ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಇಂದಿರಾ ಬೆನ್ನಿಗಿದ್ದ ‘ಚಾಣಕ್ಯ’

ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಕ್ಸರ್ ಅವರನ್ನು ಸ್ಮರಿಸಲು ಹತ್ತಾರು ಕಾರಣಗಳಿವೆ
Last Updated 30 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಬಾಂಗ್ಲಾ ವಿಮೋಚನಾ ಯುದ್ಧಕ್ಕೆ 50 ತುಂಬಿರುವ ಈ ಸಂದರ್ಭದಲ್ಲಿ, ಅಂದು ಭಾರತದ ನೇತೃತ್ವ ವಹಿಸಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಮತ್ತು ಸೇನೆಯ ನಾಯಕತ್ವ ವಹಿಸಿದ್ದ ಮಾಣೆಕ್ ಷಾ ಅವರನ್ನು ಸಹಜ ವಾಗಿಯೇ ನೆನಪು ಮಾಡಿಕೊಳ್ಳಲಾಗುತ್ತಿದೆ. ಆದರೆ ನೆನೆಯಲೇಬೇಕಾದ ಮತ್ತೊಂದು ಹೆಸರಿದೆ. ಅದು ಪರಮೇಶ್ವರ ನಾರಾಯಣ ಹಕ್ಸರ್.

ಇಪ್ಪತ್ತು ವರ್ಷಗಳ ಕಾಲ ಭಾರತೀಯ ವಿದೇಶಾಂಗ ಸೇವೆಯಲ್ಲಿ ಕಾರ್ಯನಿರ್ವಹಿಸಿದ ಹಕ್ಸರ್, 1967ರಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಕಾರ್ಯದರ್ಶಿಯಾಗಿ ನೇಮಕವಾದವರು. ತಂದೆಯ ಒಡನಾಟದಲ್ಲಿ ರಾಜಕೀಯ ಪಟ್ಟುಗಳನ್ನು ಇಂದಿರಾ ಕಲಿತಿದ್ದರಾ
ದರೂ ಆಡಳಿತಾತ್ಮಕವಾಗಿ ಅವರನ್ನು ಸಜ್ಜುಗೊಳಿಸಿದವರು ಪಿ.ಎನ್.ಹಕ್ಸರ್. ಬಳಿಕ ಪ್ರಧಾನ ಕಾರ್ಯದರ್ಶಿಯಾಗಿ ಅವರು ಆ ಹುದ್ದೆಯಲ್ಲಿದ್ದಷ್ಟು ಕಾಲ ಇಂದಿರಾ ಅವರ ಛಾಯೆಯಂತೆ ಇದ್ದರು. ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಇಂದಿರಾ ಅವರ ಬೆನ್ನಿಗೆ ನಿಂತು ಕಾರ್ಯತಂತ್ರ ಹೆಣೆದರು. ಇಡಬೇಕಾದ ಹೆಜ್ಜೆ ಹಾಗೂ ಮಾಡಬಾರದ ತಪ್ಪುಗಳ ಬಗ್ಗೆ ಪ್ರಧಾನಿಯನ್ನು ಎಚ್ಚರಿಸಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಕ್ಸರ್ ಅವರತ್ತ ಇಂದಿರಾ ನೋಡುತ್ತಿದ್ದರು.

ಬಾಂಗ್ಲಾ ಬಿಕ್ಕಟ್ಟಿನ ತೀವ್ರತೆ ಅರಿತಿದ್ದ ಹಕ್ಸರ್, ಬಾಂಗ್ಲಾ ದೇಶವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಗುರುತಿ ಸುವುದರ ಸಾಧಕ ಬಾಧಕಗಳನ್ನು ಅಂದಾಜಿಸಲು 1971ರ ಮಾರ್ಚ್ 2ರಂದು ಐದು ಜನರ ಸಮಿತಿ ಯೊಂದನ್ನು ನೇಮಿಸಿದ್ದರು. ಆಗಿನ್ನೂ ಬಿಕ್ಕಟ್ಟು ತೀವ್ರತೆ ಪಡೆದುಕೊಂಡಿರಲಿಲ್ಲ. ಮಾರ್ಚ್ 25ರಂದು ಪಾಕಿಸ್ತಾನದ ಸೇನೆ ಪೂರ್ವ ಪಾಕಿಸ್ತಾನೀಯರ ಮೇಲೆರಗಿತು. ಜನಾಂಗೀಯ ಹತ್ಯೆ ನಡೆಯಿತು.ವಲಸೆ ಸಮಸ್ಯೆಯನ್ನು ಭಾರತ ಎದುರಿಸಬೇಕಾಯಿತು.ಕೂಡಲೇ ಭಾರತ ಮಧ್ಯಪ್ರವೇಶಿಸಬೇಕು ಮತ್ತು ಸೇನಾ ಕಾರ್ಯಾಚರಣೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದವು.

ಆದರೆ ಮತ್ತೊಂದು ರಾಷ್ಟ್ರದ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾದರೆ ರಾಜಕೀಯ, ಸೇನೆ ಮತ್ತು ರಾಜತಾಂತ್ರಿಕ ಸಿದ್ಧತೆ ಅತ್ಯಗತ್ಯ ಎಂಬುದು ಹಕ್ಸರ್ ನಿಲುವಾಗಿತ್ತು. ಸೇನಾ ಕ್ರಮಕ್ಕೆ ಮುಂದಾದರೆ, ಅದನ್ನು ಜಗತ್ತು ಭಾರತ– ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಎಂದು ನೋಡುತ್ತದೆ. ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಭಾರತಕ್ಕೆ ಲಭ್ಯವಾಗುವುದಿಲ್ಲ. ಬಾಂಗ್ಲಾದಲ್ಲಿ ಆಂತರಿಕ ದಂಗೆ ಉಂಟಾಗದೇ ಭಾರತ ಹೊರಗಿನಿಂದ ಸೇನಾ ಕಾರ್ಯಾಚರಣೆ ನಡೆಸಿದರೆ ಉದ್ದೇಶ ಸಾಧಿಸಲು ಸಾಧ್ಯವಿಲ್ಲ ಎಂಬುದು ಹಕ್ಸರ್ ಅವರಿಗೆ ಮನವರಿಕೆ
ಯಾಗಿತ್ತು. ಅದಕ್ಕೆ ಪೂರಕವಾಗಿ, ‘ಪರಿಸ್ಥಿತಿ ನಮಗೆ ಅನು ಕೂಲಕರವಾಗಿಲ್ಲ ಮತ್ತು ಸೇನೆ ಸನ್ನದ್ಧವಾಗಲು ಸಮಯ ಬೇಕು’ ಎಂದು ಸೇನಾಧಿಕಾರಿ ಮಾಣೆಕ್ ಷಾ ಅಭಿಪ್ರಾಯ ಪಟ್ಟಿದ್ದರು. ಹಕ್ಸರ್ ಬೇರೆಯದೇ ಕಾರ್ಯತಂತ್ರ ಹೆಣೆದರು.

ಅದಾಗಲೇ ಬಾಂಗ್ಲಾದೇಶದ ಗಡಿಪಾರುಗೊಂಡ ಸರ್ಕಾರದ ಪ್ರಧಾನಿಯಾಗಿ ತಾಜುದ್ದೀನ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರು ಸಹಾಯ ಕೋರಿ ಇಂದಿರಾ ಅವರನ್ನು ಭೇಟಿಯಾಗಲು ಬಂದಾಗ, ಎರಡು ಸಂಗತಿ ಗಳ ಕುರಿತು ಸ್ಪಷ್ಟನೆ ಪಡೆದುಕೊಳ್ಳಲು ಇಂದಿರಾ ಅವರಿಗೆ ಹಕ್ಸರ್ ತಿಳಿಸಿದ್ದರು. ಮೊದಲನೆಯದು, ಬಾಂಗ್ಲಾ ವಿಮೋಚನೆ ಕುರಿತ ಕ್ರಿಯಾ ಯೋಜನೆಗೆ ತಾಜುದ್ದೀನ್ ನೇತೃತ್ವದ ಸರ್ಕಾರದ ಸಂಪೂರ್ಣ ಒಪ್ಪಿಗೆ ಇದೆಯೇ? ಎರಡನೆಯದು, ಪೂರ್ವ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ಇತರ ಪಕ್ಷಗಳು ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಯಾವ ಪಾತ್ರ ವಹಿಸುತ್ತವೆ ಎಂಬುದು. ಬಾಂಗ್ಲಾ ವಿಮೋಚನೆಗೆ ಒಮ್ಮತದ ಕಾರ್ಯತಂತ್ರ ಅಗತ್ಯ ಮತ್ತು ಅದು ಕೇವಲ ಒಂದು ಪಕ್ಷದ ಬೇಡಿಕೆಯಲ್ಲ ಎಂದಾದರೆ ಮಾತ್ರ ಭಾರತ ಮುಂದಡಿಯಿಡಬೇಕು ಎಂಬುದು ಹಕ್ಸರ್ ನಿಲುವಾಗಿತ್ತು.

ಭಾರತದ ಸೇನೆ ಮಧ್ಯಪ್ರವೇಶಿಸಲು ಬೇಕಾದ ಭೂಮಿಕೆ ಸಿದ್ಧಪಡಿಸಲು ಭಾರತ ಮುಂದಾಯಿತು. ಪಾಕಿಸ್ತಾನದ ಸೇನೆ ದಿಕ್ಕುತಪ್ಪುವಂತೆ ಮತ್ತು ಗಾಸಿ ಗೊಳ್ಳುವಂತೆ ಮಾಡಲು ಗೆರಿಲ್ಲಾ ಮಾದರಿಯ ಪ್ರತಿ ರೋಧಕ್ಕೆ ಮುಕ್ತಿವಾಹಿನಿಯ ಹೋರಾಟಗಾರರನ್ನು ಸನ್ನದ್ಧಗೊಳಿಸಬೇಕು ಎಂಬ ನಿರ್ಣಯವನ್ನು ತೆಗೆದು ಕೊಂಡಿತು. ಕನಿಷ್ಠ 6 ತಿಂಗಳವರೆಗೆ ಗೆರಿಲ್ಲಾ ಪಡೆಗಳ ಪ್ರತಿರೋಧವನ್ನು ಚಾಲ್ತಿಯಲ್ಲಿಡುವ ಉದ್ದೇಶದಿಂದ ‘ಮುಕ್ತಿವಾಹಿನಿ’ಯ ಕಾಲಾಳುಗಳಿಗೆ ಎಲ್ಲ ರೀತಿಯ ನೆರವು ನೀಡಲು ಹಕ್ಸರ್ ಮತ್ತು ‘ರಾ’ ಮುಖ್ಯಸ್ಥ ಕಾವೋ ಮುಂದಾದರು. ಜೊತೆಗೆ ಅಂತರರಾಷ್ಟ್ರೀಯ ಸಮುದಾಯವು ಭಾರತದ ಪರ ಇರುವಂತೆ ನೋಡಿ ಕೊಳ್ಳಬೇಕಿತ್ತು.

ಮೇ 14ರಂದು ಇಂದಿರಾ ಗಾಂಧಿ, 39 ರಾಷ್ಟ್ರಗಳ ನಾಯಕರಿಗೆ ಪತ್ರ ಬರೆದು ಪರಿಸ್ಥಿತಿ ವಿವರಿಸಿದರು. ‘ಪ್ರತಿದಿನ 50 ಸಾವಿರ ವಲಸಿಗರು ಭಾರತಕ್ಕೆ ಬರುತ್ತಿದ್ದಾರೆ ಮತ್ತು ಇದರಿಂದಾಗಿ ಭಾರತದ ಭದ್ರತೆಗೆ ಅಪಾಯ ಒದಗಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸುವ ಕುರಿತು ನಿಮ್ಮ ಸಲಹೆಯನ್ನು ಭಾರತ ಎದುರು ನೋಡುತ್ತದೆ’ ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಬೇಕು ಎಂಬ ಸಲಹೆ ಹಕ್ಸರ್ ಅವರದ್ದಾಗಿತ್ತು.

ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ

ಸೋವಿಯತ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಮೊದಲಿಗೆ ಹಕ್ಸರ್ ಎರಡು ಮನಸ್ಸಿನವರಾಗಿದ್ದರು. ಆದರೆ ಜುಲೈ ತಿಂಗಳಿನಲ್ಲಿ ಇಸ್ಲಾಮಾಬಾದ್ ಭೇಟಿಯ ಬಳಿಕ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ರಹಸ್ಯವಾಗಿ ಚೀನಾಕ್ಕೆ ಭೇಟಿ ಕೊಟ್ಟಾಗ ಹಕ್ಸರ್ ಮತ್ತು ತಂಡ ಜಾಗೃತವಾಯಿತು. ಆಗಸ್ಟ್ 9ರಂದು ಭಾರತ ಮತ್ತು ಸೋವಿಯತ್ ನಡುವೆ ‘ಸ್ನೇಹ ಮತ್ತು ಸಹಕಾರ’ ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಿರ್ಣಾಯಕ ಎನಿಸಿತು

ಅಂತೂ ಡಿಸೆಂಬರ್ ವೇಳೆಗೆ ಕಾಲ ಪಕ್ವಗೊಂಡಿತ್ತು. ಡಿಸೆಂಬರ್ 3ರಂದು ಭಾರತದ ಮೇಲೆ ಪಾಕಿಸ್ತಾನ ದಾಳಿ ಮಾಡಿತು. ಡಿಸೆಂಬರ್ 16ರ ಹೊತ್ತಿಗೆ ಕದನವಿರಾಮ ಘೋಷಿಸಿ ಪಾಕಿಸ್ತಾನದ ಸೇನೆ ಮಂಡಿಯೂರಿತು. ಭಾರತದ ಕಾರ್ಯತಂತ್ರ ಯಶಸ್ವಿಯಾಯಿತು. ಗೆಲುವು ಇಂದಿರಾ ಅವರ ಮುಡಿಯೇರಿತು. 1972ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟ ‘ಶಿಮ್ಲಾ ಒಪ್ಪಂದ’ದ ರೂವಾರಿಯಾಗಿ ಕೂಡ ಹಕ್ಸರ್ ಇದ್ದರು. ಯುದ್ಧ ಕೈದಿಗಳನ್ನು ಬಿಟ್ಟುಕೊಟ್ಟ ಮತ್ತು ಗಡಿ ನಿಯಂತ್ರಣ ರೇಖೆಯ ಕುರಿತು ಮೃದು ಧೋರಣೆ ತಳೆದ ಕಾರಣದಿಂದ, ಯುದ್ಧಭೂಮಿಯಲ್ಲಿ ವಿಜಯ ಸಾಧಿಸಿದರೂ ಮಾತು ಕತೆಯ ಮೇಜಿನಲ್ಲಿ ಭಾರತ ಕೈಚೆಲ್ಲಿತು ಎಂಬ ಟೀಕೆಗೆ ಹಕ್ಸರ್ ಮತ್ತು ತಂಡ ಗುರಿಯಾಯಿತು.

ಇಂದಿರಾ ಗಾಂಧಿಯವರ ಮಾಧ್ಯಮ ಸಲಹೆಗಾರ ರಾಗಿದ್ದ ಕನ್ನಡಿಗ ಎಚ್.ವೈ.ಶಾರದಾ ಪ್ರಸಾದ್ ಅವರು ಹಕ್ಸರ್ ಅವರ ಕುರಿತು ಹೀಗೆ ಬರೆದಿದ್ದರು: ‘ಹಕ್ಸರ್ ಅವರಲ್ಲಿ ಅಪ್ರತಿಮ ಬುದ್ಧಿಶಕ್ತಿಯಿತ್ತು. ಮನವೊಲಿಸುವ ವಾಕ್ಚಾತುರ್ಯ ಅವರಿಗೆ ಸಿದ್ಧಿಸಿತ್ತು. ವಾಲ್ಮೀಕಿ, ವಾಲ್ಟೈರ್, ಲೆನಿನ್ ಮತ್ತು ಸಾತ್ರೆಯನ್ನು ಉಲ್ಲೇಖಿಸಬಲ್ಲ ವ್ಯಾಪಕ ಓದು ಅವರದ್ದಾಗಿತ್ತು. ಯಾವುದೇ ವಿಷಯದಲ್ಲಿ ನಿರ್ಧಾರಕ್ಕೆ ಬರುವಾಗ ಅವರು ಒಂದು ಪ್ರಶ್ನೆಯನ್ನು ಹಾಕಿ ಕೊಳ್ಳುತ್ತಿದ್ದರು. ಇದು ನೈತಿಕವಾಗಿ ಸರಿಯೇ ಎಂಬುದು ಆ ಪ್ರಶ್ನೆಯಾಗಿರುತ್ತಿತ್ತು. ಅವರಲ್ಲಿ ನ್ಯೂನತೆ ಇರಲಿಲ್ಲ ವೆಂದಲ್ಲ, ಎಡಪಂಥೀಯ ಚಿಂತನೆಗಳತ್ತ ಒಲವು ಹೊಂದಿದ್ದ ಅವರು ಸರ್ಕಾರದ ನಿರ್ಧಾರಗಳ ಮೇಲೆ ಅದು ಪ್ರಭಾವ ಬೀರಲು ಅನುವು ಮಾಡಿಕೊಟ್ಟರು’.

ಹಲವು ವರ್ಷಗಳ ಕಾಲ ಭಾರತದ ರಾಯಭಾರಿಯಾಗಿ ದ್ದರು. ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತರಾದ ಹಕ್ಸರ್, 700 ರೂಪಾಯಿಯ ನಿವೃತ್ತಿ ವೇತನ ಪಡೆಯುತ್ತಿದ್ದರು. ನಿವೃತ್ತಿಯ ಬಳಿಕ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದಾಗ ‘ವೃತ್ತಿಯ ಭಾಗವಾಗಿ ಮಾಡಿದ ಕೆಲಸಗಳಿಗೆ ಪ್ರಶಸ್ತಿಯನ್ನು ಸ್ವೀಕರಿಸುವುದು ಮುಜುಗರದ ಸಂಗತಿ’ ಎಂದು ಆ ಉನ್ನತ ಪ್ರಶಸ್ತಿಯನ್ನು ನಿರಾಕರಿಸಿದ್ದರು.

ಇಂದಿರಾ ಅವರು ರಾಜಕೀಯವಾಗಿ ದೃಢ ಹೆಜ್ಜೆಗಳನ್ನು ಇಡುವಾಗ ಹಕ್ಸರ್ ಒಬ್ಬ ನಂಬಿಕಸ್ಥ ಸಲಹೆಗಾರನಾಗಿ ಅವರ ಜೊತೆಗಿದ್ದರು. ಭಾರತದ ಬೇಹುಗಾರಿಕಾ ಸಂಸ್ಥೆ ‘ರಾ’ ರೂಪುಗೊಂಡಿದ್ದರ ಹಿಂದೆ ಹಕ್ಸರ್ ಮುಂಗಾಣ್ಕೆ ಇತ್ತು. ಬ್ಯಾಂಕುಗಳ ರಾಷ್ಟ್ರೀಕರಣ, ರಾಜಧನ ರದ್ದತಿ ಕ್ರಮದ ಹಿಂದೆ ಹಕ್ಸರ್ ಸಲಹೆಯಿತ್ತು. ಸಂಜಯ್‌ ಗಾಂಧಿ ಮುಖ್ಯಭೂಮಿಕೆಗೆ ಬಂದ ಮೇಲೆ ಇಂದಿರಾ ಅವರಿಂದ ಹಕ್ಸರ್ ದೂರವಾದರು. ಆ ಬಳಿಕ ಇಂದಿರಾ ಗಾಂಧಿ ಎಡವಿದ್ದೇ ಹೆಚ್ಚು. ಹೀಗೆ ಹಕ್ಸರ್ ಅವರನ್ನು ನೆನಪು ಮಾಡಿಕೊಳ್ಳಲು ಹತ್ತಾರು ಕಾರಣಗಳಿವೆ. ಬಾಂಗ್ಲಾ ವಿಮೋಚನಾ ಯುದ್ಧ ಆ ಪೈಕಿ ಮಹತ್ವದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT