ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: 'ಮಕ್ಕಳ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡಿ'

Last Updated 29 ಜೂನ್ 2021, 17:47 IST
ಅಕ್ಷರ ಗಾತ್ರ

* ಪ್ರಶ್ನೆ: ನಾನು ಸರ್ಕಾರಿ ನೌಕರ. 2020ರ ಜನವರಿಯಲ್ಲಿ ಸಹೋದ್ಯೋಗಿಗೆಬ್ಯಾಂಕ್‌ನಲ್ಲಿ ₹ 1 ಲಕ್ಷ ಸಾಲ ಪಡೆಯಲು ನಾನು ಜಾಮೀನು ಹಾಕಿದ್ದೆ. ಆತನ ಸಾಲದ ಮಾಸಿಕ ಕಂತು ತುಂಬಲು ನಮ್ಮ ಇಲಾಖೆಯಿಂದ ಬ್ಯಾಂಕ್‌ಗೆ undertaking letter ಕೊಟ್ಟಿರುತ್ತಾರೆ. ಸಾಲ ಪಡೆದ ವ್ಯಕ್ತಿ ಕೋವಿಡ್‌ನಿಂದಾಗಿ ಕಳೆದ ತಿಂಗಳು ಮರಣ ಹೊಂದಿದ್ದಾರೆ. ನನಗೆ ಈಗ ಬ್ಯಾಂಕ್‌ನವರು ಮರಣ ಹೊಂದಿದ ವ್ಯಕ್ತಿಯ ಸಾಲ ತೀರಿಸುವಂತೆ ನೋಟಿಸ್‌ ಕಳುಹಿಸಿದ್ದಾರೆ. ನಾನು ತುಂಬಾ ಗೊಂದಲದಲ್ಲಿ ಇದ್ದೇನೆ. ಮಾರ್ಗದರ್ಶನ ಮಾಡಿ.
-ರಾಮಪ್ಪ, ಹುಬ್ಬಳ್ಳಿ

ಉತ್ತರ: ನಿಮ್ಮ ಇಲಾಖೆಯವರು, ಸದ್ಯ ಮರಣ ಹೊಂದಿದ ವ್ಯಕ್ತಿಯ ಸಾಲ ತೀರಿಸುವಂತೆ ಬ್ಯಾಂಕ್‌ಗೆ undertaking letter ಕೊಟ್ಟಿರುವುದರಿಂದ ನಿಮಗೆ ಬಂದಿರುವ ಬ್ಯಾಂಕ್‌ ನೋಟಿಸ್‌ ಅನ್ನು ನಿಮ್ಮ ಮೇಲಿನ ಅಧಿಕಾರಿಗೆ ತಿಳಿಸಿ. ಮರಣ ಹೊಂದಿರುವ ವ್ಯಕ್ತಿಗೆ ಸರ್ಕಾರದಿಂದ ಬರತಕ್ಕ ಹಣದಿಂದ ಬ್ಯಾಂಕ್‌ ಸಾಲ ತೀರಿಸಲು ಮನವಿ ಪತ್ರ ಕೊಡಿ ಹಾಗೂ ಮನವಿ ಪತ್ರದ ನಕಲು ಪ್ರತಿಯನ್ನು ಬ್ಯಾಂಕ್‌ಗೆ ಕೊಡಿ. ಜಾಮೀನು ಹಾಕುವವರಿಗೊಂದು ಕಿವಿಮಾತು. ಸಾಲಗಾರ ಸಾಲ ತೀರಿಸಲು ಅಸಮರ್ಥನಾದಲ್ಲಿ ಜಾಮೀನುದಾರರೇ ಸಾಲಗಾರನ ಸಾಲ ಮುರುಪಾವತಿಸಬೇಕಾಗುತ್ತದೆ. ಜಾಮೀನು ಎನ್ನುವುದು ಸಾಕ್ಷಿ ಎಂಬುದಾಗಿ ಬಹಳಷ್ಟು ಜನ ಸಹಿ ಹಾಕಿ ಪೇಚಾಡುತ್ತಾರೆ. ಈ ವಿಚಾರದಲ್ಲಿ ಓದುಗರು ಗಂಭಿರವಾಗಿ ಇರಬೇಕಾಗಿ ವಿನಂತಿ.

***

*ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 68 ವರ್ಷ. ವಾರ್ಷಿಕ ಪಿಂಚಣಿ ₹ 3,38,124. ಅಂಚೆ ಕಚೇರಿ ಮೇಲಿನ ಠೇವಣಿ ಬಡ್ಡಿ ₹ 34,500. ವಾರ್ಷಿಕ ಜೀವ ವಿಮಾ ಕಂತು ₹ 7,000. ಪಿಪಿಎಫ್‌ ₹ 12,000 ತುಂಬುತ್ತೇನೆ. ನನ್ನ ಹೆಂಡತಿಗೆ ಬಡ್ಡಿ ವರಮಾನ ₹ 25,000 ಬರುತ್ತದೆ. ನನ್ನ ಆದಾಯಕ್ಕೆ ನನ್ನ ಹೆಂಡತಿಯ ಆದಾಯ ಸೇರಿಸಬೇಕೆ? ರಿಟರ್ನ್ಸ್‌ ತುಂಬಬೇಕೇ ತಿಳಿಸಿ.
-ಆರ್‌.ಎಸ್‌. ದೇಸಾಯಿ, ಕಲಘಟಗಿ

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಹಾಗೂ ಬಡ್ಡಿವರಮಾನ ₹ 3,72,624. ನಿಮಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ 16(1ಎ) ₹ 50 ಸಾವಿರ, ಸೆಕ್ಷನ್‌ 80ಟಿಟಿಬಿ ಬಡ್ಡಿ ವರಮಾನದಲ್ಲಿ ₹ 34,500, ಸೆಕ್ಷನ್‌ 80 ಸಿ ಆಧಾರದ ಮೇಲೆ ವಿಮಾ ಕಂತು ಹಾಗೂ ಪಿಪಿಎಫ್‌ ₹ 19 ಸಾವಿರ ಹೀಗೆ ವಿನಾಯಿತಿಗಳಿವೆ. ನೀವು ಯಾವ ವಿನಾಯಿತಿ ಪಡೆಯದಿದ್ದರೂ ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ನಿಮ್ಮ ಹೆಂಡತಿಯ ಬಡ್ಡಿವರಮಾನ ₹ 25 ಸಾವಿರ ಸೇರಿಸಿದರೂ ತೆರಿಗೆ ಬರುವುದಿಲ್ಲ. ನಿಮ್ಮ ವಾರ್ಷಿಕ ವರಮಾನ ₹ 3 ಲಕ್ಷ ದಾಟುವುದರಿಂದ ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆ. ಈ ವರ್ಷ ಐ.ಟಿ. ರಿಟರ್ನ್ಸ್‌ ಸಲ್ಲಿಸಲು ಸೆಪ್ಟೆಂಬರ್‌ 30ರವರೆಗೆ ಅವಕಾಶ ಇದೆ. ನಿಮ್ಮ ವಾರ್ಷಿಕ ವರಮಾನ ಪರಿಗಣಿಸುವಾಗ ಮುಂದಿನ ವರ್ಷಗಳಲ್ಲಿಯೂ ಆದಾಯ ತೆರಿಗೆ ಕೊಡುವ ಅವಶ್ಯಕತೆ ಬರಲಿಕ್ಕಿಲ್ಲ. ತೆರಿಗೆ ಭಯದಿಂದ ಹೊರಬಂದು ಸುಖವಾಗಿ ಬಾಳಿರಿ.

***

ಪ್ರಶ್ನೆ: ನನಗೆ ಸ್ವಂತ ಮನೆ ಇದೆ. ವಯಸ್ಸು 35 ವರ್ಷ. ಸಂಬಳ ₹ 20 ಸಾವಿರ. 5 ವರ್ಷದ ಮಗ ಮತ್ತು ಮೂರು ವರ್ಷದ ಮಗಳು ಇದ್ದಾರೆ. ನನ್ನೊಡನೆ ₹ 20 ಲಕ್ಷವಿದೆ. ಈ ಹಣದಿಂದ ಪ್ರತೀ ತಿಂಗಳೂ ಬಡ್ಡಿ ಪಡೆಯಲು ಹಾಗೂ ಮಕ್ಕಳ ಭವಿಷ್ಯ ರೂಪಿಸಲು ಮಾರ್ಗದರ್ಶನ ಮಾಡಿ.
-ಚಿದಾನಂದ, ರಾಯಚೂರು

ಉತ್ತರ: ನಿಮಗೆ ತಿಂಗಳಿಗೆ ₹ 20 ಸಾವಿರ ಸಂಬಳ ಬರುವುದರಿಂದ, ಸ್ವಂತ ಮನೆ ಇರುವುದರಿಂದ ನಿಮ್ಮೊಡನಿರುವ ₹ 20 ಲಕ್ಷವನ್ನು ಬ್ಯಾಂಕ್‌ನಲ್ಲಿ 5 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇಡಿ. ಹೀಗೆ ಮಾಡಿದಲ್ಲಿ ನಿಮ್ಮ ಹಣ ಚಕ್ರಬಡ್ಡಿಯಲ್ಲಿ ಬೆಳೆದು ವೃದ್ಧಿಯಾಗುತ್ತದೆ. ಶೇಕಡ 5.5ರ ಬಡ್ಡಿದರದಲ್ಲಿ ನಿಮ್ಮ ₹ 20 ಲಕ್ಷ ಬಂಡವಾಳವು 5 ವರ್ಷದಲ್ಲಿ ₹ 26,28,200 ಆಗಿ ನಿಮ್ಮ ಕೈಸೇರುತ್ತದೆ. ನಿಮ್ಮ ಪರಿಸ್ಥಿತಿಗೆ ₹ 20 ಲಕ್ಷ ಠೇವಣಿ ಇರಿಸಿ ಪ್ರತೀ ತಿಂಗಳೂ ಬಡ್ಡಿ ಪಡೆಯುವುದು ಎಂದಿಗೂ ಸೂಕ್ತವಲ್ಲ. ಜೊತೆಗೆ ಹೀಗೆ ಬಂದ ಬಡ್ಡಿ ನಿಮ್ಮ ಕೈಸೇರುತ್ತಲೇ ಒಂದಲ್ಲಾ ಒಂದು ರೀತಿಯಲ್ಲಿ ಖರ್ಚಾಗಿ ಬಿಡುತ್ತದೆ. ಈ ರೀತಿ ಮಾಡುವುದು ಸರಿಯಲ್ಲ. ಉಳಿಸಿದ ಹಣ ನಿಮ್ಮ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತದೆ. ಸಾಧ್ಯವಾದರೆ ನಿಮ್ಮ ಸಂಬಳದಲ್ಲಿ ಎಷ್ಟಾದರೂ ಉಳಿಸಿ ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳೂ ಉಳಿತಾಯ ಮಾಡುತ್ತ ಬನ್ನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT