ಶುಕ್ರವಾರ, ಏಪ್ರಿಲ್ 3, 2020
19 °C

ಪೌರತ್ವ ವಿವಾದವೂ ರಾಜಕೀಯದಾಟವೂ

ಶೇಖರ್ ಗುಪ್ತ Updated:

ಅಕ್ಷರ ಗಾತ್ರ : | |

ರುವಾಂಡ ಬಗ್ಗೆ ಕಥೆ ಹೇಳಿ ಎಂದು ನನ್ನನ್ನು ಕೇಳಬೇಡಿ. ನಾನು ಹೇಳುವುದಕ್ಕಿಂತ ಹೆಚ್ಚು ಕಥೆಗಳನ್ನು ವಿಕಿಪೀಡಿಯಾವೇ ನಿಮಗೆ ಹೇಳುತ್ತದೆ. 35 ವರ್ಷಗಳ ಹಿಂದೆ ನಡೆದ ನೆಲ್ಲಿ ಮಹಾ ನರಮೇಧದ ಕಥೆಗಳನ್ನೂ ನಾನು ಹೇಳುವ ಅಗತ್ಯವಿಲ್ಲ. ಅದು ಈಗಾಗಲೇ ನಮ್ಮ ರಾಜಕಾರಣದ ನುಡಿಗಟ್ಟಿನಲ್ಲಿ ಹಾಸುಹೊಕ್ಕಾಗಿಬಿಟ್ಟಿದೆ. ಆದರೆ, ಇದೀಗ ಅಷ್ಟಾಗಿ ಗಮನಸೆಳೆಯದ, ಒಂದು ರೀತಿ ಅಜ್ಞಾತ ಎಂಬಂತಿರುವ ಸ್ಥಳಗಳಾದ ಖೋಯ್‍ರಬರಿ, ಗೋಹ್‍ಪುರ್ ಮತ್ತು ಸಿಪಾಜ್ಹರ್‍ಗಳ ಕುರಿತು ಹೇಳುತ್ತೇನೆ. ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‍ಆರ್‍ಸಿ) ಅಸ್ಸಾಂನಲ್ಲಿ ವಿವಾದದ ಕಾವೇರಿಸುತ್ತಿರುವ ಈ ಸಂದರ್ಭದಲ್ಲಿ, ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ಈ ಸ್ಥಳಗಳನ್ನು ನೆನಪಿಸಿಕೊಳ್ಳಲೇಬೇಕು.

ಬ್ರಹ್ಮಪುತ್ರ ಕಣಿವೆಯಲ್ಲಿ 1983ರಲ್ಲಿ ನಡೆದ ಕಗ್ಗೊಲೆಗಳಲ್ಲಿ ಸುಮಾರು 7 ಸಾವಿರ ಜನ ಪ್ರಾಣತೆತ್ತರು. ಆ ವರ್ಷದ ಫೆಬ್ರುವರಿ 18ರ ಬೆಳಿಗ್ಗೆ ಕೆಲವೇ ಗಂಟೆಗಳೊಳಗೆ ನೆಲ್ಲಿಯಲ್ಲಿ 3,000ಕ್ಕೂ ಹೆಚ್ಚು ಜನರ ಮಾರಣಹೋಮ ನಡೆದುಹೋಯಿತು. ಉಳಿದಂತೆ, ಆ ಪ್ರದೇಶದ ಬಹುತೇಕ ಮುಸ್ಲಿಮರು ಎಲ್ಲೆಡೆ ಚದುರಿಹೋದರು. ಆದರೆ, ಮೇಲೆ ಹೆಸರಿಸಲಾದ ಮೂರು ಸ್ಥಳಗಳಲ್ಲಿ ಕೊಲೆಗೀಡಾದವರಲ್ಲಿ ಬಹುತೇಕರು ಹಿಂದೂಗಳು. ಇವರು ಕೊಲೆಗೀಡಾದದ್ದು ಹಿಂದೂಗಳಿಂದಲೇ.

ಹಿಂದೂಗಳ ಕೋಪಾವೇಶ ‘ವಿದೇಶಿ ಪ್ರಜೆಗಳ’ (ಮುಸ್ಲಿಮರ) ವಿರುದ್ಧ ಎನ್ನುವುದಾದರೆ, ಹಿಂದೂಗಳೇ ಹಿಂದೂಗಳ ನರಮೇಧ ಮಾಡಿದ್ದಾದರೂ ಏಕೆ?

ಈಶಾನ್ಯ ರಾಜ್ಯಗಳಲ್ಲಿನ ಬಹುತೇಕ ಸಂಗತಿಗಳಂತೆ ಇದು ಕೂಡ ಸಂಕೀರ್ಣ ಕಥನವೇ. ಇದರ ಹಿಂದಿನ ಪದರಗಳನ್ನು ಈಗ ಅನಾವರಣಗೊಳಿಸೋಣ. ದಾಳಿ ಎಸಗಿದವರು ಅಸ್ಸಾಮಿ ಭಾಷಿಕ ಹಿಂದೂಗಳಾದರೆ, ಹತ್ಯೆಗೀಡಾದವರು ಬಂಗಾಳಿ ಭಾಷಿಕರು. ಭಾಷಿಕ ಮತ್ತು ಜನಾಂಗೀಯ ದ್ವೇಷವು ಕೋಮು ರಕ್ತಪಾತದಷ್ಟೇ ಹಿಂಸಾತ್ಮಕವಾದುದು. ನೆಲ್ಲಿಯಲ್ಲಿ ಆದಂತೆ ಬಂಗಾಳಿ ಮುಸ್ಲಿಮರ ನೆಲೆಯಾಗಿದ್ದ ಪ್ರದೇಶದಲ್ಲಿ ಇವೆರಡೂ ಒಂದರೊಳಗೊಂದು ಸೇರಿಕೊಂಡುಬಿಟ್ಟರೆ, ಅಸ್ಸಾಮಿ ಹಿಂದೂಗಳು ಬಂಗಾಳಿ ಮುಸ್ಲಿಮರನ್ನು ಕೊಂದರು ಎಂಬ ಕಥೆ ಸೃಷ್ಟಿಯಾಗುತ್ತದೆ. ಪ್ರತಿಯೊಬ್ಬರೂ ಮತ್ಯಾರದೋ ವಿರುದ್ಧ ಕತ್ತಿ ಮಸೆಯುತ್ತಾರೆ. ಇದೀಗ ಬಿಜೆಪಿ ಮತ್ತು ಘನ ಸುಪ್ರೀಂ ಕೋರ್ಟ್ ಅದೇ ಪ್ರಾಣಘಾತುಕ ಕಷಾಯವನ್ನು ಕದಡಿವೆ.

ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಕರಡಿನಲ್ಲಿ 40 ಲಕ್ಷ ಜನ ತಮ್ಮ ಇರುವಿಕೆ ದೃಢಪಡಿಸಿಕೊಳ್ಳಲು ವಿಫಲರಾಗಿದ್ದಾರೆ. ಬಿಜೆಪಿಯು ಸರ್ಕಾರವಾಗಿ ಮಾತನಾಡುತ್ತಿದೆಯೋ ಅಥವಾ ಒಂದು ಪಕ್ಷವಾಗಿ ಮಾತನಾಡುತ್ತಿದೆಯೋ ಎಂಬುದನ್ನು ಆಧರಿಸಿ ಇವರುಗಳ ಬಗ್ಗೆ ಭಿನ್ನ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ‘ಇದು ಮಧ್ಯಂತರದ ಮೊದಲ ಕರಡು ಮಾತ್ರ’ ಎನ್ನುತ್ತಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಲೋಕಸಭೆಯಲ್ಲಿ ಮಾತನಾಡುತ್ತಾ ಇವರು ‘ನುಸುಳುಕೋರರು’ ಎನ್ನುತ್ತಾರೆ. ಒಂದೊಮ್ಮೆ ನಿಮ್ಮ ಹೆಸರು ‘ನುಸುಳುಕೋರರ ಪಟ್ಟಿ’ಯಲ್ಲಿ ಸೇರ್ಪಡೆಯಾಯಿತೆಂದರೆ ನಿಮಗೆ ಏನನ್ನಿಸುತ್ತದೆ? ‘ನೀವು ಬೇಟೆಯ ಗುರಿಯಾಗಿದ್ದೀರಿ’ ಎಂದೇ ಅರ್ಥೈಸಿಕೊಳ್ಳುತ್ತೀರಿ.

ಮತ್ತೊಂದೆಡೆ, ಅಸ್ಸಾಂನ ಹಣಕಾಸು ಸಚಿವರಾದ (ವಾಸ್ತವವಾಗಿ ಇವರೇ ಮುಖ್ಯಮಂತ್ರಿ) ಹಿಮಂತ ಬಿಸ್ವ ಶರ್ಮಾ ಅವರು ಈ 40 ಲಕ್ಷದ ಮೂರನೇ ಒಂದು ಭಾಗದಷ್ಟು ಮಂದಿ ಹಿಂದೂಗಳು ಎಂದಿದ್ದಾರೆ. ಇದಕ್ಕೆ ಪೂರಕವಾಗಿ, ಹೊಸ ಪೌರತ್ವ ಕಾಯ್ದೆಯಲ್ಲಿ ನೆರೆ ರಾಷ್ಟ್ರಗಳ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತದ ಪೌರತ್ವ ನೀಡುವ ವಿಧಿಯನ್ನು ಸೇರಿಸುವುದು ಬಿಜೆಪಿಯ ಪರಿಹಾರೋಪಾಯವಾಗಿದೆ. ಒಂದೊಮ್ಮೆ ಈ ಕಾಯ್ದೆ ಅನುಮೋದನೆಗೊಂಡರೂ ಇದಕ್ಕೆ ಮೂಲ ಅಸ್ಸಾಮೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ. ಮುಸ್ಲಿಮರೇ ಆಗಲಿ ಅಥವಾ ಹಿಂದೂಗಳೇ ಆಗಿರಲಿ ಬಂಗಾಳಿಗರೊಂದಿಗೆ ಜಾಗ ಹಂಚಿಕೊಳ್ಳುವುದು ಅವರಿಗೆ ಬೇಕಾಗಿಲ್ಲ. 1983ರಲ್ಲಿ ಈ ಎರಡೂ ಸಮುದಾಯಗಳಿಗೆ ಸೇರಿದವರನ್ನು ಅವರು ಕೊಂದಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ. ಮಾಜಿ ಮುಖ್ಯಮಂತ್ರಿ ಮತ್ತು ಇದೀಗ ಬಿಜೆಪಿಯ ಕಿರಿಯ ಮಿತ್ರ ಪಕ್ಷವಾದ ಅಸ್ಸಾಂ ಗಣ ಪರಿಷತ್‍ನ ಮುಖ್ಯಸ್ಥರಾದ ಪ್ರಫುಲ್ಲ ಕುಮಾರ್ ಮಹಂತ ಈ ಕುರಿತು ಈಗಾಗಲೇ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.

ಈ 40 ಲಕ್ಷ ಜನರ ಪೈಕಿ ಅಂತಿಮ ಪಟ್ಟಿಯಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನರನ್ನು ಕೈಬಿಡಲು ಸಾಧ್ಯವಾಗದು ಎಂಬುದು ಈಗಿನ ಅಂದಾಜು. ಈಗಿನ ಪ್ರಕ್ರಿಯೆಯು ಸಮರ್ಥನೀಯವಲ್ಲದ ಲೋಪದೋಷಗಳಿಂದ ತುಂಬಿದೆ. ಗ್ರಾಮ ಪಂಚಾಯಿತಿಗಳು ನೀಡುವ ಪ್ರಮಾಣಪತ್ರಗಳನ್ನು ಪೌರತ್ವದ ಸಾಕ್ಷ್ಯವಾಗಿ ಪರಿಗಣಿಸಬಾರದು ಎಂಬ ‘ಸ್ಥಳೀಯರ’ ಬೇಡಿಕೆಗೆ ಗುವಾಹಟಿ ಹೈಕೋರ್ಟ್ ಈಗಾಗಲೇ ಮನ್ನಣೆ ನೀಡಿದೆ. ಬಡವರಲ್ಲಿ ಬಡವರಾದ ಈ ನಿರ್ಗತಿಕರು ಆಧಾರ್ ಗುರುತು ಚೀಟಿಗಿಂತ ಮುಂಚಿನ ಅವಧಿಗೆ ಸೇರಿದ ಯಾವ ಸಾಕ್ಷ್ಯವನ್ನು ತಾನೇ ಈಗ ನೀಡಲು ಸಾಧ್ಯ? ಆದರೆ ರಾಜ್ಯ ಸರ್ಕಾರವು ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಯಾವ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ.

ಒಂದೊಮ್ಮೆ ಹೀಗೆ ಮಾಡಿದ್ದಿದ್ದರೆ ಎಲ್ಲ ಪ್ರಹಸನಗಳಿಗೂ ತೆರೆಬೀಳುತ್ತಿತ್ತು. ಈ ಸಂಬಂಧ ಬೇರೆ ಯಾರೋ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅದು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಲಿಲ್ಲ. ಆದರೆ, ಪಂಚಾಯಿತಿ ಪ್ರಮಾಣಪತ್ರವು ಯಾವ್ಯಾವ ಸಂದರ್ಭಗಳಲ್ಲಿ ಪರಿಗಣನಾರ್ಹ ಎಂಬುದರ ಬಗ್ಗೆ ವಿಧಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಪುನಃ ಹೈಕೋರ್ಟ್‍ಗೆ ವರ್ಗಾಯಿಸಿತು. ಈ ಗೊಂದಲದ ಸಂದರ್ಭದಲ್ಲೇ ಸುಪ್ರೀಂ ಕೋರ್ಟ್, ರಾಷ್ಟ್ರೀಯ ಪೌರತ್ವ ನೋಂದಣಿ ಸಿದ್ಧತೆಯ ತ್ವರಿತ ನಿರ್ಣಯ ಕೈಗೊಂಡಿತು. ಈ ಪ್ರಮಾಣಪತ್ರಗಳ ಬಗ್ಗೆ ವೈಚಾರಿಕ ನೆಲೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇ ಆದರೆ ಬಹುಶಃ ‘ವಲಸಿಗರು’ ಎಂದು ಯಾರೂ ಉಳಿಯುವುದೇ ಇಲ್ಲ. ಆದರೆ ಬಿಜೆಪಿಗೆ ಹೀಗಾಗುವುದು ಬೇಕಾಗಿಲ್ಲ.

ರಾಜೀವ್- ಎಎಎಸ್‍ಯು/ ಎಎಜಿಎಸ್‍ಪಿ ಶಾಂತಿ ಒಪ್ಪಂದದ ಆಶಯಗಳಿಗೆ ಅನುಗುಣವಾಗಿ ನ್ಯಾಯಾಲಯ ಕ್ರಮ ಕೈಗೊಂಡಿತ್ತು. ಪೌರತ್ವ ನಿರ್ಣಯಿಸಲು 1971ರ ಮಾರ್ಚ್ 25ನ್ನು ‘ಗಡುವು ದಿನಾಂಕ’ವೆಂದು ಪರಿಗಣಿಸಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ನಡೆಸುವ ಭರವಸೆಯನ್ನು ಅದು ನೀಡಿತ್ತು. ಅಂದರೆ, ಈ ದಿನಾಂಕಕ್ಕಿಂತ ಮುಂಚೆ ಭಾರತಕ್ಕೆ ಬಂದವರು ಅರ್ಹ ನಾಗರಿಕರು ಎಂದು ಪರಿಗಣಿತವಾಗುತ್ತಾರೆ. ಇಂದಿರಾ- ಮುಜೀಬ್ ಒಪ್ಪಂದವನ್ನು ಇದು ಆಧರಿಸಿತ್ತು. ಆ ಪ್ರಕಾರ, ಬಾಂಗ್ಲಾ ದೇಶವು ಭಾರತದಿಂದ ಕೋಟಿ ಅಥವಾ ಅದಕ್ಕಿಂತ ಹೆಚ್ಚು ವಲಸಿಗರನ್ನು ಮರಳಿ ಕರೆಸಿಕೊಳ್ಳುವುದಾಗಿ ಒಪ್ಪಿಕೊಂಡಿತ್ತು. ಇವರಲ್ಲಿ ಶೇ 80ರಷ್ಟು ಮಂದಿ ಹಿಂದೂಗಳು. ಮುಸ್ಲಿಮರೇ ಆಗಿರಲಿ, ಹಿಂದೂಗಳೇ ಆಗಿರಲಿ ಈ ಎಲ್ಲ ವಲಸಿಗರೂ ವಾಪಸ್ಸಾಗಬೇಕು ಎಂಬುದು ಇಂದಿರಾ ಗಾಂಧಿ ಅವರ ಇರಾದೆಯಾಗಿತ್ತು.

ರಾಜೀವ್ ಗಾಂಧಿ ಅವರು ಅಸ್ಸಾಂ ಪ್ರತಿಭಟನಾಕಾರರೊಂದಿಗೆ ಈ ಮೇಲಿನ ವಿಧಿಯಂತೆ ರಾಷ್ಟ್ರೀಯ ಪೌರತ್ವ ನೋಂದಣಿಯ ಭರವಸೆ ನೀಡಿ, 33 ವರ್ಷಗಳ ಹಿಂದೆ 1985ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ಈವರೆಗೆ ಎನ್‍ಆರ್‍ಸಿ ಪ್ರಕ್ರಿಯೆಯನ್ನು ನಡೆಸಲಾಗಲೇ ಇಲ್ಲ. ಅಲ್ಲಿಂದೀಚೆಗೆ ಅದಾಗಲೇ ಎರಡು ಪೀಳಿಗೆಗಳು ಮುಖ್ಯಧಾರೆಗೆ ಸೇರಿಕೊಂಡಿವೆ. ಈ ಪೀಳಿಗೆಯವರನ್ನು ಈಗ ಎತ್ತಂಗಡಿ ಮಾಡಲಾಗುತ್ತದೆಯೇ? ‘ಇದು ಸಾಧ್ಯವಿಲ್ಲ’ ಎಂಬುದು ಬಿಜೆಪಿಗೂ ಗೊತ್ತಿದೆ.

‘ಈ ವಿಷಯದಲ್ಲಿ ಯಾವುದೇ ರಾಜಕೀಯವಿಲ್ಲ’ ಎಂದು ಬಿಜೆಪಿಯ ಯಾರಾದರೂ ಹೇಳಿದರೆ, ಈ ಸಂಬಂಧದ ಅಮಿತ್ ಶಾ ಅವರ ಭಾಷಣವನ್ನು ಕೇಳಿಲ್ಲವೇ ಎಂದು ಕೇಳಿ ನೋಡಿ. 2019ರ ಲೋಕಸಭಾ ಚುನಾವಣೆಗೆ ಭೂಮಿಕೆ ಸಿದ್ಧಪಡಿಸಿಕೊಳ್ಳುತ್ತಿರುವುದಕ್ಕೆ ಸಂಬಂಧಪಟ್ಟಂತೆ ಅವರು ಪ್ರದರ್ಶಿಸಿರುವ ಪಾರದರ್ಶಕತೆಗೆ ಪೂರ್ತಿ ಅಂಕಗಳೇ ಸಲ್ಲಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿಯ ಎರಡನೇ ಅವಧಿಯ ಪ್ರಚಾರಾಂದೋಲನಕ್ಕೆ ‘ವಿಕಾಸ’ ಎಂಬ ಘೋಷವಾಕ್ಯವು ‘ರಾಷ್ಟ್ರೀಯತೆ’ಯ ಪರಿಕಲ್ಪನೆ ಆಧರಿಸಿದ ಧ್ರುವೀಕರಣದಷ್ಟು ಆಪ್ತವಾದುದಲ್ಲ. ಹೀಗಾಗಿ, ಲೋಕಸಭಾ ಚುನಾವಣೆಯ ತನಕವೂ ಈ ವಿವಾದ ಜೀವಂತವಾಗಿಯೇ ಇರಲಿದೆ. ಅಲ್ಲಿಯವರೆಗೂ ಬಿಜೆಪಿಯು ಈ ಲಕ್ಷಾಂತರ ಜನರನ್ನು ‘ನುಸುಳುಕೋರರು’ ಎಂದೇ ಉಚ್ಚರಿಸಲಿದೆ; ಅಂದರೆ ಪರೋಕ್ಷವಾಗಿ, ರಾಷ್ಟ್ರದಲ್ಲಿರುವ ಎಲ್ಲಾ ಬಂಗಾಳಿ ಭಾಷಿಕ ಮುಸ್ಲಿಮರೆಡೆಗೆ ದ್ವೇಷ ಭಾವನೆಯನ್ನು ಅದು ವಿಸ್ತರಿಸಲಿದೆ.

ಇದರಿಂದ ಅಂತಿಮವಾಗಿ, ಎಡಪಂಥೀಯ ಬುದ್ಧಿಜೀವಿಗಳು ಪ್ರತಿಪಾದಿಸುತ್ತಿರುವ ‘ಜಾತ್ಯತೀತ’ ಎದುರಾಳಿಗೆ ನುಸುಳುಕೋರರನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯ ಎದುರಾಗಲಿದೆ. ಹಾಗೆಂದರೆ, ಅವರು ಮುಸ್ಲಿಮ್ ಪರ ಮತ್ತು ರಾಷ್ಟ್ರ ವಿರೋಧಿಗಳು ಎಂಬ ಭಾವನೆ ಮೂಡಿಸಲು ಆಸ್ಪದವಾಗುತ್ತದೆ. ಇದೊಂದು ಯೋಜಿತ ಬಲೆ ಎಂಬುದು ಕಾಂಗ್ರೆಸ್‍ಗೆ ಗೊತ್ತಿದೆ. ಆದರೆ ಅದರ ಬಳಿ ಇದಕ್ಕೆ ಪರಿಹಾರವಿಲ್ಲ. ಒಂದೊಮ್ಮೆ 2019ರ ಚುನಾವಣೆಯು ಮುಸ್ಲಿಮರ ಪರ ಅಥವಾ ವಿರೋಧದ ಮತ ಚಲಾವಣೆ ಆಗಿದ್ದೇ ಆದರೆ ಬಿಜೆಪಿಯ ಮತ ಜೋಳಿಗೆ ಭದ್ರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಹೀಗಾಗಿ ಅಮಿತ್ ಶಾ ಅವರಿಗೆ ಅಸ್ಸಾಂ ರಾಜ್ಯವು ಇಡೀ ರಾಷ್ಟ್ರದಾದ್ಯಂತ ‘ರಾಷ್ಟ್ರೀಯತೆ’ಯ ಭಾವನೆಯನ್ನು ಕೆರಳಿಸಲು ಅನುಕೂಲಕರವಾಗಿರುವ ಒಂದು ಪ್ರಮುಖ ವಿಷಯವಾಗಿದೆ. ಶಾ ಮತ್ತು ಬಿಜೆಪಿಗೆ ಚುನಾವಣಾ ರಾಜಕಾರಣ ಏನೆಂಬುದು ಎಲ್ಲರಿಗಿಂತ ಚೆನ್ನಾಗಿಯೇ ಗೊತ್ತು. ಆದರೆ ಅವರಿಗೆ ಅಸ್ಸಾಂ ಬಗ್ಗೆ ಗೊತ್ತಿದೆಯೇ?

ಈ ಬಗ್ಗೆ ಹೇಳಬೇಕೆಂದರೆ, 35 ವರ್ಷಗಳ ಹಿಂದೆ ನಾನು ಇದ್ದ ಗುವಾಹಟಿಯ ನಂದನ್ ಹೋಟೆಲ್‍ನ ಸಣ್ಣ ಕೊಠಡಿಯಲ್ಲಿ ನಡೆದಿದ್ದ ಘಟನೆಯನ್ನು ಪ್ರಸ್ತಾಪಿಸಬೇಕು. ನನ್ನನ್ನು ಭೇಟಿ ಮಾಡಲು ಬಂದಿದ್ದ ನಾಲ್ವರು ವಿನಮ್ರ ಸಂದರ್ಶಕರು ಅಧಿಕಾರದ ಪ್ರಭಾವಳಿ ಹೊಂದಿದ್ದರು. ಆಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್) ‘ಬೌದ್ಧಿಕ್ ಪ್ರಮುಖ್’ ಆಗಿದ್ದ ಕೆ.ಎಸ್.ಸುದರ್ಶನ್ ಅವರಲ್ಲಿ ಒಬ್ಬರು. ಆನಂತರ ಅವರು ಸರಸಂಘಚಾಲಕರಾದರು.

ಉಳಿದ ಕೆಲವರು, ಅಂದರೆ, ಆರ್‍ಎಸ್‍ಎಸ್‍ನ ಈಶಾನ್ಯ ‘ಪರಿಣತರು’ ಸಂಘ ಮತ್ತು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಆಯಕಟ್ಟಿನ ಜಾಗದಲ್ಲಿದ್ದಾರೆ. ಆ ತಿಂಗಳ ಆರಂಭದಲ್ಲಿ ನಡೆದಿದ್ದ ಅಸ್ಸಾಂ ಗಲಭೆಗಳಲ್ಲಿ ಅದು ಹೇಗೆ ಅಷ್ಟೊಂದು ಸಂಖ್ಯೆಯಲ್ಲಿ ಬಂಗಾಳಿ ಹಿಂದೂಗಳು ಹತ್ಯೆಗೀಡಾದರು ಎಂಬುದರ ಕಾರಣ ಶೋಧಿಸುವಂತೆ ಅವರು ನನ್ನನ್ನು ಕೋರಿದ್ದರು. ‘ಮುಸ್ಲಿಂ ನುಸುಳುಕೋರರು ಮತ್ತು ಹಿಂದೂ ವಲಸಿಗರ ನಡುವಿನ ಸರಳ ವ್ಯತ್ಯಾಸವನ್ನು ಅರಿಯಲು ಈ ಅಸ್ಸಾಮೀಯರಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅದು ಹೇಗೆ ಖೋಯ್‍ರಬರಿಯಲ್ಲಿ ಅವರು ಅಷ್ಟೊಂದು ಹಿಂದೂಗಳನ್ನು ಹತ್ಯೆಗೀಡು ಮಾಡಲು ಸಾಧ್ಯ’ ಎಂದು ಸುದರ್ಶನ್ ಕೇಳಿದ್ದರು. ಅಸ್ಸಾಂನಲ್ಲಿ ನರಮೇಧಗಳಿಗೆ ಕಾರಣವಾದ ಜನಾಂಗೀಯ ಮತ್ತು ಭಾಷಾ ಸಂಕೀರ್ಣತೆಗಳನ್ನು ನಾನು ವಿವರಿಸಿದ್ದೆ. ‘ಆದರೆ, ಹಿಂದೂವಿಗೆ ಇಲ್ಲಿ ಯಾವ ರಕ್ಷಣೆಯೂ ಇಲ್ಲ’ ಎಂದು ಸುದರ್ಶನ್ ಪ್ರತಿಕ್ರಿಯಿಸಿದ್ದರು.

ಈ ಸಂಭಾಷಣೆಯನ್ನು 1984ರಲ್ಲಿ ನಾನು ಬರೆದ ‘ಅಸ್ಸಾಂ: ಎ ವ್ಯಾಲಿ ಡಿವೈಡೆಡ್’ (ಪುಟ 121-22) ಪುಸ್ತಕದಲ್ಲಿ ದಾಖಲಿಸಿದ್ದೇನೆ. ಆಗ ಅಸ್ಸಾಂ ಪ್ರತಿಭಟನಾಕಾರರನ್ನು ಪುನರ್ ಶೈಕ್ಷಣಿಕಗೊಳಿಸುವ ಸಲುವಾಗಿ, ಸಾವಧಾನಚಿತ್ತದ ಆಂದೋಲನಕ್ಕೆ ಆರ್‍ಎಸ್‍ಎಸ್ ಚಾಲನೆ ನೀಡಿತ್ತು. ನಾನು ನನ್ನ ‘ರೈಟಿಂಗ್ಸ್ ಆನ್ ದಿ ವಾಲ್’ನಲ್ಲಿ ಬರೆದಿರುವಂತೆ, ಕಳೆದ ವಿಧಾನಸಭಾ ಚುನಾವಣೆಯು ಆ ಪಕ್ಷದ ಪಾಲಿಗೆ ಯಶಸ್ಸಿನ ಪಾರಿತೋಷಕವಾಗಿದೆ. ಅಸ್ಸಾಂ ಬಿಜೆಪಿಯು ಇದೀಗ ಮುಖ್ಯಮಂತ್ರಿ ಹಾಗೂ ಅವರ ಅಧಿಕ ‘ಪ್ರಭಾವಿ ಸಹೋದ್ಯೋಗಿ’ ಸೇರಿದಂತೆ ಬಹುತೇಕ ಮಾಜಿ ಎಎಎಸ್‍ಯು ಮತ್ತು ಎಜಿಪಿ ಪರಿವರ್ತಿತರಿಂದಲೇ ತುಂಬಿದೆ.

ಆದರೆ ಅವರು ತಮ್ಮ ತಾರುಣ್ಯದಲ್ಲಿ, ಅಂದರೆ 1983ರಲ್ಲಿ ಮಾಡಿದ್ದಂತೆ ‘ಬಂಗಾಳಿ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಿ; ಹಿಂದೂಗಳನ್ನು ಅಪ್ಪಿಕೊಳ್ಳಿ’ ಎಂಬ ಆರ್‍ಎಸ್‍ಎಸ್– ಬಿಜೆಪಿ ವ್ಯಾಖ್ಯಾನದ ಅನುಸಾರ ‘ರಾಷ್ಟ್ರೀಯ ಪೌರತ್ವ ನೋಂದಣಿ’ ಪ್ರಕ್ರಿಯೆ ನಡೆಸಲು ಹೆಣಗಾಡಬೇಕಾಗುತ್ತದೆ. ಬಿಜೆಪಿಯು 2019ರ ಲೋಕಸಭಾ ಚುನಾವಣೆಗೆ ಅಸ್ಸಾಂ ಅನ್ನು ತನ್ನ ಕೀಲಿಕೈಯಾಗಿ ಬಳಸಲು ನಿರ್ಧರಿಸಿದೆ. ಶಾ-ಮೋದಿ ಜೋಡಿಯು ದೊಡ್ಡ ವಿಪತ್ತುಗಳಿಗೆ ಮುಖಾಮುಖಿಯಾಗಬಲ್ಲದು ಎಂಬುದನ್ನು ನೋಟು ಅಮಾನ್ಯೀಕರಣದ ವಿದ್ಯಮಾನ ಸ್ಪಷ್ಟಪಡಿಸಿದೆ. ಆದಾಗ್ಯೂ, ರಾಜಕೀಯ ಲಾಭಕ್ಕಾಗಿ ಆರ್ಥಿಕ ನಷ್ಟದ ಗಂಡಾಂತರಕ್ಕೆ ಎದುರಾಗುವುದೇ ಬೇರೆ, ಸಂಕೀರ್ಣ ಅಸ್ಸಾಂನಲ್ಲಿ ಹಳೆಯ ಕಲಹಗಳನ್ನು ಕಲಕುವುದೇ ಬೇರೆ. ಇವೆಲ್ಲದರ ನಡುವೆಯೂ ಅಲ್ಲಿನ ಪರಿಸ್ಥಿತಿ ಶಾಂತವಾಗಿಯೇ ಉಳಿಯಬಹುದು; ಆದರೆ, ಒಂದೊಮ್ಮೆ ಅದು ಸಾಧ್ಯವಾಗದಿದ್ದರೆ ಮತ್ತೊಮ್ಮೆ ಹಿಂದೂ ಮತ್ತು ಮುಸ್ಲಿಮರು, ಅಸ್ಸಾಮಿ ಮತ್ತು ಬಂಗಾಳಿಗರು, ಹಿಂದೂ ಅಥವಾ ಮುಸ್ಲಿಂ, ಹಿಂದೂ ಮತ್ತು ಹಿಂದೂ ಹಾಗೂ ಮುಸ್ಲಿಂ ಮತ್ತು ಮುಸ್ಲಿಮರ ನಡುವಿನ ಕಾಳಗದ ಕಣವಾಗಿಯೂ ಬಿಡಬಹುದು.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)