ಚೀನಾ ಹಾಗೂ ರಷ್ಯಾ ಮಿತ್ರರಾಷ್ಟ್ರಗಳು. ಈ ಎರಡು ದೇಶಗಳಿಂದ ಅಮೆರಿಕ ಸಮಾನ ಅಂತರ ಕಾಪಾಡಿಕೊಂಡಿದೆ. ವಿಶ್ವ ಕುದಿಕುಲುಮೆಯ ಸ್ವರೂಪ ತಳೆದಿರುವ ಸಂದರ್ಭದಲ್ಲಿ, ಈ ಮೂರು ದೇಶಗಳಿಗೆ ಸಂಬಂಧಿಸಿದ ರಾಜತಾಂತ್ರಿಕ ಮಾತುಕತೆಗಳು ವಿಶ್ವದ ಗಮನಸೆಳೆದಿವೆ...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಮೇ 13–15) ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (ಮೇ 19–20) ಒಂದು ವಾರದ ಅಂತರದಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಗಳನ್ನು ಜಗತ್ತು ಕುತೂಹಲದಿಂದ ಗಮನಿಸಿದೆ. ಟ್ರಂಪ್ ಅವರಿಗೆ ಸಿಕ್ಕ ಗೌರವ ಮತ್ತು ಕೆಂಪುಹಾಸಿನ ಸ್ವಾಗತ ಹಾಗೂ ಪುಟಿನ್ ಅವರಿಗೆ ದೊರೆತ ಆತಿಥ್ಯ ಒಂದೇ ಪ್ರಮಾಣದ್ದಾಗಿತ್ತೇ ಎಂಬ ತುಲನೆ ನಡೆದಿದೆ.

ಪುಟಿನ್ ಹಾಗೂ ಟ್ರಂಪ್ ಅವರ ಜೊತೆಗೆ ಷಿ ಜಿನ್ಪಿಂಗ್ ಎಷ್ಟು ಸೆಕೆಂಡುಗಳವರೆಗೆ ಹಸ್ತಲಾಘವ ಮಾಡಿದರು, ಯಾರ ಜೊತೆಗೆ ಆತ್ಮೀಯವಾಗಿ ನಡೆದುಕೊಂಡರು– ಹೀಗೆ ಪ್ರತೀಕ್ಷಣವನ್ನೂ ಮಸೂರನೋಟದಲ್ಲಿ ನೋಡಲಾಗಿದೆ. ಎರಡು ದೊಡ್ಡಮಟ್ಟದ ಸಂಘರ್ಷಗಳು ಚಾಲ್ತಿಯಲ್ಲಿರುವಾಗ, ಇರಾನ್ ಜೊತೆಗಿನ ಅಮೆರಿಕದ ಸಂಘರ್ಷ ತೈಲ ಬಿಕ್ಕಟ್ಟಿಗೆ ಕಾರಣವಾಗಿರುವಾಗ, ಮೂರು ದಿಗ್ಗಜ ಹಾಗೂ ನಿರ್ಣಾಯಕ ರಾಷ್ಟ್ರಗಳ ನಾಯಕರ ಭೇಟಿ ಜಗತ್ತಿನ ಗಮನ ಸೆಳೆದುದು ಸಹಜವೇ.

ಅಮೆರಿಕದ ಅಧ್ಯಕ್ಷರು ಚೀನಾಕ್ಕೆ ಭೇಟಿ ನೀಡುವ ಮತ್ತು ಚೀನಾದ ವರಿಷ್ಠರು ಅಮೆರಿಕದ ಅಧ್ಯಕ್ಷರೊಂದಿಗೆ ಆಪ್ತವಾಗಿ ನಡೆದುಕೊಳ್ಳುವ ದೃಶ್ಯಗಳು ಅಪರೂಪ. ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಚೀನಾಕ್ಕೆ ಭೇಟಿಯಿತ್ತಿದ್ದರು. ಷಿ ಜಿನ್ಪಿಂಗ್ ಕೂಡ ಅಮೆರಿಕಕ್ಕೆ ಹೋಗಿ ಬಂದಿದ್ದರು. ಅದು ಬಿಟ್ಟರೆ ಉಭಯ ನಾಯಕರು ಜಾಗತಿಕ ವೇದಿಕೆಗಳಲ್ಲಿ ಕೆಲವು ಬಾರಿ ಕೈ ಕುಲುಕಿದ್ದರು. ಅಮೆರಿಕ ಮತ್ತು ಚೀನಾಕ್ಕೆ ಹೋಲಿಸಿದರೆ, ಚೀನಾ ಮತ್ತು ರಷ್ಯಾದ ಸಂಬಂಧ ನಿಕಟ ಎನ್ನಬಹುದು. ಕಳೆದ 12 ವರ್ಷಗಳಲ್ಲಿ ಷಿ ಜಿನ್ಪಿಂಗ್ ಅವರು ರಷ್ಯಾಕ್ಕೆ 10 ಬಾರಿ ಭೇಟಿಯಿತ್ತಿದ್ದಾರೆ. ಪುಟಿನ್ ಅವರು ಚೀನಾಕ್ಕೆ 14 ಬಾರಿ ಬಂದು ಹೋಗಿದ್ದಾರೆ. ಕೋವಿಡ್ ತೀವ್ರತೆಯಿದ್ದ 2020 ಮತ್ತು 2021ನ್ನು ಹೊರತುಪಡಿಸಿದರೆ ಪ್ರತೀವರ್ಷ ಪುಟಿನ್ ಚೀನಾಕ್ಕೆ ಭೇಟಿಯಿತ್ತಿದ್ದಾರೆ! ಅದಕ್ಕೆ ಕಾರಣವೂ ಇದೆ.

ಚೀನಾ ಮತ್ತು ರಷ್ಯಾ ಇತ್ತೀಚಿನ ವರ್ಷಗಳಲ್ಲಿ ಹಲವು ಜಾಗತಿಕ ವಿಷಯಗಳಲ್ಲಿ ಜೊತೆಯಾಗಿ ಹೆಜ್ಜೆಯಿಡುತ್ತಿವೆ. ಚೀನಾ ಮತ್ತು ಅಮೆರಿಕದ ನಡುವಿನ ವಾಣಿಜ್ಯ ಸಮರ, ರಷ್ಯಾ ಮತ್ತು ಅಮೆರಿಕ ನಡುವಿನ ಹಲವು ದಶಕಗಳ ಪೈಪೋಟಿ ಹಾಗೂ ಉಕ್ರೇನ್ ಕುರಿತ ನಿಲುವು ರಷ್ಯಾ ಹಾಗೂ ಚೀನಾದ ದೃಷ್ಟಿಯಲ್ಲಿ ಅಮೆರಿಕವನ್ನು ಸಮಾನ ಪ್ರತಿಸ್ಪರ್ಧಿಯಾಗಿ ನಿಲ್ಲಿಸಿದೆ. ಇದೀಗ ಉಕ್ರೇನ್, ಇರಾನ್ ಮತ್ತು ತೈವಾನ್ ವಿಷಯಗಳು ಈ ತ್ರಿಪಕ್ಷೀಯ ಸಂಬಂಧವನ್ನು ಮರುರೂಪಿಸುತ್ತಿರುವಂತೆ ಕಾಣುತ್ತಿದೆ.

ಟ್ರಂಪ್ ಅವರು ಚೀನಾಕ್ಕೆ ಭೇಟಿಯಿತ್ತಾಗ ಇರಾನ್ ಬಿಕ್ಕಟ್ಟಿನ ಕುರಿತು ಮಾತುಕತೆ ನಡೆಯಬಹುದೇ, ಚೀನಾ ಮಧ್ಯವರ್ತಿಯಾದೀತೆ ಎಂಬ ಪ್ರಶ್ನೆಗಳು ಇದ್ದವು. ಟ್ರಂಪ್ ಅವರು ಚೀನಾಕ್ಕೆ ಭೇಟಿ ನೀಡುವ ವಾರದ ಮೊದಲು (ಮೇ 6ರಂದು) ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಚೀನಾಕ್ಕೆ ಭೇಟಿಯಿತ್ತಿದ್ದರು. ಚೀನಾದ ಕಚ್ಚಾತೈಲದ ಹಡಗುಗಳಿಗೆ ಹೊರ್ಮುಜ್ ಜಲಸಂಧಿಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆಯನ್ನು ಇರಾನ್ ನೀಡಿತ್ತು. ಅಮೆರಿಕ ಮತ್ತು ಇಸ್ರೇಲ್ನ ಜಂಟಿ ದಾಳಿಯನ್ನು ಇರಾನ್ ಸಮರ್ಥವಾಗಿ ಎದುರಿಸಲು ಸಾಧ್ಯವಾಗಿರುವುದು ಚೀನಾ ಮತ್ತು ರಷ್ಯಾಗಳ ಸಹಕಾರದಿಂದ ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಮತ್ತು ಷಿ ಜಿನ್ಪಿಂಗ್ ಅವರ ಭೇಟಿ ಕುತೂಹಲ ಕೆರಳಿಸಿತ್ತು.

ಆದರೆ, ಇರಾನ್ ಬಿಕ್ಕಟ್ಟಿನ ಕುರಿತು ದೀರ್ಘವಾದ ಚರ್ಚೆಗಳು ನಡೆಯಲಿಲ್ಲ. ಪ್ರಾಯಶಃ, ಚೀನಾ ಅದರಲ್ಲಿ ಆಸಕ್ತಿ ತೋರಿಸಿಲ್ಲದೇ ಇರಬಹುದು. ಹಾಗಾಗಿ, ಇರಾನ್ ಬಿಕ್ಕಟ್ಟಿನ ಪರಿಹಾರಕ್ಕೆ ಚೀನಾದ ಸಹಾಯ ಬೇಕಿಲ್ಲ ಎಂಬ ಮಾತನ್ನು ಟ್ರಂಪ್ ಆಡಿದರು. ಇರಾನ್ ಅಣ್ವಸ್ತ್ರ ರಾಷ್ಟ್ರವಾಗುವುದನ್ನು ಮತ್ತು ಹೊರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸುವುದನ್ನು ಚೀನಾ ಒಪ್ಪುವುದಿಲ್ಲ ಎಂಬ ಮಾತು ಪ್ರಸ್ತಾಪವಾಯಿತೇ ಹೊರತು ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಸಕ್ರಿಯವಾಗಿ ತೊಡಗಿಕೊಳ್ಳಬಹುದೇ ಎಂಬ ಕುರಿತು ಚರ್ಚೆ ಆಗಲಿಲ್ಲ.

ಅಮೆರಿಕ ಅಧ್ಯಕ್ಷರ ಎದುರು ತೈವಾನ್ ವಿಷಯವನ್ನು ಚೀನಾ ಪ್ರಸ್ತಾಪಿಸಿತು. ಈ ಶೃಂಗಸಭೆಯಲ್ಲಿ ಚೀನಾ ಮೇಲುಗೈ ಸಾಧಿಸಿತು ಎಂಬ ವಿಶ್ಲೇಷಣೆಗಳು ಬರುತ್ತಿರುವುದಕ್ಕೆ ಅದೇ ಕಾರಣ. ‘ಒಂದು ಚೀನಾ’ ನೀತಿಗೆ ಅನುಗುಣವಾಗಿ ಬೃಹತ್ ಚೀನಾದ ಭಾಗವಾಗಿ ತೈವಾನ್ ಇರಬೇಕು ಎಂಬುದು ಚೀನಾದ ನಿಲುವು. ಆದರೆ, ತೈವಾನ್ ತನ್ನ ಸಾರ್ವಭೌಮತ್ವವನ್ನು ಬಿಟ್ಟುಕೊಡಲು ಸಿದ್ಧವಿಲ್ಲ. ಅಮೆರಿಕ ತನ್ನ ರಕ್ಷಣೆಗೆ ನಿಲ್ಲಲಿದೆ ಎಂಬ ವಿಶ್ವಾಸ ಅದಕ್ಕಿದೆ. 1979ರಲ್ಲಿ ಅಮೆರಿಕದ ಸಂಸತ್ತಿನಲ್ಲಿ ಅನುಮೋದನೆಗೊಂಡ ತೈವಾನ್ ಸಂಬಂಧ ಕಾಯ್ದೆಯ ಅನ್ವಯ ತೈವಾನ್ ಆಡಳಿತವನ್ನು ಅಧಿಕೃತವಾಗಿ ಅಮೆರಿಕ ಗುರ್ತಿಸದಿದ್ದರೂ, ಅದರ ಸ್ವರಕ್ಷಣೆಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ಒದಗಿಸಲು ಬದ್ಧವಾಗಿದೆ.

ಈ ಹಿಂದೆ ತೈವಾನ್ಗೆ ಸಂಬಂಧಿಸಿದಂತೆ ಚೀನಾ ಆಕ್ರಮಣಕಾರಿ ಹೆಜ್ಜೆ ಇಡುತ್ತಿದೆ ಎನಿಸಿದಾಗ ತೈವಾನ್ ರಕ್ಷಣೆಗೆ ಅಮೆರಿಕ ಧಾವಿಸಿತ್ತು. 1995ರಲ್ಲಿ ತೈವಾನ್ ಜಲಸಂಧಿ ಬಿಕ್ಕಟ್ಟು ಉದ್ಭವಿಸಿದಾಗ, ಆಗಿನ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಚೀನಾವನ್ನು ತಡೆಯಲು ಯುಎಸ್ಎಸ್ ನಿಮಿಟ್ಜ್ ವಿಮಾನವಾಹಕ ನೌಕೆಯನ್ನು ತೈವಾನ್ ಜಲಸಂಧಿಗೆ ಕಳುಹಿಸಿದ್ದರು. ಹಾಗಾಗಿ, ಚೀನಾ–ಅಮೆರಿಕ ಸಂಬಂಧಗಳಲ್ಲಿ ತೈವಾನ್ ಪ್ರಶ್ನೆ ಅತ್ಯಂತ ಪ್ರಮುಖ ವಿಷಯವಾಗಿದೆ.

ಟ್ರಂಪ್ ಅವರು ಇತ್ತೀಚಿನ ಚೀನಾ ಭೇಟಿಯ ವೇಳೆ ತೈವಾನ್ಗೆ ಅಮೆರಿಕದ ಬೆಂಬಲವನ್ನು ಸ್ಪಷ್ಟವಾಗಿ ಪುನರುಚ್ಚರಿಸಲಿಲ್ಲ. ಬದಲಿಗೆ ತೈವಾನ್ ಕುರಿತು ಚೀನಾ ಭಾವನಾತ್ಮಕ ನಿಲುವು ಹೊಂದಿದೆ ಎಂಬರ್ಥದಲ್ಲಿ ಮಾತನಾಡಿದರು! ತೈವಾನ್ಗೆ ಶಸ್ತ್ರಾಸ್ತ್ರ ಮಾರಾಟವನ್ನು ಅಮೆರಿಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಅದಕ್ಕೆ ಇರಾನ್ ಸಂಘರ್ಷ ಕಾರಣ ಎನ್ನಲಾಯಿತು. ಇರಾನ್, ಪಶ್ಚಿಮ ಏಷ್ಯಾ ಮತ್ತು ಉಕ್ರೇನ್ ವಿಷಯದಲ್ಲಿ ಚೀನಾದ ಸಹಕಾರ ಅಮೆರಿಕಕ್ಕೆ ಬೇಕಿದ್ದರೆ, ತೈವಾನ್ ವಿಷಯದಲ್ಲಿ ಅಮೆರಿಕ ತಟಸ್ಥವಾಗಿರಬೇಕು ಎಂಬ ಸಂದೇಶ ಪರೋಕ್ಷವಾಗಿಯಾದರೂ ಚೀನಾದಿಂದ ರವಾನೆಯಾಗಿರಲಿಕ್ಕೆ ಸಾಕು.

ಅಚ್ಚರಿ ಎಂದರೆ, ಟ್ರಂಪ್ ಅವರು ಎರಡು ದಿನಗಳ ಕಾಲ ಚೀನಾದಲ್ಲಿದ್ದರೂ ಜಂಟಿ ಹೇಳಿಕೆ ಹೊರಬರಲಿಲ್ಲ. ಎರಡು ರಾಷ್ಟ್ರಗಳು ಸಾಧಿಸಿದ ಒಪ್ಪಂದಗಳ ಕುರಿತು ವರದಿಗಳನ್ನು ಮಾತ್ರ ಬಿಡುಗಡೆ ಮಾಡಲಾಯಿತು. ಅದರಲ್ಲಿ ಬೋಯಿಂಗ್ ವಿಮಾನಗಳ ಮಾರಾಟ, ಕೃಷಿ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಭವಿಷ್ಯದ ಸುಂಕ ಕಡಿತಗಳ ಉಲ್ಲೇಖಗಳು ಇದ್ದವು. ಮೊದಲಿಗೆ 500 ಬೋಯಿಂಗ್ ವಿಮಾನಗಳನ್ನು ಚೀನಾ ಖರೀದಿಸಲಿದೆ ಎನ್ನಲಾಗಿತ್ತು, ಆದರೆ ಆ ಸಂಖ್ಯೆ 200ಕ್ಕೆ ಇಳಿಕೆಯಾಯಿತು. ಹಾಗಾಗಿ ಚೀನಾ ಭೇಟಿಯಿಂದ ಅಮೆರಿಕಕ್ಕೆ ಆದ ಪ್ರಯೋಜನವೇನು ಎಂಬ ಪ್ರಶ್ನೆ ಅಮೆರಿಕದಲ್ಲಿ ಕೇಳಿಬರುತ್ತಿದೆ.

ಟ್ರಂಪ್ ಅವರು ಚೀನಾಕ್ಕೆ ಬಂದುಹೋದ ಬೆನ್ನಲ್ಲೇ, ಪುಟಿನ್ ಅವರ ಚೀನಾ ಭೇಟಿ ನಡೆದಿದೆ. ಅದರಲ್ಲಿ ಅಚ್ಚರಿ ಏನಿಲ್ಲ. ನಾಲ್ಕು ವರ್ಷಗಳಿಂದ ಉಕ್ರೇನ್ ಸಂಘರ್ಷ ಚಾಲ್ತಿಯಲ್ಲಿದ್ದರೂ, ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ದಿಗ್ಬಂಧನ ಹೇರಿದ್ದರೂ ರಷ್ಯಾ ಕುಗ್ಗಿಲ್ಲ ಎಂದರೆ ಅದಕ್ಕೆ ಚೀನಾದ ಬೆಂಬಲ ಕಾರಣ ಎಂಬುದು ಸ್ವತಃ ಅಮೆರಿಕಕ್ಕೆ ಗೊತ್ತಿದೆ. ಹಲವು ರಾಷ್ಟ್ರಗಳ ನಾಯಕರು ಇತ್ತೀಚಿನ ವರ್ಷಗಳಲ್ಲಿ ಚೀನಾಕ್ಕೆ ಭೇಟಿ ನೀಡುವುದು ಸಾಮಾನ್ಯವಾಗಿದೆ. ಜಾಗತಿಕ ರಾಜಕೀಯದಲ್ಲಿ ಅನಿವಾರ್ಯ ಕೇಂದ್ರಬಿಂದುವಾಗಿ ಚೀನಾ ಹೊರಹೊಮ್ಮುತ್ತಿದೆ. ಎಲೆಕ್ಟ್ರಾನಿಕ್ಸ್, ಬ್ಯಾಟರಿಗಳು, ಔಷಧಗಳು ಮತ್ತು ನಿರ್ಣಾಯಕ ಖನಿಜಗಳ ವಿಷಯದಲ್ಲಿ ಜಾಗತಿಕ ಪೂರೈಕೆ ಜಾಲ ಚೀನಾದ ಮೇಲೆ ಅವಲಂಬಿತವಾಗಿದೆ.

ಚೀನಾ ಮತ್ತು ಅಮೆರಿಕಕ್ಕೆ ಸಂಬಂಧಿಸಿದಂತೆ ಏಷ್ಯಾದ ಅನೇಕ ರಾಷ್ಟ್ರಗಳು ಮಿಶ್ರ ತಂತ್ರಗಳನ್ನು ಅನುಸರಿಸುತ್ತಿವೆ. ಭದ್ರತೆಗಾಗಿ ಅಮೆರಿಕವನ್ನು ಅವಲಂಬಿಸಿದರೂ, ಆರ್ಥಿಕವಾಗಿ ಚೀನಾದೊಂದಿಗೆ ಹೆಣೆದುಕೊಂಡಿವೆ. ನಾವು ಚೀನಾದ ಜೊತೆಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಹಾಗೂ ಹಲವು ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳಾಗಿರುವುದರಿಂದ ಭಾರತ ಮತ್ತು ಚೀನಾದ ಸಂಬಂಧ ಜಟಿಲವಾಗಿದೆ. ಈ ಅಂಶವನ್ನೇ ಪ್ರಧಾನವಾಗಿಟ್ಟುಕೊಂಡು ಭಾರತವನ್ನು ಒಳಗೊಂಡು ಅಮೆರಿಕ ‘ಕ್ವಾಡ್ ಒಕ್ಕೂಟ’ ರಚಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಕ್ವಾಡ್ ಕುರಿತು ಆಸಕ್ತಿ ಕಳೆದುಕೊಂಡಿದೆ ಮತ್ತು ಕ್ವಾಡ್ ಶೃಂಗಸಭೆ ವಿದೇಶಾಂಗ ಸಚಿವರ ಪಾಲ್ಗೊಳ್ಳುವಿಕೆಯ ಮಟ್ಟಕ್ಕೆ ಇಳಿದಿದೆ. ಚೀನಾ ಹಾಗೂ ರಷ್ಯಾದ ನಡುವೆ ಗಟ್ಟಿಯಾಗುತ್ತಿರುವ ಬಂಧ ಭಾರತದ ಕಳವಳವನ್ನು ಹೆಚ್ಚಿಸಿದೆ.

1972ರಲ್ಲಿ ಬೀಜಿಂಗ್ನಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಚೀನಾದ ವರಿಷ್ಠ ಮಾವೋ ಜಿಡಾಂಗ್ ಅವರನ್ನು ಭೇಟಿಯಾಗಿದ್ದರು. ಅದು ದೊಡ್ಡ ಸಂಚಲನ ಸೃಷ್ಟಿಸಿತ್ತು. ಆ ಭೇಟಿ ದಶಕಗಳ ಕಾಲ ಚೀನಾ ಮತ್ತು ಅಮೆರಿಕ ನಡುವೆ ಇದ್ದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿತ್ತು. ‘ಒಂದು ಚೀನಾ’ ನೀತಿಯನ್ನು ಅಮೆರಿಕ ಅನುಮೋದಿಸಿತ್ತು. ಸೋವಿಯತ್ ವಿರುದ್ಧ ಉಭಯ ರಾಷ್ಟ್ರಗಳ ನಡುವೆ ಮೌನ ಮೈತ್ರಿ ಏರ್ಪಟ್ಟಿತ್ತು. ಇದೀಗ ಟ್ರಂಪ್ ಅವರು ಚೀನಾಕ್ಕೆ ಬಂದು ಹೋಗಿದ್ದಾರೆ. ಮೈತ್ರಿಗಿಂತ ಮೌನ ಎದ್ದು ಕಂಡಿದೆ. ಇದು ಇರುವ ಸಂಘರ್ಷಗಳನ್ನು ಕೊನೆಗಾಣಿಸುತ್ತದೋ ಇಲ್ಲವೇ ಹೊಸದಕ್ಕೆ ಜಾಗ ಮಾಡಿಕೊಡುತ್ತದೋ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.