ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬಿತಾ ಬನ್ನಾಡಿ ಅಂಕಣ| ಮನಸು ಪಳಗಿಸುವಾಟದ ಮಾಟ

ಗಡಿಗುರುತು ಬೋಧಿಸುವವರೇ ಗಡಿಗುರುತು ದಾಟುತ್ತಲೇ ಇರುವುದು ಸುಮ್ಮನೆಯೇ?
Last Updated 27 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಸಾಂಟಾಕ್ಲಾಸ್‍ನ ಹಣ್ಣಾದ ಗಡ್ಡದಂತೆ ಬೆಳ್ಳಗಾದ ಹಿಮವು ನಿಧಾನಕ್ಕೆ ಆವರಿಸಿಕೊಳ್ಳುತ್ತಾ, ಕೊಳೆ, ಕೊರೆಗಳೆಲ್ಲಾ ಅದರೊಳಗೆ ಮರೆಯಾಗಿ, ಕಲ್ಲಿನ ಕಠಿಣ ಬೆನ್ನಿನ ಮೇಲೆಲ್ಲ ಮಿದು ತುಪ್ಪಳದಂತೆ ಅಪ್ಪಿಕೊಂಡ ಮಂಜುಗಡ್ಡೆಯು ಅಪೂರ್ವ ಚೆಲುವನ್ನು ಸೃಷ್ಟಿಸಿ, ಮೇಲೇರುವ ನೇಸರನಿಗೆ ಸವಾಲು ಹಾಕಿಯೂ ಚಿನ್ನದಂತೆ ಹೊಳೆದು ನಕ್ಕು ಸ್ನೇಹಹಸ್ತ ಚಾಚಿ, ಸದ್ಯ ಏನಿದ್ದರೂ ನನ್ನದೇ ಕಾರುಬಾರು, ನಿನ್ನ ಧಗೆಗೆ ಕಡಿವಾಣ ಹಾಕಿಕೋ ಎಂಬ ಅದರ ಅಪ್ಪಣೆಯನ್ನು ಒಪ್ಪಿ ಸಾಮ್ರಾಜ್ಯವನ್ನು ಅದರ ಸುಪರ್ದಿಗೆ ಒಪ್ಪಿಸಿ ನಿರುಮ್ಮಳವಾಗುತ್ತದೆ ಪ್ರಕೃತಿ. ನಿನ್ನೆ ನನ್ನದು, ಇಂದು ನಿನ್ನದು, ನಾಳೆ ಮತ್ತೊಬ್ಬರದು– ಮತ್ತೆ ನಾ ಬರುವೆ ಎಂಬ ಈ ಪ್ರಕೃತಿಯ ಪಾಠ ಸರ್ವಋತುಗಳಲ್ಲೂ ನಡೆಯುತ್ತಿರುತ್ತದೆ. ಆದರೆ ಮನುಷ್ಯರಿಗೆ ಮಾತ್ರ ಸರ್ವಋತುಗಳನ್ನೂ ತಾನೇ ಆಳಬೇಕೆಂಬ ಕೇಡಿನ ಬಯಕೆಯ ಉದರ ರೋಗ.

ಸಬಿತಾ ಬನ್ನಾಡಿ
ಸಬಿತಾ ಬನ್ನಾಡಿ

ಇದಕ್ಕಾಗಿ ಎಂತೆಂಥಾ ಆಟ, ಎಂತೆಂಥಾ ಮಾಟಗಳು ನಡೆಯುತ್ತಿರುತ್ತವೆಯೆಂದರೆ, ತಮ್ಮದಲ್ಲದ ವಿಷಯಗಳಿಗೆಲ್ಲಾ ಯಾರ‍್ಯಾರೋ ಮೂಗು ತೂರಿಸಿ ‘ಟೆಸ್ಟ್ ಡೋಸ್’ ನೀಡುತ್ತಾ ಇರುತ್ತಾರೆ. ಇನ್ನು ಕೆಲವರು ಫರ್ಮಾನು ಹೊರಡಿಸುತ್ತಿರುತ್ತಾರೆ. ತಿನ್ನುವ ಆಹಾರವನ್ನೂ ಆಳುವ ಅಸ್ತ್ರಗಳಾಗಿಸುವ ಸನ್ನಿವೇಶಗಳನ್ನು ‘ಹುಟ್ಟಿಸ’ಲಾಗುತ್ತದೆ. ಮಕ್ಕಳಿಗೆ ಅವಶ್ಯ ಇರುವ ಪೌಷ್ಟಿಕ ಆಹಾರ ಯಾವುದು ಎನ್ನುವುದನ್ನು ನೋಡಿಕೊಳ್ಳಲು ಆರೋಗ್ಯ ಇಲಾಖೆ ಇರುತ್ತದೆ. ತಾನು ಏನನ್ನು ತಿನ್ನುವೆ, ಏನು ತಿನ್ನಲಾರೆ ಎನ್ನುವುದನ್ನು ತಿನ್ನುವ ಮಕ್ಕಳನ್ನು ಕೇಳಬೇಕು. ಏನನ್ನು ಒದಗಿಸಲು ಸಾಧ್ಯ ಎನ್ನುವುದನ್ನು ಅಲ್ಲಿನ ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಬೇಕು. ಈ ಇಷ್ಟು ಜನರಿಗೆ ಸಂಬಂಧಿಸಿದ ಈ ವಿಷಯವನ್ನು ಕುರಿತು, ಈ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನೇನೂ ಓದಿಸದ,
ಸ್ವತಃ ತಾವೇ ತಿನ್ನದ ಆಹಾರದ ಬಗೆಗೆ ಅಧಿಕಾರ ವಾಣಿಯಿಂದ ‘ಅದನ್ನು ಕೊಡುವಂತಿಲ್ಲ’ ಎಂದು ಯಾರೇ ಆದರೂ ಹೇಳಿದರೆ, ಅದರ ಹಿಂದೆ ‘ಇನ್ನೇನೋ’ ಉದ್ದೇಶ ಇದೆ ಎಂದೇ ಅರ್ಥ. ಅಷ್ಟಕ್ಕೂ ಇಂದು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆಯೇ ಬೆರಳೆಣಿಕೆಯದು. ಅದರಲ್ಲೂ ಮೇಲ್ವರ್ಗದ ಜೊತೆಗೆ ತಳುಕು ಹಾಕಿಕೊಂಡಿರುವ ಜಾತಿಗಳ ವಿದ್ಯಾರ್ಥಿಗಳಂತೂ ಒಬ್ಬರೂ ಇಲ್ಲದಿರುವ ಸಾಧ್ಯತೆಯೇ ಹೆಚ್ಚು.

ನಿಮಗೆ ಆಶ್ಚರ್ಯ ಆಗಬಹುದು, ಸರ್ಕಾರಿ ಕಾಲೇಜುಗಳಲ್ಲಿ ಕೆಲವೊಮ್ಮೆ ಇಡೀ ತರಗತಿಗೆ ತರಗತಿಯೇ ಜನರಲ್ ಮೆರಿಟ್ ಹಿನ್ನೆಲೆಯವರನ್ನು ಹೊಂದಿರುವುದಿಲ್ಲ (ಖಂಡಿತಾ ಮೆರಿಟ್ ಇರುವವರು ಇರುತ್ತಾರೆ). ಯಾವುದೋ ಕಾರಣಕ್ಕೆ ಹೋದವರ್ಷ, ಐದು ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ಮಾಹಿತಿ ಕೇಳಿದ್ದರು. ನಮ್ಮ ಕಾಲೇಜಿನ ಒಟ್ಟು ಐನೂರ ನಲವತ್ನಾಲ್ಕು ವಿದ್ಯಾರ್ಥಿಗಳಲ್ಲಿ ಬ್ರಾಹ್ಮಣ ಮತ್ತು ಜೈನ ಸಮುದಾಯದ ಒಬ್ಬರೂ ವಿದ್ಯಾರ್ಥಿ ಇರಲೇ ಇಲ್ಲ. ಸಾಮಾಜಿಕ ಸ್ಥಾನಮಾನ ಮತ್ತು ಶಾಲಾ ಕಾಲೇಜುಗಳ ಆಯ್ಕೆಗೂ ಹತ್ತಿರದ ಸಂಬಂಧ ಇರುತ್ತದೆ. ಕಾಲೇಜಿನಲ್ಲೇ ಹೀಗೆ ಎನ್ನುವುದಾದರೆ, ಶಾಲೆಗಳಲ್ಲಿ ಇದು ಇನ್ನಷ್ಟು ಸ್ಪಷ್ಟ. ಅಂದಮೇಲೆ ಅಲ್ಲಿರುವ ಮಕ್ಕಳಿಂದ, ಪೋಷಕರಿಂದ ಬರದ ‘ಹುಯಿಲು’ ಪೋಷಕರ ಹೆಸರಿನಲ್ಲಿ ಬೇರೆಲ್ಲಿಂದಲೋ ಬರುತ್ತಿದೆ ಎನ್ನುವುದು, ಒಟ್ಟು ಸಮಾಜದಲ್ಲಿ ಬದುಕುತ್ತಿರುವ ಜನ ಸಮೂಹದ ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವೇ ಎಂದು ಪರೀಕ್ಷಿಸುತ್ತಿರುವ, ಹಾಗೆ ಸಾಧ್ಯ ಆದರೆ ಕ್ರಮೇಣ ಅವರ ಇತರೆಲ್ಲಾ ಆಚಾರ ವಿಚಾರಗಳನ್ನು ತಮ್ಮ ಇಷಾರೆಯಿಂದ ನಡೆಯಿಸಲು ಅಧಿಕಾರ ದಕ್ಕಿಸಿಕೊಳ್ಳುವ ಮೆಟ್ಟಿಲಾಗಿ ಬಳಸಲು ಸಿಗುವ ಸಮ್ಮತಿಯನ್ನಾಗಿ ಪರಿವರ್ತಿಸುವ ಸಣ್ಣಸಂಖ್ಯೆಯವರ ಹುನ್ನಾರ ಎನ್ನುವುದು ನಿಸ್ಸಂಶಯ.

ಸರ್ಕಾರಿ ಶಾಲೆಯ ಹುಡುಗಿಯೊಬ್ಬಳು ಸಿಟ್ಟಿನಿಂದ ‘ನಮಗೆ ತತ್ತಿ ಬೇಕೇ ಬೇಕ್ರೀ’ ಎಂದು ಕೇಳಿದ್ದರಲ್ಲಿ ಅವಳ ಹಕ್ಕು ಇದೆ, ರೋದನೆ ಇದೆ. ಆ ತತ್ತಿಯ ಬದಲಿಗೆ ದುಡ್ಡು ಕೊಟ್ಟರೆ ಅದು ತಮ್ಮಪ್ಪನಿಂದ ಹೆಂಡದಂಗಡಿಗೆ ಹೋಗಿ ಬೀಳುತ್ತದೆ ಎಂಬ ಅನುಭವದ ವಾಸ್ತವದ ಸ್ಪರ್ಶ ಇದೆ.

ಅನುಭವದ ಸ್ಪರ್ಶವಿಲ್ಲದ ಯಾರೋ ಹುಟ್ಟುಹಾಕಿದ ಪಡೆನುಡಿಯನ್ನು, ಅನುಭವದ ಗಂಧವಿಲ್ಲದವರು ಆಡಿ, ನಕ್ಕು, ನಾಡಿನ ಹೆಣ್ಣುಮನಗಳ ಆಕ್ರೋಶಕ್ಕೆ ಒಳಗಾದ ಸಂಗತಿಯೂ ನಡೆದುಹೋಯಿತು. ಹೆಣ್ಣನ್ನು ಖಾಸಗಿ ಆಸ್ತಿಯೆಂಬಂತೆ ಪರಿಗಣಿಸಿ ಆಳುವ ಮನಸ್ಸುಗಳು ಅವಳಿಗೆ ಸದಾ ಪಾವಿತ್ರ್ಯದ ಬೇಲಿಯಲ್ಲೇ ಇರುವಂತೆ ಪ್ರತ್ಯಕ್ಷ, ಪರೋಕ್ಷ ಬೋಧನೆ ಮಾಡುತ್ತಲೇ ಇರುತ್ತವೆ. ಆ ಮೂಲಕ ಅವಳ ಮನಸ್ಸನ್ನು ‘ಹದ’ಗೊಳಿಸುತ್ತವೆ. ಎಷ್ಟು ಹದವಾಗಿರುತ್ತದೆ ಮನ ಎಂದರೆ, ಆ ದೇಹದ ಮೇಲೆ ಆಕ್ರಮಣ ಆದರೆ, ಆಕ್ರಮಿಸಿದವನು ಮಾಡಿದ ತಪ್ಪಿಗೆ ತಾನು ಕುದಿ ಕುದಿದು ನಲುಗುತ್ತದೆ. ತಪ್ಪು ಮಾಡಿದ ಅವನಿಗೆ ಶಿಕ್ಷೆಯ ಭಯವಾಗಲೀ ನಲುಗುವ ತಾಪವಾಗಲೀ ಇಲ್ಲವೇ ಇಲ್ಲ. ಯಾಕೆಂದರೆ, ಅವನ ದೇಹ ‘ಪವಿತ್ರ’ ಅಂತ ಯಾರೂ ಆತನಿಗೆ ಪದೇ ಪದೇ ಬೋಧಿಸಿಲ್ಲ!

ಪಾವಿತ್ರ್ಯದ ಕತೆ ಅತ್ತಿರಲಿ, ಆದ ದಾಳಿಯ ಅವಮಾನ, ದೈಹಿಕ ಹಲ್ಲೆಯ ನೋವಿನಿಂದ ನರಳುತ್ತಿರುವವಳು ತಪ್ಪಿಸಿ ಕೊಳ್ಳಲಾಗದಿದ್ದರೆ ‘ಆನಂದಿಸ’ಬೇಕಂತೆ! ಅಲ್ಲಿಗೆ ಅವನಿಗೆ ಪೂರ್ತಿ ಮಾಫಿ! ಎಷ್ಟೊಂದು ಅಸೂಕ್ಷ್ಮವಾಗಿದ್ದೇವಲ್ಲಾ ನಾವು? ಇದು ಕೇವಲ ಅಸೂಕ್ಷ್ಮವೇ? ಅಥವಾ ಇದು ತಮ್ಮದಲ್ಲದ ಹೆಣ್ಣಿನ ಕ್ಷೇತ್ರದ ಮೇಲೆ ಸ್ಥಾಪಿಸಿದ್ದ ಹಕ್ಕಿನ ಮರುಕಳಿಕೆಯೇ? ಎರಡನೆಯದೇ ನಿಜವಾದ್ದು. ಹೆಣ್ಣಿನ ದೇಹದ ಮೇಲಿನ ಹಕ್ಕು ಹೆಣ್ಣಿನದಷ್ಟೇ ಎಂಬುದನ್ನು ಇಂದಿಗೂ ಎಷ್ಟೋ ಜನ ಹೆಣ್ಣುಮಕ್ಕಳೂ ಒಪ್ಪುವುದಿಲ್ಲ. ಅಷ್ಟರಮಟ್ಟಿಗೆ ಅವರಿಂದ ಅದನ್ನು ಅಪಹರಿಸಿ ಅವರನ್ನು ಆಳಲು ಅವರದೇ ಸಮ್ಮತಿ ಪಡೆದಾಗಿದೆ.

ಸಮ್ಮತಿ ಹುಟ್ಟುಹಾಕಿಕೊಳ್ಳುವ ಈ ನಿರಂತರ ನಡೆಗಳ ನಡುವೆಯೇ, ಸ್ವಾಭಿಮಾನದ ಬಿಸುಪು ಕಾಪಿಟ್ಟುಕೊಳ್ಳಬೇಕಾದ ಜನಸಮುದಾಯಗಳು ಮತ್ತೆ ಮತ್ತೆ ಮರವೆಯೆಡೆಗೆ ಚಲಿಸುವುದೂ ನಡೆಯುತ್ತಲೇ ಇರುವುದನ್ನೂ ಗಮನಿಸಿಕೊಳ್ಳಬೇಕಿದೆ. ಎಷ್ಟೆಲ್ಲ ಹೋರಾಟಗಳಿಂದ ಪಡೆದುಕೊಂಡಿದ್ದನ್ನು ಕೆಲವು ತಲೆಮಾರುಗಳ ನಂತರದವರು ಮರೆಯುವಲ್ಲಿ, ಒಳ ವಿಮರ್ಶೆಯ ಕೊರತೆಯು ಕೆಲಸ ಮಾಡುತ್ತಿರುತ್ತದೆ. ಹಿಂದಿನವರ ಹೋರಾಟದ ಫಲವಾಗಿ ಇಂದು ಒಂದು ಹಂತದ ಸವಲತ್ತು ಪಡೆದ ತಲೆಮಾರು, ಶೋಷಕರ ಪರ ಚಿಂತನೆಯೆಡೆಗೆ ವಾಲುತ್ತದೆಯೇ ವಿನಾ ತನ್ನದೇ ಸಮುದಾಯದವರ ಶೋಷಣೆಯೆಡೆಗೆ ಚಿಂತಿತವಾಗುವುದಿಲ್ಲ.

ಆಳುವವರಾಗುವುದಕ್ಕಾಗಿ ಅವರೊಂದಿಗೆ ಗುರುತಿಸಿಕೊಳ್ಳಲು ಹೊಸ ಅಖಾಡ ಬೇಕಿರುತ್ತದೆ. ತನ್ನ ಸಮುದಾಯ ಕೇವಲ ಐಡೆಂಟಿಟಿ ಆಗಿಬಿಡುವ ಸಂಭಾವ್ಯತೆಯೂ ಇರುತ್ತದೆ. ಇಂತಹ ಹೊತ್ತಿನಲ್ಲಿ ಬೇಕಿರುವುದು ಒಳವಿಮರ್ಶೆಯ ಎಚ್ಚರ.

ಈ ತಿಂಗಳು ನಮ್ಮನ್ನಗಲಿದ ಅಮೆರಿಕನ್ ಆಫ್ರಿಕನ್ ಸ್ತ್ರೀವಾದಿ ಬೆಲ್ ಹುಕ್ಸ್, ಸ್ತ್ರೀವಾದಕ್ಕೆ ಒಳವಿಮರ್ಶೆಯ ವಿಸ್ತಾರವನ್ನು ನೀಡಿದವರು. ಲೈಂಗಿಕತಾವಾದ, ಶೋಷಣೆ, ದಮನಗಳನ್ನು ಕೊನೆಗಾಣಿಸುವ ಚಳವಳಿಯೇ ಸ್ತ್ರೀವಾದವಾಗಿದ್ದು, ಸ್ತ್ರೀ, ಪುರುಷರೆಲ್ಲರೂ ಇದರಲ್ಲಿ ಭಾಗಿಗಳಾದಾಗ ಇಬ್ಬರೂ ಪಡೆವ ಬಿಡುಗಡೆಯನ್ನು ಪ್ರೀತಿಯಿಂದ ಪ್ರತಿಪಾದಿಸಿದವರು. ಆದರೆ, ಪುರುಷನಿರುವ ಜಾಗದಲ್ಲೆಲ್ಲಾ ಸ್ತ್ರೀ ಹೋಗಿ ಕುಳಿತುಕೊಂಡ ತಕ್ಷಣ ಆಕೆಯ ಬಿಡುಗಡೆ ಆಗಿಬಿಡುತ್ತದೆ ಎಂಬ ತಪ್ಪು ಅರ್ಥೈಸುವಿಕೆಯನ್ನು ಸ್ತ್ರೀವಾದದ ಕುರಿತಾಗಿ ಪ್ರಚುರಪಡಿಸುವುದು ನಡೆಯುತ್ತಿರುತ್ತದೆ. ಹೋರಾಟವು ಒಂದು ಹಂತ ತಲುಪಿದಾಗ ಅದು ನೀಡುವ ಸವಲತ್ತಿನಿಂದ ತೃಪ್ತರಾದ ಮೇಲ್ವರ್ಗದ ಮಹಿಳೆಯರು ಇದನ್ನು ಅವಕಾಶವಾಗಿ ಮಾತ್ರ ನೋಡುತ್ತಾ, ಲಿಂಗ ತರತಮವಾದೀ ಧೋರಣೆಯುಳ್ಳವರನ್ನೇ ಬೆಂಬಲಿಸ ತೊಡಗುವ ಅಪಾಯ ಹುಟ್ಟಿಕೊಳ್ಳುತ್ತದೆ. ಇದೆಲ್ಲವನ್ನೂ ಗಮನಕ್ಕೆ ತಂದು, ಬಿಳಿಯ ಸ್ತ್ರೀವಾದಿಗಳು ಕರಿಯ ಸ್ತ್ರೀವಾದಿಗಳನ್ನು ಒಳಗೊಳ್ಳದಿರುವ ವಿದ್ಯಮಾನ ವನ್ನು ಗುರುತಿಸಿ ಪರಸ್ಪರ ಕೈಹಿಡಿದು ನಡೆಯುವುದಕ್ಕೆ ಕಾರಣರಾದವರು ಈಕೆ. ಶೋಷಕರನ್ನು ದ್ವೇಷಿಸದೆಯೇ, ಅವರೊಳಗಣ ಸಮಸ್ಯೆಯನ್ನು ತಿದ್ದಿ ಕೈನೀಡುವ ಈ ದೃಷ್ಟಿಗೆ ಹಂಚಿ ಉಣ್ಣುವ ಜನಪದ ವಿವೇಕವಿದೆ. ಇದು ಮನಸ್ಸನ್ನು ಬೆಳಗಿಸುವ ನಡೆ.

ಪಳಗಿಸುವವರ ನಡುವೆ ಬೆಳಗಿಸುವವರೂ ಇರುವುದೇ ಬದುಕಿನೆಡೆಗೊಂದು ಆಶಾವಾದಿತನವನ್ನು ಹುಟ್ಟಿಸುತ್ತದೆ.

ಲೇಖಕಿ: ಪ್ರಾಧ್ಯಾಪಕಿ,
ಸರ್ಕಾರಿ ಪ್ರಥಮದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT