ಸಾಧಕನ ಮುಡಿಗೆ ಸಂದ ಗರಿ; ಹಿರಿಮೆಯ ಪರಿ

7
ವಿಜಯಪುರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ

ಸಾಧಕನ ಮುಡಿಗೆ ಸಂದ ಗರಿ; ಹಿರಿಮೆಯ ಪರಿ

Published:
Updated:
Prajavani

ಬಾಲ್ಯದಲ್ಲಿ ಸಂಕೋಚ ಸ್ವಭಾವದ ವಿದ್ಯಾರ್ಥಿ. ಎಂಟನೇ ವರ್ಗದವರೆಗೆ ಇಂಗ್ಲಿಷ್‌ ಮೂಲಾಕ್ಷರಗಳನ್ನೇ ತಿಳಿಯದ ಬಾಲಕನೊಬ್ಬ ಮುಂದೆ ಇಂಗ್ಲಿಷ್‌ ಎಂ.ಎ. ಮಾಡಿ, ಅದರಲ್ಲೇ ಕಥೆ, ಕವಿತೆ, ನಾಟಕ, ವ್ಯಾಕರಣ ಪುಸ್ತಕ ಬರೆದು ಖ್ಯಾತಿಯಾದವರು.

ಪಿಯುಸಿ ಇಂಗ್ಲಿಷ್ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಆರು ರಾಷ್ಟ್ರೀಯ, ಒಂದು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆಯ ಸಾಧನೆಗೈದವರು ಪ್ರೊ.ಬಾಪುಗೌಡ ರೇವಣಸಿದ್ದಪ್ಪಗೌಡ ಪೊಲೀಸ್ ಪಾಟೀಲ.

ಇವರ ಸಾಧನೆಗೆ ಕಿರೀಟವಿಟ್ಟಂತೆ, ತಾಳಿಕೋಟೆ ಪಟ್ಟಣದಲ್ಲಿ ಜ. 28, 29ರಂದು ನಡೆಯಲಿರುವ ವಿಜಯಪುರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿ ಒಲಿದಿದೆ.

ಮುಂಬರುವ ಮಾರ್ಚ್‌ 15ರಿಂದ 17ರವರೆಗೆ ಹೊಸಪೇಟೆಯಲ್ಲಿ ನಡೆಯಲಿರುವ ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಸಹ ಇವರ ಮುಡಿಗೇರಿರುವುದು ವಿಶೇಷ.

ಸ್ವಂತ ಊರು ತಾಳಿಕೋಟೆ ಸಮೀಪದ ಕೊಣ್ಣೂರ. ಹುಟ್ಟಿದ್ದು 1950ರಲ್ಲಿ ಹಿರೂರನಲ್ಲಿ. ತಂದೆ ರೇವಣಸಿದ್ದಪ್ಪಗೌಡ, ತಾಯಿ ಲಕ್ಷ್ಮೀಬಾಯಿ. ಪತ್ನಿ ಶಕುಂತಲಾ. ಮಕ್ಕಳು ಅರವಿಂದ, ಆನಂದ. ಅಶ್ವಿನಿ. ಇದು ಪೊಲೀಸ್ ಪಾಟೀಲರ ಕುಟುಂಬ.

ಸ್ನಾತಕ ಪದವಿಯ ಬಳಿಕ ಅರಸಿ ಬಂದ ಪಿಎಸ್‌ಐ ಹುದ್ದೆಯನ್ನು ತಂದೆಯ ಅಪೇಕ್ಷೆ ಮೀರಿ, ಬೋಧನೆಯತ್ತ, ಸಾಧನೆಯತ್ತ ಸಾಗಿದವರು ಪೊಲೀಸ್ ಪಾಟೀಲ. 1973ರಿಂದ ಬನಹಟ್ಟಿಯ ಎಸ್.ಆರ್.ಎ. ಪದವಿ ಪೂರ್ವ ಕಾಲೇಜಿನಲ್ಲಿ 37ವರ್ಷ ವೃತ್ತಿ ಬದುಕು ಸವೆಸಿದರು.

ಬೋಧನೆ, ಸಾಹಿತ್ಯ, ಸಂಗೀತ, ಅಭಿನಯ, ನಿರ್ದೇಶನ, ಜಾನಪದ ಸಂಗ್ರಹ-, ಪರಿಷ್ಕರಣೆ, ಲಾವಣಿ ಗಾಯನ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಸಾಧಿಸಿದರು.

ಕನ್ನಡದಲ್ಲಿ 93 ನಾಟಕ, ಎರಡು ಕಾದಂಬರಿ, ಐದು ಕಥಾ ಸಂಕಲನಗಳು, ಆರು ಕವನ ಸಂಕಲನಗಳು, ಮೂರು ಪ್ರಬಂಧ ಸಂಕಲನ ಸೇರಿ ಅರವತ್ತೆರಡು ಪುಸ್ತಕ ಪ್ರಕಟಣೆಯಾಗಿದ್ದರೆ; ಇದರ ದುಪ್ಪಟ್ಟು (120) ಪುಸ್ತಕಗಳು ಪ್ರಕಟಣೆ ಹಂತದಲ್ಲಿವೆ. ಲಾವಣಿ, -ತತ್ವಪದ ರಚಿಸಿ ತಂಡ ಕಟ್ಟಿಕೊಂಡು ಹಾಡಿ ಆ ಪ್ರಕಾರದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

ಹಣ ಸಂಪಾದನೆಗಿಂತ ಗುಣ, ಚಾರಿತ್ರ್ಯ ಮೇಲು ಎಂಬುದನ್ನು ಜನಜಾಗೃತಿ ಮೂಡಿಸಲಿಕ್ಕಾಗಿ ‘ವಾತ್ಸಲ್ಯ ವಿಚಾರ ವೇದಿಕೆ’ ಸ್ಥಾಪಿಸಿ ಗ್ರಾಮಮುಖಿಯಾದವರು ಇವರು.

ಶರಣಬಸಪ್ಪ ಶಿ.ಗಡೇದ

ಪೊಲೀಸ್‌ ಪಾಟೀಲರ ಸಾಹಿತ್ಯ ಕೃಷಿ

ಪ್ರಕಟಿತ ಕೃತಿಗಳು: ಕೆಂಡ ಉಗುಳುವವರು, ಆತಲ್ಲೋ ಮನಸ ಗಿರಿಗಿರಿ, ಹೂಗಳಿವೆ ನಿಧಾನ (ಕತೆಗಳು), ಸತ್ಯದ ಗುಡಿಯ ಸುತ್ತ (ಇಂಗ್ಲಿಷ್ ಕವಿತೆಗಳ ಭಾವಾನುವಾದ), ಎಂತಾ ಚೆಂದಿತ್ತ ಹಿಂದುಸ್ತಾನ ಲಾವಣಿಗಳು, ಗಂಗವ್ವ ಮಳಿ ಹೋದವೋ (ಜನ ಗೀತೆಗಳು), ಆಯ್ದ ಸ್ವತಂತ್ರ ಲಾವಣಿಗಳು,

ಕತೆ: ಎಲ್ಲಿ ಆ ಕಣ್ಣುಗಳು, ಊರು ಮತ್ತು ದಾರಿ, ಬೂದಿ ಮತ್ತು ಕೆಂಡ, ಎಂಥ ಲೋಕವಯ್ಯ

ನಾಟಕ: ಕೊನೆ ನಮಸ್ಕಾರ, ಬಯಕೆ, ತತ್ವಾಂತರ ಪರ್ವ, ಬೇಲಿ ದಾಟೋಣ, ಭೋಲೋ ಭಾರತ ಮಾತಾಕೀ, ಕಿಟ್ಟು ಪಾಪು, ಸಬಕೋ ಸನ್ಮತಿ ದೆ ಭಗವಾನ, ಬೇತಾಳದ ಬೆನ್ನು ಹತ್ತಿ, ಜ್ಯೋತಿ ಬೆಳಗುತಿದೆ

ಕಾದಂಬರಿ: ಪರಕಾಯದಲ್ಲಿ ನಾಲ್ಕು ದಿನ, ದೊರೆಯಲ್ಲದೂರಿಗೆ,- -ಅವಳಿ ಮಕ್ಕಳ ಕಥೆ, ಮಕ್ಕಳ ಸಾಹಿತ್ಯ: 3 ನಾಟಕಗಳು, ಕವನ ಸಂಕಲನ.

ಮೂಡಲಮನೆ ಧಾರಾವಾಹಿಗೆ ಸಂಭಾಷಣೆ ಸೇರಿದಂತೆ ಇನ್ನೂ ಅನೇಕ ಸಾಧನೆಗಳು ಪೊಲೀಸ್ ಪಾಟೀಲರವು.

ಪ್ರಶಸ್ತಿ ಪುರಸ್ಕಾರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಆಕಾಶವಾಣಿ ರಾಷ್ಟ್ರೀಯ ನಾಟಕ ರಚನಾ ಬಹುಮಾನ, ಕರ್ನಾಟಕ ನಾಟಕ ಅಕಾಡೆಮಿ ವಿಶೇಷ ಪುರಸ್ಕಾರ, ರಾಯ ನನಮ್ಯಾಲೆ ಸಿಟ್ಟೇನ ನಾಟಕಕ್ಕೆ ತೀರ್ಪುಗಾರರ ಮೆಚ್ಚುಗೆ, ನಾಡ ಚೇತನ, ಪಿ.ಎನ್.ಜವರಪ್ಪಗೌಡ ಸಮಾಜಮುಖಿ ಪ್ರಶಸ್ತಿ, ರಂಗಸಂಸ್ಥಾನ ಪ್ರಶಸ್ತಿ ಸಂದಿವೆ.

ಹೊಸತನದ ತಹತಹಿಕೆ

‘ಬಾಲ್ಯದಲ್ಲಿ ದೊರೆತ ಸಂಸ್ಕಾರ ಮತ್ತು ನನಗಿಟ್ಟ ‘ಬಾಪು’ ಎಂಬ ಹೆಸರು ನನ್ನಲ್ಲಿನ ಬದಲಾವಣೆಗೆ ಕಾರಣ. ತಲ್ಲೀನತೆ, ಹೊಸತನ್ನು ಮಾಡಬೇಕೆಂಬ ತಹತಹಿಕೆ, ಕಠಿಣ ಪರಿಶ್ರಮ ಹಾಗೂ ಸತ್ಯಪ್ರಿಯತೆ ನನ್ನ ತಂದೆಯಿಂದ ಬಂದ ಗುಣಗಳು.

ಆರಂಭದ ವಿದ್ಯಾ ಗುರುಗಳಾದ ಶಿವಲಿಂಗ ಕರಜಗಿ, ಸಂಗನಬಸಪ್ಪ ಬಿದರಕುಂದಿ ಅವರಿಂದ ಭಾಷೆಯ ಬಗೆಗೆ ಪ್ರೀತಿ ಗಳಿಸಿಕೊಂಡೆ. ಕವಿ ಗಿರಿಮಲ್ಲನಿಂದ ಸೃಜನ, ಸಂಸ್ಕಾರ ಹಾಗೂ ಸಿದ್ಧೇಶ್ವರ ಸ್ವಾಮಿಗಳಿಂದ ನಿರ್ಲಿಪ್ತತೆಯನ್ನು, ಇಳಕಲ್ಲ ಮಹಾಂತ ಸ್ವಾಮಿಗಳಿಂದ ಲೋಕ ನಿಷ್ಠುರತೆಯನ್ನು, ಬಿದರಕುಂದಿ ಶಿವಕುಮಾರಸ್ವಾಮಿಗಳಿಂದ ಪ್ರಕೃತಿ ಪ್ರೇಮವನ್ನು ಪಡೆದುಕೊಂಡೆ’ ಎನ್ನುತ್ತಾರೆ ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !