ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ: ಗೋವಾ ವಿಮೋಚನೆ ಆದದ್ದು ಹೇಗೆ?

ಭಾರತವು ಗೋವಾ ವಿಮೋಚನೆಗೆ ತರಾತುರಿಯಲ್ಲಿ ಸೇನೆ ಬಳಸಿದ್ದರ ಹಿಂದಿತ್ತು ರಾಜಕೀಯ
Last Updated 2 ಜನವರಿ 2022, 19:31 IST
ಅಕ್ಷರ ಗಾತ್ರ

ಡಿಸೆಂಬರ್ 19ರಂದು ‘ಗೋವಾ ವಿಮೋಚನಾ ದಿನ’ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಸರ್ದಾರ್ ಪಟೇಲರು ಇನ್ನಷ್ಟು ಕಾಲ ಬದುಕಿದ್ದಿದ್ದರೆ ಗೋವಾದ ವಿಮೋಚನೆ ಬಹುಬೇಗನೇ ಆಗುತ್ತಿತ್ತು’ ಎಂಬ ಮಾತನ್ನಾಡಿದರು. ಇತಿಹಾಸದ ಘಟನೆಗಳನ್ನು ರಾಜಕೀಯಗೊಳಿಸಿದಾಗ ಅಂತಹ ಮಾತು ಬರಬಹುದು. ವಿವೇಚಿಸಿ ನೋಡಿದರೆ, ಗೋವಾದ ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು ಮತ್ತು ವಿಲೀನಕ್ಕಾಗಿ ಕಾಯುವುದು ಅನಿವಾರ್ಯವಾಗಿತ್ತು ಎನಿಸುತ್ತದೆ.

ಜುನಾಗಡ ಅಥವಾ ಹೈದರಾಬಾದ್‌ನಷ್ಟು ಗೋವಾದ ಸಮಸ್ಯೆ ನೇರ ಮತ್ತು ಸರಳವಾಗಿರಲಿಲ್ಲ. ಗೋವಾವು ಪೋರ್ಚುಗಲ್ ಪ್ರಾಂತ್ಯವಾಗಿತ್ತು. ಸೇನಾ ಕಾರ್ಯಾಚರಣೆಗೆ ಹಲವು ಅಡ್ಡಿಗಳಿದ್ದವು. ಶೀತಲ ಸಮರದ ದಿನಗಳಲ್ಲಿ ಭಾರತವನ್ನು ಬಗ್ಗಿಸುವ ದಾಳವಾಗಿ ಗೋವಾವನ್ನು ಬಳಸಿಕೊಳ್ಳಲು ಅಮೆರಿಕ ನೋಡುತ್ತಿತ್ತು. ಆದರೆ 1961ರ ಹೊತ್ತಿಗೆ ರಾಜತಾಂತ್ರಿಕವಾಗಿ ಪರಿಸ್ಥಿತಿ ಹದಗೊಳ್ಳುತ್ತಿದ್ದಂತೆ ಗೋವಾ ವಿಮೋಚನೆಗೆ ಸೇನೆಯನ್ನು ತರಾತುರಿಯಲ್ಲಿ ಬಳಸಿದ್ದರ ಹಿಂದೆಯೂ ಒಂದು ರಾಜಕೀಯ ಇತ್ತು.

ಬ್ರಿಟಿಷರ ವಿರುದ್ಧದ ಚಳವಳಿ ತೀವ್ರಗೊಂಡ ಕಾಲಘಟ್ಟದಲ್ಲಿ, ಗೋವಾದಲ್ಲಿ ಪೋರ್ಚುಗೀಸರ ವಿರುದ್ಧ ಅಲ್ಲಿನ ನಾಗರಿಕರು ಹರತಾಳ ಆರಂಭಿಸಿದ್ದರು. 1928ರಲ್ಲಿ ಡಾ. ಕುನ್ಹಾ ನೇತೃತ್ವದಲ್ಲಿ ಗೋವಾ ನ್ಯಾಷನಲ್ ಕಾಂಗ್ರೆಸ್ ಸ್ಥಾಪನೆಯಾದಾಗ ಆ ಹೋರಾಟಕ್ಕೆ ಸ್ಪಷ್ಟ ದಿಕ್ಕೊಂದು ಕಾಣಿಸಿತು. ರಾಮಮನೋಹರ್ ಲೋಹಿಯಾ 1946ರಲ್ಲಿ ಗೋವಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಅವರನ್ನು ಗೋವಾದಿಂದ ಗಡಿಪಾರು ಮಾಡಲಾಯಿತು. 1947ರಲ್ಲಿ ಭಾರತ ಸ್ವತಂತ್ರಗೊಂಡರೂ ಗೋವಾ ವಿಷಯದಲ್ಲಿ ಭಾರತ ಸರ್ಕಾರಕ್ಕೆ ಹಿಂಜರಿಕೆ ಇತ್ತು.

‘ನ್ಯಾಟೊ’ ಸದಸ್ಯ ರಾಷ್ಟ್ರ ಎಂಬ ಕಾರಣಕ್ಕೆ ಅಮೆರಿಕವು ಪೋರ್ಚುಗಲ್ ಬೆಂಬಲಕ್ಕಿತ್ತು. ‘ಒಂದೊಮ್ಮೆ ಸಶಸ್ತ್ರ ಹೋರಾಟವಾದಲ್ಲಿ ಹಳೆಯ ಒಪ್ಪಂದದನ್ವಯ ಪೋರ್ಚುಗಲ್ ಬೆಂಬಲಕ್ಕೆ ನಿಲ್ಲುವುದು ಅನಿವಾರ್ಯವಾಗುತ್ತದೆ’ ಎಂದು ಇಂಗ್ಲೆಂಡ್ ಹೇಳಿತ್ತು. ಅಷ್ಟಲ್ಲದೇ, ಅಂತರ ರಾಷ್ಟ್ರೀಯ ಸಂಬಂಧಗಳ ನಿರ್ವಹಣೆಗೆ ಮಾತುಕತೆ ಬುನಾದಿಯಾಗಬೇಕೇ ವಿನಾ ಯುದ್ಧಗಳಲ್ಲ ಎಂಬುದನ್ನು ಜಾಗತಿಕ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಿದ್ದ ಪ್ರಧಾನಿ ಜವಾಹರಲಾಲ್‌ ನೆಹರೂ, ಸೈನಿಕ ಕಾರ್ಯಾಚರಣೆ ತಮ್ಮ ನಿಲುವಿಗೆ ವಿರುದ್ಧ ಎಂದು ಭಾವಿಸಿದ್ದರು. ತಾವು ಪ್ರತಿಪಾದಿಸಿದ ವಿದೇಶಾಂಗ ನೀತಿಯ ಕಾರಣದಿಂದಾಗಿ ನೆಹರೂ ಕೈಕಟ್ಟಿ ನಿಲ್ಲಬೇಕಾಯಿತು.

1955ರಲ್ಲಿ ಭಾರತಕ್ಕೆ ಸೋವಿಯತ್ ನಾಯಕ ಕ್ರುಶ್ಚೇವ್ ಮತ್ತು ಬಲ್ಗನಿನ್ ಭೇಟಿ ಕೊಟ್ಟರು. ಭಾರತದಲ್ಲಿ ಅವರು ಮಾಡಿದ ಭಾಷಣದಿಂದ ಅಮೆರಿಕ ಸಿಟ್ಟಾಯಿತು. ಅಮೆರಿಕದ ವಿದೇಶಾಂಗ ಸಚಿವ ಜಾನ್ ಎಫ್. ಡಲಸ್, ಪೋರ್ಚುಗಲ್ ವಿದೇಶಾಂಗ ಸಚಿವರ ಜೊತೆ ಸೇರಿ ‘ಗೋವಾವು ಏಷ್ಯಾದಲ್ಲಿರುವ ಪೋರ್ಚುಗಲ್ ಪ್ರಾಂತ್ಯ’ ಎಂದು ಜಂಟಿ ಹೇಳಿಕೆಯನ್ನು ಹೊರಡಿಸಿದರು. ಇದರ ಬೆನ್ನಿಗೇ ಭಾರತದಲ್ಲಿ ಗೋವಾ ವಿಮೋಚನೆಯ ಕೂಗು ಗಟ್ಟಿಯಾಯಿತು. ಸಾವಿರಾರು ಜನ ಗೋವಾಕ್ಕೆ ತೆರಳಿ ವಿಮೋಚನೆಯ ಆಂದೋಲನದಲ್ಲಿ ಭಾಗಿಯಾಗತೊಡಗಿದರು. 1955ರ ಜೂನ್ 13ರಂದು ‘ಕರ್ನಾಟಕ ಕೇಸರಿ’ ಜಗನ್ನಾಥರಾವ್ ಜೋಷಿ ಅವರ ನೇತೃತ್ವದಲ್ಲಿ 3,000 ಕಾರ್ಯಕರ್ತರು ಗೋವಾಕ್ಕೆ ತೆರಳಿ ಸತ್ಯಾಗ್ರಹ ನಡೆಸಿದ್ದರು. ಆಗಸ್ಟ್ 15ರಂದು ದೇಶದ ವಿವಿಧ ಭಾಗಗಳಿಂದ ಬಂದ ಜನ ಸಾಮೂಹಿಕ ಸತ್ಯಾಗ್ರಹಕ್ಕೆ ಮುಂದಾದರು. ಗೋವಾ ಆಡಳಿತ ತುಪಾಕಿಗಳ ಮೂಲಕ ಉತ್ತರಿಸಿತು. ಸತ್ಯಾಗ್ರಹ ನಡೆಸುತ್ತಿದ್ದ 32 ಜನ ಪ್ರಾಣತ್ಯಾಗ ಮಾಡಿದರು. ಸತ್ಯಾಗ್ರಹಿಗಳ ಮೇಲೆ ಪೋರ್ಚುಗೀಸರು ದಾಳಿ ನಡೆಸಿದ್ದನ್ನು ಖಂಡಿಸಿ ದೆಹಲಿಯ ರಾಜೇಂದ್ರ ನಗರದಲ್ಲಿ ಸಾರ್ವಜನಿಕ ಸಭೆಯೊಂದು ಏರ್ಪಟ್ಟಿತು. ಆ ಸಭೆಯನ್ನು ಉದ್ದೇಶಿಸಿ ಜನಸಂಘದ ಮುಂದಾಳು ದೀನದಯಾಳ್ ಉಪಾಧ್ಯಾಯ ಮಾತನಾಡಿದರು. ಇದರಿಂದಾಗಿ ಸೇನಾ ಕಾರ್ಯಾಚರಣೆಗೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿತು. ಆದರೂ ಆ ನಿರ್ಣಯಕ್ಕೆ ಸಮಯ ಕೂಡಿಬಂದಿರಲಿಲ್ಲ.

ಈ ನಡುವೆ ಭಾರತದ ಗಡಿಯಲ್ಲಿ ಚೀನಾ ತಂಟೆ ತೆಗೆದಿತ್ತು. ಚೀನಾ ವಿಷಯದಲ್ಲಿ ಭಾರತದ ನಿಷ್ಕ್ರಿಯತೆ ಟೀಕೆಗೆ ಗುರಿಯಾಯಿತು. 1961ರ ಏಪ್ರಿಲ್ 11ರಂದು ಸಂಸತ್ತಿನಲ್ಲಿ ಆಚಾರ್ಯ ಕೃಪಲಾನಿ ಮಹತ್ವದ ಭಾಷಣ ವೊಂದನ್ನು ಮಾಡಿದರು. ‘ಕೃಷ್ಣ ಮೆನನ್ ಅವರು ರಕ್ಷಣಾ ಸಚಿವರಾದ ಮೇಲೆ ಅವರ ಬೇಜವಾಬ್ದಾರಿಯಿಂದಾಗಿ ಭಾರತ 12 ಸಾವಿರ ಚದರ ಮೈಲು ವಿಸ್ತೀರ್ಣದ ಭೂಭಾಗವನ್ನು ಕಳೆದುಕೊಂಡಿತು. ಸೇನೆಯ ಉನ್ನತ ಹುದ್ದೆಗಳಿಗೆ ನೇಮಕಾತಿ ಮತ್ತು ಬಡ್ತಿಯ ಮಾನ ದಂಡ ಬದಲಾಯಿತು. ತಮಗೆ ಪ್ರಿಯರಾದವರನ್ನೇ ಆ ಸ್ಥಾನಗಳಿಗೆ ತರಲಾಯಿತು. ಸೈನಿಕರ ನೈತಿಕ ಸ್ಥೈರ್ಯ ಕುಗ್ಗುವಂತಾಯಿತು. ಹಸಿವಿನಿಂದ ನರಳುತ್ತಿರುವ ಈ ಬಡ ರಾಷ್ಟ್ರದ ಹಣವನ್ನು ಮೆನನ್ ಅನಗತ್ಯ ಯೋಜನೆಗಳಿಗೆ ಬಳಸಿದರು’ ಎಂಬ ಆರೋಪ ಮಾಡಿದರು.

‘ಮುಂದಿನ ಚುನಾವಣೆಯಲ್ಲಿ ಮೆನನ್ ವಿರುದ್ಧ ಕಣಕ್ಕಿಳಿಯುತ್ತೇನೆ’ ಎಂದು ಸವಾಲು ಹಾಕಿದರು ಮತ್ತು 1962ರ ಫೆಬ್ರುವರಿಯಲ್ಲಿ ನಡೆಯಲಿದ್ದ ಚುನಾವಣೆಯಲ್ಲಿ ಮೆನನ್ ವಿರುದ್ಧ ಉತ್ತರ ಬಾಂಬೆಯಿಂದ ಸ್ಪರ್ಧಿಸಿದರು. ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದು ಮೆನನ್ ಅವರಿಗೂ ಮತ್ತು ಮೆನನ್ ಅವರನ್ನು ಗೆಲ್ಲಿಸಿಕೊಳ್ಳಲೇಬೇಕು ಎಂಬುದು ನೆಹರೂ ಅವರಿಗೂ ಪ್ರತಿಷ್ಠೆಯ ವಿಷಯವಾಯಿತು.

ಚುನಾವಣೆಗೆ ಕೆಲವು ವಾರಗಳಿರುವಾಗ ಒಂದು ದೊಡ್ಡ ಯಶಸ್ಸು ಕೃಷ್ಣ ಮೆನನ್ ಅವರಿಗೆ ಬೇಕಿತ್ತು. ಉತ್ತರ ಬಾಂಬೆ ಪ್ರದೇಶದಲ್ಲಿ ಗೋವಾ ಮೂಲದ ಜನ ಇದ್ದರು ಮತ್ತು ಅವರು ಗೋವಾ ವಿಮೋಚನೆಗೆ ಆಗ್ರಹಿಸುತ್ತಿದ್ದರು. ಸೇನಾ ಕಾರ್ಯಾಚರಣೆಗೆ ಸಮ್ಮತಿಸುವಂತೆ ನೆಹರೂ ಅವರ ಮೇಲೆ ಮೆನನ್ ಒತ್ತಡ ಹೇರಲಾರಂಭಿಸಿದರು. ಈ ಕುರಿತು ಸ್ವತಃ ನೆಹರೂ ಅವರ ತಂಗಿ ವಿಜಯಲಕ್ಷ್ಮಿ ಪಂಡಿತ್ ಅವರು ಬ್ರಿಟಿಷ್ ಅಧಿಕಾರಿ ಗೋರ್-ಬೂತ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೇನಾ ಕಾರ್ಯಾಚರಣೆಯ ಕುರಿತು ಭಾರತ ಯೋಚಿಸತೊಡಗಿದಾಗ ಅಮೆರಿಕದ ಭಾರತ ರಾಯಭಾರಿಯು ವಿಶ್ವಸಂಸ್ಥೆಗೆ ಹೋಗುವಂತೆ ನೆಹರೂ ಅವರಿಗೆ ಸಲಹೆ ನೀಡಿದ್ದರು. ಕಾಶ್ಮೀರದ ವಿಷಯದಲ್ಲಿ ವಿಶ್ವಸಂಸ್ಥೆಗೆ ಹೋದದ್ದೇ ತಪ್ಪಾಯಿತು ಎಂದು ಅರಿತಿದ್ದ ನೆಹರೂ, ವಿಶ್ವಸಂಸ್ಥೆಗೆ ಗೋವಾದ ವಿಷಯವನ್ನು ಕೊಂಡೊಯ್ಯುವ ತಪ್ಪು ಮಾಡಲಿಲ್ಲ. ಈ ಹೊತ್ತಿಗೆ ಅಮೆರಿಕದ ಅಧ್ಯಕ್ಷರು ಬದಲಾದರು. ನೂತನ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಬಂದಿದ್ದ ಜಾನ್ ಎಫ್. ಕೆನಡಿ, ಪೋರ್ಚುಗಲ್ ವಸಾಹತುಶಾಹಿ ಮನಃಸ್ಥಿತಿ ಬಿಡಬೇಕು ಎಂಬ ನಿಲುವು ಹೊಂದಿದ್ದರು. ಜಾಗತಿಕ ಬೆಳವಣಿಗೆಗಳಿಂದಾಗಿ ರಾಜತಾಂತ್ರಿಕವಾಗಿ ಕಾಲ ಪಕ್ವಗೊಂಡಿತ್ತು ಮತ್ತು 62ರ ಚುನಾವಣೆ ಗೆಲ್ಲಲೇಬೇಕೆಂಬ ರಾಜಕೀಯ ಸ್ವಾರ್ಥವೂ ಸೇರಿದಾಗ, ಗೋವಾ ವಿಮೋಚನೆಗೆ ಕಾಲ ಕೂಡಿಬಂತು.

1961ರ ಡಿಸೆಂಬರ್ 17ರಂದು ಭಾರತದ ಸೇನೆ ಗೋವಾ ವಶಕ್ಕೆ ಮುಂದಡಿಯಿಟ್ಟಿತು. ಸಾವಂತವಾಡಿ, ಕಾರವಾರ ಮತ್ತು ಬೆಳಗಾವಿಯ ಭಾಗದಿಂದ ಭಾರತದ ಸೇನೆ ಗೋವಾ ಪ್ರವೇಶಿಸಿತು. ಯುದ್ಧಸಾಮಗ್ರಿಗಳನ್ನು ಹೊತ್ತು ತರುತ್ತಿದ್ದ ಪೋರ್ಚುಗಲ್ ಯುದ್ಧನೌಕೆಗೆ ಗಿಬ್ರಾಲ್ಟರ್ ಮೂಲಕ ಹಾದುಹೋಗಲು ಇಂಗ್ಲೆಂಡ್ ಅನುಮತಿಸಿತ್ತು. ಆದರೆ ಸುಯೇಜ್ ಕಾಲುವೆ ಮೂಲಕ ಹಾದುಬರುವಾಗ ಅದನ್ನು ಈಜಿಪ್ಟ್ ಅಧ್ಯಕ್ಷ ನಾಸರ್ ತಡೆದರು. ನಾಸರ್ ಜೊತೆಗಿನ ನೆಹರೂ ಗೆಳೆತನ ಕೆಲಸ ಮಾಡಿತ್ತು. 14 ವರ್ಷಗಳ ಕ್ಲಿಷ್ಟ ಸಮಸ್ಯೆಯನ್ನು ನಮ್ಮ ಸೇನೆ ಕೇವಲ 26 ಗಂಟೆಗಳ ಅವಧಿಯಲ್ಲಿ ಪರಿಹರಿಸಿತ್ತು. ‘ಆಪರೇಷನ್ ವಿಜಯ್’ ಕಾರ್ಯಾಚರಣೆಯು 450 ವರ್ಷಗಳ ಪೋರ್ಚುಗಲ್ ಆಡಳಿತದಿಂದ ಗೋವಾ, ದಮನ್-ದಿಯುಗಳನ್ನು ಮುಕ್ತಗೊಳಿಸಿತ್ತು. ಸೇನೆಯ ಯಶಸ್ಸು 1962ರ ಚುನಾವಣೆಯಲ್ಲಿ ಮೆನನ್ ಅವರ ಗೆಲುವಿಗೆ ಸಹಕಾರಿಯಾಯಿತು.

ಆದರೆ ದೊಡ್ಡ ಪೆಟ್ಟು ಕೊಡಲು ಚೀನಾ ಕಾದು ನಿಂತಿದೆ ಎಂಬುದು ಆಳುವವರ ಗಮನಕ್ಕೆ ಬರಲಿಲ್ಲ. ಗೋವಾ ವಿಮೋಚನೆಯ ಯಶಸ್ಸು, 1962ರ ಚುನಾ ವಣೆಯ ಗೆಲುವು, ಸೈದ್ಧಾಂತಿಕ ಕಾರಣದಿಂದ ಬೆಳೆದಿದ್ದ ಚೀನಾದೆಡೆಗಿನ ಒಲವು, ಇವುಗಳಿಂದ ನೆಹರೂ- ಕೃಷ್ಣ ಮೆನನ್‌ದ್ವಯರ ಕಣ್ಣಿಗೆ ಪೊರೆ ಆವರಿಸಿಕೊಂಡಿತ್ತು. ಯುದ್ಧಸಾಮಗ್ರಿ ಹಾಗೂ ಮೂಲ ಸೌಕರ್ಯದ ಸೇನೆಯ ಬೇಡಿಕೆಗೆ ಸರ್ಕಾರ ಕಿವುಡಾಯಿತು. ಪ್ರಧಾನಿ ಮತ್ತು ರಕ್ಷಣಾ ಸಚಿವರು ಎಚ್ಚರಗೊಳ್ಳುವಷ್ಟರಲ್ಲಿ ಚೀನಾದ ಸೇನೆ ಗಡಿಯಲ್ಲಿ ಕೇಕೆ ಹಾಕುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT