ಹಣಕಾಸು ಸಲಹೆಗಳು: ನನ್ನ ಒಟ್ಟು ವೇತನ ₹ 30 ಸಾವಿರ, ಉಳಿತಾಯದ ವಿಧಾನ ತಿಳಿಸಿ

7

ಹಣಕಾಸು ಸಲಹೆಗಳು: ನನ್ನ ಒಟ್ಟು ವೇತನ ₹ 30 ಸಾವಿರ, ಉಳಿತಾಯದ ವಿಧಾನ ತಿಳಿಸಿ

Published:
Updated:

ಹೆಸರು, ಊರು ಬೇಡ 
ನಾವು ಪ್ರತಿ ವರ್ಷ ಆದಾಯ ತೆರಿಗೆ ಪಾವತಿಸುತ್ತಿದ್ದೇವೆ. ನನ್ನ ಹೆಸರಿಗೆ 1965ನೇ ಇಸವಿಯಲ್ಲಿ ₹ 11,650 ಕ್ಕೆ ಕೊಂಡ ಪಿತ್ರಾರ್ಜಿತ ಆಸ್ತಿಯ ಈಗಿನ ಬೆಲೆ ₹ 40 ಲಕ್ಷವಾಗಿರುತ್ತದೆ. ಇದನ್ನು ಮಾರಾಟ ಮಾಡಿ ಬರುವ ಲಾಭ ಹೇಗೆ ಹಂಚಿಕೊಳ್ಳಬೇಕು? ನನಗೆ 4 ಜನ ಅಕ್ಕ ತಂಗಿಯಂದಿರು. ಒಬ್ಬ ಅಣ್ಣ ಇದ್ದಾರೆ. ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಎಷ್ಟು ಭಾಗ ಕೊಡಬೇಕು? ಉಳಿದ ಆಸ್ತಿಗೆ ಎಷ್ಟು ತೆರಿಗೆ ಕೊಡಬೇಕು? ತೆರಿಗೆ ಉಳಿಸುವ ಮಾರ್ಗ ತಿಳಿಸಿ.

ಉತ್ತರ: ನೀವು 1965ರಲ್ಲಿ ₹ 11,650ಕ್ಕೆ ಕೊಂಡ ಆಸ್ತಿ ಭೂ ಪರಿವರ್ತನೆ ಆಗಿರುವುದಾದಲ್ಲಿ, ಈಗ ಮಾರಾಟ ಮಾಡಿ ಬರುವ ಮೊತ್ತ ಕೊಂಡ ಹಣದಿಂದ ಕಳೆದು, ಹಾಗೂ 1965 ರಿಂದ 2018ರ ಅವಧಿಯ Cost of Inflation ಲೆಕ್ಕ ಹಾಕಿ ಅದನ್ನೂ ಕಳೆದು ಬರುವ ಮೊತ್ತಕ್ಕೆ ಶೇ 20 ರಷ್ಟು ಬಂಡವಾಳ ಗಳಿಕೆ ತೆರಿಗೆ (Capital Gain Tax) ಕೊಡಬೇಕಾಗುತ್ತದೆ.

ತೆರಿಗೆ ಉಳಿಸಲು ಸೆಕ್ಷನ್‌ 54 ಇಸಿ ಆಧಾರದ ಮೇಲೆ ಮಾರಾಟ ಮಾಡಿ ಬಂದಿರುವ ಲಾಭವನ್ನು NHIA-REC ಬಾಂಡುಗಳಲ್ಲಿಯೂ ತೊಡಗಿಸಬಹುದು. ಅಥವಾ ಈ ಲಾಭಾಂಶವನ್ನು ಇನ್ನೊಂದು ಮನೆ ಮಾಡುವಲ್ಲಿ ಕೂಡಾ ತೊಡಗಿಸಿ ತೆರಿಗೆ ಉಳಿಸಬಹುದು.

ನಿಮ್ಮ ಪ್ರಶ್ನೆಯಲ್ಲಿ ಪಿತ್ರಾರ್ಜಿತ ಎನ್ನುವ ಶಬ್ದ ಬಳಸಿದ್ದೀರಿ. ಪಿತ್ರಾರ್ಜಿತ ಎಂದರೆ ಕುಟುಂಬದ ಹಿರಿಯರಿಂದ ಬಂದ ಸೊತ್ತು ಎಂದರ್ಥ. ನೀವು ಸಹೋದರ–ಸಹೋದರಿಯರಿಗೆ ಲಾಭದಲ್ಲಿ ಸಮಾನ ಹಕ್ಕು ಇರುತ್ತದೆ. ಇವರಿಗೆ ಹಣ ವಿತರಿಸಿ ಉಳಿಯುವ ಮೊತ್ತಕ್ಕೆ ಮಾತ್ರ ತೆರಿಗೆ ಬರುತ್ತದೆ ಎನ್ನುವ ತಪ್ಪು ಅಭಿಪ್ರಾಯ ನಿಮ್ಮಲ್ಲಿದೆ. ಇದು ಸತ್ಯಕ್ಕೆ ದೂರವಾದ ವಿಚಾರ. 

ಶ್ರೀಮತಿ ಶಾಂತಾ, ಬೆಂಗಳೂರು
ನಾನು ಗೃಹಿಣಿ, ಹಿರಿಯ ನಾಗರಿಕಳು. ಬ್ಯಾಂಕ್‌ನಲ್ಲಿ ಎಫ್‌.ಡಿ ಇಟ್ಟಿದ್ದೇನೆ. ಪ್ರಸ್ತುತ ವಿದ್ಯಮಾನದಲ್ಲಿ ಬ್ಯಾಂಕ್‌ಗಳಲ್ಲಿ ಬಹಳಷ್ಟು ಹಗರಣಗಳಾಗಿವೆ. ನಾವು ಬ್ಯಾಂಕ್‌ಗಳನ್ನು ನಂಬಬಹುದೇ. ಇಲ್ಲಿ ಇರಿಸುವುದು ಸುರಕ್ಷಿತವೇ ಅಥವಾ ಮನೆಯಲ್ಲಿಯೇ ಇಟ್ಟುಕೊಳ್ಳುವುದು ಸರಿಯೇ ತಿಳಿಸಿ. 

ಉತ್ತರ: ನೀವು ತಿಳಿದಂತೆ ಹಗರಣಗಳಾಗಿರುವುದು ಸತ್ಯಕ್ಕೆ ದೂರವಾದ ವಿಚಾರವಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರ ಬಹಳಷ್ಟು ಸುಧಾರಣೆಗಳನ್ನು ತಂದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕ್‌ಗಳು ಈಗಿನ ತೊಂದರೆಯಿಂದ ಹೊರಬರುವ ಸಾಧ್ಯತೆ ಇದೆ. ನೀವು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಲು ಭಯ ಪಡುವ ಅಗತ್ಯವಿಲ್ಲ.

ಇದೇ ವೇಳೆ ಠೇವಣಿ ಇರಿಸಲು ಅಂಚೆ ಕಚೇರಿಯ Senior Citizen Deposit ಬೇಕಾದರೂ ಆರಿಸಿಕೊಳ್ಳಿ. ಸದ್ಯದ ಬಡ್ಡಿದರ ಶೇ 8.3 ರಷ್ಟಿದೆ. ಈ ಬಡ್ಡಿ ದರವು ಬ್ಯಾಂಕ್‌ಗಳಿಗಿಂತ ಹೆಚ್ಚಿಗೆ ಇದೆ. ಜತೆಗೆ ಭದ್ರತೆಯ ದೃಷ್ಟಿಯಲ್ಲಿ ಶೇ 100 ರಷ್ಟು ಭಾರತ ಸರ್ಕಾರದ ಆಶ್ರಯವಿದೆ. ಹಣವನ್ನು ಎಂದಿಗೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ.

ಎನ್‌.ಕೆ. ಗಂಗಾಯಿ ಲಕ್ಷ್ಮೇಶ್ವರ 
ಆದಾಯ ತೆರಿಗೆ ಸೆಕ್ಷನ್‌ 80 ಸಿ ಪ್ರಕಾರ, ₹ 1.50 ಲಕ್ಷವನ್ನು ವರ್ಷದ ಯಾವ ತಿಂಗಳಿನಲ್ಲಿ ತುಂಬಬೇಕು. PMVVY ಬಡ್ಡಿಗೆ ತೆರಿಗೆ ವಿನಾಯ್ತಿ ಇದೆಯೇ. 80ಸಿಸಿಡಿ (1ಬಿ) ಎಲ್ಲಿ ಕಟ್ಟಬೇಕು. ದ್ರವ್ಯತೆ ಎಂದರೇನು. ವಿವರವಾಗಿ ತಿಳಿಸಿ?

ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಪ್ರತಿ ವರ್ಷ ಏಪ್ರಿಲ್‌ ಒಂದರಿಂದ ಮಾರ್ಚ್‌ 31ರ ತನಕ ಕಟ್ಟಬಹುದು. PMVVY ಯಲ್ಲಿ ಬರುವ ಬಡ್ಡಿಗೆ ತೆರಿಗೆ ವಿನಾಯ್ತಿ ಇಲ್ಲ.

ದ್ರವ್ಯತೆ ಎಂದರೆ ಓರ್ವ ವ್ಯಕ್ತಿಗೆ ಹಣ ಕೊಡಲು ಹಲವಾರು ದಾರಿಗಳಿವೆ. ಉದಾಹರಣೆಗೆ, ಬ್ಯಾಂಕ್‌–ಅಂಚೆ ಕಚೇರಿ ಠೇವಣಿ, ಬಂಗಾರ, ಷೇರು, ಮ್ಯೂಚುವಲ್‌ ಫಂಡ್‌, ಜೀವವಿಮೆ, ಸ್ಥಿರ ಆಸ್ತಿ ಹೀಗೆ ಬಹಳಷ್ಟು ದಾರಿಗಳಿವೆ. ಹಣ ಕೊಡುವಾಗ ಮುಖ್ಯವಾದ ವಿಚಾರ ನೀವು ಗಮನಿಸಬೇಕಾದ್ದು, ಭದ್ರತೆ, ದ್ರವ್ಯತೆ ಹಾಗೂ ನಿಶ್ಚಿತ ವರಮಾನ. 

ನೀವು ದ್ರವ್ಯತೆ ವಿಚಾರದಲ್ಲಿ ಪ್ರಶ್ನೆ ಕೇಳಿದ್ದೀರಿ. ಹೂಡಿಕೆಯಲ್ಲಿ ದ್ರವ್ಯತೆ ಎಂದರೆ, ಹಣ ತೊಡಗಿಸಿದ ನಂತರ ನೀವು ಯಾವಾಗ ಬೇಕಾದರೂ ಇಟ್ಟ ಹಣ ವಾಪಸು ಪಡೆಯಲು ಸಾಧ್ಯವಿರಬೇಕು. ಉದಾಹರಣೆಗೆ ಸ್ಥಿರ ಆಸ್ತಿ, ಬಂಗಾರದ ಹೂಡಿಕೆ, ಜೀವವಿಮೆ ಇಲ್ಲಿ ಹೂಡಿದ ಹಣ ವಾಪಸು ಪಡೆಯಲು ತುಂಬಾ ಸಮಯ ಬೇಕಾಗುತ್ತದೆ. ಇವುಗಳಲ್ಲಿ ದ್ರವ್ಯತೆ ಇರುವುದಿಲ್ಲ.

ಬ್ಯಾಂಕ್‌ ಠೇವಣಿ, ಷೇರು, ಮ್ಯೂಚುವಲ್ ಫಂಡ್‌ ಇಲ್ಲಿ ಇರಿಸಿದ ಹಣ ಯಾವಾಗ ಬೇಕಾದರೂ ವಾಪಸ್‌ ಪಡೆಯಬಹುದು. ಇವುಗಳಲ್ಲಿ ದ್ರವ್ಯತೆ ಇರುತ್ತದೆ. ಬ್ಯಾಂಕ್‌ ಠೇವಣಿ ಅವಧಿಯ ಠೇವಣಿಯಾಗಿದ್ದರೂ ನೀವು ಇಚ್ಛಿಸಿದಾಗ, ಅವಧಿಗೂ ಮುನ್ನ ವಾಪಸ್‌ ಪಡೆಯಬಹುದು.

ನೇತ್ರಾವತಿ, ರಾಮಗಿರಿ, ಹೊಳಲ್ಕೆರೆ ತಾಲೂಕು 
ನನ್ನ ತಾಯಿ ಹಿರಿಯ ನಾಗರಿಕಳು. ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ₹ 1.50 ಲಕ್ಷ ಠೇವಣಿ ಇರಿಸಿದ್ದೇನೆ. ಪ್ಯಾನ್‌ಕಾರ್ಡ್‌ ಸಂಖ್ಯೆ ಬ್ಯಾಂಕಿಗೆ ಒದಗಿಸಿದರೂ ಅವಧಿ ಮುಗಿದು ಹಣ ಪಡೆಯುವಾಗ ₹ 2 ಸಾವಿರ ತೆರಿಗೆ ಮುರಿದುಕೊಂಡಿದ್ದಾರೆ. ನಮ್ಮ ಆದಾಯ ಕೃಷಿ ಮೂಲದ್ದಾಗಿರುತ್ತದೆ. ನಾವು ಮತ್ತು ನನ್ನ ತಾಯಿ ಇಬ್ಬರೂ ₹ 2 ಲಕ್ಷ ಠೇವಣಿ ಇರಿಸಿದ್ದೇವೆ. ಮುಂದೆ ಕೂಡಾ ತೆರಿಗೆ ಮುರಿದುಕೊಳ್ಳುತ್ತಾರಾ ತಿಳಿಸಿ? 

ಉತ್ತರ: ಎಲ್ಲಾ ಠೇವಣಿಗಳಲ್ಲಿ ಓರ್ವ ವ್ಯಕ್ತಿಯ ವಾರ್ಷಿಕ ಬಡ್ಡಿ ಆದಾಯ ₹ 10 ಸಾವಿರ ದಾಟಿದಲ್ಲಿ ಮಾತ್ರವೇ TDS ಮಾಡುತ್ತಾರೆ. ಈ ವರ್ಷದ ಏಪ್ರಿಲ್‌ನಿಂದ ಹಿರಿಯ ನಾಗರಿಕರಿಗೆ ಈ ಮಿತಿ ₹ 50 ಸಾವಿರಕ್ಕೆ ಏರಿಸಲಾಗಿದೆ. ಇದೇ ವೇಳೆ, ಟಿಡಿಎಸ್‌ ಮಾಡದಿರಲು, ಹಿರಿಯ ನಾಗರಿಕರಾಗಿದ್ದಲ್ಲಿ 15ಎಚ್‌ ಹಾಗೂ ಉಳಿದವರು 15 ಜಿ ನಮೂನೆ ಫಾರಂ ಸಲ್ಲಿಸಬಹುದು. ನೀವು ಪ್ಯಾನ್‌ ಮಾತ್ರ ಕೊಟ್ಟು, 15 ಎಚ್‌ ಅಥವಾ ಜಿ ಕೊಟ್ಟಿರಲಿಕ್ಕಿಲ್ಲ. ಈ ಫಾರಂ ಅನ್ನು ಪ್ರತಿ ವರ್ಷ ಏಪ್ರಿಲ್‌ 15ರೊಳಗೆ ಬ್ಯಾಂಕ್‌ಗೆ ಸಲ್ಲಿಸಿರಿ. ಎಲ್ಲಕ್ಕೂ ಮುಖ್ಯವಾಗಿ ಬ್ಯಾಂಕ್‌ ಮ್ಯಾನೇಜರ್‌ ಅವರನ್ನು ಖುದ್ದು ಭೇಟಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ.

ರಾಘವೇಂದ್ರ ಜ. ತುಬಾಕಿ, ಬೆಳಗಾವಿ 
ನಾನು, ಹೆಂಡತಿ ಇಬ್ಬರೂ ಭಾರತೀಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತೇವೆ. ನನ್ನ ಸಂಬಳ ₹ 46,829 ಹಾಗೂ ಕಡಿತದ ನಂತರ ₹ 42,356. ಇದರಲ್ಲಿ PLI (Postal Life Insurance –ಅಂಚೆ ಜೀವ ವಿಮೆ) ₹ 4,800  ಹಾಗೂ ಆರ್‌.ಡಿ ₹ 2 ಸಾವಿರ ಕಡಿತವಿದೆ. ನನ್ನ ಪತ್ನಿಯ ಒಟ್ಟು ಸಂಬಳ ₹ 43,561. ಕಡಿತದ ನಂತರ ₹ 36,249. ನಾವು ಸ್ವಂತ ಮನೆಕೊಳ್ಳಲು ನಿಮ್ಮ ಸಲಹೆ ಬೇಕಾಗಿದೆ.

ಉತ್ತರ: ನೀವಿಬ್ಬರೂ ನೌಕರಿಯಲ್ಲಿದ್ದು,, ಎಲ್ಲಾ ಕಡಿತದ ನಂತರ ತಿಂಗಳಿಗೆ ಸುಮಾರು ₹ 70 ಸಾವಿರ ಪಡೆಯುವಿರಿ. ನಿಮ್ಮ ಖರ್ಚಿಗೆ ₹ 20 ಸಾವಿರ ಇಟ್ಟುಕೊಂಡು ₹ 50 ಲಕ್ಷದ ತನಕ ಮನೆ ಸಾಲಕ್ಕೆ ಇ.ಎಂ.ಐ. ಕಟ್ಟುವ ಸಾಮರ್ಥ್ಯ ಹೊಂದಿದ್ದೀರಿ. ಜತೆಗೆ ಗೃಹ ಸಾಲದ ಕಂತು ಸೆಕ್ಷನ್‌ 80 ಸಿ – ಬಡ್ಡಿ 24 (ಬಿ) ಆಧಾರದ ಮೇಲೆ ಆದಾಯ ತೆರಿಗೆ ವಿನಾಯ್ತಿಯೂ ಇದೆ.

ತಕ್ಷಣ ಬ್ಯಾಂಕ್‌ನಿಂದ ₹ 50 ಲಕ್ಷಕ್ಕೆ ಗೃಹ ಸಾಲ ಪಡೆದು ಮನೆ ಮಾಡಿಕೊಳ್ಳಿ. ಈ ಮಾರ್ಗದಿಂದ ಕಡ್ಡಾಯ ಉಳಿತಾಯ ಹಾಗೂ ಜೀವನದ ಸಂಜೆಗೆ ಸೂರು ಒದಗಿದಂತಾಗುತ್ತದೆ. ನೀವು ಕನಿಷ್ಠ ಒಂದು ನಿವೇಶನವನ್ನಾದರೂ ಕೊಂಡುಕೊಳ್ಳಿ. ನಿವೇಶನದ ಬೆಲೆ ವರ್ಷದಿಂದ ವರ್ಷಕ್ಕೆ ಏರುತ್ತಿರುತ್ತದೆ. ನಿವೇಶನಕ್ಕೆ ಪಡೆದ ಸಾಲದ ಕಂತು ಬಡ್ಡಿಗೆ ತೆರಿಗೆ ವಿನಾಯ್ತಿ ಇರುವುದಿಲ್ಲ.

ಜಯಶ್ರೀ ಕೆ. ಬೆಳಗಾವಿ
ಪ್ರತೀ ಬುಧವಾರ ತಪ್ಪದೇ ನಿಮ್ಮ ಅಂಕಣ ಓದುತ್ತೇನೆ. ನಾನು ಸರ್ಕಾರಿ ನೌಕರಿಯಿಂದ ನಿವೃತ್ತಳಾಗಿ ₹ 60 ಸಾವಿರ ಪಿಂಚಣಿ ಪಡೆಯುತ್ತಿದ್ದೇನೆ. ನಿಶ್ಚಿತ ಠೇವಣಿಯಿಂದ ₹ 4 ರಿಂದ ₹ 5 ಲಕ್ಷ ಬಡ್ಡಿ ಪಡೆಯುತ್ತೇನೆ. ನನಗೆ ₹ 60 ಲಕ್ಷ ಭವಿಷ್ಯ ನಿಧಿ ಹಣ ಬಂದಿದ್ದು , ಇವುಗಳನ್ನು ಹೂಡಿಕೆ ಮಾಡಲು ನಿಮ್ಮ ಸಲಹೆ ಬೇಕಾಗಿದೆ. ದೀರ್ಘಕಾಲಿಕ ಹೂಡಿಕೆಯಲ್ಲಿ ಆಸಕ್ತಿ ಇಲ್ಲ. ಭದ್ರತೆ ಹಾಗೂ ಆದಾಯ ತೆರಿಗೆ ಉಳಿಸುವ ದೃಷ್ಟಿಯಿಂದ ಹೂಡಿಕೆ ಮಾಡಲು ಮಾರ್ಗದರ್ಶನ ಬೇಕಾಗಿದೆ. 

ಉತ್ತರ: ನೀವು ಹಿರಿಯ ನಾಗರೀಕರಾದ್ದರಿಂದ ತಾ 1–4–2018ರಿಂದ ನಿಮಗೆ ₹ 3 ಲಕ್ಷದ ಮಿತಿ, ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 40 ಸಾವಿರ ಹಾಗೂ ಠೇವಣಿ ಮೇಲಿನ ಬಡ್ಡಿಯಲ್ಲಿ (ಸೆಕ್ಷನ್‌ 80ಟಿಟಿಬಿ) ಒಟ್ಟಿನಲ್ಲಿ ₹ 3.90 ಲಕ್ಷ ವಾರ್ಷಿಕ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಸ್ಥಿರ ಆಸ್ತಿ ಹೂಡಿಕೆ ದೀರ್ಘಾವಧಿ ಹೂಡಿಕೆಯಾಗಿದ್ದು, ಇದು ಉತ್ತಮ ಹೂಡಿಕೆಯಾದರೂ ನಿಮ್ಮ ಅನಿಸಿಕೆಯಂತೆ ಇದು ಸದ್ಯಕ್ಕೆ ಬೇಡ. ₹ 15 ಲಕ್ಷವನ್ನು ಅಂಚೆ ಕಚೇರಿ ಹಿರಿಯ ನಾಗರೀಕರ ಠೇವಣಿಯಲ್ಲಿ ತೊಡಗಿಸಿರಿ. ಉಳಿದ ಹಣ 4 ರಿಂದ 5 ಬ್ಯಾಂಕ್‌ಗಳಲ್ಲಿ ಹಣ ವಿಂಗಡಿಸಿ ಅವಧಿ ಠೇವಣಿಯಲ್ಲಿ ಇಡಿ. ಹೀಗೆ ಅವಧಿ ಠೇವಣಿ ಮಾಡುವಾಗ ಠೇವಣಿ ₹ 50 ಸಾವಿರ ವಿಂಗಡಿಸಿ ಬೇರೆ ಬೇರೆ ಬಾಂಡ್‌ ಪಡೆಯಿರಿ.

ಅವಶ್ಯವಿದ್ದಲ್ಲಿ ಅವಧಿಗೆ ಮುನ್ನ ಒಂದು ಬಾಂಡ್‌ ಮುರಿಸಿ ಹಣ ಪಡೆಯಬಹುದು. 80ಸಿ ಅಡಿಯಲ್ಲಿ ವಾರ್ಷಿಕ ಗರಿಷ್ಠ ₹ 1.50 ಲಕ್ಷ ಹೂಡಿರಿ. ಇದನ್ನು ಹೊರತುಪಡಿಸಿದರೆ ತೆರಿಗೆ ಉಳಿಸಲು ಬೇರೆ ದಾರಿ ಇಲ್ಲ. ನೀವು ಸೆಕ್ಷನ್‌ 80ಡಿ ಆಧಾರದ ಮೇಲೆ ಆರೋಗ್ಯ ವಿಮೆ ಕೂಡಾ ಮಾಡಿಸಿ ಪ್ರೀಮಿಯಂ ಹಣ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ನರಗುಂದ ಎಸ್‌.ಎನ್‌., ಧಾರವಾಡ 
ನಿಮ್ಮ ಅಂಕಣ ಓದಿ ಪ್ರಭಾವಿತನಾಗಿದ್ದು, ಉಳಿತಾಯ ಯೋಜನೆ ಅಳವಡಿಸಿಕೊಳ್ಳಬೇಕೆಂದಿದ್ದೇನೆ. ನನ್ನ ಒಟ್ಟು ವೇತನ ₹ 30 ಸಾವಿರ. ಕಡಿತ ಜಿಪಿಎಫ್‌ ₹ 8 ಸಾವಿರ, ಎಲ್‌ಐಸಿ ₹ 400, ಸೊಸೈಟಿ ಸಾಲ
₹ 7ಸಾವಿರ. ನನ್ನ ಭವಿಷ್ಯದ ಬಗ್ಗೆ ಸಲಹೆ ನೀಡಿರಿ?

ಉತ್ತರ: ಸೊಸೈಟಿಯಿಮದ ನೀವು ಸಾಲ ಪಡೆದ ಕಾರಣ ತಿಳಿಸಿಲ್ಲ. ಉಳಿತಾಯಕ್ಕಿಂತ ಸಾಲ ರಹಿತ ಜೀವನ ಬಹುಮುಖ್ಯ. ನಿಮ್ಮ ಸಂಬಳದ ಶೇ 25 ರಷ್ಟು ಸಾಲಕ್ಕೆ ಹೋದರೆ ನೀವು ಜೀವನದಲ್ಲಿ ಮೇಲೆ ಬರುವುದು ಕಷ್ಟವಾಗುತ್ತದೆ. ಸಾಧ್ಯವಾದರೆ ಸಾಲದಿಂದ ಹೊರಬರಲು ಪ್ರಯತ್ನಿಸಿ. ಇದೇ ವೇಳೆ ನಿಮ್ಮ ಮನೆ ಹಾಗೂ ಖರ್ಚು ಕಳೆದು ಉಳಿಸಬಹುದಾದ ಹಣ, ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ಆರ್‌.ಡಿ ಮಾಡಿ. DA ಹಾಗೂ Increment ಬಂದಾಗ ಪ್ರತಿ ಸಲ ಕನಿಷ್ಠ ಶೇ 50 ರಷ್ಟು R.D ಮಾಡಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಚಂದ್ರಶೇಖರ್ ಆಜಾದ್‌, ಮಂಡಿಪೇಟೆ, ತುಮಕೂರು 
ನನ್ನ ಹೆಸರಿನಲ್ಲಿ ನಾನು ಸ್ವಯಾರ್ಜಿತ ಸಂಪಾದನೆಯಿಂದ 60X40 ಅಳತೆಯ ವಾಣಿಜ್ಯ ನಿವೇಶನ ಕೊಂಡಿದ್ದೇನೆ. ಇದನ್ನು ₹ 1 ಕೋಟಿಗೆ ಮಾರಾಟ ಮಾಡಬೇಕೆಂದಿದ್ದೇನೆ. ನನಗೆ ಉಳಿಯಲು ಸ್ವಂತಮನೆ ಇದೆ ಹಾಗೂ ನನ್ನೊಡನೆ ₹ 1 ಲಕ್ಷ ಠೇವಣಿ ಹಣವಿದೆ. ನನ್ನ ಜೀವನವನ್ನು ನನ್ನ ಪಿಂಚಣಿ ಹಣ ₹ 9 ಸಾವಿರದಲ್ಲಿ ಕಳೆಯುತ್ತಿದ್ದೇನೆ. ನಾನು ಮಾರಾಟ ಮಾಡಿ ಪಡೆಯುವ ₹ 1 ಕೋಟಿ ಹಣ ನಗದುರಹಿತವಾಗಿ ಪಡೆಯಲಿರುವ ಮಾರ್ಗಗಳು ಯಾವುವು. ಈ ಹಣದಿಂದ ಇಬ್ಬರು ಮಕ್ಕಳಿಗೆ ಮನೆ ಮಾಡಿಕೊಡುವ ಜವಾಬ್ದಾರಿ ಇದೆ. ಆದಾಯ ತೆರಿಗೆ ಕಡಿಮೆ ಮಾಡಲು ಕೂಡಾ ಮಾಹಿತಿ ನೀಡಿರಿ. 

ಉತ್ತರ: ನೀವು ನಿವೇಶನ ಮಾರಾಟ ಮಾಡಿ ಬರುವ ಲಾಭಕ್ಕೆ ಆದಾಯ ತೆರಿಗೆ ಬರುವುದಿಲ್ಲ. ಆದರೆ capital gain tax ಬರುತ್ತದೆ.

ತೆರಿಗೆ ಉಳಿಸಲು ನೀವು ನಿವೇಶನಕ್ಕೆ ಪ್ರಾರಂಭದಲ್ಲಿ ಕೊಟ್ಟ ಹಣ ಹಾಗೂ ಈಗಿನ ಮಾರಾಟ ಮಾಡಿ ಪಡೆಯುವ ಹಣದ ಅಂತರದಲ್ಲಿ ಗರಿಷ್ಠ ₹ 50 ಲಕ್ಷಗಳ ತನಕ NHAI-REC ಬಾಂಡುಗಳಲ್ಲಿ ಕನಿಷ್ಠ 5 ವರ್ಷಗಳ ಅವಧಿಗೆ ಇರಿಸಿ. ಉಳಿದ ಹಣಕ್ಕೆ ಮಾತ್ರ ತೆರಿಗೆ ಸಲ್ಲಿಸುವ ಅವಕಾಶವಿದೆ. (ಸೆಕ್ಷನ್‌ 54ಇಸಿ). capital gain tax ಸಂಪೂರ್ಣವಾಗಿ ಉಳಿಸಲು ನೀವು ಬಯಸಿದಂತೆ ಇಬ್ಬರು ಮಕ್ಕಳ ಹೆಸರಿನಲ್ಲಿ, ನಿಮಗೆ ಬಂದಿರುವ ಲಾಭದ ಸಂಪೂರ್ಣ ಹಣ ಸೆಕ್ಷನ್‌ 54 ಎಫ್ ಆಧಾರದ ಮೇಲೆ ಮೂರು ವರ್ಷಗಳ ಅವಧಿಯೊಳಗೆ ಎರಡು ಮನೆ ಮಾಡಿಕೊಡಬಹುದು.

ಆದರೆ, ಬರೇ ನಿವೇಶನ ಕೊಳ್ಳುವಂತಿಲ್ಲ. ನಿವೇಶನ ಮಾರಾಟ ಮಾಡಿದ್ದರಿಂದ ಬರುವ ಹಣ ನಗದು ರೀತಿಯಲ್ಲಿ ಪಡೆಯುವಂತಿಲ್ಲ. ಡಿ.ಡಿ ಅಥವಾ ಪೇ ಆರ್ಡರ್‌ ಮೂಖಾಂತರವೇ ಪಡೆಯಬೇಕು.

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !