ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿಸಲು ನಿವೇಶನ ಖರೀದಿಸಬೇಕು ಎಂದುಕೊಂಡಿದ್ದೇನೆ

Last Updated 4 ಜನವರಿ 2023, 1:29 IST
ಅಕ್ಷರ ಗಾತ್ರ

ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ

ಪ್ರಶ್ನೆ: ನಾನೊಬ್ಬ ನಿವೃತ್ತ ಬ್ಯಾಂಕ್ ನೌಕರ. 2018ರಲ್ಲಿ ನಿವೃತ್ತಿ ಹೊಂದಿರುವೆ. ಆಗ ಐ.ಟಿ. ವಿವರ ಸಲ್ಲಿಸಿರುತ್ತೇನೆ. ಈಗ ನನಗೆ ಪಿಂಚಣಿ ಹೊರತು ಯಾವುದೇ ಆದಾಯ ಇಲ್ಲ. ತಿಂಗಳ ಪಿಂಚಣಿ ₹ 33,000. ಅದರಲ್ಲಿ ₹ 9,000 ಗೃಹ ಬಳಕೆಯ ಸಾಲಕ್ಕೆ ಜಮಾ ಆಗುತ್ತದೆ. ಉಳಿದಂತೆ ₹ 22,000 ನನ್ನ ಬಳಿ ಉಳಿಯುತ್ತದೆ. ನನ್ನ ಹೆಸರಿನಲ್ಲಿ ಯಾವುದೇ ಠೇವಣಿ ಇರುವುದಿಲ್ಲ. ಉಳಿತಾಯ ಖಾತೆಯಲ್ಲೂ ಹೆಚ್ಚಿನ ಹಣ ಇಲ್ಲ. ಆದಾಯ ತೆರಿಗೆ ಇಲಾಖೆಯಿಂದ ಐ.ಟಿ. ವಿವರ ಸಲ್ಲಿಸಲು ಸೂಚನೆ ಬಂದಿದೆ. ನಾನು ಮಾಹಿತಿ ಸಲ್ಲಿಸಲೇಬೇಕೇ?

ಪ್ರಮೋದ ಶ್ರೀಕಾಂತ ದೈತೋಟ
ಪ್ರಮೋದ ಶ್ರೀಕಾಂತ ದೈತೋಟ

ಉತ್ತರ: ಆದಾಯ ತೆರಿಗೆ ಇಲಾಖೆ ತನ್ನಲ್ಲಿರುವ ಮಾಹಿತಿ ಹಾಗೂ ತಂತ್ರಜ್ಞಾನದ ನೆರವಿನಿಂದ ತೆರಿಗೆದಾರರಿಗೆ ಕಾಲಕಾಲಕ್ಕೆ ಎಚ್ಚರಿಕೆಯ ಸೂಚನೆಗಳನ್ನು ಕಳಿಸುತ್ತಿರುತ್ತದೆ. ಆದಾಯವಿದ್ದೂ ತೆರಿಗೆ ವಿವರ ಸಲ್ಲಿಸಲು ಮರೆತಿದ್ದರೆ ಅಥವಾ ಯಾವುದಾದರೂ ತೆರಿಗೆ ಕಡಿತವಾಗಿದ್ದು ನೀವು ವಿವರ ಸಲ್ಲಿಸದಿದ್ದರೂ ಮುನ್ಸೂಚನಾ ಮಾಹಿತಿಯಾಗಿ ಇಲಾಖೆಯು ಸಂದೇಶ ಕಳಿಸುವ ಮೂಲಕ ತೆರಿಗೆದಾರರನ್ನು ಎಚ್ಚರಿಸುತ್ತಿರುತ್ತದೆ. ಇದರ ಅರ್ಥ ತೆರಿಗೆದಾರರು ಕಡ್ಡಾಯವಾಗಿ ವಿವರ ಸಲ್ಲಿಸಬೇಕೆಂದಲ್ಲ. ಕಾನೂನಿನ ಅಡಿ ಯಾವುದೇ ಲೋಪ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು, ಸಂದೇಶಗಳಿಗೆ ಸ್ಪಂದಿಸದಿದ್ದರೆ ಪರವಾಗಿಲ್ಲ. ಆದರೆ, ನಿರ್ದಿಷ್ಟ ಮಾಹಿತಿಯೊಂದಿಗೆ ನೋಟಿಸ್ ರವಾನಿಸಿದ್ದರೆ ಅದಕ್ಕೆ ಸೂಕ್ತ ಉತ್ತರ ಅಥವಾ ಪರಿಹಾರ ಹುಡುಕಿಕೊಳ್ಳಬೇಕು.

ನೀವು ನಿವೃತ್ತಿಯ ನಂತರ ಪಿಂಚಣಿ ಆದಾಯ ಮಾತ್ರ ಹೊಂದಿದ್ದೀರಿ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 3.96 ಲಕ್ಷ. ನೀವು ಹಿರಿಯ ನಾಗರೀಕರಾಗಿದ್ದರೆ ತೆರಿಗೆ ವಿನಾಯಿತಿ ಆದಾಯ ಮಿತಿ ₹ 3 ಲಕ್ಷ. ನೀವು ವಾರ್ಷಿಕ ₹ 5 ಲಕ್ಷಕ್ಕಿಂತ ಅಧಿಕ ತೆರಿಗೆಗೊಳಪಡುವ ಆದಾಯ ಹೊಂದಿರದ ಕಾರಣ ಆದಾಯ ತೆರಿಗೆಯ ಸೆಕ್ಷನ್ 87ಎ ಅಡಿ ₹ 12,500ರತನಕ ಆದಾಯ ತೆರಿಗೆ ವಿನಾಯಿತಿಗೆ ಅರ್ಹರು. ಆದರೆ, ನಿಮ್ಮ ಆದಾಯ ₹ 3 ಲಕ್ಷಕ್ಕಿಂತ ಅಧಿಕವಿರುವುದರಿಂದ ತೆರಿಗೆ ವಿವರ ಸಲ್ಲಿಸಿ ರಿಯಾಯಿತಿ ಪಡೆಯಬೇಕು. ಯಾವುದೇ ಸಂದರ್ಭದಲ್ಲಿ ತೆರಿಗೆ ವಿವರ ಸಲ್ಲಿಸುವಲ್ಲಿ ಲೋಪವಾದರೆ ದಂಡ ಪಾವತಿಸಬೇಕಾಗುತ್ತದೆ.

ಸಾಮಾನ್ಯವಾಗಿ ಆರ್ಥಿಕ ವರ್ಷ ಮುಗಿದ ನಂತರ ಜುಲೈ 31ರೊಳಗೆ ವೈಯಕ್ತಿಕ ತೆರಿಗೆದಾರರು ವಿವರ ಸಲ್ಲಿಸಬೇಕು. ತಡವಾಗಿ ದಂಡದೊಂದಿಗೆ ಇದನ್ನು ಡಿಸೆಂಬರ್ 31ರೊಳಗೂ ಸಲ್ಲಿಸಬಹುದು. ತದನಂತರ ನಿರ್ದಿಷ್ಟ ವರ್ಷಕ್ಕೆ ಸಂಬಂಧಿಸಿ ವಿವರ ಸಲ್ಲಿಸಬೇಕಾದರೆ, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ ನಂತರವಷ್ಟೇ ಅದಕ್ಕೆ ಪ್ರತ್ಯುತ್ತರವಾಗಿ ವಿವರ ಸಲ್ಲಿಸಲು ಸಾಧ್ಯ.

ಊರು ಬೇಡ , ಹೆಸರು ಬೇಡ

ಪ್ರಶ್ನೆ: ನಾನು ಹಿರಿಯ ನಾಗರಿಕ, ಒಂದು ಫ್ಲ್ಯಾಟ್ ಖರೀದಿಸಿ ಒಂದೇ ವರ್ಷದಲ್ಲಿ ಮಾರಾಟ ಮಾಡಿದೆ. ಇದಕ್ಕೆ ಸಂಬಂಧಿಸಿ ಟಿಡಿಎಸ್ ಕಟ್ಟಿದೆ. ಲಾಭಾಂಶದ ಮೇಲೆ ಬಂಡವಾಳ ವೃದ್ಧಿ ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಉಳಿಸುವ ಉದ್ದೇಶದಿಂದ ನಿವೇಶನ ಖರೀದಿಸಬೇಕು ಎಂದುಕೊಂಡಿದ್ದೇನೆ.

ಪಡೆದಿರುವ ಲಾಭಕ್ಕೆ ತೆರಿಗೆ ಉಳಿತಾಯ ಮಾಡುವ ಉದ್ದೇಶದಿಂದ ಬಿಲ್ಡರ್ ನಮೂದಿಸುವ ಖರ್ಚಿನ ಹೊರತಾಗಿ ಇತರ ಯಾವ್ಯಾವ ಖರ್ಚುಗಳನ್ನು ಸೇರಿಸಬಹುದು? ನಾನು ಖರೀದಿಸಿದ್ದ ಫ್ಲ್ಯಾಟ್ ನನ್ನ ಮನೆಯಿಂದ ಸುಮಾರು 350 ಕಿ.ಮೀ ದೂರವಿದ್ದು ಮಾರಾಟದ ಸಲುವಾಗಿ 8-10 ಸಲ ಖಾಸಗಿ ವಾಹನದಲ್ಲಿ ಪ್ರಯಾಣಿಸಿದ್ದೇನೆ. ಈ ಖರ್ಚನ್ನು ಸೇರಿಸಬಹುದೇ? ಈ ವ್ಯವಹಾರವನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಘೋಷಿಸಬೇಕೇ?

ಉತ್ತರ: ಯಾವುದೇ ಆಸ್ತಿ ಮಾರಾಟ ಮಾಡಿದಾಗ ಅದಕ್ಕೆ ಸಂಬಂಧಿಸಿದ ಲಾಭ–ನಷ್ಟ ಲೆಕ್ಕ ಹಾಕುವ ಮೊದಲು, ಆ ವ್ಯವಹಾರಕ್ಕೆ ಸಂಬಂಧಿಸಿದ ಅತ್ಯಗತ್ಯ ಖರ್ಚುಗಳನ್ನು ಮಾರಾಟದ ಮೌಲ್ಯದಿಂದ ಕಳೆಯಬಹುದು. ಇಲ್ಲಿ ಪರೋಕ್ಷ ಖರ್ಚನ್ನು ಕಳೆಯಲು ಆಸ್ಪದವಿಲ್ಲ. ಉದಾಹರಣೆಗೆ, ಓರ್ವ ದಲ್ಲಾಳಿಯ ಮುಖಾಂತರ ನಿಮ್ಮ ಆಸ್ತಿ ಮಾರಾಟವಾಗಿದ್ದರೆ, ಅವರಿಗೆ ಪಾವತಿಸಿದ ದಲ್ಲಾಳಿ ಶುಲ್ಕ, ಆಸ್ತಿ ವರ್ಗಾವಣೆಗಾಗಿ ಮಾಲೀಕರ ಪ್ರಯಾಣದ ಖರ್ಚು, ಕಾನೂನು ಸಲಹಾ ವೆಚ್ಚ ಹೀಗೆ ಕೆಲವು ಖರ್ಚುಗಳನ್ನು ಮಾರಾಟದ ಮೊತ್ತದಿಂದ ಕಳೆಯಬಹುದು. ಆದರೆ, ಇದು ವರ್ಗಾವಣೆಗೆ ಸಂಬಂಧಪಟ್ಟ ನೇರ ವೆಚ್ಚವಾಗಿರಬೇಕೇ ವಿನಾ ಇತರ ಖರ್ಚುಗಳಾಗಿರಬಾರದು. ನೀವು ಹಲವು ಬಾರಿ ಭೇಟಿ ನೀಡುವ ಸಂದರ್ಭದಲ್ಲಿ ಹಲವಾರು ಖರೀದಿ ಆಕಾಂಕ್ಷಿಗಳಿಗೆ ನಿಮ್ಮ ಸ್ಥಳ ತೋರಿಸಲು ಖರ್ಚು ಮಾಡಿರಬಹುದು. ಇಲ್ಲಿ ಎಲ್ಲ ಬಾರಿಯೂ ಆದ ಖರ್ಚುಗಳನ್ನು ಕಳೆಯಲು ಆಸ್ಪದವಿಲ್ಲ. ಕೊನೆಯ ಹಂತದ ವರ್ಗಾವಣೆಗೆ ಸಂಬಂಧಿಸಿ ಮಾಡಿರುವ ಪ್ರಯಾಣ ವೆಚ್ಚಕ್ಕೆ ಅಗತ್ಯ ಮಾಹಿತಿಯೊಂದಿಗೆ ವಿನಾಯಿತಿ ಪಡೆಯಬಹುದು. ತೆರಿಗೆ ಇಲಾಖೆ ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದರೆ ಕೆಲವೊಮ್ಮೆ ಅದೂ ಪ್ರಶ್ನೆಗೊಳಪಡಬಹುದು. ಆದರೆ, ಇದು ಸಣ್ಣ ಮೊತ್ತವಾಗಿರಬಹುದಾದ್ದರಿಂದ ನಿಮ್ಮ ಒಟ್ಟಾರೆ ಮಾರಾಟ ಮೊತ್ತದ ಮೇಲೆ, ತೆರಿಗೆ ಮೇಲೆ ದೊಡ್ಡ ಪ್ರಮಾಣದ ಲಾಭವಾಗಲಾರದು.

ನಿಮ್ಮ ಆಸ್ತಿಯನ್ನು ಒಂದು ವರ್ಷದ ಅವಧಿಯಲ್ಲೇ ಮಾರಾಟ ಮಾಡಿರುತ್ತೀರಿ. ಹೀಗಾಗಿ, ನಿಮ್ಮ ಲಾಭ ಅಲ್ಪಾವಧಿಯ ಬಂಡವಾಳ ಲಾಭ ಆಗಿದ್ದು, ನಿಮ್ಮ ಇತರ ಆದಾಯದೊಂದಿಗೆ ಆಸ್ತಿ ಮಾರಾಟದಿಂದ ಬಂದ ಲಾಭವನ್ನೂ ಸೇರಿಸಿ, ನಿಮಗೆ ಅನ್ವಯವಾಗುವ ವೈಯಕ್ತಿಕ ತೆರಿಗೆ ದರದಂತೆ ತೆರಿಗೆ ಲೆಕ್ಕ ಹಾಕಲಾಗುತ್ತದೆ. ನೀವು ಅಲ್ಪಾವಧಿಯಲ್ಲಿ (24 ತಿಂಗಳೊಳಗೆ) ಆಸ್ತಿ ಮಾರಾಟ ಮಾಡಿರುವುದರಿಂದ, ನಿಮಗೆ ಹೊಸ ಆಸ್ತಿಯಲ್ಲಿ ಹೂಡಿಕೆ ಮಾಡಿದಾಗ ಸಿಗಬಹುದಾದ ವಿಶೇಷ ವಿನಾಯಿತಿಗಳು ಸಿಗುವುದಿಲ್ಲ. ಆದರೆ ನೀವು ಹಿರಿಯ ನಾಗರೀಕರಾಗಿರುವುದರಿಂದ, ಗರಿಷ್ಠ ತೆರಿಗೆ ವಿನಾಯಿತಿ ಆದಾಯ ಮಿತಿ ₹ 3 ಲಕ್ಷಕ್ಕೆ ವಿನಾಯಿತಿ ಸಿಗಲಿದೆ ಹಾಗೂ ₹ 1.50 ಲಕ್ಷದ ತೆರಿಗೆ ಉಳಿತಾಯದ (ಸೆಕ್ಷನ್ 80 ಸಿ ಅಡಿ) ಸಾಂಪ್ರದಾಯಿಕ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ನೀವು ಫ್ಲ್ಯಾಟ್ ಮಾರಾಟಕ್ಕೆ ಸಂಬಂಧಿಸಿ ಟಿಡಿಎಸ್ ಮಾಡಿದ್ದರೆ ಒಳ್ಳೆಯದೆ. ಕೊನೆಯ ಹಂತದ ತೆರಿಗೆ ಭಾರ ಒಂದಷ್ಟು ತಗ್ಗಿದಂತಾಗುತ್ತದೆ. ನಿಮ್ಮ ಒಟ್ಟಾರೆ ತೆರಿಗೆಯನ್ನು ವರ್ಷದ ಕೊನೆಗೆ ಲೆಕ್ಕ ಹಾಕುವಾಗ ಈಗಾಗಲೇ ಕಟ್ಟಿರುವ ತೆರಿಗೆಯನ್ನು ವಜಾ ಮಾಡಿ ಉಳಿದ ತೆರಿಗೆಯನ್ನಷ್ಟೇ ಕಟ್ಟಬಹುದು. ಮಾರಾಟದ ಮೊತ್ತವನ್ನು ತೆರಿಗೆ ಸಂಬಂಧಿಸಿ ಘೋಷಿಸುವುದು ಕಾನೂನಿನ ಅಡಿಅಗತ್ಯ. ಇದಕ್ಕೆ ಸಂಬಂಧಪಟ್ಟಂತೆ ಸೂಕ್ತ ಮಾಹಿತಿಯೊಂದಿಗೆ ನಿಮ್ಮ ವೈಯಕ್ತಿಕ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT