ಕ್ಯಾಪ್ಟನ್ ಖಾನ್, ತಾಲಿಬಾನ್ ಖಾನ್– ಪಾಕಿಸ್ತಾನ್

7
ಉಗ್ರರು ಮತ್ತು ಸೇನೆಗೆ ಒಪ್ಪಿತವಾಗುವ ದಾರಿಯಲ್ಲಿ ಇಮ್ರಾನ್ ಎಷ್ಟು ದಿನ ನಡೆಯಬಲ್ಲರು?

ಕ್ಯಾಪ್ಟನ್ ಖಾನ್, ತಾಲಿಬಾನ್ ಖಾನ್– ಪಾಕಿಸ್ತಾನ್

ಸುಧೀಂದ್ರ ಬುಧ್ಯ
Published:
Updated:

ಪಾಕಿಸ್ತಾನ ಎಂಬ ಆರ್ಥಿಕವಾಗಿ ಬಡಕಲಾಗಿರುವ, ಮತೀಯವಾದಿಗಳ ತೆಕ್ಕೆಯಲ್ಲಿ ಬಳಲಿರುವ, ಇತ್ತ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಕರೆಯಲಾಗದ, ಅತ್ತ ಸೇನಾ ಆಡಳಿತದಲ್ಲೂ ನೆಮ್ಮದಿ ಕಾಣದ, ಅತಂತ್ರ ಸ್ಥಿತಿಯಲ್ಲಿರುವ ರಾಷ್ಟ್ರಕ್ಕೆ ಸಾರಥಿಯಾಗಲು ಇಮ್ರಾನ್ ಖಾನ್ ಸಜ್ಜಾಗಿದ್ದಾರೆ. ಎರಡು ದಶಕಗಳ ಇಮ್ರಾನ್ ಶ್ರಮ ಇದೀಗ ಫಲ ನೀಡಿದೆ.

ಈ ಬಾರಿಯ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ, ನಾಲ್ಕಾರು ಕಾರಣಗಳಿಂದ ಕುತೂಹಲ ಕೆರಳಿಸಿತ್ತು. ಅಕ್ರಮ ಸಂಪತ್ತು ಗಳಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನವಾಜ್ ಷರೀಫ್ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಧರಿಸಬಹುದೇ? ಭುಟ್ಟೊ- ಜರ್ದಾರಿ ಕುಟುಂಬಕ್ಕೆ ರಾಜಕೀಯ ಪುನರ್ಜನ್ಮ ದೊರೆಯುತ್ತದೆಯೇ? ಮತದಾರರು ಸೇನೆಯ ಹಿಡಿತದಿಂದ ತಪ್ಪಿಸಿಕೊಂಡು ಪ್ರಜಾಪ್ರಭುತ್ವವಾದಿಗಳಿಗೆ ಮನ್ನಣೆ ನೀಡುವರೇ? ಇಮ್ರಾನ್ ಖಾನರ ‘ನವ ಪಾಕಿಸ್ತಾನ’ದ ಭರವಸೆಗೆ ಜನ ಮರುಳಾಗುವರೇ?... ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು.

ಈಗ ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆತಿದೆ. ಷರೀಫ್, ಭುಟ್ಟೊ, ಜರ್ದಾರಿಗಳನ್ನು ಪಕ್ಕಕ್ಕಿಟ್ಟು, ‘ಕ್ಯಾಪ್ಟನ್ ಖಾನ್’ ಬೆಂಬಲಕ್ಕೆ ಜನ ನಿಂತಿದ್ದಾರೆ. ಸೇನೆಯ ಹಿಡಿತವೂ ಚುನಾವಣೆಯಲ್ಲಿ ಎದ್ದುಕಂಡಿದೆ. ಉಳಿದಂತೆ ಪಾಕಿಸ್ತಾನದಲ್ಲಿ ಚುನಾವಣೆ ಈ ಹಿಂದೆ ಹೇಗೆ ನಡೆದಿತ್ತೋ, ಅಂತೆಯೇ ನಡೆದಿದೆ. ಚುನಾವಣೆಯ ದಿನವೇ ಬಾಂಬ್ ಸ್ಫೋಟಗೊಂಡು 31 ಜನ ಮೃತಪಟ್ಟರು ಎಂಬುದನ್ನು ಹೇಳಿದರೆ ಚುನಾವಣೆಯ ಹಿಂದೆ ಮುಂದೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ನೀವು ಊಹಿಸಬಹುದು.

ಮುಖ್ಯವಾಗಿ, ಪಾಕಿಸ್ತಾನದ ಚುನಾವಣೆಯಲ್ಲಿ ಸೇನೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಸೇನೆ ಯಾರ ಪರ ಎಂಬುದನ್ನು ಗಣನೆಗೆ ತೆಗೆದುಕೊಂಡೇ ಸೋಲು ಗೆಲುವಿನ ಲೆಕ್ಕ ಬರೆಯಲಾಗುತ್ತದೆ. ಹಾಗಾಗಿ ಈ ಬಾರಿ ಇಮ್ರಾನ್ ಖಾನ್ ಪಕ್ಷ ದೊಡ್ಡ ಮಟ್ಟದ ಗೆಲುವು ಕಾಣಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು. ಇದೀಗ ಇಮ್ರಾನ್ ಪ್ರಧಾನಿ ಕಾರ್ಯಾಲಯವಿರುವ ಇಸ್ಲಾಮಾಬಾದಿನ ಕೆಂಪು ವಲಯದತ್ತ (ರೆಡ್ ಜೋನ್!) ಹೆಜ್ಜೆ ಹಾಕಿದ್ದಾರೆ. ನೈಜ ಪಂದ್ಯ ಇನ್ನಷ್ಟೇ ಶುರುವಾಗಬೇಕಿದೆ.

ಹಾಗೆ ನೋಡಿದರೆ, ಇಮ್ರಾನ್ ಖಾನ್ ರಾಜಕೀಯ ಪ್ರವೇಶಿಸಿದ್ದು ಸಕಾರಣದಿಂದ. 1985ರಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿ ತೀರಿಕೊಂಡಾಗ, ಕ್ಯಾನ್ಸರ್‌ಪೀಡಿತರಿಗೆ ಉಚಿತ ಚಿಕಿತ್ಸೆ ದೊರೆಯುವಂತಹ ಆಸ್ಪತ್ರೆ ತೆರೆಯಬೇಕು ಎಂಬ ಆಸೆ ಇಮ್ರಾನ್ ಅವರಲ್ಲಿ ಮೊಳೆದಿತ್ತು. ನಂತರ ಆ ನಿಟ್ಟಿನಲ್ಲಿ ನಿಧಿ ಸಂಗ್ರಹಕ್ಕೆ ಖಾನ್ ಮುಂದಾದರು. ಕ್ರೀಡಾ ಕ್ಷೇತ್ರದ ಯಶಸ್ಸು ಅವರ ಸಹಾಯಕ್ಕೆ ಬಂತು. 1992ರ ಕ್ರಿಕೆಟ್ ವಿಶ್ವಕಪ್ ಗೆಲುವು ದೊಡ್ಡ ಮೊತ್ತದ ಹಣ ಸಂಗ್ರಹಕ್ಕೆ ಪೂರಕವಾಯಿತು. 94ರ ಹೊತ್ತಿಗೆ ‘ಶೌಕತ್ ಖಾನುಮ್ ಸ್ಮಾರಕ ಆಸ್ಪತ್ರೆ’ ತೆರೆದುಕೊಂಡಿತು. ಈ ಹತ್ತು ವರ್ಷಗಳಲ್ಲಿ ನಿಧಿ ಸಂಗ್ರಹಕ್ಕಾಗಿ ಜನರೊಂದಿಗೆ ಬೆರೆತು, ಒಡನಾಡಿದ್ದ ಖಾನ್, ಭ್ರಷ್ಟಾಚಾರ ಮುಕ್ತವಾದ, ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಉತ್ತಮ ಆಡಳಿತ ವ್ಯವಸ್ಥೆ ಹೊಂದಿದ ‘ನವ ಪಾಕಿಸ್ತಾನ’ ಕಟ್ಟುವ ಕನಸು ಕಂಡರು.

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗಿ ಖಾನ್ ಹೆಸರು ಮಾಡಿದ್ದರು ಖರೆ, ಆದರೆ ವೈಯಕ್ತಿಕ ಬದುಕಿನ ವಿವಾದಗಳಿಂದ ಕಳಂಕವನ್ನೂ ಅಂಟಿಸಿಕೊಂಡಿದ್ದರು. ಮೊದಲಿಗೆ ಬ್ರಿಟಿಷ್ ಉದ್ಯಮಿಯ ಮಗಳನ್ನು ಮದುವೆಯಾಗಿದ್ದ ಖಾನ್, ಆಕೆಯೊಂದಿಗೆ ಒಂಬತ್ತು ವರ್ಷಗಳ ದಾಂಪತ್ಯ ನಡೆಸಿದರು. 2015ರಲ್ಲಿ ಟಿ.ವಿ. ನಿರೂಪಕಿಯೊಟ್ಟಿಗೆ ಎರಡನೇ ಮದುವೆಯಾದರು, ಆ ದಾಂಪತ್ಯ 10 ತಿಂಗಳಲ್ಲಿ ಅಂತ್ಯವಾಯಿತು. ಎರಡನೇ ಪತ್ನಿ ಸಾಕಷ್ಟು ಆರೋಪಗಳನ್ನು ಮಾಡಿದರು, ಪುಸ್ತಕವೊಂದನ್ನೂ ಪ್ರಕಟಿಸಿದರು. ನಂತರ ಇತ್ತೀಚೆಗೆ ಖಾನ್ ಮೂರನೆಯ ಮದುವೆಯಾದರು. ಪಾಕಿಸ್ತಾನದ ಸಭ್ಯತೆಗೆ ಇದು ತೀರಾ ವ್ಯತಿರಿಕ್ತ ಅಲ್ಲದಿದ್ದರೂ ಅವರ ವೈಯಕ್ತಿಕ ಬದುಕಿನ ಬಗ್ಗೆ ಸಮುದಾಯದಲ್ಲಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ.

90ರ ದಶಕದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಪಾಕಿಸ್ತಾನವನ್ನು ಹೈರಾಣ ಮಾಡಿತ್ತು. ಬೆನಜೀರ್ ಸರ್ಕಾರ ಉರುಳಿತ್ತು. ಆಗ ಇಮ್ರಾನ್ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ರಾಜಕೀಯವಾಗಿ ಮೊದಲ ಹೆಜ್ಜೆಗಳನ್ನು ಇಟ್ಟರು. ಆದರೆ ಅವರ ಪ್ರಯತ್ನ ನಂತರದ ಚುನಾವಣೆಯಲ್ಲಿ ಯಾವ ಪರಿಣಾಮವನ್ನೂ ಬೀರಲಿಲ್ಲ. 1996ರಲ್ಲಿ ರಾಜಕೀಯವಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ಖಾನ್, ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸಿದರು. ಆದರೆ ಕ್ರಿಕೆಟ್ ತಂದುಕೊಟ್ಟ ಖ್ಯಾತಿ ಮತವಾಗಿ ಪರಿವರ್ತನೆಗೊಳ್ಳಲಿಲ್ಲ. 2003ರ ವರೆಗೂ ಕೇವಲ ಒಂದು ಸ್ಥಾನವನ್ನಷ್ಟೇ ಪಿಟಿಐ ಸಂಸತ್ತಿನಲ್ಲಿ ಹೊಂದಿತ್ತು.

ಆ ವೇಳೆಗಾಗಲೇ ಚುನಾವಣಾ ರಾಜಕೀಯಕ್ಕೆ ಏನುಬೇಕು ಎಂಬುದು ಇಮ್ರಾನ್ ಅರಿವಿಗೆ ಬಂದಿತ್ತು. ತಾವೊಬ್ಬ ಕಟ್ಟಾ ಇಸ್ಲಾಮ್ ಅನುಯಾಯಿ ಎಂಬಂತೆ ಬಿಂಬಿಸಿಕೊಂಡರು. ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳಿಗೆ, ತಾಲಿಬಾನ್‌ಗೆ ಹತ್ತಿರವಾಗತೊಡಗಿದರು. ಅವಕಾಶವಾದಿ ರಾಜಕಾರಣದ ಎಲ್ಲ ಪಟ್ಟುಗಳೂ ಇಮ್ರಾನ್ ಅವರಿಗೆ ತಿಳಿದಿತ್ತು. 2013ರ ಚುನಾವಣೆಯಲ್ಲಿ ಇಮ್ರಾನ್ ಪಕ್ಷ, ತಾಲಿಬಾನ್ ಅನುಕಂಪ ವಲಯ ಖೈಬರ್-ಪಖ್ತೂನ್ ಖ್ವಾ ಪ್ರಾಂತ್ಯದಲ್ಲಿ ಅತಿದೊಡ್ಡ ಚುನಾಯಿತ ಪಕ್ಷವಾಗಿ ಹೊರಹೊಮ್ಮಿತ್ತು. ಇತರೆಡೆ ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದ ನವಾಜ್ ಷರೀಫ್ ಪಕ್ಷ, ಆ ಪ್ರಾಂತ್ಯದಲ್ಲಿ ಮೈತ್ರಿಕೂಟದ ಮೂಲಕ ಅಧಿಕಾರ ಹಿಡಿಯುವ ಯಾವ ಪ್ರಯತ್ನವನ್ನೂ ಮಾಡದೇ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಪಿಟಿಐ ಪಕ್ಷಕ್ಕೆ ತನ್ನ ಹಕ್ಕು ಚಲಾಯಿಸಲು ಅನುವುಮಾಡಿಕೊಟ್ಟಿತು! ಈ ಅವಕಾಶ ಬಳಸಿಕೊಂಡ ಇಮ್ರಾನ್ ಪಕ್ಷ ಪೇಶಾವರದಲ್ಲಿ ಬೇರೂರಿ ಇಡೀ ಪಾಕಿಸ್ತಾನವನ್ನು ವ್ಯಾಪಿಸಿಕೊಳ್ಳುವ ಪ್ರಯತ್ನ ಮಾಡಿತು. 2018ರ ಚುನಾವಣೆಗೆ ಕಾರ್ಯತಂತ್ರ ಹೆಣೆಯಿತು.

ನಗರ ಪ್ರದೇಶದ ಮತದಾರರನ್ನು ಸೆಳೆಯಲು ಭ್ರಷ್ಟಾಚಾರದ ವಿಷಯ ಬಳಸಿಕೊಂಡ ಇಮ್ರಾನ್, ಪಾಕಿಸ್ತಾನದ ಉತ್ತರ ಭಾಗದ ಜನರ ಓಲೈಕೆಗೆ ಮತೀಯ ಭಾವನೆಯನ್ನು ಬಳಸಿಕೊಂಡರು. ಸೂಫಿ ಉಕ್ತಿ ಬಳಸಿ ಸಿಂಧಿಗಳನ್ನು ಮೆಚ್ಚಿಸಿ
ದರು. ಪಾಕಿಸ್ತಾನದ ದುಃಸ್ಥಿತಿಗೆ ಏನು ಕಾರಣ ಎಂದು ವಿಶ್ಲೇಷಿಸುವಾಗ, ಸೇನೆಯ ಅಧಿಕಾರ ಮೋಹ, ರಾಜಕೀಯ ಹಸ್ತಕ್ಷೇಪ ಕಾರಣ ಎಂದು ನೆಪಮಾತ್ರಕ್ಕೂ ಹೇಳಲಿಲ್ಲ! ಸೇನೆಯ ಬಗ್ಗೆ ಪ್ರಶ್ನೆ ಬಂದಾಗ, ‘ಅದು ಪಾಕಿಸ್ತಾನದ ಸೇನೆ,
ಶತ್ರು ರಾಷ್ಟ್ರದ ಸೇನೆಯಲ್ಲ. ನನ್ನೊಂದಿಗೆ ಸೇನೆ ಇರಲಿದೆ’ ಎಂದು ‘ನ್ಯೂಯಾರ್ಕ್ ಟೈಮ್ಸ್’ ಸಂದರ್ಶನದಲ್ಲಿ ಖಾನ್ ಹೇಳಿದ್ದರು. ಹೀಗೆ ಎಚ್ಚರಿಕೆಯಿಂದ ರೂಪಿಸಿದ ಕಾರ್ಯತಂತ್ರ ಕೆಲಸ ಮಾಡಿತು. ನವಾಜ್ ಷರೀಫ್ ರಾಜಕೀಯವಾಗಿ ಪತನ ಕಂಡಿದ್ದು ಖಾನ್‌ಗೆ ಅವಕಾಶದ ಬಾಗಿಲು ತೆರೆಯಿತು. ಪಿಟಿಐ ಅತಿದೊಡ್ದ ಪಕ್ಷವಾಗಿ ಹೊರಹೊಮ್ಮಿತು.

ಪಿಎಮ್ಎಲ್-ಎನ್ ಹಿಡಿತವಿರುವ ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ಪಿಪಿಪಿ ಪ್ರಾಬಲ್ಯವಿರುವ ಸಿಂಧ್ ಪ್ರಾಂತ್ಯದಲ್ಲಿ ಪಿಟಿಐ ಉತ್ತಮ ಸಾಧನೆ ಮಾಡಿತು. ಭಾರತ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೆಡೆಗೆ ವಲಸೆ ಹೋಗಿ ಮೊಹ
ಜೀರ್ ಪಂಗಡವಾಗಿ ಗುರುತಿಸಿಕೊಂಡಿರುವ ಸಮುದಾಯದವರು, ಕರಾಚಿಯಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಈ ಮೊಹಜೀರ್ ಜನಾಂಗ ಕಳೆದ ಮೂರು ದಶಕಗಳಿಂದ ರಾಜಕೀಯ ಪ್ರಾಬಲ್ಯ ಮೆರೆದಿದ್ದ ಕರಾಚಿ ಭಾಗದಲ್ಲೂ ಈ ಬಾರಿ ಪಿಟಿಐ ನುಸುಳಿ ಜಯ ದಾಖಲಿಸಿತು. ಇದೀಗ ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರದ ರಾಜಕೀಯ ಶಕ್ತಿ ಕೇಂದ್ರಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಖಾನ್ ಪಕ್ಷ ಉತ್ಸಾಹ ತೋರುತ್ತಿದೆ.

ಇದಿಷ್ಟು ಖಾನ್ ಚುನಾವಣೆ ಗೆಲ್ಲಲು ಅನುಸರಿಸಿದ ಮಾರ್ಗಗಳ ಬಗ್ಗೆ ಆಯಿತು. ಆದರೆ ಅವರು ಪ್ರಧಾನಿ ಪಟ್ಟದಲ್ಲಿ ಕುಳಿತು ಎದುರಿಸಬೇಕಾದ ಸವಾಲುಗಳ ಪಟ್ಟಿ ದೊಡ್ಡದಿದೆ. ‘ನವ ಪಾಕಿಸ್ತಾನ’ ಕಟ್ಟಬೇಕು ಎಂಬ ಸಂಕಲ್ಪವನ್ನು ಖಾನ್ ಹಂಚಿಕೊಂಡಿದ್ದಾರಾದರೂ ಹೇಗೆ ಎಂಬುದನ್ನು ವಿವರಿಸಿಲ್ಲ. ಪಟ್ಟದಲ್ಲಿ ಕೂತು ಅವರು ಎದುರಿಸಬೇಕಿರುವ ದೊಡ್ಡ ಸವಾಲು ಆರ್ಥಿಕತೆಯದ್ದು. ಪಾಕಿಸ್ತಾನ ತೀವ್ರ ಆರ್ಥಿಕ ಹಿಂಜರಿಕೆ ಅನುಭವಿಸುತ್ತಿದೆ. ಅತಿದೊಡ್ಡ ಸಾಲಗಾರ ರಾಷ್ಟ್ರವಾಗಿ ಕಳೆದ ಕೆಲವು ದಶಕಗಳಲ್ಲಿ ಮಾರ್ಪಟ್ಟಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ವಿಶ್ವಬ್ಯಾಂಕ್, ಅಮೆರಿಕ ಮತ್ತು ಚೀನಾದಿಂದ ಬರುತ್ತಿರುವ ಪಾರುಕಾಣಿಕೆ ಪಾಕಿಸ್ತಾನದ ಆರ್ಥಿಕತೆಯನ್ನು ಹಿಡಿದು ನಿಲ್ಲಿಸಿದೆ. ಇತ್ತೀಚಿನ ದಿನಗಳಲ್ಲಿ ಕರೆನ್ಸಿ ಮೌಲ್ಯ ಕಳೆದುಕೊಳ್ಳುತ್ತಿದೆ. ಆರ್ಥಿಕ ಕುಸಿತ ತಡೆಯುವ ನಿಟ್ಟಿನಲ್ಲಿ ಪಾಕಿಸ್ತಾನ ಕೈಗೊಳ್ಳಬಹುದಾದ ಕ್ರಮವನ್ನು ಐಎಂಎಫ್ ಎದುರು ನೋಡುತ್ತಿದೆ. ಹಾಗಾಗಿ ಇಮ್ರಾನ್ ಪ್ರಧಾನಿಯಾದ ಬಳಿಕ ತನ್ನನ್ನು ನಂಬಿರುವ ಆಸೆಗಣ್ಣಿನ ಜನರಿಗೆ, ಬೊಕ್ಕಸದ ಲೆಕ್ಕ ಹೇಳಬೇಕಾಗುತ್ತದೆ.

ಇನ್ನು, ಎರಡನೆಯ ಸವಾಲು ಭದ್ರತೆ ಮತ್ತು ವಿದೇಶಾಂಗ ನೀತಿಯದ್ದು. ಈ ಎರಡು ವಿಷಯದಲ್ಲಿ ಪ್ರಜಾ ಸರ್ಕಾರಕ್ಕೆ ಪಾಕ್ ಸೇನೆ ಸ್ವಾತಂತ್ರ್ಯ ಕೊಟ್ಟ ಉದಾಹರಣೆ ಇಲ್ಲ. ರಾಜಕೀಯ ಅನನುಭವಿ ಈ ವಿಷಯವನ್ನು ಹೇಗೆ ನಿಭಾಯಿಸಲಿದ್ದಾರೆ ನೋಡಬೇಕು. ಈಗಾಗಲೇ ಅಮೆರಿಕ ಮತ್ತು ಚೀನಾದ ವಾಣಿಜ್ಯ ಕದನ ಚಾಲ್ತಿಯಲ್ಲಿದೆ. ಪಾಕಿಸ್ತಾನ ಎತ್ತ ಹೋದರೂ ಸಮಸ್ಯೆಯೇ. ಮೇಲಾಗಿ ಇಮ್ರಾನ್ ಅಮೆರಿಕವನ್ನು ಟೀಕಿಸುತ್ತಲೇ ಬಂದಿದ್ದಾರೆ. ಅಫ್ಗಾನಿಸ್ತಾನದ ಬಗ್ಗೆ ವಿಶೇಷ ಒಲವುಳ್ಳ ಖಾನ್, ಅಮೆರಿಕ ‘ಭಯೋತ್ಪಾದನೆಯ ವಿರುದ್ಧ ಸಮರ’ ಎಂದು ಅಫ್ಗಾನಿಸ್ತಾನದ ಮೇಲೆರಗಿದ್ದು ಸರಿಯಲ್ಲ, ಅಮೆರಿಕದ ಈ ಯುದ್ಧಕ್ಕೆ ಪಾಕಿಸ್ತಾನ ಬೆಂಬಲ ಸೂಚಿಸಿದ್ದು ಅಕ್ಷಮ್ಯ ಎಂದು ಹೇಳುತ್ತಾ ಬಂದವರು. ಅಮೆರಿಕ ಬಗೆಗಿನ ನಿಷ್ಠುರ ಮಾತು, ಚುನಾವಣೆಯ ಸಂದರ್ಭದಲ್ಲಿ ಸಹಾಯಕ್ಕೆ ಬರಬಹುದೇ ವಿನಾ ಆಡಳಿತದ ಚುಕ್ಕಾಣಿ ಹಿಡಿದಾಗಲ್ಲ.

ಮೇಲಾಗಿ ಅಮೆರಿಕ ಅಧ್ಯಕ್ಷ ಟ್ರಂಪ್, ತಾಲಿಬಾನ್ ಜೊತೆಗಿನ ಯಾವುದೇ ಶಾಂತಿ ಮಾತುಕತೆ ಅಫ್ಗಾನಿಸ್ತಾನದ ನೇತೃತ್ವದಲ್ಲಿ (Afghan-led and Afghan-owned) ನಡೆಯಬೇಕು ಎಂದು ಹೇಳುತ್ತಾ ಬಂದಿದ್ದಾರೆ. ಹಾಗಾಗಿ ಅಮೆರಿಕ- ಪಾಕ್ ಸಂಬಂಧಕ್ಕೆ ಅಫ್ಗಾನಿಸ್ತಾನ ಕೇಂದ್ರ ಬಿಂದುವಾದರೆ ಅಚ್ಚರಿಯಿಲ್ಲ. ಇದಕ್ಕೆ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಅಮೆರಿಕದ ಒಲವು ನಿಲುವು ನಿಂತಿದೆ. ಉಳಿದಂತೆ, ಅಫ್ಗಾನಿಸ್ತಾನದ ವಿಷಯದಲ್ಲಿ ಸೇನೆಯ ನಿಲುವು ಬೇರೆಯೇ ಇದೆ. ಇಮ್ರಾನ್ ಮುಕ್ತಗಡಿ ನಮ್ಮ ಆದ್ಯತೆ ಎಂದರೆ, ಪಾಕ್ ಸೇನೆ ಗಡಿಯುದ್ದಕ್ಕೂ ಬೇಲಿ ಹಾಕುವ ಮಾತನಾಡುತ್ತಿದೆ.

ಮುಖ್ಯವಾಗಿ, ಭಾರತದೊಂದಿಗೆ ಸಂಬಂಧ ಉತ್ತಮಪಡಿಸಿಕೊಳ್ಳುವ ಇಂಗಿತವನ್ನು ಖಾನ್ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಸಮಸ್ಯೆಯ ಪರಿಹಾರ ಮುಖ್ಯ ಎನ್ನುವುದನ್ನೂ ಸೇರಿಸಿದ್ದಾರೆ. ಆದರೆ ಭಾರತ ವಿರೋಧಿ ನಿಲುವನ್ನು ಬೆಂಬಲಿಸುವ ನಾಯಕರು ಮಾತ್ರ ಅಧಿಕಾರದಲ್ಲಿರಲು ಸಾಧ್ಯ ಎಂಬುದು ಈ ಏಳು ದಶಕಗಳಲ್ಲಿ ಪದೇ ಪದೇ ಸಾಬೀತಾಗಿದೆ. ಹಾಗಾಗಿ ಇಮ್ರಾನ್ ಖಾನರಿಂದ ಭಾರತ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ.

ಒಟ್ಟಿನಲ್ಲಿ, ಷರೀಫ್, ಭುಟ್ಟೊ ಮತ್ತು ಸೇನೆ ಎಂಬ ತ್ರಿಕೋಣ ಬಿಂದುಗಳ ಮಧ್ಯೆ ಇದುವರೆಗೆ ಪಾಕಿಸ್ತಾನದ ಅಧಿಕಾರ ಕೇಂದ್ರೀಕೃತವಾಗಿತ್ತು. ಇದೀಗ ಖಾನ್ ನಾಲ್ಕನೆಯ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ನವಾಜ್ ಷರೀಫ್ ಅಥವಾ ಜುಲ್ಫಿಕರ್ ಅಲಿ ಭುಟ್ಟೊ ಅವರಂತೆ ಇಮ್ರಾನ್ ಎಲ್ಲರನ್ನೂ ತಲುಪಿದ ನಾಯಕನಲ್ಲ. ಪರಿಸ್ಥಿತಿ ಅವರ ಗೆಲುವಿಗೆ ಸಹಕರಿಸಿದೆ. ರಾಜಕೀಯವಾಗಿ ಮುಂದಿನ ದಿನಗಳೂ ಅನುಕೂಲಕರವಾಗಿಯೇ ಕಾಣುತ್ತಿವೆ. ಪಂಜಾಬ್ ಪ್ರಾಂತ್ಯ ಷರೀಫ್ ಕುಟುಂಬದತ್ತ ಸಂಪೂರ್ಣ ಬೆನ್ನು ತಿರುಗಿಸಿಲ್ಲವಾದರೂ, ಫರೀಫ್ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಆ ಪಕ್ಷದಲ್ಲಿ ಮತ್ತೊಬ್ಬ ವರ್ಚಸ್ವಿ ನಾಯಕನ ಕೊರತೆಯಿದೆ. ಭುಟ್ಟೊ- ಜರ್ದಾರಿ ಪೀಳಿಗೆ ಸಿಂಧ್ ಪ್ರಾಂತ್ಯಕ್ಕಷ್ಟೇ ಸೀಮಿತವಾಗಿ ಉಳಿದಿದೆ. ಈ ಇಬ್ಬರೂ ಸಮಸ್ಯೆಯಲ್ಲ. ಆದರೆ ತಾಲಿಬಾನ್ ಮತ್ತು ಸೇನೆಯನ್ನು ಪಕ್ಕ ಇರಿಸಿಕೊಂಡು, ಇಬ್ಬರಿಗೂ ಒಪ್ಪಿತವಾಗುವ ದಾರಿಯಲ್ಲಿ ಇಮ್ರಾನ್ ಎಷ್ಟು ದಿನ ನಡೆಯಬಲ್ಲರು ಎಂಬುದೇ ಪ್ರಶ್ನೆ.

ಉತ್ತಮ ಶಾಲೆ, ಆಸ್ಪತ್ರೆ, ನೌಕರಿ, ಮೂಲಸೌಕರ್ಯ ಎಂಬ ‘ನವ ಪಾಕಿಸ್ತಾನದ’ ಆಶ್ವಾಸನೆಯೊಂದಿಗೆ ಅಧಿಕಾರಕ್ಕೇರುತ್ತಿರುವ ಖಾನ್, ಸೇನೆಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಾರೋ, ಪಾಕಿಸ್ತಾನದ ಜನರ ಪಾಲಿಗೆ ನಿಜ ಅರ್ಥದಲ್ಲಿ ನಾಯಕನಾಗಿ ಹೊರಹೊಮ್ಮುತ್ತಾರೋ ಕಾದು ನೋಡಬೇಕು. ‘ಪ್ರತೀಬಾರಿ ಭಾರತದ ಬ್ಯಾಟ್ಸ್‌ಮೆನ್‌ನತ್ತ ಚೆಂಡು ತೂರುವಾಗ ನನ್ನ ತಲೆಯಲ್ಲಿ ಕಾಶ್ಮೀರದ ವಿಷಯ ಹಾದು ಹೋಗುತ್ತದೆ’ ಎಂದು ಖಾನ್ ಹಿಂದೊಮ್ಮೆ ಹೇಳಿದ್ದರು. ಸೇನೆ ಬೆನ್ನಿಗಿರುವಾಗ, ಅಧಿಕಾರದ ಗದ್ದುಗೆಯಲ್ಲಿ ಕುಳಿತಾಗ, ಅವಕಾಶವಾದಿ ಖಾನ್, ಕಾಶ್ಮೀರ ವಿಷಯದಲ್ಲಿ ಭಾರತದತ್ತ ನಂಜು ಕಾರದಿದ್ದರೆ ಅದು ಅಸಹಜ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !