ಸೋಮವಾರ, ಅಕ್ಟೋಬರ್ 18, 2021
26 °C

ಪ್ರಶ್ನೋತ್ತರ| ಪಿಂಚಣಿ ಪಡೆಯುತ್ತಿರುವವರು ಆದಾಯ ತೆರಿಗೆಗೆ ಒಳಗಾಗುತ್ತಾರೆಯೇ?

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

ಆದಿನಾರಾಯಣ, ಬೆಂಗಳೂರು

ಪ್ರಶ್ನೆ: ನನ್ನ ವಯಸ್ಸು 75 ವರ್ಷ. ನಾನು ನಿವೃತ್ತ ಸರ್ಕಾರಿ ನೌಕರ. ಪ್ರತೀ ಬುಧವಾರ ನಿಮ್ಮ ಅಂಕಣ ಓದುತ್ತೇನೆ. ನನ್ನ ಪ್ರಶ್ನೆ ಹೀಗಿದೆ – ಪ್ರತಿ ನೌಕರ ತನ್ನ ನಿವೃತ್ತಿಯ ನಂತರ ಸಿಗುವ ಪಿಂಚಣಿಗೆ ತನ್ನ ಪತ್ನಿಯನ್ನು ನಾಮನಿರ್ದೇಶನ ಮಾಡುವುದು ಸಹಜ. ಒಂದು ವೇಳೆ ಪತ್ನಿ ಮೊದಲೇ ತೀರಿಕೊಂಡಲ್ಲಿ, ಪಿಂಚಣಿದಾರ ತನ್ನ ಕುಟುಂಬದ ಬೇರೆ ಯಾರನ್ನಾದರೂ ನಾಮನಿರ್ದೇಶನ ಮಾಡಲು ಅವಕಾಶ ಇದೆಯೇ?

ಉತ್ತರ: ಪಿಂಚಣಿದಾರ ತನ್ನ ಕಾಲಾನಂತರ ಬರುವ ಪಿಂಚಣಿ ಪಡೆಯಲು ಸಹಜವಾಗಿಯೇ ತನ್ನ ಹೆಂಡತಿಯ ಹೆಸರನ್ನು ನಾಮನಿರ್ದೇಶನ ಮಾಡಿರುತ್ತಾನೆ. ನೀವು ತಿಳಿಸಿದಂತೆ, ನಾಮ ನಿರ್ದೇಶನ ಆಗಿರುವ ವ್ಯಕ್ತಿ ಪಿಂಚಣಿ ಪಡೆಯುವ ವ್ಯಕ್ತಿಗಿಂತ ಮೊದಲೇ ಮರಣ ಹೊಂದಿದಲ್ಲಿ, ಪಿಂಚಣಿದಾರನಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದರೆ ಮಾತ್ರ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಅಪ್ರಾಪ್ತ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಪಿಂಚಣಿ ಸಿಗಲಾರದು.

ಹೆಸರು, ಊರು ಬೇಡ

ಪ್ರಶ್ನೆ: ನಾನು ವಿಮಾ ಕಂಪನಿಯಿಂದ ನಿವೃತ್ತನಾಗಿದ್ದು, ಆದಾಯ ತೆರಿಗೆ ಕಳೆದು ₹ 50 ಲಕ್ಷ ಬಂದಿರುತ್ತದೆ. ನಾನು ನನ್ನ ಅಕ್ಕನ (ಅವಿವಾಹಿತೆ) ಉಪಜೀವನಕ್ಕಾಗಿ ₹ 10 ಲಕ್ಷ ಹಣ ಗಿಫ್ಟ್‌ ಡೀಡ್‌ ಮಾಡಿ, ಅಂಚೆ ಕಚೇರಿ ಠೇವಣಿಯಲ್ಲಿ ಇರಿಸಿದೆ. ಈ ಠೇವಣಿಗೆ ನನ್ನ ನಾಮನಿರ್ದೇಶನವಿದೆ. ಈಗ ನನ್ನ ಅಕ್ಕ ಅನಾರೋಗ್ಯದಿಂದ ಮರಣ ಹೊಂದಿದ್ದು, ಅಂಚೆ ಕಚೇರಿಯವರು ನಮ್ಮಿಂದ ಮರಣ ಪತ್ರ ಪಡೆದು ಈ ಹಣ ನಾಮ ನಿರ್ದೇಶನ ಹೊಂದಿದ ನನಗೆ ಕೊಟ್ಟಿರುತ್ತಾರೆ. ಇದರಿಂದ ನನಗೆ ಆದಾಯ ತೆರಿಗೆ ಬರುತ್ತದೆಯೇ ತಿಳಿಸಿರಿ. ₹ 10 ಲಕ್ಷಕ್ಕೆ ನಾನು ಒಮ್ಮೆ ನಿವೃತ್ತಿಯಲ್ಲಿ ತೆರಿಗೆ ಪಾವತಿಸಿದ್ದೇನೆ.

ಉತ್ತರ: ನೀವು ಹಾಗೂ ನಿಮ್ಮ ಅಕ್ಕ ರಕ್ತ ಸಂಬಂಧಿಗಳು. ₹ 10 ಲಕ್ಷ ಗಿಫ್ಟ್‌ ಡೀಡ್‌ ಮುಖಾಂತರ ನೀವೇ ನಿಮ್ಮ ಅಕ್ಕನಿಗೆ ಕೊಟ್ಟಿದ್ದಾಗಿದೆ. ಈ ಕಾರಣದಿಂದ, ನಾಮನಿರ್ದೇಶನ ಹೊಂದಿ ನೀವು ಹೀಗೆ ಪಡೆಯವ ₹ 10 ಲಕ್ಷಕ್ಕೆ ಪುನಃ ಆದಾಯ ತೆರಿಗೆ ಕೊಡುವ ಅಗತ್ಯವಿಲ್ಲ. ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಠೇವಣಿ ಮಾಡುವಾಗ ನಾಮ ನಿರ್ದೇಶನ ಮಾಡಬೇಕಾಗುತ್ತದೆ. ಠೇವಣಿದಾರ ಮರಣ ಹೊಂದಿ, ನಾಮನಿರ್ದೇಶನ ಇರುವ ವ್ಯಕ್ತಿ ಹಣ ಪಡೆದಲ್ಲಿ ಅಂತಹ ಮೊತ್ತವನ್ನು ಹಣ ಪಡೆದವರ ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಿಲ್ಲ. ಮುಂದೆ ಈ ಹಣದಿಂದ ಬರುವ ಬಡ್ಡಿ ವರಮಾನವನ್ನು ಹಣ ಪಡೆದ ವ್ಯಕ್ತಿಯ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಕೊಡಬೇಕಾಗುತ್ತದೆ.

ಗುರು ಚನ್ನಬಸಪ್ಪ, ನೆಲಮಂಗಲ

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 71 ವರ್ಷ. ನನ್ನ ಮಾಸಿಕ ಪಿಂಚಣಿ ₹ 29,954. ಬ್ಯಾಂಕ್‌–ಅಂಚೆ ಕಚೇರಿಗಳಲ್ಲಿ ಠೇವಣಿ ಇಲ್ಲ. ಮೇ 2021ರ ನನ್ನ ಪಿಂಚಣಿಯಲ್ಲಿ ₹ 6,189 ಟಿಡಿಎಸ್ ಮಾಡಿದ್ದಾರೆ. ನಾನು ಆದಾಯ ತೆರಿಗೆಗೆ ಒಳಗಾಗುತ್ತೇನೆಯೇ ಎಂಬ ಬಗ್ಗೆ ಸಲಹೆ ಬೇಕಾಗಿದೆ. ಜನಸಾಮಾನ್ಯರಿಗೆ ಉಪಯುಕ್ತ ಆಗುವ ಅಂಕಣ ‘ಪ್ರಜಾವಾಣಿ’ ಹೊರತುಪಡಿಸಿ ಇನ್ಯಾವ ಪತ್ರಿಕೆಗಳಲ್ಲಿಯೂ ಬರುವುದಿಲ್ಲ. ‘ಪ್ರಜಾವಾಣಿ’ಗೆ ಹಾಗೂ ನಿಮಗೆ ಅಭಿನಂದನೆ.

ಉತ್ತರ: ಇಂದಿನ ಆದಾಯ ತೆರಿಗೆ ನಿಯಮದಂತೆ, ಯಾವುದೇ ವ್ಯಕ್ತಿಯ ವಾರ್ಷಿಕ ಒಟ್ಟು ಆದಾಯ ₹ 5 ಲಕ್ಷದೊಳಗೆ ಇರುವಲ್ಲಿ ಅವರಿಗೆ ಆದಾಯ ತೆರಿಗೆ ಇಲ್ಲ. ನಿಮ್ಮ ವಾರ್ಷಿಕ ಆದಾಯ ₹ 5 ಲಕ್ಷ ದಾಟುವ ತನಕ ನೀವು ತೆರಿಗೆಗೆ ಒಳಗಾಗುವುದಿಲ್ಲ. ನೀವು ಪಿಂಚಣಿದಾರ ಆದ್ದರಿಂದ ಸೆಕ್ಷನ್‌ 16(1ಎ) ಆಧಾರದಲ್ಲಿ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮೇಲೆ ವಿನಾಯಿತಿ ಪಡೆಯಬಹುದು. ಈ ಸವಲತ್ತು ಸೇರಿಸಿ ನಿಮ್ಮ ಒಟ್ಟು ಆದಾಯ ₹5,50,000 ದಾಟುವ ತನಕವೂ ತೆರಿಗೆಗೆ ಒಳಗಾಗುವುದಿಲ್ಲ.

ನಿಮ್ಮ ಈಗಿನ ವಾರ್ಷಿಕ ಒಟ್ಟು ಆದಾಯ ₹ 3,59,448. ಓರ್ವ ವ್ಯಕ್ತಿ ತೆರಿಗೆಗೆ ಒಳಗಾಗಲಿ, ಆಗದೇ ಇರಲಿ ಒಟ್ಟು ಆದಾಯ ₹ 2.50 ಲಕ್ಷ ದಾಟಿದಲ್ಲಿ, ಹಿರಿಯ ನಾಗರಿಕರಿಗೆ ₹ 3 ಲಕ್ಷ ದಾಟಿದಲ್ಲಿ, 80 ವರ್ಷ ದಾಟಿದವರಿಗೆ ₹ 5 ಲಕ್ಷ ದಾಟಿದಲ್ಲಿ ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆ. ನೀವು ಬ್ಯಾಂಕ್‌ನಿಂದ ಟಿಡಿಎಸ್‌ ಮೊತ್ತಕ್ಕೆ ಫಾರಂ ನಂಬರ್‌ 16(ಎ) ಪಡೆದು ಐ.ಟಿ. ರಿಟರ್ನ್ಸ್‌ ಸಲ್ಲಿಸಿ, ಕಡಿತವಾದ ₹ 6,189 ವಾಪಸು ಪಡೆಯಿರಿ. ಪತ್ರಿಕೆ ಹಾಗೂ ನನ್ನ ಮೇಲೆ ನೀವು ಇಟ್ಟಿರುವ ಗೌರವಕ್ಕೆ ವಂದನೆಗಳು.


ಪುರಾಣಿಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.