ಆಸೆಯ ಧರ್ಮ ಒಂದು ವ್ಯಾಪಾರ

ಭಾನುವಾರ, ಏಪ್ರಿಲ್ 21, 2019
25 °C

ಆಸೆಯ ಧರ್ಮ ಒಂದು ವ್ಯಾಪಾರ

ಗುರುರಾಜ ಕರಜಗಿ
Published:
Updated:

ತಥಾಗತ (ಬುದ್ಧ) ಮೊದಲ ಬಾರಿಗೆ ಕಪಿಲವತ್ಥುಗೆ ಬಂದಾಗ ತಮ್ಮ ನಂದಕುಮಾರನನ್ನು ಪಬ್ಬಜಿತನನ್ನಾಗಿ ಮಾಡಿದರು. ಅಲ್ಲಿಂದ ತಾವತ್ಥಿಗೆ ಹೋಗುವಾಗ ನಂದಕುಮಾರ ಬುದ್ಧ ಭಗವಾನರ ಪಾತ್ರೆಯನ್ನು ಹಿಡಿದುಕೊಂಡು ಮುಂದೆ ನಡೆಯುತ್ತಿದ್ದ.

ಆ ವಾರ್ತೆಯನ್ನು ಕೇಳಿದ ಅವನ ಹೆಂಡತಿ ಜನಪದ ಕಲ್ಯಾಣಿ, ತಲೆ ಕೆರೆದುಕೊಂಡು ಕಿಟಕಿಯಿಂದ ನೋಡಿ, ‘ಆರ್ಯ, ಬೇಗನೇ ಬಂದು ಬಿಡು’ ಎಂದು ಕೂಗಿದಳು.

ಅದನ್ನು ಕೇಳಿದ ನಂದಕುಮಾರ ಭಾವಪರವಶನಾದ. ಬುದ್ಧಶಾಸನದಲ್ಲಿ ಮನಸ್ಸು ನಿಲ್ಲಲಿಲ್ಲ. ಅವನ ಸ್ಥಿತಿಯನ್ನು ಕಂಡು ಬುದ್ಧ ಅವನೆಡೆಗೆ ಬಂದು, ‘ನಂದ, ನಿನಗೆ ಬುದ್ಧ ಶಾಸನದಲ್ಲಿ ಮನ ನಿಲ್ಲುವಂತೆ ತೋರುತ್ತಿಲ್ಲ. ಹೌದೇ?’ ಎಂದು ಕೇಳಿದ.

ನಂದ, ‘ಹೌದು ನನ್ನ ಮನಸ್ಸು ಜನಪದ ಕಲ್ಯಾಣಿಯಲ್ಲಿ ಆಸಕ್ತವಾಗಿರುವುದರಿಂದ ಯಾವ ಧರ್ಮಜಿಜ್ಞಾಸೆಯಲ್ಲೂ ಮನ ನಿಲ್ಲುತ್ತಿಲ್ಲ’ ಎಂದ. ಆಗ ಬುದ್ಧ, ‘ನಂದ, ನೀನು ಹಿಮಾಲಯವನ್ನು ನೋಡಿಲ್ಲವಲ್ಲ, ನನ್ನ ಜೊತೆಗೆ ಬಾ. ನನ್ನ ಶಕ್ತಿಯಿಂದ ನಿನ್ನನ್ನು ಕರೆದೊಯ್ಯುತ್ತೇನೆ’ ಎಂದ.

ಯೋಗಶಕ್ತಿಯಿಂದ ನಂದನನ್ನು ಕರೆದುಕೊಂಡು ಆಕಾಶಮಾರ್ಗದಲ್ಲಿ ಹೋಗುವಾಗ ದಾರಿಯಲ್ಲಿ ಒಂದು ಸುಟ್ಟುಹೋದ ಹೊಲ ಕಂಡಿತು. ಅಲ್ಲಿ ಸುಟ್ಟುಹೋದ ಮೋಟು ಮರದ ಮೇಲೆ ಒಂದು ಹೆಣ್ಣು ಕೋತಿ ಕುಳಿತಿತ್ತು. ಅದರ ಕೂದಲೆಲ್ಲ ಸುಟ್ಟು, ಕಿವಿ, ಬಾಲ, ಮೂಗುಗಳು ಕತ್ತರಿಸಿ ಹೋಗಿದ್ದವು. ಅದು ತುಂಬ ಅಸಹ್ಯವಾಗಿ ಕಾಣುತ್ತಿತ್ತು.

ಮತ್ತೆ ಹಾರುತ್ತ ಸಪ್ತ ಸರೋವರಗಳನ್ನು, ಐದು ಮಹಾನದಿಗಳನ್ನು, ಸ್ವರ್ಣಪರ್ವತ, ಮಣಿಪರ್ವತ, ರಜತಪರ್ವತಗಳ ದರ್ಶನ ಮಾಡಿಸಿ ತಾವತಿಂಸ ಭವನಕ್ಕೆ ಕರೆತಂದ. ಬುದ್ಧನನ್ನು ಕಾಣಲು ದೇವೇಂದ್ರ ಬಂದು ನಮಸ್ಕರಿಸಿ ಕುಳಿತುಕೊಂಡ. ದೇವೇಂದ್ರನ ಎರಡೂವರೆ ಕೋಟಿ ಅತ್ಯಂತ ಸುಂದರಿಯಾದ ದಾಸಿಯರು, ಪಾರಿವಾಳದಂತೆ ಕೆಂಪಾದ ಎಳಸು ಪಾದಗಳನ್ನು ಹೊಂದಿದ್ದ ಐದುನೂರು ಪರಮಸುಂದರಿಯರಾದ ಅಪ್ಸರೆಯರು ಬಂದು ವಂದಿಸಿ ಕುಳಿತರು.

ನಂದಕುಮಾರ ಆಪ್ಸರೆಯರಲ್ಲಿ ಆಸಕ್ತನಾದದ್ದು ಬುದ್ಧನಿಗೆ ಕಂಡಿತು. ‘ನಂದ ಈ ಆಪ್ಸರೆಯರನ್ನು ಕಂಡೆಯಾ? ಇವರಿಗೆ ಹೋಲಿಸಿದರೆ ಯಾರು ಚೆನ್ನಾಗಿ ಕಾಣುತ್ತಾರೆ, ಜನಪದ ಕಲ್ಯಾಣಿಯೋ, ಅಪ್ಸರೆಯರೋ?’ ಎಂದು ಕೇಳಿದ. ನಂದ, ‘ತಥಾಗತ, ಈ ಸುಂದರಿಯರಿಗೆ ಹೋಲಿಸಿದರೆ ಜನಪದ ಕಲ್ಯಾಣಿ ದಾರಿಯಲ್ಲಿ ನಾವು ನೋಡಿದ ಮೋಟುಮರದ ಮೇಲಿದ್ದ ಹೆಣ್ಣು ಕೋತಿಯಂತೆ ಕಾಣುತ್ತಾಳೆ’ ಎಂದ.

‘ನಿನಗೆ ಈ ಆಪ್ಸರೆಯರು ಬೇಕೆಂದಿದ್ದರೆ, ನಾನು ಕೊಡಿಸುತ್ತೇನೆ. ಆದರೆ ಮೊದಲು ಶ್ರಮಣ ಧರ್ಮವನ್ನು ಪಾಲಿಸಬೇಕು’ ಎಂದು ಆಸೆ ತೋರಿದ ಬುದ್ಧ. ಆಸೆಗೆ ಬಲಿಯಾದ ನಂದ ಬುದ್ಧನನ್ನೇ ಇದಕ್ಕೆ ಬಾಧ್ಯನನ್ನಾಗಿ ಮಾಡಿ ಶ್ರಮಣಕನಾದ.

ಒಂದು ದಿನ ಸಾರಿಪುತ್ರ ನಂದನ ಬಳಿಗೆ ಬಂದು, ‘ನೀನು ಆಪ್ಸರೆಯರಿಗಾಗಿ ಶ್ರಮಣಧರ್ಮವನ್ನು ಪಾಲಿಸುತ್ತಿದ್ದರೆ ನಿನ್ನ ಬ್ರಹ್ಮಚರ್ಯ ಕೇವಲ ಹೆಂಗಸರಿಗಾಗಿ, ಅವರಲ್ಲಿಯ ಆಸಕ್ತಿಗಾಗಿ. ಆದ್ದರಿಂದ ಭತ್ಯಕ್ಕೆ ಕೆಲಸ ಮಾಡುವ ಕೂಲಿಕೆಲಸದವನಿಗೂ, ನಿನಗೂ ಏನು ವ್ಯತ್ಯಾಸ?’ ಎಂದು ನಂದನನ್ನು ಲಜ್ಜೆಗೊಳಿಸಿ, ನಿಸ್ತೇಜನನ್ನಾಗಿ ಮಾಡಿದರು.

ನಂದನಿಗೆ ನಾಚಿಕೆಯಾಯಿತು. ಎಲ್ಲ ಬಂಧಗಳನ್ನು ಕಳಚಿಕೊಳ್ಳುವುದಕ್ಕಾಗಿ ಪಬ್ಬಜಿತನಾಗಬೇಕಾದದ್ದು. ಆದರೆ ನಾನು ಬಂಧನಕ್ಕಾಗಿ ‘ಪಬ್ಬಜಿತನಾಗಿದ್ದೇನೆ’ ಎಂದು ನಾಚಿಕೆಪಟ್ಟು, ಬುದ್ಧನ ಕ್ಷಮೆ ಕೇಳಿ, ಆಸೆಯನ್ನು ಬಿಟ್ಟು ಅರ್ಹತ್ವವನ್ನು ಪಡೆದ. ಧರ್ಮಮಾರ್ಗ ಇರುವುದು ಆಸೆಯಿಂದ ಮುಕ್ತನಾಗುವುದಕ್ಕೆ, ಆದರೆ ಆಸೆಗಾಗಿ ಧರ್ಮಮಾರ್ಗವನ್ನು ಹಿಡಿಯುವುದು ವ್ಯಾಪಾರ ಮಾತ್ರ

Tags: 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !