ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸತ್ವದ ಊಟೆ

Last Updated 22 ಏಪ್ರಿಲ್ 2019, 19:37 IST
ಅಕ್ಷರ ಗಾತ್ರ

ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು |
ಒಣಗಿದಂತಿರುವ ತೃಣಮೂಲ ಮೊಳೆಯುವುದು ||
ಮನುಜರಳಿವರು ಮನುಜಸಂತಾನ ನಿಂತಿಹುದು |
ಅಣಗಾತ್ಮದ ಸತ್ತ್ವ – ಮಂಕುತಿಮ್ಮ || 122 ||

ಪದ-ಅರ್ಥ:ಮೃತಿಯನೆಳಸದೆ=ಮೃತಿಯ(ಸಾವನ್ನು)+ಎಳಸದೆ(ಬಯಸದೆ), ತೃಣಮೂಲ=ತೃಣ(ಹುಲ್ಲು)+ಮೂಲ, ಮನುಜರಳಿವರು=ಮನುಜರು+ಅಳಿವರು(ಸಾಯುವರು), ಅಣಗದಾತ್ಮದ=ಅಣಗದು(ಅಡಗದು)+ಆತ್ಮದ
ವಾಚ್ಯಾರ್ಥ: ಹುಟ್ಟಿದ ಪ್ರತಿಯೊಂದು ಜೀವ ಸಾವನ್ನು ಬಯಸದೆ ತನ್ನ ಕುಲವನ್ನು ಬೆಳೆಸುತ್ತದೆ. ಒಣಗಿಹೋದಂತಿರುವ ಹುಲ್ಲಿನ ಬೇರು ಮಳೆಯಾದಾಗ ಮತ್ತೆ ಮೊಳೆಯುತ್ತದೆ. ಮನುಷ್ಯರು ಸಾಯುತ್ತಾರೆ ಆದರೆ ಮನುಷ್ಯ ಸಂತಾನ ನಿಂತಿದೆ. ಆತ್ಮದ ಸತ್ವ ಎಂದೆಂದಿದೂ ಅಡಗದು.

ವಿವರಣೆ: ಜನಿಸಿದ ಪ್ರತಿಯೊಂದು ಪ್ರಾಣಿ ತನ್ನ ಕುಲವನ್ನು ಬೆಳೆಸಲು ಸದಾ ಹೆಣಗುತ್ತದೆ. ತನಗೆ ದೊರೆಯದ್ದು ತನ್ನ ಮಕ್ಕಳಿಗೆ ದೊರೆಯಲಿ ಎಂದು ಅಪೇಕ್ಷಿಸುತ್ತದೆ. ಸಾವು ಒಂದಿಲ್ಲ ಒಂದು ದಿನ ಖಚಿತವೆಂದು ಗೊತ್ತಿದ್ದರೂ ತಾನು ಶಾಶ್ವತನಂತೆ ತನ್ನ ಕುಲವನ್ನು ವೃದ್ಧಿಸಲು ಪ್ರಯತ್ನಿಸುತ್ತದೆ. ಎಂದಿನಿಂದಲೂ ಅದೇ ಸ್ಥಿತಿ. ಧೃತರಾಷ್ಟನ ಕಥೆ ದ್ರೋಣರಿಗಿಂತ ಬಹಳ ಭಿನ್ನವೇನಲ್ಲ. ಇಬ್ಬರೂ ಮಕ್ಕಳಿಗಾಗಿ ಏನೆಲ್ಲ ಮಾಡಿದವರು. ಇಂದಿಗೂ ಆ ಮನಸ್ಥಿತಿ ಇರುವುದನ್ನು ಕಾಣುತ್ತೇವೆ. ಮಗನಿಗೆ ಅಧಿಕಾರ ಬರಲಿ ಎಂದು ಕೆಲವರು, ಅಪಾರ ಹಣ ಬರಲಿ, ಮತ್ತಷ್ಟು ಖ್ಯಾತಿ ದೊರೆಯಲಿ, ದೀರ್ಘಾಯುಸ್ಸು ಸಿಗಲಿ ಎಂದು ಹಿರಿಯರು ಒದ್ದಾಡುವುದನ್ನು ನೋಡುತ್ತೇವೆ. ಅದು ಆಶ್ಚರ್ಯವೇನಲ್ಲ. ಅದು ಮನುಷ್ಯಗುಣ. ಕುಲವನ್ನು ಬೆಳೆಸುವುದು ಮನುಷ್ಯ ಧರ್ಮವೂ ಹೌದು.

ಡೆಸೆಂಬರ ತಿಂಗಳಿನಿಂದ ಮಾರ್ಚ ತಿಂಗಳವರೆಗೂ ಎಲ್ಲಿ ನೋಡಿದರೂ ಅಲ್ಲಿ ದೂಳು. ಯಾವ ಕಡೆಗೆ ನೋಡಿದರೂ ಹಸಿರು ಕಾಣುವುದಿಲ್ಲ, ಆದರೆ ಒಂದು ಮಳೆಯಾಯಿತೋ, ನೆಲ ನೆಂದಿತೋ, ಅದೆಲ್ಲಿತ್ತೋ ಹುಲ್ಲು ಚಿಗುರಿ ನಿಲ್ಲುತ್ತದೆ! ನೆಲದೊಳಗೆ ಅಡಗಿ ಕುಳಿತ ಹುಲ್ಲಿನ ಬೇರು ಚಿಗುರುವುದನ್ನು ಮರೆತಿಲ್ಲ. ಜೀವ ಅವಿತು ಕುಳಿತಿತ್ತು. ವಾತಾವರಣ ಸಹಾಯಕವಾದೊಡನೆ ಹೊರಗೆ ಚಿಮ್ಮಿತು. ಬೇಸಿಗೆಯಲ್ಲಿ ಒಣಗಿದಂತಿರುವ ಹುಲ್ಲು ಮೂಲದಲ್ಲಿ ಜೀವಧಾರಣೆ ಮಾಡಿ ಪುನ: ಹೊರಬರಲು ತುಡಿಯುತ್ತದೆ.

ಮನುಷ್ಯ ದೇಹ ಶಾಶ್ವತವಾಗಿರಲು ರಚನೆಯಾದದ್ದೇ ಅಲ್ಲ, ಅದಕ್ಕೇ ಅದು ಶರೀರ- ಪ್ರತಿಕ್ಷಣಕ್ಕೂ ಕರಗಿ ಹೋಗುವಂಥದ್ದು. ಜಗತ್ತಿನಲ್ಲಿ ಎಂಥೆಂಥವರು ಆಗಿ ಹೋದರು! ಪ್ರಪಂಚವನ್ನೇ ನಡುಗಿಸಿದವರು, ದೇಶಗಳನ್ನು ಕಟ್ಟಿದವರು, ಸಾಮ್ರಾಜ್ಯಗಳನ್ನು ವಿಸ್ತರಿಸಿದವರು, ಸಂಸ್ಥೆಗಳನ್ನು ನಿಲ್ಲಿಸಿದವರು, ಸಮಾಜವನ್ನು ಪ್ರೇರೇಪಿಸಿದವರು, ಇವರಾರೂ ಉಳಿಯಲೇ ಇಲ್ಲ. ಆದರೆ ಮಾನವ ಸಂತಾನ ಉಳಿದಿದೆ. ಅತ್ಯಂತ ಶ್ರೇಷ್ಠ ಹತ್ತಿಯ ಎಳೆ ಎರಡು ಇಂಚಿಗೂ ಉದ್ದವಾಗಿರುವುದಿಲ್ಲ. ಆದರೆ ಈ ಎಳೆಗಳನ್ನು ಸರಿಯಾಗಿ ಜೋಡಿಸಿ, ಹೆಣೆದು ಹುರಿಮಾಡಿದರೆ ಒಂದು ಮೈಲಿ ಉದ್ದದ ಹಗ್ಗವಾಗುತ್ತದೆ. ಎರಡು ಇಂಚಿನ ಎಳೆ ಮತ್ತೊಂದರ ಜೊತೆಗೆ ಸೇರಿ, ಅದು ಮತ್ತೊಂದಕ್ಕೆ ಹೊಂದಿಸಿ, ಮುನ್ನಡೆದಾಗ ಉದ್ದ ಹಗ್ಗ ಸಿಗುತ್ತದೆ. ಒಬ್ಬ ಮಾನವನ ಜೀವಿತಾವಧಿ ಚಿಕ್ಕದ್ದು. ಆದರೆ ಅದು ಒಂದರ ಮೇಲೊಂದು ವ್ಯಾಪಿಸಿದಾಗ ಅದು ಅನಂತವಾಗುತ್ತದೆ.

ಇದೆಲ್ಲದ್ದಕ್ಕೆ ಕಾರಣವೆಂದರೆ ಆತ್ಮದ ಸತ್ವ. ಆತ್ಮಕ್ಕೆ ಸಾವಿಲ್ಲ, ಅದು ಸದಾ ಜಾಗ್ರತವಾಗಿರುವುದು, ಅದು ಸದಾ ತುಡಿಯುವಂಥದ್ದು. ಈ ಆತ್ಮಗುಣದಿಂದಲೇ ಸಾವನ್ನು ಮರೆತು ಕುಲ ವೃದ್ಧಿಯಾಗುವುದು, ಒಣಗಿದ್ದ ಬೇರು ಚಿಗುರುವುದು, ಅಶಾಶ್ವತ ಬದುಕು ಶಾಶ್ವತತೆಯನ್ನು ಪಡೆಯವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT