ಉಸಿರಿನ ಸಂಬಂಧ

ಮಂಗಳವಾರ, ಜೂನ್ 18, 2019
28 °C

ಉಸಿರಿನ ಸಂಬಂಧ

Published:
Updated:

ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ |
ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ||
ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ |
ಪುಷ್ಪವಾಗಿರು ನೀನು – ಮಂಕುತಿಮ್ಮ ||

ಪದ-ಅರ್ಥ: ವಿಶ್ವಪರಿಧಿಯದೆಲ್ಲೊ=ವಿಶ್ವಪರಿಧಿ(ವಿಶ್ವದ ಅಂಚು)+ಅದೆಲ್ಲೊ, ನೀನೆಣಿಸಿದೆಡೆಯೆ=ನೀನು+ಎಣಿಸಿದೆಡೆಯೆ(ಅಪೇಕ್ಷಿಸಿದಲ್ಲಿ), ನಿಃಶ್ವಸಿತ=ಉಸಿರು ಬಿಡುವ.

ವಾಚ್ಯಾರ್ಥ: ವಿಶ್ವದ ಅಂಚು ಅದೆಲ್ಲೋ ಸೂರ್ಯಚಂದ್ರರನ್ನು ದಾಟಿ ಇದೆ. ಆದರೆ ವಿಶ್ವದ ಕೇಂದ್ರವು ನೀನೇ. ಅಷ್ಟೇ ಅಲ್ಲ, ನೀನು ಅಪೇಕ್ಷಿಸಿದಲ್ಲೇ ಆ ಕೇಂದ್ರ. ನಿನಗೂ ಆಕಾಶಕ್ಕೂ ಇರುವುದು ಉಸಿರಿನ ಸಂಬಂಧ. ನೀನು ಪುಷ್ಪದಂತೆ ಸದಾ ಸುಂದರತೆಯ, ಸುವಾಸನೆಯ ಪ್ರತೀಕವಾಗಿರು.

ವಿವರಣೆ: ಈ ವಿಶ್ವ ಅದೆಷ್ಟು ದೊಡ್ಡದು! ಭಾಗವತ ಪುರಾಣದಲ್ಲಿ ಹೇಳುವಂತೆ ವಿಶ್ವವನ್ನು ಏಳು ಸ್ತರಗಳು ಸುತ್ತು ಹಾಕಿವೆ. ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ, ಶಕ್ತಿ ಮತ್ತು ಅಹಂಕಾರ. ಪ್ರತಿಯೊಂದು ಸ್ತರ ತನ್ನ ಹಿಂದಿನ ಸ್ತರಕ್ಕಿಂತ ಹತ್ತುಪಟ್ಟು ದೊಡ್ಡದಾಗಿದೆ! ಅದಕ್ಕೇ ಕಗ್ಗ ಉದ್ಗರಿಸಿ ಹೇಳುತ್ತದೆ- ವಿಶ್ವದ ಪರಿಧಿ ಸೂರ್ಯಚಂದ್ರರ ಆಚೆ. ಆಚೆ ಎಂದರೆ ಎಷ್ಟು ದೂರವಾದರೂ ಆಗಬಹುದು. ಆದರೆ ವಿಚಿತ್ರವೆಂದರೆ ಇಷ್ಟು ದೊಡ್ಡ ವಿಶ್ವದ ಕೇಂದ್ರ ಬಿಂದು ನಾನೇ. ಪ್ರತಿಯೊಂದು ವ್ಯಕ್ತಿಯೂ ವಿಶ್ವದ ಕೇಂದ್ರಬಿಂದುವೇ. ಯಾಕೆಂದರೆ ಅವನ ವಿಶ್ವ ಆತ ಕಂಡಂತೆ. ಅವನಿಲ್ಲದಿದ್ದರೆ ಯಾವ ವಿಶ್ವವಿದ್ದರೆ ಅವನಿಗೇನಂತೆ? ಅವನಿದ್ದರೆ ತಾನೇ ವಿಶ್ವದ ಚಮತ್ಕಾರಗಳು ಅವನ ಅನುಭವಕ್ಕೆ ಬರುವುದು? ಅದಲ್ಲದೆ, ಅವನು ಮಾತ್ರ ಕೇಂದ್ರವಲ್ಲ. ಅವನ ಎಲ್ಲಿ ಅಪೇಕ್ಷೆ ಮಾಡುತ್ತಾನೋ ಅಲ್ಲಿಯೇ ಕೇಂದ್ರ. ಭಾರತದ ಪುಟ್ಟ ಹಳ್ಳಿಯಲ್ಲಿದ್ದ ಮನುಷ್ಯನಿಗೆ ಅವನ ತಿಳಿವಳಿಕೆಯೇ ಅವನ ವಿಶ್ವ. ಅವನಿಗೆ ವೆನಿಜುವೆಲಾ ಎಂಬ ದೇಶವಿದೆ ಎಂಬುದೂ ತಿಳಿದಿರಲಾರದು. ಅದು ಅವನ ವಿಶ್ವದಲ್ಲಿ ಇಲ್ಲ. ಅದರಂತೆ ಎಲ್ಲೋ ಜರ್ಮನಿಯಲ್ಲಿದ್ದ ವ್ಯಕ್ತಿಗೆ ಈ ಪುಟ್ಟ ಹಳ್ಳಿ ಅವನ ವಿಶ್ವದಲ್ಲಿ ಇಲ್ಲ. ಇನ್ನೊಂದು ಉದಾಹರಣೆ. ಒಂದು ಪುಟ್ಟ ಊರಿನಲ್ಲಿದ್ದ ವ್ಯಕ್ತಿ ಕಲಿಯುವುದಕ್ಕೋ, ಕೆಲಸಕ್ಕೋ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ನೆಲೆಸಿದ ಎಂದಿಟ್ಟುಕೊಳ್ಳಿ. ಆಗ ಅವನ ವಿಶ್ವದ ಕೇಂದ್ರವೇ ಬದಲಾಯಿತು. ಅದರಿಂದಾಗಿಯೇ ಕಗ್ಗ- ವಿಶ್ವದ ಕೇಂದ್ರ ನೀನು ಅಪೇಕ್ಷೆಪಟ್ಟಲ್ಲಿಯೇ ಎನ್ನುತ್ತದೆ.

ನನಗೂ ವಿಶ್ವದ ದಿಗಂತಕ್ಕೂ ಉಸಿರಾಟದ ಸಂಬಂಧ. ಹಾಗೆಂದರೇನು? ವಿಶ್ವದ ಉಸಿರು ನನ್ನ ಉಸಿರಿಗೆ ಕಾರಣವಾಗುತ್ತದೆ. ನನ್ನ ಉಸಿರು ಪ್ರಪಂಚದ ಉಸಿರಿನಲ್ಲಿ ಸೇರಿ ಒಂದಾಗುತ್ತದೆ. ಅದಕ್ಕಾಗಿ ಅಮೆರಿಕದ ಖ್ಯಾತ ಖಗೋಲವಿಜ್ಞಾನಿ ಕಾರ್ಲ್‌ ಸಗಾನ್‌ ಹೇಳುತ್ತಾರೆ, ‘Relationship between the man and the cosmos is a mouth to mouth resurrection’. ಮನುಷ್ಯ ಮತ್ತು ಪ್ರಪಂಚದ ನಡುವಿನ ಸಂಬಂಧ ಬಾಯಿಂದ ಬಾಯಿಗೆ ಹಚ್ಚಿ ಪುನರುಜ್ಜೀವನಗೊಳಿಸುವ ಕ್ರಿಯೆ. ಯಾರೊಬ್ಬ ಮನುಷ್ಯ ಎಚ್ಚರ ತಪ್ಪಿದ್ದರೆ ಅವನ ಬಾಯಿಗೆ ಮತ್ತೊಬ್ಬರು ಬಾಯಿ ಹಚ್ಚಿ ಜೋರಾಗಿ ಉಸಿರಾಡಿ ಅವನ ಪುಪ್ಪುಸದಲ್ಲಿ ಗಾಳಿ ತುಂಬಿ ಪ್ರಾಣ ಸಂಚಾರವಾಗುವಂತೆ ಮಾಡುತ್ತಾರೆ. ಹಾಗೆಯೇ ವಿಶ್ವ ಮನುಷ್ಯನ ಚೈತನ್ಯ ವೃದ್ಧಿ ಮಾಡುತ್ತದೆ ಮತ್ತು ಮನುಷ್ಯನ ಚೈತನ್ಯ ಪ್ರಪಂಚವನ್ನು ಶ್ರೀಮಂತಗೊಳಿಸುತ್ತದೆ. ಆದ್ದರಿಂದ ಹೂವಿನಂತೆ ಮನುಷ್ಯ ಸದಾಕಾಲ ಸುಂದರತೆಯನ್ನು, ಸುವಾಸನೆಯನ್ನು ಹರಡಲು ಸಿದ್ಧನಾಗಿರಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !