ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಆ್ಯಪ್‌ಗಳ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ; ಸುರಕ್ಷಿತವೇ?

Last Updated 15 ಮಾರ್ಚ್ 2022, 19:29 IST
ಅಕ್ಷರ ಗಾತ್ರ

ಪ್ರಶ್ನೆ: ಕೆಲವು ಸ್ಮಾರ್ಟ್‌ಫೋನ್‌ ಆ್ಯಪ್‌ಗಳ ಮೂಲಕ ಮ್ಯೂಚುವಲ್ ಫಂಡ್‌ಗಳ ವ್ಯವಸ್ಥಿತ ಹೂಡಿಕೆ ಯೋಜನೆಗೆ (ಎಸ್‌ಐಪಿ) ನಾವೇ ನೇರವಾಗಿ ಹಣ ಕಟ್ಟುತ್ತಿದ್ದರೆ ಅಪಾಯ ಇದೆಯೇ? ಈ ಹೂಡಿಕೆ ಸರಿಯೇ, ತಪ್ಪೇ? ಇಲ್ಲಿ ಸಂಪರ್ಕಕ್ಕೆ ಯಾರೂ ಸಿಗುವುದಿಲ್ಲ.
-ಎಸ್.ಕೆ. ಜೈನ್, ಬೊಮ್ಮಾಪುರ ರಸ್ತೆ, ಹುಬ್ಬಳ್ಳಿ

ಉತ್ತರ: ಇಂದಿನ ಎಲೆಕ್ಟ್ರಾನಿಕ್ ಹಾಗೂ ತಂತ್ರಜ಼್ಞಾನ ಯುಗದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್‌ಗಳು ನಮ್ಮ ದೈನಂದಿನ ಬದುಕಿನ ಮಹತ್ವದ ಭಾಗವಾಗಿರುವ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಅದರ ಗುಣ–ಅವಗುಣಗಳು ಎಲ್ಲರಿಗೂ ಗೊತ್ತಿರುವ ವಿಚಾರ. ಈ ತಂತ್ರಜ಼್ಞಾನ ಬಳಸಿ ವ್ಯಾಪಾರ ವಹಿವಾಟು, ಆರ್ಥಿಕ ವ್ಯವಹಾರಗಳು ನಡೆಯುತ್ತಿರುವುದು ನಾವು ಅಲ್ಲಗಳೆಯಲಾಗದ ವಾಸ್ತವ. ಇಲ್ಲಿ ಒಳಿತು–ಕೆಡುಕು ಎರಡೂ ಇವೆ.

ಇಂತಹ ಸಂದರ್ಭದಲ್ಲಿ ಯಾವುದೇ ಹೂಡಿಕೆ ಮಾಡುವ ಮುನ್ನ ನೀವು ಆಯಾ ಆ್ಯಪ್‌ಗಳಲ್ಲಿ ಮ್ಯೂಚುವಲ್ ಫಂಡ್ ವಿತರಕರು ನೋಂದಾಯಿತ ಸಂಖ್ಯೆಯನ್ನು ಹೊಂದಿ ವ್ಯವಹರಿಸುತ್ತಿದ್ದಾರೆಯೇ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ನೋಂದಣಿ ಇಲ್ಲದ ವಿತರಕರೊಡನೆ ವ್ಯವಹರಿಸದಿರಿ.

ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟದ ವೆಬ್‌ಸೈಟ್‌ನಲ್ಲಿ (www.amfiindia.com) ವಿತರಕರ ನೋಂದಾಯಿತ ಸಂಖ್ಯೆಯನ್ನು ಹಾಕಿ ಅವರ ಪೂರ್ಣ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬಹುದು. ಮಾತ್ರವಲ್ಲ, ಇಂದು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮುನ್ನ, ನಾವು ನಮ್ಮನ್ನು ಹೂಡಿಕೆಯ ಪ್ರಪಂಚದ ವ್ಯವಹಾರಕ್ಕೆ ಅಣಿ ಮಾಡಿಕೊಳ್ಳಬೇಕು. ಹೂಡಿಕೆದಾರರು ತಮ್ಮ ಹಕ್ಕು-ಜವಾಬ್ದಾರಿ ಅರಿತು ವ್ಯವಹರಿಸಬೇಕಾದುದು ಇಂದಿನ ಯುಗದಲ್ಲಿ ಅನಿವಾರ್ಯ.

__

ಪ್ರಶ್ನೆ: ನಾನು ಸ‌ರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದು ಪ್ರತಿ ತಿಂಗಳು ನಿವೃತ್ತಿ ವೇತನ ಪಡೆಯುತ್ತಿದ್ದೇನೆ. ನನಗೆ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು ಎಲ್ಲರೂ ಒಳ್ಳೆಯ ನೌಕರಿಯಲ್ಲಿದ್ದಾರೆ. ಹಿರಿಯ ಮಗಳಿಗೆ ಒಬ್ಬ ಮಗ (12 ವರ್ಷ ವಯಸ್ಸು), ಎರಡನೆಯ ಮಗಳಿಗೆ ಒಬ್ಬ ಮಗ (12 ವರ್ಷ) ಹಾಗೂ ಒಬ್ಬಳು ಮಗಳು (5 ವರ್ಷ). ನನ್ನ ಮಗನಿಗೆ ಹೆಣ್ಣು ಮಗು (1 ವರ್ಷ). ನಾಲ್ಕು ಜನ ಮೊಮ್ಮಕ್ಕಳಿದ್ದಾರೆ. ಈ ವರ್ಷದಲ್ಲಿ ಮೊಮ್ಮಕ್ಕಳಿಗೆ ಅವರ ಹುಟ್ಟುಹಬ್ಬಕ್ಕೆ ನನ್ನ ಪಿಂಚಣಿ ಉಳಿತಾಯದ ಹಣದಲ್ಲಿ ಪ್ರತಿಯೊಬ್ಬರಿಗೆ ₹ 50,000 ಕೊಡಬೇಕೆಂದಿದ್ದೇನೆ. ಯಾವ ವಿಧದಿಂದ ಕೊಟ್ಟರೆ ಹೆಚ್ಚು ಅನುಕೂಲ? ಅಂದರೆ, ಎಫ್‌.ಡಿ. ಅಥವಾ ಮ್ಯೂಚುವಲ್ ಫಂಡ್ ಹೀಗೆ ಯಾವ ರೂಪದಲ್ಲಿ ಕೊಡಬೇಕು ಎಂಬುದನ್ನು ತಿಳಿಸಿ.
-ಸುಭಾಶ್ಚಂದ್ರ, ಚಾಲುಕ್ಯ ನಗರ, ಬಾದಾಮಿ

ಉತ್ತರ: ನೀವು ಪ್ರಶ್ನೆಯಲ್ಲಿ ಉಲ್ಲೇಖಿಸಿದಂತೆ ತಲಾ ₹ 50,000 ಹಣವನ್ನು ನಿಮ್ಮ ನಾಲ್ವರು ಮೊಮ್ಮಕ್ಕಳಿಗೆ ಉಡುಗೊರೆಯಾಗಿ ಕೊಡಬೇಕೆಂದಿದ್ದೀರಿ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56ರ ಪ್ರಕಾರ, ಸಂಬಂಧಿಕರಿಂದ ಪಡೆದ ಉಡುಗೊರೆಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ. ಆ ಸೆಕ್ಷನ್‌ನಲ್ಲಿ ಉಲ್ಲೇಖಿಸಿರುವ ಸಂಬಂಧಿಗಳ ನಿರ್ದಿಷ್ಟ ಪಟ್ಟಿಯು ಅಜ್ಜ-ಅಜ್ಜಿಯರು, ಮೊಮ್ಮಕ್ಕಳ ಹೆಸರಲ್ಲಿ ಕೊಡುವ ಉಡುಗೊರೆಯನ್ನೂ ಒಳಗೊಂಡಿದೆ.

ಪ್ರಸ್ತುತ ಇರುವ ಕಾನೂನಿನಂತೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಲ್ಲಿ ಯಾವುದೇ ಬ್ಯಾಂಕ್ ಅಥವಾ ಮ್ಯೂಚುವಲ್ ಫಂಡ್ ಖಾತೆ ತೆರೆದರೆ ಅವರ ಪೋಷಕರ ಸಹಾಯದಿಂದ ಅದರಲ್ಲಿ ವ್ಯವಹಾರ ನಡೆಸಬೇಕಾಗುತ್ತದೆ. ಅವರಿಗೆ 18 ವರ್ಷ ಪ್ರಾಯ ತುಂಬಿದ ನಂತರ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಆ ಖಾತೆಗಳಲ್ಲಿ ಅವರೇ ಖುದ್ದಾಗಿ ವ್ಯವಹರಿಸಲು ಅವಕಾಶ ಮಾಡಿಕೊಡಬಹುದು. ಅಲ್ಲಿಯ ತನಕ ಹೆತ್ತವರು / ಪೋಷಕರು ತಮ್ಮ ಆದಾಯದೊಡನೆ ಮಕ್ಕಳ ಖಾತೆಯಲ್ಲಿ ಬರುವ ಯಾವುದೇ ಹೂಡಿಕೆಯ ಮೇಲಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೂ ವಾರ್ಷಿಕವಾಗಿ ₹ 1500ರ ತನಕದ ಆದಾಯಕ್ಕೆ ವಿನಾಯಿತಿ ಇದೆ.

ಬ್ಯಾಂಕ್‌ಗಳಲ್ಲಿಡುವ ಎಫ್.ಡಿ. ನಿಶ್ಚಿತ ಆದಾಯ ನೀಡಬಲ್ಲುದು. ಆದರೆ ಉತ್ತಮ ಮ್ಯೂಚುವಲ್ ಫಂಡ್‌ಗಳು ದೀರ್ಘಾವದಿಯಲ್ಲಿ ಎಫ್.ಡಿ.ಗಿಂತ ಹೆಚ್ಚಿನ ಲಾಭ ನೀಡಬಹುದು. ಅದು ಷೇರುಪೇಟೆಯ ಏರಿಳಿತಕ್ಕೆ ಅನುಗುಣವಾಗಿ ಇರುತ್ತದೆ ಎಂಬುದನ್ನು ಅರಿತಿರಿ. ಖಾತೆಗಳ ನಿರ್ವಹಣೆಯ ದೃಷ್ಟಿಯಿಂದ, ನೀವು ಮೊದಲ ಹಂತದಲ್ಲಿ ಆ ಮೊತ್ತವನ್ನು ನಿಮ್ಮ ಮಕ್ಕಳಿಗೆ ನೀಡಿ, ತದನಂತರ ಅವರು ಅದೇ ಮೊತ್ತವನ್ನು ನಿಶ್ಚಿತ ಕಂತುಗಳಲ್ಲಿ ಮುಂದಿನ 12 ತಿಂಗಳ ಸಮ ಕಂತುಗಳಲ್ಲಿ ಎಸ್.ಐ.ಪಿ ಹೂಡಿಕೆ ಮಾಡುವ ಯೋಜನೆ ಮಾಡಿಸಿ. ಅದೇ ಹೂಡಿಕೆ ಮುಂದಿನ 5-10 ವರ್ಷಗಳಲ್ಲಿ ಒಳ್ಳೆಯ ಲಾಭ ನೀಡಬಲ್ಲುದು.

_______

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT