆ ಅವಕಾಶ ಮಾಡಿಕೊಡುತ್ತದೆ. ಅದರೊಂದಿಗೆ ಒಂದಷ್ಟು ವೈಚಾರಿಕತೆ ಮತ್ತು ಪ್ರಾಯೋಗಿಕತೆ. ವಾಸ್ತವಿಕವು ತಪಸ್ಸು, ಅವಾಸ್ತವಿಕವು ತಮಸ್ಸು. ವಾಸ್ತವಿಕವು ಅಷ್ಟು ಬೇಗನೆ ಸಿದ್ಧಿಸುವುದಿಲ್ಲ. ಕಾರಣವೇನೆಂದರೆ, ಅವಾಸ್ತವಿಕವು ವಾಸ್ತವಿಕದತ್ತ ಬರಲು ಬಿಡುವುದಿಲ್ಲ. ಅದರದು ಬಿಗಿಯಾದ ಹಿಡಿತ. ಇವೆರಡರ ನಡುವೆ ಸಂಘರ್ಷಗಳು ಉಂಟಾಗುತ್ತವೆ. ಸಹಜತೆ ಸಿದ್ಧಿಸಿದವರ ಬದುಕಿನಲ್ಲಿ ಕೃತ್ರಿಮತೆ ಸುಳಿಯುವುದಿಲ್ಲ. ಬೇರೆಯವರು ಯಾಂತ್ರಿಕವಾಗಿ ವರ್ತಿಸಿದರೂ ಅವರು ಅದನ್ನು ಅರಿಯಬಲ್ಲವರಾಗಿರುತ್ತಾರೆ.


ಡಾ. ಶಿವಮೂರ್ತಿ ಮುರುಘಾ ಶರಣರು

ಪುಸ್ತಕ ಓದುವುದು ಮತ್ತು ಸಮಾಜವೆಂಬ ಗ್ರಂಥಾಧ್ಯಯನದೊಟ್ಟಿಗೆ ಜನರ ಭಾವನೆಗಳನ್ನು ಹಾಗೂ ಅವರ ಮುಖಭಾವವನ್ನು ಓದಬೇಕಾಗುತ್ತದೆ. ಅನ್ಯರ ಬದುಕಿನ ಮುಖಭಾವವನ್ನು ಮತ್ತು ವ್ಯಕ್ತಿಯ ಭಾವನೆಯನ್ನು ಎಲ್ಲ ಕ್ಷೇತ್ರದ ಮುಖಂಡರು ಅರಿಯುವುದು ಅನಿವಾರ್ಯ. ಏಕೆಂದರೆ, ಮುಗ್ಧತೆಯ ನಟನೆ ಮಾಡುತ್ತ ಕೆಲವರು ವಂಚಿಸುವ ಸಾಧ್ಯತೆ ಇರುತ್ತದೆ. ಇಂಥವರು ಎಲ್ಲಿಲ್ಲದ ಸಾಚಾತನ ತೋರಿಸುತ್ತಾರೆ. ಅಂತಹ ಸಾಚಾತನ ಒಂದು ಹಂತದಲ್ಲಿ ನೀಚತನ. ಇವೆರಡನ್ನೂ ಅರಿಯಲು ಜಾಣತನ ಬೇಕು. ತಾನು ಅವಕ್ಕೆ ಒಳಗಾಗಬಾರದು, ಬೇರೆಯವರು ಒಡ್ಡುವ ಅಂಥ ಮಸಲತ್ತುಗಳಿಂದ ದೂರ ಇರುವುದನ್ನು ಮರೆಯಬಾರದು. ಇಲ್ಲವಾದರೆ ಮೋಸ ಹೋಗುವುದು ಖಂಡಿತ.

ಮೋಸ ಹೋಗುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಮೋಸ ಮಾಡುವವರು ಆಯಾ ವ್ಯಕ್ತಿಯ ತಲೆಯ ಅಳತೆ ನೋಡಿಕೊಂಡು ಟೋಪಿ ಹೊಲಿಸಿ ತರುತ್ತಾರೆ. ಮೋಸ ಹೋಗಬಾರದು, ಅದರಂತೆ ಮೋಸ ಮಾಡಬಾರದು. ಅನೇಕರ ಬದುಕಿನ ತಂತ್ರವೇ ಮೋಸಗಾರಿಕೆ ಆಗಿರುತ್ತದೆ. ಅದನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವುದು ಸೂಕ್ತ.

ಪ್ರತಿಯೊಬ್ಬರಲ್ಲೂ ಸದಾ ಜಿಜ್ಞಾಸೆಗಳು ಮತ್ತು ಚಿಂತನೆಗಳು ನಡೆಯುತ್ತಿರಬೇಕು. ಬಸವಣ್ಣನವರು ಒಬ್ಬ ಮಾನಸಿಕ ತಜ್ಞರು. ಅನ್ಯರ ಭಾವನೆಗಳನ್ನು ಅರಿಯುವುದು ಅವರಿಗೆ ಕರಗತವಾಗಿತ್ತು-

ಸಂಸಾರ ಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಲಿದೆ
ಸಂಸಾರಸಾಗರ ಉರದುದ್ದವೆ ಹೇಳಾ!
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ!
ಅಯ್ಯಾ ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ
ಕೂಡಲಸಂಗಮದೇವಾ ನಾನೇವೆನೇವೆನಯ್ಯಾ!

ಮಾನವನ ಆಂತರ್ಯದಲ್ಲಿ ಒಂದು ಸಾಗರವಿದೆ. ಸಾಗರದ ಅಲೆಗಳು ಮುಖವೆಂಬ ದಡಕ್ಕೆ ಅಪ್ಪಳಿಸುತ್ತವೆ. ಕೃತ್ರಿಮ ವ್ಯಕ್ತಿಯ ಭಾವನೆಯನ್ನು ಮುಖದ ಮೂಲಕ ಅರಿಯಬಹುದು. ಅಂತರಾಳದಲ್ಲಿ ಇರುವುದು ಅಗೋಚರ ಸಮುದ್ರ. ಅಲ್ಲಿ ಏನೆಲ್ಲ ವರ್ತನೆಗಳು. ವ್ಯಕ್ತಿಯ ಸಹಜತೆ ಮತ್ತು ಅಸಹಜತೆಯನ್ನು ಅರಿಯಲು ಅದು ಸಹಕಾರಿ ಆಗುತ್ತದೆ. ಗೋಸುಂಬೆಯು ಗಳಿಗೆಗೊಮ್ಮೆ ಬಣ್ಣ ಬದಲಾಯಿಸುವಂತೆ ಮಾನವನ ಆಲೋಚನೆಗಳು, ವರ್ತನೆಗಳು ಮತ್ತು ಚಲನವಲನಗಳು ಪ್ರತಿಕ್ಷಣ ಬದಲಾಗುತ್ತಿರುತ್ತವೆ. ಗೋಸುಂಬೆ ಬಣ್ಣ ಬದಲಾಯಿಸಿದರೆ, ಮಾನವ ತನ್ನ ಗುಣ-ಸ್ವಭಾವವನ್ನು ಬದಲಾಯಿಸುತ್ತಾನೆ.

ಆಸೆ, ಆಮಿಷ, ತಾಮಸ, ಹುಸಿ, ವಿಷಯ
ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ-
ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ
ಅದೇಕೆಂದಡೆ, ನಿನ್ನತ್ತಲೆನ್ನ ಬರಲೀಯವು
ಇದು ಕಾರಣ, ಇವೆಲ್ಲವ ಕಳೆದು
ಎನ್ನ ಪಂಚೈವರ, ಭಕ್ತರ ಮಾಡು
ಕೂಡಲಸಂಗಮದೇವಾ

ಬಸವಣ್ಣನವರು ತಮ್ಮ ವಚನದಲ್ಲಿ ನಾಲಗೆಯಿಂದ ಕುಟಿಲ, ಕುಹಕ, ಕ್ರೋಧ, ಕ್ಷುದ್ರಾದಿಗಳನ್ನು ನಿವಾರಿಸಲು ಮೇಲಿನಂತೆ ಪ್ರಾರ್ಥಿಸಿದ್ದಾರೆ.

ಮಾನವನೊಳಗೆ ಒಂದು ಸೂಕ್ಷ್ಮ ಲೋಕ ಇದೆ. ಈ ಲೋಕದೊಳಗೆ ಮತ್ತೆ ಅನಂತಲೋಕ ಅನ್ನುತ್ತಾರೆ ಶರಣರು. ಸಣ್ಣಪಾತ್ರೆಯನ್ನು ದೊಡ್ಡ ಪಾತ್ರೆಯಲ್ಲಿ ಸೇರಿಸುವ ಹಾಗೆ ಒಂದರ ಒಳಗೆ ಒಂದು ಆವರಣಗಳು. ಮಾನವ ಶರೀರವು ಅದ್ಭುತವಾದ ಸೃಷ್ಟಿ. 72 ಲಕ್ಷ ನರನಾಡಿಗಳು. ಮಾನವನನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಒಂದೊಂದು ಲೋಕವೂ ವಿಭಿನ್ನವಾದುದು. ಇತರರ ಅಂತರಂಗವನ್ನು ಅರಿಯಬೇಕೆನ್ನುವ ಮಾನವ ತನ್ನನ್ನು ತಾನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆಂತರ್ಯದಲ್ಲಿರುವ ವಿದ್ಯಮಾನಗಳನ್ನು ಆತ ಬಿಟ್ಟುಕೊಡಲು ಸಿದ್ಧನಿರುವುದಿಲ್ಲ. ಯಾವಾಗಲೂ ಮೈದುಂಬಿಕೊಂಡಿರುತ್ತಾನೆ. ಮಾನವ ಬದುಕಿನಲ್ಲಿ ಅವಾಸ್ತವಿಕ ಸಂಗತಿಗಳಾದರೂ ಯಾಕೆ? ಕುತಂತ್ರ, ಕಪಟ, ಕುಟಿಲ ಇವೆಲ್ಲ ಅವನ ಅಂತರಂಗದ ಸಂತಾನಗಳು. ಇವುಗಳೊಟ್ಟಿಗೆ ಅವನು ನಿಜಮಾನವ ಎನ್ನಿಸಿಕೊಳ್ಳಬೇಕು.

ಮಾನವನ ಒಳಗೆ ಒಬ್ಬ ಬುದ್ಧಿವಂತನಿರುವಂತೆ ಒಬ್ಬ ಮರುಳನೂ ಇದ್ದಾನೆ. ಅವಿತಿರುವ ಹುಚ್ಚನನ್ನು ಸಾಧನೆಯ ಮುಖಾಂತರ ಹೊರಹಾಕಬೇಕು. ಇದಕ್ಕೆ ಸೂಕ್ತ ಸಾಧನೆ ಬೇಕು. ಅವಾಸ್ತವಿಕ ಬದುಕಿಗೆ ಕಾರಣ ಅಜ್ಞಾನ. ಯಾರು ವಾಸ್ತವಿಕ ಮತ್ತು ಅವಾಸ್ತವಿಕದ ನಡುವಿನ ಅರ್ಥವನ್ನು ಅರಿಯುವುದಿಲ್ಲವೋ ಅಂಥವರು ಅವಾಸ್ತವಿಕದ ಜೊತೆ ಸಾಗುತ್ತಾರೆ. ಯಾರಿಗೆ ಸುಜ್ಞಾನದ ಕೊರತೆ ಇರುವುದಿಲ್ಲವೋ ಅವರು ಸಹಜತೆಯತ್ತ ಸಾಗುತ್ತಾರೆ.

ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳು ನಿಜಾಚರಣೆಯನ್ನು ರೂಢಿಸಿಕೊಂಡಿದ್ದರು. ಎಲ್ಲ ಮಡಿಗಳನ್ನೂ ಮೀರಿದ್ದು ನಿಜಾಚರಣೆ. ಪರಿಪೂರ್ಣ ಸ್ಥಿತಿ. ಸುಖ ದುಃಖ ಎದುರಾದಾಗ ಸಮತೋಲನದಿಂದ ಸಾಗುವ ಸ್ಥಿತಿಯೇ ಸಹಜತೆ. ಶಿವಯೋಗಿಗಳ ನಿಜಾಚರಣೆ ಮತ್ತು ಶರಣರ ಸಹಜಾಚರಣೆ, ಇವು ವ್ಯಕ್ತಿಯನ್ನು ಪರಿಪೂರ್ಣತೆಯ ಕಡೆಗೆ ಕೊಂಡೊಯ್ಯುತ್ತವೆ. ನಿಜಾಚರಣೆಯಲ್ಲಿ ಸಿಗುವ ಸುಖ ಸಹಜತೆಯ ಸುಖ; ಅಪೂರ್ವ ಸುಖ. ಭೌತಿಕ ಸುಖವನ್ನು ಮೀರಿದ್ದು, ಪರಮಾರ್ಥ (ಶಿವಯೋಗ) ಸುಖ. ಅಪರಿಮಿತವಾದ ಹಾಗೂ ಅವಿರಳ ಸುಖ. ಸುಖದುಃಖವನ್ನು ಸಮರ್ಪಿತ ಮಾಡುವುದು ನೈಜತೆ. ಅಂತಃಪ್ರಜ್ಞೆ ಮತ್ತು ಸಾಕ್ಷಿಪ್ರಜ್ಞೆಯೊಂದಿಗೆ ಸಾಗಿದಾಗ ಅಮಿತಾನಂದ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು