ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಬಿಐ ಸೇವೆ

ಅಮೆರಿಕ ಚುನಾವಣೆಗಾಗಿ ಫೇಸ್‌ಬುಕ್‌ನಲ್ಲಿ ಮತದಾರರ ಮಾಹಿತಿಗೆ ಕನ್ನ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್ ಆರೋಪ
Last Updated 21 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಕಳೆದ ಲೋಕಸಭಾ ಚುನಾವಣೆಯಲ್ಲಿ ‘ಮಿಷನ್ 272+’ ಸಾಧಿಸಲು ಬಿಜೆಪಿ, ‘ಒಬಿಐ’ನ ಸೇವೆ ಪಡೆದುಕೊಂಡಿತ್ತು’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.

‘ಒಬಿಐನ ಉಪಾಧ್ಯಕ್ಷ ಹಿಂಮಾಶು ಶರ್ಮಾ ಅವರ ಲಿಂಕ್ಡ್‌ಇನ್ ಖಾತೆಯನ್ನು ಪರಿಶೀಲಿಸಿದ್ದೇವೆ. ನಾಲ್ಕು ಚುನಾವಣೆಗಳಲ್ಲಿ ನಾವು ಬಿಜೆಪಿಗೆ ಸೇವೆ ನೀಡಿದ್ದೆವು ಎಂದು ಶರ್ಮಾ ತಮ್ಮ ವೈಯಕ್ತಿಕ ವಿವರದಲ್ಲಿ ಬರೆದುಕೊಂಡಿದ್ದಾರೆ. ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ದೆಹಲಿ ಚುನಾವಣೆಗಳಲ್ಲಿ ಬಿಜೆಪಿ ಈ ಕಂಪೆನಿಯ ಸೇವೆ ಪಡೆದುಕೊಂಡಿದೆ’ ಎಂದು ಸುರ್ಜೇವಾಲಾ ಆಪಾದಿಸಿದ್ದಾರೆ.

ಜತೆಗೆ ಹಿಮಾಂಶು ಶರ್ಮಾ ಅವರ ಲಿಂಕ್ಡ್‌ಇನ್ ಖಾತೆಯ ಸ್ಕ್ರೀನ್‌ಶಾಟ್‌ಗಳನ್ನು ಮಾಧ್ಯಮಗಳಿಗೆ ನೀಡಿದ್ದಾರೆ. ‘ಮಿಷನ್ 272+ ಅನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಬಿಜೆಪಿಗೆ ನಾವು ನೆರವಾಗಿದ್ದೇವೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ದತ್ತಾಂಶಗಳನ್ನು ಒದಗಿಸಿದ್ದೇವೆ’ ಎಂಬ ವಿವರ ಆ
ಸ್ಕ್ರೀನ್‌ಶಾಟ್‌ನಲ್ಲಿದೆ.

ಸಿಇಒ ಅಮಾನತು: ಡೊನಾಲ್ಡ್‌ ಟ್ರಂಪ್‌ಗೆ ನೆರವಾಗಲು ಮಾಹಿತಿ ಕದ್ದ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಬ್ರಿಟನ್‌ನ ಕೇಂಬ್ರಿಜ್ ಅನಲಿಟಿಕಾ ತನ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಲೆಕ್ಸಾಂಡರ್‌ ನಿಕ್ಸ್‌ರನ್ನು ಅಮಾನತು ಮಾಡಿದೆ.

ಫೇಸ್‌ಬುಕ್ ಅಸಮಾಧಾನ: ‘ಜನರನ್ನು ನಾವು ವಂಚಿಸಿದ್ದೇವೆ ಎಂಬ ಸುದ್ದಿ ಕೇಳಿ ನಮಗೆ ತೀವ್ರ ಬೇಸರವಾಗಿದೆ. ಇದಕ್ಕೆಲ್ಲಾ ಕೇಂಬ್ರಿಜ್ ಅನಲಿಟಿಕಾ ಕಾರಣ. ಜನರ
ಮಾಹಿತಿಯ ಭದ್ರತೆಗೆ ನಾವು ಈಗಲೂ ಬದ್ಧರಾಗಿಯೇ ಇದ್ದೇವೆ. ಆದರೆ ಈ ವಂಚನೆಯಲ್ಲಿ, ಅಗತ್ಯಬಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ‘ಫೇಸ್‌ಬುಕ್’ ಹೇಳಿಕೆ ಬಿಡುಗಡೆ ಮಾಡಿದೆ. ಪ್ರಕರಣದ ವಿರುದ್ಧ ಅಮೆರಿಕದ ಫೆಡರರ್ ಟ್ರೇಡ್ ಕಮಿಷನ್ ತನಿಖೆ ಆರಂಭಿಸಿದೆ.

ಮಾಹಿತಿಗೆ ಕನ್ನ ಹಾಕಿದ್ದು ಹೇಗೆ?

ವಾಷಿಂಗ್ಟನ್ (ಎಎಫ್‌‍ಪಿ): ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಕೇಂಬ್ರಿಜ್‌ ಅನಲಿಟಿಕಾದಿಂದ ಗುತ್ತಿಗೆ ಪಡೆದಿದ್ದ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಆನ್‌ಲೈನ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿದ್ದರು. ಅದಕ್ಕಾಗಿ ಅವರು ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದ್ದರು.

ಫೇಸ್‌ಬುಕ್ ಬಳಕೆದಾರರು ಈ ಅಪ್ಲಿಕೇಷನ್‌ನಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಈ ಅಪ್ಲಿಕೇಷನ್‌ ಅನ್ನು ಬಳಸುತ್ತಿದ್ದಂತೆ ಅವರ ಖಾತೆಯ ಸಂಪೂರ್ಣ ವಿವರ ಆ ಅಪ್ಲಿಕೇಷನ್‌ನಲ್ಲಿ ಸಂಗ್ರಹವಾಗುತ್ತಿತ್ತು. ಅದರ ಜತೆಯಲ್ಲೇ ಆ ಬಳಕೆದಾರರ ಸ್ನೇಹಿತರ ಪಟ್ಟಿಯಲ್ಲಿರುವ ಎಲ್ಲರ ವೈಯಕ್ತಿಕ ವಿವರವೂ ಸಂಗ್ರಹವಾಗುತ್ತಿತ್ತು.

ರಾಜಕೀಯವಾಗಿ ಪ್ರಾಮುಖ್ಯ ಪಡೆಯುವ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಈ ಅಪ್ಲಿಕೇಷನ್‌ಲ್ಲಿ ಕೇಳಲಾಗುತ್ತಿತ್ತು. ಬಳಕೆದಾರರು ನೀಡಿದ ಉತ್ತರವು, ಈ ವಿಷಯಗಳಲ್ಲಿ ಅವರ ಒಲವು–ನಿಲುವು ಏನು ಎಂಬುದನ್ನು ತೋರಿಸುತ್ತಿದ್ದವು. ಜತೆಗೆ ಫೇಸ್‌ಬುಕ್‌ನಲ್ಲಿ ಅವರು ಯಾವ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ, ಎಂತಹ ಪೋಸ್ಟ್‌ಗಳಿಗೆ ಲೈಕ್ ಒತ್ತುತ್ತಾರೆ ಎಂಬುದರ ಮೇಲೂ ಈ ಅ‍ಪ್ಲಿಕೇಷನ್ ನಿಗಾ ಇರಿಸುತ್ತಿತ್ತು.

ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ಫೇಸ್‌ಬುಕ್‌ನ ಬಳಕೆದಾರರರಿಗೆ ಸಂಬಂಧಿಸಿದಂತೆ 4,000 ಅಂಶಗಳನ್ನು ಕಲೆಹಾಕಲಾಗುತ್ತಿತ್ತು. ಅವನ್ನು ವಿಶ್ಲೇಷಿಸಿ ಅವರ ಒಲವು ಏನೆಂಬುದನ್ನು ನಿರ್ಧರಿಸಲಾಗುತ್ತಿತ್ತು. ನಂತರ ಮತದಾರರ ಒಲವಿಗೆ ಪೂರಕವಾಗುವಂತೆ ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹರಿಬಿಡುತ್ತಿದ್ದರು.

ತ್ಯಾಗಿ ಮಗನ ಕಂಪನಿ

‘ಜೆಡಿಯು ನಾಯಕ ಕೆ.ಸಿ.ತ್ಯಾಗಿ ಅವರ ಮಗ ಅಮ್ರೀಶ್ ತ್ಯಾಗಿ ಅವರು ಒಬಿಐ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ. 2012ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದೆವು. 2010ರ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿಗೆ, 2011 ಮತ್ತು 2012ರಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿದ್ದೆವು ಎಂದು ಅಮ್ರೀಶ್ ತ್ಯಾಗಿ ಹೇಳಿದ್ದಾರೆ’ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದೆ.

‘ಅಲೆಕ್ಸಾಂಡರ್ ನಿಕ್ಸ್ ಮಾಡಿರುವಂತೆ ಚುನಾವಣೆಗಳಲ್ಲಿ ತಂತ್ರ ರೂಪಿಸಲು ಮತದಾರರ ಮಾಹಿತಿಗೆ ಕನ್ನ ಹಾಕುವ ಕೆಲಸವನ್ನು ನಾವು ಮಾಡಿಲ್ಲ. ಕೇಂಬ್ರಿಜ್‌ ಅನಲಿಟಿಕಾದ ಅಂಗಸಂಸ್ಥೆಯಾದ ಎಸ್‌ಸಿಎಲ್‌ ಜತೆ ನಾವು ಪಾಲುದಾರರಾದ ನಂತರ ಕೆಲವು ತಂತ್ರಜ್ಞಾನಗಳಷ್ಟೇ ನಮಗೆ ದೊರೆತವು. ಮತದಾರರಿಂದ ಸಂಗ್ರಹಿಸಲಾದ ದತ್ತಾಂಶಗಳ ವಿಶ್ಲೇಷಣೆಗೆ ಆ ತಂತ್ರಜ್ಞಾನಗಳು ಮತ್ತು ತಂತ್ರಾಂಶಗಳು ನೆರವಾಗುತ್ತಿದ್ದವು ಎಂದು ಅಮ್ರೀಶ್ ತ್ಯಾಗಿ ಹೇಳಿದ್ದಾರೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಒಬಿಐ ಪ್ರೈವೇಟ್‌ ಲಮಿಟೆಡ್‌ನ ಜಾಲತಾಣ, ಫೇಸ್‌ಬುಕ್ ಖಾತೆ ಮತ್ತು ಲಿಂಕ್ಡ್‌ಇನ್‌ ಖಾತೆಗಳು ಈ ವರದಿಗಳು ಪ್ರಕಟವಾದ ಬಳಿಕ ಸ್ಥಗಿತವಾಗಿವೆ.

ವಿವಾದದ ಸುತ್ತ...

* ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕಂಪನಿಯು ಸಂಗ್ರಹಿಸುತ್ತದೆ

* ಜನರ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವ ಯತ್ನ, ಜನರನ್ನು ಬಲೆಗೆ ಬೀಳಿಸುವ ತಂತ್ರಗಳು ಮತ್ತು ಸುಳ್ಳು ಸುದ್ದಿ ಅಭಿಯಾನಗಳನ್ನು ಕಂಪನಿ ನಡೆಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಮಾತನಾಡಿಕೊಂಡ ದೃಶ್ಯಗಳನ್ನು ಚಾನೆಲ್‌ 4 ವಾಹಿನಿ ಬಿತ್ತರಿಸಿದೆ

* ಡೊನಾಲ್ಡ್‌ ಟ್ರಂಪ್‌ ಅವರ ಡಿಜಿಟಲ್‌ ಅಭಿಯಾನದ ಚುಕ್ಕಾಣಿ ತಮ್ಮದೇ ಆಗಿತ್ತು ಎಂದು ಕಂಪನಿಯ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌ ಹೇಳಿದ್ದಾಗಿ ವರದಿಯಾಗಿದೆ

* ಫೇಸ್‌ಬುಕ್‌ನ ಕೋಟ್ಯಂತರ ಖಾತೆಗಳ ಮಾಹಿತಿ ಕೇಂಬ್ರಿಜ್‌ ಅನಲಿಟಿಕಾದಲ್ಲಿ ಇದೆ: ಚಾನೆಲ್‌ 4 ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT