ಗುರುವಾರ , ಅಕ್ಟೋಬರ್ 6, 2022
26 °C
ಯಾವುದೇ ಕಾರಣದಿಂದ ಯುದ್ಧ ಆರಂಭವಾದರೂ, ಯುದ್ಧಕ್ಕೆ ಕೊನೆ ಹಾಡುವುದು ಅಷ್ಟು ಸುಲಭವಲ್ಲ

ಸೀಮೋಲ್ಲಂಘನ: ಯುದ್ಧಕ್ಕೆ ಇದು ಕಾಲವಲ್ಲ, ಆದರೆ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಉಜ್ಬೇಕಿಸ್ತಾನದ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಎದುರು ‘ಇದು ಯುದ್ಧದ ಕಾಲವಲ್ಲ’ ಎಂಬ ಮಾತನ್ನು ಆಡಿದರು. ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳು ಆದ್ಯತೆಯಾಗಬೇಕು. ನಾವು ಗಮನಿಸಬೇಕಾದ ಸಮಸ್ಯೆಗಳು ಬಹಳಷ್ಟಿವೆ. ಹಾಗಾಗಿ ಉಕ್ರೇನ್ ಸಂಘರ್ಷಕ್ಕೆ ಕೊನೆ ಹಾಡುವುದು ಅಗತ್ಯ ಎಂಬ ಇಂಗಿತ ಆ ಮಾತಿನಲ್ಲಿತ್ತು. ಪುಟಿನ್ ಅವರ ಸಮ್ಮುಖದಲ್ಲಿ ಬಹಿರಂಗವಾಗಿ ಪ್ರಧಾನಿ ಮೋದಿ ಆಡಿದ ಈ ಮಾತು ಜಗತ್ತಿನ ಗಮನಸೆಳೆಯಿತು. ಅಮೆರಿಕದ ಮಾಧ್ಯಮಗಳು ಮೋದಿ ಅವರ ಮಾತನ್ನು ಕೊಂಡಾಡಿದವು.

ಯಾವುದೇ ಯುದ್ಧಕ್ಕೆ ಹಲವು ಕಾರಣಗಳು ಇರುತ್ತವೆ. ವಿಸ್ತರಣಾ ದಾಹ, ಪಾರಮ್ಯ ಸಾಧಿಸುವ ಬಯಕೆ, ಪಾಠ ಕಲಿಸಬೇಕು ಎಂಬ ವಾಂಛೆ, ಅಭದ್ರತೆಯ ಭೀತಿ ಪ್ರಮುಖವಾಗಿ ಯುದ್ಧಕ್ಕೆ ಪ್ರಚೋದನೆ ಒದಗಿಸಿದರೆ, ರಾಜಕೀಯವಾಗಿ ವರ್ಚಸ್ಸು ವೃದ್ಧಿಸಿಕೊಳ್ಳುವ, ಆಂತರಿಕ ಸಮಸ್ಯೆಗಳನ್ನು ಗೌಣವಾಗಿಸುವ ಪ್ರಯತ್ನಗಳಿಗೂ ಕೆಲವೊಮ್ಮೆ ಯುದ್ಧ ಸಹಕಾರಿ
ಯಾಗುತ್ತದೆ. ಪ್ರಬಲ ರಾಷ್ಟ್ರಗಳ ಹಿತಾಸಕ್ತಿ, ಆರ್ಥಿಕತೆಯನ್ನು ಮೇಲೆತ್ತಬೇಕಾದ ಅನಿವಾರ್ಯ ಮತ್ತು ಶಸ್ತ್ರಾಸ್ತ್ರ ಉದ್ಯಮದ ವಾಣಿಜ್ಯಿಕ ಲೆಕ್ಕಾಚಾರಗಳು ಪರದೆಯ ಹಿಂದೆ ನಿಂತು ಯುದ್ಧಕ್ಕೆ ಪ್ರಚೋದಿಸಿದ ಉದಾಹರಣೆಗಳು ಇತಿಹಾಸದಲ್ಲಿವೆ. ಈ ಯಾವುದೇ ಕಾರಣದಿಂದ ಯುದ್ಧ ಆರಂಭವಾದರೂ, ಯುದ್ಧಕ್ಕೆ ಕೊನೆ ಹಾಡುವುದು ಅಷ್ಟು ಸುಲಭವಲ್ಲ. ಆಗ ಪ್ರತಿಷ್ಠೆ ಅಡ್ಡಬರುತ್ತದೆ, ಸಂದಿಗ್ಧ ಎದುರಾಗುತ್ತದೆ. ಯುದ್ಧದಲ್ಲಿ ಆದ ಹಿನ್ನಡೆ ಅಥವಾ ಸೋಲು ಹಲವು ನಾಯಕರ ವರ್ಚಸ್ಸನ್ನು ಹಾಳುಗೆಡವಿದೆ. ದುರ್ಬಲ ಎಂದು ಬಿಂಬಿಸಿದೆ. ರಾಜಕೀಯ ಭವಿಷ್ಯವನ್ನು ಮಂಕಾಗಿಸಿದೆ.

ಬೇರೆಲ್ಲೂ ನೋಡುವುದು ಬೇಡ. ಇತ್ತೀಚೆಗೆ ನಿಧನರಾದ, ಸೋವಿಯತ್‌ ಒಕ್ಕೂಟದ (ಯುಎಸ್‌ಎಸ್‌ಆರ್‌) ಕೊನೆಯ ಮುಖ್ಯಸ್ಥರಾಗಿದ್ದ ಮಿಖಾಯಿಲ್ ಗೋರ್ಬಚೆವ್ ಅವರ ಉದಾಹರಣೆಯೇ ಸಾಕು.

ಎರಡನೇ ಪ್ರಪಂಚ ಯುದ್ಧದ ಬಳಿಕ ಕಮ್ಯುನಿಸ್ಟ್ ಕೈಗೊಂಬೆ ಸರ್ಕಾರಗಳನ್ನು ಪೂರ್ವ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸ್ಥಾಪಿಸುವುದನ್ನೇ ಧ್ಯೇಯವಾಗಿಸಿಕೊಂಡ ಸ್ಟಾಲಿನ್ ಅವರ ನೀತಿಯಿಂದಾಗಿ, ಪಶ್ಚಿಮ ಐರೋಪ್ಯ ರಾಷ್ಟ್ರಗಳು ಅಮೆರಿಕದ ಮುಂದಾಳತ್ವದಲ್ಲಿ ಒಂದಾಗಿ ನಿಂತವು. ಬಣಗಳು ಸೃಷ್ಟಿಯಾದ ಕಾರಣ ಬತ್ತಳಿಕೆ ತುಂಬಿಕೊಳ್ಳುವ ಪೈಪೋಟಿ ಏರ್ಪಟ್ಟಿತು.
ಶಸ್ತ್ರಾಗಾರವನ್ನು ತುಂಬಿಸಿಕೊಳ್ಳುವಲ್ಲೇ ಸಮಯ ವ್ಯಯಿಸಿದ ಸೋವಿಯತ್ ಒಕ್ಕೂಟವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು.

1985ರಲ್ಲಿ ಗೋರ್ಬಚೆವ್ ಅವರು ಸೋವಿಯತ್ ಒಕ್ಕೂಟದ ಚುಕ್ಕಾಣಿ ಹಿಡಿದಾಗ, ಶೀತಲ ಸಮರ ಚಾಲ್ತಿಯಲ್ಲಿತ್ತು ಮತ್ತು ಸೋವಿಯತ್‌ ಒಕ್ಕೂಟವು ಆರ್ಥಿಕ ಪ್ರಪಾತದಿಂದ ಕೇವಲ ನಾಲ್ಕು ಹೆಜ್ಜೆ ಹಿಂದಿತ್ತು. ಕೈಗೊಂಬೆ ಸರ್ಕಾರಗಳನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವ, ದೊಡ್ಡ ಸೇನೆಯನ್ನು ಪೋಷಿಸುವ ಆರ್ಥಿಕ ಶಕ್ತಿಯನ್ನು ಸೋವಿಯತ್ ಒಕ್ಕೂಟ ಹೊಂದಿರಲಿಲ್ಲ.

ಗೋರ್ಬಚೆವ್ ‘ಯುದ್ಧಕ್ಕೆ ಇದು ಕಾಲವಲ್ಲ’ ಎಂದು ಅರಿತಿದ್ದರು. ಜಡ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಸುಧಾರಣೆ ತರುವುದು ಅವರ ಆದ್ಯತೆಯಾಯಿತು. ಕಮ್ಯುನಿಸ್ಟ್ ಪಕ್ಷ ಆಂತರಿಕ ಸುಧಾರಣೆಗೆ ತೆರೆದುಕೊಳ್ಳದ ವಿನಾ ಆರ್ಥಿಕ ಸುಧಾರಣಾ ಕ್ರಮಗಳು ಯಶಸ್ವಿಯಾಗಲಾರವು ಎಂಬುದು ಅವರಿಗೆ ಅರ್ಥವಾಗಿತ್ತು. ‘ಜಗತ್ತು ಮುಂದಡಿ ಇಡುತ್ತಿದ್ದರೆ ನಾವು ನಿಂತಲ್ಲೇ ಹಲ್ಲು ಮಸೆಯುತ್ತಿದ್ದೇವೆ. ಕಳಪೆ ದರ್ಜೆಯ ಸರಕುಗಳನ್ನು ನೆಚ್ಚಿಕೊಳ್ಳುವುದು, ಆಧುನಿಕತೆಗೆ ತೆರೆದುಕೊಳ್ಳದಿರುವುದು ನಾಚಿಕೆಗೇಡಿನ ವಿಷಯ’ ಎಂದು ಕಮ್ಯುನಿಸ್ಟ್ ಪಕ್ಷದ ನಾಯಕರಿಗೆ ಮನವರಿಕೆ ಮಾಡಿಕೊಟ್ಟರು. ಸೋವಿಯತ್ ನೀತಿಯನ್ನು ಮುಕ್ತತೆ ಮತ್ತು ಪುನರ್ನಿರ್ಮಾಣ ಎಂಬ ಎರಡು ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋರ್ಬಚೆವ್ ಮರು
ವ್ಯಾಖ್ಯಾನಿಸಿದರು.

ಇಂಗ್ಲೆಂಡ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರೊಂದಿಗೆ ಮಾತುಕತೆಗೆ ಕುಳಿತರು. ಚೀನಾಕ್ಕೆ ಸ್ನೇಹಹಸ್ತ ಚಾಚಿದರು. ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಕ್ರಮ ಕೈಗೊಂಡರು. ಮುಖ್ಯವಾಗಿ ಅಮೆರಿಕದ ಅಧ್ಯಕ್ಷ ರೇಗನ್ ಮತ್ತು ಗೋರ್ಬಚೆವ್
ನಡುವೆ ಪತ್ರ ಸಂವಾದ ಆರಂಭವಾಯಿತು. ಶೃಂಗಸಭೆ ಏರ್ಪಟ್ಟಿತು. ಅದುವರೆಗೆ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟವು ‘ಮ್ಯಾಡ್‌’ (Mutual assured destruction) ಧೋರಣೆ ಅನುಸರಿಸುತ್ತಿದ್ದವು. ಅಂದರೆ ಎರಡೂ ದೇಶಗಳು ಸಮ ಪ್ರಮಾಣದ ಅಣ್ವಸ್ತ್ರಗಳನ್ನು ಇಟ್ಟುಕೊಳ್ಳುವುದು ಮತ್ತು ಆ ಮೂಲಕ ಒಂದೊಮ್ಮೆ ದಾಳಿಯಾದರೆ ಪ್ರತಿದಾಳಿ ಮಾಡಲು ಸಜ್ಜಾಗುವುದು. ಇದು ಎರಡು ದೇಶಗಳ ನಡುವೆ ಶಸ್ತ್ರ ಜಮಾವಣೆಯ ಪೈಪೋಟಿಗೆ ಕಾರಣವಾಗಿತ್ತು. ಈ ಧೋರಣೆ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ರೇಗನ್ ಮತ್ತು ಗೋರ್ಬಚೆವ್ ಬಲ್ಲವರಾಗಿದ್ದರು.

ಜಿನೀವಾ ಮಾತುಕತೆಯ ಬಳಿಕ ಒಂದು ಸೌಹಾರ್ದ ಅಧ್ಯಾಯವು ಅಮೆರಿಕ ಮತ್ತು ಯುಎಸ್‌ಎಸ್‌ಆರ್‌ ನಡುವೆ ಆರಂಭವಾಯಿತು. ಐಎನ್ಎಫ್ ಒಪ್ಪಂದಕ್ಕೆ ಅಂಕಿತ ಹಾಕುವ ಮೂಲಕ ಮಧ್ಯಂತರ ಶ್ರೇಣಿಯ ಪರಮಾಣು ಅಸ್ತ್ರಗಳ ನಿಯಂತ್ರಣಕ್ಕೆ ಅಮೆರಿಕ ಮತ್ತು ಸೋವಿಯತ್ ಕ್ರಮ ಕೈಗೊಂಡವು. ಜರ್ಮನಿಯ ಏಕೀಕರಣ ಜರ್ಮನಿಯ ಆಂತರಿಕ ವಿಷಯ ಎಂದು ಗೋರ್ಬಚೆವ್ ಘೋಷಿಸಿದರು. ಸೇನಾ ಬಲವನ್ನು ಬಳಸಿ ಯಥಾಸ್ಥಿತಿ ಕಾಯ್ದುಕೊಳ್ಳಲು ಅವರು ಬಯಸಲಿಲ್ಲ.

ಗೋರ್ಬಚೆವ್ ಅವರ ಕುರಿತು ಪಶ್ಚಿಮ ಜಗತ್ತು ಮೆಚ್ಚುಗೆಯ ಮಾತನ್ನು ಆಡಿತು. ಶೀತಲ ಸಮರವನ್ನು ಕೊನೆಗಾಣಿಸಿದ ಮುತ್ಸದ್ದಿ, ಅಣ್ವಸ್ತ್ರದ ಅವಘಡ ತಪ್ಪಿಸಿದ ಮಾನವತಾವಾದಿ ಎಂದೆಲ್ಲಾ ಅಮೆರಿಕದ ಮಾಧ್ಯಮಗಳು ಅವರನ್ನು ಕೊಂಡಾಡಿದವು. ಪೂರ್ವ ಮತ್ತು ಪಶ್ಚಿಮ ಜಗತ್ತಿನ ನಡುವಿನ ಸಂಬಂಧದಲ್ಲಿ ಆಮೂಲಾಗ್ರ ಬದಲಾವಣೆ ತಂದ ಕಾರಣದಿಂದ ಗೋರ್ಬಚೆವ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಲಾಯಿತು. ಆದರೆ 1991ರ ಆಗಸ್ಟ್ ಹೊತ್ತಿಗೆ ಕಮ್ಯುನಿಸ್ಟ್ ಪಕ್ಷದ ಸಂಪ್ರದಾಯವಾದಿಗಳು ಗೋರ್ಬಚೆವ್ ನಿಲುವಿನ ವಿರುದ್ಧ ಬಂಡೆದ್ದರು. ಕ್ಷಿಪ್ರಕ್ರಾಂತಿ ನಡೆಯಿತು. ಕಪ್ಪು ಸಮುದ್ರ ಪ್ರದೇಶದಲ್ಲಿ ವಿಶ್ರಾಂತಿಯಲ್ಲಿದ್ದಾಗ ಗೋರ್ಬಚೆವ್ ಅವರನ್ನು ಬಂಧಿಸಲಾಯಿತು. ಕೆಲವೇ ದಿನಗಳಲ್ಲಿ ಗೋರ್ಬಚೆವ್ ರಾಜಕೀಯವಾಗಿ ಮೂಲೆಗುಂಪಾದರು. ಬೋರಿಸ್ ಯೆಲ್ಸಿನ್ ಮುನ್ನೆಲೆಗೆ ಬಂದರು. 1996ರ ಅಧ್ಯಕ್ಷೀಯ ಚುನಾವಣೆಗೆ ಗೋರ್ಬಚೆವ್ ಸ್ಪರ್ಧಿಸಿದರಾದರೂ, ಅವರಿಗೆ ಅತ್ಯಲ್ಪ ಮತಗಳು ಬಂದವು. ಅಮೆರಿಕದ ಎದುರು ಮಂಡಿಯೂರಿದ ನಾಯಕ ಎಂದು ರಷ್ಯಾದ ಒಳಗೆ ಬಿಂಬಿತವಾಗಿದ್ದ ಗೋರ್ಬಚೆವ್ ಅವರನ್ನು ಅಲ್ಲಿನ ಜನ ಒಪ್ಪಿಕೊಳ್ಳಲಿಲ್ಲ.

ಹಾಗಂತ ಗೋರ್ಬಚೆವ್ ವಾಸ್ತವಕ್ಕೆ ಮುಖ ತಿರುಗಿಸಿ ಯಾವುದೇ ನಿಲುವು ತೆಗೆದುಕೊಂಡಿರಲಿಲ್ಲ. ಅಮೆರಿಕದೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನೂ ಅವರು ವಿಧಿಸಿದ್ದರು. ಅಮೆರಿಕ ತನ್ನ ಮಿಲಿಟರಿ ಒಕ್ಕೂಟವನ್ನು ಪೂರ್ವ ಐರೋಪ್ಯ ದೇಶಗಳಿಗೆ ವಿಸ್ತರಿಸಬಾರದು ಎಂಬುದು ಆ ಪೈಕಿ ಪ್ರಮುಖ ಷರತ್ತಾಗಿತ್ತು. ‘ಪೂರ್ವದ ಕಡೆಗೆ ಒಂದು ಇಂಚೂ ಮುಂದುವರಿಯುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಸಚಿವ ಜೇಮ್ಸ್ ಬೇಕರ್ ಮಾತು ಕೊಟ್ಟಿದ್ದರು. ಆದರೆ? ರಷ್ಯಾ ಮುಂದೆಂದೂ ತನಗೆ ಪ್ರತಿಸ್ಪರ್ಧಿಯಾಗಿ ಎದ್ದು ನಿಲ್ಲಬಾರದು ಎಂಬ ದಿಸೆಯಲ್ಲಿ ಅಮೆರಿಕ ಯೋಜನೆಗಳನ್ನು ರೂಪಿಸಿತು. ಉಕ್ರೇನ್ ಗಡಿಯವರೆಗೂ ನ್ಯಾಟೊ ಒಕ್ಕೂಟವನ್ನು ವಿಸ್ತರಿಸಿತು. ಸಂಘರ್ಷಕ್ಕೆ ಪ್ರಚೋದನೆ ಒದಗಿಸಿತು. ಹಾಗಾಗಿ ಬೈಡೆನ್ ಅವರಿಗೂ ಪ್ರಧಾನಿ ಮೋದಿ ‘ಯುದ್ಧಕ್ಕೆ ಇದು ಕಾಲವಲ್ಲ’ ಎಂದು ಮನವರಿಕೆ ಮಾಡಿಕೊಡಬೇಕಿದೆ.

ಅದೇನೇ ಇರಲಿ, ಸಮರ್ಕಂಡ್‌ನಲ್ಲಿ ಮೋದಿ ಅವರ ಮಾತಿಗೆ ಪುಟಿನ್ ‘ನಿಮ್ಮ ಕಳವಳ ಮತ್ತು ಉಕ್ರೇನ್ ಸಂಘರ್ಷದ ವಿಷಯದಲ್ಲಿ ತಳೆದ ನಿಲುವು ಅರ್ಥವಾಗುತ್ತದೆ. ಸಂಘರ್ಷವನ್ನು ಶೀಘ್ರದಲ್ಲಿ ಕೊನೆಗಾಣಿಸಲು ಪ್ರಯತ್ನಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಹೇಗೆ ಮತ್ತು ಸಾಧ್ಯವೇ ಎಂಬ ಪ್ರಶ್ನೆಗಳು ಉಳಿದುಕೊಂಡಿವೆ.

ಅತ್ತ ಅಮೆರಿಕವು ರಷ್ಯಾಕ್ಕೆ ಪಾಠ ಕಲಿಸಬೇಕು ಎಂಬ ಉಮೇದಿನಲ್ಲಿ ಉಕ್ರೇನ್ ಬತ್ತಳಿಕೆಗೆ ಶಸ್ತ್ರಾಸ್ತ್ರಗಳನ್ನು ತುಂಬುತ್ತಲೇ ಇದೆ. ಇತ್ತ ಸ್ಟಾಲಿನ್ ಬಳಿಕ ರಷ್ಯಾ ಕಂಡ ಪ್ರಬಲ ನಾಯಕ ಎನಿಸಿಕೊಂಡಿರುವ ಪುಟಿನ್, ಮುಖ ಉಳಿಸಿಕೊಳ್ಳುವ ಮಾರ್ಗ ಗೋಚರಿಸದೆ ಯುದ್ಧದಿಂದ ಹಿಂದೆ ಸರಿಯಬಲ್ಲರೇ ಎಂಬ ಪ್ರಶ್ನೆ ಢಾಳಾಗಿದೆ. ಜಾಗತಿಕ ಸಂದರ್ಭವನ್ನು ಒಟ್ಟಾರೆ ನೋಡಿದಾಗ ಯುದ್ಧಕ್ಕೆ ಇದು ಕಾಲವಲ್ಲ, ಖರೆ. ಆದರೆ...?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು