ಬಹುಮುಖ ಪ್ರತಿಭೆಯ ಶಿಕ್ಷಕ ಪ್ರಕಾಶ ಚಲವಾದಿ

ಮಂಗಳವಾರ, ಜೂನ್ 18, 2019
23 °C

ಬಹುಮುಖ ಪ್ರತಿಭೆಯ ಶಿಕ್ಷಕ ಪ್ರಕಾಶ ಚಲವಾದಿ

Published:
Updated:
Prajavani

ನಿಡಗುಂದಿ: ಚಿತ್ರಕಲೆ, ರಂಗೋಲಿ, ನಾಟಕ, ಹಾಡುಗಾರಿಕೆ, ಅಭಿನಯ, ನೃತ್ಯ, ವಸ್ತ್ರವಿನ್ಯಾಸ, ಕರಕುಶಲ ವಸ್ತುಗಳ ತಯಾರಿಕೆ, ಗೋಡೆ ಬರವಣಿಗೆ, ಹಾಸ್ಯ ಕಲಾವಿದ, ಮೂಗಿನಿಂದ ಶಹನಾಯಿ ನುಡಿಸುವುದು... ಹೀಗೆ ಹಲವಾರು ಕಲೆಗಳಲ್ಲಿ ಪರಿಣಿತರಾಗಿರುವ ಶಿಕ್ಷಕ ಪ್ರಕಾಶ ಚಲವಾದಿ ಸಾಧನೆ ನಿಜಕ್ಕೂ ಅಚ್ಚರಿಯದ್ದು.

ಮೂಲತಃ ರಬಕವಿ–ಬನಹಟ್ಟಿ ತಾಲ್ಲೂಕಿನ ಚಿಮ್ಮಡ ಗ್ರಾಮದ, ಇಲ್ಲಿಗೆ ಸಮೀಪದ ಮುದ್ದೇಬಿಹಾಳ ತಾಲ್ಲೂಕಿನ ಗುಡದಿನ್ನಿ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಇವರು, ಪ್ರವೃತ್ತಿಯಿಂದ ಹವ್ಯಾಸವಾಗಿ ಹಲ ಕಲೆಗಳನ್ನು ಮೈಗೂಡಿಸಿಕೊಂಡಿದ್ದು, ಎಲ್ಲದರಲ್ಲೂ ತಮ್ಮದೇ ಛಾಪು ಮೂಡಿಸಿರುವುದು ವಿಶೇಷ.

‘ಸೌಂದರ್ಯ ಕಣ್ಣು ಕುಕ್ಕಿದರೆ, ಪ್ರತಿಭೆ ಹೃದಯವನ್ನೇ ಗೆಲ್ಲುತ್ತದೆ’ ಎಂಬಂತೆ ಸರಳ ವ್ಯಕ್ತಿತ್ವದ ಸೃಜನಾತ್ಮಕತೆ ಎಂಬ ಜೇನಿನ ಗೂಡಾಗಿರುವ ಬಹುಮುಖ ವ್ಯಕ್ತಿತ್ವದ ಪ್ರತಿಭೆಯಿವರು. ಈ ಭಾಗದ ಜನರಿಂದ ಸಕಲ ಕಲಾವಲ್ಲಭ, ಕಲಾ ಸಾಮ್ರಾಟ ಎಂದೇ ಕರೆಯಲ್ಪಡುವ ಪ್ರಕಾಶರ ಧ್ವನಿಯಲ್ಲಿ ವರನಟ ಡಾ.ರಾಜ್‌ಕುಮಾರ್ ಹಾಡು ಕೇಳಿದರೆ, ಬಹಳಷ್ಟು ಮಂದಿ ಫಿದಾ ಆಗುವುದಂತೂ ಗ್ಯಾರಂಟಿ.

ಮೂಗಿನಿಂದಲೇ ಶಹನಾಯಿ ನುಡಿಸುವಲ್ಲಿ ನಿಷ್ಣಾತರಾಗಿದ್ದು, ವಿವಿಧ ಕನ್ನಡ, ಹಿಂದಿ ಚಿತ್ರಗೀತೆಗಳ ಕರೋಕೆಯನ್ನು ಮೂಗಿನಿಂದಲೇ ನುಡಿಸುವ ಇವರ ಶೈಲಿ ಅತ್ಯದ್ಭುತ. ಮೆಚ್ಚುಗೆಗೆ ಪಾತ್ರ.

ಇವರ ಅದ್ಭುತ ಹಾಡುಗಾರಿಕೆ, ಹಾಸ್ಯ ಶೈಲಿ ಕಂಡು ವಿವಿಧ ಐದು ಆರ್ಕೆಸ್ಟ್ರಾ ಕಂಪನಿಗಳು ಪ್ರತಿ ಕಾರ್ಯಕ್ರಮಕ್ಕೂ ಇವರನ್ನೇ ಕರೆಯುತ್ತಾರೆ. ಮುದ್ದೇಬಿಹಾಳ ತಾಲ್ಲೂಕಿನ ಸಮಾನ ಮನಸ್ಕ ಶಿಕ್ಷಕರು ಕೂಡಿಕೊಂಡು ‘ಮಾಸ್ಟರ್ ಮೆಲೋಡಿಸ್‌ ಆರ್ಕೆಸ್ಟ್ರಾ’ ಕಟ್ಟಿಕೊಂಡು ಗೌರವಧನ ಪಡೆದು, ವಿವಿಧ ಕಾರ್ಯಕ್ರಮಗಳನ್ನು ನೀಡುವ ಚಲವಾದಿ, ನಿಡಗುಂದಿಯಲ್ಲಿ ವಾಸವಾಗಿದ್ದಾರೆ.

ಇಲ್ಲಿಯವರೆಗೆ 400ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ರಂಗೋಲಿ ಚಿತ್ತಾರ ಮೂಡಿಸಿದ್ದು, ರಂಗೋಲಿ ಕಲೆಯಲ್ಲಿ ಎತ್ತಿದ ಕೈ. ಇವರ ವೇಗವಾಗಿ ಮೂಡಿಸುವ ರಂಗೋಲಿ ಕಲೆ ನೋಡಿ, ನಾರಿಯರೇ ಬೆಚ್ಚಿ ಬೀಳಬೇಕು.

18 ನಾಟಕಗಳಲ್ಲೂ ಅಭಿನಯ

ನಾಟಕಗಳಲ್ಲೂ ಅಭಿನಯಿಸುವ ಗೀಳನ್ನು ಚಿಕ್ಕಂದಿನಿಂದಲೂ ಬೆಳೆಸಿಕೊಂಡಿರುವ ಪ್ರಕಾಶ, ಇಲ್ಲಿಯವರೆಗೆ 18 ನಾಟಕಗಳಲ್ಲಿ ನಾಯಕ ನಟನಾಗಿ, ಖಳ ನಾಯಕನಾಗಿ ಅದ್ಭುತವಾಗಿ ಅಭಿನಯಿಸಿ, ಕಲಾಭಿಮಾನಿಗಳಿಂದ ‘ಕಲಾ ಸಾಮ್ರಾಟ’ ಎಂಬ ಬಿರುದು ಪಡೆದುಕೊಂಡಿದ್ದಾರೆ.

ಇತಿಹಾಸ ಪುರುಷ ‘ವೀರ ಸಿಂಧೂರ ಲಕ್ಷ್ಮಣ’ ಪಾತ್ರದಲ್ಲಿ ಅಭಿನಯಿಸಿ, ಅಪಾರ ಜನರ ಮೆಚ್ಚುಗೆ ಗಳಿಸಿದ್ದು, ಇದರ ವಿಡಿಯೋ ತುಣಕನ್ನು ಯೂ ಟ್ಯೂಬ್‌ನಲ್ಲಿ ಹರಿಬಿಟ್ಟಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿ, ಲೈಕಿಸಿದ್ದು ವಿಶೇಷ. ಇವರ ಗೆಳೆಯರಲ್ಲಾ ಸೇರಿ ಚಿಮ್ಮಡದಲ್ಲಿ ಶ್ರೀ ಕರಿಸಿದ್ಧೇಶ್ವರ ನಾಟ್ಯ ಸಂಘ ಕಟ್ಟಿಕೊಂಡು, ಅದರ ಮೂಲಕ ನಾನಾ ಕಡೆ ಪ್ರದರ್ಶನ ನೀಡುತ್ತಾರೆ. ಹಾಸ್ಯ ಕಲಾವಿದರೂ ಆಗಿರುವ ಪ್ರಕಾಶ ಸುಮಾರು 800ಕ್ಕೂ ಹೆಚ್ಚು ಹಾಸ್ಯ, ಮಿಮಿಕ್ರಿ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ.

ಪಾಠೋಪಕರಣಗಳ ತಯಾರಿಕೆಯಲ್ಲಿಯೂ ಮುಂದು

ಶಾಲೆಯ ಯಾವುದೇ ಪಾಠಗಳಿರಲಿ, ಅದಕ್ಕೆ ಸಂಬಂಧಿಸಿದ ಕಲಿಕೋಪಕರಣ ತಯಾರಿಕೆಯಲ್ಲಿ ಪ್ರಕಾಶರ ಕೈಚಳಕ ಅದ್ಭುತ. ಗೋಳಗುಮ್ಮಟ, ವಿಧಾನಸೌಧ, ಹಂಪಿಯ ಕಲ್ಲಿನ ರಥ... ಹೀಗೆ ಐತಿಹಾಸಿಕ ಸ್ಮಾರಕಗಳ ಮಾದರಿ ತಯಾರಿಸುವ ಇವರ ಕಲೆ ಮೆಚ್ಚುಗೆಗೆ ಪಾತ್ರವಾಗಿದೆ.

ಮೊಹರಂ ರಿವಾಯತ್ ಪದಗಳನ್ನು ಹಾಡುವುದರಲ್ಲಿಯೂ ಸೈ ಎನಿಸಿಕೊಂಡಿರುವ ಇವರು, ಈಗಲೂ ಮೊಹರಂ ಬಂತೆಂದರೆ ಈ ಭಾಗದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಡುತ್ತಾರೆ. ಇದನ್ನು ಕೇಳಲು ರಾತ್ರಿಯಾದರೂ ಜನ ಮುಗಿ ಬೀಳುತ್ತಾರೆ.

ಇದೇ ರೀತಿಯ ಸೃಜನಾತ್ಮಕ ಕಲೆಗಳನ್ನು ವಿದ್ಯಾರ್ಥಿಗಳಲ್ಲಿಯೂ ಬೆಳೆಸುವಲ್ಲಿ ಶ್ರಮಿಸುತ್ತಿರುವ ಪ್ರಕಾಶ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ಸದಾ ಮಗ್ನರನ್ನಾಗಿ ಮಾಡಿಸುತ್ತಾರೆ. ಪೇಪರ್‌ಗಳಿಂದ ವಿವಿಧ ವಸ್ತುಗಳನ್ನು ತಯಾರಿಸುವ ಕೌಶಲವನ್ನು ಮಕ್ಕಳಲ್ಲಿಯೂ ಬೆಳೆಸಿದ್ದಾರೆ. ಇವರೇ ತಯಾರಿಸುವ ವಿವಿಧ ಕರಕುಶಲ ವಸ್ತುಗಳು ಗಮನ ಸೆಳೆಯುತ್ತವೆ.

ಸಂಪರ್ಕ ಸಂಖ್ಯೆ: 9945541495

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !