ಶುಕ್ರವಾರ, ಮಾರ್ಚ್ 31, 2023
23 °C

ಪ್ರಶ್ನೋತ್ತರ | ನಾಮನಿರ್ದೇಶನ ಎಂದರೇನು? ಇದರ ಉಪಯುಕ್ತತೆ ತಿಳಿಸಿ!

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

*ಪಾರ್ವತಿ, ಶಿರಗುಪ್ಪ

ಪ್ರಶ್ನೆ: ನಾಮನಿರ್ದೇಶನ ಎಂದರೇನು? ಇದರ ಉಪಯುಕ್ತತೆ ತಿಳಿಸಿ. ಚರ ಹಾಗೂ ಸ್ಥಿರ ಆಸ್ತಿಗಳ ಮೇಲೆ ನಾಮ ನಿರ್ದೇಶನ ಮಾಡಬಹುದೇ?

ಉತ್ತರ: ಇದು ತುಂಬಾ ಸರಳ ಪ್ರಶ್ನೆ ಎಂದು ಕಂಡರೂ ತುಂಬಾ ಅರ್ಥಪೂರ್ಣ. ಚರ ಆಸ್ತಿಗೆ ಮಾತ್ರ ನಾಮನಿರ್ದೇಶನ ಮಾಡಬಹುದು. ಸ್ಥಿರ ಆಸ್ತಿಗೆ ಉಯಿಲು ಮಾಡಬೇಕು. ಓರ್ವ ವ್ಯಕ್ತಿ ಬ್ಯಾಂಕ್‌ ಠೇವಣಿ, ಅಂಚೆ ಕಚೇರಿ ಠೇವಣಿ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿ ಇರಿಸಿ ಮೃತಪಟ್ಟಾಗ, ವಿಮಾ ಪಾಲಿಸಿ ಮಾಡಿಸಿ ಮೃತಪಟ್ಟಾಗ, ಬ್ಯಾಂಕ್‌ ಲಾಕರ್‌ನಲ್ಲಿ ಒಡವೆ ಇಟ್ಟು ಮೃತಪಟ್ಟಾಗ ನಾಮನಿರ್ದೇಶನ ಇದ್ದಲ್ಲಿ ಸುಲಭವಾಗಿ ಹಣ ಅಥವಾ ಒಡವೆ ಪಡೆಯಬಹುದು. ನಾಮನಿರ್ದೇಶನ ಇಲ್ಲದೇ ಇದ್ದರೆ, ಅವುಗಳನ್ನು ಪಡೆಯಲು ವಾರಸುದಾರರು ಕೋರ್ಟ್‌ ಮುಖಾಂತರ ಸಕ್ಸೆಶನ್‌ ಸರ್ಟಿಫಿಕೇಟ್‌ (succession certificate) ಪಡೆಯಬೇಕಾಗುತ್ತದೆ. ಅದೇ ರೀತಿ, ಸ್ಥಿರ ಆಸ್ತಿಗೆ ಉಯಿಲು ಬರೆಯುವುದು ಸೂಕ್ತ. ನಾಮ ನಿರ್ದೇಶನ ಹಾಗೂ ಉಯಿಲು ಮಾಡುವುದರಿಂದ ಕೋರ್ಟ್‌, ಕಚೇರಿ ವ್ಯವಹಾರವನ್ನು ಬಹಳಷ್ಟು ತಪ್ಪಿಸಬಹುದು. ಬ್ಯಾಂಕ್‌ ಠೇವಣಿಗೆ ಓರ್ವ ವ್ಯಕ್ತಿಯನ್ನು ಮಾತ್ರವೇ ನಾಮನಿರ್ದೇಶನ ಮಾಡಬಹುದಾದ್ದರಿಂದ ಹೆಚ್ಚಿನ ಮೊತ್ತದ ಠೇವಣಿ ಇಡುವಾಗ ಠೇವಣಿಯನ್ನು ವಿಂಗಡಿಸಿ, ಬೇರೆ ಬೇರೆಯಾಗಿ ನಾಮ ನಿರ್ದೇಶನ ಮಾಡುವುದು ಸೂಕ್ತ.

*****

*ವೀಣಾ, ಬಾಗಲಕೋಟೆ

ಪ್ರಶ್ನೆ: ನಾನು ಶಿಕ್ಷಕಿ. ವಯಸ್ಸು 33 ವರ್ಷ. ಪತಿ ಸರ್ಕಾರಿ ನೌಕರ. ವಯಸ್ಸು 35 ವರ್ಷ. ನನ್ನ ಹಾಗೂ ಪತಿಯ ಸಂಬಳ ಹಾಗೂ ಕಡಿತ ಈ ಕೆಳಗಿನಂತಿವೆ.

ನಮಗೆ ಇಬ್ಬರು ಹೆಣ್ಣು ಮಕ್ಕಳು. ಪ್ರತೀ ಬುಧವಾರ ನಿಮ್ಮ ಅಂಕಣ ಓದುತ್ತೇನೆ. ನಮ್ಮ ಶಾಲೆಯಲ್ಲಿ ನಿಮ್ಮ ಅಂಕಣದ ಮೇಲೆ ಚರ್ಚೆ ಕೂಡ ಮಾಡುತ್ತೇವೆ. ನಮಗೆ ಉತ್ತಮ ಉಳಿತಾಯ ಯೋಜನೆ ತಿಳಿಸಿ.

ಉತ್ತರ: ಸದ್ಯದ ಪರಿಸ್ಥಿತಿಯಲ್ಲಿ ನೀವಿಬ್ಬರೂ ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ಮನೆ ಬಾಡಿಗೆ, ಮನೆ ಖರ್ಚು ಕಳೆದು ನೀವು ತಿಂಗಳಿಗೆ ₹ 30 ಸಾವಿರ ಉಳಿಸಬಹುದು. ತಕ್ಷಣ ಇಬ್ಬರೂ ಹೆಣ್ಣು ಮಕ್ಕಳ ಹೆಸರಿನಲ್ಲಿ ತಲಾ ₹ 5 ಸಾವಿರವನ್ನು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತೊಡಗಿಸಲು ಪ್ರಾರಂಭಿಸಿ. ಉಳಿಯುವ ₹ 20 ಸಾವಿರದಲ್ಲಿ ₹ 10 ಸಾವಿರವನ್ನು ಒಂದು ವರ್ಷದ ಆರ್‌.ಡಿ. ಮಾಡಿ. ವರ್ಷಾಂತ್ಯಕ್ಕೆ ಬಂಗಾರದ ನಾಣ್ಯ ಕೊಂಡು ಬ್ಯಾಂಕ್‌ ಲಾಕರಿನಲ್ಲಿ ಇಡಿ. ಈ ಪ್ರಕ್ರಿಯೆ ಮಕ್ಕಳ ಮದುವೆ ತನಕ ನಿಲ್ಲಿಸಬೇಡಿ. ಇನ್ನುಳಿದ ₹ 10 ಸಾವಿರದಲ್ಲಿ ನೀವು ಹಾಗೂ ನಿಮ್ಮ ಪತಿ ತಲಾ ₹ 5 ಸಾವಿರದಂತೆ 10 ವರ್ಷಗಳ ಆರ್‌.ಡಿ. ಮಾಡಿ. 10 ವರ್ಷ ಮುಗಿಯುತ್ತಲೇ ₹ 16 ಲಕ್ಷ ಪಡೆಯುವಿರಿ.

******

*ರಾಮಣ್ಣ ಶೆಟ್ಟಿ, ಪೀಣ್ಯ, ದಾಸರಹಳ್ಳಿ

ಪ್ರಶ್ನೆ: ನಾನು ಮತ್ತು ನನ್ನ ಹೆಂಡತಿ ಹಿರಿಯ ನಾಗರಿಕರು. ನಮಗೆ ನಾಲ್ಕು ಮನೆಗಳಿವೆ. ಒಂದರಲ್ಲಿ ವಾಸವಾಗಿದ್ದೇವೆ. ಉಳಿದ ಮೂರು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದೇವೆ. ನಮಗೆ ನಾಲ್ಕು ಜನ ಮಕ್ಕಳು. ಎಲ್ಲರಿಗೂ ಮದುವೆ ಆಗಿ ಬೇರೆ ಬೇರೆ ಇದ್ದಾರೆ. ನನ್ನ ಹೆಸರಿನಲ್ಲಿ ₹ 50 ಲಕ್ಷ, ನನ್ನ ಹೆಂಡತಿ ಹೆಸರಿನಲ್ಲಿ ₹ 38 ಲಕ್ಷ ಬ್ಯಾಂಕ್‌ ಠೇವಣಿ ಇದೆ. ನನ್ನ ಹೆಂಡತಿ ಪಡೆಯುವ ಬಾಡಿಗೆ ಹಾಗೂ ಠೇವಣಿ ಮೇಲಿನ ಬಡ್ಡಿಯನ್ನು ನನ್ನ ಆದಾಯಕ್ಕೆ ಸೆರಿಸಬೇಕೇ ಅಥವಾ ಅವಳ ಆದಾಯಕ್ಕೆ ಅವಳೇ ಐ.ಟಿ. ರಿಟರ್ನ್ಸ್‌ ತುಂಬಬಹುದೇ ತಿಳಿಸಿ.

ಉತ್ತರ: ನಿಮ್ಮ ಹೆಂಡತಿ ಹೆಸರಿನಲ್ಲಿ ಮನೆ, ಬ್ಯಾಂಕ್‌ ಠೇವಣಿ ಅವರ ದುಡಿಮೆಯಿಂದ ಬಂದ ಸ್ವತ್ತಾದಲ್ಲಿ ಅಥವಾ ಅವರಿಗೆ ಅವರ ತಂದೆ ತಾಯಿಯಿಂದ ಬಂದ ಸ್ವತ್ತಾದಲ್ಲಿ ಅವುಗಳಿಂದ ಬರುವ ಆದಾಯವನ್ನು ನಿಮ್ಮ ಆದಾಯಕ್ಕೆ ಸೇರಿಸುವ ಅಗತ್ಯವಿಲ್ಲ. ಅವರೇ ಪ್ರತ್ಯೇಕವಾಗಿ ಐ.ಟಿ. ರಿಟರ್ನ್ಸ್‌ ತುಂಬಬಹುದು. ಆಸ್ತಿ ಹಾಗೂ ಠೇವಣಿ ನಿಮ್ಮ ದುಡಿಮೆಯಿಂದ ಬಂದಿರುವಲ್ಲಿ ನಿಮ್ಮ ಹೆಂಡತಿ ಆದಾಯವನ್ನು ನಿಮ್ಮ ಆದಾಯಕ್ಕೆ ಸೇರಿಸಬೇಕಾಗುತ್ತದೆ ಹಾಗೂ ನೀವೇ ತೆರಿಗೆ ಕೊಡಬೇಕಾಗುತ್ತದೆ. ನಿಮಗೊಂದು ಕಿವಿಮಾತು: ನಿಮ್ಮ ಆಸ್ತಿ ವಿಚಾರದಲ್ಲಿ ಇದುವರೆಗೆ ನೀವು ಉಯಿಲು ಪತ್ರ ಬರೆಯದೇ ಇರುವಲ್ಲಿ ತಕ್ಷಣವೇ ಕಾನೂನು ತಜ್ಞರನ್ನು ವಿಚಾರಿಸಿ ಉಯಿಲು ಬರೆದಿಡಿ. ಉಯಿಲಿಗೆ ಕಾನೂನಿನಂತೆ ಸ್ಟ್ಯಾಂಪ್‌ ಪೇಪರ್‌–ನೋಂದಣಿ ಅವಶ್ಯವಿಲ್ಲ. ನೀವು ಬಯಸಿದರೆ ನೋಂದಾಯಿಸಬಹುದು. ಓರ್ವ ವ್ಯಕ್ತಿ ಒಮ್ಮೆ ಉಯಿಲು ಬರೆದರೆ ಎಷ್ಟು ಬಾರಿ ಬೇಕಾದರೂ ಅದನ್ನು ಬದಲಾಯಿಸಬಹುದು. ಕೊನೆಯ ಉಯಿಲು ಮಾತ್ರವೇ ವ್ಯಕ್ತಿಯ ಮರಣಾನಂತರ ಜಾರಿಗೆ ಬರುತ್ತದೆ. ಉಯಿಲು ಬರೆಯದೇ ಇದ್ದರೆ ನಿಮ್ಮ ಕಾಲಾನಂತರ ನಿಮ್ಮ ಹೆಂಡತಿ, ಮಕ್ಕಳು ಸ್ಥಿರ ಆಸ್ತಿ ವಿಚಾರದಲ್ಲಿ ವಾರಸುದಾರರ ಹಕ್ಕು ಪತ್ರ ಪಡೆಯಲು ಹಣ ಖರ್ಚು ಮಾಡಿ, ಕೋರ್ಟು ಕಚೇರಿ ಅಲೆದಾಡಬೇಕಾದೀತು. 

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು