ಬುಧವಾರ, ಸೆಪ್ಟೆಂಬರ್ 23, 2020
22 °C

ತಾಟಕಿಯನು ಸಂಹರಿಸಿದ ರಾಮ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಪ್ರಾತಃಕಾಲದ ನಿತ್ಯಕರ್ಮಗಳನ್ನು ಮುಗಿಸಿದ ವಿಶ್ವಾಮಿತ್ರ–ರಾಮಲಕ್ಷ್ಮಣರು ಪ್ರಯಾಣವನ್ನು ಮುಂದುವರಿಸಿದರು. ಸರಯೂಸಂಗಮದಲ್ಲಿದ್ದ ಗಂಗಾನದಿಯ ತೀರದಲ್ಲಿ ಪ್ರಾಚೀನ ಆಶ್ರಮವೊಂದನ್ನು ಕಂಡರು. ಅದನ್ನು ಕಂಡು ರಾಮಲಕ್ಷ್ಮಣರಿಗೆ ಸಂತೋಷವಾಯಿತು. ‘ಮಹರ್ಷಿಗಳೇ, ಈ ಪುಣ್ಯಾಶ್ರಮವು ಯಾರದು?’ ಎಂದು ವಿಶ್ವಾಮಿತ್ರನನ್ನು ಕೇಳಿದರು. ಆಗ ವಿಶ್ವಾಮಿತ್ರನು ‘ರಾಮ, ಇದು ಈಶ್ವರನು ತಪಸ್ಸು ಮಾಡುತ್ತಿದ್ದ ಸ್ಥಳ. ಒಮ್ಮೆ ಪರಮೇಶ್ವರನು ತಪಸ್ಸಿನಲ್ಲಿ ನಿರತನಾಗಿದ್ದ. ಆಗ ಅವಿವೇಕಿಯಾದ ಕಾಮನು ಅವನಿಗೆ ಕಾಮವಿಕಾರವನ್ನು ಉಂಟುಮಾಡಲು ಅವನನ್ನು ಕೆಣಕಿದನು. ಪರಮೇಶ್ವರನು ಸಿಟ್ಟಿನಿಂದ ಹುಂಕಾರಮಾಡಿ ಕಾಮನನ್ನು ಕೆಂಗಣ್ಣಿನಿಂದ ನೋಡಿದ. ಅದುವರೆಗೂ ಕಾಮನು ಶರೀರಸಹಿತನಾಗಿದ್ದ. ಆದರೆ ಶಿವನ ಕೆಂಗಣ್ಣಿಗೆ ಗುರಿಯಾದ ಅವನು ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾದ. ಅಂಗಗಳನ್ನು ಕಳೆದುಕೊಂಡ ಕಾಮನು ಅಂದಿನಿಂದ ‘ಅನಂಗ’ ಎಂದು ಹೆಸರಾದ. ಹೀಗೆ ಸಾಕ್ಷಾತ್‌ ಈಶ್ವರನೇ ತಪಸ್ಸನ್ನಾಚರಿಸಿದ ಪುಣ್ಯಸ್ಥಳವಿದು. ಅಂದಿನಿಂದಲೂ ಹಲವರು ಋಷಿಮುನಿಗಳು ಇಲ್ಲಿ ತಪಸ್ಸಾನ್ನಾಚರಿಸುತ್ತ ಇಲ್ಲಿ ನೆಲಸಿದ್ದಾರೆ. ಅವರಿಗೆ ಪಾಪದ ಸೋಂಕೇ ಇಲ್ಲ. ಪುಣ್ಯನದಿಗಳ ಮಧ್ಯದಲ್ಲಿರುವ ಈ ಪವಿತ್ರವಾದ ಕಾಮಾಶ್ರಮದಲ್ಲಿಯೇ ಈ ರಾತ್ರಿ ಉಳಿಯೋಣ’ ಎಂದು ವಿಶ್ವಾಮಿತ್ರ ಸಮೀಪದಲ್ಲಿದ್ದ ಆಶ್ರಮವನ್ನು ಪ್ರವೇಶಿಸಿದ. ವಿಶ್ವಾಮಿತ್ರಮಹರ್ಷಿ ಬಂದಿರುವ ವಿಷಯವನ್ನು ತಿಳಿಯುತ್ತಿದ್ದಂತೆ ಅಲ್ಲಿಯ ಆಶ್ರಮವಾಸಿಗಳು ಅವರನ್ನು ಎದುರುಗೊಂಡರು. ಅರ್ಘ್ಯಪಾದ್ಯಗಳನ್ನು ಅರ್ಪಿಸಿದರು. ರಾಮಲಕ್ಷ್ಮಣರನ್ನೂ ಸತ್ಕರಿಸಿದರು.  

*  *  *

ಕಾಮನನ್ನು ಸುಟ್ಟ ಶಿವನು ಪ್ರಸಂಗ ತುಂಬ ಪ್ರಸಿದ್ಧವಾದ ಕಥೆ. ಕಾಳಿದಾಸನಂತೂ ಈ ಸಂದರ್ಭವನ್ನು ಅದ್ಭುತವಾಗಿ ಚಿತ್ರಿಸಿದ್ದಾನೆ. ಅದನ್ನು ಮುಂದೆ ನೋಡೋಣ.

*  *  *

ಮಾರನೆಯ ದಿನ. ರಾಮಲಕ್ಷ್ಮಣರೊಡನೆ ವಿಶ್ವಾಮಿತ್ರ ಗಂಗಾತೀರಕ್ಕೆ ಬಂದ. ಆಶ್ರಮದ ಋಷಿಗಳು ಅವರನ್ನು ಬೀಳ್ಕೊಡಲು ಬಂದರು. ವಿಶ್ವಾಮಿತ್ರ–ರಾಮಲಕ್ಷ್ಮಣರು ದೋಣಿಯನ್ನು ಏರಿ ನದಿಯನ್ನು ದಾಟಿದರು. ಮೂರು ಜನರೂ ಘೋರವಾದ ಅರಣ್ಯವೊಂದನ್ನು ಪ್ರವೇಶಿಸಿದರು. ‘ಅಬ್ಬಾ! ಈ ಅಡವಿಯಲ್ಲಿ ಹೆಜ್ಜೆಯನ್ನಿಡುವುದಕ್ಕೇ ಕಷ್ಟವಾಗುತ್ತಿದೆಯಲ್ಲ? ಜೀರುಂಡೆಗಳು ಝೀರೆಂದು ಕೂಗುತ್ತಿವೆ. ಭಯಂಕರವಾಗಿರುವ ಸಿಂಹ, ಹುಲಿ, ಕಾಡುಹಂದಿ, ಆನೆಗಳು ಕಾಣುತ್ತಿವೆ. ಪಕ್ಷಿಗಳ ಕರ್ಕಶವಾದ ಧ್ವನಿಗಳಿಂದ ಕಾಡು ತುಂಬಿಹೋಗಿದೆ. ಕಗ್ಗಲಿ, ಮತ್ತಿ, ಬಿಲ್ವ, ತಿಂದುಕ ಮೊದಲಾದ ಮರಗಳು ಎತ್ತರವಾಗಿ ಬೆಳೆದಿವೆ. ಮಹರ್ಷಿಗಳೇ, ಈ ಅರಣ್ಯ ಯಾವುದು?’ ಎಂದು ರಾಮನು ವಿಶ್ವಾಮಿತ್ರನನ್ನು ಪ್ರಶ್ನಿಸಿದ.

‘ಮಗು ರಾಮ, ಈ ಮೊದಲು ಈ ಸ್ಥಳದಲ್ಲಿ ‘ಮಲದ’, ‘ಕರೂಷ’ – ಎಂಬ ರಾಜ್ಯಗಳಿದ್ದವು. ಅವು ದೇವಲೋಕದಂತೆ ಸಮೃದ್ಧವಾಗಿದ್ದವು. ಇಂದ್ರನು ಆಗಷ್ಟೆ ವೃತ್ರನನ್ನು ಕೊಂದಿದ್ದ. ಇಂದ್ರನಿಗೆ ಬ್ರಹ್ಮಹತ್ಯೆಯ ದೋಷ ಅಂಟಿಕೊಂಡಿತು. ಈ ಕಾರಣದಿಂದಾಗಿ ಅವನು ಅಶುಚಿಯಾದ. ಹಸಿವು ಅವನನ್ನು ಕಾಡಲಾರಂಭಿಸಿತು. ಆಗ ದೇವತೆಗಳು ಅವನಿಗೆ ಅಭಿಷೇಕವನ್ನು ಮಾಡಿದರು; ಅವನ ಮಲವೂ ಕರೂಷವೂ ಮಾಯವಾಗಿ, ಶುದ್ಧನಾದ. ಇಂದ್ರನಿಗೆ ಸಂತೋಷವಾಯಿತು. ‘ನನ್ನ ಮಲವೂ ಕರೂಷವೂ ಇಲ್ಲಿ ತೊಲಗಿದ್ದರಿಂದ, ಈ ಪ್ರದೇಶವು ‘ಮಲದ’ ಮತ್ತು ‘ಕರೂಷ’ ಎಂದು ಎರಡು ರಾಜ್ಯಗಳಾಗಿ ಖ್ಯಾತವಾಗಲಿ ಎಂದು ವರವನ್ನು ನೀಡಿದ. ಹಲವು ಕಾಲ ಈ ಎರಡು ರಾಜ್ಯಗಳು ಸಂಪದ್ಭರಿತವಾಗಿ, ಜನರು ಸಂತೋಷದಿಂದ ಇದ್ದರು. ಆದರೆ ಅನಂತರದಲ್ಲಿ ಇಲ್ಲಿಗೊಬ್ಬಳು ಯಕ್ಷಿ ಸೇರಿಕೊಂಡು ರಾಜ್ಯವನ್ನು ಹಿಂಸಿಸಲು ತೊಡಗಿದಳು. ಅವಳೇ ತಾಟಕೆ. ಅವಳಿಗೆ ಹತ್ತು ಸಾವಿರ ಆನೆಗಳ ಬಲವಿದೆ. ಅವಳು ಸುಂದನ ಹೆಂಡತಿ. ಅವಳ ಮಗನೇ ಮಾರೀಚ. ಅವನು ತುಂಬ ಶಕ್ತಿಶಾಲಿ. ಅವನು ತನ್ನ ತಾಯಿಯೊಡನೆ ಸೇರಿಕೊಂಡು ಜನರಿಗೆ ಜನರನ್ನು ಹೆದರಿಸುತ್ತಬಂದಿದ್ದಾರೆ. ತಾಯಿ–ಮಕ್ಕಳು ಸೇರಿ ಎರಡು ರಾಜ್ಯಗಳನ್ನೂ ಹಾಳು ಮಾಡಿದ್ದಾರೆ. ನೀನು ಆ ತಾಟಕೆಯನ್ನು ಸಂಹರಿಸಬೇಕು’ ಎಂದು ವಿಶ್ವಾಮಿತ್ರನು ವಿಶದವಾಗಿ ತಾಟಕೆಯ ವೃತ್ತಾಂತವನ್ನು ಹೇಳಿದ.

ವಿಶ್ವಾಮಿತ್ರನ ಮಾತುಗಳನ್ನು ಕೇಳಿ ರಾಮನಿಗೆ ಪ್ರಶ್ನೆಯೊಂದು ಎದುರಾಯಿತು. ‘ಮುನಿಗಳೇ, ಯಕ್ಷರು ಅಲ್ಪಬಲರು ಎಂದು ಕೇಳಿದ್ದೇನೆ‌. ಹೀಗಿರುವಾಗ ಯಕ್ಷೆಯಾದ ಈ ತಾಟಕೆಗೆ ಹತ್ತು ಸಾವಿರ ಆನೆಗಳ ಬಲ ಹೇಗೆ ಬಂದಿತು’ ಎಂದು ಪ್ರಶ್ನಿಸಿದ. ಆಗ ವಿಶ್ವಾಮಿತ್ರನು ‘ಬಹಳ ಹಿಂದೆ ಸುಕೇತ ಎಂಬ ಯಕ್ಷನಿದ್ದ. ಅವನಿಗೆ ಮಕ್ಕಳಿರಲಿಲ್ಲ. ಅವನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಅದರಿಂದ ಸಂತೋಷಗೊಂಡ ಬ್ರಹ್ಮನು ಅವನಿಗೆ ತಾಟಕಾ ಎಂಬ ಹೆಣ್ಣುಮಗುವನ್ನು ಅನುಗ್ರಹಿಸಿದ. ಅವಳು ಬೆಳೆದು ಯೌವನಕ್ಕೆ ಬಂದಾಗ ಅವಳನ್ನು ಸುಂದ ಎಂಬುವನಿಗೆ ಮದುವೆಮಾಡಿಕೊಟ್ಟ. ಅವರಿಬ್ಬರ ಮಗನೇ ಮಾರೀಚ. ಅವನು ಶಾಪದ ಕಾರಣದಿಂದ ರಾಕ್ಷಸನಾದ. ಸುಂದನೂ ಅಗಸ್ತ್ಯರ ಶಾಪದಿಂದ ಸಾವನ್ನಪ್ಪಿದ. ಆಗ ತಾಟಕೆಯು ಅಗಸ್ತ್ಯರನ್ನು ನುಂಗಲು ಹೊರಟಳು. ಅವಳನ್ನೂ ರಾಕ್ಷಸಿಯಾಗುವಂತೆ ಅವರು ಶಪಿಸಿದರು. ಇದರಿಂದ ಕುಪಿತಳಾದ ಅವಳು ಆಗಿನಿಂದಲೂ ಈ ಪ್ರದೇಶವನ್ನು ನಾಶಮಾಡುತ್ತ ಬಂದಿದ್ದಾಳೆ. ರಾಮ, ಅವಳನ್ನು ಕೊಲ್ಲುವ ಶಕ್ತಿ ಈ ಮೂರು ಲೋಕದಲ್ಲಿ ನಿನಗೆ ಮಾತ್ರವೇ ಇರುವುದು. ಹೆಂಗಸನ್ನು ಕೊಲ್ಲುವುದು ಹೇಗೆಂದು ನೀನು ಯೋಚಿಸಬೇಡ. ಲೋಕದ ಹಿತಕ್ಕಾಗಿ ಕೆಲಸ ಮಾಡುವಾಗ ‘ಇದು ಕ್ರೂರವೇ, ಅಲ್ಲವೇ’ ಎಂದೆಲ್ಲ ಯೋಚಿಸಬೇಕಾಗಿಲ್ಲ. ರಾಜ್ಯವನ್ನು ಅಳುವವರಿಗೆ ಬಹುಜನರ ಹಿತವೇ ಮುಖ್ಯ. ಇದೇ ಸನಾತನಧರ್ಮ. ತಾಟಕೆಯು ಧರ್ಮಮಾರ್ಗವನ್ನು ತೊರೆದವಳು. ಅವಳನ್ನು ಸಂಹರಿಸುವುದು ನಿನ್ನ ಕರ್ತವ್ಯ. ಹಿಂದೆಯೇ ಹಲವರು ಹೀಗೆಯೇ ನಡೆದುಕೊಂಡು ಜನರ ಕಷ್ಟವನ್ನು ಪರಿಹರಿಸಿದ್ದಾರೆ’ ಎಂದ.

ಆಗ ರಾಮನು ಕೈಮುಗಿದುಕೊಂಡು ಹೀಗೆಂದ: ನಿಮ್ಮ ಮಾತಿನಂತೆ ನಡೆದುಕೊಳ್ಳುವಂತೆ ನನಗೆ ನಮ್ಮ ತಂದೆ ಆಜ್ಞೆ ಮಾಡಿದ್ದಾರೆ. ಅದರಂತೆ ನಡೆದುಕೊಂಡು ತಾಟಕೆಯನ್ನು ಸಂಹರಿಸುವೆ’ ಎಂದು ಹೇಳಿ ಅವನ ಬಿಲ್ಲಿನ ಹೆದೆಯನ್ನು ಮೀಟಿದ. ಅದರ ಝೇಂಕಾರ ಎಲ್ಲ ದಿಕ್ಕುಗಳಲ್ಲೂ ಪ್ರತಿಧ್ವನಿಸಿತು. ಅದು ತಾಟಕೆಗೂ ಮುಟ್ಟಿತು. ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂದು ತಿಳಿದು ಆ ಕಡೆಗೆ ಧಾವಿಸಿದಳು. ಅವಳು ನೋಡಲು ಭಯಂಕರವಾಗಿದ್ದಳು. ಸಾಮಾನ್ಯಜನರ ಎದೆ ಅವಳನ್ನು ನೋಡಿಯೇ ಒಡೆದುಹೋಗುವಷ್ಟು ಅವಳು ಭಯಂಕರವಾಗಿದ್ದಳು. 

‘ಇವಳ ಕಿವಿಮೂಗುಗಳನ್ನು ಕತ್ತರಿಸಿ ಇಲ್ಲಿಂದ ಅವಳು ದೂರಹೋಗುವಂತೆ ಮಾಡುವೆ’ ಎಂದು ರಾಮನು ಲಕ್ಷ್ಮಣನಿಗೆ ಹೇಳಿದ. ಲಕ್ಷ್ಮಣನೇ ಅವಳ ಕಿವಿಮೂಗುಗಳನ್ನು ಕತ್ತರಿಸಿದ. ಆದರೆ ಅದರಿಂದ ಅವಳಿಗೆ ಏನೂ ಆಗಲಿಲ್ಲ. ಅವಳು ಮಾಯಾವಿನಿ; ನಾನಾರೂಪಗಳನ್ನು ಧರಿಸುತ್ತ, ಅಲ್ಲಿಂದ ಇಲ್ಲಿಗೆ ಓಡುತ್ತ, ಕಲ್ಲುಗಳ ಮಳೆಯನ್ನೇ ಸುರಿಸಿದಳು. ಆಗ ವಿಶ್ವಾಮಿತ್ರನು ‘ಎಲೈ ರಾಮ, ತಾಟಕೆಯನ್ನು ಈ ಕೂಡಲೇ ಸಂಹರಿಸು. ಸಂಜೆಯಾಗುತ್ತಿದ್ದಂತೆ ರಾಕ್ಷಸರ ಶಕ್ತಿ ಹೆಚ್ಚುತ್ತದೆ’ ಎಂದು ಎಚ್ಚರಿಸಿದ. ರಾಮ ಅದರಂತೆ ಅವಳ ಎದೆಗೆ ಗುರಿಯಿಟ್ಟು ಬಾಣವನ್ನು ಬಿಟ್ಟ. ತಾಟಕೆ ಉರುಳಿಬಿದ್ದು, ಮರಣವನ್ನು ಹೊಂದಿದಳು. ದೇವತೆಗಳೂ ಇಂದ್ರನೂ ‘ಭಲೆ, ಭಲೆ’ ಎಂದು ರಾಮನನ್ನು ಕೊಂಡಾಡಿದರು. ವಿಶ್ವಾಮಿತ್ರನೂ ಹರಸಿದನು.

*  *  *

ವಿಶ್ವಾಮಿತ್ರನು ರಾಮಲಕ್ಷ್ಮಣರಿಗೆ ದಾರಿಯುದ್ದಕ್ಕೂ ಕಥೆಗಳನ್ನು ಹೇಳುತ್ತಿದ್ದ ಎನ್ನುವುದು ಗಮನಾರ್ಹ. ಪ್ರಯಾಣದಲ್ಲಿ ಕಥೆಗಳನ್ನು ಹೇಳುತ್ತ, ಕೇಳುತ್ತ ಹೋಗುವುದು ಮನುಷ್ಯನಿಗೆ ಸಹಜವಾದ ನಡೆವಳಿಕೆ ಎಂದು ತೋರುತ್ತದೆ. ಕಥೆಗಳನ್ನು ಕೇಳುತ್ತಿದ್ದರೆ ಪ್ರಯಾಣದ ಆಯಾಸವೂ ಗೊತ್ತಾಗದು. ಇಡಿಯ ಸೃಷ್ಟಿಯೇ ಭಗವಂತನ ಪಾಲಿಗೆ ಒಂದು ಕಥೆಯಂತೆ ಎಂದೂ ಹೇಳುವುದುಂಟು. ಕಥೆಯನ್ನು ಹೇಳುವುದೂ ಕೇಳುವುದೂ – ಆನಂದದಾಯಕವಾದುದೇ. ಒಟ್ಟು ಸೃಷ್ಟಿಯನ್ನೇ ಭಗವಂತನಿಗೆ ‘ಲೀಲೆ’, ‘ಕ್ರೀಡೆ’ ಎಂದಿದ್ದಾರಲ್ಲವೆ? ಸೃಷ್ಟಿಯನ್ನೇ ಕಥೆ – ಎನ್ನುವುದು ಕೂಡ, ಸೃಷ್ಟಿಯನ್ನು ಆನಂದಪ್ರದವಾದ ಕಲೆ ಎಂದು ಹೇಳಿದಂತೆಯೇ ಹೌದು. ಹೀಗಾಗಿ ನಮ್ಮ ಹುಟ್ಟಿಗೂ ಕಥೆಗಳಿಗೂ ನೇರ ನಂಟು. ಕಥೆ ಎನ್ನುವುದು ಇಡೀ ಮನುಕುಲಕ್ಕೆ ಒದಗಿರುವ ಜೋಗುಳದಂತೆ. ಅದು ನಮ್ಮನ್ನು ನೆಮ್ಮದಿಯ ತಾಣಕ್ಕೆ ಕರೆದುಕೊಂಡುಹೋಗುತ್ತದೆ.

*  *  *

ತೀರ್ಥಕ್ಷೇತ್ರಗಳ ಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ಇದ್ದಿತು. ‘ತೀರ್ಥ’ ಎನ್ನುವುದಕ್ಕೆ ಪರಂಪರೆಯಲ್ಲಿ ಹಲವು ಅರ್ಥಗಳಿವೆ; ಉಪಾಧ್ಯಾಯ, ಗುರು, ಶಿಕ್ಷಕ, ಆಚಾರ್ಯ, ನೀರು, ಅಗ್ನಿ, ಯೋಗ – ಹೀಗೆ ಹಲವು ಅರ್ಥಗಳಿವೆ. ಆದರೆ ಸಾಮಾನ್ಯವಾಗಿ ತೀರ್ಥಕ್ಷೇತ್ರ ಎಂದರೆ ಪವಿತ್ರಕ್ಷೇತ್ರ, ಪುಣ್ಯಕ್ಷೇತ್ರ ಎಂದಷ್ಟೆ ಗ್ರಹಿಸುವುದುಂಟು. ನಮ್ಮ ಮನಸ್ಸನ್ನೂ ಭಾವವನ್ನೂ ಬುದ್ಧಿಯನ್ನೂ ಸ್ವಚ್ಛಗೊಳಿಸಿ, ನಮಗೆ ಯಾವುದೆಲ್ಲವೂ ಚೈತನ್ಯವನ್ನು ಒದಗಿಸುತ್ತದೆಯೋ ಅವೆಲ್ಲವೂ ‘ತೀರ್ಥ’ಗಳೇ ಹೌದು. ತೀರ್ಥಗಳನ್ನು ಸ್ಥಾವರತೀರ್ಥ, ಜಂಗಮತೀರ್ಥ ಮತ್ತು ಮಾನಸತೀರ್ಥ – ಎಂದು ಮೂರು ವಿಧವಾಗಿ ಗುರುತಿಸಿರುವುದು ಕೂಡ ಮನನೀಯ. ವಿಶ್ವಾಮಿತ್ರನು ಪ್ರಯಾಣದ ಉದ್ದಕ್ಕೂ ರಾಮ–ಲಕ್ಷ್ಮಣರನ್ನು ಹಲವು ತೀರ್ಥಗಳಿಗೆ ಕರೆದೊಯ್ಯುವುದು ಗಮನಾರ್ಹ. ಇದು ಲೋಕಸಂಗ್ರಹಕ್ಕೂ ಕಾರಣವಾಗಬಲ್ಲದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.