ಶಿಕ್ಷಿತರಾದಾಗಲೇ ಕೃಷಿಗೆ ಬೆಲೆ; ರೈತರ ಆತ್ಮಹತ್ಯೆ ನಡೆಯಲ್ಲ: ಕೃಷಿ ವಿಜ್ಞಾನಿ

7
ಅಮೆರಿಕದಲ್ಲಿನ ಕೃಷಿ ವಿಜ್ಞಾನಿ ಡಾ.ಭೀಮನಗೌಡ ಸಂಗನಗೌಡ ಪಾಟೀಲ ಅಭಿಮತ

ಶಿಕ್ಷಿತರಾದಾಗಲೇ ಕೃಷಿಗೆ ಬೆಲೆ; ರೈತರ ಆತ್ಮಹತ್ಯೆ ನಡೆಯಲ್ಲ: ಕೃಷಿ ವಿಜ್ಞಾನಿ

Published:
Updated:
Prajavani

ಸಿಂದಗಿ: ಕುಗ್ರಾಮದ ಹುಡುಗನೊಬ್ಬ ದೂರದ ಅಮೆರಿಕದಲ್ಲಿ ಕೃಷಿ ವಿಜ್ಞಾನಿಯಾಗಿ ಖ್ಯಾತಿ ಗಳಿಸಿದವರು ತಾಲ್ಲೂಕಿನ ಡಂಬಳ ಗ್ರಾಮದ ಡಾ.ಭೀಮನಗೌಡ ಸಂಗನಗೌಡ ಪಾಟೀಲ.

ಅಮೆರಿಕದ ಟೆಕ್ಸಾಸ್‌ನ ಎ ಅಂಡ್‌ ಎಂ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದಲ್ಲಿ ಪ್ರಾಧ್ಯಾಪಕರು. ತೋಟಗಾರಿಕೆ ವಿಜ್ಞಾನದಲ್ಲಿ ಅತ್ಯುತ್ತಮ ಗ್ರಾಜ್ಯುಯೇಟ್ ಎಜುಕೇರ್‌ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂಥ 18 ಪ್ರಶಸ್ತಿಗಳಿಗೆ ಭಾಜನರಾಗಿರುವುದು ಭೀಮನಗೌಡರ ವಿಶೇಷತೆ.

ಗೌಡರ 135 ಲೇಖನಗಳು ಅಸೋಸಿಯೇಟ್ಸ್ ಪ್ರೆಸ್, ರಾಯಿಟರ್ಸ್, ವಾಲ್ ಸ್ಟ್ರೀಟ್ ಜರ್ನಲ್, ಪಾಕ್ಸ್ ಹೆಲ್ತ್ ಚಾನೆಲ್‌ಗಳಲ್ಲಿ ಪ್ರಕಟಗೊಂಡಿವೆ. ಕೃಷಿ ಪ್ರಶಸ್ತಿ ಸ್ವೀಕರಿಸಲಿಕ್ಕಾಗಿ ತಾಯ್ನಾಡಿಗೆ ಬಂದ ಸಂದರ್ಭದಲ್ಲಿ ವಿದೇಶಿ-–ಸ್ವದೇಶಿ ಕೃಷಿ, ತೋಟಗಾರಿಕೆ ವಿಷಯವಾಗಿ ‘ಪ್ರಜಾವಾಣಿ’ ಜತೆ ತಮ್ಮ ಮನದಾಳ ಹಂಚಿಕೊಂಡರು.

ನಮ್ಮಲ್ಲಿ ವಿಫುಲವಾಗಿ ಬೆಳೆಯುವ ಕೃಷಿ ಪದಾರ್ಥ, ತೋಟಗಾರಿಕೆ ಹಣ್ಣುಗಳನ್ನು ಅಮೆರಿಕದಲ್ಲಿ ಗಂಭೀರ ರೋಗಗಳಿಗೆ ದಿವ್ಯೌಷಧಿಯಾಗಿ ಪೇಟೆಂಟ್ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ನಮ್ಮ ದೇಶದಲ್ಲಿ ಇದೀಗ ಅರಿವು ಮೂಡುತ್ತಿದೆಯಾದರೂ; ಸಮರ್ಪಕ ಪರಿಕಲ್ಪನೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಶಿಕ್ಷಿತನಾದಾಗ ಮಾತ್ರ ಕೃಷಿ, ತೋಟಗಾರಿಕೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆತ್ಮಹತ್ಯೆಯ ಯತ್ನಗಳಿಂದ ಹೊರಬರಲು ಸಾಧ್ಯ ಎಂದು ಇದೇ ಸಂದರ್ಭ ತಿಳಿಸಿದರು.

* ಅಮೆರಿಕದ ಕೃಷಿ–ತೋಟಗಾರಿಕೆ ಹೇಗಿದೆ ? ವ್ಯತ್ಯಾಸ ಏನು ?

ಶೇ 3ರಷ್ಟು ಕೃಷಿ ಅಲ್ಲಿದೆ. ಕೃಷಿ ಪದ್ಧತಿ ಬೃಹತ್ ಪ್ರಮಾಣದ್ದು. ಸಂಪೂರ್ಣ ತಾಂತ್ರಿಕ–ಯಾಂತ್ರಿಕ. ಮೌಲ್ಯ ವರ್ಧನೆಗೆ ಆದ್ಯತೆ. ಶಿಕ್ಷಿತರೇ ಕೃಷಿ ನಡೆಸುತ್ತಾರೆ. ಬೆಳೆಗೆ ಬೆಂಬಲ ಬೆಲೆ ಹೆಚ್ಚಿದೆ. ಉಳ್ಳಾಗಡ್ಡಿ, ಟೊಮೆಟೊ ಇಳುವರಿ ಸಾಕಷ್ಟಿದೆ. ಗ್ರಾಹಕರ ಅಭಿಲಾಷೆಗೆ ತಕ್ಕಂತೆ ಬೆಳೆ ಬೆಳೆಯುವುದು ಅಮೆರಿಕದ ವಿಶೇಷ.

ನಮ್ಮದು ಕೃಷಿ ಪ್ರಧಾನ ದೇಶ. ಶೇ 80ರಷ್ಟು ವ್ಯವಸಾಯವೇ ಮೂಲ ಉದ್ಯೋಗವಿದೆ. ಉಳಿದೆಲ್ಲವೂ ಅಲ್ಲಿಗೆ ಇಲ್ಲಿರುವುದು ವ್ಯತಿರಿಕ್ತ.

* ಅಲ್ಲಿನ ರೈತರ ಜೀವನ ಚಿತ್ರಣ ಹೇಗಿದೆ...?

ಉತ್ತಮವಾಗಿದೆ. ಅಪಾರ ಗೌರವವೂ ಇದೆ. ಅಲ್ಲಿನ ಎಲ್ಲ ಕ್ಷೇತ್ರಗಳಿಗಿಂತಲೂ ಕೃಷಿ ಕ್ಷೇತ್ರಕ್ಕೆ ಸರ್ಕಾರ ಮತ್ತು ರಾಜಕಾರಣ ಹೆಚ್ಚಿನ ಮಾನ್ಯತೆ ಕೊಡುತ್ತದೆ. ಸ್ವತ: ರೈತರೇ ಕೃಷಿ, ತೋಟಗಾರಿಕೆ ಸಂಶೋಧನೆಗಾಗಿ ಹಣ ಮೀಸಲಿಡುತ್ತಾರೆ.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು, ಮಾರಾಟ ಮಾಡಲು ಮಾರ್ಕೆಟಿಂಗ್ ಬೋರ್ಡ್ ಇದೆ. ಆಯಾ ಬೆಳೆಗಳಿಗೆ ಸಂಬಂಧಿಸಿದಂತೆ ರೈತರ ಸಂಘಟನೆ ಬಲಶಾಲಿಯಾಗಿದೆ. ಇದಕ್ಕೆ ಪೂರಕವಾಗಿ ಅಸೋಷಿಯೇಷನ್‌ಗಳಿವೆ.

ಲಿಂಬೆ ಬೆಳೆಗೆ ಇಂಡಿ, -ಸಿಂದಗಿ ಹೆಸರುವಾಸಿ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಜ್ಯೂಸ್ ಫ್ಯಾಕ್ಟರಿ ಸ್ಥಾಪನೆಗೊಳ್ಳಬೇಕು. ಆದರೆ ಇದೀಗ ಲಿಂಬೆ ಬೆಳೆಗಾರರಿಗೆ ಬೆಲೆ ಸಿಗುತ್ತಿಲ್ಲ. ಒಂದು ಸಲ ₹ 10ಕ್ಕೆ ಒಂದು ಲಿಂಬೆ ಹಣ್ಣು ಮಾರಾಟವಾದರೆ; ಬಹುತೇಕ ಬಾರಿ ₹ 1ಕ್ಕೆ ಹಲವು ನಿಂಬೆ ಸಿಗುತ್ತವೆ.

ದಾಳಿಂಬೆಗೆ ಅಮೆರಿಕದಲ್ಲಿ ಸಾಕಷ್ಟು ಬೇಡಿಕೆಯಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ಆದರೆ ನಮ್ಮಲ್ಲಿ ಸಾಕಷ್ಟು ದಾಳಿಂಬೆ ಬೆಳೆದರೂ; ಧಾರಣೆ ಸಿಗ್ತಿಲ್ಲ. ಅರಿಷಿಣ ಕೂಡ ಕ್ಯಾನ್ಸರ್‌ ಚಿಕಿತ್ಸೆಗೆ ಬಳಕೆಯಾಗುತ್ತಿದೆ. ಅಮೆರಿಕನ್ನರು ಪೇಟೆಂಟ್‌ ಪಡೆದುಕೊಂಡು, ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ಇಂಥ ಯತ್ನ ಭಾರತದಲ್ಲೂ ನಡೆಯಬೇಕಿದೆ.

* ಇಸ್ರೇಲ್ ಕೃಷಿ ಕುರಿತಂತೆ ?

ಚಿಕ್ಕ ರಾಷ್ಟ್ರವಾದರೂ ಕೃಷಿಯಲ್ಲಿ ಮುಂಚೂಣಿ. ನೀರಾವರಿಯಲ್ಲಿ ಮೇಲುಗೈ ಸಾಧಿಸಿದೆ. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯುವುದು ಅಲ್ಲಿ ಕರಗತವಾಗಿದೆ. ಕೃಷಿಗಾಗಿ ‘ಬಾರ್ಡ್’ ಎಂಬ ಯೋಜನೆ ಜಾರಿಯಲ್ಲಿದೆ. ಇದು ಅಮೆರಿಕ ಜತೆ ಟಾಯ್ ಮಾಡಿಕೊಂಡಿದೆ. ಇದೇ ಯೋಜನೆಯನ್ನು ಕರ್ನಾಟಕದಲ್ಲೂ ಅಳವಡಿಸಲು ಯತ್ನಿಸುತ್ತಿರುವೆ.

* ಬರಕ್ಕೆ ತುತ್ತಾಗುವ ನಮ್ಮ ಭಾಗದ ರೈತರಿಗೆ ಕೃಷಿ ಸಲಹೆ ?

ಕೃಷಿ ಹೊಂಡ ಅತ್ಯುತ್ತಮ. ಪ್ರತಿಯೊಬ್ಬರೂ ಹೊಂಡ ಹೊಂದಬೇಕು. ಸ್ಥಳೀಯ ಬೆಳೆಗಳನ್ನೇ ಬೆಳೆಯಬೇಕು.

* ತೋಟಗಾರಿಕೆ ಸಲಹೆ ?

ತೋಟಗಾರಿಕೆ ಸಚಿವರು ನಮ್ಮ ತಾಲ್ಲೂಕಿನವರೇ ಇದ್ದಾರೆ. ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಕೃಷಿ–ತೋಟಗಾರಿಕೆ ಮೇಳ ಹೆಚ್ಚೆಚ್ಚು ನಡೆಸಬೇಕಿದೆ. ಕೃಷಿ ಸವಾಲು-, ಸಮಸ್ಯೆಗಳ ಕುರಿತಾಗಿ ಉಪನ್ಯಾಸ, ಸಂವಾದ ಕಾರ್ಯಕ್ರಮ ನಡೆಸಬೇಕು. ಬೆಳೆಗಾರರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !