ಭಾನುವಾರ, ಮಾರ್ಚ್ 29, 2020
19 °C

ಮುಸ್ಲಿಂ ಚಿತ್ರಣ- ಅಂದಿನಿಂದ ಇಂದಿನವರೆಗೆ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ನೆಲೆಸಿರುವ ಪ್ರತಿ ಏಳು ಜನರಲ್ಲಿ ಒಬ್ಬರು ಮುಸಲ್ಮಾನರಾಗಿದ್ದಾರೆ. ಅಂದರೆ, 2021ರ ಜನಗಣತಿಯ ವೇಳೆಗೆ ಅವರ ಜನಸಂಖ್ಯೆ 20 ಕೋಟಿಯನ್ನು ದಾಟಿರುತ್ತದೆ. ದೇಶದ ಅತ್ಯಂತ ಯಶಸ್ವಿ ಸೃಜನಾತ್ಮಕ ಉದ್ದಿಮೆ
ಯಾದ ಸಿನಿಮಾದ ವಿಷಯಕ್ಕೆ ಬಂದರೆ, ಇವರ ಸರಾಸರಿ 1/7ಕ್ಕಿಂತ ಸಾಕಷ್ಟು ಉತ್ತಮ ಮಟ್ಟದಲ್ಲಿದೆ ಎಂದು ಯಾರಾದರೂ ಸುಲಭವಾಗಿ ಲೆಕ್ಕ ಹಾಕಬಹುದು.

ಸಿನಿಮಾ ಉದ್ಯಮದ ಭಾಗವಾದ ಅಭಿನಯವೇ ಇರಲಿ, ಸಂಗೀತ ನಿರ್ದೇಶನವೇ ಇರಲಿ, ಚಿತ್ರ ಸಾಹಿತ್ಯ ರಚನೆ, ನಿರ್ದೇಶನ ಅಥವಾ ತಾಂತ್ರಿಕ ಕಲಾವಿದರ ವಿಭಾಗ ಹೀಗೆ ಯಾವುದನ್ನೇ ತೆಗೆದುಕೊಂಡರೂ ಮುಸ್ಲಿಂ ಸಮುದಾ
ಯಕ್ಕೆ ಸೇರಿದ ಪರಿಣತರ ಸಂಖ್ಯೆ ಏಳನೇ ಒಂದಕ್ಕಿಂತ ಸಾಕಷ್ಟು ಮೇಲಿದೆ. ಆದಾಗ್ಯೂ, ಭಾರತದ, ಅದರಲ್ಲೂ ವಿಶೇಷವಾಗಿ ಹಿಂದಿ ಸಿನಿಮಾದಲ್ಲಿ ಮುಸ್ಲಿಂ ಸಮುದಾಯ ಚಿತ್ರಿತವಾಗಿರುವುದು ಅತ್ಯಂತ ಅಪರೂಪವೇ. ಹೀಗೆ ಅಪರೂಪವಾಗಿ ತೆರೆಯ ಮೇಲೆ ಬಿಂಬಿತವಾದ ಸಂದರ್ಭಗಳಲ್ಲಿ, ಆ ಸಮುದಾಯಕ್ಕೆ ಸೇರಿದವರ ಪಾತ್ರಗಳನ್ನು ಒಂದೋ ತೀರಾ ಸಂಭಾವಿತರಂತೆ ಅಥವಾ ದುರುಳರಂತೆ ಚಿತ್ರಿಸಲಾಗಿರುತ್ತದೆ. ಅಂದರೆ, ಒಬ್ಬ ಕರಣ್ ಅಥವಾ ಸಮೀರ್ ಅಥವಾ ರಾಜ್ ಅಥವಾ ರಾಹುಲ್‍ಗೆ ಸಂವಾದಿಯಾಗಿ ಒಬ್ಬ ‘ಸಾಮಾನ್ಯ’ ಮುಸ್ಲಿಂ ಅಸ್ತಿತ್ವದಲ್ಲಿಲ್ಲ ಅಥವಾ ಇದ್ದರೂ ಅಂತಹ ಪಾತ್ರಗಳು ಬಾಕ್ಸ್‌ಆಫೀಸ್ ಸ್ನೇಹಿಯಲ್ಲ ಎಂದು ಬಾಲಿವುಡ್ ತೀರ್ಮಾನಿಸಿದಂತಿದೆ. ಹೀಗಾಗಿಯೇ, ಅನುಭವ್ ಸಿನ್ಹಾ ಅವರ ಇತ್ತೀಚಿನ ಚಿತ್ರ ‘ಮುಲ್ಕ್’ ತೀರಾ ವಿಭಿನ್ನವಾದ ಒಳನೋಟಗಳಿಂದ ಕೂಡಿದ ಚಿತ್ರವೆನಿಸಿಕೊಳ್ಳುತ್ತದೆ. ಇದು ನಮ್ಮ ಈ ವಾರದ ಅಂಕಣಕ್ಕೆ ಪ್ರೇರಣೆಯೂ ಆಗಿದೆ.

ಹಿಂದಿ ಸಿನಿಮಾಗಳಲ್ಲಿ ಮುಸ್ಲಿಮರು ಚಿತ್ರಿತವಾಗಿರುವ ಬಗೆಯನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವಿಭಜಿಸಬಹುದು. ರಾಷ್ಟ್ರ ಸ್ವಾತಂತ್ರ್ಯ ಪಡೆದಾಗಿನಿಂದ 1960ರ ದಶಕದ ಕಡೆಯವರೆಗಿನ ಅವಧಿಯಲ್ಲಿ ಮೊಘಲ್ ಚರಿತ್ರೆಯ ಮಹಾನ್ ಪ್ರಣಯ ಮತ್ತು ಬಲಶಾಲಿ ವ್ಯಕ್ತಿತ್ವಗಳ ಅನಾವರಣ: ತಾಜ್‍ಮಹಲ್, ಮೊಘಲ್- ಎ- ಆಜಂ, ರಜಿಯಾ ಸುಲ್ತಾನಾ ಮುಂತಾದವು ಇದಕ್ಕೆ ಉದಾಹರಣೆಗಳು. ಇದಕ್ಕೆ ಸಮಾನಾಂತರವಾಗಿ, ನಾಜೂಕಿನ ಪ್ರಣಯ, ಶಾಯರಿ ಮತ್ತು ಸಾಮಾನ್ಯ ಪಾಳೇಗಾರಿಕೆಯ ಗತ್ತುಗಳನ್ನು ಒಳಗೊಂಡ ‘ಮುಸ್ಲಿಂ ಸಾಮಾಜಿಕ’ ಪ್ರಕಾರಕ್ಕೆ ಸೇರಿದ ಸಿನಿಮಾಗಳು; ಮೇರೆ ಮೆಹಬೂಬ್‍ದಿಂದ ಪಕೀಜಾವರೆಗಿನ ಹಲವು ಸಿನಿಮಾಗಳನ್ನು ಈ ಪ್ರಕಾರಕ್ಕೆ ಉದಾಹರಣೆಗಳಾಗಿ ನೀಡಬಹುದು. 1970ರ ದಶಕದ ‘ಆಂಗ್ರಿ ಯಂಗ್‍ಮ್ಯಾನ್’ ಸಿನಿಮಾಗಳಲ್ಲಿ ಮುಸ್ಲಿಂ ಪಾತ್ರಗಳನ್ನು ವಿಶಾಲ ಹೃದಯಿಗಳಾಗಿ, ಗೌರವಾನ್ವಿತರಾಗಿ, ಪ್ರತಾಪದಿಂದ ಕೂಡಿದ ಹಾಗೂ ಸಾಮಾನ್ಯವಾಗಿ ರಾಷ್ಟ್ರಕ್ಕಾಗಿ ಅಥವಾ ಹಿಂದೂ ಗೆಳೆಯನಿಗಾಗಿ ತನ್ನ ಜೀವವನ್ನೇ ಅರ್ಪಿಸುವ ಪಾತ್ರಗಳನ್ನಾಗಿ ಚಿತ್ರಿಸಲಾಗಿದೆ.

ಪ್ರಕಾಶ್ ಮೆಹ್ರಾ ಅವರ 1973ರ ಹೆಸರಾಂತ ಚಲನಚಿತ್ರ ‘ಝಂಜೀರ್’ನಲ್ಲಿ ಶೇರ್ ಖಾನ್ ಪಾತ್ರದ ಪ್ರಾಣ್ ‘ಯಾರಿ ಹೈ ಇಮಾನ್ ಮೇರಾ, ಯಾರ್ ಮೇರಿ ಜಿಂದಗಿ...’ ಎಂದು ಅಮಿತಾಭ್ ಬಚ್ಚನ್ ಅವರಿಗಾಗಿ ಹಾಡುವುದು ಇದಕ್ಕೊಂದು ಅತ್ಯುತ್ತಮ ನಿದರ್ಶನ. 1980ರ ದಶಕದ ಅಂತ್ಯ ದವರೆಗೂ ಮುಸ್ಲಿಂ ಪಾತ್ರಧಾರಿಗಳನ್ನು ಬಹುತೇಕ ಇದೇ ರೀತಿ ಸಂಭಾವಿತರಂತೆಯೇ ಚಿತ್ರಿಸಲಾಗಿದೆ. ಖಳನಾಯಕರಾಗಿ ಅವರು ಚಿತ್ರಿತಗೊಂಡಿರುವುದು ಬಹಳ ವಿರಳ. ಹೆಚ್ಚೆಂದರೆ, ಅನಾರ್ಕಲಿಯೊಂದಿಗೆ ತನ್ನ ಮಗ ಸಲೀಂನ ಪ್ರಣಯದ ವಿಷಯದಲ್ಲಿ ಅಕ್ಬರನನ್ನು ನೀವು ಶಾಂತಿಯ ಖಳನಾಯಕ ಎಂದು ಭಾವಿಸಬಹುದಾಗಿತ್ತಷ್ಟೆ.

ಮುಂದಿನ ಹಂತದಲ್ಲಿ ಇವೆಲ್ಲವೂ ಬದಲಾದವು. ಇದನ್ನು ಹಿಂದಿ ಸಿನಿಮಾದ ಸನ್ನಿ ಡಿಯೋಲ್ ಹಂತ ಎಂದು ಕರೆಯಬಹುದು. ಇದು ಕೋಮುವಾದವೆಂಬುದೇ ಫ್ಯಾಷನ್ ಎನ್ನಿಸಿಕೊಂಡ, ಓತಪ್ರೋತ ದೂಷಣೆಗಳೇ ಪುರುಷತ್ವದ ಪ್ರತೀಕ ಎನ್ನಿಸಿದಂತಹ ಮತ್ತು ಮುಸ್ಲಿಂ ಪಾತ್ರವು ದುರುಳನಂತೆ, ಬಹುತೇಕ ಸಂದರ್ಭಗಳಲ್ಲಿ ಭಯೋತ್ಪಾದಕನಂತೆ ಚಿತ್ರಿತವಾದ ಕಾಲಘಟ್ಟ ಇದಾಗಿದೆ. ಇಂತಹ ಸಿನಿಮಾಗಳಲ್ಲಿ ಒಂದಾದ ‘ಜಾಲ್’ನಲ್ಲಿ ಡಿಯೋಲ್ ಒಬ್ಬ ಸಂಭಾವಿತನ ಪಾತ್ರಧಾರಿಯಾ
ಗಿದ್ದಾನೆ. ಕೆಟ್ಟವರಂತೆ ಚಿತ್ರಿತವಾಗಿರುವ ಮುಸ್ಲಿಂ ಪಾತ್ರಧಾರಿಗಳಿಗೆ ಸಭ್ಯತೆಯ ಪಾಠಗಳನ್ನು ಬೋಧಿಸುವ ಸಂದರ್ಭವಿದ್ದು, ಆಗ ‘ಓಂ ನಮಃ ಶಿವಾಯ’ ಎಂಬ ಹಿನ್ನೆಲೆ ಸಂಗೀತ ಕೇಳಿಬರುತ್ತದೆ. ಸಮೀಪದ ಮಸೀದಿಯೊಂದರಲ್ಲಿ ಅಜಾನ್ ಕರೆಯ ಸಂದರ್ಭಕ್ಕೆ ಸರಿಯಾಗಿ ಕೆಟ್ಟ ಪಾತ್ರಗಳು ಆಗಮಿಸುವಂತೆ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಟಬು ದೇಶಭಕ್ತ ನಾಯಕನ ಮುಸ್ಲಿಂ ಪತ್ನಿಯಾಗಿದ್ದು ಆತನಿಗೆ ವಂಚನೆ ಎಸಗುವ ಪಾತ್ರದಲ್ಲಿ ನಟಿಸಿದ್ದಾರೆ.

ಒಬ್ಬ ಬೇಹುಗಾರನ ಪ್ರೇಮ ಕಥೆಯಾದ ‘ದಿ ಹೀರೊ’ ಚಿತ್ರದಲ್ಲಿ ಡಿಯೋಲ್ ಅವರ ಮುಸ್ಲಿಂ ಪತ್ನಿಯ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಡಿಯೋಲ್ ಕೆಟ್ಟ ಮುಸ್ಲಿಮರ ವಿರುದ್ಧದ ಹೋರಾಟಗಾರನಾಗಿದ್ದರೆ, ಪ್ರಿಯಾಂಕಾ ಹಿಂದಿನ ಕಾಲದ ಚಿತ್ರಗಳಲ್ಲಿನ ಸಭ್ಯ ಮುಸ್ಲಿಮರಂತೆ ಆತನಿಗಾಗಿ ತನ್ನ ಬದುಕನ್ನು ಸಮರ್ಪಿಸುವ ಪಾತ್ರಧಾರಿಯಾಗಿದ್ದಾರೆ. ಇನ್ನು ಘದರ್- ಏಕ್ ಪ್ರೇಮ್ ಕಥಾ ಬಗ್ಗೆ ಏನನ್ನೂ ಮಾತನಾಡದಿರುವುದೇ ಒಳ್ಳೆಯದು. ಸಂಕಲನಕಾರ ಎಂ.ಜೆ. ಅಕ್ಬರ್ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ನಾನು ಮಾತನಾಡಿದ ಸಂದರ್ಭದಲ್ಲಿ, ‘ಈ ಚಿತ್ರವು ಹಿಂದೆಂದೂ ಇಲ್ಲದ ರೀತಿಯಲ್ಲಿ ಜನಾಂಗೀಯ ಅಸಹನೆ ಕೆರಳಿಸುವಂಥದ್ದು’ ಎಂದು ಅವರು ಹೇಳಿದ್ದರಿಂದ ನಾನು ಈ ಚಿತ್ರವನ್ನು ನೋಡಿದ್ದೆ. ಅವರು ಹೇಳಿದ್ದು ಅತ್ಯಂತ ಸಮರ್ಪಕವಾಗಿತ್ತು. ಇದೇ ಸಾಲಿನಲ್ಲಿ ಇನ್ನೂ ಹಲವಾರು ಚಿತ್ರಗಳು ಸಿದ್ಧಗೊಂಡವು. ಅದಕ್ಕೆ ರೋಜಾ, ಮಿಷನ್ ಕಾಶ್ಮೀರ್, ಫನಾ, ಫಿಜಾ, ಕುರ್ಬಾನ್ ಮತ್ತು ವಿಶ್ವರೂಪಂ (ನಾಯಕ ಸಂಭಾವಿತ ಮುಸ್ಲಿಮನಾಗಿದ್ದು, ಪಾತಕಿಗಳಾದ ಭಯೋತ್ಪಾದಕರ ಎದುರು ಸೆಣಸುವವನಾಗಿರುವುದರನಡುವೆಯೂ) ಉದಾಹರಣೆಯಾಗಿ ನೋಡಬಹುದು. ಹೀಗೆ ಮುಸ್ಲಿಂ ಪಾತ್ರಧಾರಿಗಳನ್ನು ಭಯೋತ್ಪಾದಕರಂತೆ ಚಿತ್ರಿಸುವ ಒಂದು ಪರ್ವ ಪೂರ್ಣವಾಯಿತು. ನಂತರ ಬದಲಾವಣೆ ಶುರುವಾಯಿತು.

ಕಾಶ್ಮೀರದಲ್ಲಿ ಭಯೋತ್ಪಾದನೆ ಪಿಡುಗು ಅಧಿಕಗೊಂಡದ್ದರ ಜೊತೆಗೆ ಅಲ್ ಖೈದಾ ಮತ್ತು ‘ಇಂಡಿಯನ್ ಮುಜಾಹಿದ್ದೀನ್’ಗಳು ಇಸ್ಲಾಮೋ ಫೋಬಿಯಾ (ಇಸ್ಲಾಂ ಭೀತಿ) ಮಾರುಕಟ್ಟೆಯನ್ನು ಸೃಷ್ಟಿಸಿಬಿಟ್ಟಿದ್ದವು. ಮೊಹಮ್ಮದ್ ಅಶ್ರಫ್ ಖಾನ್ ಮತ್ತು ಸಯೀದಾ ಝರಿಯಾ ಬುಖಾರಿ ಅವರು 2011ರಲ್ಲಿ ನಡೆಸಿದ 50 ಸಿನಿಮಾಗಳ ಮುಸ್ಲಿಂ ಪಾತ್ರಗಳ ಅಧ್ಯಯನದ ಪ್ರಕಾರ, ಶೇ 65.2ರಷ್ಟು ಚಿತ್ರಗಳಲ್ಲಿ ಮುಸ್ಲಿಮರನ್ನು ಕೆಟ್ಟ ಛಾಯೆಯಲ್ಲಿ, ಶೇ 30ರಷ್ಟು ಚಿತ್ರಗಳಲ್ಲಿ ತಟಸ್ಥವಾಗಿ ಮತ್ತು ಕೇವಲ
ಶೇ 4.4ರಲ್ಲಿ ಋಣಾತ್ಮಕವಾಗಿ ಚಿತ್ರಿಸಲಾಗಿದೆ.

ತೀರಾ ಇತ್ತೀಚೆಗಷ್ಟೇ ಇದನ್ನು ಮೀರುವಂತಹ ಪಾತ್ರಗಳನ್ನು ತೆರೆಯ ಮೇಲೆ ಅನಾವರಣಗೊಳಿಸಲಾಗುತ್ತಿದೆ. ಜಾನ್ ಅಬ್ರಹಾಂ ಅವರ ‘ನ್ಯೂಯಾರ್ಕ್’, ಶಾರುಖ್ ಖಾನ್ ಅವರ ‘ಮೈನೇಮ್ ಈಸ್ ಖಾನ್’ ಮತ್ತು ಮಲಯಾಳಂನ ‘ಅನ್ವರ್’ ಚಲನಚಿತ್ರಗಳಲ್ಲಿ ಮುಸ್ಲಿಂ ಪಾತ್ರಧಾರಿಗಳೇ ಕಥಾ ನಾಯಕರಾಗಿದ್ದಾರೆ. ಶಾರುಖ್ ಖಾನ್ ಅವರು ‘ಚಕ್ ದೇ ಇಂಡಿಯಾ’ದಿಂದ ಶುರುವಾಗಿ ಹಲವಾರು ಸರಣಿ ಚಿತ್ರಗಳಲ್ಲಿ ಮುಸ್ಲಿಂಹೆಸರಿನ ಪಾತ್ರಧಾರಿಯಾಗಿಯೇ ನಟಿಸಿದ್ದಾರೆ.

ಅನುಭವ್ ಸಿನ್ಹಾ ಅವರ ‘ಮುಲ್ಕ್‌’ ಚಿತ್ರವು, ಒಂದು ಪ್ರಮುಖ ಹಳೆಯ ನಗರದಲ್ಲಿ ನೆಲೆಸಿದ, ಅರ್ದಂಬರ್ಧ ಪರಿತ್ಯಕ್ತಳಾದ ಹಿಂದೂ ಸೊಸೆಯನ್ನು ಹೊಂದಿದ ಸಾಮಾನ್ಯ ಮುಸ್ಲಿಂ ಕುಟುಂಬದ ಕಥೆಯನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆಯುತ್ತದೆ. ಮುಸ್ಲಿಮರಲ್ಲಿ ಸಂಭಾವಿತರು, ದೇಶಭಕ್ತರು ಇರುವುದರ ಜೊತೆಗೆ ದುರುಳರು ಮತ್ತು ಭಯೋತ್ಪಾದಕರೂ ಇದ್ದಾರೆ ಎಂದು ಇದು ಕಟ್ಟಿಕೊಡುತ್ತದೆ. ಇದರಲ್ಲಿ ವಾರಾಣಸಿಯ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥನ ಪಾತ್ರದಲ್ಲಿ ನಟಿಸಿರುವ ರಜತ್ ಕಪೂರ್ ಹೆಚ್ಚು ಮಾತನಾಡುವ ಗೋಜಿಗೇ ಹೋಗದೆ ತಮ್ಮ ನಿಲುವು, ಕಣ್ಣುಗಳು ಮತ್ತು ಆಂಗಿಕ ಹಾವಭಾವಗಳಿಂದಲೇ ಅದ್ಭುತವಾಗಿ ನಟಿಸುವ ಮೂಲಕ, ಮುಸ್ಲಿಮರ ಸಂಕೀರ್ಣತೆಗಳನ್ನು ಮನಮುಟ್ಟಿಸಿದ್ದಾರೆ.

ಇದು ದೈನಂದಿನ ಆಗುಹೋಗುಗಳಿಗೆ ಸಂಬಂಧಿಸಿದ ಸಾಮಾನ್ಯ ಕುಟುಂಬವೊಂದರ ಕಥೆ. ಇದರಲ್ಲೂ ಕೆಲವು ಸಿನಿಮೀಯವಾದ ಸಿದ್ಧ ಮಾದರಿಗಳು ಮತ್ತು ತುಂಬಾ ಮೇಲ್ಮಟ್ಟದ ಬೋಧನಾ ಶೈಲಿಯ ನಾಟಕೀಯವಾದ ಅಂಶ
ಗಳು ಇವೆ. ಆದರೆ, ತಾನು ಬಸ್‍ನಲ್ಲಿ ಹುದುಗಿಸಿ ಇಟ್ಟ ಬಾಂಬ್ ಮೂವರು ಮುಸ್ಲಿಮರೂ ಸೇರಿದಂತೆ 16 ಜನರನ್ನು ಬಲಿ ತೆಗೆದುಕೊಂಡ ಮೇಲೆ ಎನ್‍ಕೌಂಟರ್‌ನಲ್ಲಿ ಹತನಾಗುವ ಉಗ್ರವಾದಿ ಮಗನೂ ಇದರಲ್ಲಿ ಚಿತ್ರಿತಗೊಂಡಿದ್ದಾನೆ.

ಈ ಚಿತ್ರವನ್ನು ವಿಮರ್ಶಿಸುವುದು ನನ್ನ ಉದ್ದೇಶವಲ್ಲ. ಆದರೂ ಈ ಸಿನಿಮಾ ಶುರುವಾಗಿ ಅರ್ಧ ಗಂಟೆಯೊಳಗೆ, ಈವರೆಗೆ ಯಾವ ಹಿಂದಿ ಸಿನಿಮಾವೂ ಮೂಡಿಸದಂತಹ ಭಾವನೆಯನ್ನು ನನ್ನೊಳಗೆ ಮೂಡಿಸಿತು ಎಂದು ನಾನು ಹೇಳಲಿಚ್ಛಿಸುತ್ತೇನೆ. ವಿಶೇಷವಾಗಿ, ಪ್ರಮುಖ ನೆಲೆಗಳಲ್ಲಿರುವ ಭಾರತೀಯ ಮುಸ್ಲಿಮರ ಮನಸ್ಸಿನಲ್ಲಿ ಹುದುಗಿರುವ ಭಯ, ಅಭದ್ರತೆ ಹಲವಾರು ಸಂಘರ್ಷಾತ್ಮಕ ದ್ವಂದ್ವಗಳು, ಅಸ್ತಿತ್ವದ ಸಂದೇಹಗಳು, ಆಕಾಂಕ್ಷೆಗಳು ಮತ್ತು ಹತಾಶೆಗಳೆಲ್ಲವನ್ನೂ ಇದು ಒಟ್ಟೊಟ್ಟಿಗೆ ಬಿಂಬಿಸುತ್ತದೆ. ನಾನು ವಕೀಲ ಮುರದ್ ಅಲಿ ಮೊಹಮ್ಮದ್‍ನ (ರಿಷಿ ಕಪೂರ್) ಭಯೋತ್ಪಾದಕ ದಾಯಾದಿ ಶಾಹಿದ್‍ನಂತೆ (ಪ್ರತೀಕ್ ಬಬ್ಬರ್) ಒಬ್ಬ ಯುವ ಮುಸ್ಲಿಮನ ಸ್ಥಾನದಲ್ಲಿ ನಿಂತುಕೊಂಡು ನೋಡಿದರೆ, ಸಂಘರ್ಷಾತ್ಮಕ ಒತ್ತಡಗಳು ಮತ್ತು ದೌರ್ಬಲ್ಯಗಳು ಏನೆಂಬುದನ್ನು ಚಿತ್ರವು ಮನದಟ್ಟು ಮಾಡಿಕೊಡುತ್ತದೆ.

ಉದ್ಯೋಗ ಹೀನತೆ, ಜಗತ್ತಿನಾದ್ಯಂತ ಮುಸ್ಲಿಮರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಪ್ರಚಾರ, ಕೌಟುಂಬಿಕ ಪ್ರೀತಿ ಮತ್ತು ದೇಶದೆಡೆಗಿನ ಅಭಿಮಾನಗಳ ಬಗ್ಗೆಯೂ ಇದು ಮನಗಾಣಿಸುತ್ತದೆ. ಸಿನಿಮಾ ಮಧ್ಯಂತರಕ್ಕೆ ಬರುತ್ತಿದ್ದಂತೆ ಒಂದು ಬಗೆಯ ಭಯ ಪ್ರೇಕ್ಷಕರನ್ನು ಆವರಿಸುತ್ತದೆ. ಭಾರತದ ಪ್ರತಿ ಏಳು ಜನರ ಪೈಕಿ ಒಬ್ಬರ ಮನಸ್ಸಿನಲ್ಲಿ, ಅಂದರೆ ನಮ್ಮ ದೇಶದ ಸುಮಾರು 20 ಕೋಟಿ ಜನರಲ್ಲಿ ಇಷ್ಟೆಲ್ಲಾ ತಳಮಳವಾಗುತ್ತಿದೆಯೇ ಎಂಬ ಆತಂಕಭರಿತ ಪ್ರಶ್ನೆಯೂ ನಿಮ್ಮನ್ನು ಕಾಡಬಹುದು. ಹಾಗಾಗಿದ್ದೇ ಆದರೆ ಈವರೆಗೂ ನಾವೆಲ್ಲರೂ ಏಕೆ ಇನ್ನೂ ನಾಶವಾಗಿ ಹೋಗಿಲ್ಲ?

ಏಕೆ ಇನ್ನೂ ನಾಶವಾಗಿಲ್ಲವೆಂದರೆ, ಸಮಾಧಿ ಮಾಡಲು ಕೂಡ ಶವವನ್ನು ತೆಗೆದುಕೊಳ್ಳಲು ಒಪ್ಪದ ಉಗ್ರನ ಕುಟುಂಬಸ್ಥರಂತಹ ಮಹಾನ್ ದೇಶಭಕ್ತರಾದ ಮುಸ್ಲಿಮರು ಇರುವುದರಿಂದ. ವಾಸ್ತವವಾಗಿ, ಸಂಭಾವಿತ ಮುಸ್ಲಿಂ ಎಂಬ ಪ್ರತ್ಯೇಕತೆಯ ಹಣೆಪಟ್ಟಿಯನ್ನೇ ಪ್ರಶ್ನಿಸಿರುವುದು ಈ ಚಿತ್ರದ ವಿಶೇಷವಾದ ಎದೆಗಾರಿಕೆ ಎಂದೇ ಹೇಳಬೇಕು. ಹವಿಲ್ದಾರ್ ಅಬ್ದುಲ್ ಹಮೀದ್, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ಶುದ್ಧಾಂಗ ವಾರಾಣಸಿಗರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಹಾಗೂ ಅವರಂತೆ ಇರುವ ಇತರ ಮುಸ್ಲಿಮರನ್ನು ಮಾತ್ರ ನಾವು ಆದರಿಸುತ್ತೇವೆ. ಅನುಭವ್ ಸಿನ್ಹಾ ಅವರು ವಿಪರೀತ ಆಪತ್ತಿಗೆ ಎದೆಗೊಟ್ಟು, ಬಹುತೇಕ ಮುಸ್ಲಿಮರು ಈ ಮಹಾನ್ ರಾಷ್ಟ್ರಭಕ್ತರಂತೆಯೇ ಬದುಕುತ್ತಿದ್ದಾರೆ ಎಂಬುದನ್ನು ಸಮರ್ಥನೀಯವಾಗಿ ಬಿಂಬಿಸಿದ್ದಾರೆ. ಹಾಗೆಯೇ ಭಯೋತ್ಪಾದಕರು ಮಾತ್ರ ಇದಕ್ಕೆ ಅಪವಾದ ಎಂಬುದನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಜಾತಿಯ ವಿಷಯದಂತೆಯೇ ನಾವು ಬಚ್ಚಿಟ್ಟುಕೊಳ್ಳಲು ಬಯಸುವ ಆಧುನಿಕ ಭಾರತದ ಸಾಮಾನ್ಯ ಮುಸ್ಲಿಂ ಕುಟುಂಬದ ಕಥೆಯನ್ನು ಸಿನ್ಹಾ ಅವರ ‘ಮುಲ್ಕ್’ ಕಟ್ಟಿಕೊಟ್ಟಿರುವುದು ವಿಶೇಷವಾಗಿದೆ. ಈ ಸಿನಿಮಾವನ್ನು ನಿಷೇಧಿಸಬೇಕು ಎಂದು ಕರೆ ನೀಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿನ್ಹಾ ಅವರನ್ನು ಹೇಗೆಲ್ಲಾ ಕಿಚಾಯಿಸಲಾಗಿದೆ ಎಂಬುದೇ ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಯಾವುದೇ ರಾಷ್ಟ್ರಭಕ್ತ ಭಾರತೀಯನು ಈ ಸಿನಿಮಾದ ಬಗ್ಗೆ ಏಕೆ ಹೆಮ್ಮೆ ಪಡಲಾಗದೆ ಮುಜುಗರಕ್ಕೆ ಒಳಗಾಗುತ್ತಾನೆ ಎಂಬುದೇ ಚರ್ಚೆಯ ವಿಷಯವಾಗಬೇಕು. ಪಾಕಿಸ್ತಾನದ ಸೇನಾ ಕುಟುಂಬದವರನ್ನು ಸಂಭಾವಿತರಂತೆ ಚಿತ್ರಿಸಿರುವ ಮೇಘನಾ ಗುಲ್ಜಾರ್ ಅವರ ‘ರಾಝಿ’ ಹಾಗೂ ಇದೀಗ ತೆರೆಕಂಡಿರುವ ‘ಮುಲ್ಕ್’ನಂತಹ ಚಿತ್ರಗಳ ಬಗ್ಗೆ ಭಾರತೀಯರಾದ ನಾವು, ಇನ್ನೂ ನಂಬಿಕೆ ಇರಿಸಿ ಧೈರ್ಯದಿಂದ ನಿರ್ಮಿಸಿ ಸಂಭ್ರಮ ಪಡುತ್ತಿರುವುದಕ್ಕಾಗಿ ಹೆಮ್ಮೆ ಪಡಬೇಕು. ತೆರೆದ ಮನಸ್ಸಿನಿಂದ ನಿಜವಾದ ರಾಷ್ಟ್ರಭಕ್ತಿಯ ಮನಸ್ಥಿತಿಯಿಂದ ಈ ಚಿತ್ರವನ್ನು ನೋಡಿದ್ದೇ ಆದರೆ, ಇದು ನಿಮ್ಮನ್ನು ಒಂದು ವಿಷಾದಕರ ನೋವಿನಿಂದ ತೋಯಿಸಿಬಿಡುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಇದೇ ವಾರಾಣಸಿಯಲ್ಲಿ, 2005ರಲ್ಲಿ ಇದೇ ಶಹರದ ಅತ್ಯಂತ ಪ್ರಖ್ಯಾತ ಮುಸ್ಲಿಂ ಮೇಧಾವಿಯೊಬ್ಬರಿಂದ ನಾನು ಅದ್ಭುತವಾದ ಪಾಠವೊಂದನ್ನು ಕಲಿತೆ. ನನ್ನ ‘ವಾಕ್ ದಿ ಟಾಕ್’ ಸಂದರ್ಶನದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರನ್ನು ‘ಜಿನ್ನಾ ಅವರೇ ಖುದ್ದು ಆಹ್ವಾನಿಸಿದರೂ 1947ರಲ್ಲಿ ನೀವು ಏಕೆ ಪಾಕಿಸ್ತಾನಕ್ಕೆ ಹೋಗಲಿಲ್ಲ’ ಎಂದು ನಾನು ಕೇಳಿದ್ದೆ. ಅದಕ್ಕೆ ಅವರು ನೀಡಿದ ಪ್ರತ್ಯುತ್ತರವೇನು ಗೊತ್ತೇ- ‘ಕೈಸೆ ಜಾತೇ ಹಮ್. ವಹಾಂ ಹಮಾರಾ ಬನಾರಸ್ ಹೈ ಕ್ಯಾ’ (ಹೇಗಾದರೂ ಹೋಗಲಿ. ಅಲ್ಲಿ ನಮ್ಮ ಬನಾರಸ್ ಇದೆಯೇ) ಎಂದಿದ್ದರು. ಮುಂದುವರಿದ ಅವರು, ತಮ್ಮ ಅಚ್ಚುಮೆಚ್ಚಿನ ರಾಗ ಭೈರವಿಯನ್ನು ದೈವನಾದ ಶಿವನ ಆಶೀರ್ವಾದವಿಲ್ಲದೆ ತಾವು ನುಡಿಸಲಾಗದು ಎಂದೂ ಹೇಳಿದ್ದರು. ಅವರ ಬೀದಿಯಲ್ಲಿದ್ದ ಪುಟ್ಟ ದೇಗುಲ ಪ್ರವೇಶಿಸಲು ಅವರಿಗೆ ಅನುಮತಿ ಇಲ್ಲದ್ದರಿಂದ, ಅದರ ಹಿಂಭಾಗಕ್ಕೆ ಹೋಗಿ ಗರ್ಭಗುಡಿಯ ಹೊರಗಿನ ಗೋಡೆಯನ್ನು ಸ್ಪರ್ಶಿಸಿ ದೈವದ ಆಶೀರ್ವಾದಕ್ಕೆ ಪ್ರಾರ್ಥಿಸುತ್ತಿದ್ದ ಬಗೆಯನ್ನು ನಿವೇದಿಸಿಕೊಂಡಿದ್ದರು.

ನಮ್ಮ ಸಂಸತ್ತಿನಲ್ಲಿ ಆಚರಿಸಲಾದ ಪ್ರಥಮ ಸ್ವಾತಂತ್ರ್ಯೋತ್ಸವದ ದೃಶ್ಯಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಬಿಸ್ಲಿಲ್ಲಾ ಖಾನ್ ಅವರು ಸಡಗರದಿಂದ ಶಹನಾಯಿ ನಾದವನ್ನು ಅಲ್ಲಿ ಮೊಳಗಿಸಿದ್ದರು. ನಾವೀಗ 72ನೇ ಸ್ವಾತಂತ್ರ್ಯೋತ್ಸವಕ್ಕೆ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ, ಅದೇ ರೀತಿಯ ಒಂದು ಭಾವನೆಯನ್ನು ಮೂಡಿಸಿಕೊಳ್ಳಲು ನಾವು ‘ಮುಲ್ಕ್’ ಚಿತ್ರವನ್ನು ನೋಡಬೇಕಾಗಿದೆ. ಮುರದ್ ಅಲಿ ಮೊಹಮ್ಮದ್ ಪಾತ್ರದಲ್ಲಿ ರಿಷಿ ಕಪೂರ್ ಅವರು ‘ನನ್ನ ಗಡ್ಡ ಮತ್ತು ಒಸಾಮ ಬಿನ್ ಲಾಡೆನ್‍ನ ಗಡ್ಡದ ನಡುವಿನ ವ್ಯತ್ಯಾಸ ಏನೆಂದು ಹೇಳಲು ನಿಮಗೆ ಸಾಧ್ಯವಿಲ್ಲವಾದರೆ ಅದು ನಿಮ್ಮ ಸಮಸ್ಯೆ. ನನ್ನ ಧಾರ್ಮಿಕ ಕರ್ತವ್ಯಕ್ಕೆ (ಸುನ್ನತ್) ನಿಷ್ಠವಾಗಿರುವ ನನ್ನ ಹಕ್ಕನ್ನು ನೀವು ದಮನಿಸಲಾಗದು’ ಎಂದು ನ್ಯಾಯಾಲಯದಲ್ಲಿ ನಿಂತು ಹೇಳುವುದನ್ನು ನೀವು ನೋಡಬೇಕು.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ
ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು