ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆತನ್ಯಾಹು: ಇಸ್ರೇಲ್ ಗೆದ್ದ ಚೌಕೀದಾರ್

‘ಬೀಬಿ’ ಪುನರಾಯ್ಕೆಯು ಭಾರತ– ಇಸ್ರೇಲ್ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಬಹುದು
Last Updated 1 ಮೇ 2019, 20:00 IST
ಅಕ್ಷರ ಗಾತ್ರ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಂದು ದಾಖಲೆ ಬರೆದಿದ್ದಾರೆ. ಇಸ್ರೇಲ್ ಸಂಸತ್ತಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನೆತನ್ಯಾಹು ನೇತೃತ್ವದ ಬಲಪಂಥೀಯ ಪಕ್ಷಗಳ ಒಕ್ಕೂಟ ಹೆಚ್ಚು ಸ್ಥಾನ ಗಳಿಸಿದೆ. ನೆತನ್ಯಾಹು (ಬೀಬಿ) ಐದನೇ ಬಾರಿಗೆ ಇಸ್ರೇಲಿನ ಪ್ರಧಾನಿಯಾಗಲಿದ್ದಾರೆ ಮತ್ತು ಇಸ್ರೇಲ್ ಸ್ಥಾಪಕ ಪ್ರಧಾನಿ ಡೇವಿಡ್ ಬೆನ್ಗುರಿಯನ್ ಅವರ ನಾಲ್ಕು ಅವಧಿಯ ದಾಖಲೆ ಮುರಿಯಲಿದ್ದಾರೆ. 1996ರಲ್ಲಿ ಮೊದಲ ಬಾರಿಗೆ ನೆತನ್ಯಾಹು ಇಸ್ರೇಲಿನ ಪ್ರಧಾನಿಯಾದಾಗ, ಅತಿ ಕಿರಿ ವಯಸ್ಸಿನ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದಾಗಿತ್ತು. ಇಸ್ರೇಲ್ ಕಂಡ ಓರ್ವ ಅನನುಭವಿ ಪ್ರಧಾನಿ ಎಂದೂ ಆಗ ರಾಜಕೀಯ ವಿಶ್ಲೇಷಕರು ಕರೆದಿದ್ದರು.

ನೆತನ್ಯಾಹು ರಾಜಕೀಯ ಪ್ರವೇಶಿಸಿದ ಮೇಲೆ ಅವರಿಗೆ ಏಣಿಗಳೇ ಹೆಚ್ಚು ದೊರೆತವು. ಇಸ್ರೇಲಿನ ಟೆಲ್ ಅವೀವ್‌ನಲ್ಲಿ ನೆತನ್ಯಾಹು ಜನಿಸಿದರೂ, ಅವರ ಕುಟುಂಬ 1963ರ ಹೊತ್ತಿಗೆ ಅಮೆರಿಕಕ್ಕೆ ವಲಸೆ ಹೋಗಬೇಕಾಯಿತು. ತಮ್ಮ 18ನೆಯ ವಯಸ್ಸಿನಲ್ಲಿ ಬೀಬಿ ಇಸ್ರೇಲಿಗೆ ಮರಳಿದರು. ಐದು ವರ್ಷ ಸೇನೆಯಲ್ಲಿದ್ದರು. 73ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಭಾಗವಹಿಸಿದರು. 76ರಲ್ಲಿ ನೆತನ್ಯಾಹು ಸಹೋದರ ಜೊನಾಥನ್, ಇಸ್ರೇಲ್ ಸೇನಾಪಡೆಯು ಉಗಾಂಡದ ಎಂಟೆಬೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಪ್ರಾಣಾರ್ಪಣೆ ಮಾಡಿದ್ದರು. ಇದರಿಂದಾಗಿ ಜೊನಾಥನ್ ಹೆಸರು ಮನೆಮಾತಾಯಿತು. ಬೀಬಿ ತಮ್ಮ ಸಹೋದರನ ಹೆಸರಿನಲ್ಲಿ ಉಗ್ರನಿಗ್ರಹ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಇಸ್ರೇಲ್ ಹಿತಾಸಕ್ತಿಯನ್ನು ಅಮೆರಿಕದಲ್ಲಿ ಪ್ರತಿಪಾದಿಸುವ ನಾಯಕನಾಗಿ ಹೊರಹೊಮ್ಮಿದರು. ಅಮೆರಿಕದಲ್ಲಿ ಪಡೆದ ವಿದ್ಯಾಭ್ಯಾಸ, ಸೇನಾ ಹಿನ್ನೆಲೆಯು ನೆತನ್ಯಾಹು ಅವರ ಸಹಾಯಕ್ಕೆ ಬಂತು. ಅಮೆರಿಕದ ಆ್ಯಕ್ಸೆಂಟ್‌ನಲ್ಲಿ ಇಂಗ್ಲಿಷ್ ಮಾತನಾಡಬಲ್ಲ ಸಾಮರ್ಥ್ಯ ಅವರಿಗೆ ಆಯಕಟ್ಟಿನ ಹಲವು ಹುದ್ದೆಗಳು ದೊರೆಯುವುದಕ್ಕೆ ಕಾರಣವಾಯಿತು. ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ಕಾಯಂ ಪ್ರತಿನಿಧಿಯಾಗಿ ನೆತನ್ಯಾಹು 1984ರಲ್ಲಿ ನೇಮಕವಾದರು.

ಇಂಗ್ಲಿಷ್ ಮತ್ತು ಹಿಬ್ರೂ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಬೀಬಿ, 1988ರ ನಂತರ ಇಸ್ರೇಲಿನ ಸ್ಥಳೀಯ ರಾಜಕೀಯದಲ್ಲಿ ತೊಡಗಿಸಿಕೊಂಡರು. ಸಂಸತ್ತಿಗೆ ಆಯ್ಕೆಯಾದರು. ಲಿಕುಡ್ ಪಕ್ಷದ ಮಧ್ಯಮ ಮತ್ತು ಎಡಪಂಥೀಯ ನಾಯಕರು 1992ರ ಚುನಾವಣೆ ಬಳಿಕಬದಿಗೆ ಸರಿದ ಮೇಲೆ ನೆತನ್ಯಾಹು, ಲಿಕುಡ್ ಪಕ್ಷದ ನೇತೃತ್ವ ವಹಿಸಿಕೊಂಡರು. 1996ರಲ್ಲಿ ಪ್ರಧಾನಿಯಾದರು. ಮಿತ್ರಪಕ್ಷಗಳನ್ನು ಸಂಭಾಳಿಸುವುದರಲ್ಲೇ ಹೆಚ್ಚು ಸಮಯ ಹೋಯಿತು. ಅವಧಿಗೆ ಮುನ್ನವೇ ಚುನಾವಣೆ ಘೋಷಿಸಿ ಪರಾಭವಗೊಂಡರು. 2001ರ ಚುನಾವಣೆಯಲ್ಲಿ ಏರಿಯಲ್ ಶೆರಾನ್ ಅವರು ಲಿಕುಡ್ ಪಕ್ಷದ ನೇತೃತ್ವವಹಿಸಿ ಪ್ರಧಾನಿಯಾದಾಗ, ನೆತನ್ಯಾಹು ರಾಜಕೀಯ
ವಾಗಿ ತೆರೆಮರೆಗೆ ಸರಿದಂತೆ ಎಂದೇ ಭಾವಿಸಲಾಗಿತ್ತು. ಆದರೆ ಶೆರಾನ್ ಸಂಪುಟದಲ್ಲಿ ಬೀಬಿ ವಿದೇಶಾಂಗ ಮಂತ್ರಿ
ಯಾದರು. ಶೆರಾನ್ ಆಡಳಿತವು ಗಾಜಾಪಟ್ಟಿಯಿಂದ ಇಸ್ರೇಲ್ ಸೇನೆಯನ್ನು ಹಿಂಪಡೆದಾಗ, ಅದನ್ನು ವಿರೋಧಿಸಿ ರಾಜೀನಾಮೆ ಇತ್ತರು. ನಂತರ ತೀವ್ರ ರಾಷ್ಟ್ರೀಯವಾದದ ಪ್ರತಿಪಾದಕರಾಗಿ ಗುರುತಿಸಿಕೊಂಡರು. ಈ ಹೊರಳುವಿಕೆ ನೆತನ್ಯಾಹುರನ್ನು 2009ರಲ್ಲಿ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ಕೂರುವಂತೆ ಮಾಡಿತು.

ಬೀಬಿ ತಮ್ಮ ರಾಜಕೀಯ ಜಾಣ್ಮೆಯಿಂದ ಅಧಿಕಾರವನ್ನು ಸತತವಾಗಿ ಕಾಯ್ದುಕೊಂಡರು. ತಮ್ಮ ಬಳಿಯೇ ರಕ್ಷಣೆ, ವಿದೇಶಾಂಗ ಮತ್ತು ಆರೋಗ್ಯ ಖಾತೆಗಳನ್ನು ಇಟ್ಟುಕೊಂಡರು. ಇಸ್ರೇಲ್ ದೇಶದ ಮುಖ್ಯ ರಾಜಕೀಯ ಧೋರಣೆ ಸೇನೆ ಮತ್ತು ಭದ್ರತಾ ವಿಷಯಕ್ಕೆ ಸಂಬಂಧಿಸಿದ್ದಾಗಿರುತ್ತದೆ. ನೆತನ್ಯಾಹು ತಮ್ಮನ್ನು ‘Mr ಸೆಕ್ಯುರಿಟಿ’ (ಚೌಕೀದಾರ್) ಎಂದು ಕರೆಯುವಷ್ಟರ ಮಟ್ಟಿಗೆ ಭದ್ರತೆಯ ವಿಷಯವಾಗಿ ಮಾತನಾಡಿದರು. ಆರ್ಥಿಕವಾಗಿ, ಸಾಮರಿಕವಾಗಿ ಮತ್ತು ತಂತ್ರಜ್ಞಾನದಲ್ಲಿ ಇಸ್ರೇಲ್ ಶಕ್ತವಾಗಿದ್ದರೆ ಮಾತ್ರ ಜಗತ್ತು ಇಸ್ರೇಲ್ ಹಿತಾಸಕ್ತಿಗೆ ಪೂರಕವಾಗಿ ಪ್ರತಿಸ್ಪಂದಿಸಲಿದೆ ಎಂಬುದನ್ನು ನೆತನ್ಯಾಹು ಪ್ರತಿಪಾದಿಸಿದರು. ಪ್ರತೀ ಚುನಾವಣೆಯ ಸಂದರ್ಭದಲ್ಲೂ ಭದ್ರತಾ ವಿಷಯ ಮುನ್ನೆಲೆಗೆ ಬರುವಂತೆ ನೋಡಿಕೊಂಡರು. 2012ರ ಚುನಾವಣೆಯ ಹೊಸ್ತಿಲಲ್ಲಿ ಇಸ್ರೇಲ್, ಗಾಜಾಪಟ್ಟಿಯ ಭಾಗದಲ್ಲಿ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಇದು ಸೇನೆಯ ಸಾಮರ್ಥ್ಯ ಪ್ರದರ್ಶನ ಮಾತ್ರ ಆಗದೆ ರಾಜಕೀಯವಾಗಿ ನೆತನ್ಯಾಹು ನೆರವಿಗೆ ಬಂತು. 2015ರ ಚುನಾವಣೆಯಲ್ಲಿ ನೆತನ್ಯಾಹು ‘ಅರಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡುತ್ತಿದ್ದಾರೆ’ ಎಂದು ಯಹೂದಿಗಳನ್ನು ಮತಗಟ್ಟೆಗೆ ಹೆಚ್ಚೆಚ್ಚು ತರುವ ಪ್ರಯತ್ನ ಮಾಡಿದರು. ಗೆಲುವು ಸುಲಭವಾಯಿತು.

ತಮ್ಮ ರಾಜಕೀಯ ಬದುಕಿನ ತೀವ್ರ ಪೈಪೋಟಿಯ ಚುನಾವಣೆಯನ್ನು ನೆತನ್ಯಾಹು ಈ ಬಾರಿ 2019ರಲ್ಲಿ ಎದುರಿಸಿದರು. 2009ರಿಂದ ಸತತವಾಗಿ ಅಧಿಕಾರದಲ್ಲಿರುವ ಲಿಕುಡ್ ಪಕ್ಷ ಈ ಬಾರಿ ಹಿನ್ನಡೆ ಸಾಧಿಸಲಿದೆ ಎಂದು ಸಮೀಕ್ಷೆಗಳು ಷರಾ ಬರೆದಿದ್ದವು. ನೆತನ್ಯಾಹು ಬೆನ್ನಿಗೆ ಬಿದ್ದ ಭ್ರಷ್ಟಾಚಾರದ ಆರೋಪ ಚುನಾವಣೆಯ ಪ್ರಮುಖ ವಿಷಯವಾಯಿತು. ನೆತನ್ಯಾಹು ಅವಧಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಮೂವರು ಸೇನಾ ಅಧಿಕಾರಿಗಳು ಸೇನೆಯಿಂದ ಹೊರಬಂದು, ಇಸ್ರೇಲಿನ ಧ್ವಜದ ಬಣ್ಣ ನೀಲಿ ಮತ್ತು ಬಿಳಿಯನ್ನು ಸಾಂಕೇತಿಕವಾಗಿಸಿ, ಬ್ಲೂ ಅಂಡ್ ವೈಟ್ ಪಕ್ಷ ಸ್ಥಾಪಿಸಿದರು. ನೆತನ್ಯಾಹುರ ಲಿಕುಡ್ ಪಕ್ಷಕ್ಕೆ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಪಕ್ಷವಾಗಿ ಕಡಿಮೆ ಅವಧಿಯಲ್ಲಿ ಬ್ಲೂ ಅಂಡ್ ವೈಟ್ ಪಕ್ಷ ಹೊರಹೊಮ್ಮಿತು. ಪುನಃ ರಾಷ್ಟ್ರೀಯ ಭದ್ರತೆ, ಪ್ಯಾಲೆಸ್ಟೀನ್ ಬಿಕ್ಕಟ್ಟು, ಇರಾನ್ ಎಂಬ ಗುಮ್ಮ ಚುನಾವಣೆಯ ವಿಷಯಗಳಾದವು. ಇಸ್ರೇಲ್ ಚುನಾವಣೆಗೆ ಎರಡು ವಾರಗಳಿರುವಾಗ, ಇದುವರೆಗೆ ಇಸ್ರೇಲ್ ಆಕ್ರಮಿತ ಪ್ರದೇಶ ಎಂದು ಕರೆಯಲಾಗುತ್ತಿದ್ದ ‘ಗೋಲನ್ ಹೈಟ್ಸ್’ ಪ್ರದೇಶವನ್ನು ಇಸ್ರೇಲ್ ಒಡೆತನದ ಭೂಭಾಗ ಎಂದು ಅಮೆರಿಕ ಗುರುತಿಸಿತು. ಇದು ಚುನಾವಣೆಯಲ್ಲಿ ನೆತನ್ಯಾಹು ನೆರವಿಗೆ ಬಂತು.

ಮುಖ್ಯವಾಗಿ, ನೆತನ್ಯಾಹು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಬಯಸುವ ನಾಯಕ. ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತದ ಜೊತೆ ಇಸ್ರೇಲ್ ಸಂಬಂಧ ಹಿಂದೆಂದಿಗಿಂತಲೂ ನೆತನ್ಯಾಹು ಅವಧಿಯಲ್ಲಿ ಗಾಢವಾಯಿತು. ಜೆರುಸಲೇಮ್ ನಗರವನ್ನು ಇಸ್ರೇಲಿನ ರಾಜಧಾನಿ ಎಂದು ಅಮೆರಿಕ ಗುರುತಿಸಿದ್ದು, ನೆತನ್ಯಾಹು ಆಡಳಿತದ ರಾಜತಾಂತ್ರಿಕ ಗೆಲುವು. ಭಾರತದ ವಿಷಯವಾಗಿ ನೋಡುವುದಾದರೆ, ನೆತನ್ಯಾಹು- ಮೋದಿ ಗೆಳೆತನ ಟ್ವಿಟರ್ ಸಂದೇಶಗಳಾಚೆ ಕೆಲಸ ಮಾಡಿತು. ಮೊದಲಿಗೆ ಅರಬ್- ಇಸ್ರೇಲಿ ಬಿಕ್ಕಟ್ಟನ್ನು ಕೇಂದ್ರದಲ್ಲಿಟ್ಟುಕೊಂಡೇ ಇಸ್ರೇಲಿನೊಂದಿಗೆ ವ್ಯವಹರಿಸುವ ವಿದೇಶಾಂಗ ನೀತಿಯನ್ನು ಭಾರತ ಹೊಂದಿತ್ತು. ಆದರೆ ಮೋದಿ 2017ರಲ್ಲಿ ಅದನ್ನು ಮುರಿದರು. ಇಸ್ರೇಲಿಗೆ ಭೇಟಿ ಕೊಟ್ಟರು. ಯುದ್ಧೋಪಕರಣಗಳ ಆಧುನೀಕರಣ, ಆ ಮೂಲಕ ಭಾರತದ ಸೇನಾ ಸಾಮರ್ಥ್ಯ ಹೆಚ್ಚಿಸುವುದು, ಇಸ್ರೇಲನ್ನು ಮೇಕ್-ಇನ್-ಇಂಡಿಯಾ ಯೋಜನೆಯಲ್ಲಿ ಜೋಡಿಸಿಕೊಂಡು ಬಂಡವಾಳ ಆಕರ್ಷಿಸುವುದು ಭಾರತದ ಆದ್ಯತೆಯಾಯಿತು. ಹಾಗಾಗಿ ನೆತನ್ಯಾಹು ಪುನರಾಯ್ಕೆಯು ಭಾರತ-ಇಸ್ರೇಲ್ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸಬಹುದು.

ಅದೇನೇ ಇರಲಿ, ಇಸ್ರೇಲ್ ಪ್ರಧಾನಿಯಾಗಿ ದಾಖಲೆಯ ಅವಧಿಗೆ ಆಯ್ಕೆಯಾಗಿರುವ ನೆತನ್ಯಾಹು, ಮಧ್ಯಪ್ರಾಚ್ಯದ ಮಟ್ಟಿಗೆ ಪ್ರಬಲ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದಾರೆ. ಒಂದೊಮ್ಮೆ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಸಾಬೀತಾದರೆ, ಅಧಿಕಾರದಲ್ಲಿದ್ದಾಗ ದೋಷಾರೋಪಣೆಗೆ, ಶಿಕ್ಷೆಗೆ ಒಳಗಾದ ಮೊದಲ ಇಸ್ರೇಲ್ ಪ್ರಧಾನಿ ಎಂದೂ ಅವರು ಕರೆಸಿಕೊಳ್ಳಬಹುದು. ಇಸ್ರೇಲ್ ಚುನಾವಣಾ ಫಲಿತಾಂಶದ ಬಳಿಕ ಟ್ರಂಪ್, ನೆತನ್ಯಾಹು, ಪುಟಿನ್ ಮತ್ತು ಮೋದಿ ಅವರನ್ನು ಒಂದೇ ಸಾಲಿನಲ್ಲಿಟ್ಟು ಜಾಗತಿಕ ರಾಜಕೀಯ ತಜ್ಞರು ಚುನಾವಣಾ ವಿಶ್ಲೇಷಣೆ ನಡೆಸಿದ್ದಾರೆ. ಮೇ 23ರಂದು ಹೊರಬೀಳಲಿರುವ ಭಾರತದ ಚುನಾವಣೆಯ ಫಲಿತಾಂಶ ಆ ವಿಶ್ಲೇಷಣೆಗೆ ಮತ್ತಷ್ಟು ಹೂರಣ ಒದಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT