ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧೀಂದ್ರ ಬುಧ್ಯ ಲೇಖನ: ಟ್ರಂಪ್ ಪದವಿ ಕಸಿಯಿತೇ ಕೊರೊನಾ?

ಚೀನಾ ಕುರಿತು ಬೈಡನ್ ಧೋರಣೆ ಏನಿರಲಿದೆ ಎಂಬುದು ಭಾರತಕ್ಕೆ ಮುಖ್ಯವಾಗಲಿದೆ
Last Updated 8 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಅಮೆರಿಕದ ರಾಜಕೀಯ ಇತಿಹಾಸ ಗಮನಿಸಿದರೆ, ಮಹತ್ವದ್ದು ಎನಿಸಿಕೊಂಡ ನಾಲ್ಕಾರು ಅಧ್ಯಕ್ಷೀಯ ಚುನಾವಣೆಗಳು ಸಿಗುತ್ತವೆ. 2020ರ ಈ ಚುನಾವಣೆಯೂ ಮಹತ್ವದ್ದು ಎನಿಸಿಕೊಂಡಿತು. ಅದಕ್ಕೆ ಕಾರಣ, ಕೊರೊನಾ ಸೋಂಕು ಅಮೆರಿಕವನ್ನು ಮತ್ತು ಜಗತ್ತನ್ನು ಹೈರಾಣು ಮಾಡಿರುವ ಅವಧಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಇದು ಎನ್ನುವುದು. ಕೊರೊನಾ ಸೋಂಕು ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಒಟ್ಟಿಗೇ ಸೃಷ್ಟಿಸಿದೆ. ಈ ಎರಡು ಹೊಡೆತಗಳನ್ನು ಒಟ್ಟಿಗೆ ತಡೆದುಕೊಳ್ಳುವುದು ಯಾವ ಅಧಿಕಾರಸ್ಥ ಸರ್ಕಾರಕ್ಕಾದರೂ ಕಷ್ಟವೇ. ಹಾಗಾಗಿ ಜನ ಕೊರೊನಾ ಸೋಂಕಿನ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಆಡಳಿತಾರೂಢ ಪಕ್ಷದ ವಿರುದ್ಧ ಮತ ಚಲಾಯಿಸುವರೇ ಎಂಬ ಪ್ರಶ್ನೆಗೆ ಈ ಚುನಾವಣೆಯಲ್ಲಿ ಉತ್ತರ ಹುಡುಕಬಹುದು.

ಈ ಚುನಾವಣೆಯಲ್ಲಿ ಜನಪ್ರಿಯ ಮತಗಳ ಹಾವು ಏಣಿ ಆಟ ಹೆಚ್ಚು ಕುತೂಹಲ ಉಂಟುಮಾಡಿತು. ಹೆಚ್ಚಿನ ಸಂಖ್ಯೆಯಲ್ಲಿ ಅಂಚೆ ಮತದಾನ ನಡೆದದ್ದರಿಂದ ಮತ ಎಣಿಕೆಯ ಪ್ರಕ್ರಿಯೆ ಹೆಚ್ಚು ಸಮಯ ತೆಗೆದುಕೊಂಡಿತು. ಇದೀಗ ಜೋ ಬೈಡನ್ ಮುಂದಿನ ಅಧ್ಯಕ್ಷರಾಗಿ
ಹೊರಹೊಮ್ಮಿದ್ದಾರೆ. ಡಿಸೆಂಬರ್‌ ಎರಡನೇ ವಾರ ಚುನಾಯಿಕರ ಕೂಟದ ಮತದಾನ ನಡೆದ ಮೇಲೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ಎರಡನೇ ಅವಧಿಗೆ ಸ್ಪರ್ಧಿಸಿದಾಗ, ಚುನಾವಣೆಯ ಫಲಿತಾಂಶವನ್ನು ಮೊದಲ ಅವಧಿಗೆ ಜನರ ತೀರ್ಪು ಎಂದು ಪರಿಗಣಿಸಲಾಗುತ್ತದೆ. ಅಧಿಕಾರದಲ್ಲಿರುವ ಪಕ್ಷಕ್ಕೆ ತೊಡಕಾಗುವ ಹಲವು ಸಂಗತಿಗಳು ಇರುತ್ತವೆ. ದೇಶದ ಆರ್ಥಿಕತೆ ಕುಸಿಯುತ್ತಿದ್ದರೆ, ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದರೆ, ಯೋಜನೆಗಳು ವೈಫಲ್ಯ ಕಂಡಿದ್ದರೆ ಅದು ಆಡಳಿತ ಪಕ್ಷಕ್ಕೆ ಮಾರಕವಾಗುತ್ತದೆ.

2016ರ ಚುನಾವಣೆಯಲ್ಲಿ ಅಮೆರಿಕದ ಈಶಾನ್ಯ ಭಾಗದ ರಾಜ್ಯಗಳು ಡೊನಾಲ್ಡ್‌ ಟ್ರಂಪ್ ಬೆಂಬಲಕ್ಕೆ ನಿಂತಿದ್ದವು. ಈ ರಾಜ್ಯಗಳನ್ನು ಅಮೆರಿಕದ ಕಿಲುಬು ಪಟ್ಟಿ (Rust Belt) ಎಂದು ಕರೆಯಲಾಗುತ್ತದೆ. ಓಹಿಯೋ, ಮಿಶಿಗನ್, ಪೆನ್ಸಿಲ್ವೇನಿಯಾ, ವಿಸ್ಕಾಂನ್ಸಿನ್, ಇಂಡಿಯಾನ ರಾಜ್ಯಗಳು ಈ ಪಟ್ಟಿಯಲ್ಲಿ ಬರುತ್ತವೆ. ಇವು ‘ಸ್ವಿಂಗ್ ಸ್ಟೇಟ್ಸ್’ ಕೂಡ ಹೌದು. ಅಂದರೆ ಚುನಾವಣೆಯಿಂದ ಚುನಾವಣೆಗೆ ತಮ್ಮ ಒಲವು ಬದಲಿಸುತ್ತವೆ. ಈ ಬಾರಿ ಟ್ರಂಪ್ ಸಹಾಯಕ್ಕೆ ಮಿಶಿಗನ್, ವಿಸ್ಕಾಂನ್ಸಿನ್ ಮತ್ತು ಪೆನ್ಸಿಲ್ವೇನಿಯಾ ಬಾರದಿದ್ದದ್ದು ಅವರ ಹಿನ್ನಡೆಗೆ ಕಾರಣವಾಯಿತು.

ಸುಧೀಂದ್ರ ಬುಧ್ಯ

ಹಿಂದಿನ ಚುನಾವಣೆಯಲ್ಲಿ ಟ್ರಂಪ್, ಇಸ್ಲಾಮಿಕ್ ಭಯೋತ್ಪಾದನೆಯ ಬಗ್ಗೆ ಹೆಚ್ಚು ಮಾತನಾಡಿದ್ದರು. ಐ.ಎಸ್ ನಾಯಕ ಬಾಗ್ದಾದಿ ಹತ್ಯೆ, ಅಮೆರಿಕದ ಸೇನೆಗೆ ತಲೆಬೇನೆಯಾಗಿದ್ದ ಸುಲೇಮಾನಿ ಹತ್ಯೆ ಅವರು ತೆಗೆದುಕೊಂಡ ಕ್ರಮವನ್ನು ಹೇಳುತ್ತಿದ್ದವು. Peace through Strength ಎಂಬುದು ಸೋವಿಯತ್ ವಿಷಯದಲ್ಲಿ ರೇಗನ್ ಅನುಸರಿಸಿದ್ದ ಧೋರಣೆ. ಉತ್ತರ ಕೊರಿಯಾ, ಇರಾನ್ ವಿಷಯದಲ್ಲಿ ಟ್ರಂಪ್ ಇದೇ ಧೋರಣೆ ಅನುಸರಿಸಿದರು. ಟ್ರಂಪ್ ಅವಧಿಯಲ್ಲಿ, ಜಗತ್ತಿನ ವಿವಿಧ ಭಾಗಗಳಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಸೇನೆಯನ್ನು ಹಂತ ಹಂತವಾಗಿ ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಕೊಡಲಾಯಿತು. ಯಾವುದೇ ಹೊಸ ಯುದ್ಧಕ್ಕೆ, ದೊಡ್ಡ ಮಟ್ಟದ ಸೇನಾ ಕಾರ್ಯಾಚರಣೆಗೆ ಅಮೆರಿಕ ಇಳಿಯಲಿಲ್ಲ. ಜೊತೆಗೆ ಡೆಮಾಕ್ರಟಿಕ್‌ ಪಕ್ಷ ವಾಗ್ದಂಡನೆಗೆ ಗುರಿಪಡಿಸಿ ಅದನ್ನು ನಿರೂಪಿಸುವಲ್ಲಿ ಸೋತಿದ್ದು, ಟ್ರಂಪ್ ಭಾಷಣದ ಪ್ರತಿಯನ್ನು ಸಭಾಪತಿ ನ್ಯಾನ್ಸಿ ಪೆಲೊಸಿ ಅವರು ಅಧಿವೇಶನದಲ್ಲಿ ಹರಿದು ಹಾಕಿದ್ದು, ಅಧ್ಯಕ್ಷರಿಗೆ ಮುಕ್ತವಾಗಿ ಕೆಲಸ ಮಾಡಲು ಅಮೆರಿಕದ ಕಾಂಗ್ರೆಸ್ ಬಿಡುತ್ತಿಲ್ಲ ಎಂಬ ಭಾವನೆ ಮೂಡಿಸಿತ್ತು. ಈ ಅಂಶಗಳು ಟ್ರಂಪ್ ಅವರಿಗೆ ಪೂರಕವಾಗಿದ್ದವು.

ಉಳಿದಂತೆ, ಇರಾನ್ ಅಣು ಒಪ್ಪಂದದಿಂದ ಹಿಂದೆ ಸರಿದದ್ದು, ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಮ್ ಅನ್ನು ಅನುಮೋದಿಸಿದ್ದು, ಇತ್ತೀಚೆಗೆ ಏರ್ಪಟ್ಟ ಇಸ್ರೇಲ್ ಮತ್ತು ಯುಎಇ, ಇಸ್ರೇಲ್ ಹಾಗೂ ಸುಡಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಮಧ್ಯವರ್ತಿಯಾಗಿದ್ದು, ಟ್ರಂಪ್ ವಿದೇಶಾಂಗ ನೀತಿಗೆ ಸಿಕ್ಕ ಯಶಸ್ಸು ಎಂದು ವಿಶ್ಲೇಷಿಸಲಾಗಿತ್ತು. ಆದರೂ ಈ ಬಾರಿ ಟ್ರಂಪ್ ಹೆಚ್ಚು ಹೆದರಿದಂತೆ ಕಂಡರು. ಅವರ ಆತ್ಮವಿಶ್ವಾಸ ಕುಸಿದಿತ್ತು. ಅದಕ್ಕೆ ಕಾರಣ ಕೊರೊನಾ ಸೃಷ್ಟಿಸಿದ ಆರೋಗ್ಯ ಬಿಕ್ಕಟ್ಟು. ಅಮೆರಿಕದಲ್ಲಿ ಆರೋಗ್ಯ ಸೇವೆ ತುಟ್ಟಿಯಾದ್ದರಿಂದ ಬಹುಪಾಲು ಅಮೆರಿಕನ್ನರು ಆರೋಗ್ಯ ವಿಮೆಯನ್ನು ನೆಚ್ಚಿಕೊಳ್ಳುತ್ತಾರೆ, ಸೋಷಿಯಲ್ ಸೆಕ್ಯುರಿಟಿಗೆ ಆತುಕೊಳ್ಳುತ್ತಾರೆ. ಉದ್ಯೋಗ ನಷ್ಟ ಮತ್ತು ಅನಾರೋಗ್ಯ ಎಂಬುದು ಜನರ ಪಾಲಿಗೆ ಕೆಟ್ಟ ಕನಸು. ಹಾಗಾಗಿ ಕೊರೊನಾದ ಹೊಡೆತ ಟ್ರಂಪ್ ಅವರ ಅಧ್ಯಕ್ಷ ಪದವಿಯನ್ನು ಕಸಿಯಬಹುದೇ ಎಂಬ ಪ್ರಶ್ನೆ ಢಾಳಾಗಿ ಕಂಡಿತ್ತು.

ಬೈಡನ್ ತಂಡ ಕೊರೊನಾದ ಅಸಮರ್ಪಕ ನಿರ್ವಹಣೆಯ ವಿಷಯವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿತು. ‘ಕೊರೊನಾವನ್ನು ಮಣಿಸಬೇಕಾದರೆ ಟ್ರಂಪ್ ಅವರನ್ನು ಸೋಲಿಸಬೇಕು’ ಎಂಬ ಮಾತನ್ನು ಬೈಡನ್ ಪ್ರತೀ ಸಭೆಯಲ್ಲೂ ಆಡಿದರು. ಆಫ್ರಿಕನ್ ಅಮೆರಿಕನ್ ಸಮುದಾಯದ ಮತ ಸೆಳೆಯಲು ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಂಡರು. ಬೈಡನ್ ಪರವಾಗಿ ಒಬಾಮ ಹೆಚ್ಚಿನ ಪ್ರಚಾರ ನಡೆಸಿದರು. ‘ನಮ್ಮ ಆಯ್ಕೆ ವಿಭಜನೆಯಲ್ಲ, ಒಗ್ಗಟ್ಟು. ನಮ್ಮ ಆಯ್ಕೆ ಕಟ್ಟುಕತೆಯಲ್ಲ, ವಿಜ್ಞಾನ. ನಮ್ಮ ಆಯ್ಕೆ ಭರವಸೆಯೇ ಹೊರತು ಭಯವಲ್ಲ; ನಮ್ಮ ಆಯ್ಕೆ ಸತ್ಯವೇ ಪರಂತು ಸುಳ್ಳಲ್ಲ’ ಎಂಬುದು ಬೈಡನ್ ತಮ್ಮ ಭಾಷಣದಲ್ಲಿ ಬಳಸುತ್ತಿದ್ದ ಜನಪ್ರಿಯ ಸಾಲು. ಈ ಎಲ್ಲ ಅಂಶಗಳ ಜೊತೆ, ಈ ಬಾರಿ ದಾಖಲೆ ಪ್ರಮಾಣದ ಮತದಾನ ನಡೆದದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕು ಚಲಾಯಿಸಿದ್ದು, ಸೆನೆಟರ್ ಮತ್ತು ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಬೈಡನ್ ಜನರೊಂದಿಗೆ ಬೆರೆಯುತ್ತಿದ್ದರು ಎಂಬ ಸದ್ಭಾವನೆ ಅವರ ಮುನ್ನಡೆಗೆ ಪೂರಕವಾಗಿ ಒದಗಿದವು.

ಇತ್ತ ಟ್ರಂಪ್ ಆಕ್ರಮಣಕಾರಿಯಾಗಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು. ಬೈಡನ್ ಅವರನ್ನು ‘ಸ್ಲೀಪಿ ಬೈಡನ್’ ಎನ್ನುವ ಮೂಲಕ ಮಂದ ಸ್ವಭಾವದವರು, ಯಾವುದೇ ವಿಷಯ ಗಂಭೀರವಾಗಿ ತೆಗೆದುಕೊಳ್ಳದವರು ಎಂಬ ಸಂದೇಶ ರವಾನಿಸಿದರು. ಬೈಡನ್ ಗೆದ್ದರೂ ಕೆಲ ತಿಂಗಳಲ್ಲಿಯೇ ಕಮಲಾ ಹ್ಯಾರಿಸ್ ಅಧ್ಯಕ್ಷೆಯಾಗುತ್ತಾರೆ. ಆಕೆ ಕಮ್ಯುನಿಸ್ಟ್ ಚಿಂತನೆಯವರು ಎಂದು ಪ್ರಚಾರ ಮಾಡಿದರು. ಆದರೆ ಈ ಸಂಗತಿಗಳೂ ಗೆಲ್ಲುವ ವಿಶ್ವಾಸವನ್ನು ಟ್ರಂಪ್ ಅವರಿಗೆ ಕೊಟ್ಟಿರಲಿಲ್ಲ. ಚುನಾವಣೆಗೆ ವಾರವಿದ್ದಾಗ ‘ತೆರಿಗೆ ಕಡಿತ ಮಾಡುತ್ತೇನೆ’, ‘ಪಿಸ್ತೂಲು ಹೊಂದುವ ಹಕ್ಕನ್ನು ರಕ್ಷಿಸುತ್ತೇನೆ’ ಎಂಬುದನ್ನು ಹೆಚ್ಚು ಪ್ರಸ್ತಾಪಿಸಿದರು. ಇವು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗೆ ಕೊನೆಯ ಹಂತದಲ್ಲಿ ಒದಗುವ ಸಂಜೀವಿನಿ. ಕೆಲವು ಕಡೆ ಪ್ರಾರ್ಥನಾ ಸಭೆಗಳನ್ನೂ ನಡೆಸಲಾಯಿತು. ಆದರೆ ಇದಾವುದೂ ಗೆಲುವಿನ ಗೆರೆ ದಾಟಲು ಟ್ರಂಪ್ ಸಹಾಯಕ್ಕೆ ಒದಗಿದಂತಿಲ್ಲ.

ಒಟ್ಟಿನಲ್ಲಿ ಇಡೀ ಜಗತ್ತನ್ನು ಕುತೂಹಲದ ತುತ್ತತುದಿಗೆ ಒಯ್ದ ಈ ಚುನಾವಣೆ, ಮಹಿಳೆಯೊಬ್ಬರನ್ನು ಉಪಾಧ್ಯಕ್ಷ ಪದವಿಗೆ ಏರಿಸಿತು ಎಂಬ ಕಾರಣದಿಂದಲೂ ಮಹತ್ವದ ಚುನಾವಣೆಯಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಇದೀಗ ಗೆದ್ದು ಉತ್ಸಾಹದಲ್ಲಿರುವ ಬೈಡನ್, ಅಧಿಕಾರ ಹಸ್ತಾಂತರದಲ್ಲಿ ಅಸಹಕಾರ, ಮತ ಎಣಿಕೆ ಕುರಿತ ಕಾನೂನು ವ್ಯಾಜ್ಯ ಎಂಬ ಬುಗುಟೆಗಳನ್ನು ದಾಟಿ ಮುನ್ನಡೆಯಬೇಕಾಗಬಹುದು. ಅಮೆರಿಕ ಸೈದ್ಧಾಂತಿಕವಾಗಿ ಎರಡಾಗಿರುವುದನ್ನು ಚುನಾವಣೆ ಸ್ಪಷ್ಟವಾಗಿ ತೋರಿಸಿದೆ. ಕೊರೊನಾದ ಸಮರ್ಪಕ ನಿರ್ವಹಣೆಯ ಜೊತೆಗೆ ‘ಕೆಂಪು’ ಮತ್ತು ‘ನೀಲಿ’ ರಾಜ್ಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಸವಾಲು ಬೈಡನ್ ಎದುರಿಗಿದೆ.

ಒಬಾಮ ಅವಧಿಯ ವಿದೇಶಾಂಗ ನೀತಿ ಬೈಡನ್ ಅವಧಿಯಲ್ಲಿ ಮುಂದುವರಿಯಬಹುದು. ಚೀನಾ ಕುರಿತಂತೆ ಬೈಡನ್ ಧೋರಣೆ ಏನಿರಲಿದೆ ಎಂಬುದು ಭಾರತಕ್ಕೆ ಮುಖ್ಯವಾಗುತ್ತದೆ. ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಸಂಬಂಧವು ಜಾಗತಿಕ ರಾಜಕೀಯ ಬೆಳವಣಿಗೆ ಹಾಗೂ ಏಷ್ಯಾ ಕುರಿತ ಅಮೆರಿಕದ ಧೋರಣೆಯ ಮೇಲೆ ಹೆಚ್ಚು ಅವಲಂಬಿತವಾಗುವುದರಿಂದ ಅದರಲ್ಲಿ ಹೆಚ್ಚು ವ್ಯತ್ಯಾಸವಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT