ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಮೌಲಿಕ ಶಿಕ್ಷಣ ಮತ್ತು ಆಹಾರ ಪದ್ಧತಿ

ಮಕ್ಕಳ ಆಹಾರ ಮತ್ತು ಶಿಕ್ಷಣ ಕ್ರಮದ ಕುರಿತು ಮಠಾಧೀಶರು ಹೇಳಿದ್ದು ಸರಿಯೇ?
Last Updated 27 ಜನವರಿ 2023, 23:04 IST
ಅಕ್ಷರ ಗಾತ್ರ

ಮೌಲ್ಯಯುತ ಶಿಕ್ಷಣ ಮತ್ತು ಆಹಾರ ಪದ್ಧತಿಯ ಬಗ್ಗೆ ಕೆಲವು ಮಠಾಧೀಶರು ಇತ್ತೀಚೆಗೆ ಮಾತನಾಡಿದ್ದಾರೆ. ಅವರಲ್ಲಿ ಬಹುತೇಕರು ಪದವೀಧರರಾಗಿರಬಹುದು. ಅವರ ತಿಳಿವಳಿಕೆ ಎಷ್ಟು ಸಮಸ್ಯಾತ್ಮಕವಾಗಿದೆ ಎಂಬುದು ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಅರ್ಥವಾಗುತ್ತದೆ. ನಮ್ಮ ಸಮಾಜದಲ್ಲಿರುವ ಬಿಕ್ಕಟ್ಟುಗಳು ನಿವಾರಣೆಯಾಗಬೇಕಾದರೆ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ಅಂಶವು ಅವರ ಗಮನಕ್ಕೆ ಬಂದಿರುವುದು ಶ್ಲಾಘನೀಯವಾದರೂ ಬಿಕ್ಕಟ್ಟಿನ ಮೂಲಗಳ ಬಗೆಗಿನ ಅವರ ತಿಳಿವಳಿಕೆ ತೀರಾ ಅವೈಜ್ಞಾನಿಕವಾಗಿದೆ.

ಡಾ. ನೆಲ್ಲುಕುಂಟೆ ವೆಂಕಟೇಶ್
ಡಾ. ನೆಲ್ಲುಕುಂಟೆ ವೆಂಕಟೇಶ್

ಯಾವುದೇ ಒಂದು ಆಹಾರ ಪದ್ಧತಿಯು ಮಕ್ಕಳನ್ನು, ಮನುಷ್ಯರನ್ನು ಕೆಡಿಸುತ್ತಿದೆಯೇ? ಮಾಂಸಾಹಾರ ಸೇವನೆಯು ಹಿಂಸಾಪ್ರವೃತ್ತಿಯನ್ನು ಹೆಚ್ಚಿಸುತ್ತಿದೆಯೇ? ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿದೆಯೇ? ಆತ್ಮಹತ್ಯೆಗಳು ಹೆಚ್ಚಾಗಿವೆಯೇ? ಹಿಂಸಾಪ್ರವೃತ್ತಿಯೊಡನೆ ತಳುಕು ಹಾಕಿಕೊಳ್ಳುವ ವಿವಾಹ ವಿಚ್ಛೇದನದ ಪ್ರಮಾಣ ಎಲ್ಲೆಲ್ಲಿ ಎಷ್ಟೆಷ್ಟಿದೆ ಎಂಬುದ್ಯಾವುದನ್ನೂ ಪರಿಶೀಲಿಸದೆ ಢಾಳಾದ ಅಭಿಪ್ರಾಯ ವ್ಯಕ್ತಪಡಿಸುವುದೇ ಅವೈಜ್ಞಾನಿಕ.

ಜಗತ್ತಿನ ದೇಶಗಳು ಇತ್ತೀಚೆಗೆ ಮನುಷ್ಯನ ಸಂತೋಷವನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಿವೆ. ಸಂತೋಷದ ಸೂಚ್ಯಂಕ ಉತ್ತಮವಾಗಿರುವ ಮೊದಲ ಹತ್ತು ದೇಶಗಳಲ್ಲಿ ನ್ಯೂಜಿಲೆಂಡ್‌ ಬಿಟ್ಟರೆ ಉಳಿದವು ಸ್ಕ್ಯಾಂಡಿನೇವಿಯನ್ ದೇಶಗಳು. ಇದಕ್ಕೇನು ಕಾರಣ?

ಉತ್ತರ ಯುರೋಪಿನ ಈ ದೇಶಗಳ ಜನರಲ್ಲಿ ಪ್ರತಿಯೊಬ್ಬರೂ ವರ್ಷಕ್ಕೆ ಸರಾಸರಿ 75 ಕೆ.ಜಿ. ಮಾಂಸ ತಿನ್ನುತ್ತಾರೆ. ಭಾರತದ ಜನರು ಸೇವಿಸುವ ಸರಾಸರಿ ಪ್ರಮಾಣ ಕೇವಲ 3.7 ಕೆ.ಜಿ. ಮಾಂಸಾಹಾರವು ಹಿಂಸೆಯನ್ನು ಉದ್ದೀಪಿಸುತ್ತದೆ ಎನ್ನುವುದಾದರೆ, ನಾರ್ವೆ, ಫಿನ್ಲೆಂಡ್, ಸ್ವೀಡನ್, ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್‌, ಸ್ವಿಟ್ಜರ್‌ಲೆಂಡ್‌ನಂತಹ ದೇಶಗಳಲ್ಲಿ ವಿಪರೀತ ಪ್ರಕ್ಷುಬ್ಧತೆ ಇರಬೇಕಿತ್ತಲ್ಲವೇ? ಹಿಂಸೆಯ ತುತ್ತತುದಿ ನರಹತ್ಯೆ ಮತ್ತು ನರಹಿಂಸೆಯಲ್ಲವೇ? ಈ ದೇಶಗಳಲ್ಲಿ ಈ ಬಗೆಯ ಹಿಂಸೆಯ ಪ್ರಮಾಣವು ಭಾರತಕ್ಕಿಂತ ಬಹಳ ಕಡಿಮೆ ಇದೆ.

ಮಾಂಸಾಹಾರವು ವ್ಯಕ್ತಿತ್ವಕ್ಕೆ, ಆರೋಗ್ಯಕ್ಕೆ ವ್ಯತಿರಿಕ್ತ ಎನ್ನುವುದಾದರೆ, ಹೆಚ್ಚಿನ ಮಾಂಸಾಹಾರ ಸೇವನೆಯಿಂದ ಅವರ ಆಯುಷ್ಯ ನಮಗಿಂತ ಕಡಿಮೆ ಇರಬೇಕಲ್ಲವೆ? ಆದರೆ, ಪರಿಸ್ಥಿತಿ ತೀರಾ ಭಿನ್ನ. ಈ ಎಲ್ಲಾ ದೇಶಗಳ ಜನರ ಸರಾಸರಿ ಆಯಸ್ಸು 82- 83 ವರ್ಷ. ಭಾರತೀಯರ ಸರಾಸರಿ ಆಯಸ್ಸು 69 ವರ್ಷ. ನಮ್ಮಲ್ಲಿ ಕಾರ್ಬೊಹೈಡ್ರೇಟ್‌ ಇರುವ ಆಹಾರ ಪದಾರ್ಥಗಳ ಸೇವನೆ ಪ್ರಮಾಣ ಹೆಚ್ಚುತ್ತಿರುವುದರಿಂದ ಚಿಕ್ಕ ವಯಸ್ಸಿಗೇ ಸಕ್ಕರೆ ಕಾಯಿಲೆ, ರಕ್ತದೊತ್ತಡದಂತಹ ಅನೇಕ ಸಮಸ್ಯೆಗಳು ಕಾಡುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಕರಿಗೌಡ ಅವರು, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ 18-40 ವರ್ಷದೊಳಗಿನ ಮಹಿಳೆಯರ ಆರೋಗ್ಯ ತಪಾಸಣೆ ಮಾಡಿಸಿದ್ದರು. ಅವರಲ್ಲಿ ಶೇ 25ಕ್ಕಿಂತ ಹೆಚ್ಚಿನ ತರುಣಿಯರಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತಹೀನತೆ ಕಂಡುಬಂದಿತ್ತು. ಟಿ.ವಿ. ಜ್ಯೋತಿಷಿಗಳ ವಾಸ್ತುದೋಷದ ಮಾತು ಕೇಳಿ, ಅವರೆಲ್ಲ ತಮ್ಮ ಮನೆಗಳ ಮುಂದಿದ್ದ ಸೀಬೆ, ಪಪ್ಪಾಯ, ಕರಿಬೇವು, ನಿಂಬೆ, ನುಗ್ಗೆ, ಸೀತಾಫಲ, ಮಾವಿನಂತಹ ಗಿಡಗಳನ್ನು ವ್ಯಾಪಕವಾಗಿ ಕಡಿದದ್ದು ಅದಕ್ಕೆ ಕಾರಣ ಇರಬಹುದೇ?

ಆ ದೇಶಗಳಲ್ಲಿ ವಿವಾಹ ವಿಚ್ಛೇದನದ ಪ್ರಮಾಣವೂ ಭಾರತಕ್ಕಿಂತ ಬಹಳ ಕಡಿಮೆ ಇದೆ. ಹೋಗಲಿ ಆತ್ಮಹತ್ಯೆಯ ಪ್ರಮಾಣವಾದರೂ ಹೆಚ್ಚಾಗಿ ಇರಬೇಕಲ್ಲವೆ? ಭಾರತದಲ್ಲಿ 1 ಲಕ್ಷ ಪುರುಷರಲ್ಲಿ 14.7ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡರೆ, ಈ ಪ್ರಮಾಣ ಸ್ವಿಟ್ಜರ್‌ಲೆಂಡ್‌ನಲ್ಲಿ 9.8, ನಾರ್ವೆಯಲ್ಲಿ 11.8, ಇಟಲಿಯಲ್ಲಿ 4.3ರಷ್ಟಿದೆ. ಉತ್ತರ ಯುರೋಪಿನ ಇತರ ದೇಶಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇನ್ನು ಅಪರಾಧಗಳ ವಿಚಾರಕ್ಕೆ ಬಂದರೆ, ಭಾರತದ ರಾಜ್ಯಗಳ ಉದಾಹರಣೆಯನ್ನೇ ನೋಡಬಹುದು. 2021ರ ಜನಗಣತಿಯಂತೆ, ಪ್ರತೀ ಚದರ ಕಿ.ಮೀ.ನಲ್ಲಿ ದಾಖಲಾಗುವ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಕರ್ನಾಟಕದಲ್ಲಿ 85, ಆಂಧ್ರಪ್ರದೇಶ 136, ಗುಜರಾತ್‌ 372, ಉತ್ತರಪ್ರದೇಶ 252, ಈಶಾನ್ಯ ರಾಜ್ಯಗಳಲ್ಲಿ 0.1ಕ್ಕಿಂತ ಕಡಿಮೆ. ಸಸ್ಯಾಹಾರಿಗಳ ಸಂಖ್ಯೆ ಕರ್ನಾಟಕದಲ್ಲಿ ಶೇ 21, ಗುಜರಾತಿನಲ್ಲಿ ಶೇ 61, ಉತ್ತರ ಪ್ರದೇಶದಲ್ಲಿ ಶೇ 47, ಈಶಾನ್ಯ ರಾಜ್ಯಗಳಲ್ಲಿ ಶೇ 9ಕ್ಕಿಂತ ಕಡಿಮೆ. ಹಾಗಿದ್ದರೆ ಶೇ 61ರಷ್ಟು ಸಸ್ಯಾಹಾರಿಗಳಿರುವ ಗುಜರಾತಿನಲ್ಲಿ ಯಾಕೆ ಪ್ರತೀ ಚದರ ಕಿ.ಮೀ.ನಲ್ಲಿ 372 ಕ್ರಿಮಿನಲ್‌ ಪ್ರಕರಣಗಳು ದಾಖಲಾಗುತ್ತಿವೆ?

ಆಹಾರ ಮತ್ತು ಸಾತ್ವಿಕತೆಗೆ ಸಂಬಂಧವಿದೆ ಎಂದಿರುವ ಮಠಾಧೀಶರು ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬೇಕಾಗುತ್ತದೆ. ಯಾಕೆಂದರೆ ಸಮಾಜವನ್ನು ಸರಿಪಡಿಸುವ ಆಶಯ ಸ್ವಾಮೀಜಿಗಳಿಗೆ ಇರುವುದಕ್ಕಿಂತ ಹೆಚ್ಚು ಸಮಾಜ ವಿಜ್ಞಾನಿಗಳಿಗೆ, ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ನ್ಯಾಯಾಂಗ ವ್ಯವಸ್ಥೆಗೆ, ಒಟ್ಟಾರೆ ಸಮಾಜಕ್ಕೆ ಇದೆ. ತಳಿ ವಿಜ್ಞಾನದ ಪ್ರಕಾರ, ಮನುಷ್ಯನು ಹಾಲಿನ ಬಳಕೆ ಪ್ರಾರಂಭಿಸಿದ್ದೇ 10 ಸಾವಿರ ವರ್ಷಗಳಿಂದ ಈಚೆಗೆ. ಬೆಣ್ಣೆ, ತುಪ್ಪದ ಬಳಕೆಗೆ 4 ಸಾವಿರ ವರ್ಷಗಳ ಇತಿಹಾಸವೂ ಇಲ್ಲ. ಮನುಷ್ಯನ ಜೀನುಗಳಲ್ಲಿ ಮಾಂಸಾಹಾರದ ಚಹರೆಯೇ ಪ್ರಧಾನವಾಗಿದೆ.

ಹಾಗಿದ್ದರೆ ಸ್ಕ್ಯಾಂಡಿನೇವಿಯನ್ನರ ಸಂತೋಷಕ್ಕೆ ಕಾರಣವೇನು? ನನಗೆ ತಿಳಿದಮಟ್ಟಿಗೆ, ಆ ದೇಶಗಳ ಜನರು ಧರ್ಮರಕ್ಷಣೆಯ ಬಗ್ಗೆ ಮಾತನಾಡುವುದಕ್ಕಿಂತ ವಿಜ್ಞಾನ ಮತ್ತು ವೈಚಾರಿಕತೆಗೆ ಹೆಚ್ಚು ಹತ್ತಿರವಾಗಿದ್ದಾರೆ. ಶೇ 70ಕ್ಕೂ ಹೆಚ್ಚು ಜನ ನಾಸ್ತಿಕರು, ನಿರೀಶ್ವರವಾದಿಗಳು, ಆದರೆ ಹೃದಯವಂತರು. ಅವರು ಸಂಪನ್ಮೂಲಗಳನ್ನು ಮಿಲಿಟರಿಗೆ, ಅಣುಬಾಂಬಿಗೆ ವಿನಿಯೋಗಿಸುವುದರ ಬದಲು ಶಿಕ್ಷಣ, ಆರೋಗ್ಯ, ದುರ್ಬಲರ ರಕ್ಷಣೆ, ಉದ್ಯೋಗ ಸೃಷ್ಟಿಗೆ ಬಳಸುತ್ತಾರೆ. ಅಂದರೆ ನಮ್ಮ ಮಠಾಧೀಶರು ಹೇಳುತ್ತಿರುವುದಕ್ಕೆ ಸಂಪೂರ್ಣ ವಿರುದ್ಧವಾದ ದಿಕ್ಕಿನಲ್ಲಿ ಅವರು ಬದುಕುತ್ತಿದ್ದಾರೆ. ಹಾಗಾಗಿ ಅವರು ಹೆಚ್ಚು ಖುಷಿಯಾಗಿದ್ದಾರೆ ಹಾಗೂ ಆರೋಗ್ಯದ ಸಮಸ್ಯೆಗಳಿಲ್ಲದೆ ಹೆಚ್ಚು ವರ್ಷ ಬದುಕುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲೂ ಹೆಚ್ಚು ಪದಕಗಳನ್ನು ಗೆಲ್ಲುತ್ತಿದ್ದಾರೆ, ನೊಬೆಲ್ ಪ್ರಶಸ್ತಿಗಳನ್ನೂ ಪಡೆಯುತ್ತಿದ್ದಾರೆ. ಆ ದೇಶಗಳು ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯಂಥವರ ವಿಚಾರಗಳನ್ನು ಅಳವಡಿಸಿಕೊಂಡಂತೆ ಬದುಕುತ್ತಿವೆ.

ನಮಗೆ ಬೇಕಾದ ಶಿಕ್ಷಣದ ಮೌಲ್ಯ ಯಾವುದಾಗ ಬೇಕು? ನಾವು ಬಾಯಿಪಾಠವನ್ನೇ ಶಿಕ್ಷಣ ಎಂದುಕೊಂಡಿ ದ್ದೇವೆ. ನಮ್ಮ ನೀತಿ ಶಿಕ್ಷಣದ ತಳಹದಿ ಎಷ್ಟು ದುರ್ಬಲವಾಗಿದೆಯೆಂದರೆ, ನದಿಗಳನ್ನು ದೇವತೆ ಎಂದು ಮಕ್ಕಳಿಗೆ ಕಲಿಸುತ್ತೇವೆ. ಅದೇ ಸಮಯದಲ್ಲಿ ಸತ್ತವರ ಬೂದಿ, ವಿಷರೂಪಿಯಾದ ಎಣ್ಣೆ, ಚೆಂಡು ಹೂವು, ಸ್ನಾನ ಮಾಡಿ ಬಿಸಾಡಿದ ಬಟ್ಟೆ ಎಲ್ಲವನ್ನೂ ಯಾವ ಲಜ್ಜೆಯೂ ಇಲ್ಲದೆ ನೀರಿಗೆ ಎಸೆಯುತ್ತೇವೆ. ಈ ಬಗೆಯ ತಲೆಕೆಳಗಾದ ನೀತಿ ಶಿಕ್ಷಣದಿಂದ ಯಾವ ಉಪಯೋಗವಿದೆ? ಹಾದಿ ತಪ್ಪಿದ ಅಧ್ಯಾತ್ಮ, ಧಾರ್ಮಿಕತೆಗಳು ಬದುಕನ್ನು ನರಕ ಮಾಡುತ್ತಿವೆ. ನಮ್ಮ ನದಿ, ಕಾಡು, ಉಸಿರಾಡುವ ಗಾಳಿ ಎಲ್ಲವನ್ನೂ ಪವಿತ್ರ ಎನ್ನುತ್ತಲೇ ಬೆಂಕಿ ಹಚ್ಚಿ, ವಿಷ ತುಂಬಿ ನಿರ್ನಾಮ ಮಾಡಿದ್ದೇವೆ. ಆದರೆ ವಿಜ್ಞಾನಕ್ಕೆ ಹೃದಯವಂತಿಕೆ ತಂದುಕೊಂಡ ದೇಶಗಳಲ್ಲಿ ನಗರಗಳ ಮಧ್ಯೆಯೇ ನದಿಗಳು ನಿರ್ಮಲವಾಗಿ ಹರಿಯುತ್ತಿವೆ. ಹಾಗಿದ್ದರೆ ಯಾರು ಸರಿ?

ಗಾಂಧೀಜಿ ‘ಶಿಕ್ಷಣವು ಪರಿಪೂರ್ಣವಾಗಬೇಕಾದರೆ ಮೆದುಳು, ಹೃದಯ ಮತ್ತು ಕೈಗಳನ್ನು ಬಳಸಿ ಕಲಿಸಬೇಕು’ ಎಂದಿದ್ದರು. ಜ್ಞಾನ, ಕರುಣೆ, ಕೌಶಲದ ಕುರಿತಂತೆ ಕೇವಲ ಮಾತನಾಡದೆ ಚಾಚೂ ತಪ್ಪದೆ ಅನುಷ್ಠಾನಗೊಳಿಸಬೇಕು. ಆಗ ಮಾತ್ರ ಒಂದು ದೇಶ ಬೆಳೆದು ವಿಶ್ವಗುರುವಾಗಲು ಸಾಧ್ಯ. ಜಾತಿ, ಧರ್ಮ, ಲಿಂಗ, ಆಹಾರ, ಪ್ರದೇಶಗಳ ಹೆಸರಿನಲ್ಲಿ ಮನುಷ್ಯರನ್ನು ಒಡೆದು ಸಮಾಜವನ್ನು ವಿಭಜಿಸುವುದನ್ನು ಅಧ್ಯಾತ್ಮ, ಧಾರ್ಮಿಕತೆಯೆಂದು ಕರೆಯಲಾಗದು. ಕೆಡುಕಿನ ಹಾದಿಯನ್ನು ಅಧ್ಯಾತ್ಮ, ಧಾರ್ಮಿಕತೆ ಎಂದು ತಿಳಿದಿರುವವರಿಗೆ ವೇದಗಳು, ಉಪನಿಷತ್ತುಗಳು ಸೇರಿದಂತೆ ಯಾವುದೇ ವೇದಾಂತ ಜ್ಞಾನವೂ ಅರ್ಥವಾಗಿಲ್ಲ ಎಂದೇ ಗ್ರಹಿಸಬೇಕಾಗುತ್ತದೆ.

ಈ ಮಠಾಧೀಶರು ವಿಶ್ವಜ್ಞಾನ ಮತ್ತು ವಿಜ್ಞಾನವನ್ನು ಅಧ್ಯಾತ್ಮದಲ್ಲಿ ಅಳವಡಿಸಿಕೊಂಡರೆ ಮಾತ್ರ ಜೀವಪರವಾದ ಬದಲಾವಣೆ ಸಂಭವಿಸಲು ಸಾಧ್ಯ. ಈ ಪ್ರಯೋಗವನ್ನು ಉಪನಿಷತ್ಕಾರರು, ಬುದ್ಧನಂತಹವರು ಮಾಡಿ ತೋರಿಸಿದ್ದಾರೆ. ಇಂದು ಇಡೀ ಜೀವಿಸಂಕುಲ ಅಪಾಯದಲ್ಲಿದೆ. ಜಗದ್ಗುರುಗಳು ಎನ್ನಿಸಿಕೊಂಡವರು ಜಾಗತಿಕ ದೃಷ್ಟಿಕೋನ ಹೊಂದಿರಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT