ಕಾಲಕ್ಕೆ ರಾಜಕಾರಣ

ಸೋಮವಾರ, ಮೇ 27, 2019
27 °C

ಕಾಲಕ್ಕೆ ರಾಜಕಾರಣ

ಗುರುರಾಜ ಕರಜಗಿ
Published:
Updated:

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ವಾರಾಣಸಿಯ ಹತ್ತಿರದ ಹಳ್ಳಿಯಲ್ಲಿ ನಾಯಕನ ಮಗನಾಗಿ ಹುಟ್ಟಿದ್ದ. ಅವನು ವಯಸ್ಕನಾದಾಗ ವಾರಾಣಸಿಯ ಕನ್ಯೆಯನ್ನು ತಂದು ಮದುವೆ ಮಾಡಿದರು. ಆ ಹುಡುಗಿ ಚೆಲುವೆಯರಲ್ಲಿ ಚೆಲುವೆ, ಆಪ್ಸರೆಯಂತಿದ್ದಳು. ಆಕೆ ಸದಾಚಾರಿ, ಪತಿವೃತೆ ಮತ್ತು ಕರ್ತವ್ಯ ಪರಾಯಣಿಯಾಗಿದ್ದಳು. ಆಕೆಯ ಹೆಸರು ಸುಜಾತಾ. ಅವರಿಬ್ಬರೂ ತುಂಬ ಸಂತೋಷದಿಂದ ಏಕಜೀವ ಎನ್ನುವಂತೆ ಬದುಕಿದ್ದರು.

 ಒಂದು ದಿನ ಅವನ ಹೆಂಡತಿ, “ನನಗೆ ನನ್ನ ತಂದೆ ತಾಯಿಯರನ್ನು ನೋಡುವ ಅಪೇಕ್ಷೆಯಾಗಿದೆ” ಎಂದಳು. ಅದಕ್ಕೆ ಬೋಧಿಸತ್ವ, “ಅದಕ್ಕೇನಂತೆ ಹೋಗಿ ಬರೋಣ. ಸಾಕಷ್ಟು ತಿಂಡಿ, ಬುತ್ತಿಗಳನ್ನು ಸಿದ್ಧ ಮಾಡಿಕೋ. ನಾನು ಬಂಡಿಯ ಸಿದ್ಧಮಾಡುತ್ತೇನೆ” ಎಂದ. ಮರುದಿನ ಪ್ರಯಾಣ ನಡೆಯಿತು. ಬೋಧಿಸತ್ವ ಬಂಡಿಯ ಮುಂದೆ ಕುಳಿತು ಎತ್ತುಗಳನ್ನು ನಡೆಸಿದ. ಸುಜಾತಾ ಅವನ ಹಿಂದೆಯೇ ಕುಳಿತಿದ್ದಳು. ದಾರಿಯಲ್ಲಿ ನದಿಯಲ್ಲಿ ಸ್ನಾನಮಾಡಿ, ಊಟಮಾಡಿ ಪ್ರವಾಸ ಮುಂದುವರೆಸಿದರು. ಇವರು ವಾರಾಣಸಿ ನಗರವನ್ನು ಪ್ರವೇಶಿಸಿದಾಗ ವಾರಾಣಸಿಯ ರಾಜ ನಗರ ಪ್ರದಕ್ಷಿಣೆ ಮಾಡುತ್ತಿದ್ದ. ಅವನ ದೃಷ್ಟಿ ಸುಜಾತಾಳ ಮೇಲೆ ಬಿತ್ತು. ಆತ ಕಣ್ಣೇ ಕೀಳಲಾರದಂತಾದ. ಕಾಮಾತುರನಾದ. ತನ್ನ ಸೇವಕರನ್ನು ಕಳುಹಿಸಿ ಆಕೆಯ ಮದುವೆಯಾಗಿದೆಯೇ? ಗಂಡನೆಲ್ಲಿದ್ದಾನೆ? ಎಂಬುದನ್ನು ತಿಳಿದು ಬರಲು ಹೇಳಿದ. ಅವರು ಬಂದು, “ಸ್ವಾಮಿ, ಅವಳು ಪತಿವೃತೆ. ಅವಳ ಗಂಡ ಮುಂದೆಯೇ ಕುಳಿತು ಗಾಡಿ ನಡೆಸುತ್ತಿದ್ದಾನೆ” ಎಂದರು.

 ರಾಜನಿಗೆ ಅವಳನ್ನು ಹೇಗಾದರೂ ಪಡೆಯಬೇಕೆಂದು ಆಸೆ. ಸೇವಕರಿಗೆ ಹೇಳಿ ತನ್ನ ವಜ್ರಖಚಿತವಾದ ಚೂಡಾಮಣಿಯನ್ನು ಬಂಡಿಯಲ್ಲಿ ಕಳ್ಳತನದಲ್ಲಿ ಹಾಕಿಸಿ ತನ್ನ ಚೂಡಾಮಣಿ ಕಳುವಾಗಿದೆ, ಅದನ್ನು ಕದ್ದವರಿಗೆ ಮರಣದಂಡನೆ ಎಂದು ಫೋಷಿಸಿದ. ರಾಜದೂತರು ಎಲ್ಲೆಡೆಗೆ ಹುಡುಕುತ್ತ ಬಂದು ಈ ಬಂಡಿಯ ತಪಾಸಣೆಯನ್ನು ಮಾಡಿದರು. ಅಲ್ಲಿ ಚೂಡಾಮಣಿಯನ್ನು ಕಂಡು ಬೋಧಿಸತ್ವನನ್ನು ಹಿಡಿದು ಹಗ್ಗದಿಂದ ಕಟ್ಟಿ ರಸ್ತೆಯಲ್ಲಿ ಹೊಡೆಯುತ್ತ ರಾಜಭವನದ ಕಡೆಗೆ ನಡೆದರು. ಸುಜಾತಾ ಹೌಹಾರಿದಳು. ತನ್ನ ಗಂಡನಿಗೆ ಈ ಅವಸ್ಥೆ ತನ್ನಿಂದಲೇ ಬಂದಿರಬೇಕು ಎಂದುಕೊಂಡು ಎರಡೂ ಕೈಗಳನ್ನೆತ್ತಿ ಅಳುತ್ತಾ ಅವನ ಹಿಂದೆಯೇ ಹೊರಟಳು. ದೇವರು ಯಾಕೆ ಪ್ರಾಮಾಣಿಕರಿಗೆ ಈ ಶಿಕ್ಷೆ ಕೊಟ್ಟ ಎಂದು ನೊಂದಳು. ಪತಿವೃತೆಯ ಈ ನೋವು ಶಕ್ರನ ಸಿಂಹಾಸನವನ್ನು ಬಿಸಿಮಾಡಿತು. ಏನೋ ಅನ್ಯಾಯವಾಗುತ್ತಿರಬೇಕೆಂದು ಆತ ಕೆಳಗೆ ಬಂದು ಬೋಧಿಸತ್ವನಿಗೆ ಆಗುತ್ತಿರುವುದು ಕಂಡ. ಅಷ್ಟರಲ್ಲಿ ಸೇವಕರು ಬೋಧಿಸತ್ವನನ್ನು ವಧಾಸ್ಥಾನಕ್ಕೆ ಕಟ್ಟಿ ಶಿರಚ್ಛೇದಕ್ಕೆ ಸಿದ್ಧರಾದರು. ಆಗ ಶಕ್ರ ತನ್ನ ಶಕ್ತಿಯಿಂದ ಆನೆಯ ಮೇಲೆ ಹೋಗುತ್ತಿದ್ದ ಪಾಪಿ ರಾಜನನ್ನು ವಧಾಸ್ಥಾನದಲ್ಲಿ ನಿಲ್ಲಿಸಿ ಬೋಧಿಸತ್ವನನ್ನು ಆನೆಯ ಮೇಲೆ ಕೂಡ್ರಿಸಿದ. ಕಟುಕರಿಗೆ ಅದು ಗೊತ್ತಾಗದೆ ರಾಜನ ತಲೆ ಕತ್ತರಿಸಿದರು. ತಲೆ ಕೆಳಗೆ ಬಿದ್ದಾಗಲೇ ಅವರಿಗೆ ಅದರ ಅರಿವಾಯಿತು. ಶಕ್ರ ತನ್ನ ದೇವತೆಯ ರೂಪದಿಂದ ಕೆಳಗಿಳಿದು ಬಂದು ರಾಜ ಮಾಡಿದ ಅಪರಾಧವನ್ನು ವಿವರಿಸಿ, ಪತಿವ್ರತೆಯ ಮೇಲೆ ಕಣ್ಣು ಹಾಕಿದ ದುಷ್ಟನಿಗೆ ಸರಿಯಾದ ಶಿಕ್ಷೆಯಾಯಿತೆಂದು ಹೇಳಿ ಬೋಧಿಸತ್ವನನ್ನು ರಾಜನನ್ನಾಗಿ ಮಾಡಿದ. ಸುಜಾತಾ ಪಟ್ಟಮಹಿಷಿಯಾದಳು. ಬೋಧಿಸತ್ವ ಬಹುಕಾಲ ಧರ್ಮದಿಂದ ರಾಜ್ಯ ನಡೆಸಿದ. ಶಕ್ರ ಹೇಳಿದ, “ಯಾವಾಗ ರಾಜ ಅಧರ್ಮಿಯಾಗುತ್ತಾನೋ ಆಗ ಬರಗಾಲ ಬೀಳುತ್ತದೆ, ಅಸಮಯದಲ್ಲಿ ಮಳೆ ಬಂದು ಹಾನಿಯಾಗುತ್ತದೆ. ಶಸ್ತ್ರಭಯವೂ ಉಂಟಾಗುತ್ತದೆ”. ಹೀಗೆ ಹೇಳಿ ಶಕ್ರ ತನ್ನ ದೇವಲೋಕಕ್ಕೆ ಹೋದ

 ಇಂದಿಗೂ ಅದೇ ಪರಿಸ್ಥಿತಿಯಲ್ಲವೇ? “ರಾಜಾ ಕಾಲಸ್ಯ ಕಾರಣಂ” ಎಂಬ ಮಾತು ಯಾವ ಕಾಲಕ್ಕೂ ಸತ್ಯ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !