ಗುರುವಾರ , ಅಕ್ಟೋಬರ್ 22, 2020
25 °C

ದೇವತೆಗಳಿಗೂ ಉಸಿರಾದ ರಾಮನ ಹೆಸರು!

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ರಾಮನ ಜನನವಾದಾಗ ಕೋಸಲೆಯ ಜನರು ಮಾತ್ರವೇ ಅಲ್ಲ, ದೇವಲೋಕದಲ್ಲೂ ಸಂಭ್ರಮಾಚರಣೆಗಳು ನಡೆದವು ಎನ್ನುವುದರ ಸೂಚನೆಯನ್ನು ನೋಡಿದೆವಷ್ಟೆ! ‘ನಮ್ಮ ರಾಜನಿಗೆ ಮಕ್ಕಳಾಯಿತು; ಅವನ ಸಂಭ್ರಮವೇ ನಮ್ಮ ಸಂಭ್ರಮ’ ಎಂದು ಆ ರಾಜ್ಯದ ಜನರು ಸಂತೋಷಪಟ್ಟಿದ್ದರಲ್ಲಿ ಅರ್ಥವಿದೆ; ಆದರೆ ದೇವತೆಗಳ ಸಂತೋಷಕ್ಕೆ ಕಾರಣವೇನು – ಎಂಬ ಪ್ರಶ್ನೆ ಏಳದಿರದು. ಇದಕ್ಕೆ ಉತ್ತರವೂ ರಾಮಾಯಣದಲ್ಲಿಯೇ ಇದೆಯೆನ್ನಿ! ‘ಲೋಕಕಂಟಕನಾದ ರಾವಣನ ಸಂಹಾರಕ್ಕೆಂದು ಹುಟ್ಟಿದವನು ರಾಮ’. ಇದೇ ಕಾರಣದಿಂದ ದೇವತೆಗಳಿಗೂ ರಾಮನ ಜನನದಿಂದ ಸಂತೋಷವಾಯಿತು. ಇಷ್ಟಕ್ಕೂ ರಾವಣನ ಲೋಕಕಂಟಕಕೃತ್ಯಗಳಾದರೂ ಏನು? ವಾಲ್ಮೀಕಿ ರಾಮಾಯಣದ ‘ಬಾಲಕಾಂಡ’ದಲ್ಲಿ ಇದರ ವಿವರಗಳು ಸಿಗುವುದು ಕಡಿಮೆ. ಅವನು ದೇವತೆಗಳನ್ನೂ ಮಹರ್ಷಿಗಳನ್ನೂ ಗಂಧರ್ವರನ್ನೂ ಪೀಡಿಸುತ್ತಿದ್ದಾನೆ; ಅಪ್ಸರಃಸ್ತ್ರೀಯರನ್ನು ಹಿಂಸಿಸುತ್ತಿದ್ದಾನೆ – ಎಂದಷ್ಟೆ ತಿಳಿಯುವುದು. ಆದರೆ ಮುಂದಿನ ಕವಿಗಳು ಈ ಕೃತ್ಯಗಳನ್ನು ವಿವರಿಸಿರುವ ರೀತಿ ಸ್ವಾರಸ್ಯಕರವಾಗಿದೆ.

ದೇವತೆಗಳು ರಾವಣನಿಗೆ ಎಷ್ಟು ಹೆದರಿದ್ದರು– ಎನ್ನುವುದನ್ನು ಕಾಳಿದಾಸ ಒಂದೇ ಶ್ಲೋಕದಲ್ಲಿ ಹೇಳಿಬಿಡುತ್ತಾನೆ: ‘ದೇವತೆಗಳು ಪುಣ್ಯವನ್ನು ಮಾಡಿದ್ದರ ಫಲವಾಗಿ ಅವರಿಗೆ ವಿಮಾನಸಂಚಾರದ ಯೋಗ ಒದಗಿತ್ತು. ಅವರು ಆಕಾಶದಲ್ಲಿ ಸಂಚರಿಸುತ್ತಿರುವಾಗ ಆ ಕಡೆಯಿಂದ ರಾವಣನ ಪುಷ್ಪಕವಿಮಾನ ಒಮ್ಮೊಮ್ಮೆ ಅವರಿಗೆ ಎದುರಾಗುತ್ತಿತ್ತು. ಆಗ ದೇವತೆಗಳು ರಾವಣನಿಗೆ ಹೆದರಿ ಮೋಡಗಳ ಮರೆಯಲ್ಲಿ ಅವಿತುಕೊಳ್ಳುತ್ತಿದ್ದರಂತೆ!’

ಇಲ್ಲಿ ‘ಪುಷ್ಪಕವಿಮಾನ’ದ ಬಗ್ಗೆಯೂ ಗಮನಿಸಬೇಕು. ಅದು ಕುಬೇರನಿಗೆ ಸೇರಿದ್ದು; ಆದರೆ ಅದನ್ನು ಈಗ ರಾವಣನು ಅಪಹರಿಸಿದ್ದಾನೆ! ಎಂದರೆ ಅವನು ಅಷ್ಟದಿಕ್ಪಾಲಕರನ್ನೂ ತನ್ನ ಅಧೀನದಲ್ಲಿಟ್ಟುಕೊಂಡಿದ್ದಾನೆ. ಈ ವಿವರಗಳು ಭೋಜರಾಜನ ‘ಚಂಪೂರಾಮಾಯಣ’ದಲ್ಲಿ ಮತ್ತಷ್ಟು ವಿವರವಾಗಿಯೂ ಸೊಗಸಾಗಿಯೂ ಮೂಡಿವೆ.

 ರಾವಣನ ಬಾಹುಗಳು ಸಾಲವೃಕ್ಷದಂತೆ ಕಾಣುತ್ತಿದ್ದವಂತೆ; ಅಂಥ ರಮಣೀಯ ಬಾಹುಗಳುಳ್ಳ ಆ ರಾಕ್ಷಸರಾಜನು ಕುಬೇರನನ್ನು ಸೋಲಿಸಿ, ಲಂಕೆಯನ್ನು ವಶಪಡಿಸಿಕೊಂಡು ಅದನ್ನು ಹಲವು ವರ್ಷಗಳಿಂದಲೂ ಆಳುತ್ತಿದ್ದಾನೆ. ರಾವಣ ಹೇಗೆಲ್ಲ ದಿಕ್ಪಾಲಕರನ್ನು ಹಿಂಸಿಸುತ್ತಿದ್ದಾನೆ? ಭೋಜನ ವರ್ಣನೆಯನ್ನು ನೋಡಿ:

‘ರಾವಣನ ಬಾಹುಗಳಲ್ಲಿ ಬಗೆಬಗೆಯ ಆಯುಧಗಳಿವೆಯಷ್ಟೆ. ಅವುಗಳ ಅಲುಗುಗಳು ರಾಹುವಿನ ನಾಲಿಗೆಯಂತಿವೆಯಂತೆ. ಅವು ದಿಕ್ಪಾಲಕರ ಕೀರ್ತಿ ಎಂಬ ಚಂದ್ರನನ್ನು ಕಬಳಿಸಿವೆ’.

ಚಂದ್ರನನ್ನು ರಾಹು ನುಂಗಿದಾಗ ಗ್ರಹಣ ಆವರಿಸಿ, ಕತ್ತಲು ಕವಿಯುತ್ತದೆ ಎಂಬ ಪುರಾಣಕಲ್ಪನೆಯುಂಟಷ್ಟೆ.

ಅಮೃತಮಥನ ನಡೆಯಿತು; ಅಮೃತವೂ ದೊರೆಯಿತು. ಮೊದಲಿಗೆ ಅದನ್ನು ದೇವತೆಗಳಿಗೆ ಹಂಚುವುದು ಎನ್ನುವುದು ನಿರ್ಧಾರವಾಯಿತು. ದೇವತೆಗಳೆಲ್ಲರೂ ಒಂದು ಸಾಲಿನಲ್ಲಿದ್ದಾರೆ. ಈ ಸಾಲಿನಲ್ಲಿ ರಾಹು ಕೂಡ ಯಾರಿಗೂ ಗೊತ್ತಾಗದಂತೆ, ದೇವತೆಯಂತೆ ವೇಷಧರಿಸಿಕೊಂಡು ಕುಳಿತುಕೊಂಡಿದ್ದಾನೆ. ಈ ವಿಷಯ ಸೂರ್ಯ–ಚಂದ್ರರಿಗೆ ತಿಳಿಯಿತು. ಅವರು ಅದನ್ನು ವಿಷ್ಣುವಿನ ಗಮನಕ್ಕೆ ತಂದರು. ಚಕ್ರಾಯುಧದಿಂದ ರಾಹುವಿನ ತಲೆಯನ್ನು ಕತ್ತರಿಸಿದ ವಿಷ್ಣು. ಆದರೆ ಅಷ್ಟುಹೊತ್ತಿಗೆ ರಾಹು ಸ್ವಲ್ಪ ಅಮೃತವನ್ನು ಕುಡಿದಿದ್ದ. ಹೀಗಾಗಿ ಅವನ ತಲೆಯನ್ನು ಕತ್ತರಿಸಿದರೂ ಸಾಯದೆ ಅವನು ತಲೆ ಮತ್ತು ಬಾಲಗಳಾಗಿ ಎರಡು ಭಾಗಗಳಲ್ಲಿ ಜೀವದಿಂದ ಉಳಿದುಕೊಂಡ. ಈ ಭಾಗಗಳೇ ‘ರಾಹು’ ಮತ್ತು ‘ಕೇತು’ ಎಂದು ಹೆಸರಾದವು. ತಮ್ಮ ಇಂಥ ಸ್ಥಿತಿಗೆ ಸೂರ್ಯಚಂದ್ರರೇ ಕಾರಣ ಎಂದು ಆಗಾಗ ದ್ವೇಷದಿಂದ ಅವರಿಬ್ಬರನ್ನು ‘ಗ್ರಹಣ’ – ಹಿಡಿಯುತ್ತಿದ್ದಾರಂತೆ, ಈ ರಾಹು– ಕೇತುಗಳು.

ಈ ಪುರಾಣಕಥೆಯನ್ನೇ ಬಳಸಿಕೊಂಡಿರುವ ಚಂಪೂರಾಮಾಯಣದ ಕವಿಯು ಹೇಗೆ ದಿಕ್ಪಾಲಕರ ಕೀರ್ತಿಗೆ ರಾವಣನಿಂದ ಗ್ರಹಣ ಬಡಿದಿದೆ ಎನ್ನುವುದನ್ನು ವರ್ಣಿಸುತ್ತಿದ್ದಾನೆ. ‘ಕೀರ್ತಿ’ಯ ಬಣ್ಣ ಬಿಳುಪು ಎಂಬ ಕವಿಸಮಯವೂ ಉಂಟೆಂಬುದನ್ನು ನೋಡಿದ್ದೇವೆ. ದಿಕ್ಪಾಲಕರ ಕೀರ್ತಿಯೆಂಬ ಬೆಳಕನ್ನೇ ರಾವಣನ ತೋಳಿನಲ್ಲಿರುವ ಆಯುಧಗಳು ನುಂಗಿವೆ; ಎಂದರೆ ಅವರನ್ನು ಯುದ್ಧದಲ್ಲಿ ಸೋಲಿಸಿ, ಅವರನ್ನು ತನ್ನ ಸೆರೆಯಲ್ಲಿಟ್ಟುಕೊಂಡಿದ್ದಾನೆ ಎನ್ನುವುದು ಇಲ್ಲಿರುವ ಭಾವ.

ಲಂಕೆಯಲ್ಲಿ ಒಂದು ಕ್ರೀಡಾಪರ್ವತ. ಸಾಮಾನ್ಯವಾಗಿ ಬೆಟ್ಟ ಎಂದರೆ ಬಿಸಿಲಿನ ತಾಪದಿಂದ ಚೆನ್ನಾಗಿ ಕಾದಿರುತ್ತದೆಯಷ್ಟೆ; ಹೆಜ್ಜೆಯಿಟ್ಟಾಗ ಸುಡುತ್ತದೆ. ಆದರೆ ಲಂಕೆಯ ಕ್ರೀಡಾಶೈಲದ ವಿಷಯ ಬೇರೆಯ ರೀತಿಯಲ್ಲಿದೆಯಂತೆ! ಎಂದಾದರೊಮ್ಮೆ ರಾವಣನು ತನ್ನ ಅಂತಃಪುರದ ರಾಣಿಯರೊಂದಿಗೆ ವಿಹಾರಕ್ಕೆಂದು ಆ ಪರ್ವತಕ್ಕೆ ಬರಬಹುದು; ಆಗ ಅವರ ಪಾದಕ್ಕೆ ಶಾಖ ತಗುಲಿ, ಆ ಕಾರಣದಿಂದ ರಾವಣನ ಕೋಪಕ್ಕೆ ತುತ್ತಾಗಬಹುದು ಎಂಬ ಅಂಜಿಕೆಯ ಕಾರಣದಿಂದ ಸೂರ್ಯನು ಆ ಪರ್ವತದ ಮೇಲೆ ತನ್ನ ಕಿರಣಗಳನ್ನೇ ಹರಿಸುತ್ತಿರಲಿಲ್ಲವಂತೆ!

ರಾವಣನು ಬೇಟೆಯ ಬಳಲಿಕೆಯನ್ನು ನೀಗಿಸಿಕೊಳ್ಳಲು ಸೇವಕರಿಂದೊಡಗೂಡಿ ಸ್ನಾನಗೃಹದ ಕಡೆಗೆ ಹೋಗುತ್ತಿದ್ದಾನೆ. ಅಲ್ಲಿ ಬಂಗಾರದ ಕಂಬಗಳ ತುದಿಯಲ್ಲಿ ಹೊಸದಾಗಿ ಜೋಡಿಸಿರುವ ಚಿತ್ರವಿಚಿತ್ರವಾದ ಸ್ಫಟಿಕದ ಸಾಲುಗೊಂಬೆಗಳಿವೆ; ಅವುಗಳ ಕೈಯಲ್ಲಿ ಚಂದ್ರಕಾಂತಮಣಿಗಳಿಂದ ನಿರ್ಮಿತವಾದ ಕಲಶಗಳಿವೆ; ಚಂದ್ರನು ತನ್ನ ಕಿರಣಗಳ ಸ್ಪರ್ಶದ ಮೂಲಕ ಅವುಗಳ ತುದಿಯಿಂದ ಜಲಧಾರೆಯನ್ನು ಸುರಿಸುತ್ತಿದ್ದಾನಂತೆ! ಚಂದ್ರನು ಹೀಗೆ ಮಾಡುವುದರಿಂದ ರಾವಣನ ಇಪ್ಪತ್ತು ವಿಧದ ನೋಟಗಳ ಅನುಗ್ರಹಕ್ಕೆ ಎಲ್ಲೋ ಕ್ಷಣಕಾಲ ಪಾತ್ರನಾಗುತ್ತಾನಂತೆ!! ಆದರೆ ಇಂದ್ರನಿಗೂ ಇಂಥ ಅನುಗ್ರಹದ ಭಾಗ್ಯ ಸಿಗುತ್ತಿರಲಿಲ್ಲ, ಎಂದರೆ ಚಂದ್ರನ ಅದೃಷ್ಟ ಎಂಥದ್ದೆಂದೂ ರಾವಣನ ದರ್ಪದ ಗತ್ತು ಎಂಥದ್ದೆಂದೂ ಊಹಿಸಲಾದೀತು.

ಇಂದ್ರನ ಉದ್ಯಾನದ ಹೆಸರು ನಂದ. ಅಲ್ಲಿಂದ ರಾವಣನು ತನ್ನ ಅರಮನೆಯ ಹೂದೋಟಕ್ಕೆ ಮಂದಾರ ಮುಂತಾದ ಕೆಲವೊಂದು ಸಸಿಗಳನ್ನು ತಂದು ಬೆಳೆಸಿದ್ದ. ಈ ದೇವತರುಗಳಲ್ಲಿ ಹೂಗಳು ಅರಳುವುದು; ಹೀಗೆ ಅರಳಿದಂಥವು ಒಣಗಬೇಕಷ್ಟೆ. ಆದರೆ ಹೀಗೆ ಒಣಗಿದ ಹೂವುಗಳು ಎಲ್ಲಿ ಉದರಿಬಿಡುತ್ತವೆಯೋ; ಹಾಗೆ ಉದುರಿದರೆ ಅದರಿಂದ ರಾವಣನಿಗೆ ಕೋಪ ಬಂದೀತೋ – ಎಂದು ಹೆದರಿ ವಾಯುದೇವನು ಅಲ್ಲಿ ತನ್ನ ಸಂಚಾರವನ್ನೇ ನಿಲ್ಲಿಸಿದ್ದನಂತೆ!

ಇನ್ನು ಅಗ್ನಿಯ ಮಾತಿಗೆ ಬರೋಣ. ಅವನಿಗೆ ‘ಹುತವಹ’ ಎಂಬ ಹೆಸರಿದೆಯಷ್ಟೆ. ಎಂದರೆ ‘ಅರ್ಪಿಸಿದ ಹವಿಸ್ಸನ್ನು ಒಯ್ಯುವವನು’ ಎಂಬುದು ಈ ಪದದ ಯೌಗಿಕಾರ್ಥ. ಯಜ್ಞದಲ್ಲಿ ಅರ್ಪಿಸಿದ ಹವಿಸ್ಸನ್ನು ಒಯ್ದು ದೇವತೆಗಳಿಗೆ ಒಪ್ಪಿಸುವ ಪವಿತ್ರಕಾರ್ಯ ಅಗ್ನಿಗೆ ಸೇರಿದ್ದು ಎಂಬುದು ಇದರ ತಾತ್ಪರ್ಯ. ಹೀಗೆ ದೇವತೆಗಳಿಗೆ ‘ಆಹಾರ’ವನ್ನು ಕೊಡುವಂಥ ಕೆಲಸವನ್ನು ನಿರ್ವಹಿಸುವವನು ಅವನು. ಆದರೆ ಈಗ ಅವನ ಪಾಡು ರಾವಣನ ಕೈಯಲ್ಲಿ ಹೇಗಾಗಿದೆ ನೋಡಿ: ಅವನು ರಾವಣನ ಅಡುಗೆಮನೆಯ ಉಸ್ತುವಾರಿಯನ್ನು ನಡೆಸುತ್ತಿದ್ದಾನಂತೆ! ಎಂದರೆ ರಾವಣನ ಅಡುಗೆಮನೆಯನ್ನು ಗುಡಿಸುವುದು, ಸಾರಿಸುವುದು, ಪೂಜಿಸುವುದು ಈಗ ಅಗ್ನಿಯ ಕೆಲಸವಾಗಿದೆ!!

ರಾವಣನ ಶಕ್ತಿಯ ಮದ ಹೇಗೆ ದೇವತೆಗಳನ್ನೂ ಅಲುಗಾಡಿಸಿದೆ ಎನ್ನುವುದನ್ನು ಕವಿಪ್ರತಿಭೆ ಚಿತ್ರಿಸಿರುವ ಪರಿ ಇದು.

ಹೀಗಾಗಿ, ರಾವಣನ ಪೀಡೆಯಿಂದ ತಮ್ಮನ್ನು ಬಿಡುಗಡೆಗೊಳಿಸಬಲ್ಲಂಥ ವಿಷ್ಣುವಿನ ಅವತಾರ ಭೂಲೋಕದಲ್ಲಿ ಆದಾಗ ಸಹಜವಾಗಿಯೇ ದೇವತೆಗಳಿಗೆ ಸಂತೋಷವಾಗಲೇ ಬೇಕು. ದಿಕ್ಪಾಲಕರು ಹೇಗೆ ಸಂತೋಷವನ್ನು ಪಟ್ಟರು ಎನ್ನುವುದನ್ನು ಕಾಳಿದಾಸ ತುಂಬ ಸಂಕ್ಷಿಪ್ತವಾಗಿ, ಆದರೆ ಧ್ವನಿಪೂರ್ಣವಾಗಿ ಚಿತ್ರಿಸಿದ್ದಾನೆ. ಭೂಲೋಕದ ದೋಷಗಳೆಲ್ಲವೂ ರಾಮನ ಜನನದಿಂದ ದೂರವಾದವಂತೆ; ಮಾತ್ರವಲ್ಲ, ಸ್ವರ್ಗವೇ ಅವನನ್ನು ಅನುಸರಿಸಿ ಬಂದಿತಂತೆ! ರಾಮನು ಹುಟ್ಟಿದಾಗ ಅಂತಃಪುರವೆಲ್ಲ ಮಹೋನ್ನತ ಬೆಳಕಿನಿಂದ ತುಂಬಿತಲ್ಲವೆ? ಆಗ ಗಾಳಿಯೂ ಬೀಸಿತು. ಆ ಗಾಳಿ ದಿಟದಲ್ಲಿ ಏನು ಎನ್ನುವುದನ್ನು ಕಾಳಿದಾಸ ಹೇಳುತ್ತಾನೆ: ‘ಈಗ ನಾವು ರಾವಣನ ದಾಸರಾಗಿದ್ದೇವೆ. ಸದ್ಯ, ನಮ್ಮನ್ನು ಅವನ ಹಿಡಿತದಿಂದ ಪಾರು ಮಾಡಲು ವಿಷ್ಣುವೇ ಅವತರಿಸಿಬಂದನಲ್ಲ’ ಎಂದು ಧೈರ್ಯದಿಂದ ದೇವತೆಗಳು ಉಸಿರಾಡಿದರೋ ಎಂಬಂತೆ ಅಂತಃಪುರದಲ್ಲಿ ಗಾಳಿ ಬೀಸಿತಂತೆ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು