ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಅಪಾಯಕಾರಿ ದ್ಯೂತ, ಜಾಗೃತ ಭಾರತ

ಅಫ್ಗನ್‌ ವಿಷಯದಲ್ಲಿ ಅಮೆರಿಕ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದಂತೆ ಕಾಣುತ್ತಿದೆ
Last Updated 31 ಆಗಸ್ಟ್ 2021, 19:32 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದ ವಿಷಯದಲ್ಲಿ ಅಮೆರಿಕ ಎಲ್ಲಿಂದ ಹೊರಟಿತ್ತೋ ಇಪ್ಪತ್ತು ವರ್ಷಗಳ ಬಳಿಕ ಅದೇ ಜಾಗಕ್ಕೆ ಬಂದು ನಿಂತಿದೆ. 9/11 ಘಟನೆ ನಡೆದಾಗ ಅಮೆರಿಕದ ಅಂದಿನ ಅಧ್ಯಕ್ಷ ಬುಷ್ ಜೂನಿಯರ್ ‘ಇದಕ್ಕೆ ಕಾರಣರಾದವರು ಎಲ್ಲಿದ್ದರೂ ಬಿಡುವುದಿಲ್ಲ’ ಎಂದು ಆರ್ಭಟಿಸಿದ್ದರು. ‘ಭಯೋತ್ಪಾದನೆಯ ವಿರುದ್ಧ ಸಮರ’ ಸಾರಿ ಸೇನೆಯನ್ನು ಅಫ್ಗಾನಿಸ್ತಾನಕ್ಕೆ ನುಗ್ಗಿಸಿದ್ದರು.

ಇದೀಗ ಅಫ್ಗಾನಿಸ್ತಾನದ ಸಹವಾಸ ಸಾಕು ಎಂದು ಅಲ್ಲಿಂದ ಕಾಲ್ತೆಗೆಯುವಾಗಲೂ ಅಮೆರಿಕದ ಯೋಧರ ಮೇಲೆ ದಾಳಿಯಾಯಿತು. ಅಧ್ಯಕ್ಷ ಜೋ ಬೈಡನ್ ‘ಇದಕ್ಕೆ ಕಾರಣರಾದವರು ಎಲ್ಲಿದ್ದರೂ ಬಿಡುವುದಿಲ್ಲ’ ಎಂಬ ಅದೇ ಮಾತನ್ನು ಆಡಿದರು. ಮರುದಿನ ಪ್ರತಿದಾಳಿ ನಡೆಯಿತು. ಆದರೆ ಅಂದಿಗೂ ಇಂದಿಗೂ ಇರುವ ವ್ಯತ್ಯಾಸ ವೆಂದರೆ, ಇದೀಗ ಹಿರಿಯಣ್ಣನ ಮೀಸೆಗೆ ಮಣ್ಣು ಮೆತ್ತಿದೆ. ಮುಯ್ಯಿ ತೀರಿಸಿಕೊಳ್ಳಲು ಸಮರ ಸಾರಿದ್ದ ಅಮೆರಿಕ, ಹತಾಶೆ ನುಂಗಿಕೊಂಡು ವಾಪಸ್‌ ನಡೆದಿದೆ.

ತಾಲಿಬಾನೀಯರು ಕಾಬೂಲ್ ವಶಪಡಿಸಿಕೊಂಡಾಗ ‘ಇದೆಲ್ಲವೂ ಇಷ್ಟು ತ್ವರಿತವಾಗಿ ಆಗುತ್ತವೆ ಎಂಬ ನಿರೀಕ್ಷೆ ಇರಲಿಲ್ಲ’ ಎಂದು ಅಮೆರಿಕ ಪ್ರತಿಕ್ರಿಯಿಸಿತ್ತು. ಇಪ್ಪತ್ತು ವರ್ಷಗಳ ಕಾಲ ಅಫ್ಗಾನಿಸ್ತಾನದಲ್ಲಿದ್ದು, ತಾಲಿಬಾನ್ ಮುರುಟಿ ಅರಳಿದ್ದನ್ನು ಹತ್ತಿರದಿಂದ ಕಂಡಿದ್ದ, ಸಶಕ್ತ ಗುಪ್ತಚರ ಜಾಲ ಹೊಂದಿರುವ ಅಮೆರಿಕ, ‘ಇದು ಅನಿರೀಕ್ಷಿತ’ ಎಂದರೆ ನಂಬಬಹುದೇ? ಜಗತ್ತನ್ನು ನಂಬಿಸಲು ಅದು ಬೇಕಾದ್ದು ಹೇಳಬಹುದು, ಆಘಾತವಾದಂತೆ ನಟಿಸಬಹುದು, ಆದರೆ ಈ ಇಪ್ಪತ್ತು ವರ್ಷಗಳಲ್ಲಿ ಅಮೆರಿಕ ನಡೆದುಕೊಂಡ ರೀತಿಯನ್ನು ಒಟ್ಟಾರೆಯಾಗಿ ಗಮನಿಸಿದರೆ, ಅಮೆರಿಕದ ಸ್ವಯಂಕೃತ ಅಪರಾಧ ಎದ್ದು ತೋರುತ್ತದೆ.

ಹಾಗಾದರೆ, ಅಮೆರಿಕ ಎಡವಿದ್ದೆಲ್ಲಿ? ಸೋವಿಯತ್ ವಿರುದ್ಧದ ಶೀತಲ ಸಮರದಲ್ಲಿ ಪಾಕಿಸ್ತಾನಕ್ಕೆ ಆತುಕೊಂಡಿದ್ದ ಅಮೆರಿಕ, ‘ಭಯೋತ್ಪಾದನೆಯ ನಿಗ್ರಹಕ್ಕೂ’ ಪಾಕಿಸ್ತಾನವನ್ನೇ ನೆಚ್ಚಿಕೊಂಡಿತು. ಅಫ್ಗಾನಿಸ್ತಾನವೆಂಬ ಹಿತ್ತಲಿನಲ್ಲಿ ಭಯೋತ್ಪಾದಕರನ್ನಷ್ಟೇ ಬೆಳೆಯುತ್ತಿದ್ದ ಪಾಕಿಸ್ತಾನ, ಅಮೆರಿಕದ ಬಗಲಿಗೆ ನಿಂತು ಆರ್ಥಿಕವಾಗಿ ಪುಷ್ಟಿ ಹೊಂದಿತು. 90ರ ದಶಕದಲ್ಲಿ ತಾಲಿಬಾನ್ ಜನ್ಮತಳೆದಾಗ ನೀರೆರೆದು ಗೊಬ್ಬರ ಉಣಿಸಿತು. ಷರಿಯಾ ಕಾನೂನಿನ ಹೆಸರಿನಲ್ಲಿ ತಾಲಿಬಾನ್ ಮನಬಂದಂತೆ ವರ್ತಿಸಿದಾಗ, ಪ್ರಜಾಪ್ರಭುತ್ವದ ಮೌಲ್ಯಗಳು, ಮಾನವ ಹಕ್ಕುಗಳು ಎಂದು ಭಾಷಣ ಮಾಡುವ ಅಮೆರಿಕ ತುಟಿ ಬಿಚ್ಚಿರಲಿಲ್ಲ. ಅಮೆರಿಕಕ್ಕೆ ಎಚ್ಚರವಾದದ್ದು ತನ್ನ ಮೇಲೆ 9/11 ದಾಳಿಯಾದಾಗಲೇ!

ಅಫ್ಗಾನಿಸ್ತಾನ ಅಸ್ಥಿರವಾಗಿದ್ದಷ್ಟು ದಿನ ಡಾಲರ್ ಹರಿವು ನಿಲ್ಲುವುದಿಲ್ಲ ಎಂದು ಅರಿತಿದ್ದ ಪಾಕಿಸ್ತಾನ, ತಾಲಿಬಾನಿಗೆ ಶಕ್ತಿ ತುಂಬುವ ಕೆಲಸ ಮಾಡಿತು. ಅಮೆರಿಕದ ಮುಖಭಂಗ ಅಪೇಕ್ಷಿಸುತ್ತಿದ್ದ ರಷ್ಯಾ ಮತ್ತು ಚೀನಾ ಪಾಕಿಸ್ತಾನದ ಭುಜ ತಟ್ಟಿದವು.

ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅಮೆರಿಕವು ಅಫ್ಗನ್ ರಾಷ್ಟ್ರೀಯ ಸೇನೆಯನ್ನು ಕಟ್ಟಿತಾದರೂ, ಹೋರಾಟದ ಮನೋಭಾವ ಆ ಸೇನೆಯಲ್ಲಿ ಮೊಳೆಯಲಿಲ್ಲ. ಯುದ್ಧದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ, ಎಷ್ಟು ಬಂದೂಕುಗಳು ಬಳಕೆಯಾಗಿವೆ ಎಂಬುದರಿಂದ ನಿರ್ಧಾರವಾಗುವುದಿಲ್ಲ. ಬಂದೂಕು ಹಿಡಿದ ವ್ಯಕ್ತಿ, ಆತನ ಆಂತರ್ಯ ಮತ್ತು ಆತ್ಮಸ್ಥೈರ್ಯ ಮುಖ್ಯವಾಗುತ್ತವೆ. ಆಧುನಿಕ ಶಸ್ತ್ರಾಸ್ತ್ರ ಮತ್ತು ತರಬೇತಿ ಇದ್ದರೂ ಅಫ್ಗನ್ ರಕ್ಷಣಾ ಪಡೆ ಕಾದಾಡುವ ಇಂಗಿತವನ್ನೇ ತೋರಲಿಲ್ಲ. ತಾಲಿಬಾನೀಯರಲ್ಲಿ ಮತೀಯ ನಂಬಿಕೆಗಳು ಗಟ್ಟಿಯಾಗಿದ್ದವು, ಅಫ್ಗನ್ ರಕ್ಷಣಾ ಪಡೆ ಕೇವಲ ಹಣಕ್ಕೆ ಬಂದೂಕು ಹಿಡಿದಿತ್ತು.

ಇನ್ನು, ಕಾಬೂಲ್ ತಾಲಿಬಾನ್‌ನ ವಶವಾಗುತ್ತಲೇ ಬಂದ ಪ್ರತಿಕ್ರಿಯೆಗಳನ್ನೇ ನೋಡಿ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ‘ಅಫ್ಗಾನಿಸ್ತಾನ ದಾಸ್ಯದಿಂದ ಮುಕ್ತವಾಗಿದೆ’ ಎಂದು ಪ್ರತಿಕ್ರಿಯಿಸಿದರೆ, ‘ತಾಲಿಬಾನ್ ಕೈಗಳಲ್ಲಿ ಅಫ್ಗಾನಿಸ್ತಾನ ಸುರಕ್ಷಿತವಾಗಿದೆ’ ಎಂದು ರಷ್ಯಾ ಹೇಳಿತು. ಮೂರು ತಿಂಗಳ ಮೊದಲೇ ತಾಲಿಬಾನ್ ಜೊತೆ ಚೀನಾ ಮಾತುಕತೆಗೆ ಕುಳಿತಿತ್ತು. ತಾಲಿಬಾನೀಯರನ್ನು ಕೈಗೊಂಬೆಯಾಗಿಯೇ ಇರಿಸಿಕೊಳ್ಳುವುದು ಪಾಕಿಸ್ತಾನದ ತುಡಿತವಾದರೆ, ಯುರೇಷಿಯಾದಲ್ಲಿ ಪ್ರಾಬಲ್ಯ ಕಾಯ್ದುಕೊಳ್ಳುವುದು ರಷ್ಯಾದ ಹವಣಿಕೆ. ವಾಣಿಜ್ಯಿಕವಾಗಿ ಇರಾನ್‌ವರೆಗೆ ಬಾಹು ಚಾಚುವುದು ಚೀನಾದ ವಾಂಛೆ.

ಹಾಗಂತ, ಇದಾವುದೂ ಅಮೆರಿಕಕ್ಕೆ ತಿಳಿದಿರಲಿ ಲ್ಲವೇ? ಸ್ವಹಿತಾಸಕ್ತಿ ಇಲ್ಲದಿದ್ದರೆ ಅಮೆರಿಕ ಒಂದು ಹುಲ್ಲುಕಡ್ಡಿಯನ್ನೂ ಆಚೀಚೆ ಸರಿಸುವುದಿಲ್ಲ. ಅದು ಈ 20 ವರ್ಷಗಳಲ್ಲಿ ಕಂಡುಕೊಂಡ ಸತ್ಯ ಎಂದರೆ, ಅಫ್ಗನ್‌ ವಿಷಯದಲ್ಲಿ ಸೇನೆಯ ಮೂಲಕ ಪರಿಹಾರ ಸಾಧ್ಯವಿಲ್ಲ ಎಂಬುದು. ಹಾಗಾಗಿಯೇ ಇದೀಗ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದಂತೆ ಕಾಣುತ್ತಿದೆ. ಅಫ್ಗನ್‌ನಲ್ಲಿ ನೆಲೆ ಹೊಂದಿರುವ ಸ್ಥಾಪಿತ ಉಗ್ರ ಸಂಘಟನೆಗಳಿಗಿಂತ ತಾಲಿಬಾನ್ ಕಡಿಮೆ ಅಪಾಯಕಾರಿ ಎಂದು ಭಾವಿಸಿದೆ. ಪಾಕಿಸ್ತಾನವನ್ನು ಸಾಕುವ ಬದಲು ತಾಲಿಬಾನೀಯರನ್ನು ಬಳಸಿ ವೈರಿಗಳನ್ನು ಸದೆಬಡಿಯುವ ಉಪಾಯ ಹೂಡಿದೆ. ಆದ್ದರಿಂದಲೇ ಅಫ್ಗನ್ ಸರ್ಕಾರ ಮತ್ತು ರಕ್ಷಣಾ ಪಡೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದ ಅಮೆರಿಕವು ತಾಲಿಬಾನ್ ಜೊತೆ ಒಪ್ಪಂದಕ್ಕೆ ಮುಂದಾಯಿತು. ದೋಹಾದಲ್ಲಿ ಒಪ್ಪಂದವಾದಂತೆ, ಅಮೆರಿಕ– ತಾಲಿಬಾನ್‌ ಸಂಬಂಧದ ಮೂಲಧಾತು ‘ಅಮೆರಿಕ ವಿರುದ್ಧದ’ ಭಯೋತ್ಪಾದನಾ ನಿಗ್ರಹದ ವಿಷಯವೇ ಆಗಲಿದೆ. ಮಿಲಿಟರಿಗೆ ಸಂಬಂಧಿಸಿದ ಮೂಲ ಸೌಕರ್ಯ, ಆಧುನಿಕ ಶಸ್ತ್ರಾಸ್ತ್ರಗಳನ್ನು ತಾಲಿಬಾನ್ ಬತ್ತಳಿಕೆಗೆ ತುಂಬಿದೆ.

ಹಾಗಾದರೆ ತಾಲಿಬಾನ್ ಆಡಳಿತವನ್ನು ಅಮೆರಿಕ ಅನುಮೋದಿಸುತ್ತದೆಯೇ? ‘ತಾಲಿಬಾನ್ ವರ್ತನೆಯನ್ನು ಕಾದು ನೋಡುತ್ತೇವೆ’ ಎಂದು ಅಮೆರಿಕ ಹೇಳುತ್ತಿದೆಯಾದರೂ, ಅಫ್ಗಾನಿಸ್ತಾನದ ವಿಷಯ ನಿರ್ವಹಿಸಲು ದೋಹಾದಲ್ಲಿ ದೂತಾವಾಸ ಕಚೇರಿ ತೆರೆದಿದೆ. ಸಿಐಎ ಮತ್ತು ತಾಲಿಬಾನ್ ನಡುವೆ ಸಂಪರ್ಕ ಬೆಳೆದಿದೆ. ಉಗ್ರ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ವಿನಿಮಯ ಆರಂಭವಾಗಿದೆ. ಹಖಾನಿ ಜಾಲದ ನಾಯಕರು ತಾಲಿಬಾನ್ ಸರ್ಕಾರದಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂಬುದು ತಿಳಿದೂ ತಾಲಿಬಾನ್ ಮತ್ತು ಹಖಾನಿ ಜಾಲ ಬೇರೆ ಬೇರೆ ಎಂದು ಅಮೆರಿಕ ಮಾತು ಬದಲಿಸಿದೆ.

ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ, ಕಾಬೂಲ್ ದಾಳಿಯನ್ನೇ ನೆಪವಾಗಿಸಿಕೊಂಡು, ‘ಭಯೋತ್ಪಾದನೆಯ ವಿರುದ್ಧ ಸಮರ ನಿರಂತರ’ ಎಂದು ಅಮೆರಿಕವು ಅಫ್ಗಾನಿಸ್ತಾನದಲ್ಲಿ ರಾಯಭಾರ ಕಚೇರಿ ತೆರೆದರೆ ಅಚ್ಚರಿಯೇನಲ್ಲ. ಜಾಗತಿಕ ಮಾನ್ಯತೆ, ಹಣಕಾಸಿನ ನೆರವು ಅಗತ್ಯವಿರುವುದರಿಂದ ತಾಲಿಬಾನ್ ಕೂಡ ಅಮೆರಿಕದ ವಿರೋಧವನ್ನು ಸದ್ಯಕ್ಕೆ ಕಟ್ಟಿಕೊಳ್ಳಲಾರದು. ಸಮಸ್ಯೆಯೆಂದರೆ, ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ನಿರ್ವಹಿಸುವುದು ತಾಲಿಬಾನೀಯರಿಗೆ ಸುಲಭವಲ್ಲ. ಅಫ್ಗಾನಿಸ್ತಾನ ಎಂದರೆ ಕೇವಲ ತಾಲಿಬಾನ್ ಅಲ್ಲ ಎಂಬುದು ಕಾಬೂಲ್ ಸ್ಫೋಟದಿಂದ ಜಾಹೀರಾಗಿದೆ. ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತಾಲಿಬಾನ್ ಅಧಿಕಾರ ಹಂಚಿಕೆಯ ಮಾರ್ಗ ಹಿಡಿಯಬಹುದು. ಅದಾಗದಿದ್ದರೆ ಅಫ್ಗನ್‌ ಅಂತರ್ಯುದ್ಧದ ಅಂಗಳವಾಗುತ್ತದೆ. ಅಲ್ಲಿನ ಅಸ್ಥಿರತೆ, ಐಎಸ್ ಉಗ್ರರಿಗೆ ಜಾಗ ಒದಗಿಸುತ್ತದೆ. ಆ ಪರಿಸ್ಥಿತಿಯಲ್ಲಿ ಅಮೆರಿಕ ಅತ್ತ ಮುಖ ಹಾಕುವುದಿಲ್ಲ. ರಷ್ಯಾ ಮತ್ತು ಚೀನಾಕ್ಕೂ ಅಲ್ಲಿ ಅಸ್ಥಿರತೆ ಬೇಕಿಲ್ಲ. ಹಾಗಾಗಿ ತಾಲಿಬಾನ್ ವಿರೋಧಿಗಳಿಗೆ ಹೆಚ್ಚಿನ ಬಾಹ್ಯ ಪ್ರಚೋದನೆ ಸಿಗಲಾರದು.

ಈ ಎಲ್ಲಾ ಅಂಶಗಳನ್ನು ಗಮನಿಸಿ ಭಾರತ ತನ್ನ ಕಾಯಿಯನ್ನು ನಡೆಸುವುದು, ತಾಲಿಬಾನ್ ಜೊತೆ ಮಾತುಕತೆಗೆ ತೆರೆದುಕೊಳ್ಳುವುದು ಅನಿವಾರ್ಯ. ನಮ್ಮ ಹೂಡಿಕೆಗಳು ಒತ್ತಟ್ಟಿಗಿರಲಿ, ತಾಲಿಬಾನ್ ಸಂಪೂರ್ಣವಾಗಿ ಚೀನಾ ಮತ್ತು ಪಾಕಿಸ್ತಾನದ ಕೈಗೊಂಬೆ ಯಾಗುವುದನ್ನಾದರೂ ತಡೆಯಬೇಕಿದೆ.

–ಸುಧೀಂದ್ರ ಬುಧ್ಯ
–ಸುಧೀಂದ್ರ ಬುಧ್ಯ

ಒಟ್ಟಿನಲ್ಲಿ, ಚೀನಾದಿಂದ ಪಸರಿಸಿದ ಕೊರೊನಾ ವೈರಾಣುವಿನಂತೆ, ಭಯೋತ್ಪಾದನೆ ಎಂಬ ಸೋಂಕು ಪಾಕಿಸ್ತಾನದಲ್ಲಿ ಮೊಳೆತು ಜಗತ್ತನ್ನು ಆವರಿಸಿದೆ. ಕೊರೊನಾದ ರೂಪಾಂತರಿ ತಳಿಗಳಂತೆಯೇ ಅಲ್‌ಕೈದಾ, ಎಲ್ಇಟಿ, ಜೆಇಎಂ, ತಾಲಿಬಾನ್, ಐಎಸ್‌ನಂತಹ ಹತ್ತಾರು ತಳಿಗಳು ಹುಟ್ಟಿಕೊಂಡಿವೆ. ಕೊರೊನಾ ಸೋಂಕಿಗೆ ಪ್ರತಿಯಾಗಿ ಜಗತ್ತು ಲಸಿಕೆ ಕಂಡುಕೊಂಡಿದೆ, ಕಾಲ ಸರಿದಂತೆ ಸಮುದಾಯ ಪ್ರತಿರೋಧ ಬರಲಿದೆ, ವೈರಾಣು ನಿಸ್ತೇಜವಾಗಲಿದೆ ಎಂಬ ಆಶಾಭಾವವಿದೆ. ಆದರೆ ಜಿಹಾದಿ ಮನಃಸ್ಥಿತಿಗೆ ಮದ್ದು ಮರೀಚಿಕೆಯಾಗಿದೆ. ಕುಶಲ ರಾಜತಾಂತ್ರಿಕತೆಯಿಂದಷ್ಟೇ ಅಪಾಯವನ್ನು ದೂರ ಇಡಬಹುದು.

ಅಫ್ಗಾನಿಸ್ತಾನದಲ್ಲಿ ಆಗುತ್ತಿರುವ ಸದ್ಯದ ಬೆಳವಣಿಗೆ ಗಳು ಅಪಾಯಕಾರಿ ದ್ಯೂತದಂತೆ ಕಾಣುತ್ತಿವೆ. ಅಮೆರಿಕದ ಲೆಕ್ಕಾಚಾರ ಕೊಂಚ ಆಯತಪ್ಪಿದರೂ 9/11ಗಿಂತ ದೊಡ್ಡ ಮಟ್ಟದ ಅವಘಡಕ್ಕೆ ಜಗತ್ತು ಸಾಕ್ಷಿಯಾಗಬಹುದು. ಆ ಎಚ್ಚರ ನಮ್ಮನ್ನು ಜಾಗೃತವಾಗಿ ಇಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT