ವಿಶ್ವಾಮಿತ್ರನ ಕೋಪಕ್ಕೆ ಹೆದರಿದ ದೇವತೆಗಳು

7

ವಿಶ್ವಾಮಿತ್ರನ ಕೋಪಕ್ಕೆ ಹೆದರಿದ ದೇವತೆಗಳು

Published:
Updated:

‘ಒಂದು ಅಕ್ಷೌಹಿಣೀಸೇನೆ ನನ್ನಲ್ಲಿದೆ; ನಾನೇ ಬಂದು ಮಾರೀಚ–ಸುಬಾಹುರನ್ನು ಕೊಂದು, ಯಜ್ಞವನ್ನು ರಕ್ಷಿಸುತ್ತೇನೆ’ ಎಂದು ದಶರಥನು ವಿಶ್ವಾಮಿತ್ರನಲ್ಲಿ ಅರಿಕೆ ಮಾಡಿಕೊಂಡನಷ್ಟೆ. ಆದರೆ ಈ ಮಾತಿಗೆ ವಿಶ್ವಾಮಿತ್ರಮಹರ್ಷಿ ಒಪ್ಪಲಿಲ್ಲವೆನ್ನಿ! ಇರಲಿ. ಅಕ್ಷೌಹಿಣೀಸೇನೆ ಎಂದರೆ ಏನು? ಅದರ ಬಲ ಎಷ್ಟು. ಮಹಾಭಾರತಯುದ್ಧದ ಸಂದರ್ಭದಲ್ಲಿಯೂ  ಅಕ್ಷೌಹಿಣೀಸೇನೆಯ ಬಗ್ಗೆ ಉಲ್ಲೇಖ ಬರುತ್ತದೆಯಲ್ಲವೆ? ಪಾಂಡವರ ಮತ್ತು ಕೌರವರ ಸೇನೆಯ ಒಟ್ಟು ಬಲ ಹದಿನೆಂಟು ಅಕ್ಷೌಹಿಣಿಯಷ್ಟು ಎಂಬ ಒಕ್ಕಣೆ ಅಲ್ಲಿ ಬಂದಿದೆ.

ರಥ, ಆನೆ, ಕುದುರೆ ಮತ್ತು ಕಾಲಾಳುಗಳ ಸಂಖ್ಯೆಯನ್ನು ಆಧರಿಸಿ ಸೇನೆಗೆ ಹೆಸರನ್ನು ಇಡಲಾಗುತ್ತಿತ್ತು. ಹೀಗೆ ಪತ್ತಿ, ಗುಲ್ಮ, ಪೃತನಾ ಮತ್ತು ಅಕ್ಷೌಹಿಣೀ – ಎಂದು ಸೇನೆಯನ್ನು ವಿಂಗಡಿಸಲಾಗುತ್ತಿತ್ತು ಎನ್ನುವುದು ಮಹಾಭಾರತದಿಂದ ತಿಳಿಯುತ್ತದೆ. ಈ ಒಂದೊಂದು ರಚನೆಯ ಲಕ್ಷಣವನ್ನೂ ಅದೇ ಹೇಳಿದೆ:

ಏಕೋ ರಥೋ ಗಜಶ್ಚೈಕೋ ನರಾಃ ಪಂಚ ಪದಾತಯಃ |

ತ್ರಯಶ್ಚ ತುರಗಾಸ್ತಜ್ಞೈಃ ಪತ್ತಿರಿತ್ಯಭಿಧೀಯತೇ ||

‘ಒಂದು ರಥ, ಒಂದು ಆನೆ, ಐದು ಕಾಲಾಳುಗಳು, ಮೂರು ಕುದುರೆಗಳು ಸೇರಿ ಒಂದು ಪತ್ತಿ.’

ಪತ್ತಿಂ ತು ತ್ರಿಗುಣಾಮೇತಾಮಾಹುಃ ಸೇನಾಮುಖಂ ಬುಧಾಃ |

ತ್ರೀಣಿ ಸೇನಾಮುಖಾನ್ಯೇಕೋ ಗುಲ್ಮ ಇತ್ಯಭಿಧೀಯತೇ ||

‘‘ಮೂರು ಪತ್ತಿಗಳು ಸೇರಿ ಒಂದು ಸೇನಾಮುಖ; ಮೂರು ಸೇನಾಮುಖಗಳು ಸೇರಿ ಒಂದು ಗುಲ್ಮ.’

ತ್ರಯೋ ಗುಲ್ಮಾ ಗಣೋ ನಾಮ ವಾಹಿನೀ ತು ಗಣಾಸ್ತ್ರಯಃ |

ಸ್ಮೃತಾಸ್ತಿಸ್ರಸ್ತು ವಾಹಿನ್ಯಃ ಪೃತನೇತಿ ವಿಚಕ್ಷಣೈಃ ||

‘ಮೂರು ಗುಲ್ಮಗಳು ಒಂದು ಗಣವಾಗುತ್ತದೆ; ಮೂರು ಗಣಗಳು ಸೇರಿ ಒಂದು ವಾಹಿನೀ ಎಂದೆನಿಸಿಕೊಳ್ಳುತ್ತದೆ; ಮೂರು ವಾಹಿನಿಗಳು ಸೇರಿ ಒಂದು ಪೃತನಾ ಆಗುತ್ತದೆ.’

ಚಮೂಸ್ತು ಪೃತನಾಸ್ತಿಸ್ರಸ್ತಿಸ್ರಶ್ಚಮ್ವಸ್ತ್ವನೀಕಿನೀ |

ಅನೀಕಿನೀಂ ದಶಗುಣಾ ಪ್ರಾಹುರಕ್ಷೌಹಿಣೀ ಬುಧಾಃ ||

‘ಮೂರು ಪೃತನಾಗಳ ಒಂದು ಚಮೂ; ಮೂರು ಚಮೂಗಳು ಸೇರಿ ಒಂದು ಅನೀಕಿನೀ ಆಗುತ್ತದೆ; ಹತ್ತು ಅನೀಕಿನೀಗಳು ಸಮೂಹವೇ ಒಂದು ಅಕ್ಷೌಹಿಣೀ.’

ಈ ಲೆಕ್ಕಾಚಾರದ ಪ್ರಕಾರ ಒಂದು ಅಕ್ಷೌಹಿಣೀಸೈನ್ಯದಲ್ಲಿ 21,870 ರಥಗಳೂ, ಅಷ್ಟೇ ಸಂಖ್ಯೆಯ ಆನೆಗಳೂ ಇರುತ್ತವೆ. ಪದಾತಿಗಳ ಸಂಖ್ಯೆ 1,09,350 ಮತ್ತು ಕುದುರೆಗಳ ಸಂಖ್ಯೆ 65,610.

*  *  *

 ಶತ್ರುಗಳ ಬಗ್ಗೆ ವಿವರ ಕೊಡುವಂತೆ ವಿಶ್ವಾಮಿತ್ರರನ್ನು ದಶರಥನು ಕೇಳಿದ್ದನಷ್ಟೆ. ಅವರು ಹೇಳತೊಡಗಿದರು:

‘ಪೌಲಸ್ತ್ಯವಂಶದಲ್ಲಿ ಜನಿಸಿರುವ ರಾವಣ ಎಂಬ ರಾಕ್ಷಸ ಒಬ್ಬನಿದ್ದಾನೆ. ಅವನು ಬ್ರಹ್ಮನಿಂದ ವರವನ್ನು ಪಡೆದು ಮೂರು ಲೋಕಗಳನ್ನೂ ಬಾಧಿಸುತ್ತಿದ್ದಾನೆ. ಅವನ ಜೊತೆಗೆ ಇನ್ನೂ ಹಲವರು ರಾಕ್ಷಸರೂ ಇದ್ದಾರೆ; ಆದರೆ ಅವರೆಲ್ಲರಿಗೂ ಅವನೇ ರಾಜ; ಮಹಾಪರಾಕ್ರಮಶಾಲಿ. ಅವನು ವಿಶ್ರವಸ್ಸಿನ ಮಗ; ಕುಬೇರನ ತಮ್ಮ. ಯಜ್ಞವನ್ನು ಕೆಡಿಸಲು ನೇರವಾಗಿ ಅವನೇ ಬರದಿದ್ದರೂ ಮಾರೀಚ–ಸುಬಾಹುರನ್ನು ಮಾತ್ರ ತಪ್ಪದೆ ಕಳುಹಿಸುತ್ತಾನೆ.’

ರಾವಣನ ಕಥೆ ಕೇಳಿ ದಶರಥ ಹೆದರಿದನೋ ಅಥವಾ ಏನಾದರೂ ಮಾಡಿಯಾದರೂ ಸರಿ, ರಾಮನನ್ನು ವಿಶ್ವಾಮಿತ್ರರೊಡನೆ ಕಳುಹಿಸದಿರುವ ಯೋಜನೆಯಾಗಿ ಹೆದರಿದವನಂತೆ ನಟಿಸಿದನೋ, ಅಂತೂ ರಾವಣನೊಡನೆ ಯುದ್ಧ ಮಾಡುವ ಶಕ್ತಿ ತನಗಿಲ್ಲ ಎಂದ.‘ನನಗೇ ರಾವಣನೊಡನೆ ಯುದ್ಧ ಮಾಡುವ ಶಕ್ತಿ ಇಲ್ಲ; ಇನ್ನು ನನ್ನ ಮಗ ಅವನೊಡನೆ ಹೇಗೆ ಯುದ್ಧ ಮಾಡಿಯಾನು? ದಯವಿಟ್ಟು ನೀವು ಅನುಗ್ರಹಿಸಬೇಕು. ನೀವೇ ನನಗೆ ದೇವರು; ಗುರು. ದೇವದಾನವಗಂಧರ್ವರೂ ರಾವಣನನ್ನು ಎದುರಿಸಲಾರರು? ಇನ್ನು ಮನುಷ್ಯರ ಪಾಡೇನು? ಸೈನ್ಯ ಇದ್ದರೂ ಸರಿ, ಮಕ್ಕಳ ಸಹಾಯಕ್ಕೆ ಬಂದರೂ ಸರಿ, ಅವನನ್ನು ಯುದ್ಧದಲ್ಲಿ ಜಯಿಸಲು ಸಾಧ್ಯವಿಲ್ಲ.

ಯಜ್ಞಕ್ಕೆ ವಿಘ್ನಮಾಡುತ್ತಿರುವ ಆ ಸುಂದೋಪಸುಂದರ ಮಕ್ಕಳು ನಮ್ಮ ಪಾಲಿಗೆ ಯಮನಂತಿದ್ದಾರೆ. ನಾನು ನನ್ನ ಮಗನನ್ನು ಕಳುಹಿಸುವುದಿಲ್ಲ. ನಾನು ಆ ರಾಕ್ಷಸರಲ್ಲಿ ಒಬ್ಬರೊಡನೆ ಯುದ್ಧ ಮಾಡಬಲ್ಲೆ. ನನ್ನ ಮಿತ್ರರನ್ನೂ ಜೊತೆಯಲ್ಲಿ ಕರೆತರುವೆ. ದಯವಿಟ್ಟು ನನ್ನ ಮಗನನ್ನು ಬಿಟ್ಟುಬಿಡಿ’ – ಎಂದು ಅವನು ಅಂಗಲಾಚಿದ. ದಶರಥನ ಈ ಹಲಬುವಿಕೆಯಿಂದ ವಿಶ್ವಾಮಿತ್ರರಿಗೆ ಕೋಪ ಬಂದಿತು. ಯಜ್ಞಕುಂಡದಲ್ಲಿ ಉರಿಯುತ್ತಿರುವ ಅಗ್ನಿಗೆ ತುಪ್ಪವನ್ನು ಸುರಿದಂತೆ ಕೋಪ ಹೆಚ್ಚುತ್ತಹೋಯಿತು.

ಮಗನ ಮೇಲಿನ ಪ್ರೀತಿ ದಶರಥನನ್ನು ದೈನ್ಯಾವಸ್ಥೆಗೆ ತಳ್ಳಿತು. ಅವನು ಮಾತು ತೊದಲುತ್ತಿತ್ತು. ಕಣ್ಣೀರು ಹರಿಯುತ್ತಿತ್ತು. ಪದೇ ಪದೇ ಪ್ರಜ್ಞೆಯನ್ನು ತಪ್ಪುತ್ತಿದ್ದ; ಬುದ್ಧಿಯಂತೂ ಮಂಕಾಗಿತ್ತು.

ವಿಶ್ವಾಮಿತ್ರಮಹರ್ಷಿಗಳು ಕ್ರುದ್ಧರಾದರು. ‘ಎಲೈ ದಶರಥ, ಕೊಟ್ಟ ಮಾತಿಗೆ ತಪ್ಪುತ್ತಿರುವೆಯಾ? ಕೊಟ್ಟ ಮಾತಿಗೆ ತಪ್ಪುವುದು ರಘುವಂಶದವರಿಗೆ ಸರಿ ಕಾಣುವುದಿಲ್ಲ. ಇದೇ ನಿನ್ನ ನಿರ್ಧಾರವಾದರೆ, ಇಗೋ, ಈಗಲೇ ಹೊರಟೆ. ವಚನಭ್ರಷ್ಟ ಎಂದೆನಿಸಿಕೊಂಡು ನೀನು ಸುಖವಾಗಿರು’ ಎಂದು ಅವರು ಅಬ್ಬರಿಸಿದರು.

ವಿಶ್ವಾಮಿತ್ರರು ಕೋಪಗೊಂಡದ್ದನ್ನು ಕಂಡು ಭೂಮಿಯೇ ಕಂಪಿಸಿತು. ದೇವತೆಗಳು ಕೂಡ ಕಂಗಾಲಾದರು. ಏನು ಅಪಾಯ ಕಾದಿದೆಯೋ ಎಂದು ಚಿಂತಾಕ್ರಾಂತರಾದರು.

***

ವಿಶ್ವಾಮಿತ್ರರು ‘ರಾಮನೇ ನನ್ನ ಜೊತೆಯಲ್ಲಿ ಬರಬೇಕು’ ಎಂದು ಏಕಾದರೂ ಹಟಕ್ಕೆ ಬಿದ್ದವರಂತೆ ಆಗ್ರಹಿಸಿದರು? ಅದು ಮುಂದೆ ತಿಳಿಯುತ್ತದೆ. ಇಲ್ಲಿ ಇನ್ನೂ ಒಂದು ಪ್ರಶ್ನೆ ಏಳುತ್ತದೆ: ತಮ್ಮ ಯಜ್ಞಕ್ಕೆ ತೊಂದರೆ ಕೊಡುತ್ತಿರುವ ರಾಕ್ಷಸರನ್ನು ನಿಗ್ರಹಿಸುವಷ್ಟು ಶಕ್ತಿ ವಿಶ್ವಾಮಿತ್ರರಿಗೆ ಇರಲಿಲ್ಲವೆ? ಇತ್ತು; ಆದರೆ ಅವರು ಅದನ್ನು ಬಳಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಇದಕ್ಕೆ ಎರಡು ಕಾರಣಗಳನ್ನು ಕೊಡಲಾದೀತು. ಒಂದು: ರಾಮನಿಗೆ ಕೀರ್ತಿ ಸಲ್ಲಬೇಕು; ಅವನನ್ನೂ ‘ವಿಶ್ವಾಮಿತ್ರ’ನನ್ನಾಗಿಸಬೇಕು. ಎರಡು: ಯಜ್ಞದ ದೀಕ್ಷೆಯಲ್ಲಿರುವಾಗ ಯಾರನ್ನೂ ಕೊಲ್ಲಬಾರದು; ಶಾಪ ಕೊಡಬಾರದು – ಎಂಬ ನಿಯಮ.

ಅಷ್ಟೇ ಅಲ್ಲ, ಋಷಿಮುನಿಗಳು ಯಾರನ್ನೂ ಕೊಲ್ಲಬಾರದು – ಎಂಬುದೂ ಇದಕ್ಕೆ ಕಾರಣವಾಗಿರಬಹುದು. ಏಕೆಂದರೆ ಋಷಿಮುನಿಗಳನ್ನು ಕಾಪಾಡುವುದು ರಾಜನ ಕರ್ತವ್ಯ. ಒಂದು ವೇಳೆ, ಹೀಗೆ ತಮಗೆ ತೊಂದರೆಯನ್ನು ಕೊಡುತ್ತಿರುವವರನ್ನು ಅವರೇ ಕೊಂದರೆ ಆಗ ಅದು ‘ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವಂತೆ’ ಆಗುತ್ತದೆ ಎನ್ನುವ ನಿಲುವೂ ಇರಬಹುದು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !