ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಗ್ದಂಡನೆ ಎಂಬ ವಿರಳ ವಿದ್ಯಮಾನ

ಆತುರಕ್ಕೆ ‘ಬ್ರಹ್ಮಾ ಸ್ತ್ರ’ ಬಳಸಿ ಡೆಮಾಕ್ರಟಿಕ್ ಪಕ್ಷ, ಬತ್ತಳಿಕೆ ಬರಿದು ಮಾಡಿಕೊಂಡಿತೇ?
Last Updated 16 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಶ್ವೇತಭವನದಲ್ಲಿ ಈಚೆಗೆ ತಮ್ಮ ಪಕ್ಷದ ಸದಸ್ಯರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಡೊನಾಲ್ಡ್‌ ಟ್ರಂಪ್ ತಾವು ಇದುವರೆಗೆ ಪಕ್ಷಪಾತಿ ಪತ್ರಿಕೆ ಎಂದು ಕರೆಯುತ್ತಿದ್ದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯನ್ನು ಎತ್ತಿ ಹಿಡಿದು ಅದರ ಒಕ್ಕಣೆ ‘Trump Acquitted’ ಎಂಬುದನ್ನು ತೋರಿಸಿ, ಇದು ವಿಜಯೋತ್ಸವದ ಸಂದರ್ಭ ಎಂದರು. ಆ ಮಾತಿಗೆ ಎರಡು ಅರ್ಥ ಇರಬಹುದು. ಒಂದು, ವಾಗ್ದಂಡನೆ ವಿಷಯದಲ್ಲಿ ಸಂಸತ್ತಿನಲ್ಲಿ ತಮಗೆ ಜಯ ದೊರೆತಿದೆ ಎಂಬುದು. ಮತ್ತೊಂದು, ತಮ್ಮನ್ನು ಇದುವರೆಗೆ ತೆಗಳುತ್ತಿದ್ದ ಕೆಲವು ಮಾಧ್ಯಮ ಸಂಸ್ಥೆಗಳು ಕೊನೆಗೂ ‘ದೋಷಮುಕ್ತ’ ಎಂದು ಕರೆಯಬೇಕಾದ ಸನ್ನಿವೇಶ ಸೃಷ್ಟಿಯಾದದ್ದು ಕೂಡ ತಮಗೆ ಸಿಕ್ಕ ಗೆಲುವು ಎಂದು ಟ್ರಂಪ್ ಹಾಗೆ ಹೇಳಿರಬಹುದು.

ಅದೇನೇ ಇರಲಿ, ಅಮೆರಿಕದ ಮಟ್ಟಿಗೆ ವಾಗ್ದಂಡನೆ ಎಂಬುದು ವಿಶಿಷ್ಟ ಮತ್ತು ಅಪರೂಪದ ವಿದ್ಯಮಾನ. ಜನರಿಂದ ಆಯ್ಕೆಯಾದ ಅಧ್ಯಕ್ಷರನ್ನು ಅವಧಿಗೆ ಮುನ್ನವೇ ಪದಚ್ಯುತಿಗೊಳಿಸಬಹುದಾದ ವಿಶೇಷ ಅಧಿಕಾರವನ್ನು ಅಮೆರಿಕದ ಸಂವಿಧಾನವು ಅಲ್ಲಿನ ಸಂಸತ್ತಿಗೆ ನೀಡಿದೆ. ಜೊತೆಗೆ ಆ ಪ್ರಕ್ರಿಯೆ ಹೇಗೆ ನಡೆಯಬೇಕು ಎಂಬುದನ್ನು ವ್ಯಾಖ್ಯಾನಿಸಿದೆ. ಇದುವರೆಗೆ ನಲವತ್ತೈದು ಅಧ್ಯಕ್ಷರನ್ನು ಕಂಡಿರುವ ಅಮೆರಿಕದಲ್ಲಿ, ಮೂವರು ಅಧ್ಯಕ್ಷರ ವಿರುದ್ಧ ವಾಗ್ದಂಡನೆಯ ನಿರ್ಣಯ ಮಂಡನೆಯಾಗಿ ಖುಲಾಸೆಯಾಗಿದೆ. ಒಂದು ಬಾರಿ ಮಾತ್ರ ಪದಚ್ಯುತಿ ಖಚಿತ ಎಂದು ಅರಿವಾದಾಗ ಅಧ್ಯಕ್ಷರು ತಾವೇ ರಾಜೀನಾಮೆ ಸಲ್ಲಿಸಿ ಹೊರನಡೆದ ಪ್ರಸಂಗ ಜರುಗಿದೆ.

ಸಂಸತ್ತಿಗೆ ವಾಗ್ದಂಡನೆಯ ಅಧಿಕಾರ ನೀಡಿರುವ ಸಂವಿಧಾನವು ಮಾನದಂಡವನ್ನೂ ಗುರುತಿಸಿದೆ. ಮುಖ್ಯವಾಗಿ ದೇಶದ್ರೋಹ, ಲಂಚ, ಹೆಚ್ಚಿನ ಅಪರಾಧ ಮತ್ತು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಮಾತ್ರ ದೋಷಾರೋಪ ಸಲ್ಲಿಸಬಹುದು ಎನ್ನುತ್ತದೆ ಸಂವಿಧಾನ. ಆದರೆ ‘ಹೆಚ್ಚಿನ ಅಪರಾಧ ಮತ್ತು ದುಷ್ಕೃತ್ಯ’ ಎಂಬ ಬಗ್ಗೆ ವಿಸ್ತರಿಸದೇ, ಅದರ ವ್ಯಾಖ್ಯಾನ ಸಂಸತ್ತಿನ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದೆ. ಮೊದಲ ಬಾರಿಗೆ 1868ರಲ್ಲಿ ಅಂದಿನ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ ಅವರ ವಿರುದ್ಧ ವಾಗ್ದಂಡನೆಯ ನಿರ್ಣಯ ಮಂಡನೆಯಾದಾಗ ಈ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಅಂತಿಮವಾಗಿ ಅಧ್ಯಕ್ಷರ ಕಾರ್ಯವೈಖರಿ, ಯೋಜನೆಗಳು ಸಂಸತ್ ಸದಸ್ಯರಿಗೆ ಒಪ್ಪಿಗೆಯಾಗಲಿಲ್ಲ ಎಂಬ ಕಾರಣಕ್ಕೆ ಅಧ್ಯಕ್ಷರನ್ನು ವಾಗ್ದಂಡನೆಗೆ ಗುರಿಪಡಿಸುವಂತಿಲ್ಲ ಎಂಬ ತೀರ್ಮಾನವನ್ನು ಸಂಸತ್ತು ಅಂಗೀಕರಿಸಿತು. ನಂತರ ನಿಕ್ಸನ್ ಪ್ರಕರಣದಲ್ಲಿ ಈ ವಿಷಯ ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂತು.

ಅಮೆರಿಕದ ರಾಜಕೀಯ ಹಗರಣಗಳ ಪೈಕಿ ನಿಕ್ಸನ್ ಅವಧಿಯ ‘ವಾಟರ್ ಗೇಟ್ ಪ್ರಕರಣ’ ಬಹುಮುಖ್ಯವಾದುದು. ಆದದ್ದಾದರೂ ಇಷ್ಟೇ. 1972ರ ಅಧ್ಯಕ್ಷೀಯ ಚುನಾವಣೆ ವೇಳೆ ನಿಕ್ಸನ್ ಪರ ಇದ್ದ ಒಂದು ಗುಂಪು ಡಕಾಯಿತರ ಸೋಗಿನಲ್ಲಿ ವಾಷಿಂಗ್ಟನ್ ನಗರದ ವಾಟರ್ ಗೇಟ್ ಕಟ್ಟಡದಲ್ಲಿದ್ದ ವಿರೋಧ ಪಕ್ಷದ ಕಚೇರಿಗೆ ನುಗ್ಗಿ, ಅಲ್ಲಿದ್ದ ಫೋನುಗಳಿಗೆ ಕದ್ದಾಲಿಕೆ ಉಪಕರಣ ಅಳವಡಿಸಿ, ದಾಖಲೆ ಕಳವು ಮಾಡಲು ಮುಂದಾಯಿತು. ಪ್ರಕರಣ ಬೆಳಕಿಗೆ ಬಂದಾಗ ನಿಕ್ಸನ್ ತಮಗೂ ಈ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲವೆಂದಿದ್ದರು.

1972ರ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದರು. ಆದರೆ ತನಿಖೆ ಮುಂದುವರಿದಂತೆ, ನಿಕ್ಸನ್ ಕಚೇರಿ ಈ ಕೃತ್ಯದಲ್ಲಿ ಭಾಗಿಯಾಗಿದೆ ಎಂಬುದು ದೃಢಪಟ್ಟಿತು. ಇದನ್ನು ಅರಿತ ನಿಕ್ಸನ್ ಆಡಳಿತವು ತನಿಖೆಯನ್ನು ದಿಕ್ಕುತಪ್ಪಿಸಲು ನೋಡಿತು. ಇದನ್ನು ಅಮೆರಿಕದ ಸಂಸತ್ತು ಅಧಿಕಾರದ ದುರುಪಯೋಗ ಎಂದು ಪರಿಗಣಿಸಿ ವಾಗ್ದಂಡನೆಯ ನಿರ್ಣಯ ಅಂಗೀಕರಿಸಿತು. ತಮ್ಮ ಪದಚ್ಯುತಿ ಖಚಿತ ಎಂದರಿತ ನಿಕ್ಸನ್ ರಾಜೀನಾಮೆ ನೀಡಿ ಅಧಿಕಾರ ತ್ಯಜಿಸಿದರು.

ನಂತರ ಜಗತ್ತಿನ ಗಮನ ಸೆಳೆದದ್ದು ಕ್ಲಿಂಟನ್ ಪ್ರಕರಣ. ಅದಕ್ಕೆ ಲೈಂಗಿಕತೆಯ ಆಯಾಮ ಇತ್ತಾದ್ದರಿಂದ ರೋಚಕವಾಗಿ ವರದಿಯಾಯಿತು. 1992ರ ಚುನಾವಣೆಯ ವೇಳೆ, ಕ್ಲಿಂಟನ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಮೊದಲಿಗೆ ಟ್ಯಾಬ್ಲಾಯ್ಡ್ ಒಂದರಲ್ಲಿ ಪ್ರಕಟವಾಯಿತು. ಕ್ಲಿಂಟನ್ ಆ ಸುದ್ದಿಯನ್ನು ಅಲ್ಲಗಳೆದಿದ್ದರು. ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾದ ತರುವಾಯ ಕ್ಲಿಂಟನ್ ಬದುಕಿನ ಬಣ್ಣದ ಪುಟಗಳು ತೆರೆದುಕೊಂಡವು. ಮೋನಿಕಾ ಲೆವಿನ್ಸ್ಕಿ ಪ್ರಕರಣವಂತೂ ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು. ಆರೋಪವನ್ನುಕ್ಲಿಂಟನ್ ನಿರಾಕರಿಸಿದರು. ಅಧಿಕಾರ ದುರುಪಯೋಗದಡಿಯಲ್ಲಿ ಸಂಸತ್ತು ಕ್ಲಿಂಟನ್ ವಿರುದ್ಧ ದೋಷಾರೋಪ ಸಲ್ಲಿಸಿತು. ಡೆಮಾಕ್ರಟಿಕ್ ಪಕ್ಷ ಒಗ್ಗಟ್ಟು ಕಾಯ್ದುಕೊಂಡಿತು. ಕ್ಲಿಂಟನ್ ವಿರುದ್ಧದ ದೋಷಾರೋಪಕ್ಕೆ ಸೋಲಾಯಿತು.

ಇದೀಗ ಸೋಲು ಕಂಡ ಟ್ರಂಪ್ ವಿರುದ್ಧದ ದೋಷಾರೋಪ ಪಟ್ಟಿಯಲ್ಲೂ ಅಧಿಕಾರ ದುರುಪಯೋಗದ ಹಾಗೂ ಸಂಸತ್ತಿನ ಕಾರ್ಯನಿರ್ವ
ಹಣೆಗೆ ಅಡ್ಡಿಯುಂಟು ಮಾಡಿದ ಉಲ್ಲೇಖಗಳಿದ್ದವು. ಈ ಹಿಂದೆ ಡೆಮಾಕ್ರಟಿಕ್ ಪಕ್ಷ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಕುರಿತ ತನಿಖೆಯನ್ನು ಟ್ರಂಪ್ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ವಾಗ್ದಂಡನೆಯ ನಿಲುವಳಿ ಮಂಡಿಸಿತ್ತು. ಆದರೆ ಬಹುಮತವಿರದ ಕಾರಣ ಅದಕ್ಕೆ ಸೋಲಾಗಿತ್ತು. ಬಳಿಕ 2019ರ ಜುಲೈನಲ್ಲಿ ಉಕ್ರೇನ್ ಸೇನಾ ನೆರವಿಗೆ ಅಮೆರಿಕದ ಸಂಸತ್ತು ಅನುಮೋದಿಸಿದ್ದ ಹಣವನ್ನು ಬಿಡುಗಡೆ ಮಾಡಲು ಟ್ರಂಪ್ ತಡೆದರು.

ಜುಲೈ 25ರಂದು ಉಕ್ರೇನ್ ಅಧ್ಯಕ್ಷ ಈ ಕುರಿತು ಚರ್ಚಿಸಲು ಶ್ವೇತಭವನಕ್ಕೆ ಕರೆ ಮಾಡಿದಾಗ, ಅನುದಾನಕ್ಕೆ ಪ್ರತಿಯಾಗಿ ಉಕ್ರೇನ್ ಅನಿಲ ಕಂಪನಿಯ ಜೊತೆ ವ್ಯವಹಾರ ಹೊಂದಿರುವ ತಮ್ಮ ರಾಜಕೀಯ ಎದುರಾಳಿ ಜೋ ಬಿಡೆನ್ ವಿರುದ್ಧ ತನಿಖೆ ಆರಂಭಿಸುವಂತೆ ಟ್ರಂಪ್ ಒತ್ತಡ ಹೇರಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಈ ಕಾರಣವನ್ನೇ ಮುಂದಿಟ್ಟುಕೊಂಡು ಡೆಮಾಕ್ರಟಿಕ್ ಪಕ್ಷ ಮತ್ತೊಮ್ಮೆ ವಾಗ್ದಂಡನೆಗೆ ಪ್ರಯತ್ನಿಸಿತು.

ಅಮೆರಿಕದ ಮಟ್ಟಿಗೆ ಸಾಮಾನ್ಯವಾಗಿ ಪಕ್ಷಗಳು ತಮ್ಮ ಚುನಾಯಿತ ಪ್ರತಿನಿಧಿಗಳ ಮೇಲೆ ಮತದಾನದ ಕುರಿತು ಒತ್ತಡ ಹೇರುವುದಿಲ್ಲ. ಜನಪ್ರತಿನಿಧಿಗಳು ಮುಕ್ತವಾಗಿ, ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬಹುದಾದ ಅವಕಾಶಗಳಿವೆ. ಯಾವುದಾದರೂ ಕಾಯ್ದೆ ಕುರಿತು ನಿರ್ಣಯಕ್ಕೆ ಬರುವಂತಹ ಅಪರೂಪದ ಸಂದರ್ಭದಲ್ಲಿ ಮಾತ್ರ ಪಕ್ಷದ ನಿಲುವಿನ ಪರವಾಗಿ ಮತ ಚಲಾಯಿಸಬೇಕು ಎಂಬ ನಿಬಂಧನೆ ಹಾಕಲಾಗುತ್ತದೆ. ಈ ಬಾರಿ ರಾಮ್ನಿ ಅವರು ರಿಪಬ್ಲಿಕನ್ ಪಕ್ಷದವರಾಗಿದ್ದರೂ ಟ್ರಂಪ್ ವಾಗ್ದಂಡನೆಯ ಪರ ಮತ ಚಲಾಯಿಸಿದರು. ಡೆಮಾಕ್ರಟಿಕ್ ಪಕ್ಷದ ತುಳಸಿ ಗಬ್ಬಾರ್ಡ್ ‘ಮುಂಬರುವ ಚುನಾವಣೆಯಲ್ಲಿ ಜನರೇ ನಿರ್ಧರಿಸಲಿ’ ಎಂದು ತಟಸ್ಥವಾಗಿ ಉಳಿದರು.

ಅಷ್ಟಕ್ಕೂ, ವಾಗ್ದಂಡನೆ ನಿರ್ಣಯಕ್ಕೆ ಸೋಲಾಗುವುದು ಖಾತರಿ ಎಂದು ತಿಳಿದಿದ್ದರೂ ಡೆಮಾಕ್ರಟಿಕ್ ಪಕ್ಷ ಈ ಪ್ರಕ್ರಿಯೆಯನ್ನು ಮುಂದುವರಿಸಿದ್ದಕ್ಕೆ ಒಂದು ಕಾರಣವಿದೆ. ಇದು ಚುನಾವಣಾ ವರ್ಷ. ಈ ಸಂದರ್ಭದಲ್ಲಿ ಟ್ರಂಪ್ ವಿರುದ್ಧ ಹೀಗೊಂದು ಚರ್ಚೆ ನಡೆಯುವುದು ಡೆಮಾಕ್ರಟಿಕ್ ಪಕ್ಷಕ್ಕೆ ಅಗತ್ಯವಿತ್ತು. ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ, ಸನ್ನಿವೇಶಕ್ಕೆ ತಕ್ಕಂತೆ ಮತ ಹಾಕುವ, ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಹಿಳಾ ಮತದಾರರಲ್ಲಿ ಟ್ರಂಪ್ ವಿರುದ್ಧ ಅಭಿಪ್ರಾಯ ರೂಪಿಸಲು ಡೆಮಾಕ್ರಟಿಕ್ ಪಕ್ಷ ಈ ಪ್ರಕ್ರಿಯೆಯನ್ನು ಬಳಸಿಕೊಂಡಿತು. ಆದರೆ ಎರಡು ಬಾರಿ ವಾಗ್ದಂಡನೆಗೆ ಗುರಿಪಡಿಸಲು ಯತ್ನಿಸಿ ಸೋತ ಡೆಮಾಕ್ರಟಿಕ್ ಪಕ್ಷದ ನಡೆ, ಟ್ರಂಪ್ ಪರ ಅನುಕಂಪದ ಅಲೆ ಎಬ್ಬಿಸಿ ಚುನಾವಣೆಯಲ್ಲಿ ತಿರುಗುಬಾಣವಾದರೆ ಅಚ್ಚರಿಯಿಲ್ಲ.

ಒಂದಂತೂ ನಿಜ, ಟ್ರಂಪ್ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಅಮೆರಿಕದಲ್ಲಿ ರಾಜಕೀಯ ಧ್ರುವೀಕರಣವನ್ನು ತೀವ್ರಗೊಳಿಸಿದೆ. ಇದುವರೆಗೆ ವಾಗ್ದಂಡನೆ ಎಂಬುದು ಅಮೆರಿಕದಲ್ಲಿ ಅಪರೂಪದ, ಮಹತ್ವದ ವಿದ್ಯಮಾನವಾಗಿತ್ತು. ಈ ಪ್ರಕ್ರಿಯೆಯನ್ನು ವರದಿ ಮಾಡುವುದು ಪತ್ರಕರ್ತರಿಗೆ ಜೀವಮಾನದ ಅವಕಾಶ ಎನಿಸುತ್ತಿತ್ತು. ಆದರೆ ಅಧ್ಯಕ್ಷರನ್ನು ಕಟ್ಟಿಹಾಕುವ ಅಸ್ತ್ರವಾಗಿ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಾಗ್ದಂಡನೆಯ ಅಧಿಕಾರ ಬಳಕೆಯಾದರೆ ಅದರ ಮಹತ್ವವಂತೂ ಕುಗ್ಗುತ್ತದೆ. ಆತುರಕ್ಕೆ ಬ್ರಹ್ಮಾಸ್ತ್ರ ಬಳಸಿ ಡೆಮಾಕ್ರಟಿಕ್ ಪಕ್ಷ ಬತ್ತಳಿಕೆ ಬರಿದು ಮಾಡಿಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT